ಬೆಂಗಳೂರು; ಕೋವಿಡ್ -19 ಸೋಂಕಿತರಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಚಿಕಿತ್ಸೆ ನೀಡಿದ್ದ ಮಣಿಪಾಲ್ ಆಸ್ಪತ್ರೆಗೆ ಯಾವುದೇ ವೆಚ್ಚವನ್ನು ಮುಖ್ಯಮಂತ್ರಿಗಳ ಸಚಿವಾಲಯ ಪಾವತಿಸಿಲ್ಲ. ಹಾಗೆಯೇ ಆಸ್ಪತ್ರೆಗೆ ಭರಿಸಿರುವ ಚಿಕಿತ್ಸಾ ವೆಚ್ಚದ ಬಗ್ಗೆ ಯಾವುದೇ ಬಿಲ್‌ಗಳು ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಸಲ್ಲಿಕೆಯಾಗಿಲ್ಲ.
ಈ ಕುರಿತು ‘ದಿ ಫೈಲ್’ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಮುಖ್ಯಮಂತ್ರಿ ಸಚಿವಾಲಯವು 2020ರ ಸೆ.9ರಂದು ಹಿಂಬರಹ ನೀಡಿದೆ. 8 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಮುಖ್ಯಮಂತ್ರಿಗೆ ಆಸ್ಪತ್ರೆಯು ಉಚಿತವಾಗಿ ಚಿಕಿತ್ಸೆ ನೀಡಿತ್ತೇ, ಯಾವ ಸಚಿವಾಲಯವು ಚಿಕಿತ್ಸಾ ವೆಚ್ಚವನ್ನು ಭರಿಸಿದೆ ಅಥವಾ ಕುಟುಂಬ ಸದಸ್ಯರು ಭರಿಸಿದ್ದಾರೆಯೇ, ಆಸ್ಪತ್ರೆ ಎಷ್ಟು ಮೊತ್ತಕ್ಕೆ ಬಿಲ್ ಮಾಡಿತ್ತು, ಯಾವ ಯಾವ ಬಾಬ್ತುಗಳಿಗೆ ಎಷ್ಟೆಷ್ಟು ಬಿಲ್ ಮಾಡಿತ್ತು ಎಂಬ ಮಾಹಿತಿ ನಿಗೂಢವಾಗಿ ಉಳಿದಂತಾಗಿದೆ.
‘ಮುಖ್ಯಮಂತ್ರಿಯವರು ದಾಖಲಾಗಿದ್ದ ಮಣಿಪಾಲ್ ಆಸ್ಪತ್ರೆಗೆ ಭರಿಸಿರುವ ಚಿಕಿತ್ಸಾ ವೆಚ್ಚದ ಬಗ್ಗೆ ಯಾವುದೇ ಬಿಲ್‌ಗಳು ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ಸಲ್ಲಿಕೆಯಾಗಿರುವುದಿಲ್ಲ. ಹಾಗೂ ಯಾವುದೇ ವೆಚ್ಚವನ್ನು ಪಾವತಿಸಿರುವುದಿಲ್ಲ,’ ಎಂದು ಆರ್‌ಟಿಐಗೆ ಮುಖ್ಯಮಂತ್ರಿ ಸಚಿವಾಲಯದ ಅಧೀನ ಕಾರ್ಯದರ್ಶಿ ಮಾಹಿತಿ ಒದಗಿಸಿದ್ದಾರೆ.
ಆರೋಗ್ಯ ಇಲಾಖೆಯ ಮಾರ್ಗಸೂಚಿಗಳ ಪ್ರಕಾರ ಸರ್ಕಾರಿ ಆಸ್ಪತ್ರೆಗಳು ಭರ್ತಿಯಾದ ನಂತರವಷ್ಟೇ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಇಲಾಖೆ ಅನುಮತಿ ನೀಡಬೇಕು. ಅಲ್ಲದೆ ಯಾವ ಆಸ್ಪತ್ರೆಗೆ ಹೋಗಬೇಕು ಎನ್ನುವುದನ್ನೂ ನೋಡಲ್ ಅಧಿಕಾರಿಯೇ ನಿರ್ಧರಿಸಬೇಕು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪ್ರಕರಣದಲ್ಲಿ ನೋಡಲ್ ಅಧಿಕಾರಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಿದ್ದರೇ ಅಥವಾ ಇಲ್ಲವೇ ಎಂಬ ಮಾಹಿತಿ ಒದಗಿಸಿಲ್ಲ.
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೋವಿಡ್-19 ಇರುವುದು ಆಗಸ್ಟ್ 3ರಂದು ದೃಢಪಟ್ಟಿತ್ತು. ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು. ವೈದ್ಯರ ಸಲಹೆಯಂತೆ ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು.
ಕೋವಿಡ್-19ನಿಂದ ಸಂಪೂರ್ಣ ಗುಣಮುಖರಾದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಆಸ್ಪತ್ರೆಯಿಂದ ಅಗಸ್ಟ್ 10ರಂದು ಬಿಡುಗಡೆಯಾಗಿದ್ದರು. ಈ ಮೊದಲು ಯಡಿಯೂರಪ್ಪ ಅವರ ಕಾರು ಚಾಲಕನಿಗೆ ಹಾಗೂ ಅವರ ಅಡುಗೆ ಸಿಬ್ಬಂದಿಯೊಬ್ಬರಿಗೆ ಕೋವಿಡ್ ದೃಢಪಟ್ಟಿತ್ತು. ಆಗ ಪರೀಕ್ಷೆ ಮಾಡಿಸಿದ್ದಾಗ ಮುಖ್ಯಮಂತ್ರಿಗೆ ಸೋಂಕು ದೃಢಪಟ್ಟಿರಲಿಲ್ಲ. ಹೀಗಾಗಿ ಅವರ ಗೃಹ ಕಚೇರಿ ಕಾವೇರಿ ಹಾಗೂ ಡಾಲರ್ಸ್ ಕಾಲೊನಿಯ ‘ಧವಳಗಿರಿ’ ನಿವಾಸವನ್ನು ಸೋಂಕು ನಿವಾರಕ ಸಿಂಪಡಿಸಿ ಸ್ವಚ್ಛಗೊಳಿಸಲಾಗಿತ್ತು.
ಆರೋಗ್ಯ ಇಲಾಖೆಯ ಶಿಫಾರಸ್ಸು ಇಲ್ಲದೆ ನೇರವಾಗಿ ಖಾಸಗಿ ಆಸ್ಪತ್ರೆಯ ಸಾಮಾನ್ಯ ವಾರ್ಡ್‌ನಲ್ಲಿ ದಾಖಲಾಗಿದ್ದರೆ 10,000 ರು., ಎಚ್‌ಡಿಯು 12,000, ವೆಂಟಿಲೇಟರ್ ರಹಿತ ಐಸೋಲೇಷನ್ ಐಸಿಯುಗೆ 15,000 ರು., ವೆಂಟಿಲೇಟರ್ ಸಹಿತ 25,000 ರು.ಗಳು ಎಂದು ಸರ್ಕಾರವೇ ದರ ನಿಗದಿಪಡಿಸಿತ್ತು.
ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಪಡೆಯಲು ಕಟ್ಟುನಿಟ್ಟಾದ ನಿಯಮಗಳ ಪ್ರಕಾರ ಸರ್ಕಾರಿ ನೋಡಲ್ ಅಧಿಕಾರಿ ಅಥವಾ ಜಿಲ್ಲಾ ಆರೋಗ್ಯಾಧಿಕಾರಿ ಶಿಫಾರಸು ಮಾಡಿದರೆ ಮಾತ್ರ ಖಾಸಗಿ ಆಸ್ಪತ್ರೆಗೆ ದಾಖಲಾಗಬೇಕು ಎಂದು ಮಾರ್ಗಸೂಚಿ ಹೊರಡಿಸಿದ್ದನ್ನು ಸ್ಮರಿಸಬಹುದು.