ಬೆಂಗಳೂರು; ಸಿದ್ದಾರ್ಥ ವಿಹಾರ ಟ್ರಸ್ಟ್ ವಿರುದ್ಧದ ಖಾಸಗಿ ದೂರಿನಲ್ಲಿ ಪ್ರತಿವಾದಿಗಳಾಗಿರುವ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸಂಸದ ರಾಧಾಕೃಷ್ಣ ಮತ್ತಿತರರನ್ನು ವಿಚಾರಣೆ ನಡೆಸಬೇಕು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತನ್ನ ಆದೇಶ ಪ್ರಕಟಿಸಿದೆ
ಸಚಿವ ಸಂಪುಟಕ್ಕೆ ಬಿ ನಾಗೇಂದ್ರ ಅವರನ್ನು ಸೇರ್ಪಡೆ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರದ ನಡೆಯನ್ನು ಪ್ರತಿಪಕ್ಷವು ತೀವ್ರವಾಗಿ ವಿರೋಧಿಸುತ್ತಿದೆ. ಇದರ ಬೆನ್ನಲ್ಲೇ ಇದೀಗ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನೊಳಗೊಂಡಂತೆ ಅವರ ಕುಟುಂಬ ಸದಸ್ಯರ ಟ್ರಸ್ಟ್‌ನ್ನು ವಿಚಾರಣೆ ನಡೆಸಲು ನ್ಯಾಯಾಲಯವು ಪ್ರಕಟಿಸಿರುವ ಆದೇಶವು ಪ್ರತಿಪಕ್ಷಗಳಿಗೆ ಮತ್ತೊಂದು ಪ್ರಬಲ ಅಸ್ತ್ರವೊಂದನ್ನು ನೀಡಿದಂತಾಗಿದೆ.

ನಿಯಮ ಉಲ್ಲಂಘಿಸಿ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಕೈಗಾರಿಕೆ ನಿವೇಶನ ಮಂಜೂರಾಗಿದ್ದ ಪ್ರಕರಣವೂ ಸೇರಿದಂತೆ ಟ್ರಸ್ಟ್‌ನ ಇನ್ನಿತರೆ ವ್ಯವಹಾರಗಳ ಕುರಿತು ತನಿಖೆ ನಡೆಸಬೇಕು ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದಾಖಲೆಗಳ ಸಮೇತ ಖಾಸಗಿ ದೂರು (ಪಿಸಿಆರ್ ಸಂಖ್ಯೆ 27/2025 ಮತ್ತು 28/2025) ಸಲ್ಲಿಸಿತ್ತು. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಕಾಯ್ದೆಯ ಸೆಕ್ಷನ್ 175(3)ರ ಅಡಿಯಲ್ಲಿ ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಿತ್ತು.
ಭ್ರಷ್ಟಾಚಾರದ ಆರೋಪದ ಬಗೆಗಿನ ದೂರಿನ ವಿಚಾರಣೆ ನಡೆಸಿ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯವು ಆದೇಶ ಪ್ರಕಟಿಸಿದೆ.

ನ್ಯಾಯಾಲಯವು ಹೊರಡಿಸಿರುವ ಆದೇಶದ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.
ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಸಲ್ಲಿಸಿರುವ ಖಾಸಗಿ ದೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಧಾಕೃಷ್ಣ, ಮಲ್ಲಿಕಾರ್ಜುನ ಖರ್ಗೆ ಅವರ ಪತ್ನಿ ರಾಧಾಬಾಯಿ, ರಾಹುಲ್ ಎಂ ಖರ್ಗೆ, ಪ್ರಿಯಾಂಕ್ ಖರ್ಗೆ ಮತ್ತು ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಮತ್ತು ಕೈಗಾರಿಕೆ ಪ್ರದೇಶಾಭಿವೃದ್ದಿ ಮಂಡಳಿಯ ಅಧಿಕಾರಿಗಳನ್ನು ಪ್ರತಿವಾದಿಯನ್ನಾಗಿಸಿತ್ತು.

