ಐಎಂಎ; ಐಪಿಸಿ ಸೆಕ್ಷನ್‌ 218 ಅಡಿಯಲ್ಲಿ ವಿಚಾರಣೆಗೆ ಅನುಮತಿ ನೀಡದಿರುವುದರ ಹಿಂದಿನ ಗುಟ್ಟೇನು?

ಬೆಂಗಳೂರು; ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಹಿರಿಯ ಐಪಿಎಸ್‌ ಅಧಿಕಾರಿ ಹೇಮಂತ್‌ ನಿಂಬಾಳ್ಕರ್‌, ಅಜಯ್‌ ಹಿಲೋರಿ ಸೇರಿ ಐವರು ಪೊಲೀಸ್‌ ಅಧಿಕಾರಿಗಳನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸುವ ಉದ್ದೇಶದಿಂದ ನೀಡಿರುವ ಅಭಿಯೋಜನೆ ಮಂಜೂರಾತಿ ಆದೇಶದಲ್ಲಿ ಗೃಹ ಇಲಾಖೆ ಉಲ್ಲೇಖಿಸಿರುವ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂಗಳ ಕುರಿತು ಬಲವಾದ ಆಕ್ಷೇಪಗಳು ಕೇಳಿ ಬಂದಿವೆ.

ಐಪಿಸಿ 218 ಅಡಿಯಲ್ಲಿ ಪ್ರಬಲ ಸಾಕ್ಷ್ಯಗಳಿದ್ದರೂ ಅದನ್ನು ಬಳಸದೆಯೇ ಆರೋಪಿತ ಐಪಿಎಸ್‌ ಅಧಿಕಾರಿಗಳನ್ನು ರಕ್ಷಿಸುವ ಭಾಗವಾಗಿಯೇ 120-ಬಿ, 406, 409, 420 ಕಲಂಗಳಡಿಯಲ್ಲಿ ವಿಚಾರಣೆಗೆ ಅನುಮತಿ ನೀಡಿದೆ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ ಅನುಮಾನಿಸಿದೆ.

ವಿಚಾರಣೆ ಪ್ರಕ್ರಿಯೆಯಲ್ಲಿ ಆರೋಪಿತ ಅಧಿಕಾರಿಗಳ ವಿರುದ್ಧ ಆರೋಪಗಳನ್ನು ಸಾಬೀತುಪಡಿಸಲು ಕಲಂ 120-ಬಿ, 406, 409, 420 ಅಡಿಯಲ್ಲಿ ಕಷ್ಟಸಾಧ್ಯವಾಗಲಿದೆ. ಬಲವಾದ ಸಾಕ್ಷ್ಯಾಧಾರಗಳು ಲಭ್ಯವಾಗುವುದಿಲ್ಲ. ಬದಲಿಗೆ 218 ಅಡಿಯಲ್ಲಿ ಅನುಮತಿ ನೀಡಿದ್ದರೆ ಹೇಮಂತ್‌ ನಿಂಬಾಳ್ಕರ್‌ ಅವರು ಬರೆದಿದ್ದ ಪತ್ರವನ್ನೇ ಪ್ರಬಲ ಸಾಕ್ಷ್ಯವನ್ನಾಗಿಸಿಕೊಂಡು ಆರೋಪ ಸಾಬೀತುಪಡಿಸಲು ಸಾಕಷ್ಟು ಅವಕಾಶಗಳಿದ್ದವು ಎಂದು ಜನಾಧಿಕಾರ ಸಂಘರ್ಷ ಪರಿಷತ್‌ ತನ್ನ ವಾದವನ್ನು ಮುಂದೊಡ್ಡಿದೆ.

ಸೆಕ್ಷನ್‌ 218 ಹೇಳುವುದೇನು?

ಆರೋಪಿಯನ್ನು ಶಿಕ್ಷೆಯಿಂದ ರಕ್ಷಿಸಲು ಸಾರ್ವಜನಿಕ ನೌಕರನು ತಪ್ಪು ದಾಖಲೆ ಅಥವಾ ಆರೋಪಿಗೆ ಸೇರಿರುವ ಆಸ್ತಿಯನ್ನು ಮುಟ್ಟುಗೋಲು ಹಾಕುವುದನ್ನು ತಪ್ಪಿಸಿದ್ದರೆ 3 ವರ್ಷ ಜೈಲು ಶಿಕ್ಷೆ ಅಥವಾ ದಂಡವನ್ನು ವಿಧಿಸಬಹುದು ಎಂದು ಸೆಕ್ಷನ್‌ 218ನಲ್ಲಿ ಹೇಳಿದೆ.

