ಕೌಶಲ್ಯಾಭಿವೃದ್ಧಿಗೆ 1,500 ಕೋಟಿ ರು; ಶಾಲಾ ಕಾಲೇಜು ಕಟ್ಟಡಗಳ ಅನುದಾನಕ್ಕೆ ಕೈ ಹಾಕಿದ ಸರ್ಕಾರ

ಬೆಂಗಳೂರು; ಯುವ ನಿಧಿ ಯೋಜನೆ ಸಂಬಂಧ ಮಾರ್ಗಸೂಚಿಗಳನ್ನು ಅಂತಿಮಗೊಳಿಸಲು ಸರ್ಕಾರವು ಕಸರತ್ತು  ನಡೆಸುತ್ತಿರುವ ಹೊತ್ತಿನಲ್ಲಿಯೇ  ಯೋಜನಾ ಇಲಾಖೆಯು ಇದೀಗ ಯುವಜನರ ಕೌಶಲ್ಯಾಭಿವೃದ್ಧಿ ವೃದ್ಧಿಸಲು 1,500 ಕೋಟಿ ರು. ಮೊತ್ತದ ಯೋಜನೆಯ  ಪ್ರಸ್ತಾವನೆ ಮಂಡಿಸಿದೆ.

 

ಶಾಲೆ, ಪದವಿ, ಪಿಯು ಕಾಲೇಜು ಕಟ್ಟಡಗಳ ನಿರ್ಮಾಣಕ್ಕೆ ಕೋರಿರುವ 573 ಕೋಟಿ ರು. ಅನುದಾನವನ್ನೇ ಕೌಶಲ್ಯ ಪ್ರಯೋಗಾಲಯಗಳ ನೂತನ ಯೋಜನೆಗೆ ಸಂಯೋಜಿಸಲು ಪ್ರಸ್ತಾವ ಸಲ್ಲಿಸಿದೆ. ಈ ಪ್ರಸ್ತಾವನೆಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

6,332 ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕೌಶಲ್ಯ ಪ್ರಯೋಗಾಲಯಗಳ, ಸ್ಮಾರ್ಟ್‌ ಕ್ಲಾಸ್‌ಗಳನ್ನು ಘಟಕ ವೆಚ್ಚ 25 ಲಕ್ಷ ರು,ನಂತೆ ಒಟ್ಟು 1,500 ಕೋಟಿ ರು. ಅವಶ್ಯಕವಿದೆ ಎಂದು ಪ್ರಸ್ತಾವ ಸಲ್ಲಿಸಿದೆ.

 

ರಾಜ್ಯದಲ್ಲಿ 2 ಕೋಟಿ ಯುವ ಜನಸಂಖ್ಯೆ ಪೈಕಿ ಎನ್‌ಎಸ್‌ಡಿಸಿ ವರದಿ ಪ್ರಕಾರ ಸುಮಾರು 80 ಲಕ್ಷ ಯುವಜನರ ಕೌಶಲ್ಯಾಭಿವೃದ್ಧಿ ಆಗಿರುವುದಿಲ್ಲ ಎಂಬ ಅಂಶವನ್ನು ಉಲ್ಲೇಖಿಸಿರುವುದು ಪ್ರಸ್ತಾವದಿಂದ ತಿಳಿದು ಬಂದಿದೆ.

 

ಪ್ರಸ್ತಾವದಲ್ಲಿ ಯುವ ನಿಧಿ ಯೋಜನೆ ಕುರಿತೂ ಚರ್ಚಿಸಿರುವ ಯೋಜನಾ ಇಲಾಖೆಯು ಯುವಜನರನ್ನು ಉದ್ಯಮಶೀಲ ಹಾಗೂ ಉದ್ಯೋಗವಂತರನ್ನಾಗಿ ಮಾಡಲು ಕನಿಷ್ಠ 75,000 ಕೌಶಲ್ಯ ಕೇಂದ್ರಗಳ ತೆರೆಯಬೇಕು ಎಂದು ವಿವರಿಸಿದೆ.

 

‘ಯುವಜನರನ್ನು ಉದ್ಯಮಶೀಲ ಹಾಗೂ ಉದ್ಯೋಗವಂತರನ್ನಾಗಿ ಮಾಡಲು ಸರ್ಕಾರದ 750 ತರಬೇತಿ ಕೇಂದ್ರಗಳಲ್ಲಿ ಕನಿಷ್ಟ 100 ಯುವ ಜನರ ತಂಡದಂತೆ ಗರಿಷ್ಠ 75,000 ಯುವಜನರಿಗೆ ಕೌಶಲ್ಯ ತರಬೇತಿ ನೀಡಬಹುದಾಗಿದೆ. ಆದರೆ ಈ ಸೌಲಭ್ಯವನ್ನು 100 ಪಟ್ಟು ಹೆಚ್ಚು ಮಾಡುವ ಅವಶ್ಯಕತೆ ಇದ್ದು ಕನಿಷ್ಠ 75,000 ಕೌಶಲ್ಯ ಕೇಂದ್ರಗಳ ಅಗತ್ಯವಿದೆ,’ ಎಂದು ಹೇಳಿದೆ.