ಈ ಖಾಸಗಿ ದೂರನ್ನು ಅಂಗೀಕರಿಸಿ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ದೂರಿನಲ್ಲಿರುವ ಅಂಶಗಳ ಕುರಿತು ವಿಚಾರಣೆ ನಡೆಸಬೇಕು ಎಂದು 2026ರ ಆಗಸ್ಟ್ 11ರಂದು ಆದೇಶ ಹೊರಡಿಸಿದೆ. ಆದರೆ ವಿಚಾರಣೆಯನ್ನು ಲೋಕಾಯುಕ್ತ ಸಂಸ್ಥೆಯು ನಡೆಸಬೇಕೇ ಅಥವಾ ಇನ್ನಿತರೆ ಬೇರೆ ಯಾವುದೇ ಸಕ್ಷಮ ಪ್ರಾಧಿಕಾರಗಳು ತನಿಖೆ ನಡೆಸಬೇಕೇ ಎಂಬ ಕುರಿತು ಆದೇಶದಲ್ಲಿ ಸ್ಪಷ್ಟವಾಗಿ ಹೇಳಿಲ್ಲ.
ಅಲ್ಲದೇ ಸೆಕ್ಷನ್ 175 (3) ರ ಅಡಿಯಲ್ಲಿ ನೇರವಾಗಿ ಪೊಲೀಸ್ ತನಿಖೆಗೆ ಆದೇಶಿಸಲು ನಿರಾಕರಿಸಿದೆ. ಅದರ ಬದಲಾಗಿ ಪ್ರಕರಣದ ಗಂಭೀರತೆ ಮತ್ತು ಒದಗಿಸಲಾದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ದೂರುದಾರರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಪ್ರಕರಣವನ್ನು ಬಿ.ಎನ್.ಎಸ್.ಎಸ್ ನ ಸೆಕ್ಷನ್ 223 (ಹಳೆಯ ಸಿ.ಆರ್.ಪಿ.ಸಿ ಸೆಕ್ಷನ್ 200) ರ ಅಡಿಯಲ್ಲಿ ಪ್ರಾಥಮಿಕ ವಿಚಾರಣೆಗಾಗಿ ಆಗಸ್ಟ್ 28, 2026 ಕ್ಕೆ ಮುಂದೂಡಿದೆ.

ಆರೋಪಿತ ವ್ಯಕ್ತಿಗಳ ವಿರುದ್ಧ ಬಿ ಎನ್ ಎಸ್ 2023ರ ಸೆಕ್ಷನ್ 314, 316, 336 ಮತ್ತು 61 ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ, 1988ರ ಸೆಕ್ಷನ್ 13(1)(a) ಮತ್ತು 13(1)(b)ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ಎಫ್‌ಐಆರ್ ದಾಖಲಿಸಬೇಕು. ಆರೋಪಿತ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಿ, ಕಾನೂನಿನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತದ ಪೊಲೀಸ್ ಅಧೀಕ್ಷಕರಿಗೆ ನಿರ್ದೇಶನ ನೀಡಬೇಕು ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ವಿಜಯರಾಘವ ಮರಾಠೆ ಅವರು ಮನವಿ ಮಾಡಿದ್ದರು.
ದೂರುದಾರ ಸಂಸ್ಥೆಯ ಪರವಾಗಿ ಹಿರಿಯ ವಕೀಲರಾದ ಲಕ್ಷ್ಮಿ ಅಯ್ಯಂಗಾರ್ ಅವರು ವಾದಿಸಿದ್ದರು. ಈ ವಾದವನ್ನು ಆಲಿಸಿದ್ದ ವಿಚಾರಣೆ ನ್ಯಾಯಾಲಯವು, ಖಾಸಗಿ ದೂರಿನಲ್ಲಿರುವ ಅಂಶಗಳ ಬಗ್ಗೆ ಮೇಲ್ನೋಟಕ್ಕೆ ತೃಪ್ತಿ ವ್ಯಕ್ತಪಡಿಸಿದೆ. ವಿಚಾರಣಾ ನ್ಯಾಯಾಲಯವು ಬಿಎನ್‌ಎಸ್‌ಎಸ್ ಕಾಯ್ದೆಯ ಸೆಕ್ಷನ್ 223ರ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿರುವುದು ಗೊತ್ತಾಗಿದೆ.
ಸೆಕ್ಷನ್ 175(3)ರ ಅಡಿಯಲ್ಲಿ ಸಲ್ಲಿಸಲಾದ ದೂರಿನೊಂದಿಗೆ ದೂರುದಾರರು ಸಲ್ಲಿಸಿರುವ ಪ್ರಮಾಣಪತ್ರವು ಬಿಎನ್‌ಎಸ್‌ಎಸ್ ಕಾಯ್ದೆಯ ಸೆಕ್ಷನ್ 333(2)ಕ್ಕೆ ಅನುಗುಣವಾಗಿಲ್ಲ . ಹೀಗಾಗಿ ಬಿಎನ್‌ಎಸ್‌ಎಸ್ ಕಾಯ್ದೆಯ ಸೆಕ್ಷನ್ 223ರ ಅಡಿಯಲ್ಲಿ ವಿಚಾರಣೆ ನಡೆಸಲು ವಿಚಾರಣಾ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ಬಿಎನ್‌ಎಸ್‌ಎಸ್ ಕಾಯ್ದೆಯ ಸೆಕ್ಷನ್ 223ರಲ್ಲಿ ಉಲ್ಲೇಖಿಸಿರುವಂತೆ ಪ್ರಕರಣವನ್ನು ವಿಚಾರಣೆಗೆ ನಿಗದಿಪಡಿಸಿರುವ ನಿರ್ದೇಶನ ಹಾಗೂ ಸೆಕ್ಷನ್ 333(2)ಕ್ಕೆ ಅನುಗುಣವಾಗಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿರುವುದು ತಿಳಿದು ಬಂದಿದೆ.

ಈ ಪ್ರಕರಣಗಳಲ್ಲಿ ಸಲ್ಲಿಸಲಾದ ದೂರು, ಬಿಎನ್‌ಎಸ್‌ಎಸ್ ಕಾಯ್ದೆಯ ಸೆಕ್ಷನ್ 223ರ ಅಡಿಯಲ್ಲಿ ಸಲ್ಲಿಸಲಾದ ದೂರಾಗಿರಲಿಲ್ಲ. ದೂರುದಾರರು ಕೋರಿರುವ ಪರಿಹಾರವು ಅಪರಾಧಗಳನ್ನು ನ್ಯಾಯಿಕವಾಗಿ ಪರಿಗಣನೆಗೆ (Cognizance) ತೆಗೆದುಕೊಳ್ಳುವುದಾಗಿರಲಿಲ್ಲ. ಬದಲಾಗಿ, ಲೋಕಾಯುಕ್ತ ಪೊಲೀಸರಿಂದ ತನಿಖೆ ನಡೆಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿತ್ತು.

ನಿಯಮದ ಪ್ರಕಾರ, ದೂರುದಾರರು ಪ್ರಮಾಣಪತ್ರದಲ್ಲಿ ತಮಗೆ “ವೈಯಕ್ತಿಕ ಜ್ಞಾನದಿಂದ ರುಜುವಾತುಪಡಿಸಬಲ್ಲ ಸತ್ಯಗಳು” (facts able to prove from own knowledge) ಮತ್ತು “ಸತ್ಯವೆಂದು ನಂಬಲು ಸಮಂಜಸ ಕಾರಣವಿರುವ ಸಂಗತಿಗಳು ಹಾಗೂ ಆ ನಂಬಿಕೆಗೆ ಆಧಾರಗಳು” (facts reasonable ground to believe to be true and grounds of such belief) ಎರಡನ್ನೂ ಪ್ರತ್ಯೇಕವಾಗಿ ನಮೂದಿಸಿರಬೇಕು. ಪ್ರಸ್ತುತ ದೂರಿನಲ್ಲಿ ದೂರುದಾರರು, ಕೇವಲ ಸಾಧಾರಣವಾಗಿ “ನನ್ನ ಜ್ಞಾನ ಮತ್ತು ನಂಬಿಕೆಗೆ ತಕ್ಕಂತೆ ಸತ್ಯವಾಗಿದೆ” ಎಂದು ಹೇಳಿಕೆ ನೀಡಿದ್ದರೇ ಹೊರತು, ಅವುಗಳನ್ನು ಪ್ರತ್ಯೇಕವಾಗಿ ವಿಂಗಡಿಸಿಲ್ಲ ಎಂದು ಆದೇಶದಲ್ಲಿ ವಿವರಿಸಿದೆ.

ಮುಖ್ಯವಾಗಿ ಸೆಕ್ಷನ್ 175(4) ಹೊಸದಾಗಿ ಸೇರ್ಪಡೆಯಾಗಿದೆ. ಸಾರ್ವಜನಿಕ ಸೇವಕರ (ಉದಾಹರಣೆಗೆ ಸಚಿವರು, ಶಾಸಕರು, ಐಎಎಸ್ ಅಧಿಕಾರಿಗಳು) ರಕ್ಷಣೆಗೆ ಹೆಚ್ಚುವರಿ ಕವಚವನ್ನು ಒದಗಿಸಿದೆ. ಸಾರ್ವಜನಿಕ ಸೇವಕರು ತಮ್ಮ ‘ಅಧಿಕೃತ ಕರ್ತವ್ಯದ ನಿರ್ವಹಣೆಯ’ (Discharge of official duties) ಸಂದರ್ಭದಲ್ಲಿ ಎಸಗಿದ ಅಪರಾಧಗಳ ಕುರಿತು ಮ್ಯಾಜಿಸ್ಟ್ರೇಟ್ ಅವರು ತನಿಖೆಗೆ ಆದೇಶಿಸುವ ಮುನ್ನ ಎರಡು ಷರತ್ತುಗಳನ್ನು ಪೂರೈಸುವುದು ಕಡ್ಡಾಯವಾಗಿದೆ.
ದೂರುದಾರರ ಪರ ಹಾಜರಿದ್ದ ಹಿರಿಯ ವಕೀಲೆ ಲಕ್ಷ್ಮಿ ಅಯ್ಯಂಗಾರ್ ಅವರು ಮಹಾಂತೇಶ್ ಬೀಳಗಿ/ ಕರ್ನಾಟಕ ಸರ್ಕಾರದ ವಿರುದ್ಧದ ಪ್ರಕರಣದಲ್ಲಿ (Crl.Petition No.11571/2025 ಜೊತೆಗೆ Crl.Misc.No.11573/2025ರಲ್ಲಿ Mahantesh Bilagi and another Vs. The State of Karnataka and others) ಕರ್ನಾಟಕ ಹೈಕೋರ್ಟ್, 2025ರ ಡಿಸೆಂಬರ್ 2ರಂದು ನೀಡಿದ್ದ ಆದೇಶವನ್ನು ಉಲ್ಲೇಖಿಸಿರುವುದನ್ನು ಆದೇಶದಲ್ಲಿ ಉದ್ಧರಿಸಿದೆ.

ಬಿಎನ್‌ಎಸ್‌ಎಸ್ ಕಲಂ 175(4) ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಕಲಂ 17-A ಅಡಿಯಲ್ಲಿ ಪರಿಗಣಿಸಲಾದ ಪ್ರಕ್ರಿಯೆಯು ಲೋಕಾಯುಕ್ತ ಪೊಲೀಸರು ತಮ್ಮ ವರದಿಯನ್ನು ಸಲ್ಲಿಸಿದ ನಂತರ ಜಾರಿಗೆ ಬರುತ್ತದೆ. ಆ ನಂತರ ಪೊಲೀಸರು ಸಲ್ಲಿಸಿದ ವರದಿಯನ್ನು ಪರಿಶೀಲಿಸಿ ಮ್ಯಾಜಿಸ್ಟ್ರೇಟ್ ಪ್ರಕರಣವನ್ನು ಮುಂದುವರಿಸಬೇಕಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಗಮನಿಸಿದೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದಿರುವುದು ತಿಳಿದು ಬಂದಿದೆ.

ಇದಲ್ಲದೆ ಓಂ ಪ್ರಕಾಶ್ ಅಂಬೇಡ್ಕರ್ / ಮಹಾರಾಷ್ಟ್ರ ರಾಜ್ಯ ಸರ್ಕಾರ (Om Prakash Ambadkar Vs. The State of Maharashtra and others) ಪ್ರಕರಣದ 2025 SCC Online SC 238ರಲ್ಲಿ ವರದಿಯಾದ ತೀರ್ಪನ್ನು ಉಲ್ಲೇಖಿಸಿದ್ದಾರೆ. ಆ ತೀರ್ಪಿನ ಪ್ಯಾರಾ 29ರಿಂದ 31ರವರೆಗಿನ ಭಾಗಗಳನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ಬಿಎನ್‌ಎಸ್‌ಎಸ್‌ನ ಕಲಂ 175, ಸಿಆರ್‍ಪಿಸಿಯ ಕಲಂ 156ಕ್ಕೆ ಸಮಾನವಾಗಿದೆ. ಬಿಎನ್‌ಎಸ್‌ಎಸ್‌ನ ಕಲಂ 175(1) ಮತ್ತು ಸಿಆರ್‍ಪಿಸಿಯ ಕಲಂ 156(1) ಬಹುತೇಕ ಒಂದೇ ರೀತಿಯಲ್ಲಿದೆ. ಬಿಎನ್‌ಎಸ್‌ಎಸ್‌ನ ಕಲಂ 175(1)ರ proviso ಮೂಲಕ ಪ್ರಕರಣದ ಸ್ವರೂಪ ಅಥವಾ ಗಂಭೀರತೆ ಅಗತ್ಯವಿದ್ದಲ್ಲಿ ಪೊಲೀಸ್ ಅಧೀಕ್ಷಕರು ಉಪ ಪೊಲೀಸ್ ಅಧೀಕ್ಷಕರಿಗೆ ತನಿಖೆ ನಡೆಸುವಂತೆ ನಿರ್ದೇಶಿಸುವ ಅಧಿಕಾರ ನೀಡಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿರುವುದು ಆದೇಶದಲ್ಲಿ ವಿವರಿಸಿದೆ.

