ಬೆಂಗಳೂರು; ಹೊಸದಾಗಿ ವಿದ್ಯಾರ್ಥಿ ನಿಲಯಗಳ ಆರಂಭ, ಅನುಮೋದಿತ ಕಾಮಗಾರಿಗಳ ಕಾರ್ಯಭಾರಕ್ಕೆ ನಲುಗಿ ಹೋಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಹೊಸದಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಮುಂದೂಡುತ್ತಿರುವ ನಡುವೆಯೇ 6 ಕೋಟಿ ರು ವೆಚ್ಚದಲ್ಲಿ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಫ್ರೀಡಂ ಹಬ್ಬ ಆಚರಿಸಲು ಮುಂದಾಗಿದೆ.
ವಿಶೇಷವೆಂದರೇ 6 ಕೋಟಿ ರು ವೆಚ್ಚದಲ್ಲಿ ಫ್ರೀಡಂ ಹಬ್ಬ ಆಚರಿಸಲಿರುವ ಸರ್ಕಾರವು, ನಿರ್ದಿಷ್ಟ ಕಂಪನಿ, ಏಜೆನ್ಸಿಯೊಂದಿಗೇ ಪೂರ್ವ ನಿರ್ಧರಿತ ಗುತ್ತಿಗೆ ಮಾಡಿಕೊಂಡಿದೆ ಎಂಬ ಬಲವಾದ ಆರೋಪಕ್ಕೆ ಗುರಿಯಾಗಿದೆ. ತಾಂತ್ರಿಕ ಮತ್ತು ಆರ್ಥಿಕ ಬಿಡ್ ತೆರೆಯುವ ಮುನ್ನವೇ ಪೂರ್ವ ನಿರ್ಧರಿತ ಕಂಪನಿ, ಏಜೆನ್ಸಿಯು ಫ್ರೀಡಂ ಹಬ್ಬಕ್ಕೆ ಶಾಮಿಯಾನ, ವೇದಿಕೆ, ಸೌಂಡ್ ಸಿಸ್ಟಂ ಸೇರಿದಂತೆ ಇನ್ನಿತರೆ ಸಾಮಗ್ರಿಗಳನ್ನು ವಿಧಾನಸೌಧ-ವಿಕಾಸ ಸೌಧ ಆವರಣದೊಳಗೆ ಶೇಖರಿಸಿಟ್ಟತ್ತಲ್ಲದೇ ಕೆಲಸವನ್ನು ಶುರು ಮಾಡಿತ್ತು.
ಇದಕ್ಕೆ ಸಂಬಂಧಿಸಿದಂತೆ ಟೆಂಡರ್ ದಾಖಲೆಗಳು ದಿ ಫೈಲ್ ಗೆ ಲಭ್ಯವಾಗಿವೆ.
ಫ್ರೀಡಂ ಹಬ್ಬವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೂಲಕ ಆಚರಿಸುತ್ತಿದೆ. ಈ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಜಿಬಿಎಯು 2026ರ ಆಗಸ್ಟ್ 3ರಂದು ಟೆಂಡರ್ ಅಧಿಸೂಚನೆಯನ್ನು ಪ್ರಕಟಿಸಿತ್ತು. ಈ ಟೆಂಡರ್ ಅವಧಿಯು 2026ರ ಆಗಸ್ಟ್ 11 ಕೊನೆ ದಿನಾಂಕವಾಗಿತ್ತು. ತಾಂತ್ರಿಕ ಬಿಡ್‌ನ್ನು 2026ರ ಆಗಸ್ಟ್ 12 ಮತ್ತು ಆರ್ಥಿಕ ಬಿಡ್‌ನ್ನೂ ಸಹ 2026ರ ಆಗಸ್ಟ್ 12ರಂದು ತೆರೆಯಲು ನಿಗದಿಪಡಿಸಿತ್ತು.

