ಬೆಂಗಳೂರು; ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಕಾರ್ಯಾಚರಣೆ ನಡೆಸುತ್ತಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು 2026ರ ಜುಲೈ ಅಂತ್ಯಕ್ಕೆ 1,133.39 ಕೋಟಿ ಮೊತ್ತವನ್ನು ಪಾವತಿಸದೇ ಬಾಕಿ ಉಳಿಸಿಕೊಂಡಿರುವುದು ಇದೀಗ ಬಹಿರಂಗವಾಗಿದೆ.
ಅಲ್ಲದೇ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಟಿಎಪಿಸಿಎಂಎಸ್ಗಳಿಗೆ 2026ರ ಸೆಪ್ಟಂಬರ್ ಅಂತ್ಯಕ್ಕೆ ಪಡಿತರ ಆಹಾರ ಧಾನ್ಯ ಎತ್ತುವಳಿ ಮತ್ತು ಸಕ್ಕರೆ ಸಹಾಯಧನದ ಪೈಕಿ ಇನ್ನು 17.29 ಕೋಟಿಯಷ್ಟು ಬಾಕಿ ಮೊತ್ತವನ್ನು ಆಹಾರ ಇಲಾಖೆಯು ಉಳಿಸಿಕೊಂಡಿದೆ. ಅಲ್ಲದೇ ಮುಂದಿನ ವರ್ಷದಲ್ಲಿ ಮಾರುಕಟ್ಟೆ ಸೆಸ್ ಆಗಿ ಸಂಗ್ರಹಿಸಲಾಗುವ 60 ಪೈಸೆಯಲ್ಲಿ 10 ಪೈಸೆಯ ಪಾಲನ್ನು ಹೆಚ್ಚಿಸಲು ಚಿಂತಿಸಿದೆ.
ಆಹಾರ ಧಾನ್ಯಗಳ ಸಹಾಯ ಧನ ಬಿಲ್ಗಳು ಜಿಲ್ಲಾ ಘಟಕ ಕಚೇರಿಗಳಲ್ಲಿ ತಡವಾಗಿ ಸ್ವೀಕೃತವಾಗುತ್ತಿವೆ. ಆಯಾ ಆರ್ಥಿಕ ವರ್ಷಗಳಲ್ಲಿ ಬಿಲ್ಗಳ ಮೊತ್ತವನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲದಿರುವ ಕುರಿತು ವಿಧಾನ ಪರಿಷತ್ತಿನಲ್ಲಿಯೂ ಚರ್ಚೆ ನಡೆದಿತ್ತು. ಆದರೂ ಸಹಕಾರ ಮತ್ತು ಆಹಾರ ಇಲಾಖೆಯು ಕನಿಷ್ಟ ಬೆಂಬಲ ಬೆಲೆ ಯೋಜನೆ ಮತ್ತು ಆಹಾರ ಧಾನ್ಯಗಳ ಎತ್ತುವಳಿ, ಸಹಾಯಧನವನ್ನು ಬಹುಕೋಟಿಯಷ್ಟು ಬಾಕಿ ಉಳಿಸಿಕೊಂಡಿರುವುದು ಪ್ರತಿಪಕ್ಷಗಳಿಗೆ ಮತ್ತೊಂದು ಪ್ರಬಲ ಅಸ್ತ್ರವೊಂದನ್ನು ನೀಡಿದಂತಾಗಿದೆ.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತವು, 2025-26ನೇ ಸಾಲಿನ ಖಾರಿಫ್ ಮಾರುಕಟ್ಟೆ ಹಂಗಾಮಿನಲ್ಲಿ ರಾಗಿ, ಭತ್ತ ಮತ್ತು ಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಕಾರ್ಯಾಚರಣೆಗಳನ್ನು ಜಾರಿಗೊಳಿಸುತ್ತಿದೆ. ಈ ಸಂಬಂಧ ಪ್ರಸ್ತುತ ಹಣಕಾಸಿನ ಸ್ಥಿತಿಗತಿ ಕುರಿತೂ ಇಲಾಖೆ ಮಟ್ಟದಲ್ಲಿ ಚರ್ಚೆಗಳಾಗಿವೆ.
