ಬೆಂಗಳೂರು : “ಚಿತ್ರದುರ್ಗ ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರ ಖಾಸಾ ತಮ್ಮನ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದ ಸುದ್ದಿ ಪ್ರಕಟಣೆಯಲ್ಲಿ ಶರಣರ ಭಾವಚಿತ್ರ ಮುದ್ರಿಸಿ ಪ್ರಕಟಿಸಿದ್ದು ತಪ್ಪು” ಎಂಬ ಆರೋಪಕ್ಕೆ ಸಂಬಂಧಿಸಿದಂತೆ “ದಿ ಫೈಲ್” ವಿರುದ್ಧ ದಾಖಲಿಸಿದ್ದ ಪ್ರಕರಣದಲ್ಲಿ ಚಿತ್ರದುರ್ಗದ ಸಿಇಎನ್ ಠಾಣೆ ಪೊಲೀಸರು ಸಲ್ಲಿಸಿದ್ದ ‘ಬಿ’ ರಿಪೋರ್ಟ್‌ನ್ನು ಚಿತ್ರದುರ್ಗ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಅಂಗೀಕರಿಸಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’ ಪ್ರತಿನಿಧಿ ಜಿ ಮಹಾಂತೇಶ್‌ಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು. ಪ್ರಕರಣದ ಕುರಿತು ತನಿಖೆ ನಡೆಸಿದ್ದ ಚಿತ್ರದುರ್ಗ ಜಿಲ್ಲೆಯ ಸಿಇಎನ್ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ನ್ಯಾಯಾಲಯವು ಇದನ್ನು 2022ರ ಫೆ.19ರಂದು ಅಂಗೀಕರಿಸಿದೆ.
‘ಬಿ’ ರಿಪೋರ್ಟ್‌ನಲ್ಲೇನಿದೆ?
ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯ ಮೊಕದ್ದಮೆ ದೂರ ಅರ್ಜಿಯಲ್ಲಿಯೇ ಶ್ರೀ ಮುರುಘಾಮಠದ ಪೀಠಾಧಿಪತಿಗಳು ಹಾಗೂ ಎಸ್‌ಜೆಎಂ ವಿದ್ಯಾಪೀಠದ ಸಿಇಒ ಹಾಗೂ ಇತರೆ ಪದಾಧಿಕಾರಿಗಳ ವಿಚಾರವು ಪ್ರಸ್ತಾಪವಾಗಿದೆ. ಇದೇ ಪ್ರಕರಣದದ ಜಾಮೀನು ಅರ್ಜಿಯ ಆದೇಶದ ವಿಚಾರದಲ್ಲಿರುವ ವಿಷಯಗಳನ್ನೇ ‘ದಿ ಫೈಲ್’ ಪ್ರಕಟಿಸಿತ್ತು. ಯಾವುದೇ ಹೆಚ್ಚುವರಿಯಾಗಿ ಶ್ರೀ ಮಠಕ್ಕಾಗಲೀ, ಮಠದ ಪೀಠಾಧಿಪತಿಗಳ ವಿಚಾರದಲ್ಲಾಗಲೀ ಯಾವುದೇ ರೀತಿಯ ಅನಗತ್ಯ ವಿಚಾರಗಳನ್ನು ಪ್ರಕಟಿಸಿರುವುದಿಲ್ಲ. ಈ ಪ್ರಕರಣವನ್ನು ಕಾನೂನಿನ ತಪ್ಪು ತಿಳಿವಳಿಕೆಯಿಂದ ನೀಡಿದ ಪ್ರಕರಣವೆಂದು ತನಿಖೆಯಲ್ಲಿ ಕಂಡು ಬಂದಿದೆ. ಹೀಗಾಗಿ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ‘ಬಿ’ ವರದಿಯನ್ನು ಸಲ್ಲಿಸಲಾಗಿದೆ ಎಂದು ವಿವರಿಸಲಾಗಿದೆ.
ಈ ಸಂಬಂಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ ಐ ಆರ್ ಅಡಿಯಲ್ಲಿ ಚಿತ್ರದುರ್ಗ ಸೆಷನ್ಸ್ ನ್ಯಾಯಾಲಯ ಮಹಾಂತೇಶ್ ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಹಾಂತೇಶ್ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಅಶೋಕ ಜಿ.ನಿಜಗಣ್ಣವರ ಅವರಿದ್ದ ಏಕಸದಸ್ಯ ನ್ಯಾಯಪೀಠವು 2021ರ ಏ.23ರಂದು ವಿಚಾರಣೆ ನಡೆಸಿತ್ತು.
ವಿಚಾರಣೆ ವೇಳೆ ಮಹಾಂತೇಶ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ಎಚ್.ಹನುಮಂತ ರಾಯ ಅವರು, “ದಿ-ಫೈಲ್ ತನ್ನ ಪ್ರಕಟಣೆಯಲ್ಲಿ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಕೇವಲ ಸುದ್ದಿಯನ್ನು ಮಾತ್ರವೇ ಪ್ರಕಟಿಸಿದೆ. ಈ ಸುದ್ದಿ ಪ್ರಕಟಣೆಯ ಮೂಲ ಸ್ವಾಮೀಜಿಯ ಖಾಸಾ ತಮ್ಮ ದೊರೆಸ್ವಾಮಿಯ ವಿರುದ್ಧ ಬೆಂಗಳೂರಿನ ಆರ್. ಎಂ.ಸಿ ಯಾರ್ಡ್ ಠಾಣೆಯಲ್ಲಿ ಉಪನ್ಯಾಸಕಿಯೊಬ್ಬರು ನೊಂದಾಯಿಸಿರುವ ಅತ್ಯಾಚಾರ ಅರೋಪದ ದೂರು. ಅಂತೆಯೇ ಈ ದೂರಿನ ಅನ್ವಯ ಬೆಂಗಳೂರು ಸೆಷನ್ಸ್ ನ್ಯಾಯಾಲಯ ದೊರೆಸ್ವಾಮಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಈ ಆದೇಶದ ಅನುಸಾರವೇ ಸುದ್ದಿ ಪ್ರಕಟಿಸಲಾಗಿದೆ” ಎಂದು ವಾದ ಮಂಡನೆ ಮಾಡಿದ್ದರು.
“ಸ್ವಾಮೀಜಿ ಬೆಂಬಲಿಗ ಭಕ್ತ ಎಂದು ದೂರು ನೀಡಿರುವ ವ್ಯಕ್ತಿ ಜಗದೀಶ್ ತನ್ನ ದೂರಿನಲ್ಲಿ ತಿಳಿಸಿರುವಂತೆ “ದಿ- ಫೈಲ್” ವರದಿ ಅನಾಮಧೇಯವಲ್ಲ. ಸುದ್ದಿಯಲ್ಲಿ ವರದಿಗಾರ ಹಾಗೂ ಸಂಪಾದಕನ ಹೆಸರು ಪ್ರಕಟಗೊಂಡಿದೆ. ಹಾಗಾಗಿ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 507 ಈ ಪ್ರಕರಣದಲ್ಲಿ ಊರ್ಜಿತವಾಗುವುದಿಲ್ಲ” ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದರು.
“ನ್ಯಾಯಾಲಯದ ಆದೇಶವನ್ನು ಯಥಾವತ್ತಾಗಿ ಪ್ರಕಟಿಸುವುದು ಐಪಿಸಿ ಅಡಿಯಲ್ಲಿ ಅಪರಾಧವಲ್ಲ. ಸತ್ಯ ಸಂಗತಿ ವರದಿ ಮಾಡುವುದು ಅಪರಾಧ ಎಂದು ಗ್ರಹಿಸಿ ಎಫ್ ಐ ಆರ್ ದಾಖಲಿಸಿರುವುದು ಸಂಪೂರ್ಣ ತಪ್ಪು. ಅತ್ಯಾಚಾರ ಆರೋಪದ ಸಂತ್ರಸ್ತೆ ನೀಡಿದ ದೂರು ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶದ ಪ್ರಮುಖ ಅಂಶಗಳನ್ನು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ” ಎಂದು ವಿವರಿಸಿದ್ದರು.
ಈ ಸುದ್ದಿಯನ್ನು ಪ್ರಕಟಿಸಿದ ಕಾರಣಕ್ಕಾಗಿ ಯಾವುದೇ ನಿರ್ದಿಷ್ಟ ಸಮುದಾಯದ ಜನರ ಭಾವನೆಗಳಿಗೆ ಪ್ರಚೋದನೆ ಉಂಟಾಗಿಲ್ಲ. ಇದರಿಂದ ಯಾವುದೇ ಸಮಾಜದ ಶಾಂತಿಗೆ ಭಂಗವೂ ಆಗಿಲ್ಲ. ಆದ್ದರಿಂದ ಐಪಿಸಿ ಕಲಂ 505 (1) (B) ಕೂಡಾ ಈ ಪ್ರಕರಣದಲ್ಲಿ ಊರ್ಜಿತವಾಗುವುದಿಲ್ಲ” ಎಂದು ಪ್ರತಿಪಾದಿಸಿದ್ದರು.
“ಸದರಿ ಸುದ್ದಿ ಪ್ರಕಟಣೆಯಲ್ಲಿ ಎಲ್ಲೂ ಸುಲಿಗೆ ಮಾಡುವಂತಹ ಉದ್ದೇಶ ಕಂಡುಬಂದಿಲ್ಲದೇ ಇರುವುದರಿಂದ ಮಾಹಿತಿ ತಂತ್ರಜ್ಞಾನ ಕಾಯ್ದೆ (ಐಟಿ ಆಕ್ಟ್) 66-D ಸಹಾ ಈ ಪ್ರಕರಣಕ್ಕೆ ಅನ್ವಯವಾಗುವುದಿಲ್ಲ” ಎಂದು ತಿಳಿಸಿದ್ದರು.
“ಪತ್ರಕರ್ತ ಜಿ.ಮಹಾಂತೇಶ್ ಅವರಿಗೆ ಉತ್ತಮ ಹಿನ್ನೆಲೆ ಇರುವ ಕಾರಣ ಈ ದೂರು ಅರ್ಜಿದಾರರ ತೇಜೋವಧೆ ಮಾಡುವ ದುರುದ್ದೇಶದಿಂದ ಕೂಡಿದೆ. ಶರಣರ ಅನುಯಾಯಿ ಜಗದೀಶ್ ನೀಡಿರುವ ದೂರು ತಪ್ಪು ಗ್ರಹಿಕೆಯಿಂದ ಕೂಡಿದೆ” ಎಂದು ವಾದ ಮಂಡಿಸಿದ್ದರು.
ವಾದಾಂಶಗಳನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ ನಿಜಗಣ್ಣವರ ಅವರು, ಮಹಾಂತೇಶ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದನ್ನು ಸ್ಮರಿಸಬಹುದು. ಈ ಪ್ರಕರಣದಲ್ಲಿ ‘ದಿ ಫೈಲ್’ ಜಾಲತಾಣಕ್ಕೆ ರಾಜ್ಯ ಸರ್ಕಾರದ ಮಾಜಿ ಸರ್ಕಾರಿ ಅಭಿಯೋಜಕ ಬಿ ಟಿ ವೆಂಕಟೇಶ್, ಖ್ಯಾತ ವಕೀಲ ಕೆಬಿಕೆ ಸ್ವಾಮಿ, ದಾವಣಗೆರೆ ವಕೀಲ ಅನೀಸ್ ಪಾಶ ಅವರು ಉಚಿತ ಕಾನೂನು ನೆರವು ನೀಡಿದ್ದರು.
ಅದೇ ರೀತಿ ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು, ಟಿ ಕೆ ತ್ಯಾಗರಾಜ್, ರವಿಕುಮಾರ್ ಟೆಲೆಕ್ಸ್, ಅನಂತ್ ಚಿನಿವಾರ್, ಜಿ ಎನ್ ಮೋಹನ್, ಬಸವರಾಜು, ಸಿ ಎಸ್ ದ್ವಾರಕಾನಾಥ್, ಹೊನಕೆರೆ ನಂಜುಂಡೇಗೌಡ, ಸಿ ರುದ್ರಪ್ಪ, ದೊಣೆಹಳ್ಳಿ ಗುರುಮೂರ್ತಿ, ವಕೀಲ ಕೆಬಿಕೆ ಸ್ವಾಮಿ, ವಿನಯ ಶ್ರೀನಿವಾಸ, ದಿನೇಶ್‌ಕುಮಾರ್ ಎಸ್ ಸಿ, ರವಿಕೃಷ್ಣಾರೆಡ್ಡಿ, ಟಿ ಕೆ ದಯಾನಂದ, ದೇಶಾದ್ರಿ ಹೊಸಮನಿ, ಈಶ್ವರ ಬಳ್ಳಕೆರೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ವೈ ಜಿ ಅಶೋಕ್‌ಕುಮಾರ್, ಜನಾಧಿಕಾರ ಸಂಘರ್ಷ ಪರಿಷತ್‌ನ ಆದರ್ಶ ಐಯ್ಯರ್, ಪ್ರಕಾಶ್‌ಬಾಬು ಸೇರಿದಂತೆ ಹಲವರು ದಿ ಫೈಲ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಕ್ಕೆ ಖಂಡಿಸಿದ್ದನ್ನು ಸ್ಮರಿಸಬಹುದು.
ಏನಿದು ಪ್ರಕರಣ?:
ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಮಠದ ಮಾಜಿ ಸಿಇಒ ಹಾಗೂ ಮುರುಘಾ ಶರಣರ ಖಾಸಾ ತಮ್ಮ ಎಂ.ಜಿ.ದೊರೆಸ್ವಾಮಿ ವಿರುದ್ಧ ಉಪನ್ಯಾಸಕಿಯೊಬ್ಬರು ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯ ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಬೆಂಗಳೂರು ಸೆಷನ್ಸ್ ನ್ಯಾಯಾಲಯ ಆರೋಪಿ ದೊರೆಸ್ವಾಮಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು.
ಈ ಸಂಬಂಧ ‘ದಿ ಫೈಲ್’ ವೆಬ್‍ಸೈಟ್ ವರದಿ ಪ್ರಕಟಿಸಿತ್ತು. ಇದರಲ್ಲಿ ಮುರುಘಾ ಶರಣರ ಭಾವಚಿತ್ರವನ್ನು ಬಳಕೆ ಮಾಡಲಾಗಿತ್ತು. ಆ ಹಿನ್ನೆಲೆಯಲ್ಲಿ ಮಠದ ಸುಪರ್ದಿಗೆ ಒಳಪಟ್ಟ ಎಸ್ ಜೆ ಎಂ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮಾಜಿ ಮುಖ್ಯಸ್ಥ ಬಿ.ಎಂ.ಜಗದೀಶ್ ಪೋಲಿಸರಿಗೆ ದೂರು ನೀಡಿದ್ದರು. ದೂರನ್ನು ಆಧರಿಸಿ, ಮಹಾಂತೇಶ್ ವಿರುದ್ಧ ಚಿತ್ರದುರ್ಗ ಸಿಇಎಸ್ ಅಪರಾಧ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲು ಮಾಡಲಾಗಿತ್ತು.
ಭಾವಚಿತ್ರ ಬಳಕೆ ಮಾಡಿದ್ದಕ್ಕೆ ಪತ್ರಕರ್ತನ ವಿರುದ್ಧ ಎಫ್‍ಐಆರ್ ದಾಖಲಿಸಿದ ಪೊಲೀಸರ ಕ್ರಮಕ್ಕೆ ಪತ್ರಕರ್ತರ ಸಂಘಟನೆಗಳು, ಹೋರಾಟಗಾರರು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತಪಡಿಸಿದ್ದರು.