ಅನುದಾನ ಲಭ್ಯವಿಲ್ಲದಿದ್ದರೂ ಖರ್ಗೆ ಕುಟುಂಬ ಸದಸ್ಯರ ಸೊಸೈಟಿಗೆ 2 ವರ್ಷದಲ್ಲಿ 9.9 ಕೋಟಿ ಅನುದಾನ

ಬೆಂಗಳೂರು;  ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೂಕ್ತ ಅನುದಾನ ಲಭ್ಯವಿಲ್ಲದಿದ್ದರೂ ಸಹ ಎಐಸಿಸಿ ಅಧ್ಯಕ್ಷ  ಮಲ್ಲಿಕಾರ್ಜುನ ಖರ್ಗೆ,  ಸಚಿವ ಪ್ರಿಯಾಂಕ್‌ ಖರ್ಗೆ ಅವರು  ಸದಸ್ಯರಾಗಿರುವ  ಕರ್ನಾಟಕ ಪೀಪಲ್ಸ್‌ ಎಜುಕೇಷನ್‌ ಸೊಸೈಟಿಗೆ ರಾಜ್ಯ ಕಾಂಗ್ರೆಸ್‌ ಸರ್ಕಾರವು  ನಿರಂತರವಾಗಿ ಕೋಟ್ಯಂತರ ರುಪಾಯಿ  ಅನುದಾನ ಬಿಡುಗಡೆ ಮಾಡಿರುವುದು ಇದೀಗ ಬಹಿರಂಗವಾಗಿದೆ.

 

ಪರಿಶಿಷ್ಟ ಜಾತಿಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಪರಿಶಿಷ್ಟ ಜಾತಿಯ ಧಾರ್ಮಿಕ ಸಂಘ ಸಂಸ್ಥೆಗಳು ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆ, ಸಮುದಾಯ ಭವನಗಳ ಕಟ್ಟಡ ನಿರ್ಮಾಣಗಳಿಗೆ ಮೀಸಲಿರಿಸಿದ್ದ ಅನುದಾನದಲ್ಲಿ ಕರ್ನಾಟಕ ಪೀಪಲ್ಸ್‌ ಎಜುಕೇಷನ್‌ ಸೊಸೈಟಿಯು ಸಿಂಹಪಾಲು ಪಡೆದಿರುವುದು ಆರ್‌ಟಿಐ ದಾಖಲೆಗಳಿಂದ ಗೊತ್ತಾಗಿದೆ.

 

ಕರ್ನಾಟಕ ಪೀಪಲ್ಸ್‌ ಎಜುಕೇಷನ್‌ ಸೊಸೈಟಿಗೆ 2024 ಮತ್ತು 2025ರಲ್ಲಿ ಬಿಡುಗಡೆಯಾಗಿರುವ ಅನುದಾನದ ವಿವರಗಳನ್ನು ‘ದಿ ಫೈಲ್‌’, ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

ಕರ್ನಾಟಕ ಪೀಪಲ್ಸ್‌ ಎಜುಕೇಷನ್‌ ಸೊಸೈಟಿಯು ತನ್ನ ಅಧೀನದಲ್ಲಿ ಶಾಲಾ ಕಾಲೇಜುಗಳ ಕಟ್ಟಡಗಳ ದುರಸ್ತಿ, ಹೆಚ್ಚುವರಿ ಕೊಠಡಿಗಳು ಹಾಗೂ ಶೌಚಾಲಯಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲು ಅನುದಾನ ಮಂಜೂರು ಮಾಡಲು ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಪತ್ರ ಬರೆದಿತ್ತು.

 

ಇದನ್ನಾಧರಿಸಿ  ಅನುದಾನ ಬಿಡುಗಡೆಗೆ ಆದೇಶ ಹೊರಡಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ 2025ರ ಫೆ.27ರಂದು  ಟಿಪ್ಪಣಿ ಹೊರಡಿಸಿದ್ದರು.

