ಪುಷ್ಕರಣಿ, ತಡೆಗೋಡೆ ಕಾಮಗಾರಿಗೆ 8.4 ಕೋಟಿ ವೆಚ್ಚ; ಸರ್ಕಾರಿ ಹಣ ಬಳಕೆ ಆರೋಪ, ದೂರು ಸಲ್ಲಿಕೆ

ಬೆಂಗಳೂರು; ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನ ಸಮೀಪದಲ್ಲಿ ಅಕ್ರಮವಾಗಿ  ಪುಷ್ಕರಣಿ ನಿರ್ಮಾಣ ಮತ್ತು  ಕುಸಿಯುತ್ತಿರುವ ಜಾಗಕ್ಕೆ ತಡೆಗೋಡೆ ನಿರ್ಮಾಣ ಮಾಡಿ ಒಟ್ಟಾರೆ  8.4 ಕೋಟಿ ರು.ಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ.

 

ಮಠದ ಆವರಣದೊಳಗೆ ಚಂದ್ರಮೌಳೇಶ್ವರ ದೇಗುಲದ ಪುಷ್ಕರಣಿ ಮತ್ತು ದೇಗುಲದ ಆವರಣದ ಕಾಮಗಾರಿಗೆ ಸರ್ಕಾರಿ  ಹಣವನ್ನು ಬಳಸಲಾಗಿದೆ ಎಂದು ಆರೋಪಿಸಿರುವ ಕರ್ನಾಟಕ ರಾಷ್ಟ್ರಸಮಿತಿಯ ಕಾರ್ಯಕರ್ತ  ಮಂಜುನಾಥ್ ಹಿರೇಚೌಟಿ  ಎಂಬುವರು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಐ ಎಸ್‌ ಎನ್‌ ಪ್ರಸಾದ್‌, ನಿಗಮದ ಮುಖ್ಯ ಇಂಜಿನಿಯರ್‌ ಜಿ ಇ ಯತೀಶ್‌ ಚಂದ್ರನ್‌, ಕಾರ್ಯನಿರ್ವಾಹಕ ಇಂಜಿನಿಯರ್‌ ಎನ್‌ ಎಸ್‌ ವೆಂಕಟೇಶ್‌ ಮತ್ತು ತುಂಗಾ ಮೇಲ್ದಂಡೆ ಯೋಜನೆ ಸೂಪರಿಟೆಂಡಿಂಗ್‌ ಇಂಜಿನಿಯರ್‌ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಈ ದೂರಿನ ಪ್ರತಿ ಮತ್ತು ಇದಕ್ಕೆ ಸಂಬಂಧಿಸಿದ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಅಲ್ಲದೇ ಚಂದ್ರಮೌಳೇಶ್ವರ ದೇವಸ್ಥಾನವು ರಾಮಚಂದ್ರಾಪುರ ಮಠಕ್ಕೆ ಸೇರಿದ್ದರೂ ಸಹ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿಯು ಎಲ್ಲಿಯೂ ಮಠದ ಹೆಸರನ್ನು ಉಲ್ಲೇಖಿಸದೆಯೇ ಕೇವಲ ರಾಮಚಂದ್ರಾಪುರ ಗ್ರಾಮದಲ್ಲಿನ ದೇವಸ್ಥಾನ ಎಂದು ಉಲ್ಲೇಖಿಸಿ ವಾಸ್ತವನ್ನು ಮರೆಮಾಚಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

 

ಇದೇ ದೂರಿನಲ್ಲಿ ಸಂಸದ ಬಿ ವೈ ರಾಘವೇಂದ್ರ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ. ಪುಷ್ಕರಣಿ ಕಾಮಗಾರಿ ಮತ್ತು ತಡೆಗೋಡೆ ನಿರ್ಮಾಣ ಮಾಡುವ ಸಂಬಂಧ ಬಿ ವೈ ರಾಘವೇಂದ್ರ ಅವರು ನೀರಾವರಿ ನಿಗಮಕ್ಕೆ 2020ರ ಆಗಸ್ಟ್‌ 15ರಂದು ಪತ್ರ ಬರೆದಿದ್ದರು. ಶರಾವತಿ ನದಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಬೇಕು ಎಂದು ಸಂಸದ ರಾಘವೇಂದ್ರ ಅವರು ಕೋರಿದ್ದರು ಎಂಬ ಅಂಶವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