ಬಿಎನ್‌ಎಸ್‌ಎಸ್‌ನ ಕಲಂ 175(2), Cr.P.C.ಯ ಕಲಂ 156(2)ಗೆ ಸಮಾನವಾಗಿದೆ. ಬಿಎನ್‌ಎಸ್‌ಎಸ್‌ನ ಕಲಂ 175(3)ರ ಪ್ರಕಾರ, ಕಲಂ 210ರ ಅಡಿಯಲ್ಲಿ ಪ್ರಕರಣವನ್ನು ಪರಿಗಣನೆಗೆ ತೆಗೆದುಕೊಳ್ಳುವ ಅಧಿಕಾರ ಹೊಂದಿರುವ ಯಾವುದೇ ಮ್ಯಾಜಿಸ್ಟ್ರೇಟ್, ಕಲಂ 175(1)ರ ಅನುಸಾರ ತನಿಖೆಗೆ ಆದೇಶಿಸಬಹುದು. ಇದು ಸಿಆರ್‍ಪಿಸಿಯ ಕಲಂ 156(3)ಗೆ ಸಮಾನವಾಗಿದೆ.

ಆದರೆ Cr.P.C.ಯ ಕಲಂ 156(3)ಗಿಂತ ಭಿನ್ನವಾಗಿ, BNSSನ ಕಲಂ 175(3) ಅಡಿಯಲ್ಲಿ ತನಿಖೆಗೆ ಆದೇಶಿಸುವ ಮೊದಲು ಮ್ಯಾಜಿಸ್ಟ್ರೇಟ್, ಬಿಎನ್‌ಎಸ್‌ಎಸ್‌ನ ಕಲಂ 173(4) ಅಡಿಯಲ್ಲಿ ಪೊಲೀಸ್ ಅಧೀಕ್ಷಕರಿಗೆ ದೂರುದಾರರು ನೀಡಿದ, ಪ್ರಮಾಣಪತ್ರದೊಂದಿಗೆ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಬೇಕು. ಅಗತ್ಯವೆಂದು ಭಾವಿಸುವ ವಿಚಾರಣೆಯನ್ನು ನಡೆಸಬೇಕು. ಪೊಲೀಸ್ ಅಧಿಕಾರಿಯು ಸಲ್ಲಿಸಿದ ವಾದ/ಅಭಿಪ್ರಾಯವನ್ನು ಪರಿಗಣಿಸಬೇಕು ಎಂದು ಆದೇಶದಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಬಿಎನ್‌ಎಸ್‌ಎಸ್‌ನ ಕಲಂ 175(4) ಉಪವಿಭಾಗವು Cr.P.C.ಯ ಕಲಂ 156ರಲ್ಲಿ ಹಿಂದೆ ಇದ್ದ ವ್ಯವಸ್ಥೆಗೆ ಹೋಲಿಸಿದರೆ ತನಿಖೆಯ ವ್ಯವಸ್ಥೆಗೆ ಹೊಸದಾಗಿ ಸೇರಿಸಿದೆ. ಸಾರ್ವಜನಿಕ ಸೇವೆಯ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಜ್ಞಾನಾರ್ಹ (cognizable) ಅಪರಾಧ ಎಸಗಿದ ಆರೋಪಕ್ಕೆ ಒಳಗಾಗುವ ಸಾರ್ವಜನಿಕ ಸೇವಕರಿಗೆ ಇದು ಹೆಚ್ಚುವರಿ ರಕ್ಷಣೆಯನ್ನು ಒದಗಿಸುತ್ತದೆ.

ಬಿಎನ್‌ಎಸ್‌ಎಸ್‌ನ ಕಲಂ 210ರ ಅಡಿಯಲ್ಲಿ ಪ್ರಕರಣವನ್ನು ಪರಿಗಣನೆಗೆ ತೆಗೆದುಕೊಳ್ಳುವ ಅಧಿಕಾರವನ್ನು ಮ್ಯಾಜಿಸ್ಟ್ರೇಟ್, ಹೊಂದಿದೆ. ಸಾರ್ವಜನಿಕ ಸೇವಕನ ಅಧಿಕೃತ ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಸಂಭವಿಸಿದೆ ಎಂದು ಹೇಳಲಾಗಿರುವ ಘಟನೆಯ ಕುರಿತು ದೂರು ಸ್ವೀಕರಿಸಿದ ನಂತರ, ಪ್ರಕ್ರಿಯೆಯನ್ನು ಪಾಲಿಸಿದ ಬಳಿಕವೇ ಆ ಸಾರ್ವಜನಿಕ ಸೇವಕನ ವಿರುದ್ಧ ತನಿಖೆಗೆ ಆದೇಶಿಸಬಹುದು.