 

 

1,500 ಕೋಟಿ ಪೈಕಿ ಕೇಂದ್ರ ಸರ್ಕಾರದ ಆರ್ಥಿಕ ಮಂತ್ರಾಲಯದಿಂದ ಡಿಐಪಿಎಎಮ್‌ ಇಲಾಖೆ ಅಸೆಟ್‌ ಮಾನೋಟೈಸೈಜೇಷನ್‌ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದ ಪಾಲು ಶೇ.40ರಷ್ಟು 600 ಕೋಟಿ ರು. ಪಡೆಯಬಹುದು.

 

ಉಳಿದ ಶೇ. 20ರಷ್ಟು 300 ಕೋಟಿ ರು. ಹಣವನ್ನು ಖಾಶಗಿ ಸಂಸ್ಥೆಗಳಿಂದ ಪಡೆದು ರಾಜ್ಯ ಸರ್ಕಾರ ಈಗಾಗಲೇ ಆಯವ್ಯಯದಲ್ಲಿ ಶಾಲಾ ಕಟ್ಟಡ,ಕಾಲೇಜು ಕಟ್ಟಡ, ಪಿಯು ಕಾಲೇಜು ಕಟ್ಟಡಗಳ ನಿರ್ಮಾಣಕಕ್ಕೆ ಕೋರಿರುವ 573 ಕೋಟಿ ರು. ಅನುದಾನವನ್ನು ಈ ಯೋಜನೆಗೆ ಸಂಯೋಜಿಸಬಹುದಾಗಿದೆ.

 

 

ಇದರಿಂದ ರಾಜ್ಯ ಸರ್ಕಾರಕ್ಕೆ ಕಡಿಮೆ ಬಂಡವಾಳದಿಂದ 1,500 ಕೋಟಿ ಮೊತ್ತದ ಮೂಲಭೂತ ಸೌಕರ್ಯ ಅಭಿವೃದ್ಧಿಗೊಳಿಸಿ ಪ್ರತಿ ವರ್ಷಕ್ಕೆ 21.7 ಲಕ್ಷ ಯುವ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಿ ಉದ್ಯಮಶೀಲರಾಗಿಸಬಹುದು. ಆದ್ದರಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ, ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ 1,500 ಕೋಟಿ ಅಸೆಟ್‌ ಮಾನಿಟೈಜೈಷನ್‌ ಪ್ರಸ್ತಾವನೆ ಪಡೆಯಬಹುದು ಎಂದು ಪ್ರಸ್ತಾವದಲ್ಲಿ ವಿವರಿಸಿದೆ.

 

ರಾಜ್ಯದಲ್ಲಿ ಈಗಾಗಲೇ 1,601 ಸರ್ಕಾರಿ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳು (5.5 ಲಕ್ಷ ವಿದ್ಯಾರ್ಥಿಗಳು) ಮತ್ತು 4,731 ಪ್ರೌಢಶಾಲೆಗಳಿದ್ದು (8.6 ಲಕ್ಷ ವಿದ್ಯಾರ್ಥಿಗಳು), ಒಟ್ಟು 6,332 ಶಾಲಾ ಕಾಲೇಜುಗಳಲ್ಲಿ 14.1 ಲಕ್ಷ ಯುವ ವಿದ್ಯಾರ್ಥಿಗಳು ಇರುತ್ತಾರೆ. ಶಾಲಾ ಕಾಲೇಜುಗಳ ಅವಧಿ ನಂತರ ಇತರೆ ಯುವಜನತೆಗೆ ವಾರ್ಷಿಕವಾಗಿ ಶಾಲಾ ಕಾಲೇಜಿಗೆ 120 ಯುವಜನಕ್ಕೆ ಕೌಶಲ್ಯ ತರಬೇತಿ ನೀಡಿದಲ್ಲಿ ಒಟ್ಟು 7.6 ಲಕ್ಷ ಯುವಜನರಿಗೆ ಸೇರಿ ಒಟ್ಟು 21.7 ಲಕ್ಷ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಬಹುದು ವಿವರಿಸಿರುವುದು ಗೊತ್ತಾಗಿದೆ.

 

ಯುವ ನಿಧಿ ಯೋಜನೆಯಡಿಯಲ್ಲಿ ಸುಮಾರು 4 ಲಕ್ಷ ಯುವಜನರಿಗೆ 24 ತಿಂಗಳುವರೆಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. 2023ರಲ್ಲಿ ತೇರ್ಗಡೆಯಾಗಿ 6 ತಿಂಗಳು ಕಳೆದರೂ ಉದ್ಯೋಗ ಸಿಗದಿದ್ದರೇ ಅಂತಹ ಪದವೀಧರ ನಿರುದ್ಯೋಗಿಗಳಿಗೆ 3,000 ಹಾಗೂ ಡಿಪ್ಲೋಮಾ ಪದವೀಧರರಿಗೆ 1,500 ರು. ಸಿಗಲಿದೆ.

 

ಯುವನಿಧಿ; ಅಂತಿಮಗೊಳ್ಳದ ರೂಪುರೇಷೆ, 5.29 ಲಕ್ಷ ಪದವೀಧರರಿಗೆ ವಾರ್ಷಿಕ 444.49 ಕೋಟಿ ರು ಅಂದಾಜು

 

ಕೌಶಲ್ಯಾಭಿವೃದ್ದಿ ಮತ್ತು ಜೀವನೋಪಾಯ ಇಲಾಖೆಯು ಹಿಂದಿನ ವರ್ಷದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಬಳಿ ಇದ್ದ ಸಾಮಾನ್ಯ ಮತ್ತು ಡಿಪ್ಲೋಮಾ ಪದವಿ ಪಡೆದ ಯುವಜನರ ದತ್ತಾಂಶಗಳನ್ನು ಕಲೆ ಹಾಕಿದೆ. ಇದನ್ನಾಧರಿಸಿ ಯುವ ನಿಧಿಗೆ ಮಾಸಿಕವಾಗಿ 111.12 ಕೋಟಿ ರು ಮತತ್ತು ವಾರ್ಷಿಕವಾಗಿ 444.49 ಕೋಟಿ ರು. ಬೇಕಾಗಲಿದೆ ಎಂದು ಅಂದಾಜಿಸಿದೆ.

 

 

2023-24ನೇ ಸಾಲಿನಲ್ಲಿ ಸಾಮಾನ್ಯ ಮತ್ತು ಡಿಪ್ಲೋಮಾ ಪದವೀಧರರ  ನಿಖರ ಅಂಕಿ ಅಂಶಗಳು ದೊರೆತ ನಂತರ ಮಾಸಿಕ ಮತ್ತು ವಾರ್ಷಿಕವಾಗಿ ಅನುದಾನಕ್ಕೆ ಇಲಾಖೆಯು  ಪ್ರಸ್ತಾವನೆ ಸಲ್ಲಿಸಲಿದೆ. ಹಿಂದಿನ ವರ್ಷದ ದತ್ರಾಂಶಗಳನ್ನು ಅಂದಾಜಿಸಿರುವ ಇಲಾಖೆಯು ಬಹುತೇಕ ಅಷ್ಟೇ ಮೊತ್ತ ಬೇಕಾಗಲಿದೆ ಎಂದೂ ಪ್ರಸ್ತಾವನೆ ಸಿದ್ಧಪಡಿಸಿರುವುದು ತಿಳಿದು ಬಂದಿದೆ.

 

 

ಇದರ ಪ್ರಕಾರ ಕಳೆದ ವರ್ಷ 4,81,000 ಪದವೀಧರರು ಮತ್ತು 48,153 ಡಿಪ್ಲೋಮಾ ಪದವೀಧರರು ಸೇರಿ ಒಟ್ಟಾರೆ 5,29,153 ಮಂದಿ ಪದವೀಧರರಿದ್ದಾರೆ. ಈ ಪೈಕಿ 91,390 ಮಂದಿ ಪರಿಶಿಷ್ಟ ಜಾತಿಗೆ ಸೇರಿದ್ದರೇ, 34,480 ಪರಿಶಿಷ್ಟ ಪಂಗಡಕ್ಕೆ ಸೇರಿದ ಸಾಮಾನ್ಯ ಪದವೀಧರರಿದ್ದಾರೆ. ಅದೇ ರೀತಿ 9,149 ಮಂದಿ ಪರಿಶಿಷ್ಟ ಜಾತಿಗೆ ಸೇರಿದ್ದರೇ 3,852 ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಡಿಪ್ಲೋಮಾ ಪದವೀಧರರಿದ್ದಾರೆ. ಇದರಲ್ಲಿ ಶೇ.70ರಷ್ಟು ಫಲಾನುಭವಿಗಳು ಎಂದು ಲೆಕ್ಕಾಚಾರ ಹಾಕಿದರೆ ಒಟ್ಟಾರೆ 3,70,407 ಪದವೀಧರರು ಅರ್ಹವಾಗುತ್ತಾರೆ.

 

 

ಸಾಮಾನ್ಯ ಪದವೀಧರರಿಗೆ ಮಾಸಿಕ 101.01 ಕೋಟಿ ರು., ಡಿಪ್ಲೋಮಾ ಪದವೀಧರರಿಗೆ 10.11 ಕೋಟಿ ಸೇರಿ ಒಟ್ಟಾರೆ 111.12 ಕೋಟಿ ರು. ವೆಚ್ಚವಾಗಲಿದೆ. ವಾರ್ಷಿಕವಾಗಿ ಸಾಮಾನ್ಯ ಪದವೀಧರರಿಗೆ 404.04 ಕೋಟಿ ರು., ಡಿಪ್ಲೋಮಾ ಪದವೀಧರರಿಗೆ 40.45 ಕೋಟಿ ರು. ಸೇರಿ ಒಟ್ಟಾರೆ 444.49 ಕೋಟಿ ರು. ವೆಚ್ಚವಾಗಲಿದೆ ಎಂದು ಕೌಶಲ್ಯಾಭಿವೃದ್ಧಿ ಇಲಾಖೆಯು ಅಂದಾಜಿಸಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts