ಬೆಂಗಳೂರು; ಮುಖ್ಯಮಂತ್ರಿ ಸಚಿವಾಲಯವೂ ಸೇರಿದಂತೆ ಸಚಿವಾಲಯದ ಇತರೆ ಕಚೇರಿಗಳಲ್ಲಿ ಹೊರಗುತ್ತಿಗೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡೇಟಾ ಎಂಟ್ರಿ ಆಪರೇಟರ್‍ಗಳ ವೇತನಕ್ಕೆ ಕತ್ತರಿ ಬೀಳಲಾರಂಭಿಸಿದೆ. ಅದೂ ಸಾರ್ವತ್ರಿಕ ರಜಾ ದಿನದ ವೇತನವನ್ನು ಕಸಿದುಕೊಳ್ಳುತ್ತಿದೆ. ಅಲ್ಲದೇ ಸುಮಾರು 30-40 ಮಂದಿ ಡೇಟಾ ಎಂಟ್ರಿ ಆಪರೇಟರ್‍ಗಳಿಗೆ ರಜೆ ಮತ್ತು ಸಂಬಳಕ್ಕೂ ಕತ್ತರಿ ಹಾಕಿದ್ದಾರೆ! ಅದರಲ್ಲೂ ಮಹಿಳಾ ನೌಕರರನ್ನೇ ಶೋಷಿಸುತ್ತಿದ್ದಾರೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ.
ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಡೇಟಾ ಎಂಟ್ರಿ ಆಪರೇಟರ್‍ಗಳ ಮೇಲೆ ಕೆಲ ಇಲಾಖೆಯ ಅಧಿಕಾರಿಗಳು ದೌರ್ಜನ್ಯ ಮುಂದುವರೆಸಿದ್ದಾರೆ. ಅಲ್ಲದೇ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಈ ದೌರ್ಜನ್ಯವನ್ನು ಪ್ರಶ್ನಿಸಿದರೆ ಕೆಲಸದಿಂದ ವಜಾ ಮಾಡುವ ಬೆದರಿಕೆಯನ್ನೂ ಒಡ್ಡುತ್ತಿದ್ದಾರೆ. ಹೀಗಾಗಿ ಡೇಟಾ ಎಂಟ್ರಿ ಆಪರೇಟರ್‍ಗಳು ಪುನಃ ಕಾನೂನು ಸಚಿವ ಹೆಚ್ ಕೆ ಪಾಟೀಲ್ ಅವರ ಕಚೇರಿ ಕದ ತಟ್ಟಿದ್ದಾರೆ.
ಈ ಕುರಿತು ಡೇಟಾ ಎಂಟ್ರಿ ಆಪರೇಟರ್‍ಗಳು ಕಾನೂನು ಸಚಿವ ಹೆಚ್ ಕೆ ಪಾಟಿಲ್ ಅವರಿಗೆ 2026ರ ಮೇ 26ರಂದು ದೂರು ಸಲ್ಲಿಸಿದ್ದಾರೆ. ಈ ದೂರಿನ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಹೊರಗುತ್ತಿಗೆ ನೌಕರರ ಹಿತ ಕಾಯಲು ಈಚೆಗಷ್ಟೇ ವಿಧೇಯಕ ಮಂಡಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಹೊರಗುತ್ತಿಗೆ ನೌಕರರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೀಗ ಸಚಿವಾಲಯದ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡೇಟಾ ಎಂಟ್ರಿ ಆಪರೇಟರ್‍ಗಳು ಒಂದು ನಿಮಿಷ ತಡವಾದರೇ ಅರ್ಧ ದಿನ ವೇತನವನ್ನೇ ಕಿತ್ತುಕೊಂಡಿದೆ. ಈ ಬೆಳವಣಿಗೆ ನಡುವೆಯೇ ಡೇಟಾ ಎಂಟ್ರಿ ಆಪರೇಟರ್‍ಗಳ ಮೇಲೆ ಅಧಿಕಾರಿಗಳ ಒಂದು ವರ್ಗವು ಶೋಷಣೆ, ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಸಲ್ಲಿಕೆಯಾಗಿರುವ ದೂರು ಮುನ್ನೆಲೆಗೆ ಬಂದಿದೆ.
