ಬೆಂಗಳೂರು; ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಮತ್ತಿತರರನ್ನು ಪ್ರತಿವಾದಿಯನ್ನಾಗಿಸಿದ್ದ ಪ್ರಕರಣವನ್ನು ಸಿಬಿಐಗೆ ವಹಿಸುವುದು ಸೂಕ್ತವಲ್ಲ ಎಂದು ರಾಜ್ಯ ಸರ್ಕಾರದ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು 1.49 ಕೋಟಿ ರು ಸಂಭಾವನೆ ಕೋರಿ ಬಿಲ್ ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.
ವಿವಿಧ ರಿಟ್ ಅರ್ಜಿಗಳಲ್ಲಿ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದಾರೆ ಎಂದು ಹೇಳಲಾಗಿದೆ. ಈ ಬಿಲ್‌ಗಳನ್ನು ರಾಜ್ಯ ಅಡ್ವೋಕೇಟ್ ಜನರಲ್ ಮುಖಾಂತರ ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ಈ ಬಿಲ್‌ಗಳಲ್ಲಿ ನಮೂದಿಸಿರುವ ಮೊತ್ತವನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಅಡ್ವೋಕೇಟ್ ಜನರಲ್ ಅವರು ರಾಜ್ಯ ಗೃಹ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2024ರ ಡಿಸೆಂಬರ್ 20ರಂದೇ ಅರೆ ಸರ್ಕಾರಿ ಪತ್ರ ಬರೆದಿದ್ದರು. ಇದೇ ಪತ್ರವು ಕಾನೂನು ಇಲಾಖೆಗೂ ತಲುಪಿರುವುದು ತಿಳಿದು ಬಂದಿದೆ.
ರಾಜ್ಯ ಗೃಹ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2024ರ ಡಿಸೆಂಬರ್ 20ರಂದು ಬರೆದಿರುವ ಪತ್ರದ ಪ್ರಕಾರ 2024ರ ಡಿಸೆಂಬರ್ ಮತ್ತು 2025ರ ಜನವರಿಯಲ್ಲಿ ರಿಟ್ ಅರ್ಜಿಗಳಿಗೆ ಸಂಬಂಧಿಸಿದಂತೆ ಕಪಿಲ್ ಸಿಬಲ್ ಅವರು ಸರ್ಕಾರದ ಪರವಾಗಿ ಪ್ರತಿನಿಧಿಸಿ ವಾದ ಮಂಡಿಸಿದ್ದರು.
ಸರ್ಕಾರದ ನಿಲುವು ಸಮರ್ಥಿಸಿಕೊಂಡಿದ್ದ ಸಿಬಲ್‌ರಿಗೆ 1.49 ಕೋಟಿ
ಮುಡಾ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಸ್ನೇಹಮಯಿ ಕೃಷ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಅವರ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ (ಸಂಖ್ಯೆ; 27084/2024, ರಿಟ್ ಅಪೀಲ್ ನಂಬರ್ 27484/2024, ರಿಟ್ ಪಿಟಿಷನ್ ನಂಬರ್ 22356/2024) (ಕಡತ ಸಂಖ್ಯೆ; ಹೆಚ್ ಡಿ 199 ಸಿಒಡಿ 2024 ) ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ಸರ್ಕಾರದ ನಿಲುವನ್ನು ಸಮರ್ಥಿಸಿಕೊಳ್ಳಲು ರಾಜ್ಯದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಹಿರಿಯ ವಕೀಲರಾದ ಕಪಿಲ್ ಸಿಬಲ್ ಅವರ ಸೇವೆಯನ್ನು ಪಡೆದುಕೊಂಡಿದ್ದರು ಎಂದು ಗೊತ್ತಾಗಿದೆ.
ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ 2024ರ ಡಿಸೆಂಬರ್ 5, 10, 19 ಮತ್ತು 2025ರ ಜನವರಿ 27ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಸರ್ಕಾರದ ನಿಲುವನ್ನು ಸಮರ್ಥಿಸಿಕೊಳ್ಳುವಲ್ಲಿ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರಿಗೆ ನೆರವು ನೀಡಿದ್ದರು ಎಂದು ತಿಳಿದು ಬಂದಿದೆ.
2024ರ ಡಿಸೆಂಬರ್ 5ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದಕ್ಕೆ ಕಪಿಲ್ ಸಿಬಲ್ ಅವರು 44.00 ಲಕ್ಷ , ಡಿಸೆಂಬರ್ 10ರಂದು ಹಾಜರಾಗಿದ್ದಕ್ಕೆ 35.00 ಲಕ್ಷ, 19ರಂದು ಹಾಜರಾಗಿದ್ದಕ್ಕೆ 35.00 ಲಕ್ಷ ಮತ್ತು 2025ರ ಜನವರಿ 27ರಂದು ಹಾಜರಾಗಿದ್ದಕ್ಕೆ 35.00 ಲಕ್ಷ ಸೇರಿ ಒಟ್ಟಾರೆ 1.49 ಕೋಟಿ ರು ಸಂಭಾವನೆ ಕೋರಿ ( ಬಿಲ್ ನಂ 6402 (12)/2024, (ಕಡತ ಸಂಖ್ಯೆ 3939) ಬಿಲ್ ನಂ 6403 (12) (ಕಡತ ಸಂಖ್ಯೆ; 3995, 3995 ಎ, 3995 ಬಿ)ರಲ್ಲಿ ಬಿಲ್‌ಗಳನ್ನು ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.
ಈ ಬಿಲ್‌ಗಳನ್ನು ಅನುಮೋದಿಸಿ ಸಂಭಾವನೆಯನ್ನು ಪಾವತಿಸಬೇಕು ಎಂದು ರಾಜ್ಯದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಸಂಬಂಧ 2025ರ ಮಾರ್ಚ್ 26ರಂದು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಎಸ್ ಆರ್ ಉಮಾಶಂಕರ್ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು ಎಂದು ಗೊತ್ತಾಗಿದೆ.
‘ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸ್ನೇಹಮಯಿ ಕೃಷ್ಣ ಅವರು ಭಾರತ ಸರ್ಕಾರ ಮತ್ತಿತರರ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ( ಸಂಖ್ಯೆ 27484/2024) ದಾಖಲಿಸಿದ್ದಾರೆ. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ದೂರಿನ ಅನ್ವಯ ಲೋಕಾಯುಕ್ತದಲ್ಲಿ ತನಿಖೆಯಲ್ಲಿ ಇರುವುದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸುವುದು ಸೂಕ್ತವಾಗುವುದಿಲ್ಲವೆಂದು ಉಚ್ಛ ನ್ಯಾಯಾಲಯದಲ್ಲಿ ಪ್ರಕರಣವನ್ನು ಬಲವಾಗಿ ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ರಾಜ್ಯದ ಅಡ್ವೋಕೇಟ್ ಜನರಲ್ ಅವರು ಕರೆದುಕೊಂಡು ಹೋಗಿರುವುದು ಕಂಡು ಬರುತ್ತದೆ,’ ಎಂದು ಸಭೆಯ ನಡವಳಿಯಲ್ಲಿ ದಾಖಲಾಗಿರುವುದು ಗೊತ್ತಾಗಿದೆ.
ಈ ರಿಟ್ ಅರ್ಜಿ ಪ್ರಕರಣವನ್ನು ಉಚ್ಚ ನ್ಯಾಯಾಲಯವು ವಿಚಾರಣೆ ನಡೆಸಿತ್ತು. 2025ರ ಫೆ.7ರಂದು ನೀಡಿದ್ದ ಅಂತಿಮ ತೀರ್ಪಿನಲ್ಲಿ ಅರ್ಜಿದಾರರ ಅರ್ಜಿಯನ್ನು ವಜಾಗೊಳಿಸಿತ್ತು. ಮತ್ತು ಪ್ರಕರಣವು ಸರ್ಕಾರದ ಪರವಾಗಿದೆ. ಈ ಅಂಶಗಳ ಹಿನ್ನೆಲೆಯಲ್ಲಿ ವಿಶೇಷ ಮತ್ತು ಸೂಕ್ಷ್ಮ ಪ್ರಕರಣಗಳಲ್ಲಿ ನೀಡುವ ಸಂಭಾವನೆಯನ್ನು ಕಪಿಲ್ ಸಿಬಲ್ ಅವರಿಗೆ ನಿಗದಿಪಡಿಸಬೇಕು ಎಂದು ಸಭೆಯಲ್ಲಿ ಇಲಾಖೆಯು ಕಡತವನ್ನು ಮಂಡಿಸಿತ್ತು ಎಂದು ತಿಳಿದು ಬಂದಿದೆ.
ಸ್ನೇಹಮಯಿ ಕೃಷ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರರನ್ನು ಸಿಬಿಐ ತನಿಖೆಗೊಳಪಡಿಸುವ ಸಂಬಂಧ ಹೈಕೋರ್ಟ್‌ನಲ್ಲಿ (ರಿಟ್ ಅರ್ಜಿ ಸಂಖ್ಯೆ; 27484/2024) ಸಲ್ಲಿಸಿದ್ದರು.
ಈ ಅರ್ಜಿಯಲ್ಲಿ ಸಿದ್ದರಾಮಯ್ಯ ಅವರನ್ನು 9ನೇ ಮತ್ತು ಅವರ ಪತ್ನಿ ಪಾರ್ವತಿ ಅವರನ್ನು 10ನೇ ಪ್ರತಿವಾದಿಯನ್ನಾಗಿಸಿದ್ದರು.
ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ರಿಟ್ ಅರ್ಜಿಯಲ್ಲಿ ಮಲ್ಲಿಕಾರ್ಜುನ ಸ್ವಾಮಿ ಮತ್ತು ದೇವರಾಜು ಜೆ ಎಂಬುವರೂ 11 ಮತ್ತು 12ನೇ ಪ್ರತಿವಾದಿಯಾಗಿದ್ದರು. ಪ್ರತಿವಾದಿಗಳ ಪರ ಶಾಂತಿಭೂಷಣ್ (DSGI FOR R-1) ಕಪಿಲ್ ಸಿಬಲ್, ಕೆ ಶಶಿಕಿರಣ್‌ಶೆಟ್ಟಿ, ಪ್ರತೀಕ್ ಚಡ್ಡಾ, ಇಸ್ಮಾಯಿಲ್ ಜಬೀವುಲ್ಲಾ ಮತ್ತಿತರರು ಪ್ರತಿನಿಧಿಸಿದ್ದರು.
ಈ ಪೈಕಿ ಸಿದ್ದರಾಮಯ್ಯ ಅವರ ಪರವಾಗಿ ಡಾ ಅಭಿಷೇಕ್ ಮನಸಿಂಘ್ವಿ, ಶತಾಬ್ದಿಷ್ ಶಿವಣ್ಣ , ಪ್ರೊ ರವಿವರ್ಮ ಕುಮಾರ್, ಬೆಲ್ಲಿ ಮತ್ತು ರಂಜಿತ ಜಿ ಅಲಗವಾಡಿ ಅವರು ಪಾರ್ವತಿ ಪರ ವಾದಿಸಿದ್ದರು.
ಅಲ್ಲದೇ ಸಿದ್ದರಾಮಯ್ಯ ಅವರು ಸಹ ರಿಟ್ ಅರ್ಜಿ (ಸಂಖ್ಯೆ 22356/2024) ಯನ್ನು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದರು.
ಇದರಲ್ಲಿ ರಾಜ್ಯ ಸರ್ಕಾರ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ, ಟಿ ಜೆ ಅಬ್ರಾಹಂ, ಸ್ನೇಹಮಯಿ ಕೃಷ್ಣ, ಪ್ರದೀಪ್ ಕುಮಾರ್ ಅವರನ್ನು ಪ್ರತಿವಾದಿಯನ್ನಾಗಿಸಿದ್ದರು.
ಸಿದ್ದರಾಮಯ್ಯ ಅವರ ಪರವಾಗಿ ಡಾ ಅಭಿಷೇಕ್ ಮನುಸಿಂಘ್ವಿ, ಪ್ರೊ ರವಿವರ್ಮಕುಮಾರ್, ಶತಾಬ್ದಿಷ್ ಶಿವಣ್ಣ, ಸಮೃದ್ಧ ಎಸ್ ಹೆಗ್ಡೆ, ಅಭಿಷೇಕ್ ಅವರು ವಾದಿಸಿದ್ದರು.
ಸರ್ಕಾರಿ ವಕೀಲರ ಕಾರ್ಯಕ್ಷಮತೆ ಕುಸಿತ; ಸರ್ಕಾರದ ವಿರುದ್ಧ 1.95 ಲಕ್ಷ ಆದೇಶ
ರಾಜ್ಯ ಸರ್ಕಾರದ ಪರವಾಗಿ ಅಡ್ವೋಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ, ಬಿ ಎನ್ ಜಗದೀಶ್ (ಎಸ್‌ಪಿಪಿ), ಎಸ್ ಇಸ್ಮಾಯಿಲ್ ಜಬೀವುಲ್ಲಾ, (ಎಜಿಜಿ) ಪ್ರತಿನಿಧಿಸಿದ್ದರು. ಅಲ್ಲದೇ ತುಷಾರ್ ಮೆಹ್ತಾ (ಸಾಲಿಸಿಟರಲ್ ಜನರಲ್), ಅಭಿಷೇಕ್ ಕುಮಾರ್, ಕಾನು ಅಗರವಾಲ್, ತನ್ಮಯ್ ಮೆಹ್ತಾ, ಕೀರ್ತಿ ರೆಡ್ಡಿ, ರಂಗನಾಥ ರೆಡ್ಡಿ, ಮಣಿಂದರ್ ಸಿಂಗ್, ಕೆ ಜಿ ರಾಘವನ್, ಲಕ್ಷ್ಮಿ ಅಯ್ಯಂಗಾರ್, ಸುಷಾಲ್ ತಿವಾರಿ, ವಸಂತ ಕುಮಾರ, ಸ್ಕಂದ ಅರುಣ್ ಕುಮಾರ್, ಪ್ರಭಾಸ್ ಬಜಾಜ್, ನಿಶಾಂತ್ ಕುಶಾಲಪ್ಪ, ಅನಿತಾ ಎಂ ಪಾಟೀಲ್, ಪ್ರಭುಲಿಂಗ ಕೆ ನಾವದಗಿ, ಪ್ರಕಾಶ್ ಎಂ ಹೆಚ್ ಅವರು ಇತರ ಪ್ರತಿವಾದಿಗಳನ್ನು ಪ್ರತಿನಿಧಿಸಿದ್ದರು.
ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ರಿಟ್ ಅರ್ಜಿಯಲ್ಲಿ ಕಪಿಲ್ ಸಿಬಲ್ ಅವರು ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿರುವುದು ಕಂಡುಬಂದಿಲ್ಲ.