Saturday | July 11, 2026 |

200 ಕೋಟಿ ಅನುದಾನದ ಕೊರತೆ, ಕಮಿಷನ್‌ಗೆ ಬೇಡಿಕೆ; ಬ್ರಾಹ್ಮಣರಹಳ್ಳಿ ಸೇರಿ ರಾಜ್ಯಾದ್ಯಂತ ಪೂರ್ಣಗೊಳ್ಳದ ಅಂಬೇಡ್ಕರ್, ಬಾಬುಜಗಜೀವನ ರಾಂ ಭವನ, ವಾಲ್ಮೀಕಿ ಭವನ ಕಾಮಗಾರಿ

ಬೆಂಗಳೂರು; ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯು ಕೈಗೆತ್ತಿಕೊಂಡಿದ್ದ  ಡಾ ಬಿ ಆರ್ ಅಂಬೇಡ್ಕರ್ ಭವನ, ಬಾಬು ಜಗಜೀವನ್ ರಾಂ ಭವನ, ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳ ಪೈಕಿ 99ರಷ್ಟು ಕಾಮಗಾರಿಗಳು ಇನ್ನೂ ಅಂತಿಮಗೊಂಡಿಲ್ಲ. 2026ರ ಫೆ.21ರ ಅಂತ್ಯಕ್ಕೆ 99 ಕಾಮಗಾರಿಗಳಿಗೆ ಅಂದಾಜು 200 ಕೋಟಿಗೂ ಹೆಚ್ಚು ಮೊತ್ತದ ಅನುದಾನ ಕೊರತೆಯಾಗಿರುವುದು ಇದೀಗ ಬಹಿರಂಗವಾಗಿದೆ.

ರಾಜ್ಯದ ವಿವಿಧ ಇಲಾಖೆಗಳ ಮೂಲಕ ಕೈಗೊಂಡಿರುವ ಸರ್ಕಾರಿ ಕಟ್ಟಡ ಕಾಮಗಾರಿಗಳಲ್ಲಿ ಹಲವು ಕಾಮಗಾರಿಗಳು ಪೂರ್ಣಗೊಂಡಿದ್ದರೂ ಉದ್ಘಾಟನೆ, ಹಸ್ತಾಂತರ ಪ್ರಕ್ರಿಯೆಗಳು ಪೂರ್ಣಗೊಂಡಿಲ್ಲ. ಕೆಲವು ಕಾಮಗಾರಿಗಳು ಈಗಲೂ ಅಪೂರ್ಣ ಸ್ಥಿತಿಯಲ್ಲಿವೆ. ಅಲ್ಲದೇ ಈ ಕಾಮಗಾರಿಗಳು ದೀರ್ಘ ಕಾಲದಿಂದಲೂ ಬಾಕಿ ಇವೆ.

ಪೂರ್ಣಗೊಳ್ಳಲು ಬಾಕಿ ಇರುವ 99 ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಅವಶ್ಯಕತೆ ಇದೆ. ಹಾಗೆಯೇ ಈ ಪೈಕಿ ಹಲವು ಕಾಮಗಾರಿಗಳಿಗೆ ಅನುದಾನವು ಮಂಜೂರಾಗಿದ್ದರೂ ಸಹ ಬಿಡುಗಡೆಯಾಗಿಲ್ಲ. ಇನ್ನು ಕೆಲವಡೆ ಅನುದಾನದ ಕೊರತೆ ಕಾಣಿಸಿಕೊಂಡಿದೆ. ಇನ್ನು ಹಲವೆಡೆ ಕಾಮಗಾರಿಗಳು ಪೂರ್ಣಗೊಂಡಿದ್ದರೂ ಸಹ  ರಾಜಕೀಯ ಹಿತಾಸಕ್ತಿ, ಮನಸ್ತಾಪ ಮತ್ತು ರಾಜಕೀಯ, ಕಮಿಷನ್‌ಗೆ ಬೇಡಿಕೆ ಸೇರಿದಂತೆ  ಇನ್ನಿತರೆ ಕಾರಣಗಳಿಗಾಗಿ ಅನುದಾನವು ಬಿಡುಗಡೆಯಾಗಿಲ್ಲ, ಭವನಗಳು  ಉದ್ಭಾಟನೆ ಆಗಿಲ್ಲ.  ಹಲವೆಡೆ ಉದ್ಘಾಟನೆಗೆ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ದಿನಾಂಕ ನಿಗದಿಪಡಿಸಿಲ್ಲ. ಹೀಗಾಗಿ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಮುದಾಯ ಭವನಗಳು ಪಾಳುಬಿದ್ದಿವೆ.

ಕಾಂಗ್ರೆಸ್‌ ಭವನ ಟ್ರಸ್ಟ್‌  ಹೆಸರಿನಲ್ಲಿ  ಸಿ ಎ ನಿವೇಶನಗಳನ್ನು ಮಂಜೂರು ಮಾಡಿಸುವುದರಲ್ಲಿ ಅತ್ಯಂತ ಆಸಕ್ತಿ ಹೊಂದಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯು ಕೈಗೆತ್ತಿಕೊಂಡಿದ್ದ  ಡಾ ಬಿ ಆರ್ ಅಂಬೇಡ್ಕರ್ ಭವನ, ಬಾಬು ಜಗಜೀವನ್ ರಾಂ ಭವನ, ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸುವುದರತ್ತ  ಮುತುವರ್ಜಿ ವಹಿಸಿಲ್ಲ.

ಸರ್ಕಾರಿ ಕಟ್ಟಡಗಳ ಕಾಮಗಾರಿಗಳ ಮುಂದುವರಿಕೆಗೆ ಅನುದಾನ ಕೊರತೆಯಾಗಿರುವ ಕುರಿತು ಸಚಿವರಾಗಿದ್ದ ಎಚ್ ಸಿ ಮಹದೇವಪ್ಪ ಅವರೊಂದಿಗೆ ಅಧಿಕಾರಿಗಳು ಹಲವು ಬಾರಿ ಚರ್ಚಿಸಿದ್ದರು. ನೂತನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೊಂದಿಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಮಾಹಿತಿ ಒದಗಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್‌ ಅವರು 2026ರ ಫೆ.21ರಂದೇ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಬರೆದಿರುವ ಪತ್ರ ಮತ್ತು ಅಪೂರ್ಣಗೊಂಡಿರುವ ಕಾಮಗಾರಿಗಳ ಪಟ್ಟಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಈ ಪತ್ರದ ಜತೆಯಲ್ಲಿಯೇ ಅಪೂರ್ಣಗೊಂಡಿರುವ ಕಾಮಗಾರಿಗಳ ಪಟ್ಟಿಯನ್ನೂ ಒದಗಿಸಿದ್ದಾರೆ. ಸದ್ಯ ಸಮಾಜ ಕಲ್ಯಾಣ ಇಲಾಖೆಗೆ ಇನ್ನೂ ಯಾರನ್ನೂ ಸಚಿವರಾನ್ನಾಗಿ ನೇಮಿಸಿಲ್ಲ. ಹೀಗಾಗಿ ಈ ಕುರಿತು ಚರ್ಚಿಸಲು  ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರ ಬಳಿ ಚರ್ಚೆಗೆ ಬಾಕಿ ಇದೆ.

‘ಸರ್ಕಾರಿ ಸ್ವತ್ತುಗಳು ಬಳಕೆಯಾಗದೇ ಉಳಿಯುವುದರಿಂದ ಉದ್ದೇಶಿತ ಸಾರ್ವಜನಿಕ ಸೇವೆಗಳು ವಿಳಂಬವಾಗುತ್ತದೆ. ಕಾಮಗಾರಿಗಳು ಪೂರ್ಣಗೊಳ್ಳದಿದ್ದಲ್ಲಿ ವೆಚ್ಚವೂ ಸಹ ಹೆಚ್ಚಾಗುತ್ತದೆ. ಆದ್ದರಿಂದ ತಮ್ಮ ಇಲಾಖೆಯಲ್ಲಿ ಬಾಕಿ ಇರುವ ಕಾಮಗಾರಿಗಳ ಸ್ಥಿತಿಗತಿಯನ್ನು ತುರ್ತಾಗಿ ಪರಿಶೀಲಿಸಬೇಕು,’ ಎಂದು ಶಾಲಿನಿ ರಜನೀಶ್‌ ಅವರು ನಿರ್ದೇಶಿಸಿರುವುದು ಪತ್ರದಿಂದ ತಿಳಿದು ಬಂದಿದೆ.

ದೇವದುರ್ಗ ಪಟ್ಟಣದಲ್ಲಿ 2023ರಲ್ಲೇ ಡಾ ಬಿ ಆರ್ ಅಂಬೇಡ್ಕರ್‍‌ ಭವನ ನಿರ್ಮಾಣಕ್ಕೆ 128 ಲಕ್ಷ ಮಂಜೂರಾಗಿತ್ತು. ಈ ಕಾಮಗಾರಿಯು 2024ರ ಡಿಸೆಂಬರ್‍‌ ಹೊತ್ತಿಗೆ ಪೂರ್ಣಗೊಂಡಿತ್ತು. ಆದರೆ ಮಾಜಿ ಸಚಿವ ಕೆ ಶಿವನಗೌಡ ನಾಯಕ ಹಾಗೂ ಈಗಿನ ಶಾಸಕ ಜಿ ಕರೆಮ್ಮ ನಾಯಕ ಅವರ ನಡುವೆ ಇರುವ ಮನಸ್ತಾಪಗಳಿಂದಾಗಿ ಭವನ ಉದ್ಘಾಟನೆ ಆಗಿಲ್ಲ ಎಂದು ಇಲಾಖೆಯು ತಿಳಿಸಿದೆ.

ತಿಪಟೂರು ಪಟ್ಟಣದ ಹಾಸನ ರಸ್ತೆಯಲ್ಲಿರುವ ಲಿಂಗದಹಳ್ಳಿ  ವೃದ್ಧಾಶ್ರಮ ನಿರ್ಮಾಣಕ್ಕೆ 2022ನೇ ಸಾಲಿನಲ್ಲಿಯೇ 2.10 ಕೋಟಿ ರು ಅನುದಾನ ಮಂಜೂರಾಗಿತ್ತು. ಈ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟನೆಗೆ ದಿನಾಂಕ ನಿಗದಿಪಡಿಸಿಲ್ಲ. ಹೀಗಾಗಿ ಈ ಭವನವು ಉದ್ಘಾಟನೆಯಾಗಿಲ್ಲ ಎಂದು ಇಲಾಖೆಯು ಸಿದ್ಧಪಡಿಸಿರುವ ವರದಿಯಿಂದ ತಿಳಿದು ಬಂದಿದೆ.

 

 

ಸವದತ್ತಿ ನಗರದ ರಾಮಾಪುರ ಸೈಟ್‌ನಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ 2018ರಲ್ಲೇ 1.50 ಕೋಟಿ ರು ಮಂಜೂರಾಗಿತ್ತು. ಈ ಕಾಮಗಾರಿಯನ್ನು ಕರ್ನಾಟಕ ಭೂ ಸೇನಾ ನಿಗಮವು ವಹಿಸಿಕೊಂಡಿತ್ತು. 2025ರೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಅದರಂತೆ ಕಾಮಗಾರಿಯು ಪೂರ್ಣಗೊಂಡಿದ್ದರೂ ಸಹ ಶಾಸಕ ವಿಶ್ವಾಸ ವೈದ್ಯ ಅವರು ಉದ್ಘಾಟನೆಗೆ ದಿನಾಂಕವು ನಿಗದಿ ಮಾಡಿಲ್ಲ. ಹೀಗಾಗಿ  ಈ ಭವನಕ್ಕೆ  ಉದ್ಘಾಟನೆ  ಭಾಗ್ಯ ಇನ್ನೂ ಕೂಡಿ ಬಂದಿಲ್ಲ.

ಇದೇ ಸವದತ್ತಿ ನಗರದದಲ್ಲಿ ಡಾ ಬಿ ಆರ್‍‌ ಅಂಬೇಡ್ಕರ್ ಭವನ ನಿರ್ಮಾಣಕ್ಕೆ  2019ರಲ್ಲಿ  1.50 ಕೋಟಿ ರುಪಾಯಿ ಮಂಜೂರಾಗಿತ್ತು. ಈ ಕಾಮಗಾರಿಯೂ ಸಹ 2025ರಲ್ಲಿ ಪೂರ್ಣಗೊಂಡಿದೆ. ಆದರೆ ಶಾಸಕ ವಿಶ್ವಾಸ ವೈದ್ಯ ಅವರು ಉದ್ಘಾಟನೆಗೆ ದಿನಾಂಕ ನಿಗದಿ ಮಾಡಿಲ್ಲ. ಹೀಗಾಗಿ ಈ ಭವನವೂ ಸಹ ಉದ್ಘಾಟನೆ ಆಗಿಲ್ಲ.

ಇಂಡಿ ಪಟ್ಟಣದಲ್ಲಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮವು 1.50 ಕೋಟಿ ರು ವೆಚ್ಚದಲ್ಲಿ ನಿರ್ಮಿಸಿರುವ  ಬಂಜಾರ ಸಮುದಾಯ ಭವನವು 2022ರಲ್ಲಿ ಪೂರ್ಣಗೊಂಡಿದೆ. ಈ ಭವನವು  ಮೂರು ವರ್ಷಗಳ ಹಿಂದೆಯೇ ಉದ್ಘಾಟನೆ ಆಗಿದೆ. ಆದರೆ ಇಲ್ಲಿಯವರೆಗೂ ಬಂಜಾರಾ ಸಮುದಾಯ ಭವನವನ್ನು ಬಂಜಾರ ಸಮುದಾಯಕ್ಕೆ ಹಸ್ತಾಂತರಿಸಿಲ್ಲ ಎಂದು ಇಲಾಖೆಯು ಸರ್ಕಾರದ ಮುಖ್ಯಕಾರ್ಯದರ್ಶಿಗೆ ಮಾಹಿತಿ ನೀಡಿರುವುದು ತಿಳಿದು ಬಂದಿದೆ.

 

 

ವಡವಿ ಹೊಸೂರ ಗ್ರಾಮದಲ್ಲಿ 28 ಕೋಟಿ ರು ವೆಚ್ಚದಲ್ಲಿ  ಮುರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಯು 2024ರಲ್ಲಿ ಪೂರ್ಣಗೊಂಡಿದೆ. ಈ ಕಟ್ಟಡ ಉದ್ಘಾಟನೆಗೂ ಸಹ ಶಾಸಕರು ದಿನಾಂಕವನ್ನು ನಿಗದಿಪಡಿಸಿಲ್ಲ. 28 ಕೋಟಿ ರು ವೆಚ್ಚದಲ್ಲಿ ಕಟ್ಟಡ ನಿರ್ಮಾಣವು 2 ವರ್ಷದ ಹಿಂದೆಯೇ ಪೂರ್ಣಗೊಂಡಿದ್ದರೂ ಸಹ ಈ ಕಟ್ಟಡವು ಬಳಕೆ ಮಾಡಲಾಗಿಲ್ಲ.

ನಿಡಗುಂದಿ ಪಟ್ಟಣದಲ್ಲಿ ಡಾ ಬಾಬು ಜಗಜೀವನ್ ರಾಂ ಸಮುದಾಯ ಭವನ ನಿರ್ಮಾಣ ಮಾಡಲು 2015-16ನೇ ಸಾಲಿನಲ್ಲಿಯೇ 1.50 ಕೋಟಿ ರು ವೆಚ್ಚದಲ್ಲಿ  ಮಂಜೂರಾಗಿದೆ. ಹಣ ಮಂಜೂರಾಗಿ 11 ವರ್ಷಗಳು ಕಳೆದರೂ ಸಹ ಕಾಮಗಾರಿಯು ಪೂರ್ಣಗೊಂಡಿಲ್ಲ. ಅಲ್ಲದೇ ಈ ಕಾಮಗಾರಿಗೆ ಒಟ್ಟು ಮಂಜೂರಾಗಿರುವ ಮೊತ್ತದಲ್ಲಿಯೇ 50 ಲಕ್ಷ ರು ಬಾಕಿ ಇದೆ.

 

 

ಬೀಳಗಿ ಪಟ್ಟಣದಲ್ಲಿ 1 ಕೋಟಿ ರು ವೆಚ್ಚದಲ್ಲಿ ಅಂಬೇಡ್ಕರ್ ಭವನ ಮತ್ತು 1 ಕೋಟಿ ರು ವೆಚ್ಚದಲ್ಲಿ ಬಾಬು ಜಗಜೀವನ ರಾಮ ಭವನ ನಿರ್ಮಾಣ ಮಾಡಲು 2013-14ನೇ ಸಾಲಿನಲ್ಲಿಯೇ ಹಣ ಮಂಜೂರಾಗಿದೆ. ಶೇ 40 ಮತ್ತು 60ರಷ್ಟು ಕಾಮಗಾರಿಯು ಪೂರ್ಣಗೊಂಡಿದೆ. ಆದರೆ ಅನುದಾನ ಕೊರತೆಯಿಂದಾಗಿ ಉಳಿದ ಕಾಮಗಾರಿಯು ಸ್ಥಗಿತಗೊಂಡಿರುವುದು ಇಲಾಖೆಯು ನೀಡಿರುವ ವರದಿಯಿಂದ ಗೊತ್ತಾಗಿದೆ.

ಬದಾಮಿ ತಾಲೂಕಿನ ಖಾನಾಪುರ ಎಸ್‌ ಕೆ ಗ್ರಾಮದಲ್ಲಿ 2021-22ರಲ್ಲಿ 25 ಲಕ್ಷ ರು ವೆಚ್ಚದಲ್ಲಿ ಡಾ ಬಾಬಾ ಸಾಹೇಬ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಕಾಮಗಾರಿಯು ಶೇ. 80ರಷ್ಟು ಪೂರ್ಣಗೊಂಡಿದೆ. ಇನ್ನುಳಿದ ಕಾಮಗಾರಿ ಪೂರ್ಣಗೊಳ್ಳಲು ಅನುದಾನ ಕೊರತೆ ಎದುರಾಗಿದೆ. ಹೀಗಾಗಿ ಈ ಭವನದ ಕಾಮಗಾರಿಯು ನಾಲ್ಕು ವರ್ಷಗಳಿಂದಲೂ ಸ್ಥಗಿತಗೊಂಡಿದೆ. ಇದೇ ತಾಲೂಕಿನ ಎಸ್‌ ಕೆ ಖಾನಾಪುರ ಗ್ರಾಮದಲ್ಲಿ 15 ಲಕ್ಷ ರು ವೆಚ್ಚದಲ್ಲಿ ಕನಕದಾಸ ಭವನ ನಿರ್ಮಾಣ ಕಾಮಗಾರಿಯು ಶೆ. 70ರಷ್ಟು ಪೂರ್ಣಗೊಂಡಿದೆ. ಅನುದಾನ ಕೊರತೆಯಿಂದಾಗಿ ಈ ಭವನದ ನಿರ್ಮಾಣ ಕಾಮಗಾರಿಯೂ ಸ್ಥಗಿತಗೊಂಡಿದೆ.

 

 

ಜಮಖಂಡಿ ನಗರದಲ್ಲಿ ಆದರ್ಶ ಮಾದರಿ ಶಾಲೆ ನಿರ್ಮಾಣಕ್ಕೆ 2022ರಲ್ಲಿ 2.4 ಕೋಟಿ ರು ಅನುದಾನ ಮಂಜೂರಾಗಿತ್ತು. ಶೇ. 70ರಷ್ಟು ಕಾಮಗಾರಿಯು ಪೂರ್ಣಗೊಂಡಿದೆ. ಉಳಿದ ಕಾಮಗಾರಿಯು ಅನುದಾನ ಕೊರತೆಯಿಂದಾಗಿ ಮುಂದುವರೆದಿಲ್ಲ. ಬಾಗಲಕೋಟೆಯ ಕಲಾದಗಿ ಗ್ರಾ,ಮದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು 2020ರಲ್ಲಿಯೇ 50 ಲಕ್ಷ ರು ಮಂಜೂರಾಗಿತ್ತು. ಈ ಕಾಮಗಾರಿಯು ರೂಫ್‌ ಹಂತಕ್ಕೆ ಬಂದು ನಿಂತಿದೆ. ಆದರೆ ಬಾಕಿ  ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ ಕಾಮಗಾರಿಯೂ ಸಹ ನೆನೆಗುದಿಗೆ ಬಿದ್ದಿದೆ.

ಬಾಗಲಕೋಟೆಯ ಇಳಕಲ್ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣ ಮಾಡಲು 2020ರಲ್ಲಿಯೇ 199.68 ಲಕ್ಷ ರು ಅನುದಾನವು ಮಂಜೂರಾಗಿತ್ತು. 5 ವರ್ಷಗಳಾದರೂ ಈ ಕಾಮಗಾರಿಯೂ ಸಹ ಪೂರ್ಣಗೊಂಡಿಲ್ಲ. ಭವನದ ಕಾಮಗಾರಿಯು ಪ್ಲಾಸ್ಟರ್‍‌ ಹಂತದಲ್ಲಿದೆ. ಉಳಿದ ಕಾಮಗಾರಿಯು ಪೂರ್ಣಗೊಳ್ಳಲು ಅನುದಾನದ ಕೊರತೆ ಎದುರಿಸುತ್ತಿದೆ.

 

ಹುನುಗಂದ ಪಟ್ಟಣದಲ್ಲಿಯೂ ಸಹ 2021ರಲ್ಲಿ 199.99 ಲಕ್ಷ ರು ವೆಚ್ಚದಲ್ಲಿ ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣ  ಮಾಡಲು ಮಂಜೂರಾಗಿದೆ. ಶೇ.80ರಷ್ಟು ಕಾಮಗಾರಿಯು ಪೂರ್ಣಗೊಂಡಿದೆ.  ಬಾಕಿ ಅನುದಾನ ಬಿಡುಗಡೆಯಾಗದ ಕಾರಣ ಭವನದ ನಿರ್ಮಾಣ ಕಾಮಗಾರಿಯು ವಿಳಂಬಗತಿಯಲ್ಲಿ ಸಾಗುತ್ತಿದೆ.

ಅಮೀನಗಢದಲ್ಲಿ ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣಕ್ಕೆ 75.00 ಲಕ್ಷ ರು ಗಳನ್ನು 2023ರ ಮಾರ್ಚ್‌ 27ರಂದೇ ಮಂಜೂರು ಮಾಡಿದೆ. ಈ ಕಾಮಗಾರಿಯು ಪ್ಲಿಂತ್‌ ಮಟ್ಟಕ್ಕೆ ಬಂದಿದೆ. ಅನುದಾನ ಕೊರತೆಯಿಂದಾಗಿ ಈ ಭವನದ ಕಾಮಗಾರಿಯು ನೆನೆಗುದಿಗೆ ಬಿದ್ದಿದೆ. ಬಾಗಲಕೋಟೆಯ ಕಾಡರಕೊಪ್ಪದಲ್ಲಿ ಡಾ ಬಾಬು ಜಗಜೀವನ ರಾಂ ಭವನ ನಿರ್ಮಾಣಕ್ಕೆ 2021ರಲ್ಲೇ 20 ಲಕ್ಷ ರು ಮಂಜೂರಾಗಿದೆ.

 

 

ಕಾಮಗಾರಿಯು  ಸ್ಲಾಬ್‌ ಹಂತದಲ್ಲಿದೆ. ಅನುದಾನ ಕೊರತೆ ಕಾರಣ ಕಾಮಗಾರಿಯು ಕುಂಠಿತಗೊಂಡಿದೆ. ಬಾಗಲಕೋಟೆಯ ಬೀಳಗಿ ಪಟ್ಟಣದಲ್ಲಿ  ವಾಲ್ಮೀಕಿ ಭವನ ನಿರ್ಮಾಣಕ್ಕೆ  2016ರಲ್ಲೇ  2 ಕೋಟಿ ರು  ಮಂಜೂರಾಗಿದೆ. ಈ ಕಾಮಗಾರಿಯೂ ಸಹ ಸ್ಲಾಬ್‌ ಹಂತದಲ್ಲಿದೆ. 10 ವರ್ಷಗಳಾದರೂ ಸಹ ಈ ಕಾಮಗಾರಿಯು ಪ್ರಗತಿ ಕಂಡಿಲ್ಲ. ಅನುದಾನ ಬಿಡುಗಡೆ ಆಗದಿರುವುದೇ ಇದಕ್ಕೆ ಮೂಲ ಕಾರಣ ಎಂದು ಇಲಾಖೆಯು ವರದಿ ನೀಡಿದೆ.

 

 

ಚಿಕ್ಕಬಳ್ಳಾಪುರ ತಾಲೂಕು ಅಜ್ಮವಾರ ಗ್ರಾಮದಲ್ಲಿ 2020ರಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಲು 20 ಲಕ್ಷ ರು ಮಂಜೂರಾಗಿದೆ.ಆದರೆ ಈ ಭವನ ನಿರ್ಮಾಣ ಕಾಮಗಾರಿಯು ಪೂರ್ಣಗೊಂಡಿಲ್ಲ. ಈ ಮಧ್ಯೆ ಈ ಭವನ ಅಂದಾಜು ಮೊತ್ತವನ್ನು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪರಿಷ್ಕರಿಸಿದ್ದಾರೆ. 20 ಲಕ್ಷ ಇದ್ದದ್ದು ಈಗ 72 ಲಕ್ಷಕ್ಕೇರಿಸಲಾಗಿದೆ. ಈ ಭವನ ನಿರ್ಮಾಣ ಮಾಡಲು 2020ರಲ್ಲಿ ಗ್ರಾಮ ಪಂಚಾಯ್ತಿಯು ಸ್ಥಳ ಗುರುತಿಸಿದೆ. ಇದಕ್ಕಾಗಿ 5 ಲಕ್ಷ ರೂ ಬಿಡುಗಡೆ ಆಗಿದೆ. ಆದರೆ ಕಾಮಗಾರಿಯೂ ಸಹ ಅರ್ಧಕ್ಕೆ ನಿಂತಿದೆ.

 

 

ಗೌರಿಬಿದನೂರು ತಾಲೂಕಿನ ನಗರಗೆರೆಯಲ್ಲಿ 2015ರಲ್ಲಿಯೇ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು 50 ಲಕ್ಷ ರು ಅನುದಾನ ಮಂಜೂರಾಗಿತ್ತು. ಆದರೆ ಭವನ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸ್ಥಳೀಯ ಶಾಸಕರು ಮಧ್ಯ ಪ್ರವೇಶ ಮಾಡಿ ಇದರ ಅಂದಾಜಿನಲ್ಲಿ ಇರುವ ವಿಸ್ತೀರ್ಣಕ್ಕಿಂತ ಹೆಚ್ಚಿನ ವಿಸ್ತೀರ್ಣದಲ್ಲಿ ಭವನ ನಿರ್ಮಾಣ ಮಾಡಬೇಕು. ಇದಕ್ಕಾಗಿ ತಗಲುವ ವೆಚ್ಚವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಹೀಗಾಗಿ ಪಂಚಾಯತ್‌ ರಾಜ್‌ ಇಂಜನಿಯರಿಂಗ್‌ ವಿಭಾಗವು ಅಂದಾಜಿಗಿಂತ ಹೆಚ್ಚುವರಿ ಭವನ ನಿರ್ಮಾಣ ಮಾಡುತ್ತಿದೆ. ಮೊದಲ ಹಂತಕ್ಕೆ 50 ಲಕ್ಷ ರು ಬಿಡುಗಡೆಯಾಗಿದ್ದು ಹೊರತುಪಡಿಸಿದರೇ ಹೆಚ್ಚುವರಿ ಅನುದಾನವು  ಬಿಡುಗಡೆಯೇ ಆಗಿಲ್ಲ. ಹೀಗಾಗಿ ಭವನ ನಿರ್ಮಾಣ ಕಾಮಗಾರಿಯು ಪೂರ್ಣಗೊಂಡಿಲ್ಲ.

 

 

ಗುಡಿಬಂಡೆಯ ಹಂಪಸಂದ್ರ ಗ್ರಾಮದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಭವನವನ್ನು 10 ಲಕ್ಷ ರು ವೆಚ್ಚದಲ್ಲಿ  ನಿರ್ಮಾಣ ಮಾಡಲಾಗಿದೆ. ಆದರೆ  ಭವನದ ಉದ್ಘಾಟನೆಗೆ  ಸಚಿವರು ದಿನಾಂಕವನ್ನೇ ಕೊಟ್ಟಿಲ್ಲ. ಹೀಗಾಗಿ ಭವನವು ಬಳಕೆ ಮಾಡಲಾಗಿಲ್ಲ. ಗುಡಿಬಂಡೆ ತಾಲೂಕಿನ ಬ್ರಾಹ್ಮಣರಹಳ್ಳಿ ಗ್ರಾಮದಲ್ಲಿ  2015-16ರಲ್ಲಿಯೇ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಸುಮಾರು 10 ಲಕ್ಷ ರು ಅನುದಾನವು ಮಂಜೂರಾಗಿದೆ. ಗುತ್ತಿಗೆದಾರರು ಕಾಮಗಾರಿಯನ್ನು ಮೇಲ್ಛಾವಣಿವರೆಗೂ ನಡೆಸಿ ನಂತರ ಅರ್ಧದಲ್ಲಿಯೇ ನಿಲ್ಲಿಸಿದ್ದಾರೆ.

 

ಹೀಗಾಗಿ ಈ ಕಾಮಗಾರಿಯು ಪೂರ್ಣಗೊಂಡಿಲ್ಲ. ಹಾಗೆಯೇ ಬಾಗೇಪಲ್ಲಿ ತಾಲೂಕಿನ ಅರಿಗೇಪಲ್ಲಿ ಗ್ರಾಮದಲ್ಲಿಯೂ ಸಹ ಗುತ್ತಿಗೆದಾರ ಭವನದ ಕಾಮಗಾರಿಯನ್ನು ಅರ್ಧಂಬರ್ಧ ಮಾಡಿ ನಿಲ್ಲಿಸಿದ್ದಾರೆ. ಹೀಗಾಗಿ ಇಲಾಖೆಯು ಗುತ್ತಿಗೆದಾರನಿಗೆ ನೋಟೀಸ್‌ ನೀಡಿದೆ ಎಂದು ಇಲಾಖೆಯು ಸಮಜಾಯಿಷಿ ನೀಡಿದೆ.

ಚೇಳೂರು ತಾಲೂಕಿನ ಮೂಗಿರೆಡ್ಡಿಪಲ್ಲಿ ಗ್ರಾಮ ಮತ್ತು ವೆಂಕಟಾಪುರ ಗ್ರಾಮದಲ್ಲಿ 2020-21ರಲ್ಲಿಯೇ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು 10 ಲಕ್ಷ ರು ಅನುದಾನ ಮಂಜೂರು ಮಾಡಿತ್ತು.

 

 

ಈ ಎರಡೂ ಗ್ರಾಮಗಳಲ್ಲಿಯೂ  ಸಹ ಕಂಟ್ರಾಕ್ಟರ್‍‌ಗಳು  ಭವನದ ಕಾಮಗಾರಿಯನ್ನು ಮೇಲ್ಚಾವಣಿಯವರೆಗೆ ತಂದು ನಿಲ್ಲಿಸಿದ್ದಾರೆ. ನಂತರ ಕೆಲಸ ನಿಲ್ಲಿಸಿದ್ದಾರೆ. ಹೀಗಾಗಿ 2 ಪ್ರಕರಣದಲ್ಲಿಯೂ ಗುತ್ತಿಗೆದಾರನಿಗೆ ಇಲಾಖೆಯು ನೋಟೀಸ್‌ ಜಾರಿಗೊಳಿಸಿದೆ.

 

ಬಾಬು ಜಗಜೀವನ ರಾಮ್‌ ಭವನ ಕಟ್ಟಡ ನಿರ್ಮಾಣಕ್ಕೆ 2007-08ರಲ್ಲಿಯೇ 8 ಕೋಟಿ ರು ಮಂಜೂರಾಗಿತ್ತು. ಈ ಕಾಮಗಾರಿಯು ಶೇ.70ರಷ್ಟು ಪೂರ್ಣಗೊಂಡಿದೆ. ಶೇ. 30ರಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ. ಇದಕ್ಕೆ ಅನುದಾನ ಕೊರತೆ ಇದೆ ಎಂದು ಇಲಾಖೆಯು ಹೇಳಿದೆ.

 

 

ಜಾಜನಮುಗಳಿ, ಬಟಗೇರಾ, ಹುಲಸೂರ ಗ್ರಾಮದಲ್ಲಿ 2018-19ನೇ ಸಾಲಿನಲ್ಲಿ ಡಾ ಬಿ ಆರ್ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2018-19ನೇ ಸಾಲಿನಲ್ಲಿ ತಲಾ 12 ಲಕ್ಷ ರುನಂತೆ  ಅನುದಾನವು ಮಂಜೂರಾಗಿತ್ತು. ಈ ಪೈಕಿ ಜಾಜನಮುಗಳಿ ಮತ್ತು ಬಟಗೇರಾ ಗ್ರಾಮದಲ್ಲಿ ಭವನಗಳು ಚಾವಣಿ ಹಂತದಲ್ಲಿವೆ. ಮಂಜೂರಾಗಿದ್ದ 12 ಲಕ್ಷ ರು ಪೈಕಿ 9 ಲಕ್ಷ ರು ಮಾತ್ರ ಬಿಡುಗಡೆಯಾಗಿದೆ.

 

 

ಇನ್ನೂ ಹೆಚ್ಚುವರಿಯಾಗಿ 10-12 ಲಕ್ಷ ಬೇಕಾಗಿದೆ. ಹುಲಸೂರ ಪಟ್ಟಣದಲ್ಲಿನ ಭವನದ ಕಾಮಗಾರಿಯು ಛಾವಣಿ ಹಂತದಲ್ಲಿದೆ. ಈ ಭವನ ನಿರ್ಮಾಣ ಪೂರ್ಣಗೊಳ್ಳಲು ಇನ್ನೂ 1.5 ಕೋಟಿ ರು ಮಂಜೂರಾಗಿದೆ. ಆದರೆ ಈ ಪೈಕಿ 75 ಲಕ್ಷ ರು ಮಾತ್ರ ಬಿಡುಗಡೆಯಾಗಿದೆ. ಬಿಡುಗಡೆಗೆ 75 ಲಕ್ಷ ರು ಮತ್ತು ಹೆಚ್ಚುವರಿಯಾಗಿ 30 ಲಕ್ಷ ರು ಅನುದಾನ ಬೇಕಿದೆ.

ಅಲ್ಲಾಪುರ, ಮರಖಲ್, ಆಣದೂರ, ಗುನ್ನಳ್ಳಿ, ಗ್ರಾಮದಲ್ಲಿ ಡಾ ಬಿ ಆರ್‍‌ ಅಂಬೇಡ್ಕರ್ ಭವನ ಹಾಗೂ ನೇಮಕತಾಬಾದ, ನವಲಸಪೂರ, ಗೋರನಹಳ್ಳಿ, ಮನ್ನಳ್ಳಿ, ಕಾಡವಾದ ಗ್ರಾಮದಲ್ಲಿ ಡಾ ಬಾಬು ಜಗಜೀವನ ರಾಂ ಭವನ  ನಿರ್ಮಾಣ  ಮಾಡಲು 2017-18ನೇ ಸಾಲಿನಲ್ಲಿ ತಲಾ 12 ಲಕ್ಷ ರು ನಂತೆ ಅನುದಾನ ಮಂಜೂರಾಗಿದೆ. ಆದರೆ ಅನುದಾನವು ಪೂರ್ಣ ಪ್ರಮಾಣದಲ್ಲಿ ಬಿಡುಗಡೆಯಾಗಿಲ್ಲ. ಹೀಗಾಗಿ ಕಾಮಗಾರಿಯ ಅಪೂರ್ಣಗೊಂಡಿದೆ.

ಹಾಗೆಯೇ ಹೊನ್ನಾವರ ತಾಲೂಕಿನ  ಅಳ್ಳಂಕಿ ಗ್ರಾಮದಲ್ಲಿ25 ಕೋಟಿ 70 ಲಕ್ಷ  ರು ವೆಚ್ಚದಲ್ಲಿ  ಡಾ ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ಕಟ್ಟಡವು 2024ರ ನವೆಂಬರ್ 13ರಂದೇ  ನಿರ್ಮಾಣವಾಗಿದೆಯಾದರೂ ಸಹ ವಸತಿ ನಿಲಯ ನಿರ್ಮಾಣ ಮಾಡಿದ ಸ್ಥಳದ ಗುಡ್ಡ ಕುಸಿಯುವ ಭೀತಿಯಲ್ಲಿದೆ. ಹೀಗಾಗಿ ಸುರಕ್ಷತಾ ಪ್ರಮಾಣಪತ್ರ ಪಡೆಯಲು ಸೂಚಿಸಲಾಗಿದೆ. ಹೀಗಾಗಿ ಈ ವಸತಿ ನಿಲಯವು ಪೂರ್ಣ ಪ್ರಮಾಣದ ಬಳಕೆಗೆ ಯೋಗ್ಯವಾಗಿಲ್ಲ. ಅಲ್ಲದೆ ಈ ಪ್ರದೇಶವು ಲ್ಯಾಟರೈಟ್‌ ಪ್ರದೇಶವಾಗಿದೆ. ವೆಟಿಯರ್ ಹುಲ್ಲು ನಡೆಲು ಸಾಧ್ಯವಿಲ್ಲ. ಈ ಪ್ರದೇಶವನ್ನು ಭೂ ಕುಸಿತದಿಂದ ತಪ್ಪಿಸಲು ಸಿಮೆಂಟ್‌ ಗೋಡೆ ಅಥವಾ ಬೆಂಚ್‌ ಟರೇಸಸ್ ರಚನೆ ಕಾಮಗಾರಿ ಮಾಡಬೇಕಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

 

 

ಗುಡ್ಡ ಕುಸಿಯಬಹುದಾದ ದಿಕ್ಕಿನಲ್ಲಿ ಕಾಂಕ್ರೀಟ್‌ ವಾಲ್‌ ನಿರ್ಮಾಣ ಮಾಡಲಾಗಿದೆ. ಆದರೂ ಜಿಎಸ್‌ಐ ಸೂಚನೆಗಳು ಪಾಲನೆಯಾಗಿಲ್ಲ. ಹೀಗಾಗಿ ಕಟ್ಟಡವು ಹಸ್ತಾಂತರ ಪ್ರಕ್ರಿಯೆಯಲ್ಲಿ ವಿಳಂಬವಾಗಿರುವುದು ಇಲಾಖೆಯು ನೀಡಿರುವ ವರದಿಯಿಂದ ತಿಳಿದು ಬಂದಿದೆ.

ಕೋಲಾರ ಜಿಲ್ಲಾ ಕೇಂದ್ರದ ಹೊರವಲಯದಲ್ಲಿ 3.5 ಕೋಟಿ ರು ವೆಚ್ಚದಲ್ಲಿ ಡಾ ಬಾಬು ಜಗಜೀವನ ರಾಂ ಭವನ ನಿರ್ಮಾಣ ಆಗಿದೆ. ಆದರೆ ಸಮುದಾಯದ ಮುಖಂಡರು ಮತ್ತು ಸಚಿವ ಕೆ ಎಚ್‌ ಮುನಿಯಪ್ಪ ಅವರನ್ನು ಹೊರತುಪಡಿಸಿ ಉದ್ಘಾಟನೆ ಮಾಡಬಾರದು ಎಂದು ಒತ್ತಾಯಿಸಿದ್ದಾರೆ. ಸಮುದಾಯದಲ್ಲಿ ಒಮ್ಮತ ಮೂಡದ ಕಾರಣ ಭವನದ ಉದ್ಘಾಟನೆಯು ನೆನೆಗುದಿಗೆ ಬಿದ್ದಿದೆ.

ಸುಳ್ಯ ನಗರದ ವಿವೇಕಾನಂದ ಸರ್ಕಲ್‌ ಬಳಿ ಅಂಬೇಢ್ಕರ್‍‌ ಭವನಕ್ಕೆ  3 ಕೋಟಿ ಅಂದಾಜು ವೆಚ್ಚವಾಗಲಿದೆ. ಈ ಪೈಕಿ ನಿರ್ಮಿತಿ ಕೇಂದ್ರದಿಂದ ಸುಮಾರು 2 ಕೋಟಿ ರು ವೆಚ್ಚದಲ್ಲಿ ಪಿಲ್ಲರ್‍‌ ಅಡಿಪಾಯ ನಿರ್ಮಾಣವಾಗಿದೆ. ಅನುದಾನದ ಕೊರತೆ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಉಳಿದ ಕಾಮಗಾರಿ ವಿಳಂಬವಾಗಿದೆ. ಬಿಜೆಪಿ ಪಕ್ಷವು ಆಡಳಿತದಲ್ಲಿದ್ದಾಗ ಕಾಮಗಾರಿ ನಡೆದಿತ್ತು. ಆದರೆ ಕಾಂಗ್ರೆಸ್‌ ಪಕ್ಷದ ಆಡಳಿತದಲ್ಲಿ ಕಾಮಗಾರಿಯು ವಿಳಂಬವಾಗಿರುವುದು ಕಂಡು ಬಂದಿದೆ.

 

ಅಜ್ಜಂಪುರದಲ್ಲಿ ಭಂಕನಕಟ್ಟೆಯಲ್ಲಿ 2013-14ನೇ ಸಾಲಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು 10 ಲಕ್ಷ ರು ಮಂಜೂರಾಗಿದೆ. ಆದರೆ ಪ್ರಸ್ತುತ 30 ಲಕ್ಷ ಅನುದಾನದ ಅವಶ್ಯಕತೆ ಇದೆ. ಆದರೆ ಮೂಲ ಅನುದಾನದಲ್ಲಿಯೇ 7 ಲಕ್ಷ 50 ಸಾವಿರ ಮಾತ್ರ ಬಿಡುಗಡೆಯಾಗಿದೆ. ಹೆಚ್ಚುವರಿ ಅನುದಾನ ಬಿಡುಗಡೆಯಾಗದ ಕಾರಣ ಕಾಮಗಾರಿಯು ಮುಂದುವರೆಯದೇ ತಟಸ್ಥವಾಗಿದೆ. ಇದೇ ತಾಲೂಕಿನ ಬಗ್ಗವಳ್ಳಿ, ಬುಕ್ಕಾಂಬುದಿ, ಗಡೀಹಳ್ಳಿಯಲ್ಲಿ ತಲಾ 10 ಲಕ್ಷ ರು ನಂತೆ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಬಿಡುಗಡೆಯಾಗಿತ್ತು. ನಂತರ ಅಂದಾಜು ವೆಚ್ಚದಲ್ಲಿ ಏರಿಕೆಯಾಗಿದೆ. ಹೆಚ್ಚುವರಿ ಹಣ ಮತ್ತು ಅನುದಾನ ಕೊರತೆ ಕಾರಣ ಈ ಭವನದ ಕಾಮಗಾರಿಯು ಪೂರ್ಣಗೊಂಡಿಲ್ಲ.

ಕೆ ಆರ್‍‌ ನಗರ ಪಟ್ಟಣದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು 2 ಕೋಟಿ ರು ಅನುದಾನ ಮಂಜೂರಾಗಿತ್ತು. ಇದುವರೆಗೂ ನೆಲ ಅಂತಸ್ತು ಮತ್ತು ಪಿಲ್ಲರ್‍‌ ಮಾತ್ರ ಹಾಕಲಾಗಿದೆ. ಆದರೆ ಇನ್ನೂ 3-4 ಕೋಟಿ ರು ಅನುದಾನ ಅವಶ್ಯಕತೆ ಇದೆ. ಕುಶಾಲನಗರದ ಮುಳ್ಳು ಸೋಗೆ ಗ್ರಾಮದಲ್ಲಿ ಅಂಬೇಡ್ಕರ್ ಭವನವು ನಿರ್ಮಾಣವಾಗಿದ್ದರೂ ಸಹ ಪುರಸಭೆಗೆ ಹಸ್ತಾಂತರವಾಗಿಲ್ಲ. ಕಾಮಗಾರಿಯೂ ಪೂರ್ಣಗೊಂಡಿಲ್ಲ.  ಇನ್ನೂ ಕಾಂಪೌಂಡ್‌, ಶೌಚಾಲಯ ಕಾಮಗಾರಿ ಬಾಕಿ ಇದೆ. ಇದಕ್ಕೆ ಇನ್ನು 10ರಿಂದ 20 ಲಕ್ಷ ರು ಅನುದಾನ ಬೇಕಿದೆ. ಅನುದಾನ ಒದಗಿಸದ ಕಾರಣ ಈ ಕಾಮಗಾರಿಯೂ ಕುಂಠಿತಗೊಂಡಿದೆ.

 

 

ಮದ್ದೂರು  ತಾಲೂಕಿನ ಕುದುರೆಗುಂಡಿ, ಹಡಗನಹಳ್ಳಿ, ಮೆಣಸಗರೆ, ವೀರಣ್ಣಗೌಡನ ಕೊಪ್ಪಲು, ಬೆಕ್ಕಳಲೆ ಗ್ರಾಮದಲ್ಲಿ  ಕ್ರಮವಾಗಿ 12, 15, 10 ಲಕ್ಷ ರು ಅನುದಾನ ಮಂಜೂರಾಗಿತ್ತು. ಆದರೆ ಕಾಮಗಾರಿ ನಡೆಸಿರುವ ಪಿಆರ್‍‌ಇಡಿಯು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರ ಮಾಡಿಲ್ಲ. ಸರ್ಕಾರವು ಅನುದಾನ ಬಿಡುಗಡೆ ಮಾಡದ ಕಾರಣ ಭವನವನ್ನು ಹಸ್ತಾಂತರ ಮಾಡಿಲ್ಲ.

 

 

ಕೂಡ್ಲಿಗಿ ತಾಲೂಕಿನ  ಕೂಡ್ಲಿಗಿ ಮತ್ತು ಹಗರಿಬೊಮ್ಮನಹಳ್ಳಿಯಲ್ಲಿ  ಪರಿಶಿಷ್ಟ ಪಂಗಡದ  ಬಾಲಕಿಯರ ಮೆಟ್ರಿಕ್  ನಂತರ ವಸತಿ ನಿಲಯಕ್ಕೆ  2017ರಲ್ಲೇ 2 ಕೋಟಿ 34 ಲಕ್ಷ ರು ಅನುದಾನ ಮಂಜೂರಾಗಿತ್ತು. ಆದರೆ ಇದುವರೆಗೆ 1 ಕೊಟಿ 59 ಲಕ್ಷ ರು ಮಾತ್ರ ಬಿಡುಗಡೆಯಾಗಿದೆ. ಅನುದಾನದ ಕೊರತೆಯಿಂದಾಗಿ ಕಟ್ಟಡ ಕಾಮಗಾರಿಯು ಅಪೂರ್ಣಗೊಂಡಿದೆ. ಹೀಗಾಗಿ ರಾಮನಗರದ ವೆಂಕೋಬ ಛತ್ರವನ್ನು ತಿಂಗಳಿಗೆ 1 ಲಕ್ಷ ರು ನಂತೆ ಒಟ್ಟಾರೆ 13 ಲಕ್ಷ ಬಾಡಿಗೆಗೆ ಪಡೆದು ವಸತಿ ನಿಲಯ ನಡೆಸುತ್ತಿದೆ.

ದಾವಣಗೆರೆ ತಾಲೂಕಿನ ಜಗಳೂರು ತಾಲೂಕಿನ ತಾರೇಹಳ್ಳಿ , ಕಸವನಹಳ್ಳಿ, ಪಲ್ಲಾಗಟ್ಟೆ ಯಲ್ಲಿಯೂ ಸಹ ಅಂಬೇಡ್ಕರ್ ಭವನ ನಿರ್ಮಾಣ  ಕಾಮಗಾರಿಗೆ 2015-16, 2017-18 , 2018-19ರರಲ್ಲೇ ತಲಾ  10 ಲಕ್ಷ ರು ನೀಡಲಾಗಿತ್ತು. ಆದರೆ ಈ ಪೈಕಿ ಶೇ. 50ರಷ್ಟು ಮಾತ್ರ ಅನುದಾನ ಬಿಡುಗಡೆಯಾಗಿದೆ. ಇನ್ನುಳಿದ 5 ಲಕ್ಷ ರು ಅನುದಾನ ಬಿಡುಗಡೆಯಾಗದ ಕಾರಣ ಭವನದ ನಿರ್ಮಾಣ ಕಾಮಗಾರಿಯು ಅಪೂರ್ಣಗೊಂಡಿದೆ.

ಚಳ್ಳಕೆರೆ ಪಟ್ಟಣದಲ್ಲಿ  ಬಂಜಾರ ಭವನ ನಿರ್ಮಾಣ ಮಾಡಲು 149.71 ಲಕ್ಷ ರು ವೆಚ್ಚ ಅಂದಾಜಿಸಿತ್ತು. 2016-17ನೇ ಸಾಲಿನಲ್ಲಿ ಅನುದಾನ ಮಂಜೂರಾಗಿದೆ. ಆದರೆ ಒಟ್ಟು ಅನುದಾನದ ಪೈಕಿ 2.37 ಲಕ್ಷ ರು ಬಾಕಿ ಬಿಡುಗಡೆಯಾಗಿಲ್ಲ. ಹೀಗಾಗಿ ಭವನದ ಕಾಮಗಾರಿಯು ಅಪೂರ್ಣಗೊಂಡಿದೆ. ಗಂಗಾವತಿ ತಾಲೂಕಿನಲ್ಲಿ ಇಂದಿರಾ ಗಾಂಧಿ ವಸತಿ ಶಾಲೆ ನಿರ್ಮಾಣ ಮಾಡಲು 9 ಕೋಟಿ ರು ಅನುದಾನ ಮಂಜೂರಾಗಿತ್ತು. ಈ ಕಾಮಗಾರಿಯು 2024ರ ಅಕ್ಟೋಬರ್‍‌ನಲ್ಲಿ ಮುಕ್ತಾಯಗೊಂಡಿದೆ. ಆದರೆ ಗುತ್ತಿಗೆದಾರನ ಬಾಕಿ ಹಣ ಬಿಡುಗಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ಕಮಿಷನ್ ಹಣಕ್ಕಾಗಿ ತಕರಾರು ಉಂಟಾಗಿದೆ ಎಂದು ವರದಿಯಲ್ಲಿ ವಿವರಿಸಿದೆ.

ವೆಂಕಟಗಿರಿಯಲ್ಲಿ  12 ಕೋಟಿ ರು ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು 2022ರಲ್ಲೇ ಹಣ ಮಂಜೂರಾಗಿದೆ. ಆದರೆ ಈ ಭವನದ ಕಾಮಗಾರಿಯು ಇನ್ನೂ ರೂಫ್‌ ಲೆಡ್ ಹಂತದಲ್ಲೇ ಇದೆ. ಅನುದಾನ ಬಿಡುಗಡೆಯಾಗದಿರುವುದೇ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ.

 

ಗಂಗನಾಳ, ಹಿರೇತುಮ್ಮಿನಾಳ,  ವಿರುಪಾಪುರ, ಕುಟುಗನಹಳ್ಳಿ, ಹುಲುಗಿ, ಓಜನಹಳ್ಳಿ, ಎಂ ರಾಂಪುರ, ಚಿಕ್ಕಬೆಣಕಲ್,ಅಗೋಲಿ, ಮುಕ್ಕುಂಪಿ  ಅರ್ಹಾಳದಲ್ಲಿ ತಲಾ 12 ಕೋಟಿ ರು ವೆಚ್ಚದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ 2022ರಲ್ಲೇ ಮಂಜೂರಾಗಿದೆ. ಆದರೆ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ ಬಹುತೇಕ ಕಾಮಗಾರಿಗಳು ಬೇಸ್‌ಮೆಂಟ್‌ ಹಂತದಲ್ಲೇ ಇದೆ. ಶಿವಮೊಗ್ಗ ನಗರದ ಕುವೆಂಪು ಬಡಾವಣೆಯಲ್ಲಿ ಬಾಬು ಜಗಜೀವನ್ ರಾಂ ಭವನ ನಿರ್ಮಾಣ ಕಾಮಗಾರಿಯು ಶೇ. 95ರಷ್ಟು ಪೂರ್ಣಗೊಂಡಿದೆ. ಇನ್ನುಳಿದ ಶೇ. 5ರಷ್ಟು ಕಾಮಗಾರಿ ಪೂರ್ಣಗೊಳಿಸಲು ಅನುದಾನ ಕೊರತೆ ಎದುರಾಗಿದೆ.

 

 

ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿರುವ ವಿಶ್ವೇಶ್ವರ ಬಡಾವಣೆಯಲ್ಲಿ ಛಲವಾದಿ ಮಹಾಸಭಾ ಸಮುದಾಯ ಭವನವು ಸುಮಾರು 3 ವರ್ಷಗಳಿಂದಲೂ ಕಾಮಗಾರಿ ನಡೆದಿಲ್ಲ. ಅನುದಾನದ ಕೊರತೆ ಮತ್ತು ಹೆಚ್ಚುವರಿ ಅನುದಾನ ನೀಡದ ಕಾರಣ ಕಾಮಗಾರಿಯೇ ನಿಂತು ಹೋಗಿದೆ.

 

ಪುಲಿಕೇಶಿ ನಗರ ವ್ಯಾಪ್ತಿಯ ಸಿಂಧಿ ಕಾಲೋನಿಯಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಯೂ ಸಹ ಅರ್ಧಕ್ಕೆ ನಿಂತಿದೆ. ಮಂಜೂರಾಗಿರುವ ಅನುದಾನ ಸಾಕಾಗುವುದಿಲ್ಲ, ಹೀಗಾಗಿ ಹೆಚ್ಚುವರಿ ಅನುದಾನ ಬೇಕಿದೆ. ಆದರೆ ಅನುದಾನ ಕೊರತೆ ಇರುವ ಕಾರಣ ಈ ಕಾಮಗಾರಿಯು ವಿಳಂಬವಾಗಿದೆ.

ಕೊಪ್ಪಳದದ ಮೆಣದಾಳ, ಹುಚನುರು, ಸಿರಗುಂಪಿ, ಹೊಳೆ ಮುದ್ದಾಪುರ, ಸಿಂಗನಾಳ, ಬಸವಾಪಟ್ಟಣದಲ್ಲಿ  ಅಂಬೇಡ್ಕರ್ ಭವನ ಮತ್ತು ಬಾಬು ಜಗಜೀವನ ರಾಂ ಭವನ  ನಿರ್ಮಾಣ ಮಾಡಲು ತಲಾ 10 ಲಕ್ಷ ರು ನಿಂದ 12 ಲಕ್ಷ ರು ಅನುದಾನವು 2020ರಲ್ಲೇ ಮಂಜೂರಾಗಿದೆ.

 

 

ಆದರೆ ಪೂರ್ಣ ಪ್ರಮಾಣದ ಅನುದಾನವೇ ಬಿಡುಗಡೆಯಾಗಿಲ್ಲ. ಹೀಗಾಗಿ ಹಲವು ಕಾಮಗಾರಿಗಳು ರೂಫ್‌ ಲೆವೆಲ್, ಲಿಂಟಲ್‌, ಬೇಸ್‌ಮೆಂಟ್‌ ಹಂತದಲ್ಲಿದೆ ಎಂದು ಇಲಾಖೆಯು ವರದಿ ಮಾಡಿರುವುದು ತಿಳಿದು ಬಂದಿದೆ.

Hot this week

ಕಸದ ವಾಹನಗಳ ಇಂಧನಕ್ಕೆ ಸಾವಿರಾರು ಲೀಟರ್‌ ಪೆಟ್ರೋಲ್, ಡೀಸೆಲ್ ಬಳಕೆ; ನಗರಾಭಿವೃದ್ಧಿ ಸಚಿವರ ತವರಲ್ಲೇ ಇ ವಿ ವಾಹನಗಳ ಬಳಕೆಗೆ ಉದಾಸೀನತೆ

ಮೈಸೂರು; ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಕಸ ವಿಲೇವಾರಿ ಮಾಡುತ್ತಿರುವ ಒಟ್ಟು ವಾಹನಗಳ...

ಪಿಎಸ್‌ಐ ನೇಮಕಾತಿ ಹಗರಣ; ಎಡಿಜಿಪಿ ಅಮೃತ್‌ ಪೌಲ್ ವಿರುದ್ಧ 4 ವರ್ಷಗಳ ಬಳಿಕ ಇಲಾಖೆ ವಿಚಾರಣೆ ಪ್ರಕ್ರಿಯೆಗೆ ಚಾಲನೆ, ದೋಷಾರೋಪಣೆ ಪಟ್ಟಿ ಜಾರಿ

ಬೆಂಗಳೂರು; ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪ್ರಕರಣದ ಹಗರಣದಲ್ಲಿ ಆರೋಪಿಯಾಗಿ, ಅಮಾನತುಗೊಂಡಿರುವ ಪೊಲೀಸ್‌...

ಸುರಂಗ ಮಾರ್ಗ; ಅದಾನಿ ಎಂಟರ್ ಪ್ರೈಸೆಸ್‌ಗೆ ಬಿಟ್ಟಿ ರಿಯಲ್‌ ಎಸ್ಟೇಟ್‌ ಆದಾಯ ಭಾಗ್ಯ ಕರುಣಿಸಲಿದೆಯೇ ಸರ್ಕಾರ?

ಬೆಂಗಳೂರು; ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ಉದ್ದೇಶಿತ  ಸುರಂಗ ಮಾರ್ಗ ನಿರ್ಮಾಣದ ಹೆಸರಿನಲ್ಲಿ...
Please Scan to make Your Contribution

Topics

ಪಿಎಸ್‌ಐ ನೇಮಕಾತಿ ಹಗರಣ; ಎಡಿಜಿಪಿ ಅಮೃತ್‌ ಪೌಲ್ ವಿರುದ್ಧ 4 ವರ್ಷಗಳ ಬಳಿಕ ಇಲಾಖೆ ವಿಚಾರಣೆ ಪ್ರಕ್ರಿಯೆಗೆ ಚಾಲನೆ, ದೋಷಾರೋಪಣೆ ಪಟ್ಟಿ ಜಾರಿ

ಬೆಂಗಳೂರು; ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪ್ರಕರಣದ ಹಗರಣದಲ್ಲಿ ಆರೋಪಿಯಾಗಿ, ಅಮಾನತುಗೊಂಡಿರುವ ಪೊಲೀಸ್‌...

ಸುರಂಗ ಮಾರ್ಗ; ಅದಾನಿ ಎಂಟರ್ ಪ್ರೈಸೆಸ್‌ಗೆ ಬಿಟ್ಟಿ ರಿಯಲ್‌ ಎಸ್ಟೇಟ್‌ ಆದಾಯ ಭಾಗ್ಯ ಕರುಣಿಸಲಿದೆಯೇ ಸರ್ಕಾರ?

ಬೆಂಗಳೂರು; ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ಉದ್ದೇಶಿತ  ಸುರಂಗ ಮಾರ್ಗ ನಿರ್ಮಾಣದ ಹೆಸರಿನಲ್ಲಿ...

Related Articles

Popular Categories

error: Content is protected !!