ಬೆಂಗಳೂರು; ಕರ್ನಾಟಕ ವಿಧಾನಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿರುವ ಅಧಿವೇಶನವನ್ನೇ ವಿಸ್ತರಿಸಬೇಕೇ ಅಥವಾ ಮಾನ್ಸೂನ್ ಅಧಿವೇಶನಕ್ಕೆ ದಿನಾಂಕ, ಸ್ಥಳ ನಿಗದಿಗೊಳಿಸಬೇಕೇ ಎಂಬ ಕುರಿತು ಕಾನೂನು ಸಂಸದೀಯ ವ್ಯವಹಾರಗಳ ಸಚಿವಾಲಯವು ಸಚಿವ ಸಂಪುಟಕ್ಕೆ ಪ್ರಸ್ತಾವ ಸಲ್ಲಿಸಿದೆ.
ನೂತನ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ನಂತರ ಮೊದಲ ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಿದೆ. ಆದರೆ ಕಾನೂನು ಸಂಸದೀಯ ವ್ಯವಹಾರಗಳ ಖಾತೆಗೆ ಇನ್ನೂ ಯಾರನ್ನೂ ಸಚಿವರಾನ್ನಾಗಿ ನೇಮಿಸಿಲ್ಲ. ಅಲ್ಲದೇ ಎರಡನೇ ಹಂತದ ಸಚಿವರ ಪಟ್ಟಿಯೂ ಸಹ ಇದುವರೆಗೂ ಅಖೈರುಗೊಂಡಿಲ್ಲ. ಇದರ ಮಧ್ಯೆ ಮಾನ್ಸೂನ್ ಅಧಿವೇಶನ ನಡೆಸಬೇಕೇ ಅಥವಾ ಅನಿರ್ದಿಷ್ಟವಾಧಿಗೆ ಮುಂದೂಡಲ್ಪಟ್ಟಿರುವ ಅಧಿವೇಶನವನ್ನು ವಿಸ್ತರಿಸುವುದೇ ಅಥವಾ ಅದನ್ನು ಮುಕ್ತಾಯಗೊಳಿಸಲು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಬೇಕೇ ಎಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವಾಲಯವು ಸಚಿವ ಸಂಪುಟದ ಮಾರ್ಗದರ್ಶನ ಕೋರಿದೆ.
ಈ ಸಂಬಂಧ ಇಲಾಖೆಯು ಸಚಿವ ಸಂಪುಟಕ್ಕೆ ಪ್ರಸ್ತಾವವನ್ನು ಮಂಡಿಸಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಪ್ರಸ್ತಾವನೆ 1ರಲ್ಲೇನಿದೆ?
ಕರ್ನಾಟಕ ವಿಧಾನಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನಗಳನ್ನು ಕರೆಯಲು 2026ರ ಜನವರಿ 14ರಂದು ಅಧಿಸೂಚನೆ ಹೊರಡಿಸಲಾಗಿತ್ತು. (DPAL 01 SAMVYAVI 2026 ) ಈ ಅಧಿಸೂಚನೆಯ ಮೂಲಕ 2026ರ ಜನವರಿ 22 ರಂದು ಬೆಂಗಳೂರಿನಲ್ಲಿ ಸಭೆ ಸೇರಲು ಕರೆಯಲಾಗಿತ್ತು. 20206ರ ಜನವರಿ 22ರಂದು ಆರಂಭವಾದ ಕರ್ನಾಟಕದ ಹದಿನಾರನೇ ವಿಧಾನಸಭೆಯ ಒಂಬತ್ತನೇ ಅಧಿವೇಶನವು 2026ರ ಫೆ.4ರವರೆಗೆ ನಡೆದಿತ್ತು. ಆ ನಂತರ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.
ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದ ಕರ್ನಾಟಕದ ಹದಿನಾರನೇ ವಿಧಾನಸಭೆಯ ಒಂಬತ್ತನೇ ಅಧಿವೇಶನ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ 158ನೇ ಅಧಿವೇಶನವು 2026ರ ಮಾರ್ಚ್ 6ರಂದು ಸೇರಿತ್ತು. ನಂತರ ಈ ಅಧಿವೇಶನವು 2026ರ ಮಾರ್ಚ್ 26ರಂದು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.
‘ಆದ್ದರಿಂದ ಕರ್ನಾಟಕ ವಿಧಾನಸಭೆ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನಗಳನ್ನು ಮುಕ್ತಾಯಗೊಳಿಸಲು (Prorogue) ಮಾನ್ಯ ರಾಜ್ಯಪಾಲರಿಗೆ ಶಿಫಾರಸು ಮಾಡುವ ಕುರಿತು ಸಚಿವ ಸಂಪುಟದ ಆದೇಶವನ್ನು ಕೋರುತ್ತೇವೆ,’ ಎಂದು ಇಲಾಖೆಯು ಪ್ರಸ್ತಾವನೆಯಲ್ಲಿ ಕೋರಿರುವುದು ತಿಳಿದು ಬಂದಿದೆ.
ಅಲ್ಲದೇ ಈ ಸಂಬಂಧ ಪ್ರಸ್ತಾವನೆ – 2ನ್ನೂ ಮಂಡಿಸಿದೆ.
ಕರ್ನಾಟಕ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಮಳೆಗಾಲದ ಅಧಿವೇಶನದ ದಿನಾಂಕ, ಸಮಯ, ಸ್ಥಳ ಹಾಗೂ ಅವಧಿಯನ್ನು ನಿಗದಿಪಡಿಸಬೇಕಿದೆ. ಅದನ್ನು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಿಗೆ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಗಳಿಗೆ ಪತ್ರದ ಮೂಲಕ ತಿಳಿಸುವುದು ಈ ಪ್ರಸ್ತಾವನೆಯ ಉದ್ದೇಶವಾಗಿದೆ ಎಂದು ತಿಳಿಸಿದೆ.

ವಿಧಾನಮಂಡಲದ ಅಧಿವೇಶನವನ್ನು ಕರೆಯುವುದು (Summoning), ಅಧಿವೇಶನವನ್ನು ಮುಕ್ತಾಯಗೊಳಿಸುವುದು (Prorogation) ಹಾಗೂ ಅದಕ್ಕೆ ಸಂಬಂಧಿಸಿದ ಇತರೆ ವಿಷಯಗಳು ಕರ್ನಾಟಕ ಸರ್ಕಾರ (ಕಾರ್ಯವ್ಯವಹಾರಗಳ ನಿರ್ವಹಣೆ) ನಿಯಮಗಳು, 1977 ರ ಪ್ರಥಮ ಅನುಸೂಚಿಯ (First Schedule) ಐಟಂ 3 ರ ವ್ಯಾಪ್ತಿಗೆ ಒಳಪಡುತ್ತವೆ.
ಭಾರತ ಸಂವಿಧಾನದ ಅನುಚ್ಛೇದ 174 ರ ಉಪಖಂಡ (2) ರ ಉಪವಿಧಿ (ಅ) ಅನ್ವಯ ರಾಜ್ಯಪಾಲರು ಕಾಲಕಾಲಕ್ಕೆ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಥವಾ ಯಾವುದೇ ಒಂದು ಸದನದ ಅಧಿವೇಶನವನ್ನು (Prorogue) ಮುಕ್ತಾಯಗೊಳಿಸಬಹುದು. ಕೆಲವು ಶಾಸನಾತ್ಮಕ ಕ್ರಮಗಳನ್ನು ಅಧ್ಯಾದೇಶಗಳ (Ordinances) ರೂಪದಲ್ಲಿ ಜಾರಿಗೊಳಿಸುವ ಅಗತ್ಯ ಉಂಟಾಗಬಹುದು. ರಾಜ್ಯ ವಿಧಾನಮಂಡಲದ ಉಭಯ ಸದನಗಳು ಅಧಿವೇಶನದಲ್ಲಿರುವ ಸಂದರ್ಭದಲ್ಲಿ, ಭಾರತ ಸಂವಿಧಾನದ ಅನುಚ್ಛೇದ 213 ರ ಅಡಿಯಲ್ಲಿ ಅಧ್ಯಾದೇಶವನ್ನು ಹೊರಡಿಸಲು ಸಾಧ್ಯವಿಲ್ಲ.
ರಾಜ್ಯಪಾಲರು ( NO.GS 33 GOB 2023 ಸಂಖ್ಯೆಯ, 29.05.2026) ಕರ್ನಾಟಕದ ಮುಖ್ಯಮಂತ್ರಿಯವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಅಲ್ಲದೇ ಅವರ ನೇತೃತ್ವದ ಸಚಿವ ಸಂಪುಟವನ್ನು ತಕ್ಷಣದಿಂದಲೇ ವಿಸರ್ಜಿಸಿದ್ದಾರೆ. ಹಾಗೆಯೇ ರಾಜ್ಯಪಾಲರು (GS 57 GOB 2023 ಸಂಖ್ಯೆಯ, 30.05.2026) ಕರ್ನಾಟಕದ ನಾಮನಿರ್ದೇಶಿತ ಮುಖ್ಯಮಂತ್ರಿಯವರನ್ನು ಅವರ ಸಚಿವ ಸಂಪುಟದ ಸದಸ್ಯರೊಂದಿಗೆ (03.06.2026) ರಂದು ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸಿದ್ದರು.
‘ಈ ಮೇಲಿನ ಪರಿಸ್ಥಿತಿಯನ್ನು ಪರಿಗಣಿಸಿ, ಕರ್ನಾಟಕ ವಿಧಾನಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನಗಳನ್ನು ಮುಕ್ತಾಯಗೊಳಿಸಲು (Prorogue) ಮಾನ್ಯ ರಾಜ್ಯಪಾಲರಿಗೆ ಶಿಫಾರಸು ಮಾಡಬೇಕು,’ ಎಂದು ಸಚಿವ ಸಂಪುಟದ ಆದೇಶ ಕೋರಿದೆ.
ಕರ್ನಾಟಕ ವಿಧಾನಸಭೆ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನಗಳನ್ನು (26.03.2026 ದಿನಾಂಕದ KLAS/LGA/38/SMN/2023-26 ಮತ್ತು KLC/LGC/158 (Contd Sessions)/2026 ಸಂಖ್ಯೆಯ ಅಧಿಸೂಚನೆಗಳ ಮೂಲಕ) ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಆದಾಗ್ಯೂ, ಕರ್ನಾಟಕ ವಿಧಾನಸಭೆ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನಗಳನ್ನು ಇದುವರೆಗೆ ಮುಕ್ತಾಯಗೊಳಿಸಲಾಗಿಲ್ಲ (Prorogued). ಆದ್ದರಿಂದ, ಈಗ ಕರೆಯಲಾಗುವ ಅಧಿವೇಶನವು ವಿಸ್ತೃತ ಅಧಿವೇಶನ (Extended Session) ಆಗಿರುತ್ತದೆ ಎಂದು ಇಲಾಖೆಯು ಸಚಿವ ಸಂಪುಟದ ಗಮನ ಸೆಳೆದಿದೆ.

ಕರ್ನಾಟಕ ರಾಜ್ಯ ವಿಧಾನಮಂಡಲದಲ್ಲಿ ಸರ್ಕಾರದ ಕಾರ್ಯ ನಿರ್ವಹಣೆ ಅಧಿನಿಯಮ, 2005 (ಕರ್ನಾಟಕ ಅಧಿನಿಯಮ ಸಂಖ್ಯೆ 26, 2005) ರ ಕಲಂ 4 ರ ಪ್ರಕಾರ, ಪ್ರತಿವರ್ಷ ವಿಧಾನಮಂಡಲದ ಸಭೆಗಳನ್ನು ಸಾಧ್ಯವಾದಷ್ಟು ನಾಲ್ಕು ಅಧಿವೇಶನಗಳಾಗಿ ವಿಭಾಗಿಸಬೇಕಿದೆ. ಉದ್ಘಾಟನಾ ಅಧಿವೇಶನ (Opening Session) ವು ರಾಜ್ಯಪಾಲರ ಭಾಷಣದೊಂದಿಗೆ ಆರಂಭವಾಗುತ್ತದೆ. ಇದು ಸಾಮಾನ್ಯವಾಗಿ ಜನವರಿ ತಿಂಗಳ ಎರಡನೇ ವಾರದಲ್ಲಿ ಪ್ರಾರಂಭವಾಗಲಿದೆ. ಇದು ಕನಿಷ್ಠ 15 ದಿನಗಳ ಅವಧಿಗೆ ನಡೆಯಬೇಕು.
ಬಜೆಟ್ ಅಧಿವೇಶನವು ಸಾಮಾನ್ಯವಾಗಿ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಪ್ರಾರಂಭವಾಗಲಿದೆ. ಇದು ಕನಿಷ್ಠ 20 ದಿನಗಳ ಅವಧಿಗೆ ನಡೆಯಬೇಕು. ಮಳೆಗಾಲದ ಅಧಿವೇಶನವು ಸಾಮಾನ್ಯವಾಗಿ ಜುಲೈ ತಿಂಗಳ ಎರಡನೇ ವಾರದಲ್ಲಿ ಪ್ರಾರಂಭವಾಗಬೇಕು. ಇದು ಕನಿಷ್ಠ 15 ದಿನಗಳ ಅವಧಿಗೆ ನಡೆಯಬೇಕು. ಚಳಿಗಾಲದ ಅಧಿವೇಶನವು ಸಾಮಾನ್ಯವಾಗಿ ನವೆಂಬರ್ ತಿಂಗಳ ಎರಡನೇ ವಾರದಲ್ಲಿ ಪ್ರಾರಂಭವಾಗುತ್ತದೆ. ಇದು ಕನಿಷ್ಠ 10 ದಿನಗಳ ಅವಧಿಗೆ ನಡೆಯಬೇಕು ಎಂದು ಕಾಲಾನುಕ್ರಮವನ್ನು ಸಚಿವ ಸಂಪುಟದ ಪ್ರಸ್ತಾವನೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ರಾಜ್ಯ ವಿಧಾನಮಂಡಲದ ಅಧಿವೇಶನವನ್ನು ಕರೆಯುವುದು (Summoning), ಅಧಿವೇಶನವನ್ನು ಮುಕ್ತಾಯಗೊಳಿಸುವುದು (Prorogation) ಹಾಗೂ ಸಂಬಂಧಿತ ಇತರೆ ವಿಷಯಗಳು ಕರ್ನಾಟಕ ಸರ್ಕಾರ (ಕಾರ್ಯವ್ಯವಹಾರಗಳ ನಿರ್ವಹಣೆ) ನಿಯಮಗಳು, 1977 ರ ಪ್ರಥಮ ಅನುಸೂಚಿಯ ಐಟಂ 3 ರ ವ್ಯಾಪ್ತಿಗೆ ಒಳಪಡಲಿದೆ.
ಭಾರತ ಸಂವಿಧಾನದ ಅನುಚ್ಛೇದ 174 ರ ಉಪಖಂಡ (2) ರ ಉಪವಿಧಿ (ಅ) ಅನ್ವಯ, ಕರ್ನಾಟಕ ವಿಧಾನಸಭೆ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನಗಳನ್ನು ಮುಕ್ತಾಯಗೊಳಿಸಲು (Prorogue) ಮಾನ್ಯ ರಾಜ್ಯಪಾಲರಿಗೆ ಶಿಫಾರಸು ಮಾಡುವ ಕುರಿತು ಸಚಿವ ಸಂಪುಟದ ಅನುಮೋದನೆ ಕೋರಿದೆ.

ಅಥವಾ ಕರ್ನಾಟಕ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಮಳೆಗಾಲದ ಅಧಿವೇಶನದ ದಿನಾಂಕ, ಸಮಯ, ಸ್ಥಳ ಹಾಗೂ ಅವಧಿಯನ್ನು ಸಚಿವ ಸಂಪುಟವು ನಿಗದಿಪಡಿಸಬೇಕು. ಅದನ್ನು ಕರ್ನಾಟಕ ವಿಧಾನಸಭೆಯ ಮಾನ್ಯ ಸಭಾಧ್ಯಕ್ಷರಿಗೆ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಗಳಿಗೆ ಪತ್ರದ ಮೂಲಕ ತಿಳಿಸಲು ಸಚಿವ ಸಂಪುಟದ ಆದೇಶ ಕೋರಿದೆ.