 

 

 

ಈ ಟಿಪ್ಪಣಿ ಆಧರಿಸಿ ಸಮಾಜ ಕಲ್ಯಾಣ ಇಲಾಖೆಯು ಅನುದಾನ ಮಂಜೂರು ಮಾಡುವ ಕುರಿತು ಪರಿಶೀಲಿಸಿತ್ತು. ಈ ಸಂಬಂಧ ಇಲಾಖೆಯು ಒದಗಿಸಿರುವ ಟಿಪ್ಪಣಿ ಹಾಳೆಗಳ ಪ್ರಕಾರ 2024-25ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ (ರಾಜಸ್ವ ಲೆಕ್ಕಶೀರ್ಷಿಕೆ; 2225-01-796-0-02) ಅಡಿ ಪರಿಶಿಷ್ಟ ಜಾತಿಯ ಧಾರ್ಮಿಕ ಸಂಘ, ಸಂಸ್ಥೆಗಳು ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಗಳು ಹಾಗೂ ಸಮುದಾಯ ಭವನಗಳ ಕಟ್ಟಡ ನಿರ್ಮಾಣ ಕಾರ್ಯಕ್ರಮಕ್ಕೆ 30 ಕೋಟಿ ರು ಅನುದಾನವನ್ನು ಸಂಪೂರ್ಣವಾಗಿ ಭರಿಸಿತ್ತು.

 

 

ಅಲ್ಲದೇ ಸರ್ಕಾರದಿಂದ ಇದುವರೆಗೂ ಮಂಜೂರಾತಿ ನೀಡಿದ್ದ 468 ಸಂಸ್ಥೆಗಳಿಗೆ 230.00 ಕೋಟಿ ರು ಅನುದಾನ ಬಿಡುಗಡೆ ಮಾಡಲು ಬಾಕಿ ಇತ್ತು. ಈ ಹಂತದಲ್ಲಿ ಕರ್ನಾಟಕ ಪೀಪಲ್ಸ್‌ ಎಜುಕೇಷನ್‌ ಸೊಸೈಟಿಯು 8.46 ಕೋಟಿ ರು ಅನುದಾನ ಮಂಜೂರಾತಿಗೆ ಸಚಿವ ಎಚ್‌ ಸಿ ಮಹದೇವಪ್ಪ ಅವರಿಗೆ ಪ್ರಸ್ತಾವ ಸಲ್ಲಿಸಿತ್ತು.

 

ಕಾಮಗಾರಿ ವಿವರಗಳಲ್ಲೇನಿದೆ?

 

ಪ್ರಜ್ಞ ಆಂಗ್ಲ ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ 2.30 ಕೋಟಿ,  ಕಲ್ಬುರ್ಗಿಯ ಸಿದ್ದಾರ್ಥ ಕಾನೂನು ಕಾಲೇಜಿನ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 91.50 ಲಕ್ಷ, ಪ್ರಜ್ಞ ಆಂಗ್ಲ ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶೌಚಾಲಯ ನಿರ್ಮಾಣ ಕಾಮಗಾರಿಗೆ 71.50 ಲಕ್ಷ, ಡಾ ಅಂಬೇಡ್ಕರ್‌ ಮಹಾವಿದ್ಯಾಲಯದಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿಗೆ 71.50 ಲಕ್ಷ, ಕಲ್ಬುರ್ಗಿಯಲ್ಲಿರುವ ಡಾ ಅಂಬೇಡ್ಕರ್‌ ಪದವಿ ಕಾಲೇಜಿನ ಪಕ್ಕದಲ್ಲಿರುವ ಪೋಸ್ಟ್‌ ಗ್ರಾಜ್ಯುಯೇಷನ್‌ ಅಧ್ಯಯನ ಕೇಂದ್ರದ ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿಗೆ 1.65 ಕೋಟಿ ರು. ಅನುದಾನ ಕೋರಿತ್ತು.

 

 

ಬೀದರ್‌ನಲ್ಲಿರುವ ಸಿದ್ದಾರ್ಥ ಕಿರಿಯ ಕಾಲೇಜಿಗೆ ಕಾಂಪೌಂಡ್‌ ಗೋಡೆ ನಿರ್ಮಾಣ ಮಾಡಲು 51.15 ಲಕ್ಷ, ಪ್ರಿಯದರ್ಶಿನಿ ಪದವಿಪೂರ್ವ ಕಾಲೇಜಿನ ಕಟ್ಟಡ ಕಾಮಗಾರಿಗೆ 41 ಲಕ್ಷ, ಸಿದ್ದಾರ್ಥ ಕಾನೂನು ಕಾಲೇಜಿನಲ್ಲಿ ಶೌಚಾಲಯ ಕಟ್ಟಡ ನಿರ್ಮಾಣ ಹಾಗೂ ದುರಸ್ತಿ ಕಾಮಗಾರಿಗೆ 90 ಲಕ್ಷ, ಮಿಲಿಂದ್‌ ಪ್ರೌಢಶಾಲೆ ಕಟ್ಟಡ ರಿಪೇರಿ ಕಾಮಗಾರಿಗೆ 35 ಲಕ್ಷ ಸೇರಿ ಒಟ್ಟಾರೆ 846.65 ಲಕ್ಷ ರುಗಳ ಅನುದಾನ ಬಿಡುಗಡೆ ಮಾಡಲು ಪ್ರಸ್ತಾವ ಸಲ್ಲಿಸಿರುವುದು ಟಿಪ್ಪಣಿ ಹಾಳೆಗಳಿಂದ  ತಿಳಿದು ಬಂದಿದೆ.

 

ಶಾಲಾ ಕಾಲೇಜುಗಳ ಕಟ್ಟಡ ದುರಸ್ತಿ, ಹೆಚ್ಚುವರಿ ಕೊಠಡಿಗಳು ಹಾಗೂ ಶೌಚಾಲಯಗಳ ನಿರ್ಮಾಣ ಕಾಮಗಾರಿಗೆ ಪ್ರಸಕ್ತ ಸಾಲಿನಲ್ಲಿ 20 ಕೋಟಿ ರು.ಗಳನ್ನು ಒದಗಿಸಿಕೊಂಡಿತ್ತು. ಅಲ್ಲದೇ ಈ ಅನುದಾನವನ್ನು ಆಯುಕ್ತರ ಹಂತದಲ್ಲಿಯೇ ವಿವಿಧ ಜಿಲ್ಲೆಗಳಿಗೆ ಮಂಜೂರು ಮಾಡಲಾಗಿತ್ತು. ಸರ್ಕಾರದಿಂದ ಯಾವುದೇ ಮಂಜೂರಾತಿ ನೀಡಿರಲಿಲ್ಲ. ಹೀಗಾಗಿ ಸಚಿವ ಮಹದೇವಪ್ಪ ಅವರು ಹೊರಡಿಸಿದ್ದ ಟಿಪ್ಪಣಿ ಮೇಲೆ ಕ್ರಮ ಕೈಗೊಳ್ಳಲು ಅನುದಾನ ಒದಗಿಸಿಕೊಳ್ಳಲು ಸರ್ಕಾರದ ಅನುಮೋದನೆ ಕೋರಿದ್ದ ಸಂಗತಿಯು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

 

2024ರಲ್ಲೇ 6.31 ಕೋಟಿ ಮಂಜೂರು

 

ವಿಶೇಷವೆಂದರೇ ಇದೇ ಕರ್ನಾಟಕ ಪೀಪಲ್ಸ್‌ ಎಜುಕೇಷನ್‌ ಸೊಸೈಟಿಯ ಶೈಕ್ಷಣಿಕ ಸಂಸ್ಥೆಗಳಿಗೆ 2024ರ ಮಾರ್ಚ್‌ 15ರಂದೇ 6.31 ಕೋಟಿ ರು ಅನುದಾನ ಮಂಜೂರಾಗಿತ್ತು.

 

 

ಕಲ್ಬುರ್ಗಿಯಲ್ಲಿನ ಪ್ರಜ್ಞಾ ಶಾಲೆಯ ಕಟ್ಟಡದ ಮುಂದುವರೆದ ಕಾಮಗಾರಿ, ಪ್ರಜ್ಞಾ ಮೀಡಿಯಂ ಮುಂದುವರೆದ ಕಾಮಗಾರಿ, ಡಾ ಬಿ ಆರ್‌ ಅಂಬೇಡ್ಕರ್‌ ಪದವಿ ಕಾಲೇಜಿನ ಕಟ್ಟಡದ ಮುಂದುವರೆದ ಕಾಮಗಾರಿ, ಪ್ರಿಯದರ್ಶಿನಿ ಪಿಯು ಕಾಲೇಜಿನ ಕಾಮಗಾರಿ, ಸಿದ್ದಾರ್ಥ ಕಾನೂನು ಕಾಲೇಜಿಗೆ ಒಟ್ಟಾರೆಯಾಗಿ 6.31 ಕೋಟಿ ರು ಅನುದಾನ ಮಂಜೂರಾಗಿತ್ತು.

