Tuesday | June 2, 2026 |

ವಿದ್ಯುತ್, ವೈದ್ಯಕೀಯ ಸೌಲಭ್ಯಗಳಿಲ್ಲ, ಪರಿಶಿಷ್ಟರಿಗೆ ಖಾತೆಯೂ ಇಲ್ಲ, ಸಭೆಗಳಿಗೆ ಹಾಜರಾಗದ ಡಿಸಿ, ಎಸ್ಪಿ, ಬ್ಯಾಂಕ್‌ಗಳಿಗೆ ಬಡ್ಡಿ ವಸೂಲಿಯಲ್ಲೇ ಆಸಕ್ತಿ, ಅಧಿಕಾರಿಗಳಿಗೆ ಸಮರ್ಪಕ ಜ್ಞಾನವೇ ಇಲ್ಲ

ಬೆಂಗಳೂರು;  ಗ್ಯಾರಂಟಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಾವಿರಾರು ಕೋಟಿ ರುಪಾಯಿಗಳನ್ನು ಸರ್ಕಾರವು  ಖರ್ಚು ಮಾಡಿದೆ. ಈ ಯೋಜನೆಗಳನ್ನು ಪ್ರಚಾರ ಮಾಡಲು 1,000 ಕೋಟಿಗೂ ಹೆಚ್ಚು ಮೊತ್ತದ ಜಾಹೀರಾತುಗಳನ್ನು ನೀಡಿವೆ. ಆದರೂ ಸಹ ಅನೇಕ ಯೋಜನೆಗಳು ಪರಿಣಾಮಕಾರಿಯಾಗಿ ಫಲಾನುಭವಿಗಳನ್ನು ತಲುಪಿಲ್ಲ ಎಂಬುದನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದ ಸಮಿತಿಯು ಜಿಲ್ಲಾ ಮಟ್ಟದಲ್ಲಿ ನಡೆಸಿದ ಹಲವು ಸಭೆಗಳಲ್ಲಿ  ಅನಾವರಣಗೊಂಡಿದೆ.

ಅದೇ ರೀತಿ  ಸರ್ಕಾರವು ಬಡತನ ನಿರ್ಮೂಲನೆಗಾಗಿ ಅನೇಕ ಯೋಜನೆಗಳು/ಕಾರ್ಯಕ್ರಮಗಳನ್ನು ರೂಪಿಸಿದ್ದರೂ, ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿಲ್ಲ. ಅಲ್ಲದೇ ಈ ಯೋಜನೆಗಳ ಬಗ್ಗೆ ಜನರಿಗೆ ಸರಿಯಾಗಿ ಪ್ರಚಾರ ಮಾಡಿ ತಲುಪಿಸಲು ವಿಫಲವಾಗಿದೆ. ಹಾಗೆಯೇ ರಾಜ್ಯದ ಹಲವು ಜಿಲ್ಲೆ, ನಗರ, ಗ್ರಾಮೀಣ ಪ್ರದೇಶಗಳಲ್ಲಿ  ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ತಲುಪತ್ತಿಲ್ಲ. ಗಡಿ ಜಿಲ್ಲೆಗಳಲ್ಲಿ ವಿದ್ಯುತ್, ವೈದ್ಯಕೀಯ ಸೌಲಭ್ಯಗಳು ಸಮರ್ಪಕವಾಗಿಲ್ಲ.

ನಗರ, ಜಿಲ್ಲಾ ಮತ್ತು ಗ್ರಾಮೀಣ   ಆಡಳಿತವು ಹೇಗೆ ಕುಸಿದು ಬಿದ್ದಿದೆ  ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದ ಸಮಿತಿಯ ಸಭೆಯು ಬಹಿರಂಗಪಡಿಸಿದೆ.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಎ ಎನ್ ವೇಣುಗೋಪಾಲ ಗೌಡ ಅವರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆಸಿದ್ದ ಸಾರ್ವಜನಿಕ ಅಹವಾಲುಗಳ ಸಭೆಗಳಿಗೆ ದೂರುಗಳು ಸಲ್ಲಿಕೆಯಾಗಿದ್ದವು. ಈ ದೂರುಗಳನ್ನು ಆಧರಿಸಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜ್ಯದ ಅಡ್ವೋಕೇಟ್ ಜನರಲ್ ಕೂಡ ಆಗಿರುವ ಶಶಿಕಿರಣ್ ಶೆಟ್ಟಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

 

 

 

ಈ ಪತ್ರದ ಪ್ರತಿ ಹಾಗೂ ಪ್ರಾಧಿಕಾರದ ವರದಿಯ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮೂರು ವರ್ಷಗಳನ್ನು ಪೂರೈಸಿದ್ದಾರೆ. ಈ ಮೂರು ವರ್ಷಗಳಲ್ಲಿಯೂ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಪ್ರಚಾರ ಮಾಡಲು ಜಾಹೀರಾತಿನ ರೂಪದಲ್ಲಿ ಒಂದು ಸಾವಿರ ಕೋಟಿಗೂ ಹೆಚ್ಚು ಖರ್ಚು ಮಾಡಲಾಗಿದೆ. ಆದರೆ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸಕಾfರವು ವಿಫಲವಾಗಿದೆ ಎಂದು ಕಾನೂನು ಸೇವಾ ಪ್ರಾಧಿಕಾರವು ನೀಡಿರುವ ವರದಿಯು ಚರ್ಚೆಗೆ ಗ್ರಾಸವಾಗಿದೆ.

ಕಾನೂನು ಸೇವಾ ಪ್ರಾಧಿಕಾರವು ರಾಜ್ಯದ ಹಲವು ಜಿಲ್ಲೆ, ನಗರಗಳಲ್ಲಿ ಆಯೋಜಿಸಿದ್ದ ಅಹವಾಲು ಸಭೆಗಳಲ್ಲಿ ಕೈಗೊಂಡ ನಿರ್ಣಯಗಳನ್ನು ಅನುಷ್ಠಾನಗೊಳಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್‌ ಅವರು ಸರ್ಕಾರದ ಎಲ್ಲಾ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗಳಿಗೆ 2026ರ ಮೇ 19ರಂದು  ನಿರ್ದೇಶನ ನೀಡಿದ್ದಾರೆ.

