Monday | June 15, 2026 |

ಪಠ್ಯಪುಸ್ತಕ ಪರಿಷ್ಕರಣೆ; ರಾಜಕೀಯ ನಾಯಕತ್ವ ಸ್ಥಾಪಿಸಿದ ತಾತ್ಕಾಲಿಕ ಸಮಿತಿಗಳಿಂದ ನಿರ್ವಹಣೆಗೆ ಆಯೋಗ ಆಕ್ಷೇಪ

ಬೆಂಗಳೂರು; ಕರ್ನಾಟಕದಲ್ಲಿ ಪಠ್ಯಕ್ರಮ ಅಭಿವೃದ್ಧಿ, ಪಠ್ಯಪುಸ್ತಕ ತಯಾರಿಕೆ ಮತ್ತು ಇತರೆ ಸಂಬಂಧಿತ ಚಟುವಟಿಕೆಗಳೊಂದಿಗೆ ತೊಡಗಿಸಿಕೊಂಡ ಯಾವುದೇ ಶೈಕ್ಷಣಿಕ ಸಂಸ್ಥೆ ಇಲ್ಲ. ನಿಯತಕಾಲಿಕವಾಗಿ ಪಠ್ಯ ಕ್ರಮ ಪರಿಷ್ಕರಣೆ ಮತ್ತ ಪಠ್ಯಪುಸ್ತಕ ಪರಿಷ್ಕರಣೆ ಕಾರ್ಯಗಳನ್ನು ರಾಜಕೀಯ ನಾಯಕತ್ವವು ಸ್ಥಾಪಿಸಿದ ತಾತ್ಕಾಲಿಕ ಸಮಿತಿಗಳು ನಿರ್ವಹಿಸುತ್ತ ಬಂದಿವೆ. ಇದು ಬದಲಾಗಬೇಕು ಎಂದು ರಾಜ್ಯ ಶಿಕ್ಷಣ ನೀತಿ ಆಯೋಗವು ಅಭಿಪ್ರಾಯಪಟ್ಟಿದೆ.

ಕರ್ನಾಟಕದಲ್ಲಿ ಪಠ್ಯಕ್ರಮ ಸುಧಾರಣೆಗಾಗಿ ಕೊನೆ ಕ್ರಮ ಕೈಗೊಂಡು ಒಂದೂವರೆ ದಶಕಕ್ಕೂ ಹೆಚ್ಚು ಸಮಯ ಕಳೆದಿದೆ. ಅದನ್ನು ಕೂಡ ಪಠ್ಯಕ್ರಮ, ಪಠ್ಯಪುಸ್ತಕಗಳು, ಕಲಿಕಾ ಸಾಮಗ್ರಿಗಳು ಮತ್ತು ಶಿಕ್ಷಕರ ದೃಷ್ಟಿಕೋನವನ್ನು ರೂಪಿಸುವ ವ್ಯವಸ್ಥಿತ ರೀತಿಯನ್ನು ಅನುಸರಿಸಿ ಮಾಡಲಾಗಿಲ್ಲ. ಬಹುತೇಕ ಸಂದರ್ಭಗಳಲ್ಲಿ ಇಲಾಖೆಯು ಕೆಲಸಗಳನ್ನು ಪೂರೈಸಲು ತಜ್ಞರ ತಾತ್ಕಾಲಿಕ ಸಮಿತಿಗಳನ್ನು ನಿಯೋಜಿಸುತ್ತದೆ. ಇಲಾಖೆ ಅಥವಾ ಹೊರಗಿನ ಅಧಿಕಾರಿಗಳಿಂದ ವಿದ್ಯಾರ್ಥಿಗಳ ಮೌಲ್ಯಮಾಪನ ನಡೆಸುವ ಪದ್ಧತಿಯನ್ನು  ಮತ್ತು ಶಾಲಾ ಶಿಕ್ಷಣದ ಆರಂಭಿಕ ಹಂತಗಳಲ್ಲಿ ಸಾರ್ವಜನಿಕ ಪರೀಕ್ಷೆ ನಡೆಸುವುದನ್ನು ರದ್ದುಗೊಳಿಸಬೇಕು ಎಂದು ಆಯೋಗವು ಶಿಫಾರಸ್ಸು ಮಾಡಿದೆ.