 

ಇಲಾಖೆಯಲ್ಲಿ ಅನುದಾನವೇ ಲಭ್ಯವಿರಲಿಲ್ಲ

 

ಕಳೆದ ವರ್ಷವೇ ಕರ್ನಾಟಕ ಪೀಪಲ್ಸ್‌ ಎಜುಕೇಷನ್‌ ಸೊಸೈಟಿಗೆ 6.31 ಕೋಟಿ ರು ಅನುದಾನ ಬಿಡುಗಡೆ ಮಾಡಿದ್ದರೂ ಸಹ ಪುನಃ  2025ರ ಫೆಬ್ರುವರಿಯಲ್ಲಿ ಪುನಃ 8.46 ಕೋಟಿ ಅನುದಾನ ಬಿಡುಗಡೆಗೆ ಪ್ರಸ್ತಾವ ಸಲ್ಲಿಸಿತ್ತು. ಆದರೆ ಈ ಪ್ರಸ್ತಾವ ಪರಿಶೀಲನೆ ಮಾಡಿದ್ದ ಇಲಾಖೆಯ ಬಳಿ ಅನುದಾನವೇ ಲಭ್ಯವಿರಲಿಲ್ಲ.

 

‘ಈಗಾಗಲೇ ಈ ಸಂಸ್ಥೆಗೆ 631.00 ಲಕ್ಷ ರು.ಗಳನ್ನು ಮಂಜೂರು ಮಾಡಿ ಆಯುಕ್ತರ ಕಚೇರಿಯಲ್ಲಿ ಅನುದಾನ ಬಿಡುಗಡೆ ಮಾಡಲಾಗಿರುತ್ತದೆ. ಈ ಅನುದಾನವನ್ನು ಹೊರತುಪಡಿಸಿ 846.65 ಲಕ್ಷ ರು ಗಳನ್ನು ಮಂಜೂರು ಮಾಡಬೇಕಾಗಿರುತ್ತದೆ. ‘ಪ್ರಸ್ತುತ ಅನುದಾನ ಲಭ್ಯವಿರುವುದಿಲ್ಲ’ ಮತ್ತು 230.00 ಕೋಟಿ ರು.ಗಳನ್ನು ಅನುದಾನ ಬಿಡುಗಡೆ ಮಾಡಲು ಬಾಕಿ ಇರುತ್ತದೆ ಎಂದು 2025ರ ಮಾರ್ಚ್‌ 4ರಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಿತ್ತು.

 

 

ಪ್ರಸ್ತುತ ಅನುದಾನ ಲಭ್ಯವಿರುವುದಿಲ್ಲ ಎಂದು ಇಲಾಖೆಯು ಸ್ಪಷ್ಟವಾಗಿ ಹೇಳಿದ್ದರೂ ಸಹ 6.80 ಕೋಟಿ ರು.ಗಳನ್ನು ವಿಶೇಷ ಪ್ರಕರಣಗಳು ಎಂದು ಪರಿಗಣಿಸಿ ಮಂಜೂರು ಮಾಡಬೇಕು ಎಂದು ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರು  2025ರ ಮಾರ್ಚ್‌ 7ರಂದು ಅನುಮೋದಿಸಿದ್ದರು.

 

 

ಇದರಲ್ಲಿ ಪ್ರಜ್ಞ ಆಂಗ್ಲ ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ 230.00 ಲಕ್ಷ, ಸಿದ್ದಾರ್ಥ ಕಾನೂನು ಕಾಲೇಜಿನಲ್ಲಿ ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ 91.50 ಲಕ್ಷ, ಪ್ರಜ್ಞ ಆಂಗ್ಲ ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶೌಚಾಲಯ ನಿರ್ಮಾಣ ಕಾಮಗಾರಿಗೆ 71.50 ಲಕ್ಷ, ಡಾ ಅಂಬೇಡ್ಕರ್‌ ಮಹಾವಿದ್ಯಾಲಯದಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿಗೆ 71.50 ಲಕ್ಷ, ಡಾ ಅಂಬೇಡ್ಕರ್‌ ಪದವಿ ಕಾಲೇಜಿನ ಪಕ್ಕದಲ್ಲಿರುವ ಪೋಸ್ಟ್‌ ಗ್ರಾಜ್ಯುಯೇನಷ್‌ ಅಧ್ಯಯನ ಕೇಂದ್ರದ ಹೆಚ್ಚುವರಿಕಟ್ಟಡ ನಿರ್ಮಾಣಕ್ಕೆ 165.00 ಲಕ್ಷ, ಬೀದರ್‌ನಲ್ಲಿರುವ ಸಿದ್ದಾರ್ಥ ಕಿರಿಯ ಕಾಲೇಜಿಗೆ ಕಾಂಪೌಂಡ್‌ ಗೋಡೆ ನಿರ್ಮಾಣಕ್ಕೆ 51.15 ಲಕ್ಷ ರು ಸೇರಿತ್ತು.

 

3.59 ಕೋಟಿ ಗೆ ಆದೇಶ

 

ಈ ಪೈಕಿ ಪ್ರಜ್ಞ ಆಂಗ್ಲ ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ 230.00 ಲಕ್ಷ ಹೊರತುಪಡಿಸಿ ಉಳಿದ 3 ಕೋಟಿ 59 ಲಕ್ಷ 15 ಸಾವಿರ ಮೊತ್ತಕ್ಕೆ ಆದೇಶ ಹೊರಡಿಸಿತ್ತು. ಅದೇ ರೀತಿ  2.30 ಕೋಟಿ ರು ಅನುದಾನ ಮಂಜೂರಾತಿ ಆದೇಶ ಹೊರಡಿಸುವ ಕುರಿತು ಆರ್ಥಿಕ ಇಲಾಖೆಯ ಸಹಮತಿ ಪಡೆಯಲು ಸೂಚಿಸಲಾಗಿತ್ತು.

 

 

ಹಾಗೆಯೇ ಪ್ರಿಯದರ್ಶಿನಿ ಪದವಿಪೂರ್ವ ಕಾಲೇಜಿನ ಕಟ್ಟಡ ರಿಪೇರಿ ಕಾಮಗಾರಿಗೆ 41.00 ಲಕ್ಷ, ಸಿದ್ದಾರ್ಥ ಕಾನೂನು ಪದವಿ ಕಾಲೇಜಿನಲ್ಲಿ ಶೌಚಾಲಯ ಕಟ್ಟಡ ನಿರ್ಮಾಣ, ದುರಸ್ತಿ ಕಾಮಗಾರಿಗೆ 90.00 ಲಕ್ಷ, ಮಿಲಿಂದ್‌ ಪ್ರೌಢಶಾಲೆಗೆ 35.00 ಲಕ್ಷ ರು. ಸೇರಿ  ಒಟ್ಟಾರೆ 1.66 ಕೋಟಿ ರು ಮೊತ್ತದ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಲು ಮುಂದಾಗಿದೆ. ಈ ಸಂಬಂಧ ನಿರ್ಣಯ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಕಡತವನ್ನು ಸಚಿವ ಹೆಚ್‌ ಸಿ ಮಹದೇವಪ್ಪ ಅವರಿಗೆ ಮಂಡಿಸಿದೆ ಎಂದು ಗೊತ್ತಾಗಿದೆ.

 

ಹಣ ದುರ್ಬಳಕೆ ಮಾಡಿಕೊಂಡಿದೆ ಎಂಬ ದೂರು,  ಲೋಕಾಯುಕ್ತದಲ್ಲಿ ಇನ್ನೂ ವಿಚಾರಣೆ ಹಂತದಲ್ಲಿರುವಾಗಲೇ ಇದೇ ಸೊಸೈಟಿಗೆ ಸರ್ಕಾರವು   51.15 ಲಕ್ಷ ರು.ಗಳ ಸಹಾಯಧನವನ್ನು ಮಂಜೂರು ಮಾಡಿತ್ತು.

 

 

ಖರ್ಗೆ ಕುಟುಂಬ ಸದಸ್ಯರಿರುವ ಸೊಸೈಟಿಗೆ 51.15 ಲಕ್ಷ ಸಹಾಯಧನ; ಹಿತಾಸಕ್ತಿ ಸಂಘರ್ಷವಲ್ಲವೇ?