ದೂರಿನಲ್ಲೇನಿದೆ?
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಇ ಆಡಳಿತ ವಿಭಾಗವು 2026ರ ಜನವರಿ 1ರಂದು ಹೊರಡಿಸಿರುವ ಈ ಸುತ್ತೋಲೆಯು ಡೇಟಾ ಎಂಟ್ರಿ ಆಪರೇಟರ್‍ಗಳ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಈ ಸುತ್ತೋಲೆಗೂ ಮುನ್ನ ಐದಾರು ವರ್ಷಗಳಿಂದ ಜಾರಿಯಲ್ಲಿದ್ದ ನಿಯಮದ ಪ್ರಕಾರ ತಿಂಗಳಲ್ಲಿ ಮೂರು ಬಾರಿ ಅನಿವಾರ್ಯ ಕಾರಣಗಳಿಂದ ಉಂಟಾಗಬಹುದಾದ ಮಿಸ್ ಫ್ಲಾಶ್, ತಡವಾಗಿ ಹಾಜರಾಗುವುದು, ಬೇಗ ಹೋಗುವ ಸನ್ನಿವೇಶಗಳಲ್ಲಿ ನೀಡಲಾಗುತ್ತಿದ್ದ ವಿನಾಯಿತಿಯನ್ನು ಮಾರ್ಪಡಿಸಿತ್ತು. ಅಲ್ಲದೇ ಕಚೇರಿಗೆ ಹಾಜರಾಗುವಾಗ ಕಚೇರಿಯಿಂದ ನಿರ್ಗಮಿಸುವಾಗ ಬಯೋ ಮೆಟ್ರಿಕ್ ಕಡ್ಡಾಯ ಎಂದು ತಿಳಿಸಿತ್ತು.
ಈ ಸುತ್ತೋಲೆಯಲ್ಲಿ ಎಲ್ಲಿಯೂ ಸಹ ಎಷ್ಟು ಗಂಟೆಗೆ ಕಚೇರಿಗೆ ನಿರ್ಗಮಿಸಿದಲ್ಲಿ ಅಥವಾ ಎಷ್ಟು ಗಂಟೆಗೆ ಕಚೇರಿಗೆ ಆಗಮಿಸುವಲ್ಲಿ ವಿನಾಯಿತಿಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದುಇಲ್ಲ ಎಂಬ ಬಗ್ಗೆ ತಿಳಿಸಿಲ್ಲ. ಅದಕ್ಕೂ ಮುಖ್ಯವಾಗಿ ಈ ಸುತ್ತೋಲೆ ಹೊರಡಿಸಿದ ನತರದ ಮೊದಲ ಮೂರು ತಿಂಗಳುಗಳಲ್ಲಿ (ಜನವರಿ-ಫೆಬ್ರುವರಿ-ಮಾರ್ಚ್ 2026) ಸುತ್ತೋಲೆಯ ಯಾವುದೇ ಹೊಸ ನಿಯಮಗಳನ್ನು ಜಾರಿಗೆ ತಂದಿಲ್ಲ. ಅಲ್ಲದೇ ಕಳೆದ ಐದಾರು ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿದ್ದ ರೀತಿಯಲ್ಲಿಯೇ ರಜೆ ಮತ್ತು ವೇತನವನ್ನು ಕಟಾಯಿಸುವುದನ್ನು ಯಥಾವತ್ತಾಗಿ ಜಾರಿಗೆ ತಂದಿದ್ದಾರೆ ಎಂದು ಡೇಟಾ ಎಂಟ್ರಿ ಆಪರೇಟರ್‍ಗಳು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