ಜಿಲ್ಲಾಧಿಕಾರಿಗೆ ಬರೆದಿದ್ದ ಪತ್ರವೇ ಪ್ರಬಲ ಸಾಕ್ಷ್ಯ

ಆರೋಪಿತ ಐಪಿಎಸ್‌ ಅಧಿಕಾರಿ ಹೇಮಂತ್‌ ನಿಂಬಾಳ್ಕರ್‌ ಅವರು ಸಿಐಡಿ ಪೊಲೀಸ್ ಮಹಾನಿರೀಕ್ಷಕ (ಆರ್ಥಿಕ ಅಪರಾಧಗಳು) ರಾಗಿದ್ದ ಅವಧಿಯಲ್ಲೇ ಐಎಂಎ ವಂಚನೆ ಪ್ರಕರಣ ಸಂಬಂಧ 2019ರ ಜನವರಿ 18ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಇದರಲ್ಲಿ ಐಎಂಎ ಕಂಪನಿ ವಿರುದ್ಧ ಕ್ರಮ ಜರುಗಿಸಲು ಬರುವುದಿಲ್ಲ ಎಂದು ಹೇಳಿದ್ದರು. ಐಪಿಸಿ ಸೆಕ್ಷನ್‌ 218ರ ಅಡಿಯಲ್ಲಿಯೇ ವಿಚಾರಣೆಗೆ ಅನುಮತಿ ನೀಡಿದ್ದರೆ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಬರೆದಿದ್ದ ಆ ಪತ್ರವೇ, ಆರೋಪಿತ ಅಧಿಕಾರಿಗಳನ್ನು ಶಿಕ್ಷೆಗೆ ಗುರಿಪಡಿಸಲು ಪ್ರಮುಖ ಸಾಕ್ಷ್ಯವಾಗಿತ್ತು ಎಂಬ ವಾದವನ್ನು ಜನಾಧಿಕಾರ ಸಂಘರ್ಷ ಪರಿಷತ್‌ ಮುಂದಿಟ್ಟಿದೆ.

ಜಿಲ್ಲಾಧಿಕಾರಿಗೆ ಬರೆದಿದ್ದ ಪತ್ರದ ಸಾರಾಂಶ

ಐಎಂಎ ಸಂಸ್ಥೆಯಲ್ಲಿ ಒಟ್ಟು 4 ಪಾರ್ಟನರ್‌ ಶಿಪ್‌ ಲಿಮಿಟೆಡ್‌ ಕಂಪನಿಗಳಿದ್ದು, ಈ ಕಂಪನಿಗಳಲ್ಲಿ ಬಂಗಾರ, ಬೆಳ್ಳಿಯ ಲೋಹಗಳನ್ನು ಬಂಗಾರ, ಬಂಗಾರ, ಬೆಳ್ಳಿ ಆಭರಣಗಳ ಮಾರಾಟ ಮಾಡುವ ವ್ಯವಹಾರಗಳನ್ನು ನಡೆಸುತ್ತಿರುವುದು ಕಂಡು ಬಂದಿರುತ್ತದೆ. ವಿಚಾರಣಾಧಿಕಾರಿಗಳು ವಿಚಾರಣೆ ಕಾಲದಲ್ಲಿ ಸಂಗ್ರಹಿಸಿದ ದಾಖಲಾತಿಗಳು ಹಾಗೂ ಸಾಕ್ಷಿಗಳ ಹೇಳಿಕೆಗಳ ಪ್ರಕಾರ ಐಎಂಎ ಕಂಪನಿಯು ಹಣಕಾಸಿನ ಸಂಸ್ಥೆಯಾಗಿರುವುದಿಲ್ಲ. ಹಣಕಾಸಿನ ಸಂಸ್ಥೆಯೆಂದು ಯಾವುದೇ ಹೂಡಿಕೆದಾರರು ಹಣ ಹೂಡಿಕೆ ಮಾಡಿರುವುದಿಲ್ಲ.

