Monday | June 22, 2026 |

22 ಪ್ರಕರಣ, 84 ಅಧಿಕಾರಿ ನೌಕರರ ವಿರುದ್ಧ ವಿಚಾರಣೆ; ಐಎಎಸ್‌, ಕೆಎಎಸ್, ಇಂಜಿನಿಯರ್‍‌ಗಳ ವಿರುದ್ಧ ತನಿಖೆಗೆ ಸಿಗದ ಪೂರ್ವಾನುಮತಿ, ಅಧಿಕಾರಿಗಳ ಪಟ್ಟಿ ಬಹಿರಂಗ

ಬೆಂಗಳೂರು;  ನಿವೃತ್ತ  ಜಿಲ್ಲಾಧಿಕಾರಿ ಎಂ ಎ ಸಾದಿಕ್,  ಎಂ ಕೆ ಅಯ್ಯಪ್ಪ, ವಿಶೇಷ ಜಿಲ್ಲಾಧಿಕಾರಿಯಾಗಿದ್ದ ರಂಗಪ್ಪ, ಬಾಳಪ್ಪ ಹಂದಿಗುಂದ ಸೇರಿದಂತೆ ಹಲವು ಐಎಎಸ್,  ಕೆಎಎಸ್‌ ಅಧಿಕಾರಿಗಳು, ಇಂಜಿನಿಯರ್ ಸೇರಿದಂತೆ ಒಟ್ಟು 84 ಅಧಿಕಾರಿಗಳ ವಿರುದ್ಧ 22 ಪ್ರಕರಣಗಳಲ್ಲಿ  ವಿಚಾರಣೆ  ನಡೆಸಲು ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಇದುವರೆಗೂ ಪೂರ್ವಾನುಮತಿ ನೀಡಿಲ್ಲ.

ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 (ತಿದ್ದುಪಡಿ ಕಾಯ್ದೆ 2018) ಕಲಂ 17 ಅನ್ವಯ ಪೂರ್ವಾನುಮತಿ ಪಡೆಯುವ  ಸಂಬಂಧ ಲೋಕಾಯುಕ್ತ ಪೊಲೀಸ್‌ ವಿಭಾಗವು ಲೋಕಾಯುಕ್ತ ಸಂಸ್ಥೆಯ ರಿಜಿಸ್ಟ್ರಾರ್ ಅವರಿಗೆ ಪ್ರಸ್ತಾವ ಸಲ್ಲಿಸಿತ್ತು. ಈ ಪ್ರಸ್ತಾವ ಆಧರಿಸಿ ರಿಜಿಸ್ಟ್ರಾರ್ ಅವರು 2026ರ ಮೇ 19ರಂದು ರಾಜ್ಯ ಸರ್ಕಾರದ   ಬರೆದಿದ್ದ ಹಲವು ಪತ್ರಗಳು ಮತ್ತು ನೆನಪೋಲೆಗಳನ್ನು ಹಲವು ಇಲಾಖೆಗಳ ಮುಖ್ಯಸ್ಥರು ಕಾಲಕಸವನ್ನಾಗಿಸಿಕೊಂಡಿದ್ದಾರೆ.

ಅಲ್ಲದೇ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಭಾಯಿಸುತ್ತಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ನಗರಾಭಿವೃದ್ಧಿ ಖಾತೆ ನಿರ್ವಹಿಸುತ್ತಿದ್ದ ನಿಯೋಜಿತ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಕೃಷ್ಣ ಬೈರೇಗೌಡ ಅವರು ಸಚಿವರಾಗಿದ್ದ  ಕಂದಾಯ ಇಲಾಖೆಯಲ್ಲಿನ ಅಧಿಕಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಆರೋಪಕ್ಕೆ ಗುರಿಯಾಗಿದ್ದಾರೆ.

ಭ್ರಷ್ಟಾಚಾರ, ಕರ್ತವ್ಯಲೋಪ, ಅಧಿಕಾರ ಮತ್ತು ಹಣ ದುರುಪಯೋಗ, ನಿಯಮಬಾಹಿರವಾಗಿ ಭೂ ಪರಿವರ್ತನೆ, ಕರ್ತವ್ಯ ನಿರ್ಲಕ್ಷ್ಯ ಸೇರಿದಂತೆ ಇನ್ನಿತರೆ ಆರೋಪಗಳ ಕುರಿತು ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದ  ದೂರುಗಳ ಪೈಕಿ   ಒಟ್ಟು  22 ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಲು ಪೂರ್ವಾನುಮತಿ ನೀಡಲು ಪೊಲೀಸ್‌ ವಿಭಾಗವು ಕೋರಿತ್ತು. ಇದರಲ್ಲಿ ಐಎಎಸ್, ಕೆಎಎಸ್‌, ಬಿಬಿಎಂಪಿ, ಕಂದಾಯ  ಮತ್ತು ಇನ್ನಿತರೆ ಇಲಾಖೆಗಳ  ಅಧಿಕಾರಿಗಳ ಹೆಸರುಗಳೂ ಸಹ ಇವೆ.

 

 

ಇದಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳು ದಿ ಫೈಲ್‌ ಗೆ ಲಭ್ಯವಾಗಿವೆ.

ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಜಯಕುಮಾರ್ ಎಂ ಹಿರೇಮಠ್ ಎಂಬುವರು 2020ರಲ್ಲಿ  ಭ್ರಷ್ಟಾಚಾರ ನಿಗ್ರಹ ದಳಕ್ಕೆ  ದೂರು (NO.ACB/B.City/pet/206/2020)  ನೀಡಿದ್ದರು. ಈ ದೂರನ್ನು ಆಧರಿಸಿ ಪ್ರಾಥಮಿಕ ವಿಚಾರಣೆ ಕೈಗೊಂಡಿದ್ದ ಲೋಕಾಯುಕ್ತ ಪೊಲೀಸ್‌ ವಿಭಾಗವು ಪೂರ್ವಾನುಮತಿ ಕೋರಿ  2021ರ ಏಪ್ರಿಲ್‌ 23 ಪತ್ರ ಬರೆದಿತ್ತು. ಅಲ್ಲದೇ 2025ರ ಸೆ.26ರಂದು ನೆನಪೋಲೆ ಕಳಿಸಿತ್ತು. 2026ರ ಮೇ 19ರವರೆಗೂ ನಗರಾಭಿವೃದ್ಧಿ ಇಲಾಖೆಯು ಈ ಬಗ್ಗೆ ಯಾವುದೇ ಕ್ರಮವಹಿಸಿರಲಿಲ್ಲ.

ಬೆಂಗಳೂರು ನಗರ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಎಂ ಎ ಸಾದಿಕ್, ಎಂ ಕೆ ಅಯ್ಯಪ್ಪ, ಡಾ ಜಿ ಸಿ ಪ್ರಕಾಶ್‌, ಬೆಂಗಳೂರು ಉತ್ತರ ತಾಲೂಕಿನ ಹಿಂದಿನ ತಹಸೀಲ್ದಾರ್‍‌ ರಂಗನಾಥಯ್ಯ ಕೆ, ಬಿ ವೆಂಕಟೇಶ್‌, ಬಾಳಪ್ಪ ಹಂದಿಗುಂದ, ಮಂಜುನಾಥ ಬಿ ಆರ್ ಅವರ ವಿರುದ್ಧ  ಬಿಜೆಪಿಯ ಎನ್ ಆರ್ ರಮೇಶ್‌ ಅವರು 2021ರಲ್ಲಿ ಎಸಿಬಿಗೆ (ACB/H.1/B.Ccity/Pet. 1116/2021) ದೂರು ನೀಡಿದ್ದರು. ಇವರ ವಿರುದ್ಧ ವಿಚಾರಣೆ ನಡೆಸಲು ಪೂರ್ವಾನುಮತಿ ಕೋರಿ  ಕಂದಾಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪ್ರಸ್ತಾವ ಸಲ್ಲಿಸಿದ್ದರು. 2022ರ ಫೆ.9ರಂದು ಮೊದಲ ಪ್ರಸ್ತಾವ ಸಲ್ಲಿಸಿತ್ತು. ಇದಾಧ ನಂತರ 2025ರ ಆಗಸ್ಟ್ 26ರಂದು ಮೊದಲ ನೆನಪೋಲೆ ಕಳಿಸಿತ್ತು. 2026ರ ಜನವರಿ 28ರಂದು ಎರಡನೇ ನೆನಪೋಲೆ ಕಳಿಸಿತ್ತು. ಎರಡನೇ ನೆನಪೋಲೆ ಕಳಿಸಿದ 4 ತಿಂಗಳಾದರೂ ಸಹ ವಿಚಾರಣೆಗೆ ಪೂರ್ವಾನುಮತಿ ದೊರೆತಿಲ್ಲ.

 

 

ಬಿಬಿಎಂಪಿಯ ಎಆರ್‍‌ಒ ಕೃತಿಕಾ, ಸೀನಿಯರ್ ಸಬ್‌ ರಿಜಿಸ್ಟ್ರಾರ್‍‌ ಪ್ರಭಾಕರ್ ಸಿ ಜೆ ಅವರ ವಿರುದ್ಧ ಕರ್ತವ್ಯ ಲೋಪದ ಆರೋಪ ಹೊರಿಸಿ  ಲೋಕಾಯುಕ್ತ ಡಿವೈಎಸ್ಪಿ ಪ್ರದೀಪ್‌ ಕುಮಾರ್ ಎಂಬುವರು ದೂರು ( NO. LOK/SPB C-1/Dysp-02/Speical Report/11/2025)  ನೀಡಿದ್ದರು. ಇವರ ವಿರುದ್ಧ ವಿಚಾರಣೆ  ನಡೆಸಲು ನೋಂದಣಾ ಮಹಾ ನಿರೀಕ್ಷಕರಿಗೆ 2025ರ ನವೆಂಬರ್‍‌ 15ರಂದೇ ಪೂರ್ವಾನುಮತಿ ಕೋರಿ ಪ್ರಸ್ತಾವ ಸಲ್ಲಿಸಿದ್ದರು. ಆದರೆ ಇದುವರೆಗೂ ಪೂರ್ವಾನುಮತಿ ನೀಡಿಲ್ಲ ಎಂದು ತಿಳಿದು ಬಂದಿದೆ.

ಬಿಬಿಎಂಪಿಯ ಪಶ್ಚಿಮ ವಲಯದ ಜಂಟಿ ಆಯುಕ್ತ ಚಿದಾನಂದ, ಡಾ ನಾಗರಾಜ್‌ ಎಸ್‌, ಶಿವಸ್ವಾಮಿ, ಪ್ರಸನ್ನಕುಮಾರ್, ಲಲಿತಾ, ಸುಬೇಸಹ, ದೇವಕಿ, ಸತ್ಯಮೂರ್ತಿ, ಗಾಯತ್ರಿ, ಸುಬ್ರಮಣ್ಯ , ಗಿರಿಯಪ್ಪ  ಎಂಬುವರ ವಿರುದ್ಧ  ಮಂಜುನಾಥ್ ವಿ ಎಂಬುವರು 2023ರಲ್ಲಿ ದೂರು ಸಲ್ಲಿಸಿದ್ದರು. ಇವರ ವಿರುದ್ಧ ವಿಚಾರಣೆ ನಡೆಸಲು ಬಿಬಿಎಂಪಿ ಮುಖ್ಯ ಆಯುಕ್ತ, ಡಿಪಿಎಆರ್ ಗೆ ಪೂರ್ವಾನುಮತಿ ಕೋರಿ ಪ್ರಸ್ತಾವ ಸಲ್ಲಿಸಿದ್ದರು. 2023ರ ಅಕ್ಟೋಬರ್‍‌ 7 ರಂದು ಕೋರಿದ್ದರು. ಆದರೆ ಇದುವರೆಗೂ ಪೂರ್ವಾನುಮತಿ ನೀಡಿಲ್ಲ ಎಂದು ಗೊತ್ತಾಗಿದೆ.

