ಬೆಂಗಳೂರು; ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಆವರಣದಲ್ಲಿ ಕುಸಿದ 6 ಅಡಿ ಎತ್ತರದ ಕಾಂಪೌಂಡ್ ಗೋಡೆಯನ್ನು 2010-11ರಲ್ಲಿ ನಿರ್ಮಿಸಲಾಗಿತ್ತು. ಅದು ಕೇವಲ ಕಾಂಪೌಂಡ್ ಗೋಡೆಯಾಗಿ ನಿರ್ಮಿಸಲ್ಪಟ್ಟಿತ್ತು. ಮಣ್ಣಿನ ಒತ್ತಡವನ್ನು ತಡೆಯುವ ರಿಟೈನಿಂಗ್ ವಾಲ್ (Retaining Wall) ಆಗಿ ನಿರ್ಮಿಸಲ್ಪಟ್ಟಿರಲಿಲ್ಲ.
ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಆವರಣದಲ್ಲಿ ಕಾಂಪೌಂಡ್ ಗೋಡೆ ಕುಸಿತ ಸಂಭವಿಸಿದ ಪ್ರಕರಣ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಲೋಕಾಯುಕ್ತರಿಗೆ ಸಮಗ್ರ ವಿವರಗಳನ್ನೊಳಗೊಂಡ ವರದಿ ಸಲ್ಲಿಸಿದ್ದಾರೆ. ಈ ಪ್ರಕರಣ ಕುರಿತು ಲೋಕಾಯುಕ್ತರು 2026ರ ಏಪ್ರಿಲ್ 30ರಂದು ನೋಟೀಸ್ ನೀಡಿದ್ದರು. ಈ ನೋಟೀಸ್ ಗೆ ಸಂಬಂಧಿಸಿದಂತೆ ಲೋಕಾಯುಕ್ತರಿಗೆ ವರದಿ ಸಲ್ಲಿಸಿದ್ದಾರೆ.
ಜಿಬಿಎ ಅಧಿಕಾರಿಗಳು ಪಾದಚಾರಿ ಮಾರ್ಗ ಒತ್ತುವರಿಯನ್ನು ತೆರವುಗೊಳಿಸಿದ್ದರೆ ಹಾಗೂ ಬಿಬಿಎಂಪಿ ಶಿಥಿಲಗೊಂಡಿದ್ದ ಕಾಂಪೌಂಡ್ ಗೋಡೆಯನ್ನು ದುರಸ್ತಿ ಮಾಡಿದ್ದರೆ ಈ ಭೀಕರ ದುರಂತವನ್ನು ತಪ್ಪಿಸಬಹುದಿತ್ತು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ (SP) ನೇತೃತ್ವದ ತನಿಖಾ ತಂಡವು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರಿಗೆ ಈಗಾಗಲೇ ವರದಿ ಸಲ್ಲಿಸಿದೆ. ಇದರ ಬೆನ್ನಲ್ಲೇ ಮುಖ್ಯ ಕಾರ್ಯದರ್ಶಿಗಳೂ ಲೋಕಾಯುಕ್ತರಿಗೆ ಸಲ್ಲಿಸಿರುವ ವರದಿಯು ಮುನ್ನೆಲೆಗೆ ಬಂದಿದೆ.
ಈ ವರದಿ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಲೋಕಾಯುಕ್ತರು 2026ರ ಏಪ್ರಿಲ್ 30ರಂದು ನೋಟೀಸ್ ನೀಡಿದ ನಂತರ ಶಾಲಿನಿ ರಜನೀಶ್ ಅವರು ದುರ್ಘಟನೆ ಸ್ಥಳಕ್ಕೆ 2026ರ ಮೇ 14ರಂದು ಖುದ್ದು ಭೇಟಿ ನೀಡಿದ್ದರು.




ಇದಲ್ಲದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ನಾಗರಾಜ್ ಎಂ.ಬಿ. ಅವರು ಕರ್ತವ್ಯಲೋಪ ಎಸಗಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ದೃಢಪಡಿಸಿಕೊಂಡಿದೆ.