 

 

 

 

ಗುಡಿಸಲು ಮುಕ್ತವಾಗದ ಧಾರವಾಡ

ಕಾನೂನು ಸೇವೆಗಳ ಪ್ರಾಧಿಕಾರದ ಧಾರವಾಡ ಜಿಲ್ಲಾ ಕಾರ್ಯದರ್ಶಿಗಳು ಧಾರವಾಡ ಜಿಲ್ಲೆಯಲ್ಲಿ ಹಲವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಈ ವೇಳೆ ಜಿಲ್ಲೆಯ ದೂರದ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಈ ಭೇಟಿಗಳ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಬಡವರು ಹುಲ್ಲಿನಿಂದ ನಿರ್ಮಿಸಿದ ಗುಡಿಸಲುಗಳಲ್ಲಿ ವಾಸಿಸುತ್ತಿರುವುದು ಕಂಡುಬಂದಿದೆ. ಇವು ಮಳೆ, ಗಾಳಿ ಮತ್ತು ಬಿಸಿಲಿಗೆ ತುತ್ತಾಗಿ ಸುಲಭವಾಗಿ ಕುಸಿಯುವ ಸ್ಥಿತಿಯಲ್ಲಿವೆ. ಅಲ್ಲದೇ ಬೆಟ್ಟ ಪ್ರದೇಶಗಳಿಂದ ಹರಿದುಬರುವ ಒಳಚರಂಡಿ ನೀರು ಕುಡಿಯುವ ನೀರಿನ ಮೂಲಗಳಿಗೆ ಸೇರಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದೆ ಎಂದು ಜಿಲ್ಲೆಯ ಸ್ಥಿತಿಗತಿಯನ್ನು ವಿವರಿಸಿರುವುದು ವರದಿಯಿಂದ ತಿಳಿದು ಬಂದಿದೆ.

 

 

ಸರ್ಕಾರಿ ಯೋಜನೆಗಳ ಬಳಕೆಗೆ ಬೆಳಗಾವಿ ಜನತೆಗೆ ಅರಿವೇ ಇಲ್ಲ

ವಿವಿಧ ಇಲಾಖೆಗಳ ಸಹಕಾರದೊಂದಿಗೆ 1200 ಶಾಲೆಗಳಲ್ಲಿ ಬಾಲಕಾರ್ಮಿಕತೆ, ಬಾಲ್ಯ ವಿವಾಹ ಹಾಗೂ ಮಕ್ಕಳ ಹಕ್ಕುಗಳ ಕುರಿತು ಕಾನೂನು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಆದರೆ, ನಿಜವಾದ ಫಲಾನುಭವಿಗಳು ಅಥವಾ ಸಾರ್ವಜನಿಕರು ಈ ಜಾಗೃತಿ ಕಾರ್ಯಕ್ರಮಗಳಿಗೆ ಆಗಮಿಸುತ್ತಿಲ್ಲ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಅಥವಾ ಶಾಲಾ ಮಕ್ಕಳನ್ನೇ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕಳುಹಿಸಲಾಗುತ್ತಿದೆ. ಇದರಿಂದ ಪರಿಣಾಮಕಾರಿ ಫಲಾನುಭವಿಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಬೆಳಗಾವಿಯ ಜಿಲ್ಲಾ ಸದಸ್ಯ ಕಾರ್ಯದರ್ಶಿ ವಿವರಿಸಿರುವುದು ಗೊತ್ತಾಗಿದೆ.

 

 

‘ಸರ್ಕಾರದ ಯೋಜನೆಗಳ ಬಗ್ಗೆ ಹಾಗೂ ಅವುಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಅರಿವು ಜನರಲ್ಲಿ ಇಲ್ಲ. ಮಧ್ಯವರ್ತಿಗಳು ಹೆಚ್ಚಾಗಿದ್ದು, ಅವರು ಸಾರ್ವಜನಿಕರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ,’ ಎಂದು ಜಿಲ್ಲಾ ಸದಸ್ಯ ಕಾರ್ಯದರ್ಶಿ ವಿವರಿಸಿರುವುದು ತಿಳಿದು ಬಂದಿದೆ.

ವಿಶೇಷವೆಂದರೇ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ರಚಿಸಿದೆ. ಅಲ್ಲದೇ ಈ ಈ ಗ್ಯಾರಂಟಿ ಯೋಜನೆಗಳ ಪ್ರಚಾರ ಮಾಡಲು ಪತ್ರಿಕೆ ಮತ್ತು ಟಿ ವಿ ವಾಹಿನಿ, ಡಿಜಿಟಲ್ ಮಾಧ್ಯಮಗಳಿಗೆ 450 ಕೋಟಿ ಗೂ ಹೆಚ್ಚು ಖರ್ಚು ಮಾಡಿದ್ದರೂ ಸಹ ಗ್ಯಾರಂಟಿ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿಲ್ಲ ಎಂದು ವರದಿಯಲ್ಲಿ ಹೇಳಿರುವುದು ಸಹ ಚರ್ಚೆಗೆ ಗ್ರಾಸವಾಗಿದೆ.

