ಬೆಂಗಳೂರು; ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನ ಸಮೀಪದಲ್ಲಿ ಅಕ್ರಮವಾಗಿ ಪುಷ್ಕರಣಿ ನಿರ್ಮಾಣ ಮತ್ತು ಕುಸಿಯುತ್ತಿರುವ ಜಾಗಕ್ಕೆ ತಡೆಗೋಡೆ ನಿರ್ಮಾಣ ಪ್ರಕರಣದಲ್ಲಿ ಲೋಕಾಯುಕ್ತದಲ್ಲಿ ಪ್ರತಿವಾದಿಯಾಗಿರುವ ಆರ್ಥಿಕ ಇಲಾಖೆಯ ಸರ್ಕಾರದ ಹಿಂದಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್ ಅವರು ನೀಡಿರುವ ಲಿಖಿತ ಸಮಜಾಯಿಷಿಗೆ ಮತ್ತಷ್ಟು ಆಕ್ಷೇಪಣೆಗಳು ವ್ಯಕ್ತವಾಗಿವೆ.
ಅದೇ ರೀತಿ ಈ ಕಾಮಗಾರಿ ನಡೆಸಲು ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪ ಅವರು ಅನುಮೋದನೆ ನೀಡಿದ್ದಾರೆ. ಮತ್ತು ತಮ್ಮಿಂದ ಅಥವಾ ಈ ಪ್ರಾಧಿಕಾರದಿಂದ ಯಾವುದೇ ಲೋಪವಾಗಿಲ್ಲ ಎಂದು ಐಎಸ್‌ಎನ್ ಪ್ರಸಾದ್ ಅವರು ಲಿಖಿತ ಸಮಜಾಯಿಷಿ ನೀಡಿದ್ದಾರೆ.
ಈ ಲಿಖಿತ ಸಮಜಾಯಿಷಿಯನ್ನು ದೂರುದಾರ ಮಂಜುನಾಥ ಹಿರೇಚೌಟಿ ಅವರು ತಳ್ಳಿ ಹಾಕಿದ್ದಾರೆ. ನೈಜ ಅಕ್ರಮಗಳ ಕುರಿತು ಮರೆ ಮಾಚಲು ತಾಂತ್ರಿಕ ನೆಪವನ್ನೊಡಿದ್ದಾರೆ, ಮಾಹಿತಿ ಮರೆ ಮಾಚಿದ್ದಾರೆ, ಇಲಾಖೆಯು ಸ್ವಯಂ ವಿರೋಧಾಭಾಸ ನಿಲುವು ತೆಗೆದುಕೊಂಡಿದೆ. ಮತ್ತು ಇದರಲ್ಲಿ ಅಧಿಕಾರಿಗಳ ಶಾಮೀಲಾತಿ ಇದೆ. ಐಎಸ್‌ಎನ್ ಪ್ರಸಾದ್ ಅವರು ತಮ್ಮ ಹುದ್ದೆಯ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿದ್ದಾರೆ ಎಂದು ದೂರುದಾರರು ಲೋಕಾಯುಕ್ತ ವಿಚಾರಣಾಧಿಕಾರಿಗಳ ಮುಂದೆ ಪ್ರತ್ಯುತ್ತರವನ್ನು ಮಂಡಿಸಿದ್ದಾರೆ.
ಈ ಪ್ರಕರಣದಲ್ಲಿ ಸರ್ಕಾರದ ಬೊಕ್ಕಸಕ್ಕೆ ಒಟ್ಟಾರೆ 8.4 ಕೋಟಿ ರು.ಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಹಿರೇಚೌಟಿ ಅವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಕುರಿತು ಲೋಕಾಯುಕ್ತದ ಅಪರ ನಿಬಂಧಕರಿಗೆ ಐಎಸ್‌ಎನ್ ಪ್ರಸಾದ್ ಅವರು ಲಿಖಿತ ಸಮಜಾಯಿಷಿ ನೀಡಿದ್ದರು.
ಬದಲಿಗೆ ಎದುರುದಾರ ಐಎಸ್‌ಎನ್ ಪ್ರಸಾದ್ ಅವರು ನೈಜ ಅಕ್ರಮಗಳ ಕುರಿತು ಉತ್ತರಿಸುವ ಬದಲಿಗೆ ಕೇವಲ ಸಕ್ಷಮ ಪ್ರಾಧಿಕಾರ ಮತ್ತು ಸಿಎಂ ಅನುಮೋದನೆ ನೀಡಿದ್ದಾರೆ ಎಂಬ ತಾಂತ್ರಿಕ ನೆಪವನ್ನೊಡ್ಡಿ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಅಪರ ನಿಬಂಧಕರಿಗೆ ಪ್ರತ್ಯುತ್ತರವನ್ನು ನೀಡಿದ್ದಾರೆ. ಈ ಪ್ರತ್ಯುತ್ತರಕ್ಕೆ ಹಿರೇಚೌಟಿ ಅವರು ಸೂಕ್ತ ದಾಖಲೆಗಳೊಂದಿಗೆ ಮಂಡಿಸಿದ್ದಾರೆ.
ಐಎಸ್‌ಎನ್ ಪ್ರಸಾದ್ ಅವರು ನೀಡಿರುವ ಲಿಖಿತ ಸಮಜಾಯಿಷಿ ಮತ್ತು ದೂರುದಾರ ಮಂಜುನಾಥ ಹಿರೇಚೌಟಿ ಅವರು ನೀಡಿರುವ ಪ್ರತ್ಯುತ್ತರದ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.
ನೀರಾವರಿ ಕಾಮಗಾರಿಗಾಗಿ ಮತ್ತು ನಿರ್ದಿಷ್ಟ ಕಾಮಗಾರಿಗಳಿಗಾಗಿ ಸರ್ಕಾರವು ನೀಡಿರುವ ಅನುದಾನವನ್ನು ಸರ್ಕಾರದ ಅನುಮತಿಯಿಲ್ಲದೇ ಅನ್ಯ ಉದ್ದೇಶಗಳಿಗೆ ಬಳಕೆ ಮಾಡುವುದು ನಿಯಮಬಾಹಿರವಾಗಿದೆ. ಕರ್ನಾಟಕ ನೀರಾವರಿ ನಿಗಮವು ಈ ಎರಡೂ ಕಾಮಗಾರಿಗಳನ್ನು ಸಕಾfರದ ಅನುಮತಿ ಪಡೆಯದೇ ಕೈಗೊಂಡಿದೆ. ಇದರಿಂದ ಸರ್ಕಾರಕ್ಕೆ ಮತ್ತು ಸಾರ್ವಜನಿಕ ಬೊಕ್ಕಸಕ್ಕೆ ಮೋಸ ಆಗಿದೆ ಎಂದು ಮಂಜುನಾಥ ಹಿರೇಚೌಟಿ ಅವರು ಲೋಕಾಯುಕ್ತಕ್ಕೆ ಸಲ್ಲಿಸಿದ್ದ ದೂರಿನಲ್ಲಿ ವಿವರಿಸಿದ್ದರು. ಈ ದೂರನ್ನು ಅಂಗೀಕರಿಸಿದ್ದ ಲೋಕಾಯುಕ್ತ ಸಂಸ್ಥೆಯು ಐ ಎಸ್ ಎನ್ ಪ್ರಸಾದ್ ಅವರಿಗೆ ನೋಟೀಸ್ ಜಾರಿ ಮಾಡಿತ್ತು.

ಐಎಸ್‌ಎನ್ ಪ್ರಸಾದ್ ನೀಡಿರುವ ಲಿಖಿತ ಸಮಜಾಯಿಷಿಯಲ್ಲೇನಿದೆ?
ಶಿವಮೊಗ್ಗ ಲೋಕಸಭೆ ಕ್ಷೇತ್ರದ ಶಿಕಾರಿಪುರ ಮತ್ತು ಹೊಸನಗರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ 4.9 ಕೋಟಿ ಮತ್ತು 3.50 ಕೋಟಿ ರು ಗಳ ವೆಚ್ಚದಲ್ಲಿ ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರದ ಮೂಲಕ ಅನುಷ್ಠಾನಗೊಳಿಸಲು ಕರ್ನಾಟಕ ನೀರಾವರಿ ನಿಗಮವು ಮುಂದಾಗಿತ್ತು. ಈ ಸಂಬಂಧ ಘಟನೋತ್ತರ ಅನುಮೋದನೆ ನಿರೀಕ್ಷಿಸಿತ್ತು. ಇದಕ್ಕೆ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಅವರು 2021ರ ಫೆ.15ರಂದು ಆಡಳಿತಾತ್ಮಕ ಅನುಮೋದನೆ ನೀಡಿದ್ದಾರೆ. ಅಲ್ಲದೇ 2020ರ ಅಕ್ಟೋಬರ್ 5ರಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಕರ್ನಾಟಕ ನೀರಾವರಿ ನಿಗಮದ 93ನೇ ನಿರ್ದೇಶಕರ ಮಂಡಳಿ ಸಭೆಯಲ್ಲಿ ಪ್ರಸ್ತಾಪಿತ ಕಾಮಗಾರಿಗಳಿಗೆ ಅನುಮೋದನೆ ನೀಡಿರುವ ವ್ಯವಸ್ಥಾಪಕ ನಿರ್ದೇಶಕರ ಕ್ರಮಕ್ಕೆ ಅನುಸಮರ್ಥನೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.
ಈ ಪ್ರಸ್ತಾಪಿತ ಕಾಮಗಾರಿಗೆ ಕೆಟಿಪಿಪಿ ಕಾಯ್ದೆ 4 ಜಿ ವಿನಾಯಿತಿ ಕೋರಿ 2020ರ ನವೆಂಬರ್ 26ರಂದು ಜಲಸಂಪನ್ಮೂಲ ಇಲಾಖೆಯಿಂದ ಪ್ರಸ್ತಾವನೆಯು ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿತ್ತು. ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿಗಳನ್ನು ವಹಿಸಲು ಯಾವುದೇ ಸಮರ್ಥನೆ ನೀಡಿರಲಿಲ್ಲ. ಹೀಗಾಗಿ 4 ಜಿ ವಿನಾಯಿತಿಯನ್ನು ನಿರಾಕರಿಸಿ ಕಾಮಗಾರಿಗಳನ್ನು ಟೆಂಡರ್ ಆಹ್ವಾನಿಸುವ ಮೂಲಕ ಅನುಷ್ಠಾನಗೊಳಿಸಬೇಕು ಎಂದು 2020ರ ಡಿಸೆಂಬರ್ 7ರಂದು ಹಿಂಬರಹ ನೀಡಿತ್ತು.

ಇದಾದ ನಂತರ ಇಲಾಖೆಯು ಪ್ರಸಕ್ತ ಪ್ರಕರಣದಲ್ಲಿ ಪ್ರಸ್ತಾಪಿಸಿದ ಕಾಮಗಾರಿಳು ಕಟ್ಟಡ, ತಡೆಗೋಡೆ ಕಾಮಗಾರಿಗಳಾಗಿದ್ದು ನಿರ್ಮಿತಿ ಕೇಂದ್ರದಿಂದ ಪರಿಸರ ಪ್ರೇಮಿ ಅಥವಾ ಕ್ರಯ ಪರಿಣಾಮಕಾರಿ ತಂತ್ರಜ್ಞಾನ ಅಥವಾ ನವೀನ ಕಟ್ಟಡ ಸಾಮಗ್ರಿಗಳು ಅಥವಾ ಮೊದಲೇ ಅಚ್ಚು ಹಾಕಿದ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕಟ್ಟಡ ನಿರ್ಮಾಣ ಮಾಡಲಿದೆ ಎಂದು ಹೇಳಿತ್ತು. ಹೀಗಾಗಿ ನಿಗಮದಿಂದ ಕೈಗೆತ್ತಿಕೊಳ್ಳಲು