ಕಂಪ್ಯೂಟರ್‍‌, ಲ್ಯಾಪ್‌ಟಾಪ್‌, ಯುಪಿಎಸ್‌ ಖರೀದಿ; ವಾಣಿಜ್ಯ ರಹಸ್ಯ, ವ್ಯಾಪಾರ ಗೌಪ್ಯತೆಯಡಿ ಮಾಹಿತಿ ಅರ್ಜಿ ತಿರಸ್ಕೃತ

ಬೆಂಗಳೂರು; ಕರ್ನಾಟಕ ಸರ್ಕಾರದ ಸಚಿವಾಲಯವನ್ನೂ ಒಳಗೊಂಡಂತೆ ಸರ್ಕಾರದ ಎಲ್ಲಾ ಇಲಾಖೆಗಳಿಗೆ ಬಹುಕೋಟಿ ರು. ಮೊತ್ತದಲ್ಲಿ ಖರೀದಿಸಿರುವ ಕಂಪ್ಯೂಟರ್‍‌, ಲ್ಯಾಪ್‌ಟಾಪ್‌ ಸೇರಿದಂತೆ ಇನ್ನಿತರೆ ವಿದ್ಯುನ್ಮಾನ ಉಪಕರಣಗಳ ಖರೀದಿ ಮಾಹಿತಿ ಕುರಿತು ಸಲ್ಲಿಸಿದ್ದ ಆರ್‍‌ಟಿಐ ಅರ್ಜಿಯನ್ನು ಇ-ಆಡಳಿತ ಇಲಾಖೆಯು ತಿರಸ್ಕರಿಸಿದೆ.

 

2017ರಿಂದ 2023ರ ಅಕ್ಟೋಬರ್‍‌ವರೆಗೂ ಕಂಪ್ಯೂಟರ್‍‌, ಲ್ಯಾಪ್‌ಟಾಪ್‌, ಸ್ಕ್ಯಾನರ್‍, ಯುಪಿಎಸ್‌‌ ಸೇರಿದಂತೆ ಇನ್ನಿತರೆ ಉಪಕರಣಗಳ ಖರೀದಿ ಮತ್ತು ಈ ಸಂಬಂಧ ಕಂಪನಿಗಳಿಗೆ ಪಾವತಿಸಿರುವ ಮೊತ್ತದ ವಿವರಗಳನ್ನು ಪಡೆಯಲು ‘ದಿ ಫೈಲ್‌’ ಅರ್ಜಿ ಸಲ್ಲಿಸಿತ್ತು.

 

ಆದರೆ ಇಲಾಖೆಯು ‘ಇದೊಂದು ವಾಣಿಜ್ಯ ರಹಸ್ಯ ಮತ್ತು ವ್ಯಾಪಾರ ಗೌಪ್ಯತೆ, ಬೌದ್ಧಿಕ ಆಸ್ತಿ,’ ಎಂಬ ಕಾರಣವನ್ನು ಮುಂದಿರಿಸಿ ಅರ್ಜಿಯನ್ನು ತಿರಸ್ಕರಿಸಿದೆ. ಇಲಾಖೆಯ ಈ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

ಅಲ್ಲದೇ ಕಿಯೋನಿಕ್ಸ್‌ ನಿಂದ ನಡೆದಿರುವ ಎಲ್ಲಾ ಖರೀದಿ ಪ್ರಕ್ರಿಯೆಗಳ ಕುರಿತು ಸಚಿವ ಪ್ರಿಯಾಂಕ್‌ ಖರ್ಗೆ ಅವರು ತನಿಖೆ ನಡೆಸಲಾಗುವುದು ಎಂದು ಹೇಳಿದ್ದರು. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ತನಿಖೆ ನಡೆಸಲು ಉತ್ಸುಕರಾಗಿದ್ದಾರೆ ಎಂದು ಗೊತ್ತಾಗಿದೆ. ಈ ಬೆಳವಣಿಗೆ ನಡುವೆಯೇ ಇ-ಆಡಳಿತ ನೀಡಿರುವ ಉತ್ತರವು ಮುನ್ನೆಲೆಗೆ ಬಂದಿದೆ.

 

ಅರ್ಜಿಯಲ್ಲಿ ಎಲ್ಲಿಯೂ ಬೌದ್ಧಿಕ ಆಸ್ತಿ ಕುರಿತಾಗಿ ಯಾವುದೇ ಮಾಹಿತಿಯನ್ನು ಕೇಳಿರಲಿಲ್ಲ. ಬದಲಿಗೆ ಕಂಪ್ಯೂಟರ್‍‌, ಲ್ಯಾಪ್‌ಟಾಪ್‌ ಮತ್ತಿತರೆ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಖರೀದಿಸಿರುವ ವಿವರವಾದ ಮಾಹಿತಿ ಕೇಳಲಾಗಿತ್ತು. ಉಪಕರಣವಾರು, ಮೊತ್ತವಾರು, ಉಪಕರಣಗಳ ಖರೀದಿಗೆ ಕರೆದಿದ್ದ ಟೆಂಡರ್‍‌, ದರಪಟ್ಟಿ ವಿವರಗಳನ್ನು ಒದಗಿಸಬೇಕು ಎಂದು ಮಾಹಿತಿ ಕೋರಿತ್ತು.

 

ಇದಕ್ಕೆ ಇ-ಆಡಳಿತ ಇಲಾಖೆಯು ನೀಡಿರುವ ಉತ್ತರವು ಸಂಶಯಗಳಿಗೆ ಕಾರಣವಾಗಿದೆ.

 

ಇಲಾಖೆಯ ಉತ್ತರದಲ್ಲೇನಿದೆ?

 

ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಮೂರನೇ ಪಕ್ಷದಾರನ ಸ್ಪರ್ಧಾಕತೆಗೆ ತೊಂದರೆಯುಂಟಾಗುತ್ತದೋ ಅಂಥ ವಾಣಿಜ್ಯ ರಹಸ್ಯ, ವ್ಯಾಪಾರ ಗೌಪ್ಯತೆಗಳು ಅಥವಾ ಬೌದ್ಧಿಕ ಆಸ್ತಿಯನ್ನೊಳಗೊಂಡ ಮಾಹಿತಿ, ಅಂಥ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಬಹುಸಂಖ್ಯೆಯ ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯವೆಂದು ಸಕ್ಷಮ ಪ್ರಾಧಿಕಾರಿಗೆ ಮನದಟ್ಟಾದ ಹೊರತು

 

ತಾವು ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಲಾಗಿದ್ದು ತಮ್ಮ ಅರ್ಜಿಯನ್ನು ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 8(1)(ಡಿ) ಅಡಿಯಲ್ಲಿ ತಿರಸ್ಕರಿಸಲಾಗಿದೆ ಎಂದು ಮಾಹಿತಿ ಇ-ಆಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆರ್‍‌ ಶಾಂತಿ ಅವರು ಉತ್ತರ ಒದಗಿಸಿದ್ದಾರೆ.

 

ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಚೇರಿ ಕೆಲಸಕ್ಕಾಗಿ ಅವಶ್ಯವಿರುವ ಗಣಕಯಂತ್ರ ಮತ್ತು ಇನ್ನಿತರೆ ಐಟಿ ಪರಿಕರಗಳನ್ನು ಖರೀದಿಸಲು ಇ-ಆಡಳಿತ ಇಲಾಖೆಯು ಟೆಂಡರ್‍‌ ಕರೆಯುತ್ತದೆ. ಆದರೆ ಈ ವಿವರಗಳನ್ನು ಆರ್‍‌ಟಿಐ ಅಡಿಯಲ್ಲಿ ಒದಗಿಸದೇ ಇರುವುದರ ಹಿಂದೆ ಖರೀದಿಯಲ್ಲಿ ಅಕ್ರಮಗಳು ನಡೆದಿದೆಯೇ ಎಂಬ ಸಂಶಯಗಳಿಗೆ ಕಾರಣವಾಗಿದೆ.

 

ಗಣಕಯಂತ್ರ ಇನ್ನಿತರೆ ಐ ಟಿ ಪರಿಕರಗಳನ್ನು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಿಗೆ ಪೂರೈಸುವ ಸಲುವಾಗಿ ವಿವಿಧ ವರ್ಗಗಳ ಪೂರ್ವಾರ್ಹತಾ ಸಂಸ್ಥೆಗಳನ್ನು ಸಂಕ್ಷಿಪ್ತಗೊಳಿಸಲು ಇ-ಪ್ರೊಕ್ಯೂರ್‍‌ಮೆಂಟ್‌ ಮೂಲಕ 2023ರ ಜನವರಿ 31ರಂದು ಟೆಂಡರ್‍‌ ಕರೆದಿತ್ತು. ಟೆಂಡರ್‍‌ನಲ್ಲಿ ಭಾಗವಹಿಸಿದ್ದ ಸಂಸ್ಥೆ, ಕಂಪನಿಗಳ ದಾಖಲೆಗಳನ್ನು ಪರಿಶೀಲಿಸಿದ್ದ ಇಲಾಖೆಯು ಪಟ್ಟಿ ಮಾಡಿತ್ತು.