‘ಕರ್ನಾಟಕ ನೀರಾವರಿ ನಿಗಮವು ಸ್ವತಃ ಇ-ಪ್ರೊಕ್ಯೂರ್‌ಮೆಂಟ್‌ ಮೂಲಕ ಟೆಂಡರ್‌ ಆಹ್ವಾನಿಸಿ  ಕಾಮಗಾರಿ ನಿರ್ವಹಿಸಬೇಕಾಗಿತ್ತು. ನೀರಾವರಿ ಅಚ್ಚುಕಟ್ಟು ಪ್ರದೇಶದ ನೆರೆ ನಿಯಂತ್ರಣದಂತಹ ಕಾಮಗಾರಿಯಾಗಿದ್ದರೂ ಸಹ ನೀರಾವರಿ ಯೋಜನೆಗಳಲ್ಲಿ ಅನುಭವವಿಲ್ಲದ ಮತ್ತು ನೀರಾವರಿ ಯೋಜನೆಗಳ ವ್ಯಾಪ್ತಿಯೊಳಗೆ ಬಾರದ ನಿರ್ಮಿತಿ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದಕ್ಕೆ ಅನುಮೋದನೆ ನೀಡಿದ್ದಲ್ಲದೇ ಶಿಕಾರಿಪುರದ ದಂಡಾವತಿ ಜಲಾಶಯ ಯೋಜನೆ ಅಡಿಯಲ್ಲಿ ನಿಗಮದ ಆಯವ್ಯಯದಿಂದ ಹಣ ಪಾವತಿಸಿ ನಿರ್ವಹಿಸಲಾಗಿದೆ. ಇದರಿಂದ ಹಿಂಬದಿ ವ್ಯವಹಾರಗಳಿಗೆ ವಿಫುಲ ಅವಕಾಶ ಸೃಷ್ಟಿಸಲಾಗಿದೆ. ಹಾಗೂ ನಿಯಮ ನಿಬಂಧನೆಗಳನ್ನು ಉಲ್ಲಂಘಿಸಿ ಮತ್ತೊಬ್ಬರಿಗೆ ಅನುಕೂಲ ಮಾಡಿಕೊಡಲಾಗಿದೆ,’ ಎಂದು ದೂರಿನಲ್ಲಿ ಮಂಜುನಾಥ್‌ ಅವರು ವಿವರಿಸಿರುವುದು ಗೊತ್ತಾಗಿದೆ.

 

 

ಮಠದ ಒಡೆತನದಲ್ಲಿರುವ ಪುಷ್ಕರಣಿಗೆ 3.50 ಕೋಟಿ ವೆಚ್ಚ

 

ರಾಮಚಂದ್ರಾಪುರ ಮಠಕ್ಕೆ ಸೇರಿದ ಚಂದ್ರಮೌಳೇಶ್ವರ ದೇಗುಲ ಪುಷ್ಕರಣಿ ಮತ್ತು ದೇಗುಲದ ಆವರಣದೊಳಗೆ ಕಾಮಗಾರಿ ಎಂದು ನೇರವಾಗಿ ಎಲ್ಲಿಯೂ ಉಲ್ಲೇಖಿಸದ ನಿರ್ಮಿತಿ ಕೇಂದ್ರವು ‘ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಮದಲ್ಲಿ ಶ್ರೀ ಚಂದ್ರಮೌಳೇ‍ಶ್ವರ ದೇವಸ್ಥಾನದ ಸಮೀಪ ಇರುವ ಕೆರೆಗೆ ಪುಷ್ಕರಣಿ ನಿರ್ಮಾಣ ಮತ್ತು ದೇವಸ್ಥಾನದ ಆವರಣದ ಮುಂದುವರೆದ ಅಭಿವೃದ್ದಿ ಕಾಮಗಾರಿ,’ ಎಂದು ಉಲ್ಲೇಖಿಸಿದೆ ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

 

‘ಚಂದ್ರಮೌಳೇಶ್ವರ ದೇಗುಲವು ಮಠದ ಒಡೆತನದಲ್ಲಿ ಮತ್ತು ಜೀರ್ಣೋದ್ಧಾರವಾಗುತ್ತಿರುವ ದೇವಾಲಯ. ನಿರ್ಮಿತಿ ಕೇಂದ್ರವು ಇಲ್ಲಿ ಕಾಮಗಾರಿ ನಡೆಸಿದೆ. ಮೂಲಭೂತ ಸೌಕರ್ಯಗಳ ಕಾಮಗಾರಿಯೆಂದು ಖಾಸಗಿ ಸ್ಥಳದ ಕಾಮಗಾರಿಯನ್ನು ತೆರಿಗೆದಾರರ ಹಣದಲ್ಲಿ ಕೈಗೊಂಡಿದೆ. ಈ ಕಾಮಗಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಅವರು ಅನುಮೋದಿಸಿದ್ದಾರೆ. ಇದನ್ನು ದೇಗುಲದ ಸಮೀಪ ಇರುವ ಕೆರೆ ಎಂದು ಹೇಳಲಾಗಿದೆ. ಆದರೆ ವಾಸ್ತವದಲ್ಲಿ ಈ ಇಂದೆ ಇಲ್ಲಿ ನೈಸರ್ಗಿಕ ಹಳ್ಳವಿತ್ತು. ಅದನ್ನು ಮಾರ್ಪಾಡು ಮಾಡಿ ಕೆರೆ ಕಾಮಗಾರಿ ಎಂದು ಹೇಳಲಾಗಿದೆ,’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

 

ಶರಾವತಿ ನದಿ ತಟದಲ್ಲಿಯೇ ದೇಗುಲವಿದೆ. ದೇವಸ್ಥಾನದ ಸುತ್ತ ಹಿಂದಿನಿಂದಲೂ ಇದ್ದ ನೈಸರ್ಗಿಕ ಹಳ್ಳ ಮತ್ತು ದೇಗುಲದ ಆವರಣದ ಕಾಮಗಾರಿಯನ್ನು ನಿರ್ಮಿತಿ ಕೇಂದ್ರವು ನಿರ್ವಹಿಸಿದೆ. ಆದರೂ ನಿಯಮಾನುಸಾರವಾಗಿ ಈ ಸ್ಥಳದಲ್ಲಿ ಯಾವುದೇ ಫಲಕವನ್ನೂ ಅಳವಡಿಸಿಲ್ಲ ಎಂದೂ ದೂರಿದ್ದಾರೆ.

 

‘ವಾಸ್ತವದಲ್ಲಿ ರಾಮಚಂದ್ರಾಪುರ ಮಠಕ್ಕೆ ಸೇರಿದ ದೇವಸ್ಥಾನಗಳ ಪಟ್ಟಿಯಲ್ಲಿ ಚಂದ್ರಮೌಳೇಶ್ವರ ದೇವಸ್ಥಾನವೂ ಇದೆ. ಚಂದ್ರಮೌಳೇಶ್ವರ ದೇವಸ್ಥಾನದಿಂದ ಕೇವಲ ನೂರು ಮೀಟರ್ ಅಂತರದಲ್ಲಿಯೆ ಶರಾವತಿ ನದಿ ಮೈದುಂಬಿ ಹರಿಯುತ್ತಿದೆ. ನದಿಗೆ ತಡೆಗೋಡೆ ಮತ್ತು ಹತ್ತಿರದಲ್ಲಿಯೇ ನದಿಗೆ ಒಡ್ಡು ಇದ್ದು ಸಾಕಷ್ಟು ನೀರು ಇಂಗಲು, ಅಂತರ್ಜಲ ವೃದ್ಧಿಗೆ ಸಹಕಾರಿಯಾಗಿದೆ. ಪುಷ್ಕರಣಿಯನ್ನು ಖಾಸಗಿ‌ ಸ್ಥಳದಲ್ಲಿ‌‌ ಅದರಲ್ಲಿಯೂ ಪ್ರಾರ್ಥನಾ ಸ್ಥಳದಲ್ಲಿ ನಿರ್ವಹಿಸಿರುವುದು ಸರಿಯಲ್ಲ. ಸಾರ್ವಜನಿಕರ‌ ತೆರಿಗೆ ಹಣವನ್ನು ಮಠಕ್ಕೆ ಬಳಸಿರುವುದು ಅಕ್ಷ್ಯಮ್ಯ ಅಪರಾಧ. ಸರ್ಕಾರಿ ಹಣವನ್ನು ಮಠ ದೇವಸ್ಥಾನಕ್ಕೆ ಬಳಸಲು ಮಾರ್ಗಪಲ್ಲಟ ಮಾಡಿರುವುದು ಸರಿಯಲ್ಲ ‘ ಎಂದು ಮಂಜುನಾಥ  ಅವರು  ಪ್ರತಿಪಾದಿಸುತ್ತಾರೆ.

