ಗೋಸಂರಕ್ಷಣೆ ಕಾಯ್ದೆ ಜಾರಿಯಾದರೂ ಜಾನುವಾರು, ಆಹಾರ ಖರೀದಿಗೆ ಬಿಡಿಗಾಸಿನ ಅನುದಾನವನ್ನೂ ನೀಡಿಲ್ಲ

photo credit;indiatimes

ಬೆಂಗಳೂರು; ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ಅತ್ಯಾಸಕ್ತಿ ಮತ್ತು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ರಾಜ್ಯ ಬಿಜೆಪಿ ಸರ್ಕಾರವು ಜಾನುವಾರುಗಳ ಆಹಾರ ಖರೀದಿ ಮತ್ತು ಜಾನುವಾರುಗಳ ಖರೀದಿಗೆ ಒಂದೇ ಒಂದು ಯೋಜನೆಯನ್ನೂ ರೂಪಿಸಿಲ್ಲ. ಹಾಗೆಯೇ ಹಸುಗಳನ್ನು ಖರೀದಿಸಲು ಕಳೆದ ವರ್ಷದಲ್ಲಿ ಬಿಡಿಗಾಸಿನ ಅನುದಾನವನ್ನೂ ನೀಡಿಲ್ಲ ಎಂದು ಅಧಿಕೃತವಾಗಿ ಒಪ್ಪಿಕೊಂಡಿದೆ.

 

ಜಾನುವಾರುಗಳಿಗೆ ಆಹಾರ ಖರೀದಿ ಮತ್ತು ಜಾನುವಾರುಗಳ ಖರೀದಿ ಸಂಬಂಧ ವಿಧಾನಪರಿಷತ್‌ ಸದಸ್ಯ ಎಸ್‌ ರವಿ ಅವರು ಕೇಳಿದ್ದ ಪ್ರಶ್ನೆಗಳಿಗೆ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ಅವರು 2022ರ ಮಾರ್ಚ್‌ 23ರಂದು ಈ ಉತ್ತರ ಒದಗಿಸಿದ್ದಾರೆ. ಉತ್ತರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ರೈತಾಪಿ ವರ್ಗಕ್ಕೆ ಜಾನುವಾರಗಳ ಆಹಾರ ಖರೀದಿಸಲು ಯಾವುದೆ ಯೋಜನೆಗಳನ್ನು ಸರ್ಕಾರದಿಂದ ರೂಪಿಸಿಲ್ಲ. ಜಾನುವಾರುಗಳು ಮರಣ ಹೊಂದಿದ ಸಂದರ್ಭದಲ್ಲಿ ರೈತಾಪಿ ವರ್ಗದವರು ಜಾನುವಾರುಗಳನ್ನು ಖರೀದಿಸಲು ಸಹಾಯಧ ನೀಡುವ ಯಾವುದೇ ಯೋಜನೆಗಳು ಜಾರಿಯಲ್ಲಿರುವುದಿಲ್ಲ,’ ಎಂದು ಉತ್ತರದಲ್ಲಿ ಮಾಹಿತಿ ಒದಗಿಸಿದ್ದಾರೆ.

 

ಹೊಸನಗರದ ರಾಮಚಂದ್ರಾಪುರ ಮಠ ಸೇರಿದಂತೆ ಇನ್ನಿತರೆ ಮಠ, ಟ್ರಸ್ಟ್‌ಗಳ ಅಡಿಯಲ್ಲಿರುವ ಗೋ ಶಾಲೆಗಳಿಗೆ ಲಕ್ಷಾಂತರ ರುಪಾಯಿ ಅನುದಾನ ಒದಗಿಸಿರುವ ಸರ್ಕಾರವು ಜಾನುವಾರು ಖರೀದಿ ಮತ್ತು ಜಾನುವಾರುಗಳಿಗೆ ಆಹಾರ ಖರೀದಿಸಲು ಯಾವುದೇ ಯೋಜನೆಯನ್ನಾಗಲೀ, ಬಿಡಿಗಾಸಿನ ಅನುದಾನವನ್ನಾಗಲೀ ನೀಡದಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಅಲ್ಲದೆ ಕೇಂದ್ರ ಪುರಸ್ಕೃತ ಯೋಜನೆ ರಾಷ್ಟ್ರೀಯ ಗೋಕುಲ್‌ ಮಿಷನ್‌, ಜಾನುವಾರು ಅಭಿವೃದ್ಧಿ ಸಂಸ್ಥೆ, ರಾಷ್ಟ್ರೀಯ ಜಾನುವಾರು ಮಿಷನ್‌ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಕೋಟ್ಯಂತರ ಅನುದಾನ ಪಡೆಯುತ್ತಿರುವ ರಾಜ್ಯ ಸರ್ಕಾರವು ಜಾನುವಾರು ಖರೀದಿ ಮತ್ತು ಜಾನುವಾರುಗಳಿಗೆ ಆಹಾರ ಖರೀದಿಗೆ ಅನುದಾನ ನೀಡದೇ ಗೋ ಸಂರಕ್ಷಣಾ ಕಾಯ್ದೆ ಜಾರಿಗೆ ಕಟ್ಟುನಿಟ್ಟಿನ ಕ್ರಮ ವಹಿಸುತ್ತಿರುವುದು ಗೋವುಗಳ ಮೇಲಿನ ಪ್ರೇಮಕ್ಕೆ ಕನ್ನಡಿ ಹಿಡಿದಂತಾಗಿದೆ.

 

ರಾಜ್ಯದಲ್ಲಿ ಹಸುಗಳನ್ನು ಖರೀದಿಸಲು 2014-15ನೇ ಸಾಲಿನಿಂದ ರೈತರಿಗೆ ಸಹಾಯ ಧನ ನೀಡಲಾಗುತ್ತಿತ್ತು. ವಿಶೇಷ ಘಟಕ, ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಿಗೆ ಜಾನುವಾರು ಖರೀದಿಸಲು ಸಹಾಯ ಧನ ನೀಡಲಾಗುತ್ತಿತ್ತು. ಹೈನು ಘಟಕದಡಿಯಲ್ಲಿ 2018-19ರಲ್ಲಿ ಒಟ್ಟು 5,676 ಫಲಾನುಭವಿಗಳಿಗೆ 11,352 ಜಾನುವಾರು ಖರೀದಿಸಲು 4171.5 ಲಕ್ಷ ರು., 2019-20ರಲ್ಲಿ 1,207 ಫಲಾನುಭವಿಗಳಿಗೆ 2,414 ಜಾನುವಾರು ಖರೀದಿಸಲು 454.7 ಲಕ್ಷ ರು. ನೀಡಲಾಗಿತ್ತು. ಆದರೆ 2020-21ರಲ್ಲಿ ಬಿಡಿಗಾಸಿನ ಅನುದಾನ ಒದಗಿಸಿಲ್ಲ ಎಂಬುದು ಉತ್ತರದಿಂದ ತಿಳಿದು ಬಂದಿದೆ.

 

 

ರೈತರು ದಿನನಿತ್ಯ ಜಾನುವಾರುಗಳಿಗೆ ನೀಡುವ ಮೇವು, ಹಿಂಡಿ, ಬೂಸ, ಜೋಳದ ಹಿಟ್ಟು, ಕಡಲೆಹೊಟ್ಟು ಇತ್ಯಾದಿಗಳ ಬೆಲೆ ಗಗನಕ್ಕೇರಿದೆ. ದನ ಕರುಗಳನ್ನು ಹೊಂದಿರುವ ರೈತಾಪಿ ವರ್ಗವು ಈ ಪದಾರ್ಥಗಳನ್ನು ಕೊಳ್ಳಲು ಪರದಾಡಬೇಕಾದ ಸ್ಥಿತಿ ಇದೆ. ಇದು ಸರ್ಕಾರದ ಗಮನದಲ್ಲೂ ಬಂದಿದೆ. ಆದರೆ ಜಾನುವಾರುಗಳ ಆಹಾರ ಖರೀದಿಸಲು ರೈತಾಪಿ ವರ್ಗಕ್ಕೆ ಯೋಜನೆಗಳನ್ನು ರೂಪಿಸಿಲ್ಲ.

 

ಅದೇ ರೀತಿ ಜಾನುವಾರುಗಳ ಬೆಲೆಯೂ ಬಹಳ ಹೆಚ್ಚಳವಾಗಿದೆ. ಒಂದು ವೇಳೆ ಯಾವುದಾದರೂ ಖಾಯಿಲೆಗಳಿಂದ ಜಾನುವಾರುಗಳು ಮರಣ ಹೊಂದಿದರೆ ಜಾನುವಾರುಗಳನ್ನು ಮತ್ತೆ ಖರೀದಿಸಲು ಮತ್ತೆ ಸಾಲ ಮಾಡಬೇಕಾದ ದುಸ್ಥಿತಿಯಲ್ಲಿದೆ. ಆದರೂ ರೈತಾಪಿ ವರ್ಗವು ಜಾನುವಾರುಗಳನ್ನು ಖರೀದಿಸಲು ಸಹಾಯ ಧನ ನೀಡುವ ಯಾವುದೇ ಯೋಜನೆಗಳನ್ನೂ ಜಾರಿಗೊಳಿಸಿಲ್ಲ.

 

ಕಳೆದ 3 ವರ್ಷಗಳಲ್ಲಿ ಗೋವು ಸಾಗಾಟಕ್ಕೆ ಸಂಬಂಧಿಸಿದಂತೆ ಒಟ್ಟು 1,010 ಪ್ರಕರಣಗಳು ದಾಖಲಾಗಿವೆ. 2019ರಲ್ಲಿ 245, 2020ರಲ್ಲಿ 354, 2021ರಲ್ಲಿ 413 ಪ್ರಕರಣಗಳು ದಾಖಲಾಗಿವೆ.
ದಕ್ಷಿಣ ಕನ್ನಡದಲ್ಲಿ 40, ಹಾಸನದಲ್ಲಿ 43, ಕೋಲಾರದಲ್ಲಿ 65, ಉತ್ತರ ಕನ್ನಡದಲ್ಲಿ 2020ರಲ್ಲಿ 54, 2021ರಲ್ಲಿ 41, ಉಡುಪಿಯಲ್ಲಿ 17, ಕೊಡಗು 18, ಚಿತ್ರದುರ್ಗದಲ್ಲಿ 12 ಪ್ರಕರಣಗಳು ದಾಖಲಾಗಿರುವುದು ಉತ್ತರದಿಂದ ಗೊತ್ತಾಗಿದೆ.

 

ಇನ್ನು ರಾಜ್ಯದಲ್ಲಿ 197 ಗೋ ಶಾಲೆಗಳು ಖಾಸಗಿ ವಲಯದಲ್ಲಿವೆ. ಉತ್ತರ ಕನ್ನಡದ ಕುಮಟಾದಲ್ಲಿರುವ ಅಮೃತಧಾರಾ ಗೋ ಶಾಲೆ, ಸಿದ್ದಾಪುರದ ಅಮೃತಧಾರ (ಗೋಸ್ವರ್ಗ) ಸೇರಿದಂತೆ ರಾಜ್ಯದ ಖಾಸಗಿ ಗೋ ಶಾಲೆಗಳಿಗೆ 2021-22ನೇ ಸಾಲಿನಲ್ಲಿ 3,68,96,209.00 ರು.ಗಳ ಅನುದಾನವನ್ನು ಒದಗಿಸಿದೆ. ಈ ಗೋ ಶಾಲೆಗಳಲ್ಲಿ ಒಟ್ಟು 35,418 ಗೋವುಗಳಿವೆ.

 

ಹೊಸನಗರದ ರಾಮಚಂದ್ರಾಪುರ ಮಠದಲ್ಲಿರುವ 408 ಗೋವುಗಳಿಗೆ 4,47,200 ರು., ತೀರ್ಥಹಳ್ಳಿಯಲ್ಲಿರುವ ಮಲೆನಾಡು ಗಿಡ್ಡ ತಳಿ ಗೋ ಸಂವರ್ಧನ ಪ್ರತಿಷ್ಠಾನಕ್ಕೆ (50 ಹಸುಗಳು) 86,906 ರು., ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾದಡಿಯಲ್ಲಿ ಮತ್ತೂರಿನಲ್ಲಿರುವ ಗೋ ರಕ್ಷಣಾ ನ್ಯಾಸ ಸಮಿತಿಗೆ (150 ಹಸುಗಳು) 3,13,935 ರು., ಕುಮಟಾದಲ್ಲಿರುವ ಅಮೃತಧಾರ ಗೋಶಾಲೆಗೆ (108 ಹಸುಗಳು) 3,16,290 ರು., ಹೊನ್ನಾವರದ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆಯಡಿಯಲ್ಲಿರುವ ಅಮೃತಧಾರಾ ಗೋಶಾಲೆಗೆ 4,47, 200.00ರು., ಸಿದ್ದಾಪುರದ ಶ್ರೀರಾಮದೇವ ಬಾನುಳ್ಳಿ ಮಠಕ್ಕೆ (672 ಹಸುಗಳು) 2,23,192.00 ರು., ಸ್ವರ್ಣವಲ್ಲಿ ಗೋ ಶಾಲೆಗೆ (60 ಹಸುಗಳು) 2,90,750 ರು., ಅನುದಾನ ಒದಗಿಸಿದೆ.

 

ಉಡುಪಿಯ ಪೇಜಾವರ ಅದೋಕ್ಷಜ ಮಠದಡಿಯಲ್ಲಿರುವ ಗೋವರ್ಧನಗಿರಿ ಟ್ರಸ್ಟ್‌ಗೆ 4,47,200.00 ರು., ಕುಂದಾಪುರದಲ್ಲಿರುವ ನಂದಗೋಕುಲ ಚಾರಿಟೆಲ್‌ ಟ್ರಸ್ಟ್‌ನಡಿಯಲ್ಲಿರುವ ಅಮೃತಧಾರಾ ಗೋ ಶಾಲೆಗೆ 2,01, 240 ರು, ಮಂಗಳೂರಿನ ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ ಕಡಬಕ್ಕೆ 4,47,200 ರು., ಬಂಟ್ವಾಳದ ಶ್ರೀ ವಿಶ್ವೇಶ ತೀರ್ಥ ಗೋ ಸಂರಕ್ಷಣಾ ಕೇಂದ್ರದ ಭಾರತ ಸೇವಾಶ್ರಮಕ್ಕೆ 2,49,110 ರು., ಶ್ರೀ ಗುರುದೇವ ಚಾರಿಟೆಬಲ್‌ ಕಮಿಟಿ ಒಡಿಯೂರು 2,84,948 ರು., ಬೆಳ್ತಂಡಿಯ ಕಾವೇರಮ್ಮ ಅಮೃತಧಾರಾ ಗೋ ಸೇವಾ ಟ್ರಸ್ಟ್‌ಗೆ 1,27,452 ರು., ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ 2,77,202 ರು., ಸೌತಡ್ಕದ ಮಹಾಗಣಪತಿ ದೇವಸ್ಥಾನಕ್ಕೆ 3,86, 664 ರು., ಗೋ ವನಿತಾಶ್ರಯ ಟ್ರಸ್ಟ್‌ (ಪಜೀರು) 4,47,200 ರು.., ಕಪಿಲಾ ಪಾರ್ಕ್‌ (ಕೆಂಜಾರು)ಗೆ 4,47,200 ರು., ಶೃಂಗೇರಿಯ ಶಾರದಾ ಪೀಠಕ್ಕೆ 4,47, 200 ರು., ಬೆಂಗಳೂರಿನ ಹೆಣ್ಣೂರು ಬಳಿಯ ಕಾಚರಕನಹಳ್ಳಿಯಲ್ಲಿರುವ ಇಸ್ಕಾನ್‌ ಗೋ ಶಾಲೆಗೆ 3,12,348 ರು., ರಾಮೋಹಳ್ಳಿಯಲ್ಲಿರುವ ಶ್ರೀ ಮಧ್ವನಾರಾಯಣ ಆಶ್ರಮ ಟ್ರಸ್ಟ್‌ಗೆ 1,68, 614 ರು., ದೊಡ್ಡಗುಬ್ಬಿಯಲ್ಲಿರುವ ಶ್ರೀ ಕೃಷ್ಣ ಗೋಸೇವಾಶ್ರಮಕ್ಕೆ 1,70,000.00 ರು., ಕಗ್ಗಲೀಪಪುರದಲ್ಲಿರುವ ಅಮೃತಾ ಧಾರಾ ಗೋ ಶಾಲೆಗೆ 4,32,080 ರು., ಕಗ್ಗಲೀಪುರದಲ್ಲಿರುವ ಶೃಂಗೇರಿ ಶಾರದಾಪೀಠಕ್ಕೆ 1,29, 318 ರು., ಕೆಂಗೇರಿಯಲ್ಲಿರುವ ಬಿಜಿಎಸ್‌ ಗೋ ಶಾಲೆಗೆ 1,74,408 ರು., ಆರ್‌ ಅರ್‌ ನಗರದಲ್ಲಿರುವ ರಾಜರಾಜೇಶ್ವರಿ ದೇವಸ್ಥಾನ ಟ್ರಸ್ಟ್‌ =ಗೆ 2,51,069 ರು., ಅನುದಾನ ನೀಡಲಾಗಿದೆ.

 

ಅದೇ ರೀತಿ ಕರ್ನಾಟಕ ಜಾನುವಾರು ಅಭಿವೃದ್ಧಿ ಸಂಸ್ಥೆ, ರಾಷ್ಟ್ರೀಯ ಗೋಕುಲ್‌ ಮಿಷನ್‌ ನಿಂದ (ಶೇ.100 ಕೇಂದ್ರದ ಪಾಲು) 2019-20ರಲ್ಲಿ 756.47 ಲಕ್ಷ ರು. ಬಿಡುಗಡೆ ಮಾಡಿದ್ದರ ಪೈಕಿ 685.15 ಲಕ್ಷ ರು ಖರ್ಚಾಗಿದೆ. 2020-21ರಲ್ಲಿ 101.25 ಲಕ್ಷ ರು. ಪೈಕಿ 101.25 ಲಕ್ಷ ರೂ ಖರ್ಚಾಗಿದೆ. 2021-22ರಲ್ಲಿ 1154.81 ಲಕ್ಷ ರು ಪೈಕಿ 245.57 ಲಕ್ಷ ರು. ಖರ್ಚಾಗಿದೆ.

 

ಹಾಗೆಯೆ ರಾಷ್ಟ್ರೀಯ ಜಾನುವಾರ ಮಿಷನ್‌ (ಕೇಂದ್ರದ ಪಾಲು ಶೆ. 60. ರಾಜ್ಯದ ಪಾಲು ಶೇ. 40) 2019-20ರಲ್ಲಿ 919.304 ಲಕ್ಷ ರು. ಬಿಡುಗಡೆ ಪೈಕಿ 919.304 ಲಕ್ಷ ರು ಖರ್ಚಾಗಿದೆ. 2020-21ರಲ್ಲಿ ನಯಾ ಪೈಸೆ ಬಿಡುಗಡೆಯಾಗಿಲ್ಲ. 2021-22ರಲ್ಲಿ 1191.43 ಲಕ್ಷ ರು. ಇನ್ನೂ ಬಿಡುಗಡೆ ಹಂತದಲ್ಲಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಕೇಂದ್ರದ ಪಾಲು ಶೇ. 60, ರಾಜ್ಯದ ಪಾಲು ಶೆ. 40) 2019-20ರಲ್ಲಿ 34.58 ಕೋಟಿ ರು., 2020-21ರಲ್ಲಿ 23.82 ಕೋಟಿ ರು., 2021-22ರಲ್ಲಿ 2.50 ಕೋಟಿ ರು ಬಿಡುಗಡೆಯಾಗಿದೆ.

 

ರಾಜ್ಯ ಸರ್ಕಾರವು ಗೋ ಸಂರಕ್ಷಣೆ ಕಾಯ್ದೆ ಜಾರಿಗೆ ತಂದ ನಂತರ ಗೋ ಶಾಲೆಗಳನ್ನು ತೆರೆಯಲು, ನಿರ್ವಹಿಸಲು ಕಳೆದ 2 ವರ್ಷಗಳಿಂದ ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನವನ್ನು ಪಡೆದಿಲ್ಲ ಎಂದು ಸಚಿವ ಪ್ರಭು ಚವ್ಹಾಣ್‌ ಅವರು ಉತ್ತರಿಸಿದ್ದಾರೆ.

the fil favicon

SUPPORT THE FILE

Latest News

Related Posts