ಈ ಕಂಪನಿಯು ಸಾರ್ವಜನಿಕರನ್ನು ನಂಬಿಸಿ ಹೆಚ್ಚು ಬಡ್ಡಿ, ಹೆಚ್ಚು ಲಾಭ ನೀಡುತ್ತೇವೆಂದು ಸಾರ್ವಜನಿಕರಿಂದ ಹಣವನ್ನು ಠೇವಣಿ ರೂಪದಲ್ಲಿ ಸಂಗ್ರಹಿಸಿ ಮೋಸ ಮಾಡಿರುವ ಬಗ್ಗೆ ಯಾವುದೇ ಪೂರಕ ಸಾಕ್ಷ್ಯಾಧಾರಗಳು ಹೊರಹೊಮ್ಮದ ಕಾರಣ ಮತ್ತು ಐಎಂಎ ಸಮೂಹ ಕಂಪನಿ ವತಿಯಿಂದ ವರ್ಷವಾರು ಆದಾಯ ಇಲಾಖೆಗೆ ಸಲ್ಲಿಸಿದ ಆಯವ್ಯಯ ಮಾಹಿತಿಯ ದಾಖಲೆಗಳು ಹಾಗೂ ಕಂಪನಿಯ ಪಾಲುದಾರ ಹಾಗೂ ಮುಖ್ಯಸ್ಥ ಮಹಮ್ಮದ್‌ ಮನ್ಸೂರ್‌ ಖಾನ್‌ರವರ ವೈಯಕ್ತಿಕ ಆಯವ್ಯಯ 2011-18ರವರೆಗೆ ಪರಿಶೀಲಿಸಲಾಗಿ ಅಲ್ಲಿಯೂ ಕೂಡ ಯಾವುದೇ ನ್ಯೂನತೆಗಳು ವಿಚಾರಣಾ ಕಾಲದಲ್ಲಿ ಕಂಡು ಬರದ ಕಾರಣ ಹಾಗೂ ವೈಯಕ್ತಿಕವಾಗಿ ಠೇವಣಿ ನೀಡಿ ಮೋಸ ಹೋಗಿದ್ದೇವೆಂದು ಯಾರೂ ಹೇಳಿಕೆ ನೀಡಲು ಮುಂದೆ ಬಂದಿಲ್ಲ.

ಕಲಂ 2(2)(ii) ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಅಧಿನಿಯಮ 2004ರಲ್ಲಿ ನಮೂದಿಸಿರುವಂತೆ ಒಂದು ಕಂಪೊನಿಯ ಪಾಲುದಾರರು ನೀಡಿದ ಬಂಡವಾಳವನ್ನು ಠೇವಣಿ ಎಂದು ಪರಿಗಣಿಸಲು ಕಾನೂನಿನ ಪ್ರಕಾರ ಸಾಧ್ಯವಿಲ್ಲದೇ ಇರುವುದರಿಂದ ಕಲಂ 9 ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಅಧಿನಿಯಮ 2004ರ ಅಡಿಯಲ್ಲಿ ಆರೋಪಿತ ಕಂಪನಿಯ ವಿರುದ್ಧ ಕ್ರಮ ಜರುಗಿಸಲು ಬರದೇ ಇರುವುದರಿಂದ ಕಲಂ 3ರಲ್ಲಿ ಕ್ರಮ ತೆಗೆದುಕೊಳ್ಳಲು ಅವಕಾಶವಿರುವುದಿಲ್ಲ. ಆದ್ದರಿಂದ ಅರ್ಜಿಯ ವಿಚಾರಣೆಯನ್ನು ಮುಕ್ತಾಯಗೊಳಿಸಲಾಗಿರುತ್ತದೆ ಎಂದು ಪತ್ರದಲ್ಲಿ ಹೇಮಂತ್‌ ನಿಂಬಾಳ್ಕರ್‌ ಅವರು ವಿವರಿಸಿದ್ದರು.

ಅನುಮಾನಗಳನ್ನು ಬಲಗೊಳಿಸಿದ ಸಿಬಿಐ?

‘ಐಎಂಎ ಕಂಪನಿಯು ಹಣಕಾಸು ಸಂಸ್ಥೆಗಳ ಅಡಿಯಲ್ಲಿ ಬರುವುದಿಲ್ಲವಾದ ಕಾರಣ ಕೆಪಿಐಡಿ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗದು. ಐಎಂಎ ಸಂಗ್ರಹಿಸಿದ ಹಣವನ್ನು ಠೇವಣಿ ಎನ್ನಲಾಗದು ಎಂದು ವಿಚಾರಣೆ ಮುಗಿಸಿ ಷರಾ ಬರೆದು ಡಿಜಿಪಿಗೆ ವರದಿ ಸಲ್ಲಿಸಿದ್ದರು. ಈ ವರದಿಯನ್ನು ಸಕ್ಷಮ ಪ್ರಾಧಿಕಾರವಾಗಿದ್ದ ಬೆಂಗಳೂರು ಉತ್ತರ ವಿಭಾಗದ ಅಂದಿನ ಎ.ಸಿ. ಎಲ್‌.ಸಿ ನಾಗರಾಜ್‌ ಅವರಿಗೆ ಡಿಸಿ ಮತ್ತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮೂಲಕ ಸಲ್ಲಿಕೆಯಾಗಿತ್ತು. ಈ ಮೂಲಕ ಐಎಂಎ ಕಂಪನಿಯ ಮನ್ಸೂರ್‌ಖಾನ್‌ನನ್ನು ಕಾನೂನು ಕ್ರಮಗಳಿಂದ ರಕ್ಷಿಸಲಾಗಿದೆ,’ ಎಂದು ಆರೋಪಿಸಿದ್ದ ಸಿಬಿಐ, ಐಪಿಸಿ ಸೆಕ್ಷನ್‌ 218 ಅಡಿಯಲ್ಲಿ ವಿಚಾರಣೆ ನಡೆಸದಿರುವುದು ಅನುಮಾನಗಳನ್ನು ಮತ್ತಷ್ಟು ಬಲಗೊಳಿಸಿದಂತಾಗಿದೆ.

ಆರೋಪಿಯನ್ನು ಶಿಕ್ಷೆಯಿಂದ ರಕ್ಷಿಸಲು ಸಾರ್ವಜನಿಕ ನೌಕರನು ತಪ್ಪು ದಾಖಲೆ ಅಥವಾ ಆರೋಪಿಗೆ ಸೇರಿರುವ ಆಸ್ತಿಯನ್ನು ಮುಟ್ಟುಗೋಲು ಹಾಕುವುದನ್ನು ತಪ್ಪಿಸಲಾಗಿದೆ ಎಂಬ ಆರೋಪಕ್ಕೆ ನಿಂಬಾಳ್ಕರ್‌ ಅವರು ಬರೆದಿದ್ದ ಪತ್ರವೇ ಹೆಚ್ಚು ಪುಷ್ಠಿ ನೀಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಸೆಕ್ಷನ್‌ 409ರಲ್ಲೇನಿದೆ?

ಇನ್ನು ವಿಚಾರಣೆಗೆ ಅನುಮತಿ ನೀಡಿರುವ ಐಪಿಸಿ ಸೆಕ್ಷನ್‌ 409 ಅಡಿಯಲ್ಲಿ ಆರೋಪ ಸಾಬೀತಾದಲ್ಲಿ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಆದರೆ ಈ ಆರೋಪ ಸಾಬೀತುಪಡಿಸಲು ವಿಚಾರಣಾಧಿಕಾರಿಗಳ ಬಳಿ ಬಲವಾದ ಸಾಕ್ಷ್ಯಗಳು ಇರಬೇಕು. ಇಲ್ಲವಾದಲ್ಲಿ ಪ್ರಕರಣ ದುರ್ಬಲವಾಗುತ್ತದೆ. ಆದರೆ ಸೆಕ್ಷನ್‌ 218ನ್ನು ಸಾಬೀತುಪಡಿಸಲು ನಿಂಬಾಳ್ಕರ್‌ ಅವರು ಜಿಲ್ಲಾಧಿಕಾರಿಗೆ ಬರೆದಿರುವ ಪತ್ರವೇ ಪ್ರಮುಖ ಸಾಕ್ಷ್ಯವಾಗಿ ನೆರವಾಗುತ್ತಿತ್ತು. ಇದನ್ನು ವಿಚಾರಣೆ ವೇಳೆಯಲ್ಲಿ ಬಳಸಿದ್ದರೆ ಆರೋಪಿತ ಅಧಿಕಾರಿಗೆ ಶಿಕ್ಷೆ ಜಾರಿಯಾಗುತ್ತಿತ್ತು ಎನ್ನುತ್ತಾರೆ ಜನಾಧಿಕಾರ ಸಂಘರ್ಷ ಪರಿಷತ್‌ನ ಆದರ್ಶ ಐಯ್ಯರ್‌.

ಜೆಎಸ್‌ಪಿಯ ಮನವಿಯನ್ನು ಮರೆ ಮಾಚಿತೇ ಸರ್ಕಾರ?

ಆರೋಪಿತ ಅಧಿಕಾರಿಗಳ ವಿರುದ್ಧ ಐಪಿಸಿ ಸೆಕ್ಷನ್‌ 218 ಅಡಿಯಲ್ಲಿಯೇ ಪ್ರಕರಣವನ್ನು ದಾಖಲಿಸಬೇಕು ಎಂದು ಕಾನೂನಾತ್ಮಕಾ ಅಂಶಗಳನ್ನು ಮುಂದಿರಿಸಿದ್ದ ಜನಾಧಿಕಾರ ಸಂಘರ್ಷ ಪರಿಷತ್‌ , ನ್ಯಾಯಾಲಯದ ನಿರ್ದೇಶನದಂತೆ 2019ರ ಆಗಸ್ಟ್‌ 21ರಂದು ಸಿಬಿಐಗೂ ಮನವಿ ಸಲ್ಲಿಸಿತ್ತು.

ಸಾಮಾಜಿಕ ಕಾರ್ಯಕರ್ತ ಖಾನಾಪುರಿ ಎಂಬುವರು ನೀಡಿರುವ ದೂರನ್ನು ಮಾತ್ರ ಉಲ್ಲೇಖಿಸಿದೆ. ಆದರೆ ವಿಚಾರಣೆಗೆ ಅನುಮತಿ ಕೋರುವ ಪತ್ರದಲ್ಲಿ ಜನಾಧಿಕಾರ ಸಂಘರ್ಷ ಸಮಿತಿಯ ಮನವಿಯನ್ನು ಮರೆಮಾಚುವ ಉದ್ದೇಶದಿಂದಲೇ ಉಲ್ಲೇಖಿಸಿಲ್ಲ ಅದೇ ರೀತಿ ನಿಂಬಾಳ್ಕರ್‌ ಅವರ ವಿರುದ್ಧ ನಿರ್ದಿಷ್ಟವಾಗಿ ಐಪಿಸಿಯ ಯಾವ ಕಲಂಗಳನ್ನು ಉಲ್ಲೇಖಿಸಲಾಗಿದೆ ಎಂಬುದರ ವಿವರಗಳು ನಡವಳಿಯಲ್ಲಿ ನಮೂದಿಸಿಲ್ಲ ಎಂದು ಪರಿಷತ್‌ನ ಪ್ರಕಾಶ್‌ಬಾಬು ಅನುಮಾನ ವ್ಯಕ್ತಪಡಿಸುತ್ತಾರೆ.

ಐಪಿಸಿ ಸೆಕ್ಷನ್‌ 218 ಅಡಿಯಲ್ಲಿ ವಿಚಾರಣೆಗೆ ಅನುಮತಿ ನೀಡದಿರುವುದು ಆರೋಪಿತ ಹೇಮಂತ್‌ ನಿಂಬಾಳ್ಕರ್‌ ಅವರನ್ನು ರಕ್ಷಿಸುವ ಹುನ್ನಾರವಿದೆ. ಏಕೆಂದರೆ 218 ಅಡಿಯಲ್ಲಿ ಪ್ರಕರಣಕ್ಕೆ ಸಾಕಷ್ಟು ಬಲಿಷ್ಠ ಸಾಕ್ಷ್ಯಾಧಾರಗಳು ನೀಡಲಾಗಿದ್ದರೂ ಸಹ ಅದನ್ನು ಪರಿಗಣಿಸದೆಯೇ ಪ್ರಕರಣವನ್ನು ದುರ್ಬಲಗೊಳಿಸಲಿದೆ. ಆರೋಪ ಸಾಬೀತುಪಡಿಸಲು ಕಷ್ಟಸಾಧ್ಯವಾದ ಕಲಂಗಳಡಿಯಲ್ಲಿ ಅನುಮತಿ ನೀಡಿರುವುದು ಸರಿಯಲ್ಲ.