 

 

ಬೆಂಗಳೂರು ನಗರದಲ್ಲಿ ಗಂಭೀರ ಸಮಸ್ಯೆಗಳು-ಪ್ರತ್ಯೇಕ ಅನುದಾನವೇ ಇಲ್ಲ

ಬೆಂಗಳೂರು ನಗರದಲ್ಲಿ “ಸಖಿ ಸೆಂಟರ್” ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಜನರಿಗೆ ಅದರ ಬಗ್ಗೆ ಅರಿವು ಇಲ್ಲ. ಪೊಲೀಸ್ ಇಲಾಖೆ ಜನರಿಗೆ ಅಗತ್ಯವಾದ ಸೇವೆಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಹಾಗೂ ಕೆಲವು ಪೊಲೀಸ್ ಸಿಬ್ಬಂದಿಗೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ತೊಂದರೆಗಳು ಎದುರಾಗುತ್ತಿವೆ ಎಂದು ಜಿಲ್ಲಾ ಸದಸ್ಯ ಕಾರ್ಯದರ್ಶಿ ಅವರು ಸಭೆಗೆ ತಿಳಿಸಿರುವುದು ಗೊತ್ತಾಗಿದೆ.
ಗಂಭೀರ ಸಮಸ್ಯೆಗಳ ಕುರಿತು ಅವರು ಪ್ರತ್ಯೇಕ ಅನುದಾನ ಅಗತ್ಯವಿದೆ. ಬೆಂಗಳೂರು ನಗರವು ವಿಶಾಲ ವ್ಯಾಪ್ತಿಯ ಆಡಳಿತ ಪ್ರದೇಶವಾಗಿರುವುದರಿಂದ ಅದರಿಗಾಗಿ ಪ್ರತ್ಯೇಕ ಕಾರ್ಯವಿಧಾನ ರೂಪಿಸಬೇಕು ಎಂದು ಸಲಹೆ ನೀಡಿರುವುದು ತಿಳಿದು ಬಂದಿದೆ.

 

 

 

ಬೆಂಗಳೂರು ಗ್ರಾಮಾಂತರದಲ್ಲಿ ಸ್ವಚ್ಛತೆ ಕೊರತೆ- ವೈದ್ಯಕೀಯ ಸೌಲಭ್ಯಗಳೇ ಇಲ್ಲ

ಬೆಂಗಳೂರು ಗ್ರಾಮಾಂತರ ಕೆಲವು ಗ್ರಾಮಗಳಲ್ಲಿ ಸ್ವಚ್ಛತೆಯ ಕೊರತೆಯಿಂದ ಅನೇಕ ಸಮಸ್ಯೆಗಳು ಉಂಟಾಗಿವೆ. ಕೆಲವು ಗ್ರಾಮಗಳಲ್ಲಿ ವೈದ್ಯಕೀಯ ಸೌಲಭ್ಯಗಳು ಲಭ್ಯವಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHCs) ಗ್ರಾಮಗಳಿಂದ ಬಹಳ ದೂರದಲ್ಲಿವೆ. ಬಡ ಜನರಿಗೆ ಸರ್ಕಾರ ಸಮರ್ಪಕ ಸಾರಿಗೆ ಸೌಲಭ್ಯಗಳನ್ನು ಒದಗಿಸುತ್ತಿಲ್ಲ. ಗ್ರಾಮೀಣ ಮಕ್ಕಳ ಶಿಕ್ಷಣದ ಮಟ್ಟ ಅತ್ಯಂತ ಕಡಿಮೆಯಾಗಿದೆ. ಕೆಲವರಿಗೆ ಕನ್ನಡ ಓದಲು ಸಹ ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಸದಸ್ಯ ಕಾರ್ಯದರ್ಶಿ ಅವರು ಸಮಸ್ಯೆಗಳ ಸರಮಾಲೆಯನ್ನೇ ಅನಾವರಣಗೊಳಿಸಿರುವುದು ವರದಿಯಿಂದ ತಿಳಿದು ಬಂದಿದೆ.

 

 

ಬಾಗಲಕೋಟೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕುಂಠಿತ

ಬಾಗಲಕೋಟೆಯ ಕೆಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಹೊಸದಾಗಿ ಶಿಕ್ಷಕರನ್ನು ನೇಮಿಸಲಾಗಿದೆ. ಶಿಕ್ಷಕರ ಕೊರತೆ ಇರುವ ಕಡೆ ಹೊಸದಾಗಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ಆದರೂ ವಿದ್ಯಾರ್ಥಿಗಳ ಹಾಜರಾತಿ ಬಹಳ ಕಡಿಮೆಯಾಗಿದೆ. ಅನೇಕ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಗಾಗಿ ವಾಟರ್ ಫಿಲ್ಟರ್‌ಗಳನ್ನು ಒದಗಿಸಿಲ್ಲ.

 

 

ಬಳ್ಳಾರಿಯಲ್ಲಿ ತೀವ್ರ ನೀರಿನ ಸಮಸ್ಯೆ

ಗಣಿ ಜಿಲ್ಲೆ ಬಳ್ಳಾರಿಯಲ್ಲಿ ತೀವ್ರ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ಗಣಿಗಾರಿಕೆ ಮತ್ತು ವೇಗವಾದ ಕೈಗಾರಿಕೀಕರಣವು ಪರಿಸರ ಮತ್ತು ಜನರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಕರ್ನಾಟಕದಲ್ಲಿ ಮುಖ್ಯ ಕುಡಿಯುವ ನೀರಿನ ಯೋಜನೆಯಾದ “ಜಲ್ ಜೀವನ್ ಮಿಷನ್ (JJM)” ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದರೂ ಸಹ ಬಳ್ಳಾರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ. ಬದಲಿಗೆ ಈ ಸಮಸ್ಯೆಯು ತೀವ್ರತರವಾಗಿರುವುದು ಜಿಲ್ಲಾ ಸದಸ್ಯ ಕಾರ್ಯದರ್ಶಿ ಅವರ ವರದಿಯಿಂದ ತಿಳಿದು ಬಂದಿದೆ.

 

 

ಬೀದರ್‍‌ನಲ್ಲಿ ಸ್ವಚ್ಛತೆ ಕೊರತೆ

ಬೀದರ್‍‌ ಜಿಲ್ಲೆಯಲ್ಲಿ ಆಧಾರ್ ನೋಂದಣಿ ಕೇಂದ್ರಗಳು ಗ್ರಾಮಗಳಿಂದ ಬಹಳ ದೂರದಲ್ಲಿವೆ. ಇದರಿಂದ ಸಾರ್ವಜನಿಕರಿಗೆ ಆ ಕೇಂದ್ರಗಳನ್ನು ತಲುಪುವುದು ಕಷ್ಟವಾಗುತ್ತಿದೆ. ಹೋಬಳಿ ಮಟ್ಟದಲ್ಲಿ ಆಧಾರ್ ನೋಂದಣಿ ಕೇಂದ್ರಗಳನ್ನು ಆರಂಭಿಸಿಲ್ಲ. ಅಂಗನವಾಡಿ ಕೇಂದ್ರಗಳು ಉತ್ತಮ ಸ್ಥಿತಿಯಲ್ಲಿ ಇಲ್ಲ. ಅದೇ ರೀತಿ ಈ ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತೆಯ ಕೊರತೆಯೂ ಇದೆ. ಈ ಕುರಿತು ಉಪ ಆಯುಕ್ತರಿಗೆ ಪತ್ರ ಬರೆದಿದ್ದರೂ ಸಮಸ್ಯೆಗಳು ಇನ್ನೂ ಮುಂದುವರಿದಿವೆ ಎಂದು ಜಿಲ್ಲಾ ಸದಸ್ಯ ಕಾರ್ಯದರ್ಶಿ ಅವರು ಅಧಿಕಾರಿ ವರ್ಗದ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿರುವುದು ಗೊತ್ತಾಗಿದೆ.

ಗಡಿ ಜಿಲ್ಲೆಯಲ್ಲಿ ವಿದ್ಯುತ್ ಸೌಲಭ್ಯಗಳೇ ಇಲ್ಲ- ಪರಿಶಿಷ್ಟರಿಗೆ ಖಾತೆಯೂ ಸಿಗುತ್ತಿಲ್ಲ

ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸೌಲಭ್ಯಗಳೇ ಇಲ್ಲ. ಸರ್ಕಾರವು ಪರಿಶಿಷ್ಟ ಜಾತಿ ಸಮುದಾಯದವರಿಗೆ ಭೂಮಿ ಹಂಚಿಕೆ ಮಾಡಿದ್ದರೂ ಅವರಿಗೆ ಖಾತಾಗಳು ಸಿಗುತ್ತಿಲ್ಲ. ಮಹದೇಶ್ವರ ಬೆಟ್ಟದ ವಾಲ್ಮೀಕಿ ವಸತಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು ಅಥವಾ ಶಿಕ್ಷಕರೇ ಇಲ್ಲ. ಶಾಲೆಗಳಲ್ಲಿ ಗೈರುಹಾಜರಾಗಿರುವ ವಿದ್ಯಾರ್ಥಿಗಳನ್ನು ಹಾಜರಿರುವಂತೆ ತೋರಿಸಲಾಗುತ್ತಿದೆ. ಶಿಕ್ಷಕರು ಅಂತಹ ವಿದ್ಯಾರ್ಥಿಗಳ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದನ್ನು ಜಿಲ್ಲಾ ಸದಸ್ಯ ಕಾರ್ಯದರ್ಶಿ ಪತ್ತೆ ಹಚ್ಚಿರುವುದು ವರದಿಯಿಂದ ತಿಳಿದು ಬಂದಿದೆ.

 

 

ಹೆಚ್ಚಿದ ಮಾನವ-ವನ್ಯಜೀವಿ ಸಂಘರ್ಷ

ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷದ ಪ್ರಕರಣಗಳ ಸಂಖ್ಯೆಯು ದಿನೇ ದಿನೇ ಹೆಚ್ಚುತ್ತಿದೆ. ಅದೇ ರೀತಿ ಕಾಫಿ ಮತ್ತು ಟೀ ತೋಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮುಂತಾದ ದಾಖಲೆಗಳು ಇಲ್ಲ ಎಂದು ಜಿಲ್ಲಾ ಸದಸ್ಯ ಕಾರ್ಯದರ್ಶಿ ವಿವರಿಸಿರುವುದು ಗೊತ್ತಾಗಿದೆ.

 

 

ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಸಂಬಂಧಿತ ಇಲಾಖೆಗಳ ನಡುವೆ ಸಮರ್ಪಕ ಸಮನ್ವಯ ಇಲ್ಲ. ಸ್ವಚ್ಛ ಭಾರತ ಅಭಿಯಾನ ಮತ್ತು ವಿ.ಬಿ.ಜಿ-ರಾಮ ಜಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು. ತೋಟಗಳ ಮಾಲೀಕರ ಸಹಕಾರವನ್ನು ಪಡೆಯಬೇಕು ಹಾಗೂ ಮೊದಲು ಎಲ್ಲಾ ವಲಸೆ ಕಾರ್ಮಿಕರಿಗೆ ಆಧಾರ್ ಕಾರ್ಡ್ ಮಾಡಿಸಿಕೊಟ್ಟು, ನಂತರ ಬ್ಯಾಂಕ್ ಖಾತೆಗಳನ್ನು ತೆರೆಯುವ ವ್ಯವಸ್ಥೆ ಮಾಡಬೇಕು ಎಂದು ಸಮಿತಿ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಎ ಎನ್ ವೇಣುಗೋಪಾಲ ಗೌಡ ಅವರು ಸೂಚಿಸಿರುವುದು ತಿಳಿದು ಬಂದಿದೆ.

 

 

ಮಂಗಳೂರಿನಲ್ಲಿ ಉತ್ತರ ಭಾರತದವರ ವಲಸೆ

ಮಂಗಳೂರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗುತ್ತಿದೆ. ಉತ್ತರ ಭಾರತದ ಜನರು ಹೆಚ್ಚಿನ ಪ್ರಮಾಣದಲ್ಲಿ ಫ್ಲ್ಯಾಟ್‌ಗಳನ್ನು ಖರೀದಿಸುತ್ತಿದ್ದಾರೆ. ಮಂಗಳೂರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ವಾಸವಾಗಿದ್ದಾರೆ. ಅಲ್ಪಸಂಖ್ಯಾತರ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಅವರಿಗೆ ಜಾಗೃತಿ ಮೂಡಿಸುವುದು ಬಹಳ ಉಪಯುಕ್ತ ಎಂದು ಸಮಿತಿಯ ಅಧ್ಯಕ್ಷರು ಅಭಿಪ್ರಾಯಪಟ್ಟಿರುವುದು ವರದಿಯಿಂದ ಗೊತ್ತಾಗಿದೆ.