ಬಿಬಿಎಂಪಿಯ ದಕ್ಷಿಣ ವಿಭಾಗದ ಉಪ ಆರೋಗ್ಯ ಅಧಿಕಾರಿ ಡಾ ಕಲ್ಪನ ಪಿ ಎಂಬುವರ ವಿರುದ್ಧ ಲೋಕಾಯುಕ್ತ ಡಿವೈಎಸ್ಪಿ ಶ್ರೀನಿವಾಸಮೂರ್ತಿ ಅವರು 2025ರಲ್ಲಿ  ದೂರು (NO.LK/SPBC-1/DYSP-06/SPECIAL REPORT/10/2025)  ನೀಡಿದ್ದರು. ಇವರ ವಿರುದ್ಧವೂ ಸಕ್ಷಮ ಪ್ರಾಧಿಕಾರವು ವಿಚಾರಣೆಗೆ ಪೂರ್ವಾನುಮತಿ ನೀಡಿಲ್ಲ. ಹೀಗಾಗಿ ಲೋಕಾಯುಕ್ತ ರಿಜಿಸ್ಟ್ರಾರ್ ಅವರು 2025ರ ಸೆ.11ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು ಎಂದು ತಿಳಿದು ಬಂದಿದೆ.

 

 

ರಾಜಾಜಿನಗರದ ದಿಫೆನ್ ಎಚ್‌ ನಗಡಾ ಎಂಬುವರು ಜಯನಗರದಲ್ಲಿನ ಉಪ ನೋಂದಣಾಧಿಕಾರಿ ಲೋಕೇಶ್‌ ಎಂಬುವರ ವಿರುದ್ದ  ದೂರು ನೀಡಿದ್ದರು. ಈ ದೂರನ್ನಾಧರಿಸಿ ಪ್ರಾಥಮಿಕ ವಿಚಾರಣೆ ನಡೆಸಿದ್ದ ಲೋಕಾಯುಕ್ತ ಪೊಲೀಸ್‌ ವಿಭಾಗವು ಪ್ರಕರಣ (NO.LOK/SP-1/PET/55-2025)  ದಾಖಲಿಸಿಕೊಂಡಿತ್ತು. ಅಲ್ಲದೇ ಇವರ ವಿರುದ್ಧ ವಿಚಾರಣೆ ನಡೆಸಲು ಪೂರ್ವಾನುಮತಿ ಕೋರಿ 2025ರ ನವೆಂಬರ್‍‌ 29ರಂದು ನೋಂದಣಿ ಮಹಾ ನಿರೀಕ್ಷಕರಿಗೆ ಪ್ರಸ್ತಾವ ಸಲ್ಲಿಸಿತ್ತು. ಆದರೆ ಇದುವರೆಗೂ ಪೂರ್ವಾನುಮತಿ ನೀಡಿಲ್ಲ ಎಂದು ಗೊತ್ತಾಗಿದೆ.

ಬೆಂಗಳೂರಿನ ವೈಟ್‌ ಫೀಲ್ಡ್‌ನ ನಿವಾಸಿ ಎಸ್‌ ರಘುನಾಥ್‌  ಅವರು ಸಬ್‌ ರಿಜಿಸ್ಟ್ರಾರ್‍‌ ಕಚೇರಿಯಲ್ಲಿ ಎಫ್‌ಡಿಎ ಆಗಿರುವ ಜಿ ರಾಯಕರ್ ಎಂಬುವರ ವಿರುದ್ಧ  ದೂರು ಸಲ್ಲಿಸಿದ್ದರು. ರಘುನಾಥ್‌ ಅವರಿಗೆ ಸೇರಿದ್ದ ಆಸ್ತಿಯನ್ನು ಬೇರೊಬ್ಬರಿಗೆ ನಿಯಮಬಾಹಿರವಾಗಿ  ನೋಂದಣಿ ಮಾಡಿಕೊಟ್ಟಿದ್ದರು. ಈ ಸಂಬಂಧ ರಘುನಾಥ್ ಎಂಬುವರು ಸಲ್ಲಿಸಿದ್ದ ದೂರಿನ ಪ್ರಾಥಮಿಕ ವಿಚಾರಣೆ ನಡೆಸಿದ್ದ  ಲೋಕಾಯುಕ್ತ ಪೊಲೀಸರು ಪ್ರಕರಣವನ್ನು (NO.ACB/B.City/pet/372/2020)  ದಾಖಲಿಸಿಕೊಂಡಿದ್ದರು. ಈ ಸಂಬಂಧ ಲೋಕಾಯುಕ್ತ ಪೊಲೀಸರು 2020ರ ಅಕ್ಟೋಬರ್ 17ರಂದೇ ವಿಚಾರಣೆಗೆ ಪೂರ್ವಾನುಮತಿ ಕೋರಿ ಪ್ರಸ್ತಾವ ಸಲ್ಲಿಸಿದ್ದರು. ಆದರೆ ಇದುವರೆಗೂ ಪೂರ್ವಾನುಮತಿ ನೀಡಿಲ್ಲ ಎಂದು ತಿಳಿದು ಬಂದಿದೆ.