ಆರೋಪಿತ ಸಾರ್ವಜನಿಕ ಸೇವಕನ ಮೇಲಾಧಿಕಾರಿ ಅಧಿಕಾರಿಯಿಂದ ಘಟನೆಗೆ ಸಂಬಂಧಿಸಿದ ವಾಸ್ತವಾಂಶಗಳು ಮತ್ತು ಸಂದರ್ಭಗಳನ್ನು ಒಳಗೊಂಡ ವರದಿಯನ್ನು ಪಡೆಯಬೇಕು. ಮತ್ತು ಆರೋಪಿತ ಸಾರ್ವಜನಿಕ ಸೇವಕನು, ಆರೋಪಿತ ಘಟನೆಗೆ ಕಾರಣವಾದ ಪರಿಸ್ಥಿತಿಗೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆ/ವಿವರಣೆಯನ್ನು ಪರಿಗಣಿಸಬೇಕು.

ಬಿಎನ್‌ಎಸ್‌ಎಸ್‌ನ ಕಲಂ 175(3) ಮತ್ತು Cr.P.C.ಯ ಕಲಂ 156(3) ಹೋಲಿಸಿದಾಗ ಬಿಎನ್‌ಎಸ್‌ಎಸ್‌ನಲ್ಲಿ ಮೂರು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಎಫ್‌ಐಆರ್ ದಾಖಲಿಸಲು ನಿರಾಕರಿಸಿದ ನಂತರ ಪೊಲೀಸ್ ಅಧೀಕ್ಷಕರಿಗೆ ಅರ್ಜಿ ಸಲ್ಲಿಸುವುದು ಕಡ್ಡಾಯಗೊಳಿಸಲಾಗಿದೆ. ಅಲ್ಲದೆ, ಕಲಂ 175(3) ಅಡಿಯಲ್ಲಿ ಮ್ಯಾಜಿಸ್ಟ್ರೇಟ್‌ಗೆ ಅರ್ಜಿ ಸಲ್ಲಿಸುವಾಗ, ಕಲಂ 173(4) ಅಡಿಯಲ್ಲಿ ಪೊಲೀಸ್ ಅಧೀಕ್ಷಕರಿಗೆ ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಪ್ರಮಾಣಪತ್ರದೊಂದಿಗೆ ಸಲ್ಲಿಸಬೇಕು.

ಎಫ್‌ಐಆರ್ ದಾಖಲಿಸಲು ನಿರ್ದೇಶಿಸುವ ಆದೇಶ ನೀಡುವ ಮೊದಲು ಮ್ಯಾಜಿಸ್ಟ್ರೇಟ್ ಅಗತ್ಯವೆಂದು ಪರಿಗಣಿಸುವ ವಿಚಾರಣೆಯನ್ನು ನಡೆಸುವ ಅಧಿಕಾರ ಹೊಂದಿದ್ದಾರೆ. ಕಲಂ 175(3) ಅಡಿಯಲ್ಲಿ ಯಾವುದೇ ನಿರ್ದೇಶನ ನೀಡುವ ಮೊದಲು ಎಫ್‌ಐಆರ್ ದಾಖಲಿಸಲು ನಿರಾಕರಿಸಿದ ಕುರಿತು ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಯು ನೀಡಿರುವ ಹೇಳಿಕೆ/ಅಭಿಪ್ರಾಯವನ್ನು ಮ್ಯಾಜಿಸ್ಟ್ರೇಟ್ ಪರಿಗಣಿಸಬೇಕು.

ಸರ್ವೋಚ್ಚ ನ್ಯಾಯಾಲಯವು ಪ್ರಿಯಾಂಕ್ ಶ್ರೀವಾಸ್ತವ/ ಉತ್ತರ ಪ್ರದೇಶ ಮತ್ತು ಬಾಬು ವೆಂಕಟೇಶ್/ ಕರ್ನಾಟಕ ಸರ್ಕಾರದ ಪ್ರಕರಣಗಳನ್ನು ಪರಿಗಣಿಸಿದ ನಂತರ ಬಿಎನ್‌ಎಸ್‌ಎಸ್‌ನಲ್ಲಿ ಮಾಡಲಾದ ಬದಲಾವಣೆಯ ಉದ್ದೇಶವನ್ನು ವಿವರಿಸಿದೆ.
ಸಿಆರ್‍ಪಿಸಿಯ ಕಲಂ 156(3) ಕುರಿತು ಈ ನ್ಯಾಯಾಲಯದ ವಿವಿಧ ತೀರ್ಪುಗಳ ಮೂಲಕ ರೂಪುಗೊಂಡ ನ್ಯಾಯಾಂಗ ವ್ಯಾಖ್ಯಾನ ಮತ್ತು ಬೆಳವಣಿಗೆಯನ್ನು ನ್ಯಾಯಾಲಯವು ಗಮನಿಸಿದೆ. ಬಿಎನ್‌ಎಸ್‌ಎಸ್‌ನ ಕಲಂ 175(3) ಮೂಲಕ ಮಾಡಲಾದ ಬದಲಾವಣೆಗಳು ಮೂಲತಃ ನ್ಯಾಯಾಂಗ ತೀರ್ಪುಗಳ ಮೂಲಕ ಪರಿಚಯಿಸಲಾದ ಕಾರ್ಯವಿಧಾನದ ಪದ್ಧತಿಗಳು ಮತ್ತು ರಕ್ಷಣಾತ್ಮಕ ಕ್ರಮಗಳನ್ನು ಕಾನೂನಿನಲ್ಲಿ ಅಳವಡಿಸಿದೆ ಎಂದು ಆದೇಶದಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಮ್ಯಾಜಿಸ್ಟ್ರೇಟ್‌ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತಮ್ಮ ಗುಪ್ತ ಅಥವಾ ಅನ್ಯಾಯಯುತ ಉದ್ದೇಶಗಳನ್ನು ಸಾಧಿಸಲು ಪ್ರಯತ್ನಿಸುವ ನಿರ್ಲಜ್ಜ ದಾವೆದಾರರಿಂದಾಗುವ ದುರುಪಯೋಗವನ್ನು ತಡೆಯುವುದು ಇದರ ಉದ್ದೇಶವಾಗಿದೆ ಎಂದು ವಿವರಿಸಿದೆ.
ಕಲಂ 175(3) ಅಡಿಯಲ್ಲಿ ನಿರ್ದೇಶನ ನೀಡುವ ಮೊದಲು ಸಂಬಂಧಿತ ಪೊಲೀಸ್ ಅಧಿಕಾರಿಯ ಸಲ್ಲಿಕೆಗಳನ್ನು ಮ್ಯಾಜಿಸ್ಟ್ರೇಟ್ ಪರಿಗಣಿಸಬೇಕೆಂದು ಕಡ್ಡಾಯಗೊಳಿಸುವ ಮೂಲಕ, ಕಲಂ 173ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸುವ ಜವಾಬ್ದಾರಿ ಹೊಂದಿರುವ ಪೊಲೀಸ್ ಅಧಿಕಾರಿಯ ಹೊಣೆಗಾರಿಕೆಯನ್ನು ಹೆಚ್ಚಿಸಲಾಗಿದೆ. ಸಂಬಂಧಿತ ಪೊಲೀಸ್ ಅಧಿಕಾರಿಯ ಅಭಿಪ್ರಾಯವನ್ನು ಮ್ಯಾಜಿಸ್ಟ್ರೇಟ್ ಪರಿಗಣಿಸುವುದರಿಂದ, ದೂರು ಮತ್ತು ಪೊಲೀಸ್ ಅಧಿಕಾರಿಯ ಸಲ್ಲಿಕೆ ಎರಡನ್ನೂ ನ್ಯಾಯಾಂಗ ದೃಷ್ಟಿಯಿಂದ ಪರಿಶೀಲಿಸಬೇಕು. ಕಾರಣ ಸಹಿತ ಆದೇಶ ನೀಡುವ ಅಗತ್ಯವನ್ನು ಹೆಚ್ಚು ಪರಿಣಾಮಕಾರಿ ಮತ್ತು ಸಮಗ್ರ ರೀತಿಯಲ್ಲಿ ಖಚಿತಪಡಿಸುತ್ತದೆ.
ಹೀಗಾಗಿ ಬಿಎನ್‌ಎಸ್‌ಎಸ್‌ನ ಕಲಂ 175(3) ಅಡಿಯಲ್ಲಿ ನಿರ್ದೇಶನ ನೀಡುವ ಮೊದಲು, ದೂರುದಾರರು ಬಿಎನ್‌ಎಸ್‌ಎಸ್‌ನ ಕಲಂ
175(3) ಅಡಿಯಲ್ಲಿ ಸಲ್ಲಿಸಿರುವ ಅರ್ಜಿಯೊಂದಿಗೆ, ಬಿಎನ್ಎಸ್‌ಎಸ್‌ನ ಕಲಂ 173(4) ಅಡಿಯಲ್ಲಿ ಪೊಲೀಸ್ ಅಧೀಕ್ಷಕರಿಗೆ ಸಲ್ಲಿಸಿದ ಅರ್ಜಿಯನ್ನು ಪ್ರಮಾಣಪತ್ರದೊಂದಿಗೆ ಪರಿಗಣಿಸಬೇಕು. ಅಲ್ಲದೆ, ವಿಚಾರಣೆ ನಡೆಸಬೇಕು ಮತ್ತು ಎಫ್‌ಐಆರ್ ದಾಖಲಿಸಲು ನಿರಾಕರಿಸಿದ ಕುರಿತು ಪೊಲೀಸ್ ಅಧಿಕಾರಿಯ ಸಲ್ಲಿಕೆ/ಅಭಿಪ್ರಾಯವನ್ನು ಪರಿಗಣಿಸಬೇಕು. ಪ್ರಸ್ತುತ ಪ್ರಕರಣದಲ್ಲಿ ಆರೋಪಿಗಳಾದ ನಂ.1, 2, 5 ಮತ್ತು 6 ಚುನಾಯಿತ ಪ್ರತಿನಿಧಿಗಳಾಗಿದ್ದಾರೆ. ಸಾರ್ವಜನಿಕ ಸೇವಕರ ಅಧಿಕೃತ ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ನಡೆದಿರುವ ಆರೋಪಿತ ಕೃತ್ಯಕ್ಕೆ ಸಂಬಂಧಿಸಿದ ದೂರಿನಲ್ಲಿ ತನಿಖೆಗೆ ಆದೇಶಿಸುವ ಮೊದಲು ಬಿಎನ್‌ಎಸ್‌ಎಸ್‌ನ ನ ಕಲಂ 175(4)ರಡಿ ಎರಡು ಷರತ್ತುಗಳನ್ನು ಪಾಲಿಸಬೇಕಾಗುತ್ತದೆ.
ಆರೋಪಿತ ಸಾರ್ವಜನಿಕ ಸೇವಕನ ಮೇಲಾಧಿಕಾರಿಯಿಂದ ಘಟನೆಯ ವಾಸ್ತವಾಂಶಗಳ ಕುರಿತ ವರದಿಯನ್ನು ಪಡೆಯಬೇಕು. ಆರೋಪಿತ ಸಾರ್ವಜನಿಕ ಸೇವಕನಿಗೆ ಘಟನೆಯ ಹಿನ್ನೆಲೆಯ ಕುರಿತು ತನ್ನ ವಿವರಣೆ ಅಥವಾ ಸಮರ್ಥನೆ ನೀಡಲು ಅವಕಾಶ (Opportunity of being heard) ಕಲ್ಪಿಸಬೇಕು ಎಂದು ಹೇಳಿರುವ ನ್ಯಾಯಾಲಯವು ಸುಪ್ರೀಂ ಕೋರ್ಟ್ ಹಲವು ತೀರ್ಪುಗಳನ್ನು ಉಲ್ಲೇಖಿಸಿದೆ.