 

ರಾಜ್ಯಮಟ್ಟದ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸಿನಂತೆ ಕಂಪನಿಗಳ ಪಟ್ಟಿಗೆ 2023ರ ಅಕ್ಟೋಬರ್‍‌ 9ರಂದು ಇ-ಆಡಳಿತ ಇಲಾಖೆಯು ಸರ್ಕಾರದ ಆದೇಶದ ಮೂಲಕ ಮಂಜೂರಾತಿ ನೀಡಿತ್ತು. ಇದರ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಲ್ಯಾಪ್‌ಟಾಪ್‌, ಡೆಸ್ಕ್‌ಟಾಪ್‌, ಮಿನಿ ಡೆಸ್ಕ್‌ಟಾಪ್‌, ಯುಪಿಎಸ್‌, ಎಲ್‌ಇಡಿ ಟಿವಿ, ಎಲ್‌ಸಿಡಿ ಪ್ರೊಜೆಕ್ಟರ್‍‌, ಸ್ಪೀಕರ್‍‌, ಮೈಕ್‌,ಪಿಟಿಝಡ್‌ ಕ್ಯಾಮರಾ, ಡಿಸ್‌ಪ್ಲೇ ಯೂನಿಟ್ಸ್‌, ಪ್ರಿಂಟರ್‍‌, ಕಾಪಿಯರ್‍‌, ಸ್ಕ್ಯಾನರ್‍‌ಗಳನ್ನು ಪೂರೈಸಲು ಮಂಜೂರಾತಿ ನೀಡಿತ್ತು.

 

ಬೆಂಗಳೂರಿನ ಸುಪೀರಿಯರ್‍‌ ಡಿಜಿಟಲ್‌ ಪ್ರೈವೈಟ್‌ ಲಿಮಿಟೆಡ್‌, ಇಂಟೆಲಿಕ್‌ ಸಿಸ್ಟಂ, ಗೆಲಾಕ್ಸಿ ಇಮೇಜಿಂಗ್‌ ಟೆಕ್ನಾಲಾಜೀಸ್‌, ಡಿಜಿಇನ್ನೋವೇಷನ್‌ ಇಂಡಿಯಾ ಪ್ರೈವೈಟ್‌ ಲಿಮಿಟೆಡ್‌, ಪೆರಿಟೆಕ್ ಸಿಸ್ಟಂ ಕಾರ್ಪೋರೇಷನ್‌ ಕಂಪನಿಯ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು.

 

ಅದೇ ರೀತಿ ಟ್ಯಾಬ್ಲೆಟ್‌, ಸ್ಮಾರ್ಟ್‌ ಫೋನ್‌ಗಳ ಖರೀದಿಸಲು ಅಗ್ಮಮೆಟಲ್‌ ಇಂಡಿಯಾ ಪ್ರೈವೈಟ್‌ ಲಿಮಿಟೆಡ್‌, ವಂಟೇಜ್‌ ನೆಟ್‌ವರ್ಕ್ ಸಲ್ಯೂಷನ್ಸ್‌, ಇಂಟೆಲಿಕ್‌ಸಿಸ್ಟಂ ಕಂಪನಿಯನ್ನು ಆಯ್ಕೆ ಮಾಡಿತ್ತು. ಈ ಕಂಪನಿಗಳಿಗೆ ಆದೇಶ ಹೊರಡಿಸಿ ದಿನದಿಂದ 2 ವರ್ಷಗಳ ಅವಧಿಗೆ ಮಾತ್ರ ಸಿಂಧುತ್ವ ಇರಲಿದೆ.

 

ಕೌಶಲ್ಯಾಭಿವೃದ್ಧಿ , ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯೊಂದರಲ್ಲೇ 2023-24ನೇ ಸಾಲಿನಲ್ಲಿ 9.41 ಕೋಟಿ ರು.ಗಳ ವೆಚ್ಚದಲ್ಲಿ ಕಂಪ್ಯೂಟರ್‍, ಡೆಸ್ಕ್‌ಟಾಪ್‌, ಲ್ಯಾಪ್‌ಟಾಪ್‌ ಸೇರಿದಂತೆ ಎಲೆಕ್ಟ್ರಾನಿಕ್‌ ಉಪಕರಣಗಳ ಖರೀದಿಸಲು ವಾರ್ಷಿಕ ಕ್ರಿಯಾ ಯೋಜನೆ ರೂಪಿಸಿದೆ.

SUPPORT THE FILE

Latest News

Related Posts