ಸಭೆಗಳಿಗೆ ಹಾಜರಾಗದ ಡಿಸಿ, ಎಸ್ಪಿ

ಗದಗ ಜಿಲ್ಲೆಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಸಭೆಗಳಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ನಿಯಮಿತವಾಗಿ ಸಭೆಗೆ ಹಾಜರಾಗುತ್ತಿಲ್ಲ. ಇದಕ್ಕೆ ಕೆಲಸದ ಒತ್ತಡ ಕಾರಣವಾಗಿದೆ. ಹೀಗಾಗಿ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಎಸ್‌.ಪಿ. ಅವರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದು ಜಿಲ್ಲಾ ಸದಸ್ಯ ಕಾರ್ಯದರ್ಶಿ ಸಲಹೆ ನೀಡಿರುವುದು ತಿಳಿದು ಬಂದಿದೆ.

ರೈತರಿಂದ ಬಡ್ಡಿ ವಸೂಲಿಯಲ್ಲೇ ಆಸಕ್ತಿ

ದಾವಣಗೆರೆ ಜಿಲ್ಲೆಯಲ್ಲಿ ರೈತರು ಪಡೆದಿರುವ ಸಾಲದ ಮೇಲಿನ ಬಡ್ಡಿ ವಸೂಲಿಯಲ್ಲೇ ಬ್ಯಾಂಕ್‌ಗಳು ಆಸಕ್ತಿ ವಹಿಸುತ್ತಿವೆ. ರೈತರಿಗೆ ಯಾವುದೇ ಸೌಲಭ್ಯಗಳನ್ನು ಒದಗಿಸುವಲ್ಲಿ ಆಸಕ್ತಿ ತೋರಿಸುತ್ತಿಲ್ಲ. ಹಲವು ಇಲಾಖೆಗಳು ಕಾರ್ಯಕ್ರಮಗಳ ಬಗ್ಗೆ ವ್ಯಾಪಕ ಪ್ರಚಾರ ನೀಡುತ್ತಿಲ್ಲ. ಕಾರ್ಯಕ್ರಮಗಳಲ್ಲಿ ಪೋಕ್ಸೋ ಮಕ್ಕಳ, ಮಹಿಳೆಯರ, ಬಾಲ್ಯ ವಿವಾಹ ಹಾಗೂ ಕಾರ್ಮಿಕ ಸಮಸ್ಯೆಗಳ ಕುರಿತು ಮಾತ್ರ ಜಾಗೃತಿ ಮೂಡಿಸಲಾಗುತ್ತಿದೆ; ಆದರೆ ಇತರೆ ಸೌಲಭ್ಯಗಳು ಹಾಗೂ ಕೃಷಿ ಮುಂತಾದ ವಿಷಯಗಳ ಕುರಿತು ಜಾಗೃತಿ ಮೂಡಿಸುತ್ತಿಲ್ಲ. ಎಂದು ಹೇಳಿದರು.

 

 

ಸಂಬಂಧಿತ ಇಲಾಖೆಗಳು ತಮ್ಮದೇ ಯೋಜನೆಗಳು/ಅನುದಾನಗಳು/ಸಬ್ಸಿಡಿಗಳ ಕುರಿತು ರೈತರು ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿಲ್ಲ. ಪ್ರಮುಖ ಬ್ಯಾಂಕುಗಳು ರೈತರಿಂದ ಬಡ್ಡಿ ವಸೂಲಿ ಮಾಡುವುದರಲ್ಲೇ ಆಸಕ್ತಿ ತೋರಿಸುತ್ತಿದ್ದು, ರೈತರಿಗೆ ಯಾವುದೇ ಸೌಲಭ್ಯಗಳನ್ನು ಒದಗಿಸುವಲ್ಲಿ ಆಸಕ್ತಿ ತೋರಿಸುತ್ತಿಲ್ಲ ಎಂದು ಜಿಲ್ಲಾ ಸದಸ್ಯ ಕಾರ್ಯದರ್ಶಿ ವಿವರಿಸಿರುವುದು ಗೊತ್ತಾಗಿದೆ.

 

 

ಹಾಸನ ಶಾಲೆಗಳಲ್ಲಿ ಸ್ವಚ್ಛತೆಯೇ ಇಲ್ಲ

ಹಾಸನ ಜಿಲ್ಲೆಯ ಅನೇಕ ಶಾಲೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡುತ್ತಿಲ್ಲ. ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಿಲಲ್. ಹಾಗೂ ಶಾಲೆಗಳಲ್ಲಿ ಬೋಧನಾ ಸಿಬ್ಬಂದಿಯ ಕೊರತೆ ಇದೆ ಎಂದು ಜಿಲ್ಲಾ ಸದಸ್ಯ ಕಾರ್ಯದರ್ಶಿ ವಿವರಿಸಿರುವುದು ತಿಳಿದು ಬಂದಿದೆ.

 

 

ಹಾವೇರಿಯಲ್ಲಿ ಆಸಕ್ತಿ ತೋರಿಸದ ಡಿ ಸಿ ಮತ್ತು ಎಸ್ಪಿ

ಹಾವೇರಿ ಜಿಲ್ಲೆಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರವು ನಿಯಮಿತವಾಗಿ ಸಭೆ ನಡೆಸುತ್ತಿದೆಯಾದರೂ ಈ ಸಭೆಗಳಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ಸಭೆಗಳಿಗೆ ಹಾಜರಾಗಲು ಆಸಕ್ತಿ ತೋರಿಸುತ್ತಿಲ್ಲ ಎಂದು ಹೇಳಿರುವುದು ಗೊತ್ತಾಗಿದೆ.