 

ಕೆಟಿಪಿಪಿ ಕಾಯ್ದೆ 4 ಜಿ ವಿನಾಯಿತಿ ಏಕೆ?

 

ಈ ಎರಡೂ ಕಾಮಗಾರಿಗಳನ್ನು ಸಂಸದ ಬಿ ವೈ ರಾಘವೇಂದ್ರ ಅವರು ಮೂಲಭೂತ ಸೌಕರ್ಯಗಳ ಕಾಮಗಾರಿ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿ ಇದಕ್ಕೆ ಕೆಟಿಪಿಪಿ ಕಾಯ್ದೆ 4 ಜಿ ಯಿಂದ ವಿನಾಯಿತಿ ಕೋರಿದ್ದಾರೆ.

 

ಇವರ ಶಿಫಾರಸ್ಸಿನಂತೆ 2021ರ ಜನವರಿ 11ರಂದು ವಿನಾಯಿತಿಯನ್ನು ಆರ್ಥಿಕ ಇಲಾಖೆ ನೀಡಿದೆ.

 

ನಿರ್ಮಿತಿ ಕೇಂದ್ರವು 2021ರ ಮಾರ್ಚ್‌ನಿಂದ ಆಗಸ್ಟ್‌ 2021ರವರೆಗೆ ಕಾಮಗಾರಿ ಕೈಗೊಂಡಿದೆ. ಯಾವುದೇ ತುರ್ತು ಕಾಮಗಾರಿಯಲ್ಲದ ಕಾಮಗಾರಿಗಳಿಗೂ ಪರಿಶೀಲಿಸದೇ ಆರ್ಥಿಕ ಇಲಾಖೆಯು ಕೆಟಿಪಿಪಿ ಕಾಯ್ದೆ ವಿನಾಯಿತಿ ಘೋಷಿಸುವ ಮೂಲಕ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದೂ ಮಂಜುನಾಥ್‌ ಅವರು ದೂರಿನಲ್ಲಿ ಆರೋಪಿಸಿದ್ದಾರೆ.

 

‘ಕರ್ನಾಟಕ ನೀರಾವರಿ ನಿಗಮವು ಅದರ ಕಾರ್ಯವ್ಯಾಪ್ತಿಯಲ್ಲಿ ಬರುವ ಪ್ರದೇಶದಲ್ಲಿ ನೀರಾವರಿ ಕಾಮಗಾರಿಗಳನ್ನು ಸರ್ಕಾರ ನೀಡುವ ಅನುದಾನದ ಮೂಲಕ ಕೈಗೊಳ್ಳಬೇಕು. ಹಾಗೆಯೆ ಸರ್ಕಾರವು ನೀರಾವರಿಗೆ ಹೊರತಾದ ಕಾಮಗಾರಿಗಳನ್ನು ವಹಿಸಿದಾಗ ಮಾತ್ರ ಅವನ್ನು ನಿರ್ವಹಿಸಬೇಕು. ಸರ್ಕಾರವು ನೀರಾವರಿ ಕಾಮಗಾರಿಗಾಗಿ ಮತ್ತು ನಿರ್ದಿಷ್ಟ ಕಾಮಗಾರಿಗಳಿಗೆ ನೀಡಿರುವ ಅನುದಾನವನ್ನು ಸರ್ಕಾರದ ಅನುಮತಿಯಿಲ್ಲದೇ ಅನ್ಯ ಉದ್ದೇಶಗಳಿಗೆ ಬಳಕೆ ಮಾಡುವುದು ನಿಯಮಬಾಹಿರ,’ ಎಂದು ಮಂಜುನಾಥ್‌ ಅವರು ಲೋಕಾಯುಕ್ತಕ್ಕೆ ಸಲ್ಲಿಸಿರುವ ದೂರಿನಲ್ಲಿ ವಿವರಿಸಿದ್ದಾರೆ.

the fil favicon

SUPPORT THE FILE

Latest News

Related Posts