ಅಧಿಕಾರ ದುರುಪಯೋಗ, ಭ್ರಷ್ಟಾಚಾರದ ಆರೋಪ; ಐಪಿಎಸ್‌ ಶಿವಕುಮಾರ್‌ ವಿರುದ್ಧ ಕ್ರಮಕ್ಕೆ ಪತ್ರ

ಬೆಂಗಳೂರು: ತೆರಿಗೆ ಕಟ್ಟಿಸಿಕೊಳ್ಳದೇ ವಾಹನಗಳ ನೋಂದಣಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟವನ್ನುಂಟು ಮಾಡುತ್ತಿರುವ ಜಾಲದ ಕಾರ್ಯಾಚರಣೆಯ ಹಿಂದೆ ಹಿರಿಯ ಐಪಿಎಸ್‌ ಅಧಿಕಾರಿಯೊಬ್ಬರ ಹೆಸರು ಥಳಕು ಹಾಕಿಕೊಂಡಿದೆ.

 

ಸಾರಿಗೆ ಇಲಾಖೆಗೆ ಸ್ಮಾರ್ಟ್ ಕಾರ್ಡ್‌ ಹಾಗೂ ಇತರೆ ಕಾರ್ಡ್‌ಗಳನ್ನು ಪೂರೈಸುವ ರೋಸ್‌ಮೆರ್ಟಾ ಟೆಕ್ನಾಲಜೀಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ಹಿರಿಯ ಐಪಿಎಸ್‌ ಅಧಿಕಾರಿ ಶಿವಕುಮಾರ್‌ ಅವರು ಪರೋಕ್ಷವಾಗಿ ಸಹಾಯ ಮಾಡುತ್ತಿದ್ದಾರೆ ಎಂಬ ದೂರು ಸಲ್ಲಿಕೆಯಾಗಿದೆ. ಇದನ್ನಾಧರಿಸಿ ಅಗತ್ಯ ಕ್ರಮ ಕೈಗೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸಾರಿಗೆ ಇಲಾಖೆಗೆ ಅನಧಿಕೃತ ಟಿಪ್ಪಣಿಯನ್ನು 2022ರ ಮಾರ್ಚ್ 31ರಂದು ರವಾನಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ರಾಜ್ಯದ ಕೆಲವೊಂದು ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಕೆಲವೊಂದು ಐಷಾರಾಮಿ ಕಾರುಗಳಿಗೆ ಜೀವಾವಧಿ ತೆರಿಗೆ ಪಾವತಿಸಿಕೊಳ್ಳದೇ ನೋಂದಣಿ ಮಾಡಿ ಸರ್ಕಾರಕ್ಕೆ ಅಪಾರ ಪ್ರಮಾಣದಲ್ಲಿ ತೆರಿಗೆ ನಷ್ಟ ಉಂಟು ಮಾಡಿರುವ ಪ್ರಕರಣದ ಬಗ್ಗೆ 2022ರ ಮಾರ್ಚ್‌ 25ರಂದು ಅಧಿವೇಶನದಲ್ಲಿ ಪ್ರಸ್ತಾಪವಾದ ಐದೇ ದಿನದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಬರೆದಿರುವ ಪತ್ರದಲ್ಲಿ ಹಿರಿಯ ಐಪಿಎಸ್‌ ಅಧಿಕಾರಿ ಶಿವಕುಮಾರ್‌ ಅವರ ಹೆಸರು ಪ್ರಸ್ತಾಪವಾಗಿರುವುದು ಮುನ್ನೆಲೆಗೆ ಬಂದಿದೆ.

 

‘ಐಪಿಎಸ್‌ ಅಧಿಕಾರಿ ಶಿವಕುಮಾರ್‌ ಅವರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ. ರೋಸ್‌ಮೆರ್ಟಾ ಟೆಕ್ನಾಲಜಿ ಪ್ರೈವೈಟ್‌ ಲಿಮಿಟೆಡ್‌ಗೆ ಪರೋಕ್ಷವಾಗಿ ಸಹಾಯ ಮಾಡುತ್ತಿದ್ದು ಸರ್ಕಾರಕ್ಕೆ ವಂಚಿಸುತ್ತಿದ್ದಾರೆ. ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು,’ ಎಂಬ ದೂರು ಅರ್ಜಿಯ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು,’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ (ಸಂಖ್ಯೆ; ಸಿಆಸುಇ 43 ಎಸ್‌ಪಿಎಸ್‌ 2022- 31-03-2022) ಜೇಮ್ಸ್‌ ತಾರಕನ್‌ ಅವರು ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅನಧಿಕೃತ ಟಿಪ್ಪಣಿ ಹಾಕಿದ್ದಾರೆ.

 

ಸಾರಿಗೆ ಇಲಾಖೆಗೆ ಬರೆದಿರುವ ಪತ್ರದ ಪ್ರತಿ

 

ಸಾರಿಗೆ ಇಲಾಖೆಗೆ ಸ್ಮಾರ್ಟ್‌ ಕಾರ್ಡ್‌ ಮತ್ತು ಇತರೆ ಕಾರ್ಡ್‌ಗಳನ್ನು ಪೂರೈಸುವ ರೋಸ್‌ಮೆರ್ಟಾ ಟೆಕ್ನಾಲಜೀಸ್‌ ಪ್ರೈವೈಟ್‌ ಲಿಮಿಟೆಡ್‌ ನ ಉದ್ಯೋಗಿ ಗಿರೀಶ್‌ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಕಂಪನಿಯಿಂದ ತನಗೆ ನೀಡಿದ್ದ ಯೂಸರ್‌ ಐಡಿ ಮತ್ತು ಪಾಸ್‌ವರ್ಡ್‌ ಬಳಸಿಕೊಂಡು ತೆರಿಗೆ ಕಟ್ಟಿಸಿಕೊಳ್ಳದೇ ವಾಹನಗಳನ್ನು ನೋಂದಾಯಿಸುತ್ತಿದ್ದ ಎಂಬ ಆರೋಪದ ಕುರಿತು ಬಂಧಿಸಲಾಗಿತ್ತು.

 

ಕಂಪನಿಯ ತಾಂತ್ರಿಕ ತಜ್ಞನಾಗಿದ್ದ ಗಿರೀಶ್, ಹೆಚ್ಚಾಗಿ ಐಷಾರಾಮಿ ಕಾರುಗಳ ನೋಂದಣಿ ಸಂದರ್ಭದಲ್ಲಿ ಅಕ್ರಮ ಎಸಗಿದ್ದ ಎಂಬುದು ಪೊಲೀಸರ ತನಿಖೆ ವೇಳೆಯಲ್ಲಿ ಪತ್ತೆ ಹಚ್ಚಿದ್ದರು. ಹೊರ ರಾಜ್ಯಗಳ ಹೆಸರಿನಲ್ಲಿ ಕಾರುಗಳಿಗೆ ನಕಲಿ ನೋಂದಣಿ ಸಂಖ್ಯೆ ಲಗತ್ತಿಸಿ ಅದೇ ನೋಂದಣಿ ಸಂಖ್ಯೆ ಅಧರಿಸಿ ಪ್ರಕ್ರಿಯೆಯನ್ನೂ ಆರಂಭಿಸುತ್ತಿದ್ದ. ವಾಹನಗಳ ಮಾಲೀಕರಿಂದ ಯಾವುದೇ ತೆರಿಗೆ ಕಟ್ಟಿಸಿಕೊಳ್ಳದೇ ‘ಕೆಎ’ ನೋಂದಣಿ ಮಾಡಿಸಿಕೊಡುತ್ತಿದ್ದ. ಸರ್ಕಾರ ನಿಗದಿಪಡಿಸಿದ್ದ ತೆರಿಗೆಗಿಂತಲೂ ಕಡಿಮೆ ಹಣವನ್ನು ತಾನೇ ಪಡೆದುಕೊಳ್ಳುತ್ತಿದ್ದ’ ಎಂಬ ಅಂಶವನ್ನು ತನಿಖಾಧಿಕಾರಿಗಳು ಬಹಿರಂಗಗೊಳಿಸಿದ್ದರು.

 

ತನಗೆ ನೀಡಿದ್ದ ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ಬಳಸಿಕೊಂಡು ವಾಹನಗಳ ವಿವರವನ್ನು ಅಕ್ರಮವಾಗಿ ‘ವಾಹನ್’ ತಂತ್ರಾಂಶದಲ್ಲಿ ದಾಖಲಿಸಿ ಕೃತ್ಯ ಎಸಗುತ್ತಿದ್ದ ಎಂಬ ಆರೋಪದ ಮೇರೆಗೆ ಬಂಧಿಸಲಾಗಿತ್ತು. ‘ಔಡಿ, ಬೆನ್ಜ್, ಬಿಎಂಡಬ್ಲ್ಯು, ಜಾಗ್ವಾರ್, ಲ್ಯಾಂಬೋರ್ಗಿನಿ ಹಾಗೂ ಇತರೆ ಐಷಾರಾಮಿ ಕಾರುಗಳ ನೋಂದಣಿ ಸಂದರ್ಭದಲ್ಲಿ ಅಕ್ರಮ ಎಸಗಿರುವುದು ತನಿಖೆಯಿಂದ ಹೊರಬಂದಿತ್ತು.

 

ಪ್ರಾದೇಶಿಕ ಸಾರಿಗೆ ಕಚೇರಿಯ ಬೆಂಗಳೂರು ಕೇಂದ್ರದಲ್ಲಿ ಐಷಾರಾಮಿ ಕಾರುಗಳು ತೆರಿಗೆ ಪಾವತಿಸದೇ ನೋಂದಣಿ ಆಗಿರುವ ಕುರಿತು ಸಾರಿಗೆ ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ತಂಡವನ್ನು ನೇಮಿಸಲಾಗಿತ್ತು. 2021ರ ನವೆಂಬರ್ 30ರ ಅಂತ್ಯಕ್ಕೆ ನೋಂದಾಯಿಸಿದ್ದ 20 ಲಕ್ಷ ರು.ಗಳಿಗೂ ಮೇಲ್ಪಟ್ಟ ಬೆಲೆಯ ವಾಹನಗಳ ಪರಿಶೀಲನೆ ಮಾಡಿ ಕೆಲವೊಂದ ವಾಹನಗಳು ತೆರಿಗೆ ಪಾವತಿಸದೇ ನೋಂದಣಿ ಆಗಿವೆ ಎಂದು ತನಿಖಾ ತಂಡವು ವರದಿ ನೀಡಿತ್ತು.

 

ಅಲ್ಲದೆ ತೆರಿಗೆ ಪಾವತಿಸದೇ ನೋಂದಣಿಯಾದ ವಾಹನಗಳ ಕಡತಗಳೂ ನಾಪತ್ತೆಯಾಗಿರುವ ಕಾರಣ ತೆರಿಗೆ ನಷ್ಟದ ಕುರಿತು ನಿಖರವಾದ ಮಾಹಿತಿ ಲಭ್ಯವಾಗಿರುವುದಿಲ್ಲ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಅವರು ಸದನಕ್ಕೆ ಉತ್ತರಿಸಿದ್ದರು.

the fil favicon

SUPPORT THE FILE

Latest News

Related Posts