ರಾಗಿ ಖರೀದಿ ಅವ್ಯವಹಾರ; ಸರ್ಕಾರಕ್ಕೆ ವಂಚಿಸಿದ ರೈತರಿಗೆ ನೋಟೀಸ್‌, ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಆದೇಶ

ಬೆಂಗಳೂರು; ಅರ್ಹ ದಾಖಲೆಗಳನ್ನು ಹೊಂದದೇ ಗ್ರೈನ್‌ ವೋಚರ್‍‌ ಪಡೆದುಕೊಂಡು ರಾಗಿ ನೀಡಲಾಗಿದೆ ಎಂದು ಹಣ ಪಡೆದು ಸರ್ಕಾರಕ್ಕೆ ವಂಚಿಸಲು ಪ್ರಯತ್ನಿಸಿದ ರೈತರಿಗೆ ನೋಟೀಸ್‌ ನೀಡಲು ಸರ್ಕಾರವು ನಿರ್ದೇಶನ ನೀಡಿದೆ.

 

ಅಲ್ಲದೇ ಖರೀದಿ ಪ್ರಕ್ರಿಯೆ ಸಮಯದಲ್ಲಿ ಅನರ್ಹ ರೈತರ ದಾಖಲೆಗಳನ್ನು ತಿರುಚಿ ಕೇಂದ್ರ ಸರ್ಕಾರದ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳಲು ಸಹಾಯ ಮಾಡಿರುವ ಸಂಬಂಧಿಸಿದ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳಿಗೆ ನೋಟೀಸ್‌ ನೀಡಿ ಇಲಾಖೆ ವಿಚಾರಣೆ ನಡೆಸಬೇಕು ಎಂದು ಸೂಚಿಸಿದೆ.

 

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಮತ್ತು ಶ್ರೀರಾಂಪುದಲ್ಲಿ ತೆರೆಯಲಾಗಿರುವ ಆಹಾರ ಧಾನ್ಯ ಖರೀದಿ ಕೇಂದ್ರದಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರಗಳ ಕುರಿತು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಪ್ರಧಾನ ವ್ಯವಸ್ಥಾಪಕರ ವರದಿ ಆಧರಿಸಿ ಸಮಿತಿ ರಚಿಸಿರುವ ಸರ್ಕಾರವು, ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಈ ಸಂಬಂಧ 2023ರ ಆಗಸ್ಟ್‌   7ರಂದು ಸಮಿತಿ ರಚಿಸಿ ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ನೀಡಿರುವುದಾಗಿ ಅರ್ಹ ದಾಖಲೆಗಳನ್ನು ಹೊಂದದೇ ಗ್ರೈನ್‌ ವೋಚರ್ ಪಡೆದುಕೊಂಡಿದ್ದ ರೈತರು ಹಣ ಪಡೆದುಕೊಂಡಿದ್ದರು. ಈ ಸಂಬಂಧ ಏಕೆ ಹಣವನ್ನು ವಸೂಲು ಮಾಡಬಾರದು ಮತ್ತು ಏಕೆ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ರೈತರಿಗೆ ನೋಟೀಸ್‌ ಜಾರಿ ಮಾಡಬೇಕು ಎಂದು ಸಮಿತಿಗೆ ನಿರ್ದೇಶಿಸಿರುವುದು ಆದೇಶದ ಪ್ರತಿಯಿಂದ ತಿಳಿದು ಬಂದಿದೆ.

 

ಅರ್ಹ ದಾಖಲೆಗಳಿಲ್ಲದಿದ್ದರೂ ಗ್ರೈನ್‌ ವೋಚರ್‍‌ ಪಡೆದು ಸರ್ಕಾರಕ್ಕೆ ವಂಚನೆ ಮಾಡಲು ಯತ್ನಿಸಿದ ರೈತರಿಗೆ ನೋಟೀಸ್‌ ನೀಡಬೇಕು. ಖರೀದಿ ಕೇಂದ್ರಕ್ಕೆ ರಾಗಿಯನ್ನು ನೀಡಲಾಗಿದೆ ಆದರೆ ಗ್ರೈನ್‌ ವೋಚರ್ ನೀಡಿಲ್ಲವೆಂದು ಪ್ರತಿಪಾದಿಸುತ್ತಿರುವ 291 ರೈತರು ಸ್ವ ಘೋಷಿತ ಪ್ರಮಾಣ ಪತ್ರ, ಫ್ರೂಟ್ಸ್‌ ಗುರುತಿನ ಸಂಖ್ಯೆ, ಆಧಾರ್‍‌ ಕಾರ್ಡ್‌, ವೇ ಬ್ರಿಡ್ಜ್‌ ರಸೀತಿ, ಭೂ ದಾಖಲೆಗಳು, ರೈತರು ರಾಗಿಯನ್ನು ಖರೀದಿ ಕೇಂದ್ರದ ಸುಪರ್ದಿಗೆ ನೀಡಿರುವ ಬಗ್ಗೆ ದಾಖಲೆಗಳನ್ನು ಒದಗಿಸಬೇಕು ಎಂದು ಸೂಚಿಸಲಾಗಿದೆ.

 

ಖರೀದಿ ಪ್ರಕ್ರಿಯೆ ಸಮಯದಲ್ಲಿ ಅನರ್ಹ ರೈತರ ದಾಖಲೆಗಳನ್ನು ತಿರುಚಿ ಕೇಂದ್ರ ಸರ್ಕಾರದ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳಲು ಸಹಾಯ ಮಾಡಿರುವ ಸಂಬಂಧಪಟ್ಟ ಇತರೆ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳಿಗೂ ನೋಟೀಸ್‌ ಜಾರಿ ಇಲಾಖೆ ವಿಚಾರಣೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದೂ ಆದೇಶದಲ್ಲಿ ನಿರ್ದೇಶಿಸಲಾಗಿದೆ.

 

ಹೊಸದುರ್ಗ, ಶ್ರೀರಾಂಪುರ ಖರೀದಿ ಕೇಂದ್ರದಲ್ಲಿ ಆಹಾರ ಧಾನ್ಯ ಖರೀದಿಯಲ್ಲಿಯಲ್ಲಿನ ಅವ್ಯವಹಾರ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿನ ಖರೀದಿ ಕಾರ್ಯದಲ್ಲಿನ ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದ ಅಧಿಕಾರಿ, ಸಿಬ್ಬಂದಿಗಳಿಗೆ ಕಾರಣ ಕೇಳುವ ನೋಟೀಸ್‌ ಜಾರಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿರುವುದು ಆದೇಶದ ಪ್ರತಿಯಿಂದ ತಿಳಿದು ಬಂದಿದೆ.

 

ಅದೇ ರೀತಿ ಈ ಎರಡೂ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾಟಾ ಎಂಟ್ರಿ ಆಪರೇಟರ್ಸ್‌, ಖರೀದಿ ಕೇಂದ್ರದಲ್ಲಿ ಗ್ರೈನ್‌ ವೋಚರ್‍‌ ತಯಾರಿಕೆಯಲ್ಲಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಬೇಕು ಎಂದು ಜಿಲ್ಲಾ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಬೇಕು ಎಂದು ಸೂಚಿಸಿರುವುದು ಗೊತ್ತಾಗಿದೆ.

 

291 ರೈತರಿಂದ ಖರೀದಿಸಿದ ರಾಗಿ ದಾಸ್ತಾನಿಗೆ ಸಂಬಂಧಿಸಿದಂತೆ ಜಂಟಿ ತಪಾಸಣೆ ನಡೆಸಿದ ಸಂದರ್ಭದಲ್ಲಿ ಗ್ರೈನ್‌ ವೋಚರ್‍‌ ಹಾಕದೇ ಇರುವುದು ಮತ್ತು 3,363 ಕ್ವಿಂಟಾಲ್‌ ರಾಗಿ ಕೊರತೆ ಕಂಡು ಬಂದಿತ್ತು. ಈ ಸಂಬಂಧ ರಾಗಿ ದಾಸ್ತಾನು ದುರುಪಯೋಗವಾಗಿದೆ ಎಂದು ಹೊಸದುರ್ಗ ಪೊಲೀಸ್‌ ಠಾಣೆಯಲ್ಲ ದೂರು ದಾಖಲಾಗಿತ್ತು.

 

ಹೊಸದುರ್ಗ ಮತ್ತು ಶ್ರೀರಾಂಪುರ ರಾಗಿ ಖರೀದಿ ಕೇಂದ್ರದಲ್ಲಿ 10.916 ರೈತರು ಗ್ರೈನ್‌ ವೋಚರ್‍‌ ಪಡೆದಿದ್ದರು. ಆದರೆ 331 ರೈತರ ಎಫ್‌ಐಡಿಗಳಲ್ಲಿ ರಾಗಿ ಬೆಳೆದಿರುವ ಬಗ್ಗೆ ಯಾವುದೇ ಜಮೀನಿನ ವಿವರಗಳು ಇರಲಿಲ್ಲ. 331 ರೈತರಲ್ಲಿ 179 ರೈತರಿಗೆ ಈಗಾಗಲೇ ಡಿಬಿಟಿ ಮೂಲಕ ಹಣವನ್ನು ಪಾವತಿಸಲಾಗಿತ್ತು. ಇನ್ನುಳಿದ 152 ರೈತರಿಗೆ ಹಣ ಪಾವತಿ ಬಾಕಿ ಇತ್ತು. 291 ರೈತರು ರಾಗಿ ಮಾರಾಟ ಮಾಡಿದ್ರೂ ಅವರಿಗೆ ಗ್ರೈನ್‌ ವೋಚರ್‍‌ ನೀಡಿರಲಿಲ್ಲ ಎಂಬ ದೂರು ದಾಖಲಾಗಿತ್ತು. ಈ ದೂರನ್ನಾಧರಿಸಿ ತನಿಖೆ ನಡೆಸಲಾಗುವುದು ಸಚಿವ ಕೆ ಹೆಚ್ ಮುನಿಯಪ್ಪ ಅವರು ಹೇಳಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts