ಬೆಂಗಳೂರು; ಸಮಾಜ ಕಲ್ಯಾಣ ಇಲಾಖೆಯು ನಡೆಸುತ್ತಿರುವ ಹಾಸ್ಟೆಲ್‌ಗಳಿಗೆ ಅರೆ ಸ್ವಯಂಚಾಲಿತ ಚಪಾತಿ ತಯಾರಿಸುವ ಯಂತ್ರಗಳ ಪೂರೈಕೆಗೆ ಆದೇಶ ನೀಡುವಾಗ ಮಾರುಕಟ್ಟೆ ಬೆಲೆಯನ್ನು ಖಚಿತಪಡಿಸಿಕೊಳ್ಳದ ಕಾರಣ ಕಿಯೋನಿಕ್ಸ್‌ಗೆ 14.04 ಕೋಟಿ ರು. ಗಳ ಅನಗತ್ಯ ಲಾಭ ಮಾಡಿಕೊಟ್ಟಿರುವ ಪ್ರಕರಣದಲ್ಲಿ ಕಿಯೋನಿಕ್ಸ್ ಸಂಸ್ಥೆಯೇ ಜವಾಬ್ದಾರಿಯಾಗಿದೆ. ಇದಕ್ಕೆ ಸಮಾಜ ಕಲ್ಯಾಣ ಇಲಾಖೆಯು ಹೊಣೆಯಲ್ಲ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಖುದ್ದು ಇಲಾಖೆಯೇ ವರದಿ ನೀಡಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ಹಾಸ್ಟೆಲ್‌ಗಳಿಗೆ ಚಪಾತಿ ತಯಾರಿಸುವ ಯಂತ್ರಗಳ ಖರೀದಿಯಲ್ಲಿ ನಡೆದಿರುವ ಅಕ್ರಮವನ್ನು ಸಿಎಜಿ ಹೊರಗೆಳೆದಿತ್ತು. ʻದುಪ್ಪಟ್ಟು ದರದಲ್ಲಿ ಯಂತ್ರಗಳನ್ನು ಖರೀದಿಸಿರುವುದೇಕೆ?ʼ ಎಂದು ಸಿಎಜಿಯ ಪ್ರಶ್ನೆಗೆ ಈಗಿನ ಕಾಂಗ್ರೆಸ್ ಸರ್ಕಾರವೂ ಸಹ ಸಕಾಲದಲ್ಲಿ ಯಾವುದೇ ಉತ್ತರವನ್ನೂ ನೀಡಿರಲಿಲ್ಲ. ಆದರೀಗ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಇಲಾಖೆಯು ಇದೀಗ ವರದಿ ನೀಡಿದೆ. ಅಲ್ಲದೇ ಈ ಕಂಡಿಕೆಯನ್ನು ಕೈಬಿಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಯನ್ನು ಕೋರಿದೆ.
ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳಲ್ಲಿ 2025ರ ಆಗಸ್ಟ್ 21ರಂದು ಮಂಡನೆಯಾಗಿರುವ ಸಿಎಜಿ ವರದಿಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಕಿಯೋನಿಕ್ಸ್ ಸಂಸ್ಥೆಯು ಹೇಗೆಲ್ಲಾ ಅನಗತ್ಯ ಲಾಭ ಮಾಡಿಕೊಳ್ಳಲು ದಾರಿ ಮಾಡಿಕೊಟ್ಟಿದೆ ಎಂದು ವಿವರಿಸಿತ್ತು. ಈ ಕುರಿತು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಪರಿಶೀಲನೆಗೆ ಕೈಗೆತ್ತಿಕೊಂಡಿತ್ತು. ಈ ಸಂಬಂಧ ವಿವರಣೆ ಕೋರಿ ಪತ್ರ ಬರೆದಿತ್ತು. ಈ ಪತ್ರವನ್ನಾಧರಿಸಿ ಇಲಾಖೆಯು ಸಮಿತಿಗೆ ವಿವರಣೆ ನೀಡಿದೆ. ಈ ವಿವರಣೆಗೆ ಸಚಿವರಾಗಿದ್ದ ಡಾ ಎಚ್ ಸಿ ಮಹದೇವಪ್ಪ ಅವರೂ ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.
ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಸಿಎಜಿ ವರದಿಯಲ್ಲೇನಿತ್ತು?