 

ಕರ್ನಾಟಕ ಪೀಪಲ್ಸ್‌ ಎಜುಕೇಷನ್‌ ಸೊಸೈಟಿಗೆ ಪ್ರಸ್ತುತ ಸಂಸದ ರಾಧಾಕೃಷ್ಣ ದೊಡ್ಡಮನಿ ಅಧ್ಯಕ್ಷರಾಗಿದ್ದರೇ, ಮಲ್ಲಿಕಾರ್ಜುನ ಖರ್ಗೆ ಅವರು ಸದಸ್ಯರಾಗಿದ್ದಾರೆ.

 

 

ಅದೇ ರೀತಿ ಮಾರುತಿ ರಾವ್‌ ಡಿ ಮಾಲೇ, ಶಾಂತಪ್ಪ,  ಆರ್‍‌ ಎಲ್ ಗುಡೂರ್, ಐ ಪಿ ಚಿಪ್ಪಾರ್‍‌, ಮಹಂತಪ್ಪ ಸಾಂಗ್ವಿ, ಮರೆಪ್ಪ, ಮಾಪಣ್ಣ ಗಂಜಗೇರಿ ಮತ್ತು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಸದಸ್ಯರಾಗಿದ್ದಾರೆ.

 

 

 

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಧಾರ್ಮಿಕ ಸಂಸ್ಥೆಗಳು, ಸಂಘ ಸಂಸ್ಥೆಗಳು, ಟ್ರಸ್ಟ್‌ಗಳನ್ನು ನಡೆಸುವ ವಿದ್ಯಾರ್ಥಿ ನಿಲಯಗಳು, ಶಾಲಾ ಕಾಲೇಜುಗಳು ಹಾಗೂ ಸಮುದಾಯ ಭವನಗಳ ಕಟ್ಟಡ ನಿರ್ಮಾಣಕ್ಕೆ ಸಹಾಯ ಧನ ನೀಡುವ ಕುರಿತು ಸರ್ಕಾರವು ಈಗಾಗಲೇ ಮಾರ್ಗಸೂಚಿ ಹೊರಡಿಸಿತ್ತು.

 

 

 

 

ಕರ್ನಾಟಕ ಪೀಪಲ್ಸ್‌ ಎಜುಕೇಷನ್‌ ಸೊಸೈಟಿಯು ಬೀದರ್‍‌ನಲ್ಲಿ ಸಿದ್ದಾರ್ಥ ಕಾಂಪೋಸಿಟ್‌ ಕಾಲೇಜು, ಜ್ಯೂನಿಯರ್‍‌ ಕಾಲೇಜು, ಪ್ರಥಮ ದರ್ಜೆ ಕಾಲೇಜು, ಎಚ್‌ಪಿಎಸ್‌ ಶಾಲೆಗಳನ್ನು ನಡೆಸುತ್ತಿದೆ.

 

 

2021ರ ಅಂತ್ಯಕ್ಕೆ ಈ ಸೊಸೈಟಿಯು ಅನುದಾನ ಮತ್ತು ದೇಣಿಗೆ ರೂಪದಲ್ಲಿ ಒಟ್ಟಾರೆ 23, 93, 68,090.43 ರುಗ.ಳನ್ನು ಸ್ವೀಕರಿಸಿತ್ತು.

 

 

 

 

ಮಲ್ಲಿಕಾರ್ಜುನ ಖರ್ಗೆ ಕರ್ನಾಟಕ ಪೀಪಿಲ್ಸ್ ಎಜುಕೇಶನ್ ಸೊಸೈಟಿಯ ಸ್ಥಾಪಕ ಅಧ್ಯಕ್ಷರಾಗಿದ್ದರು. ಸದ್ಯ ಅವರು ಸೊಸೈಟಿಯಲ್ಲಿ ಯಾವುದೇ ಹುದ್ದೆ ಹೊಂದಿಲ್ಲ. ಆದರೆ, ಇವರ ಮಗ ಪ್ರಿಯಾಂಕ್ ಖರ್ಗೆ ಅದರ ಸದಸ್ಯರಾಗಿದ್ದಾರೆ.‌ ಷರತ್ತಿನ ಪ್ರಕಾರ ಈ ನಿವೇಶನದಲ್ಲಿ ಕಲ್ಯಾಣ ಮಂಪಟ ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts