423.51 ಕೋಟಿ ಭೂ ಕಂದಾಯ ಬಾಕಿ; ವಸೂಲಾತಿ ಶುಲ್ಕ ನಿಗದಿಗೆ ಕಂದಾಯ ಇಲಾಖೆಗೆ ವಸತಿ ಇಲಾಖೆ ಪತ್ರ

ಬೆಂಗಳೂರು; ರೇರಾ ಕಾಯ್ದೆ ಮತ್ತು ನಿಯಮಗಳಡಿಯಲ್ಲಿ ರಾಜ್ಯದ ಬೆಂಗಳೂರು ನಗರ ಜಿಲ್ಲೆ ಸೇರಿದಂತೆ 7 ಜಿಲ್ಲೆಗಳಲ್ಲಿ 423.51 ಕೋಟಿ ರು.ಪ್ರಮಾಣದಲ್ಲಿ ಭೂ ಕಂದಾಯ ಬಾಕಿ ಇರುವುದು ಇದೀಗ ಬಹಿರಂಗವಾಗಿದೆ.

 

ದಂಡ ಪರಿಹಾರದ ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲು ಮಾಡುವ ವಿಷಯವನ್ನು ಸಕಾಲ ವ್ಯಾಪ್ತಿಗೊಳಪಡಿಸುವ ಸಂಬಂಧ ರೇರಾ ಪ್ರಾಧಿಕಾರ ನಡೆಸಿದ್ದ ಸಭೆಯಲ್ಲಿ 423.51 ಕೋಟಿ ರು ಪ್ರಮಾಣದಲ್ಲಿ ಭೂ ಕಂದಾಯ ಬಾಕಿ ಇರುವ ವಿಚಾರವು ಚರ್ಚೆಗೆ ಬಂದಿದೆ. ಈ ಸಂಬಂಧ 2023ರ ಸೆ.26ರಂದು ನಡೆದಿದ್ದ ಸಭೆಯ ನಡವಳಿಗಳ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ರೇರಾ ಕಾಯ್ದೆ ಅಡಿಯಲ್ಲಿ ವಿಧಿಸಲಾಗುವ ದಂಡ, ಪರಿಹಾರದ ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ವಸೂಲು ಮಾಡುವ ಪ್ರಕ್ರಿಯೆಗೆ ತಗುಲುವ ವೆಚ್ಚಗಳನ್ನು ಭರಿಸಲು ಮತ್ತು ವಸೂಲಾತಿ ಶುಲ್ಕಗಳನ್ನು ವಿಧಿಸಲು ರೇರಾ ನಿಯಮಗಳಲ್ಲಿ ಸೂಕ್ತ ತಿದ್ದುಪಡಿ ತರುವ ಬಗ್ಗೆ ಕ್ರಮ ವಹಿಸಲು ವಸತಿ ಇಲಾಖೆಗೆ ಸೂಚಿಸಲಾಗಿದೆ.

 

ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ಈ ಕುರಿತು ಸದ್ಯದಲ್ಲೇ ಪ್ರತ್ಯೇಕವಾಗಿ ಚರ್ಚಿಸಲಿದ್ದಾರೆ ಎಂದು ಗೊತ್ತಾಗಿದೆ.

 

ಈ ಬೆಳವಣಿಗೆ ನಡುವೆಯೇ ಎಷ್ಟು ಪ್ರಮಾಣದಲ್ಲಿ ವಸೂಲಾತಿ ಶುಲ್ಕವನ್ನು ನಿಗದಿಪಡಿಸಬಹುದು ಎಂದು ಮಾಹಿತಿ ನೀಡಬೇಕು ಎಂದು ಕಂದಾಯ ಇಲಾಖೆಗೆ ವಸತಿ ಇಲಾಖೆಯು ಸೂಚಿಸಿದೆ. ಈ ಸಂಬಂಧ 20234 ಅಕ್ಟೋಬರ್‍‌ 18ರಂದು ಅನಧಿಕೃತ ಟಿಪ್ಪಣಿ ಹೊರಡಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಭೂ ಕಂದಾಯ ಬಾಕಿ ಉಳಿಸಿಕೊಂಡಿರುವ ಜಿಲ್ಲೆಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದೆ. ಈ ಜಿಲ್ಲೆಯಲ್ಲಿ 415.73 ಕೋಟಿ ರು. ಬಾಕಿ ಇದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 73.46 ಲಕ್ಷ ರು., ಮೈಸೂರು ಜಿಲ್ಲೆಯಲ್ಲಿ 2.33 ಕೋಟಿ ರು., ಧಾರವಾಡದಲ್ಲಿ 27.33 ಲಕ್ಷ ರು., ಬೆಳಗಾವಿಯಲ್ಲಿ 69.29 ಲಕ್ಷ ರು., ದಕ್ಷಿಣ ಕನ್ನಡದಲ್ಲಿ 3.20 ಕೋಟಿ ರು., ಉಡುಪಿಯಲ್ಲಿ 53.26 ಲಕ್ಷ ರು. ಭೂ ಕಂದಾಯ ವಸೂಲಾತಿಗೆ ಬಾಕಿ ಇರುವುದು ನಡವಳಿಯಿಂದ ಗೊತ್ತಾಗಿದೆ.