ಸುಖ್‌ ದೇವ್ ಥೋರಟ್‌ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗವು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ತನ್ನ ವರದಿಗಳನ್ನು ಸಲ್ಲಿಸಿದೆ. ಈ ವರದಿಗಳ ಮೇಲೆ ತಮ್ಮ ಅಭಿಪ್ರಾಯ ನೀಡಬೇಕು ಎಂದು ಸಿದ್ದರಾಮಯ್ಯ ಅವರು ಸಂಪುಟದ ಎಲ್ಲಾ ಸದಸ್ಯರಿಗೆ ಸೂಚಿಸಿ ವರದಿ ಕಳಿಸಿದ್ದರು. ಇದಾದ ನಂತರ ರಾಜಕೀಯ ಬದಲಾವಣೆಗಳಿಂದಾಗಿ ಡಿ ಕೆ ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ರಾಜಕೀಯ ಬೆಳವಣಿಗೆಗಳಲ್ಲಿಯೇ ಮುಳುಗಿ ಹೋಗಿರುವ ಸರ್ಕಾರವು ಇನ್ನೂ ಆಯೋಗವು ನೀಡಿದ ವರದಿಗಳತ್ತ ಕಣ್ಣಾಡಿಸಿಲ್ಲ.

ಥೋರಟ್‌ ನೇತೃತ್ವದ ಆಯೋಗವು ನೀಡಿರುವ ಎಲ್ಲಾ ಸಂಪುಟಗಳ ವರದಿಗಳ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

 

ಆಯೋಗವು ನೀಡಿರುವ ವರದಿಯ ಅಧ್ಯಾಯ 7ರಲ್ಲಿ ಪಠ್ಯಕ್ರಮ, ಪಠ್ಯಪುಸ್ತಕಗಳು, ಕಲಿಕಾ ಪ್ರಕ್ರಿಯೆ ಮತ್ತು ಕಲಿಕೆಯ ಮೌಲ್ಯಮಾಪನ ಕುರಿತು ಸುದೀರ್ಘವಾಗಿ ಚರ್ಚಿಸಿದೆ. ವಿಶೇಷವಾಗಿ ಪಠ್ಯ ಪುಸ್ತಕ ಪರಿಷ್ಕರಣೆ, ಪಠ್ಯಕ್ರಮ ರಚನೆ, ಪರೀಕ್ಷೆಗಳು ಮತ್ತು ಮೌಲ್ಯಮಾಪನ ಕುರಿತು ವಿಶೇಷ ನೋಟ ಬೀರಿರುವುದು ವರದಿಯಿಂದ ಗೊತ್ತಾಗಿದೆ.

ಪಠ್ಯಕ್ರಮ, ಪಠ್ಯಪುಸ್ತಕಗಳ ಅಭಿವೃದ್ಧಿ ಸಂಸ್ಥೆ ಸ್ಥಾಪನೆಗೆ ಶಿಫಾರಸ್ಸು

ಪಠ್ಯಕ್ರಮ ಮತ್ತು ಪಠ್ಯಪುಸ್ತಕ ಅಭಿವೃದ್ಧಿಯು ನಿರಂತರ ವೃತ್ತಿಪರ ಪ್ರಕ್ರಿಯೆಯಾಗಿದೆ. ಪಠ್ಯಕ್ರಮ ಅಭಿವೃದ್ದಿಯಂತ ಪ್ರಮುಖ ಶೈಕ್ಷಣಿಕ ಕಾರ್ಯಗಳನ್ನು ಕೈಗೊಳ್ಳಲು ಪಠ್ಯಕ್ರಮ, ಪಠ್ಯಪುಸ್ತಕಗಳು, ಪರೀಕ್ಷೆಗಳು, ಪೂರಕ ಪರಿಕರಗಳು ಮತ್ತು ಶಿಕ್ಷಕರ ವೃತ್ತಿಪರ ಅಭಿವೃದ್ದಿ ಸೇರಿದಂತೆ ಒಟ್ಟಾರೆ ದೃಷ್ಟಿಕೋನ, ವೃತ್ತಿಪರ ಪರಿಣಿತಿ, ಬದ್ಧತೆ, ಹೊಣೆಗಾರಿಕೆ ಮತ್ತು ಸೂಕ್ತ ಸಂಶೋಧನಾ ಅನುಭವ ಮತ್ತು ಸಾಮರ್ಥ್ಯಗಳಿಂದ ಕೂಡಿದ ಸ್ವಾಯತ್ತ ಶೈಕ್ಷಣಿಕ ಪ್ರಾಧಿಕಾರ ಸ್ಥಾಪಿಸಬೇಕು. ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳನ್ನು ಅಭಿವೃದ್ಧಿಪಡಿಸುವ, ಪರಿಶೀಲಿಸುವ, ಪರಿಷ್ಕರಿಸುವ ಮತ್ತು ಪಠ್ಯಕ್ರಮಕ್ಕೆ ಅನುಗುಣವಾಗಿ ಶಿಕ್ಷಣಶಾಸ್ತ್ರ ಮತ್ತು ಮೌಲ್ಯಮಾಪನ ಕ್ರಮಗಳಿಗೆ ಸಂಬಂಧಿಸಿದ ಸಂಶೋಧನೆಗಳನ್ನು ನಡೆಸುವ ಜವಾಬ್ದಾರಿ ಹೊರಬಲ್ಲ ಪಠ್ಯಕ್ರಮ ಮತ್ತ ಪಠ್ಯಪುಸ್ತಕಗಳ ಅಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಬೇಕು ಎಂದು ಆಯೋಗವು  ಶಿಫಾರಸ್ಸು ಮಾಡಿದೆ.

 

 

ಒಂದೂವರೆ ದಶಕದ ಹಿಂದೆಯೇ ಪಠ್ಯಕ್ರಮ ಸುಧಾರಣೆ

ಪಠ್ಯಕ್ರಮ ಸುಧಾರಣೆ ಕುರಿತು ಚರ್ಚಿಸಿರುವ ಆಯೋಗವು  ಕೆಸಿಎಫ್‌ 2007 ಮೀರಿ ಸಾಗುವುದು, ಹೊಸ ದೃಷ್ಟಿಕೋನ, ಆದೇಶ ಮತ್ತು ಬದ್ಧತೆ ಕುರಿತೂ ವಿಶ್ಲೇಷಿಸಿದೆ.

‘ಕರ್ನಾಟಕದಲ್ಲಿ ಪಠ್ಯಕ್ರಮ ಸುಧಾರಣೆಗಾಗಿ ಕೊನೆ ಕ್ರಮ ಕೈಗೊಂಡು ಒಂದೂವರೆ ದಶಕಕ್ಕೂ ಹೆಚ್ಚು ಸಮಯ ಕಳೆದಿದೆ. ಅದನ್ನು ಕೂಡ ಪಠ್ಯಕ್ರಮ, ಪಠ್ಯಪುಸ್ತಕಗಳು, ಕಲಿಕಾ ಸಾಮಗ್ರಿಗಳು ಮತ್ತು ಶಿಕ್ಷಕರ ದೃಷ್ಟಿಕೋನವನ್ನು ರೂಪಿಸುವ ವ್ಯವಸ್ಥಿತ ರೀತಿಯನ್ನು ಅನುಸರಿಸಿ ಮಾಡಲಾಗಿಲ್ಲ. ಇದಲ್ಲದೇ ಹಿರಿಯ ಮಾಧ್ಯಮಿಕ  ಹಂತ (ಪಿಯು)ವನ್ನು ಪರಿಗಣಿಸದ ಕಾರಣ ಈ ಕ್ರಮವು ಅಪೂರ್ಣವಾಗಿದೆ. ಇದಲ್ಲದೇ ಎಸ್‌ಎಸ್‌ಎ  ಘಟಕವು ಪ್ರಾಥಮಿಕ ಮತ್ತು ಇತ್ತೀಚಿನಿಂದ ಮೂಲಭೂತ ಹಂತಕ್ಕಾಗಿ ಪಠ್ಯಕ್ರಮ ಮತ್ತು ಕಲಿಕಾ ಸಾಮಗ್ರಿಗಳನ್ನು ರೂಪಿಸುವಲ್ಲಿ ಸ್ವತಂತ್ರವಾಗಿ ತೊಡಗಿಸಿಕೊಂಡಿವೆ. ಈ ವಿಘಟಿತ ವಿಧಾನವು ಶಾಲಾ ಶಿಕ್ಷಣದ ವಿವಿಧ ಶ್ರೇಣಿ ಮತ್ತು ಹಂತಗಳಲ್ಲಿ ಅಸಂಬದ್ಧತೆ ಮತ್ತು ಸ್ಥಗಿತ ಉಂಟಾಗಲು ಕಾರಣವಾಗಿದೆ,’ ಎಂದು ಆಯೋಗವು ಅಭಿಪ್ರಾಯಿಸಿರುವುದು ವರದಿಯಿಂದ ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ಶಾಲಾ ಪೂರ್ವ ಹಂತದಿಂದ ಹಿರಿಯ ಮಾಧ್ಯಮಿಕ ಹಂತದವರೆಗಿನ ಶಾಲಾ ಶಿಕ್ಷಣ ಪಠ್ಯಕ್ರಮದ ಕುರಿತು ಸಮಗ್ರ ದೃಷ್ಟಿಕೋನ ಬೆಳೆಸಿಕೊಳ್ಳುವುದು ನಿಜಕ್ಕೂ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಶಾಲಾಪೂರ್ವ ಹಂತದಿಂದ ಹಿರಿಯ ಮಾಧ್ಯಮಿಕ ಹಂತದವರೆಗೆ ಹೊಸ ಸಮಗ್ರ ಶಾಲಾ ಶಿಕ್ಷಣ ಪಠ್ಯಕ್ರಮವನ್ನು ರೂಪಿಸುವ ನಿಟ್ಟಿನಲ್ಲಿ ಸಮಗ್ರವಾಗಿ ಕಾರ್ಯಾರಂಭ ಮಾಡಬೇಕು ಎಂದು ಸಲಹೆ ನೀಡಿದೆ.

 

 

ಛಿದ್ರಗೊಂಡ ಚಟುವಟಿಕೆಯಂತಾದ ಪಠ್ಯಪುಸ್ತಕ ತಯಾರಿಕೆ

ಪ್ರಸ್ತುತ ಪಠ್ಯಕ್ರಮ ಮತ್ತು ಪಠ್ಯಪುಸ್ತಕ ತಯಾರಿಕೆಯು ಡಿಎಸ್‌ಇಆರ್‍‌ಟಿ, ಸಮಗ್ರ ಶಿಕ್ಷಣ, ಪಿಯು ಬೋರ್ಡ್‌ ಮತ್ತು ಪಠ್ಯ ಪುಸ್ತಕ ಸಂಘವೇ ಮೊದಲಾದ ಬಹು ಸಂಸ್ಥೆಗಳ ಒಳಗೊಳ್ಳುವಿಕೆಯಿಂದ ಒಂದು ಛಿದ್ರಗೊಂಡ ಚಟುವಟಿಕೆಯಂತಾಗಿಬಿಟ್ಟಿದೆ. ಬಹುತೇಕ ಸಂದರ್ಭಗಳಲ್ಲಿ ಇಲಾಖೆಯು ಕೆಲಸಗಳನ್ನು ಪೂರೈಸಲು ತಜ್ಞರ ತಾತ್ಕಾಲಿಕ ಸಮಿತಿಗಳನ್ನು ನಿಯೋಜಿಸುತ್ತದೆ. ಪರಿಣಾಮವಾಗಿ ಪಠ್ಯಪುಸ್ತಕ ಬರವಣಿಗೆ ಮತ್ತು ಕಲಿಕಾ ಸಾಮಗ್ರಿ ಅಭಿವೃದ್ಧಿಯಲ್ಲಿ  ಪೂರ್ವ ಸಿದ್ಧತೆ ಮತ್ತು ನಿರ್ಣಾಯಕ ಪರಿಶೋಧನೆಗಳಾಗಲಿ ವಿಮರ್ಶೆ ಮತ್ತು ಮೌಲ್ಯಮಾಪನಗಳಾಗಲಿ  ಇರುವುದು ಅತ್ಯಂತ ವಿರಳ. ಅಷ್ಟೇ ಅಲ್ಲದೇ ಕಾಲೇಜು ಅಥವಾ ವಿಶ್ವವಿದ್ಯಾಲಯ ಮಟ್ಟದಲ್ಲಿ ವಿಷಯ ತಜ್ಞರು ವಿವಿಧ ವಿಷಯಗಳ ವಿದ್ಯಾರ್ಥಿಗಳನ್ನು ಆರ್ಥ ಮಾಡಿಕೊಳ್ಳಲು ಸಜ್ಜಾಗಿರುವುದಿಲ್ಲ ಎಂದು ವಿಶ್ಲೇಷಿಸಿದೆ.

ಅನುಭವವೇ ಇರುವುದಿಲ್ಲ

‘ಅದರಲ್ಲೂ ಮುಖ್ಯವಾಗಿ ಕಲಿಕೆ ಹೇಗೆ ನಡೆಯುತ್ತದೆ ಎಂಬುದಾಗಲೀ, ಪಠ್ಯಕ್ರಮವನ್ನು ಯೋಜಿಸಲು ಅಥವಾ ಉತ್ತಮ ಪಠ್ಯಪುಸ್ತಕಗಳನ್ನು ಬರೆಯಲು ಅಗತ್ಯವಿರುವ ಶಿಕ್ಷಣ ಕ್ಷೇತ್ರದ ಜ್ಞಾನ ಮತ್ತು ಅನುಭವವಾಗಲೀ ಅವರಿಗೆ ಇರುವುದಿಲ್ಲ. ಇದು ಆರಂಭಿಕ ಶ್ರೇಣಿಗಳಿಂದಲೂ ವಯಸ್ಕರಿಗೂ ಕೂಡ ಅರ್ಥೈಯಿಸಿಕೊಳ್ಳಲು ಕಷ್ಟವಾಗುವಂತ, ಗ್ರಹಿಕೆಗೆ ಮೀರಿದ ಪದಗಳು ಮತ್ತು ಮಾಹಿತಿಯಿಂದ  ತುಂಬಿರುವ ಪಠ್ಯಪುಸ್ತಕಗಳ ಗುಣಮಟ್ಟದಿಂದ ಈಗಾಗಲೇ ಸ್ಪಷ್ಟವಾಗಿದೆ,’ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಕಾರ್ಯಪಡೆಯ ತ್ವರಿತ ಪರಿಶೀಲನೆಯ ಆಧಾರದ ಮೇಲೆ  ಈ ನಿರ್ಣಾಯಕ ಕೆಲಸವನ್ನು ಪೂರೈಸುವ ನಿಟ್ಟಿನಲ್ಲಿ ಶಾಲೆ ಮತ್ತು ವಿಶ್ವವಿದ್ಯಾಲಯಗಳಿಂದ ವಿಷಯಗಳ ಬಗ್ಗೆ ವಿಶೇಷ ಜ್ಞಾನ ಹೊಂದಿರುವ ಆಯ್ದ ಸಂಪನ್ಮೂಲ ಶಿಕ್ಷಕರೊಡನೆ ಸಂವಹನ ಕಾರ್ಯಾಗಾರಗಳನ್ನು ನಡೆಸಿ ಪಠ್ಯಕ್ರಮ, ಪಾಠಗಳು ಮತ್ತು ಪಠ್ಯಪುಸ್ತಕಗಳ ಸಮಗ್ರ ಶೈಕ್ಷಣಿಕ ವಿಮರ್ಶೆ ಮತ್ತು  ನವೀಕರಣವನ್ನು ತಕ್ಷಣವೇ ಕೈಗೊಳ್ಳಬೇಕು ಎಂದು ಆಯೋಗವು ಬಲವಾಗಿ ಶಿಫಾರಸ್ಸು ಮಾಡಿದೆ.

 

 

ಸಮಾಜೋ-ಸಾಂಸ್ಕೃತಿಕ ನೀತಿಗಳಿಗೆ ಪಠ್ಯಕ್ರಮ, ಪಠ್ಯಪುಸ್ತಕ ಒಳಪಡಲಿ

ಕರ್ನಾಟಕವು ತನ್ನದೇ ಆದ ಪಠ್ಯಕ್ರಮ ಮತ್ತು ಪಠ್ಯ ಪುಸ್ತಕಗಳನ್ನು ಅಭಿವೃದ್ಧಿಪಡಿಸುವ ಸಾಂವಿಧಾನಿಕ ಆದೇಶಕ್ಕೆ ಬದ್ಧವಾಗಿರಬೇಕು. ರಾಜ್ಯದ ಸಮಾಜೋ-ಸಾಂಸ್ಕೃತಿಕ ನೀತಿಗಳಿಗೆ ಒಳಪಡುವಂತಿರಬೇಕು. ರಾಜ್ಯದ ವಿಭಿನ್ನ ಹಿನ್ನೆಲೆಗಳಿಂದ ಬಂದ ವಿದ್ಯಾರ್ಥಿಗಳ ಆಚರಣೆಗಳು ಮತ್ತು ಸಂದರ್ಭಗಳಿಗೆ ಹೊಂದುವಂತಿರಬೇಕು. ವಿಜ್ಞಾನ ಮತ್ತು ಗಣಿತ ಸೇರಿದಂತೆ ಎಲ್ಲಾ ವಿಷಯಗಳಿಗೂ ಇದನ್ನು ಜಾರಿಗೊಳಿಸಬೇಕು. ರಾಜ್ಯ ಶಿಕ್ಷಣ ಮಂಡಳಿಯಡಿಯ ಶಾಲೆಗಳಲ್ಲಿ ಎನ್‌ಸಿಇಆರ್‍‌ಟಿ ಪಠ್ಯಪುಸ್ತಕಗಳನ್ನು ನೇರವಾಗಿ ಅಳವಡಿಸಿಕೊಳ್ಳುವ ಕ್ರಮವನ್ನು ನಿಲ್ಲಿಸಬೇಕು. ಬದಲಾಗಿ ಎಸ್‌ಸಿಇಆರ್‍‌ಟಿಯು ಉತ್ಕೃಷ್ಟ  ಗುಣಮಟ್ಟದ ಪಠ್ಯಪುಸ್ತಕ ಮಾಡುವುದು ಮತ್ತು ಪೂರಕ ಸಾಮಗ್ರಿಗಳನ್ನು ಸಮಯೋಚಿತವಾಗಿ ರಚಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಆಯೋಗವು ಸಲಹೆ ನೀಡಿದೆ.

ಪಠ್ಯಪುಸ್ತಕಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ಕನ್ನಡದಲ್ಲಿಯೇ ರೂಪಿಸಿದರೆ ಅವು ತಮ್ಮ ಪ್ರಾದೇಶಿಕ ಸೂಕ್ಷ್ಮತಗಳಿಗೆ ಸ್ಪಂದಿಸುತ್ತವೆ. ಪಠ್ಯಕ್ರಮ ಮತ್ತು ಕಲಿಕಾ ಸಾಮಗ್ರಿಗಳ ರೂಪುರೇಷೆಗಳು ಮತ್ತು ವಿಷಯಗಳನ್ನು ನಿರ್ಧರಿಸುವ ಕೆಲಸದ ಸೂಕ್ಷ್ಮ ಸ್ವರೂಪವನ್ನು ಪರಿಗಣಿಸಿದರೇ ಅಂತರಾಷ್ಟ್ರೀಯ ಸಮಸ್ಯೆಗಳು ಎಷ್ಟೇ ಪರಿಣಿತ ಮತ್ತು ಉತ್ತಮ ಸಂಪನ್ಮೂಲಗಳನ್ನು ಹೊಂದಿದ್ದರೂ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳ ನಿರ್ಣಾಯಕ ಕ್ಷೇತ್ರದಲ್ಲಿ ಅವರನ್ನು ತೊಡಗಿಸಿಕೊಳ್ಳುವುದು ಅಪೇಕ್ಷಣೀಯವಲ್ಲ ಎಂದು ಆಯೋಗವು ಹೇಳಿದೆ.

 

 

ಪಠ್ಯಕ್ರಮ ರಚನೆಯಲ್ಲಿ ಶಿಕ್ಷಕರು ಭಾಗವಹಿಸಲಿ

ಪ್ರಸ್ತುತ ಪಠ್ಯಕ್ರಮ ಅಭಿವೃದ್ಧಿ ಮತ್ತು ಪಠ್ಯಕ್ರಮ ಮತ್ತ ಪಠ್ಯಪುಸ್ತಕಗಳ ತಯಾರಿಕೆಗೆ ಅಳವಡಿಸಿಕೊಂಡಿರುವ ಕ್ರಮಗಳು ತರಗತಿಯೊಳಗಿನ ಬೋಧನೆಯನ್ನು ಪಠ್ಯಪುಸ್ತಕದ ಬರವಣಿಗೆಯಿಂದ ಬೇರೆಯಾಗಿ ನೋಡುತ್ತವೆ. ಇಂತಹ ಕೃತಕ ಬೇರ್ಪಡಿಕೆಯು ಶಿಕ್ಷಕರು ವಿಷಯ ಮತ್ತು ಬೋಧನಾ ಪ್ರಕ್ರಿಯೆಯಿಂದ ದೂರ ಉಳಿಯಲು ಕಾರಣವಾಗಿದೆ. ಪಠ್ಯಕ್ರಮ ಮತ್ತು ಪಠ್ಯ ಪುಸ್ತಕಗಳ ಅಭಿವೃದ್ಧಿಯಲ್ಲಿ ಉತ್ತಮ ಕ್ರಮಗಳನ್ನು ಅನುಸರಿಸುವ ಶಿಕ್ಷಕರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಮತ್ತು ಅವರನ್ನು ಕೊಡುಗೆ ನೀಡುವವರ ಪಟ್ಟಿಯಲ್ಲಿ ಸೇರಿಸಬೇಕು ಎಂದು ಆಯೋಗವು ಸಲಹೆ ನೀಡಿದೆ.

ಹೊರಗಿನವರಿಂದ ಮೌಲ್ಯಮಾಪನ ಬೇಡ

ಇಲಾಖೆ ಅಥವಾ ಹೊರಗಿನ ಅಧಿಕಾರಿಗಳಿಂದ ವಿದ್ಯಾರ್ಥಿಗಳ ಮೌಲ್ಯಮಾಪನ ನಡೆಸುವ ಪದ್ಧತಿಯನ್ನು  ಮತ್ತು ಶಾಲಾ ಶಿಕ್ಷಣದ ಆರಂಭಿಕ ಹಂತಗಳಲ್ಲಿ ಸಾರ್ವಜನಿಕ ಪರೀಕ್ಷೆ ನಡೆಸುವುದನ್ನು ರದ್ದುಗೊಳಿಸಬೇಕು ಎಂದು  ಆಯೋಗವು ಶಿಫಾರಸ್ಸು ಮಾಡಿದೆ. ಈ ಕ್ರಮಗಳು ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಹೊರೆಯಾಗುವುದಲ್ಲದೇ ಶಿಕ್ಷಕರ ಸಾಮರ್ಥ್ಯದ ಬಗ್ಗೆ ಅಪ ನಂಬಿಕೆ ಹುಟ್ಟು ಹಾಕಲಿದೆ. ಅವರನ್ನು  ಕುಗ್ಗುವಂತೆ ಮಾಡುತ್ತವೆ. ಮತ್ತು ಮಕ್ಕಳನ್ನು ವೈಫಲ್ಯದ ಭಯವನ್ನು  ಹುಟ್ಟಿಸುತ್ತವೆ ಎಂದು ಅಭಿಪ್ರಾಯಿಸಿದೆ.

 

 

ಮೌಲ್ಯಮಾಪನ ಕ್ರಮಗಳು ಬೆದರಿಕೆಯೊಡ್ಡದಿರಲಿ

ಇತ್ತೀಚಿನ ವರ್ಷಗಳಲ್ಲಿ ಬೋಧನಾ ನಿರತ ಶಿಕ್ಷಕರಿಂದ ಶಾಲೆ ಆಧಾರಿತ ಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳ ರಚನಾತ್ಮಕ ಮೌಲ್ಯಮಾಪನ ಬಾಧೆಗೊಳಗಾಗಿದೆ. ವಿದ್ಯಾರ್ಥಿಗಳ ಪ್ರಗತಿಯ ಮೌಲ್ಯಮಾಪನ ನಡೆಸುವ ಶಿಕ್ಷಕರು ಎಷ್ಟು ವಿಶ್ವಾಸಾರ್ಹರು ಅನ್ನುವ ಅನುಮಾನವೇ ಈ ಸಮಸ್ಯೆಯ ಕೇಂದ್ರ ಬಿಂದು. ಶಿಕ್ಷಕರ ಮರು ಜೋಡಣೆ ಮತ್ತು ಶಿಕ್ಷಕರಿಗೆ ಸ್ಥಳದಲ್ಲೇ ಬೆಂಬಲ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಮೌಲ್ಯ,ಮಾಪನ ನಡೆಸುವ ಶಿಕ್ಷಕರ ಮೇಲಿನ ವಿಶ್ವಾಸವನ್ನು ಮರು ಸ್ಥಾಪಿಸುವ ಅಗತ್ಯವಿದೆ. ಮುಖ್ಯವಾಗಿ ಶಾಲಾ ವಿದ್ಯಾರ್ಥಿಗಳ ಮೌಲ್ಯಮಾಪನ ಕ್ರಮಗಳು ಬೆದರಿಕೆಯೊಡ್ಡುವಂತಿರಬಾರದು ಮತ್ತು ವಿದ್ಯಾರ್ಥಿ ಶಿಕ್ಷಕರಿಬ್ಬರ ಪಾಲಿಗೂ ಹೊರೆಯಾಗುವಂತಿರಬಾರದು ಎಂದು ಆಯೋಗವು ಸಲಹೆ ನೀಡಿದೆ.

ಉತ್ತೀರ್ಣ, ಅನುತ್ತೀರ್ಣ, ಶೇಕಡವಾರು ಮುಂತಾದ ವ್ಯವಸ್ಥೆಯ ಸರಾಸರಿ ಕಾರ್ಯಕ್ಷಮತೆಯನ್ನು ಸುಧಾರಿಸುವತ್ತ ಅನಗತ್ಯ ಗಮನಹರಿಸುವುದರಿಂದ ಈ ಉದ್ದೇಶವು ವಿಮುಖಗೊಳ್ಳುತ್ತದೆ. ಇದನ್ನು ಮಿತಿಗೊಳಿಸುವ ಪ್ರಕ್ರಿಯೆಯು ತಾತ್ಕಾಲಿಕ ನಿರ್ಧಾರಗಳಿಗೆ ಕಾರಣವಾಗುತ್ತದೆ. ಮತ್ತು ಇದರ ಪರಿಣಾಮವಾಗಿ ವೈಯಕ್ತಿಕವಾಗಿ ವಿದ್ಯಾರ್ಥಿಗಳ ಅಂಕಗಳ ಹೆಚ್ಚಳಕ್ಕೆ  ಕಾರಣವಾಗುತ್ತದೆ ಎಂದು ಆಯೋಗವು ಹೇಳಿದೆ.

 

 

 

‘ಇದರ ಬದಲಾಗಿ ಕೇವಲ ನೆನಪಿನ ಶಕ್ತಿಯನ್ನು ಮಾತ್ರ ಪರೀಕ್ಷಿಸುವ ಪಠ್ಯಪುಸ್ತಕ ಆಧಾರಿತ ಪ್ರಶ್ನೆಗಳಿಗೆ ನೀಡಲಾಗುವ ಅನಗತ್ಯ ಪ್ರಾಮುಖ್ಯತೆಯ ಬದಲಿಗೆ ಉನ್ನತ ಮಟ್ಟದ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಪರೀಕ್ಷಿಸುವ ಪ್ರಶ್ನೆಗಳ ಮೂಲಕ ಪ್ರಶ್ನೆಪತ್ರಿಕೆಗಳನ್ನು ಸುಧಾರಿಸಲು ಪ್ರಯತ್ನಿಸಬೇಕು. ವಿಶ್ವಾಸಾರ್ಹತೆ ಮತ್ತು ಸಿಂಧುತ್ವವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರಮಾಣಿತ ಮತ್ತು ತಾಂತ್ರಿಕ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳುವ ಮೂಲಕ ಪ್ರಶ್ನೆಪತ್ರಿಕೆ ಮತ್ತು ಅಂಕ ಯೋಜನೆಗಳನ್ನು ರೂಪಿಸಬೇಕು,’ ಎಂದು ಆಯೋಗವು ಸಲಹೆ ನೀಡಿದೆ.

Hot this week

ಮಾನ್ಸೂನ್ ಅಧಿವೇಶನವೋ, ವಿಸ್ತರಿಸಿದ ಅಧಿವೇಶನವೋ: ಸಚಿವ ಸಂಪುಟ ಮಾರ್ಗದರ್ಶನ ಕೋರಿದ ಸಂಸದೀಯ ಇಲಾಖೆ

ಬೆಂಗಳೂರು; ಕರ್ನಾಟಕ ವಿಧಾನಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನ ಅನಿರ್ದಿಷ್ಟಾವಧಿಗೆ...

ಆರ್ಥಿಕ ಬಿಕ್ಕಟ್ಟು; ಶಿಕ್ಷಕರ ನೇಮಕಾತಿ, ವೃತ್ತಿಪರತೆ ಅಭಿವೃದ್ಧಿ ವೆಚ್ಚಕ್ಕೆ ತಡೆಹಿಡಿದಿತ್ತೇ ಸರ್ಕಾರ?

ಬೆಂಗಳೂರು; ರಾಜ್ಯದ ಹೆಚ್ಚಿನ ಸರ್ಕಾರಿ ಶಾಲೆಗಳು ಆರ್‍‌ಟಿಇ ಕಾಯ್ದೆಯು ಭೌತಿಕ ಮೂಲಸೌಕರ್ಯಗಳು...
Please Scan to make Your Contribution

Topics

ಮಾನ್ಸೂನ್ ಅಧಿವೇಶನವೋ, ವಿಸ್ತರಿಸಿದ ಅಧಿವೇಶನವೋ: ಸಚಿವ ಸಂಪುಟ ಮಾರ್ಗದರ್ಶನ ಕೋರಿದ ಸಂಸದೀಯ ಇಲಾಖೆ

ಬೆಂಗಳೂರು; ಕರ್ನಾಟಕ ವಿಧಾನಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನ ಅನಿರ್ದಿಷ್ಟಾವಧಿಗೆ...

ಆರ್ಥಿಕ ಬಿಕ್ಕಟ್ಟು; ಶಿಕ್ಷಕರ ನೇಮಕಾತಿ, ವೃತ್ತಿಪರತೆ ಅಭಿವೃದ್ಧಿ ವೆಚ್ಚಕ್ಕೆ ತಡೆಹಿಡಿದಿತ್ತೇ ಸರ್ಕಾರ?

ಬೆಂಗಳೂರು; ರಾಜ್ಯದ ಹೆಚ್ಚಿನ ಸರ್ಕಾರಿ ಶಾಲೆಗಳು ಆರ್‍‌ಟಿಇ ಕಾಯ್ದೆಯು ಭೌತಿಕ ಮೂಲಸೌಕರ್ಯಗಳು...

ಕಸ ವಿಲೇವಾರಿ ಟೆಂಡರ್‍‌ನಲ್ಲಿ ಅಕ್ರಮ; 10,000 ಕೋಟಿ ಕಿಕ್‌ ಬ್ಯಾಕ್‌ ಆರೋಪ, ಹೈಕಮಾಂಡ್ ಕಪ್ಪದ ಟೆಂಡರ್, ರಾಜ್ಯಪಾಲರಿಗೆ ದೂರು, ದಿ ಫೈಲ್ ವರದಿ ಬೆನ್ನಲ್ಲೇ ತುಟಿ ಬಿಚ್ಚಿದ ಆರ್ ಅಶೋಕ್

ಬೆಂಗಳೂರು; ಸಮಗ್ರ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯೂಎಂಎಲ್‌ ಯೋಜಿಸಿದ್ದ ಟೆಂಡರ್ ಪ್ಯಾಕೇಜ್‌ಗಳಲ್ಲಿ...

Related Articles

Popular Categories

error: Content is protected !!