ಸಾವಿರಾರು ಕ್ವಿಂಟಾಲ್‌ ರಾಗಿ, ಉಗ್ರಾಣಗಳಲ್ಲೇ ಹಾಳಾಯಿತೇ?: ವರದಿ ಕೇಳಿದ ಸರ್ಕಾರ

ಬೆಂಗಳೂರು; ರೈತರಿಂದ ಸಂಗ್ರಹಿಸಿದ್ದ ಅಂಆಜು   2,421.00 ಕ್ವಿಂಟಾಲ್‌  ರಾಗಿ ದಾಸ್ತಾನು ಬಹಳ ದಿನಗಳಿಂದ ರಾಜ್ಯ ಉಗ್ರಾಣಗಳಲ್ಲಿಯೇ ಉಳಿದಿದೆ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

 

ಅರ್ಹ ದಾಖಲೆಗಳನ್ನು ಹೊಂದದೇ ಗ್ರೈನ್‌ ವೋಚರ್‍‌ ಪಡೆದುಕೊಂಡು ರಾಗಿ ನೀಡಲಾಗಿದೆ ಎಂದು ಹಣ ಪಡೆದು ಸರ್ಕಾರಕ್ಕೆ ವಂಚಿಸಲು ಪ್ರಯತ್ನಿಸಿದ ರೈತರಿಗೆ ನೋಟೀಸ್‌ ನೀಡಲು ಸರ್ಕಾರವು ನಿರ್ದೇಶನ ನೀಡಿದ್ದರ ಬೆನ್ನಲ್ಲೇ ಇದೀಗ ರಾಜ್ಯ ಉಗ್ರಾಣಗಳಲ್ಲಿ ರಾಗಿ ದಾಸ್ತಾನು ಉಳಿದಿರುವುದು ಮತ್ತು ಈ ದಾಸ್ತಾನು ಹಾಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.

 

2022-23 ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ  ಹೊಸದುರ್ಗ ತಾಲೂಕಿನ ರಾಗಿ ಕೇಂದ್ರಗಳಲ್ಲಿ ಕೊರತೆ ಕಂಡು ಬಂದಿತ್ತು.  ಮತ್ತು ಉಗ್ರಾಣಗಳಲ್ಲಿ  ಬಹಳ ದಿನಗಳಿಂದ ಉಳಿದಿರುವುದು ಹಾಗೂ ಈ ದಾಸ್ತಾನು ಹಾಳಾಗುವ ಸಾಧ್ಯತೆ ಹೆಚ್ಚಾಗಿದೆ. ಈ  ಕುರಿತು ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಕರ್ನಾಟಕ ಆಹಾರ, ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ 2023ರ ಡಿಸೆಂಬರ್‍‌ 20ರಂದು ಪತ್ರ (ಅನಾಸ 92 ಆರ್‍‌ ಪಿ ಆರ್‍‌ 2023) ಬರೆದಿದ್ದಾರೆ ಎಂದು ಗೊತ್ತಾಗಿದೆ.

 

 

ಪತ್ರದಲ್ಲೇನಿದೆ?

 

ರೈತರಿಂದ ಸಂಗ್ರಹಿಸಿದ ರಾಗಿ ಪ್ರಮಾಣ, ರಾಗಿಯನ್ನು ಮಾರಾಟ ಮಾಡಿದ ರೈತರ ಸಂಖ್ಯೆ, ರೈತರಿಗೆ ಪಾವತಿಸಬೇಕಾದ ಮೊತ್ತ ಹಾಗೂ ಈಗಾಗಲೇ ಪಾವತಿಸಿರುವ ಮೊತ್ತದ ವಿವರಗಳನ್ನುಒದಗಿಸಬೇಕು. ದಾಸ್ತಾನು ಬಹಳ ದಿನಗಳಿಂದ ರಾಜ್ಯ ಉಗ್ರಾಣಗಳಲ್ಲಿಯೇ ಉಳಿದಿದ್ದು ದಾಸ್ತಾನು ಹಾಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ರಾಗಿ ದಾಸ್ತಾನನ್ನು ಮುಂದಿನ ತಿಂಗಳುಗಳಿಗೆ ಹಂಚಿಕೆ ನೀಡಲು ಪ್ರಸ್ತಾಪಿಸಲಾಗಿದೆ.

 

ಈ ಪ್ರಮಾಣದ ರಾಗಿಯನ್ನು ಯಾವ ರೀತಿ ಸಂಗ್ರಹಿಸಲಾಗಿದೆ, ಈ ದಾಸ್ತಾನಿನ ಗ್ರೈನ್‌ ವೋಚರ್‍‌ ಜನರೇಟ್‌ ಆಗದೇ ಇರುವ ಬಗ್ಗೆ ಕಾರಣಗಳನ್ನು ಒದಗಿಸಬೇಕು. 2,421.00 ಕ್ವಿಂಟಾಲ್‌  ರಾಗಿಯನ್ನು ಸೆಂಟ್ರಲ್‌ ಪೂಲ್‌ ಸ್ಟಾಕ್‌ ಎಂದು ಪರಿಗಣಿಸಲು ಸಾಧ್ಯವಾಗಿಲ್ಲ. ಈ  ಬಗ್ಗೆ ಸ್ಪಷ್ಟನೆಯೊಂದಿಗೆ ಸರ್ಕಾರಕ್ಕೆ ವಿವರವಾದ ವರದಿಯನ್ನು ಸಲ್ಲಿಸಬೇಕು ಎಂದು ಸರ್ಕಾರದ ಕಾರ್ಯದರ್ಶಿಯು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

 

2022-23ನೆ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹೊಸದುರ್ಗ, ಹಿರಿಯೂರು ಮತ್ತು ಶ್ರೀರಾಂಪುರ ಖರೀದಿ ಕೇಂದ್ರದಿಂದ ಖರೀದಿಸಿದ ರಾಗಿ ಪ್ರಮಾಣದ ದಾಸ್ತಾನಿಗೆ ವೋಚರ್‍‌ ಜನರೇಟರ್‍‌ ಆಗಿರುವುದಿಲ್ಲ. ಹೀಗಾಗಿ ಹೊರ ಸಾಗಾಣಿಕೆ ಮಾಡಲು ಅವಕಾಶವಾಗಿಲ್ಲ. ಹೀಗಾಗಿ 2,420.00 ಕ್ವಿಂಟಾಲ್‌ ರಾಗಿ ದಾಸ್ತಾನಿನ ಬಾಂಡ್‌ಗಳು ಜಿಲ್ಲಾ ಕಚೇರಿಯಲ್ಲಿಯೇ ಉಳಿದಿದೆ. ಹೀಗಾಗಿ 2,421.00 ಕ್ವಿಂಟಾಲ್‌ ರಾಗಿ ದಾಸ್ತಾನು ರಾಜ್ಯ ಉಗ್ರಾಣ ನಿಗಮದಲ್ಲಿ ಉಳಿದಿತ್ತು ಎಂಬುದು ಗೊತ್ತಾಗಿದೆ.

 

ಅಲ್ಲದೇ ಖರೀದಿ ಪ್ರಕ್ರಿಯೆ ಸಮಯದಲ್ಲಿ ಅನರ್ಹ ರೈತರ ದಾಖಲೆಗಳನ್ನು ತಿರುಚಿ ಕೇಂದ್ರ ಸರ್ಕಾರದ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳಲು ಸಹಾಯ ಮಾಡಿರುವ ಸಂಬಂಧಿಸಿದ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳಿಗೆ ನೋಟೀಸ್‌ ನೀಡಿ ಇಲಾಖೆ ವಿಚಾರಣೆ ನಡೆಸಬೇಕು ಎಂದು ಸೂಚಿಸಿತ್ತು.

 

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಮತ್ತು ಶ್ರೀರಾಂಪುದಲ್ಲಿ ತೆರೆಯಲಾಗಿರುವ ಆಹಾರ ಧಾನ್ಯ ಖರೀದಿ ಕೇಂದ್ರದಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರಗಳ ಕುರಿತು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಪ್ರಧಾನ ವ್ಯವಸ್ಥಾಪಕರ ವರದಿ ಆಧರಿಸಿ ಸಮಿತಿ ರಚಿಸಿರುವ ಸರ್ಕಾರವು, ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಈ ಸಂಬಂಧ 2023ರ ಆಗಸ್ಟ್‌   7ರಂದು ಸಮಿತಿ ರಚಿಸಿ ಆದೇಶ ಹೊರಡಿಸಿತ್ತು.

 

 

ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ನೀಡಿರುವುದಾಗಿ ಅರ್ಹ ದಾಖಲೆಗಳನ್ನು ಹೊಂದದೇ ಗ್ರೈನ್‌ ವೋಚರ್ ಪಡೆದುಕೊಂಡಿದ್ದ ರೈತರು ಹಣ ಪಡೆದುಕೊಂಡಿದ್ದರು. ಈ ಸಂಬಂಧ ಏಕೆ ಹಣವನ್ನು ವಸೂಲು ಮಾಡಬಾರದು ಮತ್ತು ಏಕೆ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ರೈತರಿಗೆ ನೋಟೀಸ್‌ ಜಾರಿ ಮಾಡಬೇಕು ಎಂದು ಸಮಿತಿಗೆ ನಿರ್ದೇಶಿಸಿತ್ತು.

ರಾಗಿ ಖರೀದಿ ಅವ್ಯವಹಾರ; ಸರ್ಕಾರಕ್ಕೆ ವಂಚಿಸಿದ ರೈತರಿಗೆ ನೋಟೀಸ್‌, ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಆದೇಶ

 

ಅರ್ಹ ದಾಖಲೆಗಳಿಲ್ಲದಿದ್ದರೂ ಗ್ರೈನ್‌ ವೋಚರ್‍‌ ಪಡೆದು ಸರ್ಕಾರಕ್ಕೆ ವಂಚನೆ ಮಾಡಲು ಯತ್ನಿಸಿದ ರೈತರಿಗೆ ನೋಟೀಸ್‌ ನೀಡಬೇಕು. ಖರೀದಿ ಕೇಂದ್ರಕ್ಕೆ ರಾಗಿಯನ್ನು ನೀಡಲಾಗಿದೆ ಆದರೆ ಗ್ರೈನ್‌ ವೋಚರ್ ನೀಡಿಲ್ಲವೆಂದು ಪ್ರತಿಪಾದಿಸುತ್ತಿರುವ 291 ರೈತರು ಸ್ವ ಘೋಷಿತ ಪ್ರಮಾಣ ಪತ್ರ, ಫ್ರೂಟ್ಸ್‌ ಗುರುತಿನ ಸಂಖ್ಯೆ, ಆಧಾರ್‍‌ ಕಾರ್ಡ್‌, ವೇ ಬ್ರಿಡ್ಜ್‌ ರಸೀತಿ, ಭೂ ದಾಖಲೆಗಳು, ರೈತರು ರಾಗಿಯನ್ನು ಖರೀದಿ ಕೇಂದ್ರದ ಸುಪರ್ದಿಗೆ ನೀಡಿರುವ ಬಗ್ಗೆ ದಾಖಲೆಗಳನ್ನು ಒದಗಿಸಬೇಕು ಎಂದು ಸೂಚಿಸಿತ್ತು.

 

ಖರೀದಿ ಪ್ರಕ್ರಿಯೆ ಸಮಯದಲ್ಲಿ ಅನರ್ಹ ರೈತರ ದಾಖಲೆಗಳನ್ನು ತಿರುಚಿ ಕೇಂದ್ರ ಸರ್ಕಾರದ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳಲು ಸಹಾಯ ಮಾಡಿರುವ ಸಂಬಂಧಪಟ್ಟ ಇತರೆ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳಿಗೂ ನೋಟೀಸ್‌ ಜಾರಿ ಇಲಾಖೆ ವಿಚಾರಣೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದೂ ಆದೇಶದಲ್ಲಿ ನಿರ್ದೇಶಿಸಿತ್ತು.

the fil favicon

SUPPORT THE FILE

Latest News

Related Posts