ಈ ಸಂಬಂಧ 2026ರ ಜುಲೈ 31ರಂದು ಅಭಿವೃದ್ದಿ ಆಯುಕ್ತರಾದ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಹಣಕಾಸಿನ ಸ್ಥಿತಿಗತಿಯನ್ನು ಮಂಡಿಸಲಾಗಿದೆ. ಈ ಕುರಿತು ಅಧಿಕಾರಿಗಳು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಸಚಿವ ರಿಜ್ಞಾನ್ ಅರ್ಷಾದ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಭೆಯ ನಡವಳಿಯ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.

ಕನಿಷ್ಟ ಬೆಂಬಲ ಬೆಲೆ ಯೋಜನೆಡಿಯಲ್ಲಿ ಆಹಾರ ಧಾನ್ಯಗಳ ಖರೀದಿ ಕಾರ್ಯಾಚರಣೆಗಳು 2026ರ ಜೂನ್ 15ರಂದೇ ಪೂರ್ಣಗೊಂಡಿವೆ. ಲಭ್ಯವಿರುವ ಅನುದಾನದ ಮಟ್ಟಿಗೆ ರೈತರಿಗೆ ಹಣ ಪಾವತಿಸಲಾಗಿದೆ. 2,02,929 ರೈತರಿಗೆ ಹಣ ಪಾವತಿ ಮಾಡಿರುವ ಇಲಾಖೆಯು, 86,409 ರೈತರಿಗೆ ಹಣ ಪಾವತಿಸಲು ಬಾಕಿ ಉಳಿಸಿಕೊಂಡಿರುವುದು ಸಭೆ ನಡವಳಿಯಿಂದ ತಿಳಿದು ಬಂದಿದೆ.
ಖರೀದಿ- ಪಾವತಿಯ ಪ್ರಸ್ತುತ ಸ್ಥಿತಿ ಹೇಗಿದೆ?
ರಾಗಿಯನ್ನು 246,756 ರೈತರಿಂದ ಒಟ್ಟು 5,69,331.10 ಮೆಟ್ರಿಕ್ ಟನ್ ಪ್ರಮಾಣದಲ್ಲಿ ಖರೀದಿಸಲಾಗಿದೆ. ಇದರ ಒಟ್ಟಾರೆ ಮೌಲ್ಯ 2,781.75 ಕೋಟಿ ರುನಷ್ಟಿದೆ. ಈ ಪೈಕಿ 1,79,902 ರೈತರಿಗೆ 2,503.67 ಕೋಟಿ ರು ಹಣ ಪಾವತಿಸಲಾಗಿದೆ. ಇನ್ನು 66,854 ರೈತರಿಗೆ 728.09 ಕೋಟಿ ರು ಪಾವತಿಸಲು ಬಾಕಿ ಇದೆ.
1,706 ಸಂಖ್ಯೆಯ ರೈತರಿಂದ 5,677.00 ಮೆಟ್ರಿನ್ ಟನ್ ಪ್ರಮಾಣದ ಭತ್ತ ಖರೀದಿಸಲಾಗಿದೆ. ಇದರ ಮೊತ್ತ 13.48 ಕೋಟಿಯಷ್ಟಿದೆ. ಈ ಪೈಕಿ 1,706 ಸಂಖ್ಯೆಯ ರೈತರಿಗೆ 13.48 ಕೋಟಿ ರು ಹಣ ಪಾವತಿಸಲಾಗಿದೆ. ಯಾವುದೇ ಬಾಕಿ ಉಳಿಸಿಕೊಂಡಿಲ್ಲ. 26,049 ರೈತರಿಂದ 1,40,198.65 ಮೆಟ್ರಿಕ್ ಟನ್ ಪ್ರಮಾಣದಲ್ಲಿ ಜೋಳ (ಖಾರೀಫ್) ಖರೀದಿಸಲಾಗಿದೆ. ಇದರ ಮೊತ್ತ 518.59 ಕೋಟಿಯಷ್ಟಿದೆ. ಈ ಪೈಕಿ 21,321 ರೈತರಿಗೆ 414.95 ಕೋಟಿ ಹಣ ಪಾವತಿಸಿರುವ ಇಲಾಖೆಯು ಇನ್ನೂ 4,278 ರೈತರಿಗೆ 103.64 ಕೋಟಿಯಷ್ಟು ಹಣ ಬಾಕಿ ಉಳಿಸಿಕೊಂಡಿದೆ.

114,827 ರೈತರಿಂದ 81,552.15 ಮೆಟ್ರಿಕ್ ಟನ್ ಪ್ರಮಾಣದ ಜೋಳ (ರಬಿ) ಖರೀದಿಸಲಾಗಿದೆ. ಇದರ ಒಟ್ಟು ಮೊತ್ತ 301.66 ಕೋಟಿಯಷ್ಟಿದೆ. ಈ ಪೈಕಿ ಒಬ್ಬ ರೈತನಿಗೂ ಹಣ ಪಾವತಿಯಾಗಿಲ್ಲ. ಹೀಗಾಗಿ 301.66 ಕೋಟಿ ರು ಪಾವತಿಗೆ ಬಾಕಿ ಇದೆ.

ಒಟ್ಟಾರೆ 2,89,338 ರೈತರಿಂದ 3,615.49 ಕೋಟಿ ರು ಮೌಲ್ಯದ 7,96,758.90 ಮೆಟ್ರಿಕ್ ಟನ್ ಪ್ರಮಾಣದಲ್ಲಿ ಆಹಾರ ಧಾನ್ಯ ಖರೀದಿಸಲಾಗಿದೆ. ಈ ಪೈಕಿ 2,02,929 ರೈತರಿಗೆ 2,482.10 ಕೋಟಿ ರು ಹಣ ಪಾವತಿಸಿದೆ. ಇನ್ನೂ 86,409 ರೈತರಿಗೆ 1,133.39 ಕೋಟಿಯಷ್ಟು ಪಾವತಿಸಲು ಬಾಕಿ ಉಳಿಸಿಕೊಂಡಿರುವುದು ಸಭೆ ನಡವಳಿಯಿಂದ ಗೊತ್ತಾಗಿದೆ.
ರಿವಾಲ್ವಿಂಗ್ ಫಂಡ್ ಕುರಿತು ಸಭೆಯಲ್ಲಿ ಚರ್ಚೆಯಾಗಿತ್ತು. ಕರ್ನಾಟಕ ರಾಜ್ಯ ಆಹಾರ ನಿಗಮಕ್ಕೆ ಬಿಡುಗಡೆ ಮಾಡಿದ್ದ ಹಣವನ್ನು 2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ (MSP) ಕಾರ್ಯಾಚರಣೆಗಳಡಿ ರೈತರಿಗೆ ಪಾವತಿ ಮಾಡಲು ಸಂಪೂರ್ಣವಾಗಿ ಬಳಸಲಾಗಿದೆ ಒಟ್ಟು ₹2,487.690 ಕೋಟಿ ಸ್ವೀಕರಿಸಿದೆ. ಇದರಲ್ಲಿ ಈಗಾಗಲೇ ₹2,482.099 ಕೋಟಿ ವಿತರಿಸಲಾಗಿದೆ. ಪಾವತಿ ವಿಫಲವಾದ ಕಾರಣ ₹5.591 ಕೋಟಿ ರು ಹಿಂತಿರುಗಿಸಲಾಗಿದೆ. ಈ ರೈತರಿಗೆ ಪಾವತಿ ಮಾಡುವ ಪ್ರಕ್ರಿಯೆ ಮುಂದುವರಿದಿದೆ ಎಂದು ಸಭೆಯಲ್ಲಿ ಹಣಕಾಸಿನ ಸ್ಥಿತಿಗತಿ ಕುರಿತು ಅಧಿಕಾರಿಗಳು ಅಂಕಿ ಅಂಶ ಮಂಡಿಸಿರುವುದು ತಿಳಿದು ಬಂದಿದೆ.

ರೈತರಿಗೆ ಇನ್ನೂ ₹1,133.392 ಕೋಟಿ ಪಾವತಿಸಬೇಕಿದೆ. ಲಭ್ಯವಿರುವ ಬಾಕಿ ಮೊತ್ತವನ್ನು ಹೊಂದಾಣಿಕೆ ಮಾಡಿದ ನಂತರ, ಹೆಚ್ಚುವರಿಯಾಗಿ ₹1,127.801 ಕೋಟಿ ಅಗತ್ಯವಿದೆ. 2026ರ ಜುಲೈ 31ರ ಹೊತ್ತಿಗೆ 2004-05ನೇ ಸಾಲಿನಿಂದ ರಿವಾಲ್ವಿಂಗ್ ಫಂಡ್ಗೆ ಮರುಪಾವತಿಸಬೇಕಾದ ₹2,074.47 ಕೋಟಿ ಬಾಕಿ ಉಳಿದಿದೆ. 2024-25ನೇ ಸಾಲಿನ ಕೆಎಂಎಸ್ಗೆ ಸಂಬಂಧಿಸಿದಂತೆ, ಭಾರತ ಸರ್ಕಾರವು ₹351.95 ಕೋಟಿ ಬಿಡುಗಡೆ ಮಾಡಿದೆ. ಅದನ್ನು 2026ರ ಜುಲೈ 30ರಂದು ಖಾತೆಗೆ ಜಮಾ ಮಾಡಲಾಗಿದೆ.
ಈ ಮೊತ್ತವನ್ನು ಆರಂಭದಲ್ಲಿ ರಿವಾಲ್ವಿಂಗ್ ಫಂಡ್ಗೆ ಜಮಾ ಮಾಡಲಾಗಿತ್ತು. ಇದಲ್ಲದೆ, 2022-23ನೇ ಸಾಲಿನ ಕೆಎಂಎಸ್ಗೆ ಸಂಬಂಧಿಸಿದಂತೆ, ₹357.39 ಕೋಟಿ ಬಿಡುಗಡೆ ಮಾಡಿರುವ ಭಾರತ ಸರ್ಕಾರವು 2026ರ ಜುಲೈ 30ರಂದು ಜಮೆ ಮಾಡಿದೆ. ಈ ಮೊತ್ತವನ್ನು ಕರ್ನಾಟಕ ಸರ್ಕಾರಕ್ಕೆ ಪಾವತಿಸಬೇಕಾಗಿದೆ. ಪ್ರಸ್ತುತ ಈ ಹಣವು ಕರ್ನಾಟಕ ರಾಜ್ಯ ಆಹಾರ ನಿಗಮದ ಬಳಿ ಇರುವುದು ಸಭೆ ನಡವಳಿಯಿಂದ ಗೊತ್ತಾಗಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯದರ್ಶಿಗಳು ನೀಡಿದ್ದ ಅಂಕಿ ಅಂಶಗಳನ್ನು ಆರ್ಥಿಕ ಇಲಾಖೆಯ ಅಧಿಕಾರಿಗಳು ಪರಿಶೀಲನೆ ಮಾಡಿದ್ದರು. ‘ರೈತರಿಗೆ ಮಾಡಬೇಕಿರುವ ಪಾವತಿಗಳ ಬಗ್ಗೆ ಹಣಕಾಸು ಇಲಾಖೆಗೆ ಅರಿವಿದೆ. ಅಲ್ಲದೇ ಕರ್ನಾಟಕ ರಾಜ್ಯ ಆಹಾರ ನಿಗಮದಿಂದ ಕರ್ನಾಟಕ ಸರ್ಕಾರಕ್ಕೆ (GoK) 357.39 ಕೋಟಿ ಬಾಕಿ ಇದೆ. ಈ ಹಣವನ್ನು 2025-26ನೇ ಸಾಲಿನ ಕೆಎಂಎಸ್ ಅಡಿಯಲ್ಲಿ ರೈತರಿಗೆ ಪಾವತಿ ಮಾಡಲು ಬಳಸಿಕೊಳ್ಳಬಹುದು,’ ಎಂದು ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.
ಅದರಂತೆ ಕರ್ನಾಟಕ ರಾಜ್ಯ ಆಹಾರ ನಾಗರಿಕ ಸರಬರಾಜು ನಿಗಮದಿಂದ ಕರ್ನಾಟಕ ಸರ್ಕಾರಕ್ಕೆ ಪಾವತಿಸಬೇಕಾದ ಬಾಕಿ ಮೊತ್ತವು ₹1,721.39 ಕೋಟಿಯಷ್ಟು ಉಳಿಯುತ್ತದೆ. ಇದಕ್ಕೆ ಪ್ರತಿಕ್ರಿಯಿಸಿದ ಹಣಕಾಸು ಇಲಾಖೆಯ ಕಾರ್ಯದರ್ಶಿ (ವೆಚ್ಚ) ಅವರು ‘ಮುಂದಿನ ವರ್ಷದಲ್ಲಿ ಮಾರುಕಟ್ಟೆ ಸೆಸ್ ಆಗಿ ಸಂಗ್ರಹಿಸಲಾಗುವ 60 ಪೈಸೆಯಲ್ಲಿ 10 ಪೈಸೆಯ ಪಾಲನ್ನು ಹೆಚ್ಚಿಸಬೇಕು. ಇದರಿಂದ ರಿವಾಲ್ವಿಂಗ್ ಫಂಡ್ಗೆ ಹೆಚ್ಚಿನ ಮೊತ್ತದ ಕೊಡುಗೆ ಹರಿದುಬರಲಿದೆ ಎಂದು ಸಲಹೆ ನೀಡಿರುವುದು ಗೊತ್ತಾಗಿದೆ.

ಈ ಕುರಿತು ವಿವರವಾಗಿ ಚರ್ಚಿಸಿದ ನಂತರ ಹಲವು ನಿರ್ಣಯಗಳನ್ನು ಸಭೆಯು ಕೈಗೊಂಡಿದೆ.
2025-26ನೇ ಸಾಲಿನ ಕೆಎಂಎಸ್ ಅಡಿಯಲ್ಲಿ ರೈತರಿಗೆ ಬಾಕಿ ಇರುವ ಪಾವತಿಗಳನ್ನು ಮಾಡಲು, ರಿವಾಲ್ವಿಂಗ್ ಫಂಡ್ನಿಂದ ₹351.95 ಕೋಟಿಯನ್ನು ತಕ್ಷಣವೇ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ (KFCSC)ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿತು. ಕರ್ನಾಟಕ ಸರ್ಕಾರಕ್ಕೆ (GoK) ಮರುಪಾವತಿಸಬೇಕಾಗಿರುವ ₹357.39 ಕೋಟಿಯನ್ನು, ಹಣಕಾಸು ಇಲಾಖೆಯ ಒಪ್ಪಿಗೆಯೊಂದಿಗೆ, 2025-26ನೇ ಸಾಲಿನ ಕೆಎಂಎಸ್ನ ಕನಿಷ್ಠ ಬೆಂಬಲ ಬೆಲೆ (MSP) ಕಾರ್ಯಾಚರಣೆಗಳ ಅಡಿಯಲ್ಲಿ ರೈತರಿಗೆ ಪಾವತಿ ಮಾಡಲು ಬಳಸಿಕೊಳ್ಳಲು ನಿರ್ಣಯ ಕೈಗೊಂಡಿತು.
ಅದರಂತೆ ಕೆಎಫ್ಸಿಎಸ್ಸಿಯಿಂದ ಕರ್ನಾಟಕ ಸರ್ಕಾರಕ್ಕೆ ಪಾವತಿಸಬೇಕಾದ ಬಾಕಿ ಮೊತ್ತವನ್ನು ಪರಿಷ್ಕರಿಸಿ ₹1,721.39 ಕೋಟಿಗೆ ನಿಗದಿಪಡಿಸಲಾಗುವುದು. 2025-26ನೇ ಸಾಲಿನ ಕೆಎಂಎಸ್ ಅಡಿಯಲ್ಲಿ ರೈತರಿಗೆ ಪಾವತಿ ಮಾಡಲು ₹351.95 ಕೋಟಿಯನ್ನು ತಕ್ಷಣವೇ ಕೆಎಫ್ಸಿಎಸ್ಗೆ ವರ್ಗಾಯಿಸುವಂತೆ ಸರ್ಕಾರದ ಸಹಕಾರ ಇಲಾಖೆಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿತು.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಸರ್ಕಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಗಳು ಭಾರತ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಗೆ (DFPD) ಸಲ್ಲಿಸಿರುವ ₹831.26 ಕೋಟಿ ಮೊತ್ತದ ಬಿಲ್ಗಳ ಬಿಡುಗಡೆ ಕುರಿತು ಅನುಸರಣೆ ಕ್ರಮ ಕೈಗೊಳ್ಳಲು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಗೆ ಭೇಟಿ ನೀಡುವಂತೆ ನಿರ್ದೇಶಿಸಿತು.

ಇದಲ್ಲದೇ 2021ರಲ್ಲಿ ರಾಜ್ಯದ ತಾಲೂಕು ಮಟ್ಟದ ಪಡಿತರ ಸರಬರಾಜು ಮಾಡುವ ಟಿಎಪಿಸಿಎಂಎಸ್ಗಳು ಮತ್ತು ಇತರೆ ಸಗಟು ಸರಬರಾಜು ಮಾಡುವ ತಾಲೂಕು ಮಟ್ಟದ ಸಂಸ್ಥೆಗಳಿಗೆ ಪಡಿತರ ಸಕ್ಕರೆ ಬಾಬ್ತು ಹಣವೂ ಸಹ ಬಾಕಿ ಇದೆ. 2026ರ ಸೆ.30ರ ಅಂತ್ಯಕ್ಕೆ ಇದರ ಮೊತ್ತ 19.67 ಕೋಟಿಯ್ಟು ಇದೆ.

ಹಾಗೆಯೇ 2024ರ ಏಪ್ರಿಲ್ 1ರಿಂದ 2026ರ ಸೆ.30ರ ಅಂತ್ಯದವರೆಗೆ ಬೆಂಗಳೂರು ವಿಭಾಗದಲ್ಲಿ ಒಟ್ಟು 49 ಟಿಎಪಿಸಿಎಂಎಸ್ಗಳಿಗೆ ಪಡಿತರ ಆಹಾರ ಧಾನ್ಯ ಎತ್ತುವಳಿ ಸಹಾಯಧನ ರೂಪದಲ್ಲಿ 13.25 ಕೋಟಿ ರು., ಸಕ್ಕರೆ ಸಹಾಯಧನ ರೂಪದಲ್ಲಿ 6.83 ಕೋಟಿ ರು., ಸಾಗಾಣಿಕೆ ಮೊತ್ತ 92.88 ಲಕ್ಷ ರು ಸೇರಿ ಒಟ್ಟಾರೆ 21.02 ಕೋಟಿಯಷ್ಟು ಮೊತ್ತವನ್ನು ಆಹಾರ ಇಲಾಖೆಯು ಇನ್ನಷ್ಟೇ ನೀಡಬೇಕಿದೆ.

ತುಮಕೂರಿನಲ್ಲಿ 8.13 ಕೋಟಿ, ಕೋಲಾರದಲ್ಲಿ 4.31 ಕೋಟಿ, ಚಿತ್ರದುರ್ಗದಲ್ಲಿ 2.50 ಕೋಟಿ, ಚಿಕ್ಕಬಳ್ಳಾಪುರದಲ್ಲಿ 1.86 ಕೋಟಿ ರು ಬಾಕಿ ಇದೆ.