                                          ಆದರ್ಶ ಐಯ್ಯರ್‌, ಜನಾಧಿಕಾರ ಸಂಘರ್ಷ ಪರಿಷತ್‌

ಸುಮಾರು 10 ಸಾವಿರಕ್ಕೂ ಹೆಚ್ಚು ಹೂಡಿಕೆದಾರರಿಂದ ಐಎಂಎ ಕಂಪನಿಯು 2 ಸಾವಿರ ಕೋಟಿ ರೂ.ಗೂ ಅಧಿಕ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿದೆ. ಹೂಡಿಕೆ ಮೇಲೆ ಭಾರಿ ಪ್ರಮಾಣದ ರಿಟರ್ನ್ಸ್‌ ನೀಡುವುದಾಗಿ ಭರವಸೆ ನೀಡಲಾಗಿತ್ತು. ಇದನ್ನು ನಂಬಿದ ಸಾವಿರಾರು ಜನರು ಐಎಂಎನಲ್ಲಿ ಹಣ ಹೂಡಿದ್ದರು.

ಜನರಿಂದ ಸಂಗ್ರಹಿಸಿದ ಹಣವನ್ನೇ ವಾಪಸ್‌ ನೀಡುವ ಮೂಲಕ ಐಎಂಎ ನಿರ್ದೇಶಕ ಮನ್ಸೂರ್‌ಖಾನ್‌ ಮತ್ತು ತಂಡ ವಂಚಿಸಿದೆ. ಈ ಕುರಿತು ಆರ್‌ಬಿಐನ ಮಾರ್ಕೆಟ್‌ ಇಂಟೆಲಿಜೆನ್ಸ್‌ ವಿಭಾಗ ಮತ್ತು ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರು ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆಗೆ ದೂರು ನೀಡಿದ್ದರು. ಆದರೆ, ಪೊಲೀಸರು ನಿರ್ಲಕ್ಷ್ಯ ವಹಿಸಿದ್ದು ಅಕ್ರಮ ಮುಂದುವರಿಯಲು ಕಾರಣ ಎಂದು ಆರೋಪಿಸಲಾಗಿದೆ.

ಅಜಯ್‌ ಹಿಲೋರಿ ವಿರುದ್ಧ ಆರೋಪ

ಪೂರ್ವ ವಿಭಾಗದ ಡಿಸಿಪಿ ಅಜಯ್‌ ಹಿಲೋರಿ ಅವರು 2017ರ ಜ.1ರಿಂದ 2018ರ ಅ.16ರ ನಡುವೆ ಅಧಿಕಾರ ದುರುಪಯೋಗಪಡಿಸಿಕೊಂಡು ಐಎಂಎ ಅಕ್ರಮಗಳನ್ನು ಮುಚ್ಚಿಡಲು ವಿವಿಧ ಹಂತಗಳಲ್ಲಿ ಐಎಂಎ ಕಂಪನಿಯ ನಿರ್ದೇಶಕ ನಿಜಾಮುದ್ದೀನ್‌ ಮತ್ತು ಇತರರಿಂದ ಲಂಚ ಪಡೆದಿದ್ದಾರೆ. ಅಲ್ಲದೆ, ತಮ್ಮ ಮನೆಯ ಒಳಾಂಗಣ ವಿನ್ಯಾಸ ಸಾಮಗ್ರಿಗಳನ್ನು ಐಎಂಎ ಮೂಲಕ ಪಡೆದಿದ್ದಾರೆ. ಈ ಮೂಲಕ ಐಎಂಎ ಅಕ್ರಮ ಮುಂದುವರೆಯಲು ನೆರವಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ.

the fil favicon

SUPPORT THE FILE

Latest News

Related Posts