ತಾಂತ್ರಿಕ ಮತ್ತು ಆರ್ಥಿಕ ಬಿಡ್ ತೆರೆದು ಟೆಂಡರ್‍ದಾರರನ್ನು ಅಂತಿಮಗೊಳಿಸಲು ಪ್ರಕ್ರಿಯೆಗಳು ಬಾಕಿ ಇರುವಾಗಲೇ ಪೂರ್ವ ನಿರ್ಧರಿತ ಕಂಪನಿ/ಏಜೆನ್ಸಿಯು ವಿಧಾನಸೌಧ, ವಿಕಾಸಸೌಧದ ಒಳ ಮತ್ತು ಹೊರಗಿನ ಆವರಣದಲ್ಲಿ ಕೆಲಸ ಶುರು ಮಾಡಿತ್ತು.













ಶಾಮಿಯಾನ, ಪ್ರಧಾನ ಮತ್ತು ಇತರೆ ವೇದಿಕೆಗಳು, ಸೌಂಡ್ ಸಿಸ್ಟಂ, ಲೈಟಿಂಗ್ಸ್, ಶಾಲು, ಡ್ರೈ ಫ್ರೂಟ್ಸ್, ಸ್ನಾಕ್ಸ್, ಫೈರ್ ವರ್ಕ್ಸ್, ಬ್ಯಾಂಡ್ಸ್, ಕಲ್ಚರಲ್ ಪೆರೇಡ್, ಸ್ಟಾಲ್ ಮತ್ತಿತರೆ ಸೌಲಭ್ಯಗಳನ್ನು ಒದಗಿಸಲು ಟೆಂಡರ್‍ನಲ್ಲಿ ವಿವರಿಸಿತ್ತು. ಈ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಕಂಪನಿ, ಏಜೆನ್ಸಿಯನ್ನು ಅಂತಿಮಗೊಳಿಸುವ ಮುನ್ನವೇ ಪೂರ್ವ ನಿರ್ಧರಿತ ಕಂಪನಿಯೇ ಕೆಲಸ ಶುರು ಮಾಡಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.








ವಿಧಾನಸೌಧದ ಮುಂಭಾಗದಲ್ಲಿ ಸಾರ್ವಜನಿಕರಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ನಾಗರಿಕರು ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 25 ತುಕಡಿಗಳು ಹಾಗೂ ಕಲಾತಂಡಗಳು ಭಾಗವಹಿಸುವ ವರ್ಣರಂಜಿತ ಸ್ವಾತಂತ್ರ್ಯೋತ್ಸವ ಪಥಸಂಚಲನ ನಡೆಯಲಿದೆ. ಭಾರತದ ವಿವಿಧ ಸಂಸ್ಕೃತಿ, ಕರ್ನಾಟಕದ ವಿವಿಧ ಪ್ರದೇಶಗಳು ಹಾಗೂ ವಿವಿಧ ವೃತ್ತಿಗಳನ್ನು ಪ್ರತಿನಿಧಿಸುವ ಕಲಾತಂಡಗಳು ಜನಪದ ನೃತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿವೆ.
ಮಕ್ಕಳಿಗಾಗಿ ಮಕ್ಕಳ ಮೇಳ ಆಯೋಜಿಸಿದೆ. ಭಾರತದ ಸ್ವಾತಂತ್ರ್ಯ ಹೋರಾಟದ ಕುರಿತು ಅರಿವು ಮೂಡಿಸುವ ಜತೆಗೆ ಕಲಿಕೆಯನ್ನು ಆಸಕ್ತಿದಾಯಕವಾಗಿಸುವ ಪ್ರಯತ್ನ ಮಾಡಲಾಗಿದೆ. ಮಕ್ಕಳಿಗಾಗಿ ವಿಧಾನಸೌಧ ಪ್ರವಾಸವನ್ನೂ ಆಯೋಜಿಸಲಾಗಿದೆ. 20ರಿಂದ 25 ಮಕ್ಕಳ ಗುಂಪುಗಳಿಗೆ ತಲಾ 15 ನಿಮಿಷಗಳ ಮಾರ್ಗದರ್ಶಿತ ಪ್ರವಾಸಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಕನ್ನಡ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ಸಂಗೀತ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ನಡೆಯುವ ಸಂಗೀತ ಕಾರ್ಯಕ್ರಮವು ಸಾರ್ವಜನಿಕರ ಸಾಮೂಹಿಕ ಗಾಯನದೊಂದಿಗೆ ಮುಕ್ತಾಯಗೊಳ್ಳಲಿದೆ.