ಮೈಸೂರು ವಿಭಾಗದಲ್ಲಿ ಒಟ್ಟು 52 ಟಿಎಪಿಸಿಎಂಎಸ್ಗಳಿಗೆ ಪಡಿತರ ಆಹಾರ ಧಾನ್ಯಗಳ ಎತ್ತುವಳಿ ಸಹಾಯಧನ ರೂಪದಲ್ಲಿ 8.48 ಕೋಟಿ, ಸಕ್ಕರೆ ಸಹಾಯಧನ 8.37 ಕೋಟಿ, ಸಾಗಾಣಿಕೆ ವೆಚ್ಚ 43.37 ಲಕ್ಷ ರು ಸೇರಿ ಒಟ್ಟಾರೆ 17.29 ಕೋಟಿಯಷ್ಟು ಮೊತ್ತವನ್ನು ಆಹಾರ ಇಲಾಖೆಯು ಬಾಕಿ ಉಳಿಸಿಕೊಂಡಿದೆ.

ಮೈಸೂರು ಜಿಲ್ಲೆಯಲ್ಲಿ 4.51 ಕೋಟಿ, ಚಾಮರಾಜನಗರದಲ್ಲಿ 11.5 ಕೊಟಿ, ಮಂಡ್ಯದಲ್ಲಿ 3.68 ಕೋಟಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ 1.63 ಕೋಟಿ, ಕೊಡಗಿನಲ್ಲಿ 2.68 ಕೋಟಿ, ದಕ್ಷಿಣ ಕನ್ನಡದಲ್ಲಿ 1.32 ಕೋಟಿ, ಉಡುಪಿಯಲ್ಲಿ 2.30 ಕೋಟಿ ಯಷ್ಟು ಮೊತ್ತವನ್ನು ಆಹಾರ ಇಲಾಖೆಯು ನೀಡಬೇಕಿದೆ ಎಂದು ಮೈಸೂರು ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕರು ಸರ್ಕಾರಕ್ಕೆ ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.
ರಾಗಿ ಖರೀದಿ ಅವ್ಯವಹಾರ; ಸರ್ಕಾರಕ್ಕೆ ವಂಚಿಸಿದ ರೈತರಿಗೆ ನೋಟೀಸ್, ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಆದೇಶ
ರಾಗಿ ಖರೀದಿಯಲ್ಲಿ ಅವ್ಯವಹಾರ ಆಗಿತ್ತು. ಈ ಕುರಿತು ಇಲಾಖೆಯ ಹಿಂದಿನ ಸಚಿವ ಕೆ ಹೆಚ್ ಮುನಿಯಪ್ಪ ಅವರು ಅಧಿಕಾರಿಗಳಿಗೆ ನೋಟೀಸ್ ನೀಡಿದ್ದರು.
ಸಾವಿರಾರು ಕ್ವಿಂಟಾಲ್ ರಾಗಿ, ಉಗ್ರಾಣಗಳಲ್ಲೇ ಹಾಳಾಯಿತೇ?: ವರದಿ ಕೇಳಿದ ಸರ್ಕಾರ
ಭತ್ತ, ರಾಗಿ, ಬಿಳಿಜೋಳ ಖರೀದಿಗೆ ಅನುದಾನ ಕೊರತೆ ಎದುರಾಗಿತ್ತು. ಹೀಗಾಗಿ ಆವರ್ತ ನಿಧಿಗೆ ಸರ್ಕಾರವು ಕೈ ಹಾಕಿತ್ತು.
ಈ ಕುರಿತು ದಿ ಫೈಲ್ ಪ್ರಕಟಿಸಿದ್ದ ವರದಿ ಆಧರಿಸಿ ಜೆಡಿಎಸ್, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.