 

ರೇರಾ ಕಾಯ್ದೆ 2016ರ ಕಲಂ 40(1) ಹಾಗೂ ರೇರಾ ನಿಯಮ 25ರಡಿಯಲ್ಲಿ ದಂಡ/ಪರಿಹಾರದ ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲು ಮಾಡುವ ಸಂಬಂಧ ಸಾಧಕ ಬಾಧಕಗಳ ಕುರಿತು ಚರ್ಚೆ ಕೂಡ ನಡೆದಿದೆ ಎಂದು ತಿಳಿದು ಬಂದಿದೆ.

 

‘ರೇರಾ ಕಾಯ್ದೆಯು ಕೇಂದ್ರ ಸರ್ಕಾರದ ಕಾಯ್ದೆಯಾಗಿದೆ. ಇದನ್ನು ಸಂಬಂಧಪಟ್ಟ ತಹಶೀಲ್ದಾರ್‍‌ಗಳೇ ರೇರಾ ಕಾಯ್ದೆಯಡಿ ವಿಧಿಸುವ ದಂಡದ ಮೊತ್ತವನ್ನು ಭೂ ಕಂದಾಯ ಎಂದು ವಸೂಲು ಮಾಡಬೇಕಾಗುತ್ತದೆ. ಆದರೆ ತಹಶೀಲ್ದಾರ್‍‌ರು ಅರೆ ನ್ಯಾಯಿಕ ಪ್ರಾಧಿಕಾರವಾಗಿದ್ದು ರೇರಾ ಕಾಯ್ದೆಯಡಿ ವಿಧಿಸುವ ದಂಡದ ಮೊತ್ತವನ್ನು ಭೂ ಕಂದಾಯ ಎಂದು ವಸೂಲು ಮಾಡುವಲ್ಲಿ ಹಲವಾರು ಕಾನೂನಾತ್ಮಕ ತೊಡಕುಗಳೀವೆ,’ ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಚರ್ಚಿಸಿರುವುದು ಗೊತ್ತಾಗಿದೆ.

 

ದಂಡದ ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ವಸೂಲು ಮಾಡುವಲ್ಲಿ ಕಂಡು ಬಂದಿರುವ ಕಾನೂನಾತ್ಮಕ ತೊಡಕುಗಳು ಮತ್ತು ಇದನ್ನು ವಸೂಲು ಮಾಡಲು ಹೆಚ್ಚು ಸಮಯಾವಕಾಶ ಬೇಕಿರುವುದರಿಂದ ಬೇರೆ ಸೇವೆಗಳ ರೀತಿಯಲ್ಲಿ ಸಕಾಲ ವ್ಯಾಪ್ತಿಗೆ ಸೇರ್ಪಡೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಎಲ್ಲಾ ಪ್ರಾದೇಶಿಕ ಆಯುಕ್ತರುಗಳೂ ಒಂದೇ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ತಿಳಿದು ಬಂದಿದೆ.

 

ಸಕಾಲ ವ್ಯಾಪ್ತಿಗೇಕೆ ಬೇಡ?

 

ಈ ಸೇವೆಯು ವಿವಿಧ ಹಂತಗಳಲ್ಲಿ ವಿವಿಧ ಪ್ರಾಧಿಕಾರಗಳ ಅನುಮೋದನೆಗೆ ಒಳಪಟ್ಟಿರುತ್ತದೆ.