 

 

ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಯಾಗಿದ್ದ ಕೆಎಎಸ್‌ ಅಧಿಕಾರಿ  ಎಂ ಕೆ  ಜಗದೀಶ್ ಎಂಬುವರು ನವರತ್ನ ಅಗ್ರಹಾರದ ಸರ್ವೇ ನಂಬರ್‍‌ 13ರಲ್ಲಿನ 33 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನನ್ನು ಖಾಸಗಿ ಕಂಪನಿಗೆ ಪರಭಾರೆ ಮಾಡಲು ಸಹಕರಿಸಿದ್ದರು ಎಂದು ಆರೋಪಿಸಿದ್ದ  ಎನ್  ವಾಸುದೇವರೆಡ್ಡಿ ಎಂಬುವರು   (NO. ACB/B-B city/pet/514/2021) ದೂರು  ನೀಡಿದ್ದರು. ದೂರಿನ ಪ್ರಾಥಮಿಕ ವಿಚಾರಣೆ ನಡೆಸಿದ್ದ ಲೋಕಾಯುಕ್ತ ಪೊಲೀಸ್‌ ವಿಭಾಗವು ಇವರ ವಿರುದ್ಧ ವಿಚಾರಣೆ ನಡೆಸಲು ಪೂರ್ವಾನುಮತಿ ಕೋರಿ 2021ರ ಸೆ.18 ಮತ್ತು 2022ರ ಏಪ್ರಿಲ್‌ 21ರಂದು ಪ್ರಸ್ತಾವ ಸಲ್ಲಿಸಿದ್ದರು. ಈ ಪ್ರಸ್ತಾವ ಸಲ್ಲಿಕೆಯಾಗಿ 4 ವರ್ಷಗಳಾದರೂ ವಿಚಾರಣೆಗೆ ಪೂರ್ವಾನುಮತಿ ನೀಡಿಲ್ಲ ಎಂದು ಗೊತ್ತಾಗಿದೆ.

ಅದೇ ರೀತಿ ಕರ್ತವ್ಯ ಲೋಪದ ಆರೋಪದ ಮೇರೆಗೆ ಬೆಂಗಳೂರು ಉತ್ತರ ವಿಭಾಗದ ಉಪ ವಿಭಾಗೀಯ ಅಧಿಕಾರಿ ಪ್ರಮೋದ್ ಎಲ್ ಪಾಟೀಲ್, ತಹಶೀಲ್ದಾರ್‍‌ ಶ್ರೇಯಸ್ ಪಾಟೀಲ್, ವಿಶೇಷ ತಹಶೀಲ್ದಾರ್‍‌ ಶಿವಕುಮಾರ್, ಸುಬ್ರಮಣ್ಯ, ಎಡಿಎಲ್ಆರ್‍‌ ಮಂಜುನಾff ಸಂದೀಪ್‌ ಸಿಂಘ, ಲೋಕೇಶ್‌ ಬಿ ಕೆ ಎಂಬುವರ ವಿರುದ್ಧ ದೂರು ( NO. LOK/SPBC-1/DYSP-10/Speical Report/13/2025)  ಸಲ್ಲಿಸಿದ್ದರು. ಇವರ ವಿರುದ್ಧ ವಿಚಾರಣೆಗೆ ಪೂರ್ವಾನುಮತಿ ಕೋರಿ 2025ರ ನವೆಂಬರ್‍‌ 28ರಂದು ಲೋಕಾಯುಕ್ತ ಪೊಲೀಸ್‌ ವಿಭಾಗವು ಪ್ರಸ್ತಾವ ಸಲ್ಲಿಸಿತ್ತು. ಆದರೆ ಈ ಪ್ರಕರಣದಲ್ಲಿಯೂ ಸಹ ಸಕ್ಷಮ ಪ್ರಾಧಿಕಾರವು ಪೂರ್ವಾನುಮತಿ ನೀಡಿಲ್ಲ.

 

 

ವಿಕ್ರಂ ಗಂಗಾಧರ್ ಎಂಬುವರು ಸಬ್ ರಿಜಿಸ್ಟ್ರಾರ್‍‌ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರಾಜಣ್ಣ, ರಘುನಂದನ್ ಅವರ ವಿರುದ್ಧ ಕರ್ತವ್ಯ ನಿರ್ಲಕ್ಷ್ಯದ ಆರೋಪ ಹೊರಿಸಿ ದೂರು (NO. LOK/SP-1/PET/39/2025) ಸಲ್ಲಿಸಿದ್ದರು. ಇವರ ವಿರುದ್ಧ ವಿಚಾರಣೆ  ನಡೆಸಲು ನೋಂದಣಿ ಮಹಾ ಪರಿವೀಕ್ಷಕರಿಗೆ ಲೋಕಾಯುಕ್ತ ಪೊಲೀಸ್‌ ವಿಭಾಗವು 2025ರ ನವೆಂಬರ್‍‌ 28ರಂದು  ಪ್ರಸ್ತಾವ ಸಲ್ಲಿಸಿತ್ತು. ಆದರೆ ಇದುವರೆಗೂ ಪೂರ್ವಾನುಮತಿ ದೊರೆತಿಲ್ಲ.

ಲೋಕಾಯುಕ್ತ ಡಿವೈಎಸ್ಪಿ  ಮಲ್ಲಿಕಾರ್ಜುನ ಚುಕ್ಕಿ  ಎಂಬುವರು ವಿಶೇಷ ಜಿಲ್ಲಾಧಿಕಾರಿ ರಂಗಪ್ಪ, ಸೋಮಶೇಖರ್‍‌, ಎಡಿಸಿ ಆರತಿ ಆನಂದ್, ಉಪ ವಿಭಾಗಾಧಿಕಾರಿ ರಜನಿಕಾಂತ್,  ಅಪೂರ್ವ ಬಿದರಿ, ರಘುನಂದನ್, ತಹಶೀಲ್ದಾರ್ ಶ್ರೀನಿವಾಸ್, ವಿಶೇಷ ತಹಶೀಲ್ದಾರ್ ಕೆಂಪೆಗೌಡ, ಕಂದಾಯ ನಿರೀಕ್ಷಕ ಮೋನಿಶ್, ನವೀನ್, ನಂಜೇಗೌಡ, ರವೀಂದ್ರ, ಮಂಜುನಾಥ್ ಎಂಬುವರ ವಿರುದ್ಧ ಕರ್ತವ್ಯ ಲೋಪದ ಆರೋಪ ಹೊರಿಸಿ ದೂರು (NO.LOK/SPBC-1/D-13/SPECIAL REPORT/02/2026) ನೀಡಿದ್ದರು. ಇವರ ವಿರುದ್ಧ ವಿಚಾರಣೆಗೆ ಪೂರ್ವಾನುಮತಿ ಪಡೆದುಕೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಕಂದಾಯ ಇಲಾಖೆ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಆಯುಕ್ತರಿಗೆ ಪ್ರಸ್ತಾವ ಸಲ್ಲಿಸಿತ್ತು. ಆದರೆ ಈ ಪ್ರಸ್ತಾವನೆ ಆಧರಿಸಿ ಪೂರ್ವಾನುಮತಿ ನೀಡಲು ಮೀನಮೇಷ ಎಣಿಸುತ್ತಿರುವುದು ಗೊತ್ತಾಗಿದೆ.

 

 

ಬ್ರಿಜೇಶ್‌ ಮ್ಯಾಥ್ಯೂ ಎಂಬುವರು ಐಎಎಸ್‌ ಅಧಿಕಾರಿ ಹಾಗೂ ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ಭಾರತೀ ಡಿ, ಮಂಡಳಿಯ ಜಂಟಿ ಕಾರ್ಯದರ್ಶಿ ಸಂಗಪ್ಪ ಉಪಾಧ್ಯ ಅವರ ವಿರುದ್ಧ ಕರ್ತವ್ಯಲೋಪದ ಆರೋಪ ಹೊರಿಸಿ ಲೋಕಾಯುಕ್ತಕ್ಕೆ ದೂರು (NO.LOK/SPBC-1/DYSP-14/SPECIAL REPORT/07/2025) ಸಲ್ಲಿಸಿದ್ದರು. ಇವರ ವಿರುದ್ಧ ವಿಚಾರಣೆಗೆ ಪೂರ್ವಾನುಮತಿ ಕೋರಿದ್ದ ಲೋಕಾಯುಕ್ತ ಪೊಲೀಸ್‌ ವಿಭಾಗವು ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಭೂ ದಾಖಲೆಗಳ ಆಯುಕ್ತರಿಗೆ 2025ರ ಆಗಸ್ಟ್‌ 28ರಂದು ಪ್ರಸ್ತಾವ ಸಲ್ಲಿಸಿತ್ತು. ಈ ಪ್ರಸ್ತಾವ ಸಲ್ಲಿಕೆಯಾಗಿ 9 ತಿಂಗಳಾದರೂ ಸಹ ಪೂರ್ವಾನುಮತಿ ಲಭಿಸಿಲ್ಲ.

ಇದೇ ಬ್ರಿಜೇಶ್ ಮ್ಯಾಥ್ಯೂ ಎಂಬುವರು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ  ಮಲ್ಲಿಕಾರ್ಜುನ ಬಿ ಗುಂಗೆ  ಶಾಖಾ ವ್ಯವಸ್ಥಾಪಕರಾದ ಮಾರುತಪ್ಪ, ಎಇಇ ರಾಜಕುಮಾರ್ ಜೈಡೆ, ಸಂತೋಷ್‌ಮಾಕಾ,  ಸೂರ್ಯಕಾಂತ್ ವಾಡೇಕರ್, ಶಿವಕುಮಾರ್ ಸ್ವಾಮಿ, ಜಗನ್ನಾಥ್ ಹಾಲಿಂಗೆ ಇವರ ವಿರುದ್ಧ ಕರ್ತವ್ಯ ನಿರ್ಲಕ್ಷ್ಯದ ಆರೋಪ ಹೊರಿಸಿ ದೂರು (NO. LOK/SPBC-1/D/DYSP-14/SPECIAL REPPRT/16/2025) ಸಲ್ಲಿಸಿದ್ದರು. ಇವರ ವಿರುದ್ಧ  ವಿಚಾರಣೆಗೆ ಪೂರ್ವಾನುಮತಿ ಕೋರಿದ್ದ ಲೋಕಾಯುಕ್ತ ಪೊಲೀಸ್‌ ವಿಭಾಗವು 2025ರ ಡಿಸೆಂಬರ್ 22ರಂದು ಪ್ರಸ್ತಾವ ಸಲ್ಲಿಸಿತ್ತು. ಆದರೆ ಈ ಪ್ರಸ್ತಾವದತ್ತ ಮುಖ್ಯ ಇಂಜಿನಿಯರ್, ಮುಖ್ಯ ಕಾರ್ಯದರ್ಶಿ ಕಣ್ಣೆತ್ತಿಯೂ ನೋಡಿಲ್ಲ.

ಲೋಕಾಯುಕ್ತ ಪೊಲೀಸ್‌ ಇನ್ಸ್‌ಪೆಕ್ಟರ್‍‌  ಶ್ರೀಕಾಂತ್ ಎಂಬುವರು ಶಿಡ್ಲಘಟ್ಟದ ಸಬ್‌ ರಿಜಿಸ್ಟ್ರಾರ್‍‌ ಆಗಿದ್ದ ರಂಗನಾಥ್ ಎಂಬುವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ದೂರು (NO.LOK/SPBC-1/PI-18/SPECIAL REPORT/06/2025)  ದಾಖಲಿಸಿದ್ದರು. ಇವರ ವಿರುದ್ಧ ವಿಚಾರಣೆಗೆ ಪೂರ್ವಾನುಮತಿ ನೀಡಬೇಕಿದ್ದ  ನೋಂದಣಿ ಮಹಾಪರಿವೀಕ್ಷಕರು ಮೀನಮೇಷ ಎಣಿಸುತ್ತಿರುವುದು ತಿಳಿದು ಬಂದಿದೆ.

ಕೆಂಗೇರಿಯ ಕುಂಬಳಗೋಡಿನ ಮಂಜುನಾಥ್‌ ಎಂಬುವರು ಬಿಡಿಎನ ಉಪ ವಿಭಾಗಾಧಿಕಾರಿ ಸುಧಾ, ಬಸಂತಿ, ಡಾ ಎಂ ಜಿ ಶಿವಣ್ಣ  ಅವರ ವಿರುದ್ಧ  ನಕಲಿ ದಾಖಲೆ ಸೃಷ್ಟಿ ಆರೋಪ ಹೊರಿಸಿ ದೂರು (NO.ACB/B/B-CITY/PET/02/2022)  ಸಲ್ಲಿಸಿದ್ದರು. ಚಲ್ಲಘಟ್ಟದ  ಸರ್ವೇ ನಂಬರ್ 13ರಲ್ಲಿ ಪುಟ್ಟಮ್ಮ ಎಂಬುವರಿಗೆ ಸೇರಿದ್ದ ಜಾಗವನ್ನು   ಬಿಡಿಎಯು ಸ್ವಾಧೀನಪಡಿಸಿಕೊಂಡಿತ್ತು ಎಂಬಂತೆ ದಾಖಲೆ ಸೃಷ್ಟಿಸಲಾಗಿತ್ತು. ಈ ದಾಖಲೆಗಳ ನೈಜತೆಯನ್ನು  ಈ  ಆಪಾದಿತ ಅಧಿಕಾರಿಗಳು ಪರಿಶೀಲಿಸಿರಲಿಲ್ಲ ಎಂದು ದೂರಿನಲ್ಲಿ ವಿವರಿಸಿದ್ದರು.

ಈ ದೂರಿನ ಪ್ರಾಥಮಿಕ ವಿಚಾರಣೆ ನಡೆಸಿದ್ದ ಲೋಕಾಯುಕ್ತ ಪೊಲೀಸ್‌ ವಿಭಾಗವು 2022ರ ಏಪ್ರಿಲ್‌ 12ರಂದು ಪೂರ್ವಾನುಮತಿ ಕೋರಿ ಪ್ರಸ್ತಾವ ಸಲ್ಲಿಸಿತ್ತು. ಅಲ್ಲದೇ 2025ರ ಅಕ್ಟೋಬರ್‍‌ 17ರಂದು ನೆನಪೋಲೆಯನ್ನು ಸಹ ಕಳಿಸಿತ್ತು. ಆದರೆ ಸಕ್ಷಮ ಪ್ರಾಧಿಕಾರವಾಗಿರುವ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ಪೂರ್ವಾನುಮತಿ ನೀಡುವಲ್ಲಿ ವಿಳಂಬ ಅನುಸರಿಸಿರುವುದು ಗೊತ್ತಾಗಿದೆ.

 

 

ದಲಿತ ಸಂಘರ್ಷ ಸೇನೆಯ ನರಸಿಂಹ ಕೆ ಎಂಬುವರು ಬಿಬಿಎಂಪಿಯ ಆರೋಗ್ಯ ಅಧಿಕಾರಿ ಡಾ ಸವಿತಾ ಎಸ್‌ ಕೆ, ಜ್ಯೋತಿ ನಿವಾಸ್‌ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಚಿರಾಗ್ ಎಸ್‌ ಎಂಬುವರ ವಿರುದ್ಧ ಕರ್ತವ್ಯ ಲೋಪ ಆರೋಪ ಹೊರಿಸಿ ಲೋಕಾಯುಕ್ತಕ್ಕೆ ದೂರು (NO.LOK/SP-1/PET/19/2025)  ಸಲ್ಲಿಸಿದ್ದರು. ಇವರ ವಿರುದ್ಧ ವಿಚಾರಣೆಗೆ ಪೂರ್ವಾನುಮತಿ ಕೋರಿದ್ದ ಲೋಕಾಯುಕ್ತ ಪೊಲೀಸ್‌ ವಿಭಾಗವು 2025ರ ಆಗಸ್ಟ್‌ 7ರಂದು ಪ್ರಸ್ತಾವ ಸಲ್ಲಿಸಿತ್ತು. ಆದರೆ ಇದುವರೆಗೂ ಪೂರ್ವಾನುಮತಿ ದೊರೆತಿಲ್ಲ.

ಟಿ ಜೆ ಅಬ್ರಹಾಂ ಎಂಬುವರು ಗದಗ್‌ ಜಿಲ್ಲಾಧಿಕಾರಿ ಮಹಂತ್ರಯ್ಯ ಜಿ ಹಿರೇಮಠ್‌, ಶಿವಾನಂದ ಬಿ ಕರಲೆ, ಕೆಎಎಸ್‌ ಅಧಿಕಾರಿ ತಹಶೀಲ್ದಾರ್ ಅಜಿತ್‌ ಎಂ, ಬಸವರಾಜ ಎ ಬಿ, ಮುಖ್ಯ ಇಂಜಿನಿಯರ್ ಹನುಮಂತರಾಯಪ್ಪ, ಹೆಸ್ಕಾಂ  ಕೃಷ್ಣಪ್ಪ, ಮಾರುತಿ ಎಂಬುವರ ವಿರುದ್ಧ  ಕರ್ತವ್ಯ ಲೋಪ ಆರೋಪ ಹೊರಿಸಿ ದೂರು (NO. LOK/SPBC-1/DYSP-05/SPECIAL REPORT/01/2025)  ದಾಖಲಿಸಿದ್ದರು. ಇವರ ವಿರುದ್ಧ ವಿಚಾರಣೆಗೆ ಅನುಮತಿ ಕೋರಿದ್ದ ಲೋಕಾಯುಕ್ತ ಪೊಲೀಸ್‌ ವಿಭಾಗವು 2023ರ ಏಪ್ರಿಲ್ 28ರಂದು ಪ್ರಸ್ತಾವ ಸಲ್ಲಿಸಿತ್ತು. ಅಲ್ಲದೇ 2024ರ ಮೇ 16, ಅಕ್ಟೋಬರ್ 18, ಜುಲೈ 14ರಂದು ನೆನಪೋಲೆಯನ್ನೂ ಸಹ ಕಳಿಸಿತ್ತು. ಆದರೆ ಇದುವರೆಗೂ ಸಕ್ಷಮ ಪ್ರಾಧಿಕಾರವು ವಿಚಾರಣೆಗೆ ಪೂರ್ವಾನುಮತಿ ನೀಡಿಲ್ಲ ಎಂದು ತಿಳಿದು ಬಂದಿದೆ.

ಬೆಂಗಳೂರು ದಕ್ಷಿಣ ತಾಲೂಕಿನ ವಿಶೇಷ ತಹಶೀಲ್ದಾರ್ ಆಗಿದ್ದ ಶಿವಪ್ಪ ಹೆಚ್‌ ಲಮಾಣಿ, ವಿಶೇಷ ಜಿಲ್ಲಾಧಿಕಾರಿ ಎಸ್‌ ರಂಗಪ್ಪ, ಜಯಮಾದಪ್ಪ, ನಟೇಶ್‌ ಡಿ ಬಿ ಅವರ ವಿರುದ್ಧ ಲೋಕಾಯುಕ್ತ ಡಿವೈಎಸ್‌ಪಿ ಬಸವರಾಜ ಆರ್ ಮಗದುಂ ಅವರು ಕರ್ತವ್ಯ ಲೋಪ ಆರೋಪ ಹೊರಿಸಿ ದೂರು (NO.LOK/SPBC-1/DYSP-05/SPEICAL REPORT/01/2025)  ದಾಖಲಿಸಿದ್ದರು. ಇವರ ವಿರುದ್ಧ ಪೂರ್ವಾನುಮತಿ ನೀಡಬೇಕು ಎಂದು 2025ರ ಜನವರಿ 28ರಂದು ಕಂದಾಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಡಿಪಿಎಆರ್‍‌ನ ಪ್ರಧಾನ ಕಾರ್ಯದರ್ಶಿಗೆ ಪ್ರಸ್ತಾವ ಸಲ್ಲಿಸಿದ್ದರು. ಆದರೆ ಈ ಪ್ರಸ್ತಾವ ಸಲ್ಲಿಕೆಯಾಗಿ ಒಂದು ವರ್ಷ 5 ತಿಂಗಳಾದರೂ ಪೂರ್ವಾನುಮತಿ ದೊರೆತಿಲ್ಲ.

ಲೋಕಾಯುಕ್ತ ಪೊಲೀಸ್‌ ಇನ್ಸ್‌ಪೆಕ್ಟರ್‍‌ ವಿಶ್ವನಾಥ್‌ ಡಿ ಕಬ್ಬೂರಿ ಅವರು ಕ್ರಿಡಿಲ್‌ನ ಎಇಇ ಪ್ರಕಾಶ್‌ ಸಿ ಪಿ, ಬಿಬಿಎಂಪಿಯ ಮಹದೇವಪುರ ವಲಯದ ಎಕ್ಸಿಕ್ಯೂಟಿವ್ ಇಂಜಿನಿಯರ್  ಸುರೇಶ್‌ ರೆಡ್ಡಿ,  ಬಿಬಿಎಂಪಿಯ ಸೂಪರಿಟೆಂಡಿಂಗ್‌ ಇಂಜಿನಿಯರ್ ಆರ್ ವಿ ಮಂಜುನಾಥ್ ಅವರ ವಿರುದ್ಧ ದೂರು (NO.LOK/SPBC-1/PI-18/SPEICAL REPORT/04/2025)  ನೀಡಿದ್ದರು. ಈ ಸಂಬಂಧ ಪ್ರಾಥಮಿಕ ಪರಿಶೀಲನೆ ನಂತರ ಆಪಾದಿತ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಪೂರ್ವಾನುಮತಿ ಕೋರಿ ಲೋಕಾಯುಕ್ತ ಪೊಲೀಸ್‌ ವಿಭಾಗವು 2025ರ ಆಗಸ್ಟ್‌ 5ರಂದು ಕ್ರಿಡಿಲ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರಸ್ತಾವ ಸಲ್ಲಿಸಿತ್ತು. ಆದರೆ ಈ ಕುರಿತು ಇದುವರೆಗೂ ಸಕ್ಷಮ ಪ್ರಾಧಿಕಾರವು ವಿಚಾರಣೆಗೆ ಪೂರ್ವಾನುಮತಿಯನ್ನೇ ನೀಡಿಲ್ಲ ಎಂದು ತಿಳಿದು ಬಂದಿದೆ.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿಯೂ ಭ್ರಷ್ಟಾಚಾರ ಮತ್ತು ಇತರೆ ಅಪರಾಧಗಳ ಆರೋಪ ಎದುರಿಸುತ್ತಿರುವ ಕೆಎಎಸ್‌ ಸೇರಿದಂತೆ ಇನ್ನಿತರೆ ವೃಂದದ ಅಧಿಕಾರಿಗಳನ್ನು ಸಂಬಂಧಿತ ಪ್ರಾಧಿಕಾರಗಳು ರಕ್ಷಿಸುತ್ತಿವೆ. ಅಲ್ಲದೇ ಅವರಿಗೆ ಆಶ್ರಯವನ್ನೂ ನೀಡುತ್ತಿವೆ. ಸಂಬಂಧಿತ ಪ್ರಾಧಿಕಾರಗಳು ಪದೇ ಪದೇ ಕರ್ತವ್ಯ ಲೋಪ ಎಸಗುತ್ತಲೇ ಇದೆ. ಇಲಾಖೆಗಳ ಮುಖ್ಯಸ್ಥರು ಕಾಲಕಾಲಕ್ಕೆ ಮೇಲ್ವಿಚಾರಣೆ ಮಾಡದ ಕಾರಣ ರಾಜ್ಯದಲ್ಲಿ ಆಡಳಿತ ದುರುಪಯೋಗಕ್ಕೂ ದಾರಿ ಮಾಡಿಕೊಡುತ್ತಿದೆ ಎಂದು ಲೋಕಾಯುಕ್ತ ರಿಜಿಸ್ಟ್ರಾರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರವನ್ನು ಬರೆದಿದ್ದರು.