‘ಆದರೆ ಏಕಾಏಕಿ 2026ರ ಏಪ್ರಿಲ್‌ನಲ್ಲಿ ಯಹಾರಿಗೂ ಯಾವುದೇ ರೀತಿಯ ಲಿಖಿತ, ಮೌಖಿಕ ಮತ್ತು ಪೂರ್ವ ಮಾಹಿತಿ ನೀಡದೇ ಬಯೋ ಮೆಟ್ರಿಕ್ ಪಂಚಿಂಗ್‌ನಲ್ಲಿ ಜನವರಿ 1, 2026ರ ಸುತ್ತೋಲೆಯಲ್ಲಿ ತಿಳಿಸಿದ್ದ ಸೂಚನೆಗಳಿಗೆ ಹೊರತಾಗಿಯೂ ಸುತ್ತೋಲೆ ಹೊರಡಿಸಿದ ಅಧಿಕಾರಿಗಳೇ ಸುತ್ತೋಲೆಯನ್ನು ತಪ್ಪಾಗಿ ಆರ್ಥೈಯಿಸಿಕೊಂಡು ಅಂದಾಜು 30-40 ಜನ ಡೇಟಾ ಆಪರೇಟರ್‍ಗಳ ರಜೆ ಮತ್ತು ಸಂಬಳಕ್ಕೂ ಕತ್ತರಿ ಹಾಕಿದ್ದಾರೆ,’ ಎಂದು ದೂರಿನಲ್ಲಿ ಅಲವತ್ತುಕೊಂಡಿರುವುದು ಗೊತ್ತಾಗಿದೆ.

ಈ ಬಗ್ಗೆ ಡೇಟಾ ಆಪರೇಟರ್‍ಗಳು ಸಂಬಂಧಿಸಿದ ಅಧಿಕಾರಿವರ್ಗದೊಡನೆ ಚರ್ಚಿಸಿದ್ದಾರೆ. ‘ಉಪ ಕಾರ್ಯದರ್ಶಿ ವೆಂಕಟೇಶ್ ಮತ್ತು ಅಧೀನ ಕಾರ್ಯದರ್ಶಿ ಜಯಸುಧಾ ಅವರ ಮೌಖಿಕ ಅನುಮತಿ ನೀಡಿದ ನಂತರವೇ ವೇತನ ಕಟಾಯಿಸಲಾಗಿದೆ. ಇದಕ್ಕೆ ಮೇಲಾಧಿಕಾರಿಗಳ ನಿರ್ದೇಶನದಂತೆ ಸಾಮೂಹಿಕ ತೀರ್ಮಾನ ಕೈಗೊಂಡು ಕಟಾವಣೆ ಮಾಡಲಾಗಿದೆ ಎಂದು ಶಾಖಾಧಿಕಾರಿ ಹೇಳಿದ್ದರೇ ಅಧೀನ ಕಾರ್ಯದರ್ಶಿ ಜಯಸುಧಾ ಅವರು ಆ ರೀಯಾಗಿ ಸಂಬಳ, ರಜೆ ಕಟಾವಣೆ ಮಾಢಲು ನಾನು ಸೂಚಿಸಿಲ್ಲ. ಶಾಖೆಯಲ್ಲಿ ಆ ರೀತಿಯಾಗಿ ಮಾಡಿದ್ದಲ್ಲಿ ಅವರೇ ಹೊಣೆಗಾರರು, ಅವರನ್ನೇ ವಿಚಾರಿಸಬೇಕು,’ ಎಂದು ಹೇಳಿದ್ದಾರೆ ಎಂದು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಇದನ್ನು ಪ್ರಶ್ನಿಸಿದ್ದ ಡೇಟಾ ಆಪರೇಟರ್‍ಗಳನ್ನು ಮರು ಪ್ರಶ್ನಿಸಿರುವ ಅಧಿಕಾರಿಯೊಬ್ಬರು ‘ನಿಮ್ಮ ಪಿಯು ಪ್ರಮಾಣ ಪತ್ರ, ಟೈಪಿಂಗ್ ಪ್ರಮಾಣ ಪತ್ರ ತಂದು ತೋರಿಸಿ, ಇಲ್ಲವಾದಲ್ಲಿ ಕೆಲಸದಿಂದ ವಜಾಗೊಳಿಸಲಾಗುವುದು ಎಂದು ತಾಕೀತು ಮಾಡಿದ್ದಾರೆ. ಅನೇಕ ಮಂದಿ ಡಿಟಿಪಿ ಆಪರೇಟರ್‍ಗಳು ಹತ್ತು ವರ್ಷಗಳಿಗೂ ಹಿಂದಿನಿಂದಲೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಂದು ಜಾರಿಯಲ್ಲಿದ್ದ ನಿಯಮಗಳ ಪ್ರಕಾರವೇ ಇಲಾಖೆಯ ಅಧಿಕಾರಿಗಳು ನೇಮಕ ಮಾಡಿದ್ದಾರೆ. ನೇಮಕಾತಿ ನಂತರ ಬದಲಾದ ನಿಯಮಗಳಂತೆ ಕೆಲಸದಿಂದ ವಜಾ ಮಾಡುತ್ತೇವೆ ಎಂಬ ನಿರ್ದೇಶನಗಳು ನಮ್ಮನ್ನು ನಮ್ಮ ಕುಟುಂಬವನ್ನು ಅತಂತ್ರ ಸನ್ನಿವೇಶಕ್ಕೆ ದೂಡಿವೆ,’ ಎಂದು ದೂರಿನಲ್ಲಿ ಅಲವತ್ತುಕೊಂಡಿರುವುದು ಗೊತ್ತಾಗಿದೆ.
ಅಲ್ಲದೇ ಡೇಟಾ ಅಪರೇಟರ್ ಒಬ್ಬರು ಎರಡು ದಿನಗಳ ಸಾರ್ವತ್ರಿಕ ರಜಾ ದಿನಗಳ ವೇತನಕ್ಕೂ ಕತ್ತರಿ ಬಿದ್ದಿದೆ. ಈ ಬಗ್ಗೆ ಯಾವುದೇ ಲಿಖಿತ ನಿಯಮ, ಸುತ್ತೋಲೆ, ಆದೇಶ, ಮೌಖಿಕ ಸೂಚನೆಯು ಇಲ್ಲದೇ ಇದ್ದಾಗಲೂ ಏಕಾಏಕೀ ಸಂಬಳ ಕಟಾಯಿಸಲಾಗಿದೆ. ಈ ಬಗ್ಗೆ ಸೂಕ್ತ ಸಮಜಾಯಿಷಿಯನ್ನೂ ನೀಡಿಲ್ಲ.
‘ಇಲ್ಲಿ ಗಮನಿಸಬೇಕಿರುವ ಅಂಶವೇನಂದರೇ ಮಹಿಳಾ ನೌಕರರನ್ನೇ ಹೆಚ್ಚಾಗಿ ಈ ರೀತಿಯಾಗಿ ಶೋಷಣೆ ಮಾಡುತ್ತಿರುವುದು ಉದ್ದೇಶಪೂರ್ವಕವೇ ಅಥವಾ ಈ ರೀತಿಯ ಶೋಷಣೆಯ ಹಿಂದೆ ದುರುದ್ದೇಶವಿದೆಯೇ ಎಂಬ ಸಂಶಯ ಮೂಡುತ್ತಿದೆ. ರಾಜ್ಯದ ಶಕ್ತಿ ಕೇಂದ್ರದಲ್ಲೇ ಈ ರೀತಿಯಾಗಿ ಮಹಿಳೆಯರನ್ನು ಶೋಷಣೆ ಮಾಡಿದಲ್ಲಿ ನಾವು ಯಾರ ಬಳಿ ನ್ಯಾಯ ಕೇಳಬೇಕು ಎಂಬ ಸಂದಿಗ್ದಕ್ಕೆ ಒಳಗಾಗಿದ್ದೇವೆ,’ ಎಂದು ಗೋಳು ತೋಡಿಕೊಂಡಿರುವುದು ವರದಿಯಿಂದ ತಿಳಿದು ಬಂದಿದೆ.