ಅಂಬೇಡ್ಕರ್ ವೀಧಿಯಲ್ಲಿ 120ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುವುದು. ಜೀವನಶೈಲಿ ಉತ್ಪನ್ನಗಳು, ಕರಕುಶಲ ವಸ್ತುಗಳು, ಸಾವಯವ ಉಡುಪುಗಳು, ಆಟಿಕೆಗಳು, ಜವಳಿ, ಆಹಾರ ಸೇರಿದಂತೆ ವಿವಿಧ ಉತ್ಪನ್ನಗಳು ಇಲ್ಲಿ ಲಭ್ಯವಿರಲಿವೆ. ದಿನವಿಡೀ ಈ ಮಳಿಗೆಗಳು ತೆರೆದಿರಲಿವೆ. ಆಗಸ್ಟ್ 15ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಫ್ರೀಡಂ ಹಬ್ಬ’ಕ್ಕೆ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ತಿಳಿಸಿದ್ದಾರೆ.
ಕನ್ನಡ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ಸಂಗೀತ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ನಡೆಯುವ ಸಂಗೀತ ಕಾರ್ಯಕ್ರಮವು ಸಾರ್ವಜನಿಕರ ಸಾಮೂಹಿಕ ಗಾಯನದೊಂದಿಗೆ ಮುಕ್ತಾಯಗೊಳ್ಳಲಿದೆ. ಅಂಬೇಡ್ಕರ್ ವೀಧಿಯಲ್ಲಿ 120ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುವುದು. ಜೀವನಶೈಲಿ ಉತ್ಪನ್ನಗಳು, ಕರಕುಶಲ ವಸ್ತುಗಳು, ಸಾವಯವ ಉಡುಪುಗಳು, ಆಟಿಕೆಗಳು, ಜವಳಿ, ಆಹಾರ ಸೇರಿದಂತೆ ವಿವಿಧ ಉತ್ಪನ್ನಗಳು ಇಲ್ಲಿ ಲಭ್ಯವಿರಲಿವೆ. ದಿನವಿಡೀ ಈ ಮಳಿಗೆಗಳು ತೆರೆದಿರಲಿವೆ.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಾರ್ವಜನಿಕರ ಬೃಹತ್ ಸಂಭ್ರಮಾಚರಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಬೆಂಗಳೂರನ್ನು ತಮ್ಮ ನೆಲೆಯಾಗಿಸಿಕೊಂಡಿರುವ ರಾಜ್ಯದ ನಾನಾ ಭಾಗಗಳ ಹಾಗೂ ಇತರೆ ರಾಜ್ಯಗಳ ಜನರು ವಿಧಾನಸೌಧದ ಮುಂಭಾಗದಲ್ಲಿದಿನವಿಡೀ ನಡೆಯುವ ಸಂಭ್ರಮಾಚರಣೆಯಲ್ಲಿತಮ್ಮ ಕಲೆ, ಸಂಸ್ಕೃತಿ, ಪರಂಪರೆ ಮತ್ತು ಸಾಂಪ್ರದಾಯಿಕ ಉಡುಪುಗಳನ್ನು ಪ್ರದರ್ಶಿಸಲಿದ್ದಾರೆ.
ವಿಧಾನಸೌಧ ಮತ್ತು ಅದಕ್ಕೆ ಸಂಪರ್ಕಿಸುವ ರಸ್ತೆಗಳು ಸಾರ್ವಜನಿಕರ ಪರೇಡ್, ಸಮುದಾಯಗಳ ಪ್ರದರ್ಶನ, ಸಂಗೀತ, ಪ್ರಾದೇಶಿಕ ಖಾದ್ಯಗಳು ಹಾಗೂ ಕರಕುಶಲ ವಸ್ತುಗಳನ್ನೊಳಗೊಂಡ ಸಾಂಸ್ಕೃತಿಕ ಕಾರಿಡಾರ್‌ಗಳಾಗಿ ಬದಲಾಗಲಿವೆ. ವಿಧಾನಸೌಧದ ಒಳಗಿರುವ ಭವ್ಯ ಶಾಸನಸಭೆ ಸಭಾಂಗಣದ ಪ್ರವೇಶಕ್ಕೂ ಅವಕಾಶ ಕಲ್ಪಿಸಲಾಗುತ್ತಿದೆ.
‘‘ಇದು ಬೆಂಗಳೂರನ್ನು ತಮ್ಮ ನೆಲೆಯಾಗಿಸಿಕೊಂಡಿರುವ ನಾನಾ ಸಮುದಾಯಗಳನ್ನು ಪ್ರತಿನಿಧಿಸುವವರು ಒಂದೆಡೆ ಸೇರಿ ಆಚರಿಸುವ ಸ್ವಾತಂತ್ರ್ಯದ ಹಬ್ಬವಾಗಿದೆ. ಫ್ರೀಡಂ ಹಬ್ಬವು ಸ್ವಾತಂತ್ರ್ಯ ದಿನಾಚರಣೆಯನ್ನು ಕೇವಲ ಸರಕಾರದ ಔಪಚಾರಿಕ ಕಾರ್ಯಕ್ರಮವಾಗಿರಿಸದೆ, ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ವೈವಿಧ್ಯತೆ ಮತ್ತು ಸಂಸ್ಕೃತಿಯ ದಿನಪೂರ್ತಿ ಸಾರ್ವಜನಿಕ ಸಂಭ್ರಮಾಚರಣೆಯನ್ನಾಗಿ ಪರಿವರ್ತಿಸಲಿದೆ. ಫ್ರೀಡಂ ಹಬ್ಬವು ಸರಕಾರಿ ಕಾರ್ಯಕ್ರಮವಲ್ಲ; ಇದು ಬೆಂಗಳೂರಿನ ಜನರು ಒಟ್ಟಾಗಿ ಆಚರಿಸುವ ಹಬ್ಬವಾಗಿದೆ,’’ ಎಂದು ಕೃಷ್ಣ ಬೈರೇಗೌಡ ಅವರು ಹೇಳಿದ್ದರು.
ವಿಧಾನಸೌಧ ಮೆಟ್ಟಿಲುಗಳ ಮೇಲೆ ಹಬ್ಬ
‘‘ಫ್ರೀಡಂ ಹಬ್ಬವು ವಿಧಾನಸೌಧವನ್ನು ಭಾರತದ ‘ವಿವಿಧತೆಯಲ್ಲಿ ಏಕತೆ’ಯ ಜೀವಂತ ವೇದಿಕೆಯನ್ನಾಗಿ ಮಾಡಲಿದೆ. ಈ ಹಬ್ಬವು ಕುಟುಂಬಗಳು, ಮಕ್ಕಳು, ಕಲಾವಿದರು, ಸಾಂಸ್ಕೃತಿಕ ಸಂಸ್ಥೆಗಳು ಹಾಗೂ ಸಮುದಾಯಗಳನ್ನು ಸ್ವಾತಂತ್ರ್ಯ ಜಂಟಿ ಸಂಭ್ರಮಾಚರಣೆಯಲ್ಲಿ ಒಂದಾಗಲು ಆಹ್ವಾನಿಸುತ್ತದೆ. ಈ ಆಚರಣೆಯನ್ನು ಸಾರ್ವಜನಿಕರ ಹಬ್ಬವಾಗಿ ರೂಪಿಸಿ, ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಲಾಗುತ್ತಿದೆ. ಬೆಳಗ್ಗೆ 11 ಗಂಟೆಗೆ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ನಡೆಯುವ ಅಧಿಕೃತ ಸ್ವಾತಂತ್ರ್ಯ ದಿನಾಚರಣೆ ನಂತರ ಶುರುವಾಗಿ ರಾತ್ರಿ 10 ಗಂಟೆವರೆಗೆ ಮುಂದುವರಿಯಲಿದೆ. ಈ ವೇಳೆ ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳು ವರ್ಣರಂಜಿತ ಸಾಂಸ್ಕೃತಿಕ ಕಾರಿಡಾರ್‌ಗಳಾಗಿ ಬದಲಾಗಲಿವೆ,’’ ಎಂದು ಮಾಹಿತಿ ಒದಗಿಸಿದ್ದರು.
40 ತುಕಡಿಗಳಿಂದ ಇಂಡಿಯಾ ಪರೇಡ್
‘‘ಸುಮಾರು 40 ತುಕಡಿಗಳನ್ನು ಒಳಗೊಂಡ ವರ್ಣರಂಜಿತ ‘ಇಂಡಿಯಾ ಪರೇಡ್’, ಸ್ವಾತಂತ್ರ್ಯ ಚಳವಳಿಯ ‘ಲಿವಿಂಗ್ ಮ್ಯೂಸಿಯಂ’, ಸ್ವಾತಂತ್ರ್ಯ ಸಂಗ್ರಾಮಕ್ಕೆ ರಾಜ್ಯದ ಕೊಡುಗೆ ಬಿಂಬಿಸುವ ಜಿಲ್ಲಾಆಧಾರಿತ ಪೆವಿಲಿಯನ್‌ಗಳು, ಸಂವಿಧಾನ ಚೌಕ, ಮಕ್ಕಳ ಕಲಿಕೆ ಮತ್ತು ಚಟುವಟಿಕೆ ವಲಯಗಳು, ವಿಧಾನಸೌಧದ ಮಾರ್ಗದರ್ಶಿತ ಪ್ರವಾಸಗಳು, 200 ಅಡಿಯ ಸಾರ್ವಜನಿಕ ಕಲಾ ಗೋಡೆ, ಸೋಲ್ ಸಂತೆಯ ಮಳಿಗೆಗಳು, ಸಂಜೆಯ ಸಂಗೀಯ ಕಛೇರಿ ಹಾಗೂ ಪಟಾಕಿಯ ಬಾಣ-ಬಿರುಸುಗಳ ಪ್ರದರ್ಶನವಿರಲಿದೆ,’’ ಎಂದು ಹೇಳಿಕೆ ನೀಡಿದ್ದರು.
ಮಕ್ಕಳಿಗಾಗಿ ವಿಧಾನಸೌಧ
‘‘ಮಕ್ಕಳು ಈ ಆಚರಣೆಯ ಕೇಂದ್ರ ಬಿಂದುವಾಗಲಿದ್ದಾರೆ. ಅನೇಕ ಮಕ್ಕಳಿಗೆ ಭವ್ಯವಾದ ವಿಧಾನಸೌಧದ ಒಳಗೆ ಹೆಜ್ಜೆ ಹಾಕುವ ಅವಕಾಶ ಸಿಗಲಿದೆ. ನಾವು ನಮ್ಮ ಮಕ್ಕಳಿಗೆ ವಿಧಾನಸೌಧದ ಬಾಗಿಲುಗಳನ್ನು ತೆರೆಯುತ್ತಿದ್ದೇವೆ. ಆ.15ರಂದು ಆ ಬಾಗಿಲುಗಳ ಮೂಲಕ ನಡೆದು ಬರುವ ಪ್ರತಿಯೊಂದು ಮಗುವೂ ಜೀವಮಾನವಿಡೀ ನೆನಪಿನಲ್ಲಿಟ್ಟುಕೊಂಡು ಮನೆಗೆ ಹಿಂದಿರುಗಬೇಕೆಂಬುದು ನನ್ನ ಆಸೆ. ಪ್ರಜಾಪ್ರಭುತ್ವವು ಮಕ್ಕಳು ಪಠ್ಯಪುಸ್ತಕಗಳಲ್ಲಿಮಾತ್ರ ಓದುವ ವಿಷಯವಾಗಿ ಉಳಿಯಬಾರದು; ಅದು ಜೀವಂತವಾಗುವ ಸಂಸ್ಥೆಯಲ್ಲೇ ಅವರು ಅದನ್ನು ಅನುಭವಿಸಬೇಕು,’’ ಎಂದು ಆಶಯ ವ್ಯಕ್ತಪಡಿಸಿದ್ದರು.
‘‘ಮಾರ್ಗದರ್ಶಿತ ಪ್ರವಾಸಗಳ ಜತೆಗೆ ‘ಮಕ್ಕಳ ಮೇಳ’, ಕಲಾಕಾರರು ಸ್ವಾತಂತ್ರ್ಯ ಹೋರಾಟಗಾರರನ್ನು ಜೀವಂತಗೊಳಿಸುವ ‘ಮಕ್ಕಳ ಫ್ರೀಡಂ ವಿಲೇಜ್’, ಸಂವಾದಾತ್ಮಕ ಕಲಿಕೆಯ ಆಟಗಳು, ಕಥೆ ಹೇಳುವಿಕೆ ಮತ್ತು ಕರಕುಶಲ ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಈ ದಿನವನ್ನು ಶೈಕ್ಷಣಿಕ ಹಾಗೂ ಆನಂದದಾಯಕವಾಗಿಸಲು ವಿನ್ಯಾಸಗೊಳಿಸಲಾಗುತ್ತಿದೆ,’’ ಎಂದು ಮಾಹಿತಿ ನೀಡಿದ್ದರು.
‘‘ಬ್ಯಾರಿಕೇಡ್‌ಗಳ ಹಿಂದೆ ನಿಂತು ಅಧಿಕೃತ ಸಮಾರಂಭಗಳನ್ನು ವೀಕ್ಷಿಸುವ ಬದಲಿಗೆ, ನಾಗರಿಕರು ಸ್ವತಃ ಕಲಾವಿದರಾಗಿ, ಸ್ವಯಂಸೇವಕರಾಗಿ, ಸಾಂಸ್ಕೃತಿಕ ರಾಯಭಾರಿಗಳಾಗಿ ಪ್ರಮುಖ ವೇದಿಕೆಯನ್ನು ಪಡೆದುಕೊಳ್ಳಲಿದ್ದಾರೆ. ಜಾನಪದ ಪ್ರದರ್ಶನಗಳು, ಸಾಂಪ್ರದಾಯಿಕ ಸಂಗೀತ, ಸಮುದಾಯದ ಮೆರವಣಿಗೆಗಳು ಮತ್ತು ಸಾಂಸ್ಕೃತಿಕ ಪ್ರಸ್ತುತಿಗಳು ವಿಧಾನಸೌಧದ ಸುತ್ತಮುತ್ತಲಿನ ರಸ್ತೆಗಳನ್ನು ವರ್ಣರಂಜಿತ ಸಾಂಸ್ಕೃತಿಕ ಕಾರಿಡಾರ್ ಆಗಿ ಪರಿವರ್ತಿಸಲಾಗುತ್ತಿದೆ,’’ ಎಂದು ತಿಳಿಸಿದ್ದರು.