ಯೋಜಿಸಿರುವ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳನ್ನು ಪರಿಣಿತ ಸಂಸ್ಥೆಯಾದ ನಿರ್ಮಿತಿ ಕೇಂದ್ರದಿಂದ ಅನುಷ್ಠಾನಗೊಳಿಸಲು ತಿಳಿಸಿತ್ತು. ಈ ಸಂಬಂಧ 2021ರ ಜನವರಿ 5ರಂದು ಮತ್ತೊಂದು ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಿತ್ತು ಎಂದು ಐಎಸ್‌ಎನ್ ಪ್ರಸಾದ್ ಅವರು ಲಿಖಿತ ಸಮಜಾಯಿಷಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಕೆಟಿಪಿಪಿ ಕಾಯ್ದೆ ಕಲಂ 4(9)ರ ಅಡಿ ನಿರ್ದಿಷ್ಟ ಸಂಗ್ರಹಣೆಗಳಿಗೆ ಸಂಬಂಧಿಸಿದಂತೆ ವಿನಾಯಿತಿ ನಿಡಲಾಗುತ್ತದೆ. ಹಾಗೆಯೇ ಕೆಟಿಪಿಪಿ ಕಾಯ್ದೆ ಕಲಂ 4 ಜಿ ಅಡಿ ವಿನಾಯಿತಿ ನೀಡಲು ಬರುವ ಪ್ರಕರಣಗಳಲ್ಲಿ 50 ಲಕ್ಷ ರು ಮೊತ್ತದ ಪ್ರಕರಣಗಳನ್ನು ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಅನುಮೋದಿಸಲು ಅಧಿಕಾರ ಪ್ರತ್ಯಾಯೋಜಿಸಿದೆ. 50 ಲಕ್ಷ ರು ಮೀರಿದ ಪ್ರಕರಣಗಳಿಗೆ ಮುಖ್ಯಮಂತ್ರಿ ಅವರು ಸಕ್ಷಮ ಪ್ರಾಧಿಕಾರವಾಗಿದ್ದಾರೆ. ಹೀಗಾಗಿ ಈ ಪ್ರಸ್ತಾಪಿತ ಪ್ರಕರಣವು 50 ಲಕ್ಷ ರು ಮೀರಿತ್ತು. ಹೀಗಾಗಿ ಇದನ್ನು ಮುಖ್ಯಮಂತ್ರಿ ಅವರ ಆದೇಶಕ್ಕೆ ಕಡತ ಮಂಡಿಸಿತ್ತು. ಮುಖ್ಯಮಂತ್ರಿ ಅವರು ಈ ಪ್ರಕರಣದಲ್ಲಿ 4 ಜಿ ವಿನಾಯಿತಿ ನೀಡಲು ಅನುಮೋದನೆ ನೀಡಿದ್ದಾರೆ ಎಂದು ವಿಚಾರಣಾಧಿಕಾರಿ ಮುಂದೆ ಲಿಖಿತ ವಾದವನ್ನು ಮುಂದಿರಿಸಿರುವುದು ತಿಳಿದು ಬಂದಿದೆ.

ಮುಖ್ಯಮಂತ್ರಿ ಅವರು ಅನುಮೋದಿಸಿದ ನಂತರ 4 ಜಿ ವಿನಾಯಿತಿ ನೀಡಲಾಗಿದೆ. ಈ ಪ್ರಸ್ತಾವನೆಯಲ್ಲಿ ಆರ್ಥಿಕ ಇಲಾಖೆಯ ಜವಾಬ್ದಾರಿಯು ಕೇವಲ ಕೆಟಿಪಿಪಿ ಕಾಯ್ದೆ ಕಲಂ 4 ಜಿ ವಿನಾಯಿತಿ ನೀಡುವುದಕ್ಕಷ್ಟೇ ಸೀಮಿತವಾಗಿದೆ. ಈ ಜವಾಬ್ದಾರಿಯನ್ನು ನಿಯಮಾನುಸಾರ ಅಗತ್ಯವಿರುವ ಪ್ರಕ್ರಿಯೆಯನ್ನು ಅನುಸರಿಸಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದು ವಿನಾಯಿತಿ ನೀಡಲಾಗಿದೆ ಎಂದು ವಿವರಿಸಿದ್ದಾರೆ.
ಅಲ್ಲದೇ ನಿರ್ಮಿತಿ ಕೇಂದ್ವು ರಾಜ್ಯ ಸರ್ಕಾರದ ಸಂಸ್ಥೆಯಾಗಿದೆ. ಇದು ಜಿಲ್ಲಾಧಿಕಾರಿಗಳ ಅಧೀನದಡಿ ಕಾರ್ಯನಿರ್ವಹಿಸುತ್ತದೆ. ಆರ್ಥಿಕ ಇಲಾಖೆಯು ಪ್ರಸ್ತಾಪಿತ ಕಾಮಗಾರಿಗೆ 4 ಜಿ ವಿನಾಯಿತಿ ನೀಡಿದ ಅಧಿಸೂಚನೆಯ್ಲಲಿ ಗುಣಮಟ್ಟದ ಸೇವೆ ಪಡೆಯಲು ಷರತ್ತು ವಿಧಿಸಲಾಗಿದೆ. ಇದರ ಜಬ್ದಾರಿಯೂ ಸಹ ಕರ್ನಾಟಕ ನೀರಾವರಿ ನಿಗಮದ ಮೇಲಿದೆ ಎಂದು ತಿಳಿಸಿದ್ದಾರೆ.

‘ಆದ್ದರಿಂದ ದೂರಿನಲ್ಲಿ ಪ್ರಸ್ತಾಪಿಸಿರುವಂತೆ ಈ ಪ್ರಕರಣದಲ್ಲಿ ನನ್ನಿಂದಾಗಲೀ ಅಥವಾ ಈ ಪ್ರಾಧಿಕಾರದಿಂದಾಗಲೀ ಯಾವುದೇ ಲೋಪವಾಗಿರುವುದಿಲ್ಲ. ಆದ್ದರಿಂದ ದೂರಿನಲ್ಲಿರುವ ಅಂಶಗಳಲ್ಲಿ ಸತ್ಯಾಂಶವಿರುವುದಿಲ್ಲ. ಪ್ರಸ್ತಾಪಿತ ದೂರನ್ನು ತಿರಸ್ಕರಿಸಬೇಕು,’ ಎಂದು ಐಎಸ್‌ಎನ್ ಪ್ರಸಾದ್ ಅವರು ಲಿಖಿತ ಸಮಜಾಯಿಷಿಯಲ್ಲಿ ಕೋರಿರುವುದು ಗೊತ್ತಾಗಿದೆ.
ಐಎಸ್‌ಎನ್ ಪ್ರಸಾದ್ ಅವರು ನೀಡಿರುವ ಲಿಖಿತ ಸಮಜಾಯಿಷಿಗೆ ದೂರುದಾರ ಮಂಜುನಾಥ್ ಹಿರೇಚೌಟಿ ಅವರು ಪ್ರತ್ಯುತ್ತರ ನೀಡಿದ್ದಾರೆ.

ಪ್ರತ್ಯುತ್ತರದಲ್ಲೇನಿದೆ?
ಐಎಸ್‌ಎನ್ ಪ್ರಸಾದ್ ಅವರು ನೀಡಿರುವ ಲಿಖಿತ ಸಮಜಾಯಿಷಿಯು ಪ್ರಕರಣದ ಹಾದಿ ತಪ್ಪಿಸುತ್ತಿದೆ ಎಂದು ಹೇಳಿರುವ ಮಂಜುನಾಥ್ ಹಿರೇಚೌಟಿ ಅವರು ಅವರ ಬೇಜವಾಬ್ದಾರಿಯು ವಿವರಣೆಯನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಅಲ್ಲದೇ ಸಾರ್ವಜನಿಕ ಹಣದ ಕ್ರಿಮಿನಲ್ ದುರುಪಯೋಗ ಮತ್ತು ಆಡಳಿತಾತ್ಮಕ ವಂಚನೆಯನ್ನು ಸಾಬೀತುಪಡಿಸಲು ಕಾನೂನಾತ್ಮಕ ಸತ್ಯಾಂಶಗಳನ್ನು ಮಂಜುನಾಥ್ ಹಿರೇಚೌಟಿ ಅವರು ಹೆಚ್ಚುವರಿ ನಿಬಂಧಕರ ಮುಂದೆ ಪ್ರತ್ಯುತ್ತರ ಮಂಡಿಸಿದ್ದಾರೆ.
ಪ್ರಸಾದ್ ಮೌನ ವಹಿಸಿದ್ದಾರೆಯೇ?
ಐಎಸ್‌ಎನ್ ಪ್ರಸಾದ್ ಅವರು ನೀಡಿರುವ ತಮ್ಮ ಲಿಖಿತ ಸಮಜಾಯಿಷಿ ಆಕ್ಷೇಪಣೆಯಲ್ಲಿ ಖಾಸಗಿ ಆಸ್ತಿ ಬಳಕೆ ನದಿ ಪಾತ್ರದ ಒತ್ತುವರಿಯಂತಹ ಗಂಭೀರ ಆರೋಪಗಳ ಕುರಿತು ಯಾವುದೇ ವಿವರಣೆ ನೀಡಿಲ್ಲ. ಸರ್ಕಾರದ ಹೆಸರಿಗೆ ಖಾಸಗಿ ಮಠದ ಆಸ್ತಿಯನ್ನು ಅಧಿಕೃತವಾಗಿ ವರ್ಗಾಯಿಸದೇ ಕೈಗೊಂಡಿರುವ ಕಾಮಗಾರಿಗಳು ಅಕ್ರಮವಾಗಿವೆ. ಅಲ್ಲದೇ ಇವು ಶರಾವತಿ ನದಿ ದಡವನ್ನು ಒತ್ತುವರಿ ಮಾಡಿಕೊಂಡು ಪರಿಸರ ನಿಯಮಗಳನ್ನು ಗಾಳಿಗೆ ತೂರಿ ನಿರ್ಮಿಸಿರುವ ರಚನೆಗಳಾಗಿವೆ. ಐ ಎಸ್ ಎನ್ ಪ್ರಸಾದ್ ಅವರು ಈ ಬಗ್ಗೆ ಯಾವುದೇ ವಿವರಣೆಯನ್ನು ನೀಡದೇ ಸಂಪೂರ್ಣ ಮೌನ ವಹಿಸಿದ್ದಾರೆ ಎಂದು ಪ್ರತ್ಯುತ್ತರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ನುಣುಚಿಕೊಳ್ಳುತ್ತಿದ್ದಾರೆಯೇ ಪ್ರಸಾದ್?
ಐಎಸ್‌ಎನ್ ಪ್ರಸಾದ್ ಅವರು ನೈಜ ಅಕ್ರಮಳ ಕುರಿತು ಉತ್ತರಿಸಿಲ್ಲ. ಬದಲಿಗೆ ಕೇವಲ ಸಕ್ಷಮ ಪ್ರಾಧಿಕಾರ ಮತ್ತು ಸಿಎಂ ಅನುಮೋದನೆ ನೀಡಿದ್ದಾರೆ ಎಂಬ ತಾಂತ್ರಿಕ ನೆಪವನ್ನೊಡ್ಡಿ ನುಣುಚಿಕೊಳ್ಳುತ್ತಿದ್ದಾರೆ ಎಂದು ಪ್ರತ್ಯುತ್ತರದಲ್ಲಿ ಹಿರೇಚೌಟಿ ಅವರು ಹೇಳಿದ್ದಾರೆ. ಕಾನೂನಿನ ಸ್ಥಾಪಿತ ನಿಯಮಗಳ ಪ್ರಕಾರ ದೂರಿನಲ್ಲಿನ ನಿರ್ದಿಷ್ಟ ಆರೋಪಗಳಿಗೆ ಉತ್ತರಿಸದೇ ಮೌನ ವಹಿಸಿರುವುದು ಎದುರುದಾರರು ತಮ್ಮ ಮೇಲಿನ ಅಕ್ರಮಗಳನ್ನು ಪರೋಕ್ಷವಾಗಿ ಒಪ್ಪಿಕೊಂಡಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಸಿಎಂ ಅನುಮೋದನೆಗೆ ಕಾನೂನು ಮಾನ್ಯತೆ ಇದೆಯೇ?
ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಐಎಸ್‌ಎನ್ ಪ್ರಸಾದ್ ಅವರು ಮಾಹಿತಿಯನ್ನೇ ಮರೆಮಾಚಿದ್ದಾರೆ ಎಂದು ದೂರುದಾರ ಮಂಜುನಾಥ್ ಹಿರೇಚೌಟಿ ಅವರು ತಮ್ಮ ಪ್ರತ್ಯುತ್ತರದಲ್ಲಿ ವಿವರಿಸಿದ್ದಾರೆ. ನಿಗಮದ 93ನೇ ಮಂಡಳಿಯ ಸಭೆ ನಡವಳಿಗಳಲ್ಲಿ ಒಟ್ಟು 166 ಕಾಮಗಾರಿಗಳ ಪಟ್ಟಿಯನ್ನು ಸಮುದಾಯ ಭವನಗಳ ನಿರ್ಮಾಣ ಕಾಮಗಾರಿ ಎಂಬ ಸುಳ್ಳು ಶೀರ್ಷಿಕೆಯಡಿ ತೋರಿಸಿ ಮುಖ್ಯಮಂತ್ರಿಯವರ ಸಮ್ಮತಿ ಪಡೆಯಲಾಗಿದೆ. ಆದರೆ ನೈಜವಾಗಿ ಈ ಪಟ್ಟಿಯಲ್ಲಿ ರಾಮಚಂದ್ರಾಪುರ ಗ್ರಾಮದ ಶರಾವತಿ ನದಿ ಪಾತ್ರದ ಒತ್ತುವರಿ ತಡೆಗೋಡೆ ಮತ್ತು ಖಾಸಗಿ ಮಠದ ಒಡೆತನದಲ್ಲಿರುವ ದೇವಸ್ಥಾನದ ಪುಷ್ಕರಣಿಯನ್ನೂ ಸೇರಿಸಲಾಗಿತ್ತು ಎಂದು ವಿವರಿಸಿದ್ದಾರೆ.

ಸಿಎಂ ಅನುಮೋದನೆ ರಕ್ಷಾ ಕವಚವಾಗಲು ಸಾಧ್ಯವಿಲ್ಲ
ಅದೇ ರೀತಿ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಎಸ್ ಪಿ ಚೆಂಗಲವರ್ಯ / ಜಗನ್ನಾಥ್ (1994) ಎಸ್‌ಸಿಸಿ 1ರ ಪ್ರಕಾರ ವಂಚನೆ ಅಥವಾ ನೈಜ ಸತ್ಯಾಂಶಗಳನ್ನು ಮುಚ್ಚಿಟ್ಟು ಯಾವುದೇ ಅತ್ಯುನ್ನತ ಪ್ರಾಧಿಕಾರದಿಂದ ಪಡೆದ ಆದೇಶ ಅಥವಾ ಅನುಮೋದನೆಯು ಕಾನೂನಿನ ದೃಷ್ಟಿಯಲ್ಲಿ ಶೂನ್ಯ. ಮತ್ತು ಅದನ್ನು ಯಾವುದೇ ಹಂತದಲ್ಲೂ ರದ್ದುಗೊಳಿಸಬಹುದು ಎಂದಿದೆ. ಇದರ ಪ್ರಕಾರ ಸಿಎಂ ಅವರಿಗೆ ತಪ್ಪು ಮಾಹಿತಿ ನೀಡಿ ಪಡೆದಿರುವ ಈ ಅನುಮೋದನೆಯು ಎದುರುದಾರರ ರಕ್ಷಾ ಕವಚವಾಗಲು ಸಾಧ್ಯವಿಲ್ಲ ಎಂದು ನ್ಯಾಯಾಲಯದ ಪ್ರಕರಣವನ್ನೂ ತಮ್ಮ ಪ್ರತ್ಯುತ್ತರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಸ್ವಯಂ ವಿರೋಧಾಭಾಸ- ಅಧಿಕಾರಿಗಳ ಶಾಮೀಲು
ಈ ಪ್ರಕರಣದಲ್ಲಿ ಎದುರುದಾರರ ನೇತೃತ್ವದ ಆರ್ಥಿಕ ಇಲಾಖೆಯು (ಆದೇಶ ಸಂಖ್ಯೆ ; FD 696 EXP-12/2020) ಈ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲು ಯಾವುದೇ ಸೂಕ್ತ ಸಮರ್ಥನೆಗಳಿಲ್ಲ ಎಂದು ವಿನಾಯಿತಿಯನ್ನು ಕಟ್ಟುನಿಟ್ಟಾಗಿ ನಿರಾಕರಿಸಿತ್ತು. ಆದರೆ ಕೇವಲ ಒಂದು ತಿಂಗಳ ಅಂತರದಲ್ಲಿ ಅಂದರೇ 2021ರ ಜನವರಿ 1ರಂದು ಯಾವುದೇ ನೂತನ ತಾಂತ್ರಿಕ ಆಧಾರಗಳು ಇಲ್ಲದಿದ್ದರೂ ಸಹ ಕೇವಲ ರಾಜಕೀಯ ಪ್ರಭಾವಕ್ಕೆ ಮಣಿದು ಅದೇ ಅಕ್ರಮಕ್ಕೆ ಕಡತದಲ್ಲಿ ಅನುಮೋದನೆ ನೀಡಲಾಗಿದೆ. ಸುಪ್ರೀಂ ಕೋರ್ಟ್‌ನ ಪಂಜಾಬ್ ರಾಜ್ಯ ಸರ್ಕಾರ/ ರಾಮ್ ಸಿಂಗ್ ( 1992) 4 ಎಸ್‌ಸಿಸಿ 54 ರ ತೀರ್ಪಿನ ಪ್ರಕಾರ ಸಾರ್ವಜನಿಕ ನಿಧಿಯ ರಕ್ಷಕರಾಗಿ ಕರ್ತವ್ಯ ನಿರ್ವಹಿಸಬೇಕಾದ ಅಪರ ಮುಖ್ಯ ಕಾರ್ಯದರ್ಶಿಯು ಇಂತಹ ವ್ಯವಸ್ಥಿತ ಲೂಟಿಗೆ ಹಾದಿ ಮಾಡಿಕೊಟ್ಟಿರುವುದು ಇವರದೇ ನೇರ ಕರ್ತವ್ಯಲೋಪ ಮತ್ತು ಶಾಮೀಲಾತಿಯನ್ನು ಸಾಬೀತುಪಡಿಸುತ್ತದೆ ಎಂದು ಪ್ರತಿಪಾದಿಸಿರುವುದು ತಿಳಿದು ಬಂದಿದೆ.

ಐಎಎಸ್ ಅಧಿಕಾರಿ ರಬ್ಬರ್ ಸ್ಟಾಂಪ್ ಅಲ್ಲ
ಐಎಎಸ್ ಅಧಿಕಾರಿಯು ಕಾನೂನಿನ ದೃಷ್ಟಿಯಲ್ಲಿ ರಾಜಕೀಯ ನಾಯಕರ ಕಾನೂನುಬಾಹಿರ ಇಚ್ಛೆಯನ್ನು ಕಣ್ಣುಮುಚ್ಚಿ ಅನುಷ್ಠಾನಗೊಳಿಸುವ ರಬ್ಬರ್ ಸ್ಟಾಂಪ್ ಅಲ್ಲ. ಅಖಿಲ ಭಾರತ ಸೇವೆಗಳು ನಿಯಮಗಳು 1968ರ ನಿಯಮ 3ರ ಪ್ರಕಾರ ಪ್ರತಿಯೊಬ್ಬ ಅಧಿಕಾರಿಯು ಸಂಪೂರ್ಣ ಪ್ರಾಮಾಣಿಕತೆ, ವಿವೇಚನೆ ಮತ್ತು ಕರ್ತವ್ಯ ನಿಷ್ಠೆಯನ್ನು ಕಾಯ್ದುಕೊಳ್ಳಬೇಕು. ಮತ್ತು ಯಾವುದೇ ನಿಯಮಬಾಹಿರ ಆದೇಶಗಳನ್ನು ಲಿಖಿತ ಆಕ್ಷೇಪಣೆಯಿಲ್ಲದೇ ಜಾರಿಗೊಳಿಸಬಾರದು ಎಂಬ ನಿಯಮದತ್ತ ಅಪರ ವಿಚಾರಣಾಧಿಕಾರಿಗಳ ಗಮನ ಸೆಳೆದಿರುವುದು ಗೊತ್ತಾಗಿದೆ.
ಖಾಸಗಿ ಧಾರ್ಮಿಕ ಸಂಸ್ಥೆಯ ಜಾಗದಲ್ಲಿ ಸಾರ್ವಜನಿಕ ಹಣ ವ್ಯಯ
ಅಲ್ಲದೇ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ನೀಡಿರುವ ಅಧಿಕೃತ ಆಡಳಿತಾತ್ಮಕ ಅನುಮೋದನೆಯ ಅದೇಶದಲ್ಲಿನ ಷರತ್ತು ಸಂಖ್ಯೆ 5 ಮತ್ತು 9ರ ಪ್ರಕಾರ ಕಾಮಗಾರಿ ಪ್ರಾರಂಭಿಸುವ ಪೂರ್ವದಲ್ಲಿ ನಿಯಮಾನುಸಾರ ಸಂಬಂಧಿಸಿದವರಿಂದ ಭೂಮಿಯನ್ನು ಹಸ್ತಾಂತರಿಸಿಕೊಳ್ಳಬೇಕ ಮತ್ತು ಲಿಖಿತ ನಿರಾಕ್ಷೇಪಣ ಪತ್ರವನ್ನು ಪಡೆಯಬೇಕು. ಆದರೆ ಸಂಬಂಧಪಟ್ಟ ಇಲಾಖೆಯವರು ಯಾವುದೇ ಅಧಿಕೃತ ಜಾಗದ ವಿಸ್ತೀಣ, ಸರ್ವೇ ನಂಬರ್ ಮತ್ತು ಸ್ಪಾಟ್ ಏರಿಯಾ ವಿವರಗಳಿಲ್ಲದೆಯೇ ಸಾರ್ವಜನಿಕ ತೆರಿಗೆ ಹಣವನ್ನು ಖಾಸಗಿ ಮಠದ ಒಡೆತನದ ಆಸ್ತಿಗೆ ವ್ಯಯಿಸಿದೆ ಎಂದು ಮಂಜುನಾಥ್ ಹಿರೇಚೌಟಿ ಅವರು ತಮ್ಮ ಪ್ರತ್ಯುತ್ತರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

‘ಸರ್ಕಾರದ ಹೆಸರಿಗೆ ಜಾಗದ ಅಧಿಕೃತ ಹಸ್ತಾಂತರ ಪ್ರಕ್ರಿಯೆ ನಡೆಯದೇ ಸಾರ್ವಜನನಿಕ ಹಣವನ್ನು ಖಾಸಗಿ ಧಾರ್ಮಿಕ ಸಂಸ್ಥೆಯ ಜಾಗದಲ್ಲಿ ವ್ಯಯಿಸಿರುವುದು ಇಲಾಖೆಯ ನಿಯಮಾವಳಿಗಳು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದ ಸ್ಥಾಪಿತ ಪಿಐಎಲ್ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ,’ ಎಂದು ವಿವರಿಸಿದ್ದಾರೆ.
ಕ್ರಿಮಿನಲ್ ಅಪರಾಧವನ್ನು ಮುಚ್ಚಿಡಲಾಗಿದೆಯೇ?
ಖಾಸಗಿ ಮಠದ ಜಾಗದಲ್ಲಿ ಕೈಗೊಂಡಿರುವ ಈ ಕಾಮಗಾರಿಗಳಿಗೆ ಯಾವುದೇ ಒಂದಿನಿತು ಅಚ್ಚುಕಟ್ಟು ಪ್ರದೇಶವಾಗಲೀ ರೈತರ ಪಟ್ಟಿಯಾಗಲಿ ಅಥವಾ ಜಮೀನಿನ ಆರ್‍ಟಿಸಿ ದಾಖಲೆಗಳಾಗಲೀ ಇಲ್ಲದಿರುವುದು ಕರ್ನಾಟಕ ನೀರಾವರಿ ಇಲಾಖೆಯ ನಿಯಮಾವಳಿಗಳ ಮೇಲಿನ ವ್ಯವಸ್ಥಿತ ವಂಚನೆಯಾಗಿದೆ. ಯಾವುದೇ ನೀರಾವರಿ ಉದ್ದೇಶವಿಲ್ಲದೇ ಖಾಸಗಿ ಧಾರ್ಮಿಕ ಸಂಸ್ಥೆಯ ಜಾಗದಲ್ಲಿ ಕೋಟ್ಯಂತರ ರುಪಾಯಿ ಸಾರ್ವಜನಿಕ ಹಣವನ್ನು ವ್ಯಯಿಸಿರುವುದು ಕ್ರಿಮಿನಲ್ ಅಪರಾಧವಾಗಿದೆ. ಆದರೆ ಈ ಅಪರಾಧವನ್ನೇ ಮುಚ್ಚಿಡಲಾಗಿದೆ ಎಂದು ಪ್ರತ್ಯುತ್ತರದಲ್ಲಿ ಹೇಳಿದ್ದಾರೆ.

ಹಿತಾಸಕ್ತಿ ಸಂಘರ್ಷ- ಸಾಂವಿಧಾನಿಕ ಉಲ್ಲಂಘನೆ
ಕರ್ನಾಟಕ ಹಣಕಾಸು ಸಂಹಿತೆ ನಿಯಮಗಳ ಪ್ರಕಾರ ಸರ್ಕಾರಿ ಹಣವನ್ನು ಖಾಸಗಿ ಆಸ್ತಿಗಳ ಮೇಲೆ ಖರ್ಚು ಮಾಡಲು ಬರುವುದಿಲ್ಲ. ಒಂದ ವೇಳೆ ಖರ್ಚು ಮಾಡಬೇಕೆಂದರೇ ಅದು ಸಾರ್ವಜನಿಕ ಆಸ್ತಿಯಾಗಿ ನೋಂದಣಿಯಾಗಿರಬೇಕು. ದಾಖಲೆಯಲ್ಲಿ ಇಲಾಖೆಯ ಹೆಸರಿರಬೇಕು. ಸಂವಿಧಾನದ 27ನೇ ವಿಧಿಯ ಪ್ರಕಾರ ಯಾವುದೇ ಒಂದು ನಿರ್ದಿಷ್ಟ ಧರ್ಮ ಅಥವಾ ಧಾರ್ಮಿಕ ಪಂಥದ ಪ್ರಚಾರಕ್ಕೆ ಅಥವಾ ನಿರ್ವಹಣೆಗಾಗಿ ಸಾರ್ವಜನಿಕ ತೆರಿಗೆ ಹಣವನ್ನು ಪಾವತಿಸಲು ಯಾವುದೇ ವ್ಯಕ್ತಿಯನ್ನು ಒತ್ತಾಯಿಸುವಂತಿಲ್ಲ ಅಥವಾ ಆ ಹಣವನ್ನು ವ್ಯಯ ಮಾಡುವಂತಿಲ್ಲ ಎಂದಿದೆ. ಈ ಪ್ರಕರಣದಲ್ಲಿ ಹಿತಾಸಕ್ತಿ ಸಂಘರ್ಷ ಮತ್ತು ಸಾಂವಿಧಾನಿಕ ಉಲ್ಲಂಘನೆಗಳಾಗಿವೆ ಎಂದು ಅಪಾದಿಸಿದ್ದಾರೆ.
ಶರಾವತಿ ನದಿ ಪಾತ್ರವು ಸಾರ್ವಜನಿಕ ಪ್ರಾಕೃತಿಕ ಆಸ್ತಿಯಾಗಿದೆ. ಪರಿಸರ ಇಲಾಖೆಯ ಕಟ್ಟುನಿಟ್ಟಿನ ಅನುಮತಿ ಇಲ್ಲದೇ ಯಾವುದೇ ನಿರ್ಮಾಣ ಕಾರ್ಯ ಕೈಗೊಳ್ಳುವಂತಿಲ್ಲ. ಎದುರುದಾರರು ಕೆಟಿಪಿಪಿ ಕಾಯ್ದೆಡಿ ಇಡೀ ಟೆಂಡರ್ ಪ್ರಕ್ರಿಯೆಯನ್ನು ಬದಿಗೆ ಸರಿಸಿ ಸಾರ್ವಜನಿಕ ಲೆಕ್ಕ ಪರಿಶೋಧನೆಯಿಂದ ತಪ್ಪಿಸಲು 4 ಜಿ ವಿಶೇಷ ವಿನಾಯಿತಿಯನ್ನು ದುರುಪಯೋಗಪಡಿಸಿಕೊಂಡು ನದಿ ಪಾತ್ರದ ಒತ್ತುವರಿ ಮತ್ತು ಅಕ್ರಮ ನಿರ್ಮಾಣಕ್ಕೆ ನೇರ ಕುಮ್ಮಕ್ಕು ನೀಡಿದ್ದಾರೆ ಎಂದು ಪ್ರತ್ಯುತ್ತರದಲ್ಲಿ ಆರೋಪಿಸಿದ್ದಾರೆ.
‘ರಾಜಕೀಯ ನಾಯಕರು ಮತ್ತು ಉನ್ನತ ಅಧಿಕಾರಿಗಳು ಶಾಮೀಲಾಗಿ ನಡೆಸಿರುವ ಈ ವ್ಯವಸ್ಥಿತ ಕ್ರಿಮಿನಲ್ ಸಂಚನ್ನು ಕೇವಲ ರಾಜಕೀಯ ನಿರ್ಧಾರ ಎಂದು ಬಿಂಬಿಸಿ ತನಿಖೆಯನ್ನು ಹಳ್ಳ ಹಿಡಿಸಲು ಸಾಧ್ಯವಿಲ್ಲ. ಶಿವಮೊಗ್ಗ ಲೋಕಸಭೆ ಕ್ಷೇತ್ರದ ಸಂಸದ ಬಿ ವೈ ರಾಘವೇಂfರ ಮತ್ತು ಅಂದಿನ ಮುಖ್ಯಮಂತಿ ಯಡಿಯೂರಪ್ಪ ಅವರ ಅಕ್ರಮ ಆದೇಶಗಳಿಗೆ ನಿಯಮಾವಳಿಗಳ ಕವಚ ತೊಡಿಸಿ ಸಾರ್ವಜನಿಕ ಬೊಕ್ಕಸದ ಕೋಟ್ಯಂತರ ರುಪಾಯಿ ಲೂಟಿಯಾಗಲು ಪ್ರಜ್ಞಾಪೂರ್ವಕವಾಗಿ ಹಾದಿ ಮಾಡಿಕೊಟ್ಟಿರುವ ಈ ಅಧಿಕಾರಿಗಳಿದ್ದು ಆಡಳಿತಾತ್ಮಕ ದುರ್ನಡತೆಯನ್ನು ಗಂಭೀರವಾಗಿ ಪರಿಗಣಿಸಬೇಕು,’ ಎಂದು ಮಂಜುನಾಥ್ ಹಿರೇಚೌಟಿ ಅವರು ವಿಚಾರಣಾಧಿಕಾರಿಗಳ ಮುಂದೆ ವಾದವನ್ನು ಮಂಡಿಸಿರುವುದು ತಿಳಿದು ಬಂದಿದೆ.
ಬಿಎಸ್‌ವೈ-ಬಿವೈಆರ್- ಗುಂಗೆ- ಐಎಸ್‌ಎನ್ ಪ್ರಸಾದ್ ವಿರುದ್ಧ ಜಂಟಿ ಕ್ರಿಮಿನಲ್ ಸಂಚು ಆರೋಪ
ಈ ಪ್ರಕರಣದಲ್ಲಿ ಎದುರುದಾರರಾದ ಐ ಎಸ್ ಎನ್ ಪ್ರಸಾದ್ ಅವರು ತಮ್ಮ ಹುದ್ದೆಯ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಲ್ಲಿಸಿರುವ ಮತ್ತು ಹಾದಿ ತಪ್ಪಿಸುವ ಆಕ್ಷೇಪಣೆಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಮಂಜುನಾಥ ಹಿರೇಚೌಟಿ ಅವರು ಕೋರಿದ್ದಾರೆ. ಅದೇ ರೀತಿ ಬಿ ಎಸ್ ಯಡಿಯೂರಪ್ಪ, ಸಂಸದ ಬಿ ವೈ ರಾಘವೇಂದ್ರ ಮತ್ತು ಐಎಸ್‌ಎನ್ ಪ್ರಸಾದ್, ಮಲ್ಲಿಕಾರ್ಜುನ ಗುಂಗೆ ಅವರ ವಿರುfಧ ಜಂಟಿ ಕ್ರಿಮಿನಲ್ ಸಂಚು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, ವಂಚನೆ ಅಡಿಯಲ್ಲಿ ಲೋಕಾಯುಕ್ತ ಪೊಲೀಸ್ ದಳದಿಂದ ತಕ್ಷಣವೇ ಎಫ್ ಐ ಆರ್ ದಾಖಲಿಸಬೇಕಕು. ಸಮಗ್ರವಾಗಿ ಕ್ರಿಮಿನಲ್ ತನಿಖೆ ನಡೆಸಿ ವಿಶೇಷ ನ್ಯಾಯಾಲಯದಲ್ಲಿ ದಾವೆ ಹೂಡಬೇಕು ಎಂದು ಕೋರಿದ್ದಾರೆ.
ಹಾಗೆಯೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತಾಂತ್ರಿಕ ವಿಭಾಗದ ಇಂಜಿನಿಯರ್‍ಗಳು, ಕಂದಾಯ ಮತ್ತು ತಹಶೀಲ್ದಾರ್ ನೇತೃತ್ವದಲ್ಲಿ ಜಂಟಿ ಸ್ಥಳ ಪರಿಶೀಲನೆ, ಸರ್ವೆ ಮಾಡಬೇಕು. ಶರಾವತಿ ನದಿ ಪಾತ್ರದ ಅಕ್ರಮ ಒತ್ತುವರಿ ಮಹಜರು ವರದಿಯನ್ನು ನ್ಯಾಯಾಲಯಕ್ಕೆ ತರಿಸಿಕೊಳ್ಳಬೇಜು. ಸರ್ಕಾರಕ್ಕೆ ಮಾಲೀಕತ್ವ ವರ್ಗಾವಣೆಯಾಗದ ಖಾಸಗಿ ಜಾಗದಲ್ಲಿ ಅಕ್ರಮವಾಗಿ ಖರ್ಚು ಮಾಡಿರುವ ಕೋಟ್ಯಂತರ ರುಪಾಯಿ ಸಾರ್ವಜನಿಕ ತೆರಿಗೆ ಹಣವನ್ನು, ಈ ನಿರ್ಧಾರಕ್ಕೆ ಕಾರಣರಾದ ಅಧಿಕಾರಿಗಳ ಮತ್ತು ರಾಜಕೀಯ ನಾಯಕರ ವೈಯಕ್ತಿಕ ಆಸ್ತಿ ಮತ್ತು ನಿವೃತ್ತಿ ವೇತನದಿಂದ ವಸೂಲಿ ಮಾಡಿ ಬೊಕ್ಕಸಕ್ಕೆ ಜಮೆ ಮಾಡಬೇಕು ಎಂದು ವಿಚಾರಣಾಧಿಕಾರಿಗಳ ಮುಂದೆ ಕೋರಿರುವುದು ತಿಳಿದು ಬಂದಿದೆ.

ಕೇವಲ ಸಮುದಾಯ ಭವನ ಎಂಬ ನಕಲಿ ಹಣೆಪಟ್ಟಿ ಹಚ್ಚಿ 17 ಕೋಟಿಗೂ ಹೆಚ್ಚು ಬೃಹತ್ ಮೊತ್ತದ ಕಾಮಗಾರಿಗಳಲ್ಲಿ ನಡೆದಿರುವ ಆರ್ಥಿಕ ವಂಚನೆಯ ನೈಜ ಸ್ವರೂಪದ ಕುರಿತು ಸಿಎಜಿ ಅಥವಾ ಉನ್ನತ ಮಟ್ಟದ ವಿಶೇಷ ಆರ್ಥಿಕ ಆಡಿಟ್ ನಡೆಸಲು ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಎದುರುದಾರರು ನಿವೃತ್ತರಾಗಿದ್ದರೂ ಸಹ ಅವರು ಅಧಿಕಾರಾವಧಿಯಲ್ಲಿ ಎಸಗಿರುವ ಈ ಘೋರ ಆರ್ಥಿಕ ಅಪರಾಧಕ್ಕಾಗಿ ಅವರ ನಿವೃತ್ತಿ ವೇತನ ಮತ್ತು ಇತರೆ ಸೌಲಭ್ಯಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಪ್ರತ್ಯುತ್ತರದಲ್ಲಿ ಕೋರಿರುವುದು ಗೊತ್ತಾಗಿದೆ.
ಪುಷ್ಕರಣಿ, ತಡೆಗೋಡೆ ಕಾಮಗಾರಿಗೆ 8.4 ಕೋಟಿ ವೆಚ್ಚ; ಸರ್ಕಾರಿ ಹಣ ಬಳಕೆ ಆರೋಪ, ದೂರು ಸಲ್ಲಿಕೆ
ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಐ ಎಸ್ ಎನ್ ಪ್ರಸಾದ್, ನಿಗಮದ ಮುಖ್ಯ ಇಂಜಿನಿಯರ್ ಜಿ ಇ ಯತೀಶ್ ಚಂದ್ರನ್, ಕಾರ್ಯನಿರ್ವಾಹಕ ಇಂಜಿನಿಯರ್ ಎನ್ ಎಸ್ ವೆಂಕಟೇಶ್ ಮತ್ತು ತುಂಗಾ ಮೇಲ್ದಂಡೆ ಯೋಜನೆ ಸೂಪರಿಟೆಂಡಿಂಗ್ ಇಂಜಿನಿಯರ್ ವಿರುದ್ಧ ಲೋಕಾಯುಕ್ತಕ್ಕೆ ಸಲ್ಲಿಸಿದ್ದ ದೂರನ್ನಾಧರಿಸಿ ದಿ ಫೈಲ್ 2023ರ ಆಗಸ್ಟ್ 15ರಂದು ವರದಿ ಪ್ರಕಟಿಸಿತ್ತು.