‘ಸ್ಟೇಟ್ ಆಫ್ ಕೇರಳ’ ಪ್ರಕರಣದಲ್ಲಿ ಸ್ಪಷ್ಟಪಡಿಸಿರುವಂತೆ, ಸೆಕ್ಷನ್ 175(3) ಮತ್ತು 175(4) ಗಳನ್ನು ಪ್ರತ್ಯೇಕವಾಗಿ ನೋಡುವಂತಿಲ್ಲ. ಬದಲಾಗಿ ಅವೆರಡನ್ನೂ ಸಾಮರಸ್ಯದಿಂದ (Harmoniously) ಓದಬೇಕು. ಸಾರ್ವಜನಿಕ ಸೇವಕರಿಗೆ ತನಿಖೆಯ ಹಂತದಲ್ಲಿ (ಸೆಕ್ಷನ್ 175(4)) ಮತ್ತು ಸಂಜ್ಞಾನ ತೆಗೆದುಕೊಳ್ಳುವ ಹಂತದಲ್ಲಿ (ಸೆಕ್ಷನ್ 218) ಹೀಗೆ ‘ದ್ವಿ-ಹಂತದ ರಕ್ಷಣೆ’ (Two-tier protection) ಲಭ್ಯವಿದೆ. ಇದು ಅಧಿಕಾರಿಗಳಿಗೆ ತನಿಖೆಯ ಆರಂಭಿಕ ಹಂತದಲ್ಲೇ ತಡೆವೊಡ್ಡುವ ಅವಕಾಶವನ್ನು ಒದಗಿಸುತ್ತದೆ,’ ಎಂದು ನ್ಯಾಯಾಲಯವು ವಿವರಿಸಿರುವುದು ಗೊತ್ತಾಗಿದೆ.