 

ಕರ್ನಾಟಕ ಸಕಾಲ ಸೇವೆಗಳ ಕಾಯ್ದೆ ಅಡಿ ಸಾಮಾನ್ಯವಾಗಿ ಒಬ್ಬರೇ ಹೆಸರಿಸಲಾದ ಅಧಿಕಾರಿ ಇದ್ದು ಈ ಸೇವೆಯು ವಿವಿಧ ಅಧಿಕಾರಿಗಳ ಅನುಮೋದನೆ, ಆದೇಶಕ್ಕೆ ಒಳಪಟ್ಟಿದೆ. ಹೀಗಾಗಿ ಈ ಸೇವೆಯನ್ನು ಸಕಾಲ ವ್ಯಾಪ್ತಿಗೆ ಒಳಪಡಿಸುವುದು ಸಮಂಜಸವಲ್ಲ.

 

ಸಕಾಲ ವ್ಯಾಪ್ತಿಯ ಸೇವೆಗಳನ್ನು ನಿಗದಿತ ಕಾಲಾವಧಿಯಲ್ಲಿ ಇತ್ಯರ್ಥಪಡಿಸಬೇಕು. ಈ ಸೇವೆಯ ಇತ್ಯರ್ಥಕ್ಕೆ ಹೆಚ್ಚಿನ ಕೆಲಸದ ದಿನಗಳ ಕಾಲಾವಧಿ ಅವಶ್ಯಕವಿದೆ ಎಂಬ ಕಾರಣಗಳನ್ನು ಪ್ರಾದೇಶಿಕ ಆಯುಕ್ತರುಗಳು ಮುಂದೊಡ್ಡಿರುವುದು ನಡವಳಿಯಿಂದ ಗೊತ್ತಾಗಿದೆ.

 

ಭೂ ಕಂದಾಯ ಬಾಕಿ ವಸೂಲು ಮಾಡುವುದನ್ನು ಸಕಾಲ ಸೇವೆಗೆ ಒಳಪಡಿಸುವುದನ್ನು ಒಪ್ಪದ ಸಮಿತಿಯು, ಗ್ರಾಹಕರಿಗೆ, ಮನೆ ಖರೀದಿದಾರರಿಗೆ ಪರಿಹಾರ/ದಂಡದ ಮೊತ್ತವನ್ನು ನೀಡುವಲ್ಲಿ ವಿಫಲರಾದಂತಹ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಮತ್ತುಕಂದಾಯ ಇಲಾಖೆಗೆ ಒದಗಿಸಲು ವಸತಿ ಇಲಾಖೆಗೆ ಸೂಚಿಸಿದೆ.

 

ಬಾಕಿ ಪಾವತಿಸಬೇಕಾಗಿರುವ ಅಭಿವೃದ್ಧಿದಾರರ ಸ್ವತ್ತುಗಳ ದಾಖಲೆಗಳಲ್ಲಿ ಬಾಕಿ ಪಾವತಿಯ ವಿವರಗಳನ್ನು ನಿಯಮಾನುಸಾರ ನಮೂದಿಸಬೇಕು. ಕಾನೂನಿನ ಅನ್ವಯ ಸ್ವತ್ತುಗಳನ್ನು ಜಫ್ತಿ ಮಾಡಲು ಪ್ರಕ್ರಿಯೆಗಳನ್ನು ನಡೆಸಬೇಕು. ಗ್ರಾಹಕರಿಗೆ ಸೇರಬೇಕಾದ ಹಣವನ್ನು ತ್ವರಿತಗತಿಯಲ್ಲಿ ವಸೂಲು ಮಾಡಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ನಿರ್ಣಯ ಕೈಗೊಂಡಿದೆ.

 

ಅಲ್ಲದೇ ರೇರಾ ಕಾಯ್ದೆ ಅಡಿಯಲ್ಲಿ ವಿಧಿಸಲಾಗುವ ದಂಡ, ಪರಿಹಾರದ ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ವಸೂಲು ಮಾಡುವ ಪ್ರಕ್ರಿಯೆಗೆ ತಗುಲುವ ವೆಚ್ಚಗಳನ್ನು ಭರಿಸಲು ಮತ್ತು ವಸೂಲಾತಿ ಶುಲ್ಕಗಳನ್ನು ವಿಧಿಸಲು ರೇರಾ ನಿಯಮಗಳಲ್ಲಿ ಸೂಕ್ತ ತಿದ್ದುಪಡಿ ತರುವ ಬಗ್ಗೆ ವಸತಿ ಇಲಾಖೆಯು ಕ್ರಮ ವಹಿಸಬೇಕು ಎಂದು ಸಭೆಯಲ್ಲಿ ಸೂಚಿಸಿರುವುದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts