ಬೆಂಗಳೂರು; ವಿಧಾನಸೌಧ, ವಿಕಾಸ ಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿರುವ ಕರ್ನಾಟಕ ಸರ್ಕಾರದ ಸಚಿವಾಲಯ ಮತ್ತು ಇಲಾಖೆಗಳಲ್ಲಿ 5 ವರ್ಷಗಳಿಗಿಂತ ಹೆಚ್ಚಿನ ಅವಧಿಗೂ ಮೇಲ್ಪಟ್ಟು ಒಟ್ಟು 17,842 ಅಧಿಕಾರಿ, ನೌಕರರು ಒಂದೇ ಸ್ಥಳದಲ್ಲಿ ಠಿಕಾಣಿ ಹೂಡಿದ್ದಾರೆ. 5 ವರ್ಷ ಮೇಲ್ಪಟ್ಟಿದ್ದಲ್ಲಿ ಅವರನ್ನು ಆಯಾ ಇಲಾಖೆಯಿಂದ ಬೇರೆ ಇಲಾಖೆಗೆ ವರ್ಗಾವಣೆ ಮಾಡಬೇಕು. ಆದರೆ 5 ವರ್ಷಗಳಿಗಿಂತ ಹೆಚ್ಚಿನ ಅವಧಿಗೂ ಮೇಲ್ಪಟ್ಟು ಅಧಿಕಾರಿ ನೌಕರರು ಕಾರ್ಯನಿರ್ವಹಿಸುತ್ತಿದ್ದರೂ 17,842 ಅಧಿಕಾರಿ, ನೌಕರರನ್ನು ಕದಲಿಸಿಲ್ಲ.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಐದು ವರ್ಷಕ್ಕಿಂತ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ವರ್ಗಾಯಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಪರಿಶೀಲಿಸುತ್ತಿದೆ. ಈ ಸಂಬಂಧ ಅಧಿಕಾರಿ ನೌಕರರ ಪಟ್ಟಿಯನ್ನು ಸಲ್ಲಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸರ್ಕಾರದ ಎಲ್ಲಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳಿಗೆ ಸೂಚಿಸಿದೆ.
ಈ ಸಂಬಂಧ 2026ರ ಮೇ 26ರಂದು ಅನಧಿಕೃತ ಟಿಪ್ಪಣಿ ಹೊರಡಿಸಿದೆ. ಇದರ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಐದು ವರ್ಷಕ್ಕಿಮತ ಹೆಚ್ಚಿನ ಅವಧಿಗೂ ಮೇಲ್ಪಟ್ಟು ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಸಂಖ್ಯೆಯ ಮಾಹಿತಿಯನ್ನು ನೀಡಲಾಗಿದೆ. 2026-27ನೇ ಸಾಲಿನ ಸರ್ಕಾರಿ ನೌಕರರ ವರ್ಗಾವಣೆಗಳಿಗೆ ಸಂಬಂಧಿಸಿದಂಗತೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ವರ್ಗಾವಣೆ ಉದ್ದೇಶಕ್ಕಾಗಿ ಈಗಾಗಲೇ ಪ್ರತ್ಯೇಕ ಅಧಿನಿಯಮ, ನಿಯಮಗಳು ಅನ್ವಯವಾಗುವ ನೌಕರರಿಗೆ ಈ ಮಾರ್ಗಸೂಚಿಗಳು ಅನ್ವಯವಾಗುವುದಿಲ್ಲ.
ಈ ಆದೇಶದದ ಪ್ರಕಾರ ಸರ್ಕಾರಿ ನೌಕರನು ಒಂದು ಸ್ಥಳದಲ್ಲಿರಬಹುದಾದ ಕನಿಷ್ಟ ಅವಧಿಯನ್ನು ನಿಗದಿಪಡಿಸಲಾಗಿದೆ. ಆದೇಶದ ಕಂಡಿಕೆ 7 ರಲ್ಲಿರುವ ಅಂಶಗಳನ್ನು ಪರಿಶೀಲಿಸಿಕೊಂಡು ಸೂಕ್ತ ಕ್ರಮ ವಹಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರತಿಭಾ ಕೆ ಅವರು ಅನಧಿಕೃತ ಟಿಪ್ಪಣಿಯಲ್ಲಿ ಸೂಚಿಸಿರುವುದು ತಿಳಿದು ಬಂದಿದೆ.

5 ವರ್ಷಗಳಿಗಿಂತ ಹೆಚ್ಚು ಅವಧಿ ಮೇಲ್ಪಟ್ಟು ಕಾರ್ಯನಿರ್ವಹಿಸುತ್ತಿರುವ ಸಂಖ್ಯೆ ಪಟ್ಟಿ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ನೀಡಿರುವ ಪಟ್ಟಿಯ ಪ್ರಕಾರ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿಯೇ ಅತೀ ಹೆಚ್ಚು ಎಂದರೇ 4,061 ಅಧಿಕಾರಿ, ನೌಕರರು ಒಂದೇ ಸ್ಥಳದಲ್ಲಿ ಐದು ವರ್ಷಕ್ಕಿಂತ ಹೆಚ್ಚು ಅವಧಿ ಮೇಲ್ಪಟ್ಟು ಕಾರ್ಯನಿರ್ವಹಿಸುತ್ತಿದ್ದಾರೆ.

ಕಾಲೇಜು ಶಿಕ್ಷಣ ಇಲಾಖೆಯಲ್ಲಿ 1,898, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 1,097, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಝಡ್ ಎಚ್) 1,009, ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ 796, ಶಾಲಾ ಶಿಕ್ಷಣ ಇಲಾಖೆಯಲ್ಲಿ 769, ಡಿಪಿಎಆರ್ (ಲೆಕ್ಕಪತ್ರ ಶಾಖೆ) 717, ಪಶು ಸಂಗೋಪನೆಯಲ್ಲಿ 421,

ಲೋಕೋಪಯೋಗಿ ಇಲಾಖೆಯಲ್ಲಿ 384, ಆಯುರ್ವೇದ, ನ್ಯಾಚರೋಪತಿ, ಯುನಾನಿ, ಸಿದ್ಧ, ಹೋಮಿಯೋಪತಿ ಇಲಾಖೆಯಲ್ಲಿ 355, ಹೈಕೋರ್ಟ್ 349, ಪ್ರೌಢಶಿಕ್ಷಣದಲ್ಲಿ 314 ಮಂದಿ ಅಧಿಕಾರಿ, ನೌಕರರು ಒಂದೇ ಸ್ಥಳದಲ್ಲಿ 5 ವರ್ಷಕ್ಕಿಂತ ಹೆಚ್ಚಿನ ಅವಧಿವರೆಗೆ ಕಾರ್ಯನಿರ್ವಹಿಸುತ್ತಿರುವುದು ಪಟ್ಟಿಯಿಂದ ತಿಳಿದು ಬಂದಿದೆ.
ಕರ್ನಾಟಕ ನೀರಾವರಿ ನಿಗಮದಲ್ಲಿ 302, ಕೃಷಿ ಇಲಾಖೆಯಲ್ಲಿ 265, ತೋಟಗಾರಿಕೆಯಲ್ಲಿ 232, ಪೊಲೀಸ್ ಇಲಾಖೆಯಲ್ಲಿ 225, ಕಾವೇರಿ ನೀರಾವರಿ ನಿಗಮದಲ್ಲಿ 184, ಕೃಷ್ಣ ಭಾಗ್ಯ ಜಲನಿಗಮದಲ್ಲಿ 145, ಸಣ್ಣ ನೀರಾವರಿಯಲ್ಲಿ 122, ವೈದ್ಯಕೀಯ ಶಿಕ್ಷಣ ಇಲಾಖೆಯ ಸಂಸ್ಥೆಗಳಲ್ಲಿ 144 ಮಂದಿ ಅಧಿಕಾರಿ, ನೌಕರರು ಒಂದೇ ಸ್ಥಳದಲ್ಲಿ 5 ವರ್ಷಕ್ಕಿಂತ ಹೆಚ್ಚಿನ ಅವಧಿವರೆಗೆ ಕಾರ್ಯನಿರ್ವಹಿಸುತ್ತಿರುವುದು ಪಟ್ಟಿಯಿಂದ ಗೊತ್ತಾಗಿದೆ.

ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025ರಲ್ಲಿ ಒಂದೇ ಇಲಾಖೆಯಲ್ಲಿ ಗ್ರೂಪ್ ಎ ಸೇರಿದಂತೆ ಇನ್ನಿತರೆ ವೃಂದದ 705 ಅಧಿಕಾರಿಗಳು 5 ವರ್ಷಗಳಿಂದ ಠಿಕಾಣಿ ಹೂಡಿದ್ದಾರೆ ಎಂದು ವಿಧಾನಸಭೆಗೆ ಪಟ್ಟಿಯನ್ನು ಒದಗಿಸಿದ್ದರು. ನೀತಿ ನಿರ್ಣಯವನ್ನು ನಿರೂಪಿಸುವ ಮಾತೃ ಸಂಸ್ಥೆಯಾಗಿರುವ ಸಚಿವಾಲಯದಲ್ಲಿಯೇ ದೀರ್ಘಾವಧಿಯಿಂದ ಒಂದೇ ಇಲಾಖೆಯಲ್ಲಿ ಬಿಡಾರ ಹೂಡಿದ್ದರು. ಇದರಿಂದಾಗಿ ಯಾವುದೇ ಶಿಫಾರಸ್ಸು ಇಲ್ಲದೇ ಇನ್ನಿತರೆ ಪ್ರತಿಭಾವಂತ ನೌಕರರು ಬೇರೆ ಬೇರೆ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ವಂಚಿತರಾಗಿದ್ದರು. ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಆಡಳಿತದಲ್ಲಿ ಏಕರೂಪತೆ ಅಳವಡಿಸಿಕೊಳ್ಳುವಲ್ಲಿ ಸರ್ಕಾರವು ವಿಫಲವಾಗಿತ್ತು.

ಸಚಿವಾಲಯದ ಒಂದೇ ಇಲಾಖೆಯಲ್ಲಿ 5 ವರ್ಷಗಳಿಗೂ ಮೇಲ್ಪಟ್ಟು ಅಧಿಕಾರಿ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದರೂ ಸಹ ಅವರನ್ನು ವರ್ಗಾವಣೆ ಮಾಡಿಲ್ಲ. ಹಲವು ಅಧಿಕಾರಿ, ನೌಕರರು 2014ರಿಂದಲೂ ವಿಧಾನಸೌಧದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ್‍ಯಾರು ವಿಧಾನಸೌಧ, ವಿಕಾಸ ಸೌಧ ಮತ್ತು ಬಹುಮಹಡಿ ಬಿಟ್ಟು ಕದಲಿಲ್ಲ ಅಥವಾ ಅವರನ್ನು ಯಾವ ಸರ್ಕಾರವೂ ಕದಲಿಸುವ ಗೋಜಿಗೂ ಹೋಗಿರಲಿಲ್ಲ.
ಬೆರಳಚ್ಚುಗಾರ, ಶೀಘ್ರಲಿಪಿಗಾರರಾಗಿ ನೇಮಕವಾಗಿದ್ದವರು ಸಚಿವಾಲಯದ ಒಂದೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಲೇ ಸರ್ಕಾರದ ಅಪರ ಕಾರ್ಯದರ್ಶಿ ಹುದ್ದೆಯ ತನಕವೂ ಮುಂಬಡ್ತಿ ಹೊಂದಿದ್ದಾರೆ. ಅದೇ ಇಲಾಖೆಯಲ್ಲಿ ಕೊಠಡಿಗಳನ್ನು ಬದಲಾಯಿಸುತ್ತ, ಸೌಲಭ್ಯಗಳನ್ನು ಪಡೆಯುತ್ತಿದ್ದಾರೆಯೇ ಬೇರೆ ಇಲಾಖೆಗಳಿಗೆ ವರ್ಗಾವಣೆಯನ್ನೇ ಮಾಡಿಲ್ಲ. ಈ ಪೈಕಿ ಹಲವು ಅತ್ಯಂತ ಪ್ರಭಾವಿ ಅಧಿಕಾರಿ ನೌಕರರಿದ್ದಾರೆ.
ಇನ್ನು ಕೆಲವು ಅಧಿಕಾರಿ ನೌಕರರು ಸಚಿವಾಲಯದಲ್ಲಿ 2018ರಿಂದ ಒಂದು ಹುದ್ದೆಯಲ್ಲಿ ಹಾಗೂ ಒಂದೇ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಂದಿನ ಹುದ್ದೆಗೆ ಮುಂಬಡ್ತಿ ಹೊಂದಿದ ನಂತರವೂ ಅದೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
5 ವರ್ಷಗಳಿಂದ ಠಿಕಾಣಿ ಹೂಡಿದ್ದ ಅಧಿಕಾರಿಗಳ ಪಟ್ಟಿ
ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಅನಂತ್ ಎನ್ ಕಾಸ್ಕರ್ 2019ರ ಸೆ.25 ರಂದು ಸರ್ಕಾರದ ಉಪ ಕಾರ್ಯದರ್ಶಿಯಾಗಿದ್ದರು. 2020ರ ಅಕ್ಟೋಬರ್ 29 ರಿಂದ ಜಂಟಿ ಕಾರ್ಯದರ್ಶಿಯಾಗಿದ್ದಾರೆ. 2023ರ ನವೆಂಬರ 23ರಿಂದಸರ್ಕಾರದ ಅಪರ ಕಾರ್ಯದರ್ಶಿಯಾಗಿ ಸಚಿವಾಲಯದಲ್ಲಿಯೇ ಮುಂದುವರೆದಿದ್ದಾರೆ ಎಂದು ಪಟ್ಟಿಯಿಂದ ತಿಳಿದು ಬಂದಿತ್ತು.

ಆರ್ ಚಂದ್ರಶೇಖರ ಅವರು 2021ರ ಜುಲೈ 29ರಂದು ಸರ್ಕಾರದ ಜಂಟಿ ಕಾರ್ಯದರ್ಶಿಯಾಗಿದ್ದರು. 2021ರ ನವೆಂಬರ್ 5ರಿಂದ ಸರ್ಕಾರದ ಅಪರ ಕಾರ್ಯದರ್ಶಿಯಾಗಿ ಮುಂದುವರೆದಿದ್ದಾರೆ. ಸದ್ಯ ಸಚಿವ ಸಂಪುಟ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಲಿತ ಅವರು 2018ರ ಏಪ್ರಿಲ್ 24ರಿಂದ ಸರ್ಕಾರದ ಉಪ ಕಾರ್ಯದರ್ಶಿಯಾಗಿದ್ದಾರೆ. 2021ರ ಜುಲೈ 29ರಿಂದ ಸರ್ಕಾರದ ಜಂಟಿ ಕಾರ್ಯದರ್ಶಿ, 2025ರ ಫೆ.14ರಿಂದಸರ್ಕಾರದ ಅಪರ ಕಾರ್ಯದರ್ಶಿಯಾಗಿ ಸಚಿವಾಲಯದಲ್ಲಿಯೇ ಮುಂದುವರೆದಿದ್ದರು.
ಶೋಭಾ ಎಚ್ ಎ ಅವರು 2014ರಿಂದಲೂ ಸಚಿವಾಲಯದ ಆರ್ಥಿಕ ಇಲಾಖೆಯಲ್ಲೇ ಠಿಕಾಣಿ ಹೂಡಿದ್ದಾರೆ. 2014 ಆಗಸ್ಟ್ 1ರಂದು ಸರ್ಕಾರದ ಅಧೀನ ಕಾರ್ಯದರ್ಶಿ ವೃಂದಕ್ಕೆ ಮುಂಬಡ್ತಿ ಹೊಂದಿದ್ದರು. 2019ರ ಜೂನ್ 29ರಂದು ಸರ್ಕಾರದ ಉಪ ಕಾರ್ಯದರ್ಶಿಯಾಗಿ ಮುಂಬಡ್ತಿ ಹೊಂದಿದ್ದರು. 2022ರ ಆಗಸ್ಟ್ 22ರಂದು ಸರ್ಕಾರದ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿವರ್ವಹಿಸುತ್ತಿದ್ದರು.

ಉಮಾ ಕೆ ಅವರು 2020ರ ಮೇ 7ರಂದು ಸರ್ಕಾರದ ಉಪ ಕಾರ್ಯದರ್ಶಿಯಾಗಿದ್ದಾರೆ. 2023ರ ಆಗಸ್ಟ್ 1ರಿಂದ ಸರ್ಕಾರದ ಜಂಟಿ ಕಾರ್ಯದರ್ಶಿಯಾಗಿ ಮುಂಬಡ್ತಿ ಹೊಂದಿ ಆರ್ಥಿಕ ಇಲಾಖೆಯಲ್ಲಿ ಮುಂದುವರೆದಿದ್ದಾರೆ. ವನಿತ ಎನ್ ಇವರು 2015ರಿಂದಲೂ ಸಚಿವಾಲಯ ಬಿಟ್ಟು ಕದಲಿರಲಿಲ್ಲ. 2025 ಮಾರ್ಚ್ 9ರಂದು ಶಾಖಾಧಿಕಾರಿ ಹುದ್ದೆಗೆ ಮುಂಬಡ್ತಿ ಹೊಂದಿದ್ದರು. 2019ರ ಸೆ.13ರಂದು ಸರ್ಕಾರದ ಅಧೀನ ಕಾರ್ಯದರ್ಶಿ ಹುದ್ದೆಗೆ, 2024ರ ಜೂನ್ 28ರಂದು ಸರ್ಕಾರದ ಉಪ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ಹೊಂದಿದ್ದರು.
ಸತೀಶ್ ಎನ್ ಅವರು 2016ರಿಂದಲೂ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2016ರ ಆಗಸ್ಟ್ 17ರಂದು ಅಧೀನ ಕಾರ್ಯದರ್ಶಿಯಾಗಿದ್ದರು. 2021ರ ಮಾರ್ಚ್ 20ರಿಂದ ಸರ್ಕಾರದ ಉಪ ಕಾರ್ಯದರ್ಶಿಯಾಗಿ ಮುಂದುವರೆದಿದ್ದರು. ಬಿ ಎಸ್ ವಿರೂಪಾಕ್ಷ ಅವರು 2018ರಲ್ಲಿ ಲೋಕೋಪಯೋಗಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯಾಗಿದ್ದರು. 2022ರ ಆಗಸ್ಟ್ 12ರಂದು ಸರ್ಕಾರದ ಉಪ ಕಾರ್ಯದರ್ಶಿಯಾಗಿ ಮುಂದುವರೆದಿದ್ದರು.

ಗೋಪಿಚಂದ್ರ ಎಸ್ ಅವರು ಆರ್ಥಿಕ ಇಲಾಖೆಗೆ 1991ರ ಜೂನ್ 30ರಂದು ಬೆರಳಚ್ಚುಗಾರರಾಗಿ ನೇಮಕಗೊಂಡಿದ್ದರು. 1995ರ ಏಪ್ರಿಲ್ 24ರಂದು ಶೀಘ್ರಲಿಪಿಗಾರರಾಗಿ ಬಡ್ತಿ ಹೊಂದಿದ್ದರು. 2015ರ ಫೆ. 20ರಂದು ಶಾಖಾಧಿಕಾರಿಯಾಗಿದ್ದರು. 2018ರ ಏಪ್ರಿಲ್ 24ರಂದು ಸರ್ಕಾರದ ಅಧೀನ ಕಾರ್ಯದರ್ಶಿ ಹುದ್ದೆಗೇರಿದ್ದರು. 2023ರ ಮಾರ್ಚ್ 27ರಂದು ಸರ್ಕಾರದ ಉಪ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ಹೊಂದಿ ಕಾರ್ಯನಿರ್ವಹಿಸುತ್ತಿದ್ದರು.
ಗಾಯತ್ರಿ ಕೆ ಇವರು 2015ರ ಫೆ.23ರಂದು ಶಾಖಾಧಿಕಾರಿ ಹುದ್ದೆಗೆ ಮುಂಬಡ್ತಿ ಹೊಂದಿದ್ದರು. 2019ರ ಸೆ.13ರಂದು ಸರ್ಕಾರದ ಅಧೀನ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ಹೊಂದಿದ್ದರು. 2023ರ ನವೆಂಬರ್ 23ರಂದು ಉಪ ಕಾರ್ಯದರ್ಶಿಯಾಗಿ ಮುಂಬಡ್ತಿ ಹೊಂದಿ ಆರ್ಥಿಕ ಇಲಾಖೆಯಲ್ಲಿಯೇ ಮುಂದುವರೆದಿದ್ದರು.

ಮಂಜುಳ ನಟರಾಜ್ ಅವರು 2015ರ ಫೆ.20ರಂದು ಶಾಖಾಧಿಕಾರಿಯಾಗಿ ಮುಂಬಡ್ತಿ ಹೊಂದಿದ್ದರು. 2019ರ ಸೆ.13ರಂದು ಸರ್ಕಾರದ ಅಧೀನ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ಪಡೆದಿದ್ದರು.2024ರ ಆಗಸ್ಟ್ 13ರಂದುಉಪ ಕಾರ್ಯದರ್ಶಿಯಾಗಿ ಮುಂಬಡ್ತಿ ಹೊಂದಿದ್ದಾರೆ. ಲಕ್ಷ್ಮಿ ವಿ ಇವರು 2001ರಿಂದಲೂ ವಿಧಾನಸೌಧದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದರು. 2001ರ ಜನವರಿ 15ರಂದು ಶೀಘ್ರಲಿಪಿಗಾರ್ತಿಯಾಗಿ ನೇಮಕವಾಗಿದ್ದರು. 2012ರಿಂದ ಹಿರಿಯ ಶೀಘ್ರಲಿಪಿಗಾರ್ತಿ 2014ರ ಆಗಸ್ಟ್ 11ರಿಂದ ಪತ್ರಾಂಕಿತ ಆಪ್ತ ಸಹಾಯಕರು, 2018ರ ಏಪ್ರಿಲ್ 2ರಿಂದ ಆಪ್ತ ಕಾರ್ಯದರ್ಶಿ -2, 2021ರ ಮೇ 29ರಿಂದಾಪ್ತ ಕಾರ್ಯದರ್ಶಿ ಗ್ರೇಡ್ 1 ಆಗಿ ಕೆಲಸ ಮಾಡುತ್ತಿರುವುದು ಪಟ್ಟಿಯಿಂದ ತಿಳಿದು ಬಂದಿದೆ.
ಶಶಿಕಲಾ ಜಿ ಇವರು 2007ರಿಂದಲೂ ವಿಧಾನಸೌಧದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. 2007ರ ಡಿಸೆಂಬರ್ 15ರಿಂದ ಶೀಘ್ರಲಿಪಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಇವರು 2013ರ ಮಾರ್ಚ್ 27ರಿಂದ ಹಿರಿಯ ಶೀಘ್ರಲಿಪಿಗಾರರಾಗಿದ್ದರು. 2016ರಲ್ಲಿ ಆರ್ಥಿಕ ಇಲಾಖೆಗೆ ಪತ್ರಾಂಕಿತ ಆಪ್ತ ಸಹಾಯಕರು, 2019ರ ಸೆ.12ರಿಂದ ಆಪ್ತ ಕಾರ್ಯದರ್ಶಿ (ಗ್ರೇಡ್ 2), 2022ರ ಡಿಸೆಂಬರ್ 15ರಿಂದ ಆಪ್ತ ಕಾರ್ಯದರ್ಶಿ (ಗ್ರೇಡ್ 1) ಹುದ್ದೆಯಲ್ಲಿ ಮುಂದುವರೆದಿದ್ದರು.

ಎ ಎನ್ ವಿರುಪಾಕ್ಷ ಇವರು ಸಿಬ್ಬಂದಿ ಸುಧಾರಣೆ ಆಡಳಿತ ಇಲಾಖೆಯಲ್ಲಿ 2016ರಿಂದ ಶಾಖಾಧಿಕಾರಿಯಾಗಿದ್ದರು. 2020ರಿಂದ ಅಧೀನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. 2015ರಿಂದ ಶಾಖಾಧಿಕಾರಿಯಾಗಿದ್ದ ಜಿ ಆರ್ ಸಂದೇಶ ಅವರು 2020ರಿಂದ ಅಧೀನ ಕಾರ್ಯದರ್ಶಿಯಾಗಿ ಮುಂದುವರೆದಿದ್ದರು. ಎಸ್ ನಾಗರತ್ನ ಅವರು (2015) ತಿಪ್ಪೇಸ್ವಾಮಿ (2019), ನಾಗರತ್ನ ಸಿ (2016) ವೀರಭದ್ರ (2016), ನಾಗರತ್ನ ವಿ ಪಾಟೀಲ್ (2016) ಚಂದ್ರಕಲಾ ಎಸ್ ಎನ್ (2018) ಇವರು ವಿಧಾನಸೌಧದಲ್ಲೇ ಠಿಕಾಣಿ ಹೂಡಿದ್ದರು.

ಆರ್ಥಿಕ ಇಲಾಖೆ
ಕವಿತಾ ಎಲ್ (2016ರಿಂದ), ನೇತ್ರಪ್ರಭಾ ಎಂ ದಯಾಪುಲೆ (2016ರಿಂದ), ಎಸ್ ಬಿ ಸತೀಶ್ (2015) ಕಾಂತಮ್ಮ ಎನ್ ಎಂ (2018) ಎಂ ರಾಜಮ್ಮ (2020) ಹೆಚ್ ಅರ್ ಲಲಿತಾ (2016), ಎಸ್ ಹರೀಶ್ (2016) ಅಜಯ್ ಎಸ್ ಕೊರಡೆ (2019) ನಾಗರತ್ನ ಕೆ ಎಸ್ (2018) ಮಾಯಪ್ಪ ಎಚ್ ಸಂಗಣ್ಣವರ್ (2018) ಬಸವರಾಜ ಎಂ (2019) ಎಂಕಟೇಶ್ ಎಸ್ ಎನ್ (2018) ಅವರು ಒಂದೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಪಟ್ಟಿಯಿಂದ ಗೊತ್ತಾಗಿತ್ತು.
ಕಂದಾಯ ಇಲಾಖೆಯ ವಿಮಲಮ್ಮ ಸಿ ಅವರು 2016ರಲ್ಲಿ ಶಾಖಾಧಿಕಾರಿಯಾಗಿದ್ದರು. 2021ರಿಂದ ಅಧೀನ ಕಾರ್ಯದರ್ಶಿಯಾಗಿದ್ದಾರೆ. ಶಾಲಿನಿ ಹೆಗಡೆ (ವಿದ್ಯುನ್ಮಾನ ಮಾಹಿತಿ, ತಂತ್ರಜ್ಞಾನ ಜೈವಿಕ ಇಲಾಯಲ್ಲಿ 2020ರಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ. ನಗರಾಭಿವೃದ್ಧಿ ಇಲಾಖೆಯಲ್ಲಿ ಲಕ್ಷ್ಮಿ ಸಾಗರ 2019ರಿಂದ ನಿಯೋಜನೆ ಮೇರೆಗೆ ಸರ್ಕಾರದ ಅಧೀನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಪಟ್ಟಿಯಿಂದ ತಿಳಿದು ಬಂದಿತ್ತು.

2019 ರಿಂದ ವನಜ ಕೆ ಎನ್ (ಒಳಾಡಳಿತ ಇಲಾಖೆ) 2016ರಿಂದ, ಶ್ಯಾಮ್ ಹೊಳ್ಳ ಜಿ (ಒಳಾಡಳಿತ ) 2015ರಿಂದ ಪಿ ಸತ್ಯಭಾಮ (ಕೃಷಿ) 2020ರಿಂದ ಹೇಮಾವತಿ (ವಸತಿ) 2020ರಿಂದ, ನರಸಿಂಹಮೂರ್ತಿ (ಸಮಾಜ ಕಲ್ಯಾಣ) 2020 ರಿಂದ, ಎಂ ಜೆಸಿಂತ (ವಾರ್ತಾ) 2020ರಿಂದ, ವೇದಾವತಿ (ಸಾರಿಗೆ) ಆಪ್ತ ಕಾರ್ಯದಶರ್ಶಿ ಗ್ರೇಡ್ 2 ಇವರು ಸಾರಿಗೆ ಇಲಾಖೆಯಲ್ಲಿಇ ಪತ್ರಾಂಕಿತ ಅಪ್ತ ಸಹಾಯಕರಾಗಿ ಕಾರ್ಯಿರ್ವಹಿಸಿದ್ದಾರೆ. ಆನಂತರ ಆಪ್ತ ಕಾರ್ಯದರ್ಶಿ (ಗ್ರೇಡ್ 2) ವೃಂದಕ್ಕೆ ಮುಂಬಡ್ತಿ ಹೊಂದಿದ ನಂತರ ಅದೇ ಇಲಾಖೆಯಲ್ಲಿ ಮುಂದುವರೆದಿದ್ದರು.

ಧರ್ಮಶೆಟ್ಟಿ ಆಪ್ತ ಕಾರ್ಯದರ್ಶಿ ಗ್ರೇಡ್ 2 (ಆರ್‍ಡಿಪಿಆರ್)ನಲ್ಲಿ ಪತ್ರಾಂಕಿತ ಆಪ್ತ ಸಹಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು. ನಂತರ ಆಪ್ತ ಕಾರ್ಯದರ್ಶಿ ಗ್ರೇಡ್ 2 ವೃಂದಕ್ಕೆ ಮುಂಡ್ತಿ ಹೊಂದಿದ ನಂತರ ಅದೇ ಇಲಾಖೆಯಲ್ಲಿ ಮುಂದುವರೆಯುತ್ತಿರುವುದು ಪಟ್ಟಿಯಿಂದ ತಿಳಿದು ಬಂದಿತ್ತು.