ತನಿಖೆ ಪೂರ್ಣಗೊಳ್ಳುವವರೆಗೂ ಇವರನ್ನು ( ಸರ್ಕಾರದ ಆದೇಶ ಸಂಖ್ಯೆ AKUKA/171/CGM/20262026ರ ಮೇ 1ರಂದು) ಅಮಾನತುಗೊಳಿಸಿದೆ ಎಂದು ಲೋಕಾಯುಕ್ತರ ಗಮನಕ್ಕೆ ತಂದಿರುವುದು ವರದಿಯಿಂದ ಗೊತ್ತಾಗಿದೆ.

ತನಿಖಾ ವರದಿಯಲ್ಲಿ ಉಲ್ಲೇಖಿಸಲಾದ ತಾಂತ್ರಿಕ ಅಭಿಪ್ರಾಯಗಳು / ಲೋಪಗಳನ್ನು ಪರಿಶೀಲಿಸಲಾಗಿದೆ. ಈ ಸಂಬಂಧ ಮತ್ತಷ್ಟು ಅನಾಹುತಗಳು ಸಂಭವಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿತ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಸೂಚಿಸಲಾಗಿದೆ. ಇದರಲ್ಲಿ ಕುಸಿದ ಕಾಂಪೌಂಡ್ ಗೋಡೆಯ ಪಕ್ಕದಲ್ಲಿ ಮಣ್ಣು ಮತ್ತು ತ್ಯಾಜ್ಯ (ಡೆಬ್ರಿಸ್) ಸುರಿದು ಅನಾಹುತಕ್ಕೆ ಕಾರಣವಾದ ಎಎಸ್‌ಆರ್ ಟ್ರೇಡರ್ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಎಂದು ವಿವರಿಸಿರುವುದು ತಿಳಿದು ಬಂದಿದೆ.
ಆಕಸ್ಮಿಕ ಮತ್ತು ಭಾರೀ ಮಳೆ ಹಾಗೂ ಗಾಳಿಹನಿ ಮಳೆಯನ್ನೊಳಗೊಂಡ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದಿರುವ ದುರ್ಘಟನೆ ನಡೆದಿದೆ. ತನಿಖಾ ವರದಿಯ ಪ್ರಕಾರ ಗಾಳಿಯ ವೇಗ ಸುಮಾರು 65 ಕಿ.ಮೀ. ಪ್ರತಿ ಗಂಟೆಯಾಗಿತ್ತು. ಸುಮಾರು 45 ನಿಮಿಷಗಳಲ್ಲಿ ಒಟ್ಟು 106.70 ಮಿಲಿಮೀಟರ್ ಮಳೆಯಾಗಿದೆ. ಇದರ ಜೊತೆಗೆ ಮಣ್ಣು ಮತ್ತು ಅವಶೇಷಗಳ ಮೂಲಕ ನೀರು ಜರಿದು ಉಂಟಾದ ಜಲಸ್ಥಿತಿಕ (Hydrostatic) ಹಾಗೂ ಅಡ್ಡ ಒತ್ತಡದಿಂದ ಆಸ್ಪತ್ರೆಯ ಕಾಂಪೌಂಡ್ ಗೋಡೆ ಆಕಸ್ಮಿಕವಾಗಿ ಕುಸಿದಿದೆ. ಈ ಘಟನೆ ಆಡಳಿತಕ್ಕೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸಾಕಷ್ಟು ಸಮಯಾವಕಾಶವೂ ದೊರೆಯಲಿಲ್ಲ ಎಂದು ವಿವರಿಸಿರುವುದು ಗೊತ್ತಾಗಿದೆ.