ಅಲ್ಲದೇ ‘ನಮಗೆ ಒಂದೊಂದು ದಿನದ ಸಂಬಳವೂ ಅತ್ಯಮೂಲ್ಯ. ಹೀಗಿರುವಾಘ ತಾವೇ ಹೊರಡಿಸಿದ ಸುತ್ತೋಲೆಯನ್ನು ಅರ್ಥೈಯಿಸುವಲ್ಲಿ ತಾವೇ ವಿಫಲರಾಗಿ ಯಾವುದೇ ಲಿಖಿತ ಆದೇಶವಿಲ್ಲದೇ ಸಾರ್ವತ್ರಿಕ ರಜಾ ದಿನದ ಸಂಬಳವನ್ನೂ ನಮ್ಮ ಖಾತೆಯಿಂದ ಕಟಾವಣೆ ಮಾಡಿ ನಮಗೆಲ್ಲ ತೊಂದರೆ ನೀಡುತ್ತಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿ ನಿಯಮಗಳಿಗೆ ವಿರುದ್ಧವಾಗಿ ನಮ್ಮ ಖಾತೆಯಿಂದ ಕಟಾವಣೆಯಾಗಿರುವ ರಜೆ, ಸಂಬಳವನ್ನು ನಮಗೆ ಹಿಂದಿರುಗಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಕ್ತ ನಿರ್ದೇಶನ ನೀಡಬೇಕು,’ ಎಂದು ದೂರಿನಲ್ಲಿ ಕೋರಿರುವುದು ಗೊತ್ತಾಗಿದೆ.
ಸರ್ಕಾರವು ಹೊರಡಿಸಿದ್ದ ಈ ಸುತ್ತೋಲೆ ವಿರೋಧಿಸಿದ್ದ ಡೇಟಾ ಎಂಟ್ರಿ ಆಪರೇಟರ್‍ಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದರು.
ಮಿಸ್ಡ್ ಫ್ಲಾಶ್ ದುರುಪಯೋಗ ಆಗುತ್ತಿದೆಯೇ?
ಸಚಿವಾಲಯದ ವಿವಿಧ ಇಲಾಖೆ, ಮಾಹಿತಿ ಆಯೋಗ, ಕರ್ನಾಟಕ ಆಡಳಿತ ಸುಧಾರಣೆ ಆಯೋಗ, ಚುನಾವಣೆ ಆಯೋಗ, ಮುಖ್ಯಮಂತ್ರಿಗಳ ಸಚಿವಾಲಯ ಮತ್ತು ರಾಜ್ಯಪಾಲರ ಸಚಿವಾಲಯದ ಕಚೇರಿಗಳಲ್ಲಿ ಡೇಟಾ ಎಂಟ್ರಿ ಆಪರೇಟರ್‍ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಡೇಟಾ ಎಂಟ್ರಿ ಆಪರೇಟರ್‍ಗಳ ಪೈಕಿ ಕೆಲವರು 3 ಮಿಸ್ಡ್ ಫ್ಲಾಶ್‌ಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಇ ಆಡಳಿತವು ಹೊರಡಿಸಿರುವ ಸುತ್ತೋಲೆಯಲ್ಲಿ ಆರೋಪಿಸಿತ್ತು.
ಒಂದು ನಿಮಿಷ ತಡವಾದರೂ ಹಾಜರಾತಿ ಕಡಿತ
3 ಮಿಸ್ಡ್ ಫ್ಲಾಶ್ ದುರುಪಯೋಗವಾಗುತ್ತಿದೆ ಎಂಬ ಅಂಶವನ್ನು ಮುಂದಿಟ್ಟುಕೊಂಡಿರುವ ಇ ಆಡಳಿತವು, ಡೇಟಾ ಎಂಟ್ರಿ ಆಪರೇಟರ್‍ಗಳು ಹಾಜರಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದೆ. ಈ ದುರ್ಬಳಕೆಯನ್ನು ನಿಯಂತ್ರಿಸಲು ಅನಿವಾರ್ಯತೆ ಇದೆ ಎಂದು ಸಮರ್ಥಿಸಿಕೊಂಡಿರುವ ಇ ಆಡಳಿತವು, ಕಚೇರಿಗೆ 1 ನಿಮಿಷ ತಡವಾದರೂ ಹಾಜರಾತಿಯನ್ನು ಅರ್ಧ ದಿನಕ್ಕೆ ಕಟಾಯಿಸುತ್ತಿದೆ.
ಸುತ್ತೋಲೆಯಲ್ಲೇನಿತ್ತು?
ಪ್ರತಿ ದಿನ 10.10 ಗಂಟೆಯೊಳಗೆ ಕಚೇರಿಗೆ ಹಾಜರಾಗಬೇಕು. 10.30ರ ನಂತರ ಕಚೇರಿಗೆ ಒಂದು ನಿಮಿಷ ತಡವಾದರೂ ಅರ್ಧ ದಿನ ಹಾಜರಾತಿಯನ್ನು ಕಟಾಯಿಸಲಾಗುವುದು. ಪ್ರತಿ ದಿನ ಸಂಜೆ 5.15ರ ನಂತರ ಕಚೇರಿಯನ್ನು ಬಿಡಬೇಕು. ನಿಗದಿತ ಸಮಯಕ್ಕಿಂತ ಬೇಗನೇ ಕಚೇರಿಯಿಂದ ಹೊರಟರೂ ಅರ್ಧ ದಿನದ ಹಾಜರಾತಿಯನ್ನು ಕಟಾಯಿಸಲಾಗುವುದು ಎಂದು ಸುತ್ತೋಲೆಯಲ್ಲಿ ಹೇಳಿತ್ತು.

ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ಪ್ರತಿ ತಿಂಗಳು ಮೂರು ಬಾರಿ ನಿಗದಿಪಡಿಸಿದ ಸಮಯವನ್ನು ಪಾಲಿಸದಿದ್ದಲ್ಲಿ ಅಂತಹ ಪ್ರಕರಣಗಳಿಗಷ್ಟೇ ವಿನಾಯಿತಿ ನೀಡಲಾಗುತ್ತದೆ. ಆದರೆ ಇಂತಹ ವಿಳಂಬದ ಸಂದರ್ಭದಲ್ಲಿ ಸಹ ಕಡ್ಡಾಯವಾಗಿ ಬಯೋಮೆಟ್ರಿಕ್ ಹಾಜರಾತಿ ನಮೂದಿಸಬೇಕು. ಇಲ್ಲವಾದಲ್ಲಿ ಅರ್ಧ ದಿನದ ಹಾಜರಾತಿಯನ್ನೂ ಕಟಾಯಿಸಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿತ್ತು.
ಒಂದು ನಿಮಿಷ ತಡವಾದರೂ ಅರ್ಧ ದಿನದ ವೇತನ ಕಡಿತ; ಡೇಟಾ ಎಂಟ್ರಿ ಆಪರೇಟರ್‍ಗಳಿಗೆ ಶೋಷಣೆ?
ಇ-ಆಡಳಿತ ವಿಭಾಗವು ಹೊರಡಿಸಿದ್ದ ಸುತ್ತೋಲೆ ಆಧರಿಸಿ ದಿ ಫೈಲ್ 2026ರ ಜನವರಿ 8ರಂದೇ ವರದಿ ಪ್ರಕಟಿಸಿತ್ತು.