3 ವರ್ಷದಲ್ಲಿ ಭ್ರಷ್ಟರಿಗೆ ‘ಆಶ್ರಯ-ರಕ್ಷಣೆ’, ದುರಾಡಳಿತ, ಆಡಳಿತಾತ್ಮಕ ನಿಷ್ಕ್ರೀಯತೆ; ಲೋಕಾ ಪೊಲೀಸ್ ವಿಚಾರಣೆಗೆ ಸಿಗದ ಪೂರ್ವಾನುಮತಿ, ಆಡಳಿತ ದುರುಪಯೋಗ

 

ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಕಲಂ 17 ಎ ಅಡಿಯಲ್ಲಿ ವಿಚಾರಣೆಗೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ನಿಗದಿತ ಅವಧಿಯಲ್ಲಿ ಪೂರ್ವಾನುಮತಿ ನೀಡುತ್ತಿಲ್ಲ. ಕಾಲಮಿತಿಯನ್ನೂ ಪಾಲಿಸುತ್ತಿಲ್ಲ. ಸರ್ಕಾರದ ಈ ಕಾರ್ಯವೈಖರಿ ಬಗ್ಗೆ ಲೋಕಾಯುಕ್ತ ಸಂಸ್ಥೆಯು ಮತ್ತೊಮ್ಮೆ ಖಾರವಾಗಿ ಪತ್ರವನ್ನು ಬರೆದಿದೆ. ಅಲ್ಲದೇ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿಗೂ ಸಹ ಪತ್ರವನ್ನು ಬರೆದಿರುವುದನ್ನು ಸ್ಮರಿಸಬಹುದು.

Hot this week

ರಸ್ತೆ ಕಾಮಗಾರಿಯಲ್ಲಿ ಲೋಪ, ಗುತ್ತಿಗೆದಾರನಿಗೆ ಅಕ್ರಮ ಲಾಭ, ಪಾಲಿಕೆಗೆ ನಷ್ಟ; ತಪಾಸಣೆ ನಡೆದ ದಿನದಂದೇ ಎಇ ಅಮಾನತು

ಬೆಂಗಳೂರು; ಆರ್ಟಿಲಿಯಲ್ ಮತ್ತು ಸಬ್‌ ಆರ್ಟೀಲಿಯಲ್ ರಸ್ತೆಗಳಲ್ಲಿ   ಕೈಗೊಂಡಿರುವ ಆಸ್ಪಾಲ್ಟಿಂಗ್‌ನಲ್ಲಿ ಕಳಪೆ...

ಕೆಎಸ್‌ಒಯು ಬ್ಯಾಂಕ್‌ ಖಾತೆ ಸ್ಥಗಿತ; ಬ್ಯಾಂಕ್‌ ಕಾರ್ಯಾಚರಣೆ ನಿರ್ಬಂಧಿಸಲು ರಾಜ್ಯ ಸರ್ಕಾರಕ್ಕೆ ಯಾವ ಕಾನೂನುಬದ್ಧ ಅಧಿಕಾರವಿದೆ?

ಬೆಂಗಳೂರು; ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಬ್ಯಾಂಕ್‌ ಖಾತೆಗಳ ಸ್ಥಗಿತಗೊಳಿಸಿರುವುದಕ್ಕೆ ಸಂಬಂಧಿಸಿದಂತೆ...
Please Scan to make Your Contribution

Topics

ರಸ್ತೆ ಕಾಮಗಾರಿಯಲ್ಲಿ ಲೋಪ, ಗುತ್ತಿಗೆದಾರನಿಗೆ ಅಕ್ರಮ ಲಾಭ, ಪಾಲಿಕೆಗೆ ನಷ್ಟ; ತಪಾಸಣೆ ನಡೆದ ದಿನದಂದೇ ಎಇ ಅಮಾನತು

ಬೆಂಗಳೂರು; ಆರ್ಟಿಲಿಯಲ್ ಮತ್ತು ಸಬ್‌ ಆರ್ಟೀಲಿಯಲ್ ರಸ್ತೆಗಳಲ್ಲಿ   ಕೈಗೊಂಡಿರುವ ಆಸ್ಪಾಲ್ಟಿಂಗ್‌ನಲ್ಲಿ ಕಳಪೆ...

ಕೆಎಸ್‌ಒಯು ಬ್ಯಾಂಕ್‌ ಖಾತೆ ಸ್ಥಗಿತ; ಬ್ಯಾಂಕ್‌ ಕಾರ್ಯಾಚರಣೆ ನಿರ್ಬಂಧಿಸಲು ರಾಜ್ಯ ಸರ್ಕಾರಕ್ಕೆ ಯಾವ ಕಾನೂನುಬದ್ಧ ಅಧಿಕಾರವಿದೆ?

ಬೆಂಗಳೂರು; ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಬ್ಯಾಂಕ್‌ ಖಾತೆಗಳ ಸ್ಥಗಿತಗೊಳಿಸಿರುವುದಕ್ಕೆ ಸಂಬಂಧಿಸಿದಂತೆ...

ಈಶಾ ಫೌಂಡೇಷನ್, ಯೋಗ ಕೇಂದ್ರಕ್ಕೆ ಜಮೀನು ಭೂ ಪರಿವರ್ತನೆಯಲ್ಲಿ ನಿಯಮ ಉಲ್ಲಂಘನೆ ಆರೋಪ; ತಹಶೀಲ್ದಾರ್‍‌ಗಳಿಂದಲೇ ಅಕ್ರಮ ಲಾಭ, ಸರ್ಕಾರಕ್ಕೆ ವಂಚನೆಯಾಗಿದೆಯೇ?

ಬೆಂಗಳೂರು; ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಗ್ರಾಮದಲ್ಲಿನ ವಿವಿಧ ಸರ್ವೇ ನಂಬರ್‍‌ಗಳಲ್ಲಿ ಒಟ್ಟಾರೆ...

Related Articles

Popular Categories

error: Content is protected !!