ತಾಂತ್ರಿಕ ವರದಿಯ ಪ್ರಕಾರ, ಹಳೆಯ ಕಟ್ಟಡಗಳ ತೆರವು ಹಾಗೂ ಕ್ವಾರ್ಟರ್‌ಗಳ ಧ್ವಂಸದಿಂದ ಉಂಟಾದ ವಸ್ತುಗಳ ವಿಲೇವಾರಿ ಕಾರ್ಯವನ್ನು ಎಎಸ್‌ಆರ್ ಟ್ರೇಡರ್ಸ್‌ಗೆ 2017ರ ಜುಲೈ 1ರಂದೇ ಕಾರ್ಯಾದೇಶ ಮೂಲಕ ವಹಿಸಲಾಗಿತ್ತು. ಅವಶೇಷಗಳನ್ನು ನಗರದಿಂದ 30 ಕಿ.ಮೀ ದೂರದಲ್ಲಿ ವಿಲೇವಾರಿ ಮಾಡಲು ರೂ.11.54 ಲಕ್ಷ ಅಂದಾಜು ವೆಚ್ಚ ನಿಗದಿಪಡಿಸಲಾಗಿತ್ತು. ಆದರೆ, ತ್ಯಾಜ್ಯವನ್ನು ಸ್ಥಳದಿಂದ ತೆರವುಗೊಳಿಸಿ ವಿಲೇವಾರಿ ಮಾಡುವ ಬದಲು, ಗುತ್ತಿಗೆದಾರರು ನಿರ್ಲಕ್ಷ್ಯ ತೋರಿಸಿ ಸುಮಾರು 3,600 ಘನ ಮೀಟರ್ ಅವಶೇಷಗಳನ್ನು ಅದೇ ಸ್ಥಳದಲ್ಲೇ ಬಿಟ್ಟುಬಿಟ್ಟಿದ್ದರು. ಈ ಅವಶೇಷಗಳನ್ನು 200 ಮೀಟರ್ ಉದ್ದದ ಕಾಂಪೌಂಡ್ ಗೋಡೆಯ ಪಕ್ಕದಲ್ಲಿರುವ ಸುಮಾರು 22,000 ಚದರ ಅಡಿ ಪ್ರದೇಶದಲ್ಲಿ ಹರಡಲಾಗಿತ್ತು ಎಂದು ತಾಂತ್ರಿಕ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.
ಭಾರೀ ಮಳೆ ಹಾಗೂ ಗೋಡೆಯ ಕಡೆ ಇಳಿಜಾರು ಇರುವ ಕಾರಣದಿಂದ ಸುಮಾರು 3,305 lb/ft ಒತ್ತಡ ಉಂಟಾಗಿದೆ. ಇದೇ ಕಾಂಪೌಂಡ್ ಗೋಡೆಯು ಶವಾಗಾರ (Mortuary) ವರೆಗೆ ವಿಸ್ತರಿಸಿದ್ದರೂ ಅಲ್ಲಿ ಇಂತಹ ಹಾನಿ ಸಂಭವಿಸಿಲ್ಲ. ಏಕೆಂದರೆ ಅಲ್ಲಿ ನೀರು ಹರಿಯುವ ರಂಧ್ರಗಳನ್ನು ಹೊಂದಿರುವ ಪ್ರತ್ಯೇಕ ತಡೆಗೋಡೆ (retaining wall) ನಿರ್ಮಿಸಲಾಗಿತ್ತು.
ನಾಲ್ವರು ಇಂಜಿನಿಯರ್‍ಗಳೇ ಹೊಣೆಗಾರರು
ಈ ದುರ್ಘಟನೆಗೆ ಇಂಜಿನಿಯರ್‍ಗಳಾದ ಸೋಮರಾಜು, ಮಹೇಶ್ ಕುಮಾರ್, ತಿಮ್ಮಪ್ಪ ಮತ್ತು ಉದಯಶಂಕರ್ ಅವರು ಪ್ರಾಥಮಿಕವಾಗಿ ಹೊಣೆಗಾರರು ಎಂದು ವರದಿಯಲ್ಲಿ ಹೇಳಲಾಗಿದೆ. ಅವಶೇಷಗಳನ್ನು ತೆರವುಗೊಳಿಸುವುದು ಹಾಗೂ ಸಮರ್ಪಕ ನೀರು ಹರಿವು ವ್ಯವಸ್ಥೆಯನ್ನು ಖಚಿತಪಡಿಸುವ ಮೂಲಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು. ಆದರೆ ಅವರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾದ್ದಾರೆ. ಹೀಗಾಗಿ ಅವರ ವಿರುದ್ಧ 2026ರ ಮೇ 14ರಂದು ಕಾರಣ ಕೇಳುವ ನೋಟಿಸ್‌ಗಳನ್ನು ಜಾರಿಗೊಳಿಸಿದೆ ಎಂದು ಕೈಗೊಂಡಿರುವ ಕ್ರಮಗಳ ವಿವರವನ್ನು ಒದಗಿಸಿರುವುದು ತಿಳಿದು ಬಂದಿದೆ.

ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಆವರಣದಲ್ಲಿ 2017ರಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜು ಮತ್ತು ಸಂಸ್ಥೆ ಸ್ಥಾಪನೆಯಾಗುವ ಸಂದರ್ಭದಲ್ಲಿ, ಆವರಣದ ಕಾಂಪೌಂಡ್ ಗೋಡೆಯ ಒಂದು ಭಾಗವನ್ನು ಮಾತ್ರ ಮರುನಿರ್ಮಾಣ ಮಾಡಲು ಅಂದಾಜು ಮಂಜೂರಾಗಿತ್ತು. ಮತ್ತು ಈ ಭಾಗವನ್ನು ಅದರಲ್ಲಿ ಒಳಪಡಿಸಿರಲಿಲ್ಲ.

ತಾಂತ್ರಿಕ ವರದಿಯಲ್ಲಿ ರಸ್ತೆ ಬದಿಯ ವ್ಯಾಪಾರಿಗಳು ಕಾಂಪೌಂಡ್ ಗೋಡೆಯ ಹೊರಭಾಗದ ಮಹಾನಗರ ಪಾಲಿಕೆಯ ಪಾದಚಾರಿ ಮಾರ್ಗವನ್ನು ಬಳಸುತ್ತಿದ್ದ ವೇಳೆ, ಗೋಡೆಯೊಳಗೆ ತೆಳುವಾದ ಶೀಟ್‌ಗಳು, ಕಬ್ಬಿಣದ ರಾಡ್‌ಗಳು, ಲೋಹದ ಕೊಕ್ಕೆಗಳು, ಗಾಳಿಗಳು ಮುಂತಾದವುಗಳನ್ನು ಅಳವಡಿಸಿದ್ದರು ಎಂದು ಉಲ್ಲೇಖಿಸಲಾಗಿದೆ. ಇದರಿಂದ ಈಗಾಗಲೇ ಒತ್ತಡದಲ್ಲಿದ್ದ ಗೋಡೆ ಇನ್ನಷ್ಟು ದುರ್ಬಲಗೊಂಡಿತ್ತು.
ಇದಲ್ಲದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು 2026ರ ಮೇ 15ರಂದು ಅನುಸರಣೆ ವರದಿ ಸಲ್ಲಿಸಿದೆ. ಹಳೆಯ ಮತ್ತು ಜೀರ್ಣಾವಸ್ಥೆಯಲ್ಲಿರುವ ಎಲ್ಲಾ ಸಾರ್ವಜನಿಕ ಕಟ್ಟಡಗಳನ್ನು ಗುರುತಿಸಿ ಅವುಗಳ ಸ್ಥಿತಿಯನ್ನು ಮೌಲ್ಯಮಾಪನ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವರದಿ ಮಾಡಿದ್ದಾರೆ.

ಹಳೆಯ ಮತ್ತು ಜೀರ್ಣಾವಸ್ಥೆಯಲ್ಲಿರುವ ಸಾರ್ವಜನಿಕ ಕಟ್ಟಡಗಳು, ಕಾಂಪೌಂಡ್ ಗೋಡೆಗಳು ಹಾಗೂ ಸಾರ್ವಜನಿಕ ಸುರಕ್ಷತೆಗೆ ಅಪಾಯ ಉಂಟುಮಾಡುವ ಇತರೆ ರಚನೆಗಳನ್ನು ಗುರುತಿಸಲಾಗುತ್ತಿದೆ. ಅವುಗಳ ಮೌಲ್ಯಮಾಪನ ನಡೆಸಿ, ಕಾನೂನುಬದ್ಧವಾಗಿ ಅಗತ್ಯ ತಿದ್ದುಪಡಿ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.
ಲೋಕಾಯುಕ್ತರು ನೀಡಿದ ನಿರ್ದೇಶನಗಳಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ನಗರ ಪಾಲಿಕೆಗಳನ್ನು ಒಳಗೊಂಡ ಎಲ್ಲಾ ಸಂಬಂಧಿತ ಪ್ರಾಧಿಕಾರಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಸಾರ್ವಜನಿಕ ಸುರಕ್ಷತೆಗೆ ಅಪಾಯ ಉಂಟುಮಾಡುವ ಹಳೆಯ ಮತ್ತು ಜೀರ್ಣಾವಸ್ಥೆಯಲ್ಲಿರುವ ಸಾರ್ವಜನಿಕ ಕಟ್ಟಡಗಳು, ಕಾಂಪೌಂಡ್ ಗೋಡೆಗಳು ಹಾಗೂ ಇತರೆ ರಚನೆಗಳನ್ನು ಗುರುತಿಸಿ, ಅವುಗಳ ಮೌಲ್ಯಮಾಪನ ನಡೆಸಿ, ಅಗತ್ಯ ತಿದ್ದುಪಡಿ ಮತ್ತು ಮುನ್ನೆಚ್ಚರಿಕೆ ಮತ್ತು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ದುರ್ಬಲ ಮತ್ತು ಅಪಾಯಕಾರಿಯಾದ ಮರಗಳು ಹಾಗೂ ಕೊಂಬೆಗಳನ್ನು ಪರಿಶೀಲಿಸಿ ಕತ್ತರಿಸುವುದು / ತೆರವುಗೊಳಿಸುವ ಕಾರ್ಯಗಳನ್ನು ಕೈಗೊಳ್ಳಲು ಜಿಬಿಎಯು ಕ್ರಮಗಳನ್ನು ಕೈಗೊಂಡಿದೆ. ಇದಲ್ಲದೆ ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣದ ಪ್ರತಿಕ್ರಿಯೆ ಖಚಿತಪಡಿಸಲು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಸಮನ್ವಯ ವ್ಯವಸ್ಥೆಗಳು ಮತ್ತು ನಿಯಂತ್ರಣ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಲೋಕಾಯುಕ್ತರಿಗೆ ವರದಿ ಸಲ್ಲಿಸಿರುವುದು ತಿಳಿದು ಬಂದಿದೆ.

ಇದಲ್ಲದೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ “ಟ್ರೀ ಕ್ಯಾನಪಿ ಮ್ಯಾನೇಜ್‌ಮೆಂಟ್” (Tree Canopy Management) ವಿಶೇಷ ತಂಡಗಳನ್ನು ರಚಿಸಿದೆ. ಈ ತಂಡಗಳಿಗೆ ತಮ್ಮ ವ್ಯಾಪ್ತಿಯಲ್ಲಿರುವ ದುರ್ಬಲ, ಜೀರ್ಣಾವಸ್ಥೆಯಲ್ಲಿರುವ ಮತ್ತು ಅಪಾಯಕಾರಿಯಾದ ಮರಗಳನ್ನು ಗುರುತಿಸಲಾಗಿದೆ. ಅವುಗಳನ್ನು ತೆರವುಗೊಳಿಸುವುದು ಅಥವಾ ಅಪಾಯಕಾರಿ ಕೊಂಬೆಗಳನ್ನು ಕತ್ತರಿಸುವಂತಹ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.
ಟ್ರೀ ಕ್ಯಾನಪಿ ಮ್ಯಾನೇಜ್‌ಮೆಂಟ್ ತಂಡಗಳು ನಿರಂತರವಾಗಿ ದುರ್ಬಲ, ಜೀರ್ಣಾವಸ್ಥೆಯಲ್ಲಿರುವ ಮತ್ತು ಅಪಾಯಕಾರಿಯಾದ ಮರಗಳನ್ನು ಗುರುತಿಸುವ ಕಾರ್ಯವನ್ನು ನಡೆಸುತ್ತಿದೆ. ಮರಗಳನ್ನು ತೆರವುಗೊಳಿಸುವುದು ಹಾಗೂ ಅಪಾಯಕಾರಿ ಕೊಂಬೆಗಳನ್ನು ಕತ್ತರಿಸುವಂತಹ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿವೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಸೇರಿ ಅತಿಕ್ರಮಣ ತೆರವು ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತಿದೆ.

ಆ ಸಮಯದಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಅನುಮತಿ ಇಲ್ಲದೆ ಕೆಲವು ರಸ್ತೆಬದಿ ವ್ಯಾಪಾರ ಚಟುವಟಿಕೆಗಳು ನಡೆಯುತ್ತಿವೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.