 

 

ಕಲಬುರಗಿಯಲ್ಲಿ ಹೊಂದಾಣಿಕೆಯಾಗದ ದಾಖಲೆಗಳು

ಕಲಬುರಗಿ ಜಿಲ್ಲೆಯ ನಾಗರೀಕರ ಆದಾಯ ದಾಖಲೆಗಳಲ್ಲಿ ಹೆಸರುಗಳು ಮತ್ತು ತಂದೆಯ ಹೆಸರುಗಳು ಬ್ಯಾಂಕ್ ಖಾತೆಗಳಲ್ಲಿರುವ ಮಾಹಿತಿಯೊಂದಿಗೆ ಹೊಂದಿಕೆಯಾಗುತ್ತಿಲ್ಲ. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ಪ್ಯಾನ್ ಕಾರ್ಡ್‌ನ ಮಾಹಿತಿಗಳೂ ಪರಸ್ಪರ ಹೊಂದಿಕೆಯಾಗುತ್ತಿಲ್ಲ. ಇದರಿಂದ ಜನರಿಗೆ ಯೋಜನೆಗಳ ಸೌಲಭ್ಯಗಳನ್ನು ಸಮಯಕ್ಕೆ ಪಡೆಯುವುದು ಕಷ್ಟವಾಗುತ್ತಿದೆ ಎಂದು ಪ್ರಾಧಿಕಾರದ ಜಿಲ್ಲಾ ಸದಸ್ಯ ಕಾರ್ಯದರ್ಶಿ ಹೇಳಿರುವುದು ತಿಳಿದು ಬಂದಿದೆ.

ಅದೇ ರೀತಿ ಅನೇಕ ಯೋಜನೆಗಳಿಗೆ ನಿಗದಿತ ಕೊನೆಯ ದಿನಾಂಕ ಇರುತ್ತದೆ; ಆದರೆ ಜನರಿಗೆ ಇದರ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಸಮಯಕ್ಕೆ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ವಿಫಲರಾಗುತ್ತಿದ್ದಾರೆ ಎಂದು ಸದಸ್ಯ ಕಾರ್ಯದರ್ಶಿಯು ಪ್ರಾಧಿಕಾರದ ಅಧ್ಯಕ್ಷರ ಗಮನಕ್ಕೆ ತಂದಿರುವುದು ಗೊತ್ತಾಗಿದೆ.

ಕೋಲಾರದಲ್ಲಿ ಸಿಗದ ಸಹಕಾರ

ಕೋಲಾರ ಜಿಲ್ಲೆಯಲ್ಲಿ ಕಾನೂನು ವಿದ್ಯಾರ್ಥಿಗಳ ಸಹಾಯದಿಂದ ದತ್ತಾಂಶ ಸಂಗ್ರಹ ಸಮೀಕ್ಷೆ ಪೂರ್ಣಗೊಂಡಿದೆ. ಆದರೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ಜಿಲ್ಲಾ ಆಡಳಿತದಿಂದ ಸಮರ್ಪಕ ಸಹಕಾರ ದೊರೆಯುತ್ತಿಲ್ಲ ಎಂದು ಜಿಲ್ಲಾ ಸದಸ್ಯ ಕಾರ್ಯದರ್ಶಿ ವಿವರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಾಧಿಕಾರದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ವೇಣುಗೋಪಾಲ ಗೌಡ ಅವರು ‘ ಕೋಲಾರ ಜಿಲ್ಲೆ ಬರ ಪ್ರದೇಶವಾಗಿದ್ದು, ಬಡ ಜಿಲ್ಲೆಯಾಗಿಯೂ ಇದೆ ಎಂದು ಅಭಿಪ್ರಾಯಪಟ್ಟರು. ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಹೆಚ್ಚಿನ ಸಂಖ್ಯೆಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವಂತೆ ಹಾಗೂ ಸಮಸ್ಯೆಗಳನ್ನು ಗುರುತಿಸಿ ಸ್ಥಳದಲ್ಲಿಯೇ ಪರಿಹರಿಸಬೇಕು,’ ಎಂದು ನಿರ್ದೇಶಿಸಿರುವುದು ತಿಳಿದು ಬಂದಿದೆ.

 

 

ಅಧಿಕಾರಿಗಳಿಗೆ ಸಮರ್ಪಕ ಜ್ಞಾನವೇ ಇಲ್ಲ

ಶಿವಮೊಗ್ಗ ಜಿಲ್ಲೆಯಲ್ಲಿ ದುರ್ಬಲ ಮಕ್ಕಳು ಮತ್ತು ಅನಾಥ ಮಕ್ಕಳ ಸಮಸ್ಯೆಗಳ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (DWCD) ಹಾಗೂ ಇತರ ಇಲಾಖೆಗಳು ಸಮರ್ಪಕ ಸಹಕಾರ ನೀಡುತ್ತಿಲ್ಲ ಎಂದು ಹೇಳಿದರು. ಆಧಾರ್ ನೋಂದಣಿ ಕೇಂದ್ರಗಳ ಅಧಿಕಾರಿಗಳಿಗೆ ಇಂತಹ ಗಂಭೀರ ಸಮಸ್ಯೆಗಳ ಬಗ್ಗೆ ಸಮರ್ಪಕ ಜ್ಞಾನವಿಲ್ಲ. ಅನೇಕ ಇಲಾಖೆಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಸೌಲಭ್ಯಗಳು, ಗಂಭೀರ ಸಮಸ್ಯೆಗಳನ್ನು ಹೇಗೆ ನಿರ್ವಹಿಸಬೇಕು ಮತ್ತು ಫಲಾನುಭವಿಗಳಿಗೆ ಸೌಲಭ್ಯಗಳನ್ನು ಹೇಗೆ ಒದಗಿಸಬೇಕು ಎಂಬುದರ ಕುರಿತು ಸಮರ್ಪಕ ಮಾಹಿತಿ ಹೊಂದಿಲ್ಲ ಎಂದು ಜಿಲ್ಲಾ ಸದಸ್ಯ ಕಾರ್ಯದರ್ಶಿ ವಿವರಿಸಿರುವುದು ಗೊತ್ತಾಗಿದೆ.

 

 

ತುಮಕೂರಿನಲ್ಲಿ ನಿರ್ಮೂಲನವಾಗದ ಅನ್ಯಾಯಕರ ಪದ್ಧತಿ

ತುಮಕೂರು ಜಿಲ್ಲೆಯಲ್ಲಿ ನಾಗರೀಕರು ಗಂಭೀರ ರೋಗಗಳಿಂದ ಬಳಲುತ್ತಿದ್ದಾರೆ. ಅನೇಕ ನಾಗರಿಕರು ಸಮಯಕ್ಕೆ ಸರಿಯಾಗಿ ದಾಖಲೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇದು ಗಂಭೀರ ಸಮಸ್ಯೆಯಾಗಿದೆ ಎಂದು ಸ್ವತಃ ಪ್ರಾಧಿಕಾರದ ಅಧ್ಯಕ್ಷರೇ ಅಭಿಪ್ರಾಯಪಟ್ಟಿರುವುದು ವರದಿಯಿಂದ ಗೊತ್ತಾಗಿದೆ. ‘ ಇಂತಹ ಪ್ರಕರಣಗಳನ್ನು ತಕ್ಷಣ ಗುರುತಿಸಿ ಪರಿಹರಿಸಬೇಕು ಹಾಗೂ ಅನ್ಯಾಯಕರ ಪದ್ಧತಿಗಳನ್ನು ನಿರ್ಮೂಲನೆಗೊಳಿಸಲು ಎಲ್ಲರೂ ಕ್ರಮ ಕೈಗೊಳ್ಳಬೇಕು,’ ಎಂದು ನಿರ್ದೇಶಿಸಿರುವುದು ತಿಳಿದು ಬಂದಿದೆ.

 

 

ಉಡುಪಿಯಲ್ಲಿ ಇಲಾಖೆಗಳಲ್ಲಿ ಕಾಣದ ಸಮನ್ವಯತೆ

ಉಡುಪಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಇತರ ಸಂಬಂಧಿತ ಇಲಾಖೆಗಳ ಸಮನ್ವಯದಲ್ಲಿ ಇತ್ತೀಚೆಗೆ ಕಾನೂನು ಜಾಗೃತಿ ಮತ್ತು ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಗುರುತಿಸಲಾದ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ. ಆದರೆ ಇಲಾಖೆಗಳ ಸಮನ್ವಯ ತುಂಬಾ ಕಡಿಮೆಯಾಗಿದೆ ಎಂದು ಜಿಲ್ಲಾ ಸದಸ್ಯ ಕಾರ್ಯದರ್ಶಿ ಹೇಳಿರುವುದು ಗೊತ್ತಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಧಿಕಾರದ ಅಧ್ಯಕ್ಷರು ‘ಅಧಿಕಾರಿಗಳು ತಮ್ಮ ಮೇಲೆ ಯಾವುದೇ ಹೊಣೆಗಾರಿಕೆ ಇಲ್ಲವೆಂದು ಭಾವಿಸುತ್ತಿದ್ದಾರೆ. ಸಂಬಂಧಿತ ಇಲಾಖೆಯ ಗಮನಕ್ಕೆ ಅವರ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ತರಬೇಕು. ಯಾವುದೇ ಅಧಿಕಾರಿ/ಸಿಬ್ಬಂದಿ ಸಮಸ್ಯೆಗಳ ಅನುಷ್ಠಾನದಲ್ಲಿ ವಿಫಲವಾದರೆ ಅಥವಾ ಕಾರಣಗಳನ್ನು ನೀಡಿದರೆ, ಅವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸುವುದು ಅಥವಾ ಸಾರ್ವಜನಿಕ ಹಿತಾಸಕ್ತಿಗಾಗಿ ಅವರ ಇಲಾಖೆಯ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸುವ ಕುರಿತು ಎಚ್ಚರಿಕೆ ನೀಡಬೇಕು,’ ಎಂದು ನಿರ್ದೇಶಿಸಿರುವುದು ತಿಳಿದು ಬಂದಿದೆ.

 

 

ಯಾದಗಿರಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರೇ ಪ್ರೇಕ್ಷಕರು

ಯಾದಗಿರಿ ಜಿಲ್ಲೆಯಲ್ಲಿ ಆಯೋಜಿಸುವ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಶಾಲಾ ಮಕ್ಕಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರೇ ಪ್ರೇಕ್ಷಕರಾಗಿರುತ್ತಾರೆ. ಜನರು ಜಾಗೃತಿ ಕಾರ್ಯಕ್ರಮಗಳಿಗೆ ಹಾಜರಾಗಲು ಆಸಕ್ತಿ ತೋರುತ್ತಿಲ್ಲ. ಆದರೆ, ಅರ್ಹರಾಗಿದ್ದರೂ ಸಹ ಸಂಬಂಧಿತ ಇಲಾಖೆಯಿಂದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಸದಸ್ಯ ಕಾರ್ಯದರ್ಶಿ ವಿವರಿಸಿರುವುದು ಗೊತ್ತಾಗಿದೆ.

ಕೊಡಗು-ಮಡಿಕೇರಿಯಲ್ಲಿ  ವಲಸಿಗ ಕಾರ್ಮಿಕರು ಹೈರಾಣ

ಕೊಡಗು-ಮಡಿಕೇರಿ ಜಿಲ್ಲೆಯಲ್ಲಿ ಶ್ರೀಮಂತರು, ಬಡವರು, ಹಾದಿ ಹಾಗೂ ಜನಜಾತಿ ಸಮುದಾಯದವರು ವಾಸಿಸುತ್ತಿದ್ದಾರೆ. ಅನೇಕ ಕಾಫಿ/ಟೀ ತೋಟಗಳಲ್ಲಿ ಉತ್ತರ ಭಾರತದಿಂದ ಬಂದಿರುವ ವಲಸೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ತೋಟ ಮಾಲೀಕರು ಭದ್ರತಾ ಉದ್ದೇಶಕ್ಕಾಗಿ ವಲಸೆ ಕಾರ್ಮಿಕರ ದಾಖಲೆಗಳನ್ನು ಪಡೆದು ಅವರಿಗೆ ಉದ್ಯೋಗ ನೀಡಿದ್ದಾರೆ. ಇದರಿಂದ ಕಾರ್ಮಿಕರಿಗೆ ತಮ್ಮ ದಾಖಲೆಗಳನ್ನು ತೋಟ ಮಾಲೀಕರಿಂದ ಮರಳಿ ಪಡೆಯುವುದು ತುಂಬಾ ಕಷ್ಟವಾಗುತ್ತಿದೆ ಎಂದು ಪ್ರಾಧಿಕಾರದ ಜಿಲ್ಲಾ ಸದಸ್ಯ ಕಾರ್ಯದರ್ಶಿಗಳು ವಿವರಿಸಿದ್ದಾರೆ.

 

 

ಈ ಕಾರಣದಿಂದ ಕಾರ್ಮಿಕರು ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ಸಂಬಂಧ ಕಾರ್ಮಿಕರ ದಾಖಲೆಗಳನ್ನು ತೋಟ ಮಾಲೀಕರಿಂದ ಪಡೆಯಲು ಸಹಾಯ ಮಾಡುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿರುವುದು ಗೊತ್ತಾಗಿದೆ. ಈ ಬಗ್ಗೆ  ‘ಯಾರೂ ಮತ್ತೊಬ್ಬರ ದಾಖಲೆಗಳನ್ನು ತೆಗೆದುಕೊಳ್ಳಲು ಅಥವಾ ತಮ್ಮ ಬಳಿ ಇಟ್ಟುಕೊಳ್ಳಲು ಅಧಿಕಾರ ಹೊಂದಿಲ್ಲ ಮತ್ತು ಇದು ಕಾನೂನು ವಿರುದ್ಧವಾಗಿದೆ. ಯಾವುದೇ ವ್ಯಕ್ತಿಯ ಮೂಲ ದಾಖಲೆಗಳು ಅವರಲ್ಲಿಯೇ ಇರಬೇಕು. ಈ ವಿಷಯದಲ್ಲಿ ತೋಟ ಮಾಲೀಕರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಲು ಸಭೆ ಕರೆಯಲಾಗಿದ್ದು, ನಿರ್ಣಯ ಕೈಗೊಳ್ಳಬೇಕು,’ ಎಂದು ನಿರ್ದೇಶನ ನೀಡಿರುವುದು ಗೊತ್ತಾಗಿದೆ.

Hot this week

5 ವರ್ಷಕ್ಕಿಂತ ಹೆಚ್ಚಿನ ಅವಧಿಗೂ ಮೇಲ್ಪಟ್ಟು ಒಂದೇ ಸ್ಥಳದಲ್ಲಿ 17,842 ಅಧಿಕಾರಿ, ನೌಕರರು ಠಿಕಾಣಿ; ವರ್ಗಾವಣೆ ಮಾಡಿಲ್ಲವೇಕೆ?

ಬೆಂಗಳೂರು; ವಿಧಾನಸೌಧ, ವಿಕಾಸ ಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿರುವ ಕರ್ನಾಟಕ ಸರ್ಕಾರದ...

39,437 ಕೋಟಿ ರು ಸಾರ್ವಜನಿಕ ವೆಚ್ಚ; ಸಮಗ್ರ ಘನ ತ್ಯಾಜ್ಯ ನಿರ್ವಹಣೆ ಯೋಜನೆಯಲ್ಲಿ ಅಕ್ರಮ ಆರೋಪ, ಸಿಬಿಐ ತನಿಖೆಗೆ ಕೇಂದ್ರ ಸಚಿವೆ ಪತ್ರ

ಬೆಂಗಳೂರು; 39,437 ಕೋಟಿ ಸಾರ್ವಜನಿಕ ವೆಚ್ಚವನ್ನು ಒಳಗೊಂಡಿರುವ ಸಮಗ್ರ ಘನ ತ್ಯಾಜ್ಯ...
Please Scan to make Your Contribution

Topics

5 ವರ್ಷಕ್ಕಿಂತ ಹೆಚ್ಚಿನ ಅವಧಿಗೂ ಮೇಲ್ಪಟ್ಟು ಒಂದೇ ಸ್ಥಳದಲ್ಲಿ 17,842 ಅಧಿಕಾರಿ, ನೌಕರರು ಠಿಕಾಣಿ; ವರ್ಗಾವಣೆ ಮಾಡಿಲ್ಲವೇಕೆ?

ಬೆಂಗಳೂರು; ವಿಧಾನಸೌಧ, ವಿಕಾಸ ಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿರುವ ಕರ್ನಾಟಕ ಸರ್ಕಾರದ...

ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ; ಆರೋಪಿತರಿಗೆ ಮುಖ್ಯ ಇಂಜಿನಿಯರ್ ಹುದ್ದೆಗೆ ನೇಮಕ, ಲೋಕಾ ದಾಳಿಯನ್ನೇ ಅಣಕಿಸಿದ ಸರ್ಕಾರ

ಬೆಂಗಳೂರು;  ಆದಾಯಕ್ಕೂ  ಮೀರಿದ ಆಸ್ತಿ ಗಳಿಕೆ ಆರೋಪದಡಿಯಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ...

ಸಾರ್ವತ್ರಿಕ ರಜಾ ದಿನದ ವೇತನಕ್ಕೂ ಕತ್ತರಿ!; ಶಕ್ತಿ ಸೌಧದಲ್ಲೇ ಡೇಟಾ ಎಂಟ್ರಿ ಆಪರೇಟರ್‍‌ಗಳಿಗೆ ಶೋಷಣೆ, ದೌರ್ಜನ್ಯ ಆರೋಪ

ಬೆಂಗಳೂರು;  ಮುಖ್ಯಮಂತ್ರಿ ಸಚಿವಾಲಯವೂ ಸೇರಿದಂತೆ ಸಚಿವಾಲಯದ ಇತರೆ  ಕಚೇರಿಗಳಲ್ಲಿ ಹೊರಗುತ್ತಿಗೆಯಡಿಯಲ್ಲಿ  ಕಾರ್ಯನಿರ್ವಹಿಸುತ್ತಿರುವ...

Related Articles

Popular Categories

error: Content is protected !!