ವಿದ್ಯಾರ್ಥಿ ನಿಲಯಗಳಲ್ಲಿ ನೈರ್ಮಲ್ಯ ಕಾಪಾಡಲು ಮತ್ತು ಅಡುಗೆಯವರ ಕೊರತೆಯನ್ನು ನೀಗಿಸಲು ಸಮಾಜ ಕಲ್ಯಾಣ ಇಲಾಖೆಯು ರಾಜ್ಯದ ವಿವಿಧ ಜಿಲ್ಲೆಗಳಿಗೆ ಅರೆ ಸ್ವಯಂ ಚಾಲಿತ ಚಪಾತಿ ತಯಾರಿಸುವ ಯಂತ್ರಗಳನ್ನು ಖರೀದಿಸಲು ಪ್ರಸ್ತಾವಿಸಿತ್ತು. 2019 ಮತ್ತು 2021ರ ನಡುವೆ ಕಿಯೋನಿಕ್ಸ್‌ಗೆ ಇದರ ಗುತ್ತಿಗೆ ನೀಡಲಾಗಿತ್ತು.
ಅರೆ ಸ್ವಯಂ ಚಾಲಿತ ಚಪಾತಿ ತಯಾರಿಸುವ ಯಂತ್ರಗಳನ್ನು ಖರೀದಿಸಲು ಸಮಾಜ ಕಲ್ಯಾಣ ಇಲಾಖೆಯು ಟೆಂಡರ್ ಪ್ರಕ್ರಿಯೆಯನ್ನೇ ನಡೆಸಲಿಲ್ಲ. ಮತ್ತು ಕೆಟಿಪಿಪಿ ಕಾಯ್ದೆಯ 4 ಜಿ ಅಡಿಯಲ್ಲಿನ ವಿನಾಯಿತಿಯನ್ನೂ ಖಚಿತಪಡಿಸಿಕೊಳ್ಳಲಿಲ್ಲ. ನೇರವಾಗಿ ಕಿಯೋನಿಕ್ಸ್‌ಗೆ ಆದೇಶ ನೀಡಿತು. ಇದರ ಪರಿಣಾಮ, ಮುಕ್ತ ಟೆಂಡರ್ ಮೂಲಕ ಸ್ಪರ್ಧಾತ್ಮಕ ದರಗಳನ್ನು ಪಡೆಯುವ ಅವಕಾಶವನ್ನು ಇಲಾಖೆಯು ಕಳೆದುಕೊಂಡಿತು ಎಂದು ಸಿಎಜಿ ವರದಿಯಲ್ಲಿ ವಿವರಿಸಿತ್ತು.
ಮಾರುಕಟ್ಟೆ ದರ ಖಚಿತಪಡಿಸಿಕೊಳ್ಳಲಿಲ್ಲವೇಕೆ?
ಚಪಾತಿ ತಯಾರಿಸುವ ಯಂತ್ರಗಳು ವಿವಿಧ ನಿರ್ದಿಷ್ಟತೆಗಳೊಂದಿಗೆ ಮುಕ್ತ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಲಭ್ಯವಿರುತ್ತವೆ. ಖರೀದಿದಾರರು ಮತ್ತು ತಯಾರಕರ ಜಾಲತಾಣಗಳಿಂದ ವಿವಿಧ ಮಾದರಿಗಳನ್ನು ಸುಲಭವಾಗಿ ನೋಡಬಹುದು. ಮತ್ತು ಮಧ್ಯವರ್ತಿಗಳ ಪಾತ್ರವಿಲ್ಲದೆಯೇ ನೇರವಾಗಿ ವಸ್ತುಗಳನ್ನು ಖರೀದಿಸಬಹುದು. ಅಷ್ಟೇ ಅಲ್ಲ, ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯವು ಇ-ಕಾಮರ್ಸ್ ಪೋರ್ಟಲ್ ಮತ್ತು ಸರ್ಕಾರಿ ಇ-ಮಾರುಕಟ್ಟೆ (ಜೆಮ್) ಯನ್ನು ಆರಂಭಿಸಿತ್ತು. ಅದರಲ್ಲಿ ವಿವಿಧ ಮಾರಾಟಗಾರರಿಂದ 2000ಕ್ಕೂ ಹೆಚ್ಚು ಚಪಾತಿ ತಯಾರಿಸುವ ಯಂತ್ರಗಳು ಲಭ್ಯವಿದ್ದವು.
ಇಷ್ಟೆಲ್ಲಾ ಆಯ್ಕೆಗಳನ್ನು ಹೊಂದಿದ್ದರೂ ಸಹ ಸಮಾಜ ಕಲ್ಯಾಣ ಇಲಾಖೆಯು ಮೂಲ ಉಪಕರಣ ತಯಾರಕರಿಂದಾಗಲೀ ಅಥವಾ ಚಪಾತಿ ತಯಾರಿಸುವ ಯಂತ್ರಗಳಿಗೆ ಚಾಲ್ತಿಯಲ್ಲಿರುವ ಮಾರುಕಟ್ಟೆ ದರಗಳನ್ನು ನಿರ್ಧರಿಸಲಿಲ್ಲ. ಜೆಮ್ ಪೋರ್ಟಲ್‌ನಲ್ಲಿಯೂ ಪರಿಶೀಲನೆ ಮಾಡುವ ಯಾವುದೇ ಪ್ರಯತ್ನವನ್ನೂ ಮಾಡಲಿಲ್ಲ. ಬದಲಿಗೆ ನೇರವಾಗಿ ಕಿಯೋನಿಕ್ಸ್‌ಗೆ 4 ಜಿ ವಿನಾಯಿತಿ ನೀಡಿ ಚಪಾತಿ ತಯಾರಿಸುವ ಯಂತ್ರಗಳನ್ನು ಏಕಪಕ್ಷೀಯವಾಗಿ ಖರೀದಿಸಿತು ಎಂದು ಸಿಎಜಿಯು ವರದಿಯಲ್ಲಿ ವಿವರಿಸಿತ್ತು.
ಈ ಖರೀದಿ ಅವಧಿಯಲ್ಲಿನ ಆಂತರಿಕ ಪತ್ರವ್ಯವಹಾರಗಳನ್ನೂ ಸಿಎಜಿಯು ಪರಿಶೀಲಿಸಿತ್ತು. ಸಮಾಜ ಕಲ್ಯಾಣ ಇಲಾಖೆಯ ಗೌರಿಬಿದನೂರಿನ ಸಹಾಯಕ ನಿರ್ದೇಶಕರು, ಚಿಕ್ಕಬಳ್ಳಾಪುರ ಜಿಲ್ಲೆಯ ಉಪ ನಿರ್ದೇಶಕರಿಗೆ ಕಿಯೋನಿಕ್ಸ್‌ಗೆ ಪೂರೈಸಿದ್ದ ಚಪಾತಿ ತಯಾರಿಸುವ ಯಂತ್ರಗಳ ದರಗಳ ಕುರಿತು ಮಾಹಿತಿ ನೀಡಿದ್ದರು. ಇದರ ಪ್ರಕಾರ ಪತ್ರಿ ಯೂನಿಟ್‌ಗೆ ಕೇವಲ 66,200 ರು.ಗಳಷ್ಟಿದೆ ಎಂದು ತಿಳಿಸಿದ್ದರು.
ಮಾರುಕಟ್ಟೆ ದರ ಮತ್ತು ಕಿಯೋನಿಕ್ಸ್ ಉಲ್ಲೇಖಿಸಿದ್ದ ದರದ ನಡುವೆ ಭಾರೀ ಅಂತರವಿತ್ತು. ಆದರೂ ಸಹ ಸಮಾಜ ಕಲ್ಯಾಣ ಇಲಾಖೆಯಿಂದ ಏಜೆನ್ಸಿಯೊಂದಿಗೆ ಯಾವುದೇ ಪತ್ರ ವ್ಯವಹಾರವನ್ನು ನಡೆಸಿರಲಿಲ್ಲ. ಇದಲ್ಲದೇ ಖರೀದಿ ಆದೇಶ ಮತ್ತು ಇದಕ್ಕೆ ಸಂಬಂಧಿಸಿದ ಕಡತ ಮತ್ತು ಜಿಎಸ್‌ಟಿ ಇನ್‌ವಾಯ್ಸ್‌ಗಳನ್ನೂ ಸಹ ಸಿಎಜಿಯು ಪರಿಶೀಲಿಸಿದೆ. ಇದರ ಪ್ರಕಾರ ಉಪಕರಣಗಳ ನಿಜವಾದ ಬೆಲೆಯು ಕಿಯೋನಿಕ್ಸ್ ನೀಡಿದ 3,83,500 ರು. ಬದಲಾಗಿ ಕೇವಲ 1,29,800 ರು ಗಳಾಗಿತ್ತು ಎಂದು ಸಿಎಜಿಯು ಪತ್ತೆ ಹಚ್ಚಿತ್ತು.
‘ಇಲಾಖೆಯು ಯಾವುದೇ ಪರೀಕ್ಷೆ, ಮಾರುಕಟ್ಟೆ ಸಮೀಕ್ಷೆಯಿಲ್ಲದೇ ಪ್ರಸ್ತಾವಿಸಿದ ಮಾದರಿಗಳಿಗೆ ಕಿಯೋನಿಕ್ಸ್ ಉಲ್ಲೇಖಿಸಿದ ದರಗಳನ್ನು ಅವಲಂಬಿಸಿತ್ತು. 550 ಯಂತ್ರಗಳನ್ನು ಪೂರೈಸಲು 20.92 ಕೋಟಿ ರು.ಗಳ ಗುತ್ತಿಗೆಯನ್ನು ನೀಡಿತು. ಇದರ ಪರಿಣಾಮವಾಗಿ ಚಪಾತಿ ತಯಾರಿಸುವ ಯಂತ್ರಗಳನ್ನು ಹೆಚ್ಚಿನ ದರದಲ್ಲಿ ಖರೀದಿಸುವ ಮೂಲಕ ಕಿಯೋನಿಕ್ಸ್‌ಗೆ 14.04 ಕೋಟಿ ಅನಗತ್ಯ ಲಾಭವನ್ನು ನೀಡಿದಂತಾಗಿದೆ. ಹೀಗಾಗಿ ಸರ್ಕಾರವು ತಕ್ಷಣ ತನಿಖೆಯನ್ನು ಪ್ರಾರಂಭಿಸಬೇಕು,’ ಎಂದು ವರದಿಯಲ್ಲಿ ಶಿಫಾರಸ್ಸು ಮಾಡಿತ್ತು.
ಬೆಂಗಳೂರು ಜಿಲ್ಲೆಯ ಜಂಟಿ ನಿರ್ದೇಶಕರು 26 ಯಂತ್ರಗಳ ಪೂರೈಕೆಗೆ ಆದೇಶ ನೀಡಿದ್ದರು. ಪ್ರತಿ ಯಂತ್ರಕ್ಕೆ 3,83,500 ರು. ಪಾವತಿಸಲಾಗಿತ್ತು. ಆದರೆ ಮಾರುಕಟ್ಟೆಯಲ್ಲಿ ಪ್ರತಿ ಯಂತ್ರಕ್ಕೆ 1,29,800 ರು ಗಳಿತ್ತು. ಹೀಗಾಗಿ ಪ್ರತಿ ಯಂತ್ರದ ದರದ ಮಧ್ಯೆ 2,53,700 ರು ವ್ಯತ್ಯಾಸವಿತ್ತು. ಇದರಿಂದ ಕಿಯೋನಿಕ್ಸ್‌ಗೆ 65,96,200 ರು ಅನಗತ್ಯ ಲಾಭವಾಗಿತ್ತು. ಅದೇ ರೀತಿ ಕ್ರೈಸ್‌ನ ಕಾರ್ಯನಿರ್ವಾಹಕ ನಿರ್ದೇಶಕರು 252 ಯಂತ್ರಗಳನ್ನು ಪೂರೈಕೆ ಮಾಡಲು ಕಾರ್ಯಾದೇಶ ನೀಡಿದ್ದರು. ಪ್ರತಿ ಯಂತ್ರಕ್ಕೆ 3,95,300 ರು ಪಾವತಿಸಲಾಗಿತ್ತು. ಮಾರುಕಟ್ಟೆಯಲ್ಲಿ 1,29,800 ರು.ಗಳೆಂದು ಈ ಯಂತ್ರಗಳಿಗೆ ದರ ನಿಗದಿಯಾಗಿತ್ತು. ಇಲ್ಲಿಯೂ ಸಹ ಪ್ರತಿ ಯಂತ್ರದ ದರದ ಮಧ್ಯೆ 2,65,500 ರು. ವ್ಯತ್ಯಾಸವಿತ್ತು. ಇದರಿಂದ ಕಿಯೋನಿಕ್ಸ್‌ಗೆ 6,69,06,00 ರು. ಅನಗತ್ಯ ಲಾಭ ಮಾಡಿಕೊಟ್ಟಿತ್ತು.

ಹಾಗೆಯೇ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು 252 ಯಂಂತ್ರ ಖರೀದಿಸಲು ಕಾರ್ಯಾದೇಶ ನೀಡಿದ್ದರು. ಪ್ರತಿ ಯಂತ್ರಕ್ಕೆ 3,95,300 ರು ಪಾವತಿಸಲಾಗಿತ್ತು. ಮಾರುಕಟ್ಟೆಯಲ್ಲಿ ಪ್ರತಿ ಯಂತ್ರಕ್ಕೆ 1,29,800 ರು. ಇತ್ತು. ಇಲ್ಲಿಯೂ 2,65,500 ರು ವ್ಯತ್ಯಾಸವಿತ್ತು. 6,69,06,00 ರು ಗಳನ್ನು ಕಿಯೋನಿಕ್ಸ್‌ಗೆ ಅನಗತ್ಯ ಲಾಭ ಮಾಡಿಕೊಟ್ಟಿತ್ತು.
‘ಕಿಯೋನಿಕ್ಸ್‌ಗೆ ಸರಿಸುಮಾರು 14.04 ಕೋಟಿ ರು.ಗಳನ್ನು ಹೆಚ್ಚುವರಿಯಾಗಿ ಪಾವತಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಕರ್ನಾಟಕ ಆರ್ಥಿಕ ಸಂಹಿತೆ ಅಡಿಯಲ್ಲಿ ನಿಗದಿಪಡಿಸಿದ ಹಣಕಾಸಿನ ಔಚಿತ್ಯವನ್ನು ಅಕ್ಷರಶಃ ಪಾಲಿಸಿದ್ದರೆ ಇದನ್ನು ತಪ್ಪಿಸಬಹುದಿತ್ತು,’ ಎಂದು ಸಿಎಜಿ ವರದಿಯು ಅಭಿಪ್ರಾಯಿಸಿತ್ತು.
ಇನ್ನು ಅರೆ ಸ್ವಯಂ ಚಾಲಿತ ಚಪಾತಿ ತಯಾರಿಸುವ ಯಂತ್ರಗಳಿಗೆ ಆದೇಶಗಳನ್ನು ನೀಡುವ ಮೊದಲು ಸರಿಯಾದ ಮೌಲ್ಯಮಾಪನವನ್ನೇ ಮಾಡಿರಲಿಲ್ಲ. ಯಂತ್ರಗಳನ್ನು ಖರೀದಿಸಲು ಹಾಸ್ಟೆಲ್‌ಗಳಿಂದ ಬೇಡಿಕೆ ಪತ್ರ ಪಡೆದಿರಲಿಲ್ಲ. ಮತ್ತು ಖರೀದಿ ಆದೇಶಗಳನ್ನು ನೀಡುವ ಮೊದಲು ನಡೆಸಿದ್ದ ಮೌಲ್ಯಮಾಪನಕ್ಕೆ ಬೆಂಬಲವಾಗಿ ದಾಖಲೆಗಳನ್ನು ಇಲಾಖೆಗಳು ಸಿಎಜಿಗೆ ಒದಗಿಸಿರಲಿಲ್ಲ.
ಈ ಯಂತ್ರಗಳನ್ನು ಹಾಸ್ಟೆಲ್‌ಗಳು ಬಳಸುತ್ತಿವೆಯೇ ಎಂದು ಸಿಎಜಿಯು ಖುದ್ದು ಪರಿಶೀಲಿಸಿತ್ತು. ಮಂಡ್ಯ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಹಾಸ್ಟೆಲ್‌ಗಳನ್ನು ತಪಾಸಣೆ ನಡೆಸಿತ್ತು. ಈ ಎರಡು ಜಿಲ್ಲೆಗಳ 37 ಹಾಸ್ಟೆಲ್‌ಗಳಲ್ಲಿ ಇಲಾಖೆ ಅಧಿಕಾರಿಗಳನ್ನೂ ಒಳಗೊಂಡ ಜಂಟಿ ಭೌತಿಕ ಪರಿಶೀಲನೆಯನ್ನು ನಡೆಸಿತ್ತು.
ತಪಾಸಣೆಯಲ್ಲಿ ಕಂಡಿದ್ದೇನು?
ಕೇವಲ ಮೂರು ಹಾಸ್ಟೆಲ್‌ಗಳು (ಶೇ.8) ಮಾತ್ರ ಚಪಾತಿ ತಯಾರಿಸುವ ಯಂತ್ರಗಳನ್ನು ಬಳಸುತ್ತಿದ್ದವು. 18 ಹಾಸ್ಟೆಲ್‌ಗಳು (ಶೇ.49) ಯಂತ್ರಗಳನ್ನು ಬಳಸುತ್ತಲೇ ಇರಲಿಲ್ಲ. ಮತ್ತು ಅವುಗಳನ್ನು ಸ್ಟೋರ್ ರೂಂ, ಅಡುಗೆ ಮನೆಗಳಲ್ಲಿ ಎಲ್ಲೆಂದರಲ್ಲಿ ಎಸೆಯಲಾಗಿತ್ತು. ಇದರಿಂದಾಗಿ 0.71 ಕೋಟಿಯಷ್ಟು ವೆಚ್ಚವು ನಿಷ್ಫಲವಾಗಿದೆ. ಉಳಿದ 16 ಹಾಸ್ಟೆಲ್‌ಗಳಲ್ಲಿ (ಶೇ.43) ಚಪಾತಿ ಮಾಡಲು ನಿಯಮಿತವಾಗಿ ತವಾ ಬಳಸುತ್ತಿದ್ದವು. ಚಪಾತಿ ಯಂತ್ರದ ಚಪಾತಿ ಬೇಯಿಸುವ ಘಟಕವು ನಿಷ್ಕ್ರೀಯವಾಗಿತ್ತು.
‘ಆದ್ದರಿಂದ ಖರೀದಿಗಾಗಿ ಗಮನಾರ್ಹ ಮೊತ್ತವನ್ನು ಖರ್ಚು ಮಾಡಿದರೂ ಆಧುನೀಕರಣದ ಮತ್ತು ಹಾಸ್ಟೆಲ್ ಅಡುಗೆ ಮನೆಗಳಲ್ಲಿ ಸಿಬ್ಬಂದಿ ಕೊರತೆಯನ್ನು ನಿವಾರಿಸುವ ಮುಖ್ಯ ಉದ್ದೇಶವೇ ಈಡೇರಲಿಲ್ಲ,’ ಎಂದು ಸಿಎಜಿ ವರದಿಯಲ್ಲಿ ಅಭಿಪ್ರಾಯಪಟ್ಟಿತ್ತು. ಆಡಳಿತ ಸುಧಾರಣೆ ಆಯೋಗವು ಸಹ ಹಾಸ್ಟೆಲ್‌ಗಳ ಅಡುಗೆ ಮನೆಗಳನ್ನು ಸ್ವಯಂ ಚಾಲಿತಗೊಳಿಸಲು ಮಾತ್ರ ಶಿಫಾರಸ್ಸು ಮಾಡಿತ್ತು. ಆದ್ದರಿಂದ ಪ್ರತಿ ಜಿಲ್ಲೆಗೆ 1 ಕೋಟಿಯನ್ನು ಹಂಚಿಕೆಯನ್ನು ಸೀಮಿತಗೊಳಿಸಿ ಖರೀದಿ ಮಾಡಲಾಗಿದೆ ಎಂದು 2024ರ ಆಗಸ್ಟ್‌ನಲ್ಲಿ ಸರ್ಕಾರವು ಉತ್ತರಿಸಿತ್ತು.
‘ಇದು ಕೆಎಫ್‌ಸಿಯ ನಿಬಂಧನೆಗಳನ್ನು ಉಲ್ಲಂಘಿಸಿ ಗಮನಾರ್ಹ ಆರ್ಥಿಕ ನಷ್ಟ ಮತ್ತು ಇಲಾಖೆಗೆ ಸ್ಪರ್ಧಾತ್ಮಕ ದರದ ಅನುಕೂಲದ ಕೊರತೆಗೆ ಕಾರಣವಾದ ಯಂತ್ರಗಳ ಖರೀದಿಗೆ ಅತಿಯಾದ ವೆಚ್ಚದ ಹಿಂದಿನ ಕಾರಣದ ಬಗ್ಗೆ ಉತ್ತರವು ಮೌನವಾಗಿದೆ,’ ಎಂದು ಸಿಎಜಿಯು ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು.
ಅಲ್ಲದೇ ಅತಿಯಾದ ಬೆಲೆಗೆ ಯಂತ್ರಗಳನ್ನು ಖರೀದಿಸುವ ಬಗ್ಗೆ ಸರ್ಕಾರವು ಸಮಗ್ರ ತನಿಖೆ ನಡೆಸಬೇಕು. ಹಾಗೆಯೇ ಅವಶ್ಯಕತೆಗಳ ಮರು ಮೌಲ್ಯಮಾಪನ ನಡೆಸಬೇಕುಕ. ಯಂತ್ರಗಳನ್ನು ಅರ್ಹ ಹಾಸ್ಟೆಲ್‌ಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿಎಜಿ ವರದಿಯು ಶಿಫಾರಸ್ಸು ಮಾಡಿತ್ತು.
ಸಿಎಜಿ ನೀಡಿದ್ದ ವರದಿ ಆಧರಿಸಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಇಲಾಖೆಯಿಂದ ಹೆಚ್ಚಿನ ವಿವರಣೆ ಬಯಸಿತ್ತು. ಈ ಕುರಿತು ಸಮಾಜ ಕಲ್ಯಾಣ ಇಲಾಖೆಯು 2024 ಅಕ್ಟೋಬರ್ 28ರಂದೇ ಉತ್ತರ ನೀಡಿತ್ತು. ಇದೇ ಉತ್ತರವನ್ನು ಮುಂದುವರೆಸಿದ್ದ ಇಲಾಖೆಯು 2026ರ ಜನವರಿ ಅಂತ್ಯದವರೆಗಿನ ಮಾಹಿತಿಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ನೀಡಿದೆ.
ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ನೀಡಿದ್ದ ಉತ್ತರದಲ್ಲೇನಿದೆ?
ರಾಜ್ಯದ 14 ಜಿಲ್ಲೆಗಳಲ್ಲಿನ 252 ವಿದ್ಯಾರ್ಥಿ ನಿಲಯಗಳಿಗೆ ತಲಾ ಒಂದೊಂದರಂತೆ 252 ಚಪಾತಿ ತಯಾರಿಸುವ ಯಂತ್ರವನ್ನು ಖರೀದಿಸಲು ಇಲಾಖೆಯು ಅನುದಾನ ಬಿಡುಗಡೆ ಮಾಡಿತ್ತು. ಜಿಲ್ಲಾ ಮಟ್ಟದಲ್ಲಿ ಸರಬರಾಜು ಆದೇಶ ಪಡೆದಿದ್ದ ಕಿಯೋನಿಕ್ಸ್ ಯಂತ್ರಗಳನ್ನು ಪೂರೈಕೆ ಮಾಡಿತ್ತು. ಪೂರೈಕೆ ಮಾಡಿದ್ದ ಯಂತ್ರಗಳ ಗುಣಮಟ್ಟವನ್ನು ಪರಿಶೀಲನೆ ಮಾಡಿ ದಾಸ್ತಾನು ತೆಗೆದುಕೊಳ್ಳಲಾಗಿತ್ತು. ಈಗಾಗಲೇ ವಿದ್ಯಾರ್ಥಿ ನಿಲಯಗಳಿಗೆ ಪೂರೈಕೆ ಮಾಡಿದ ಚಪಾತಿ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲೆಗಳಿಂದ ವರದಿ ಸ್ವೀಕರಿಸಿದೆ. ಅಲ್ಲದೆ ಎಲ್ಲಾ ಜಿಲ್ಲೆಗಳಿಂದ ಈ ಬಗ್ಗೆ ಮೂರನೇ ಪಾರ್ಟಿ ತಪಾಸಣೆಯನ್ನು ತಾಂತ್ರಿಕ ಪರಿಣಿತರಿಂದ ತಪಾಸಣೆಗೆ ಒಳಪಡಿಸಿದೆ ಎಂದು ಇಲಾಖೆಯು ವಿವರಿಸಿರುವುದು ತಿಳಿದು ಬಂದಿದೆ.

ಕಲ್ಬುರ್ಗಿಯಲ್ಲಿ 25 ಯಂತ್ರಗಳನ್ನು ಖರೀದಿಸಿದ್ದರ ಪೈಕಿ 15 ದುರಸ್ತಿಯಲ್ಲಿದ್ದವು. ತುಮಕೂರು ಜಿಲ್ಲೆಯಲ್ಲಿ 25 ಉಪಕರಣದ ಪೈಕಿ 14 ದುರಸ್ತಿಯಲ್ಲಿದ್ದವು. ಮೈಸೂರಿನಲ್ಲಿ 22, ಬಳ್ಳಾರಿಯಲ್ಲಿ 18, ಚಿಕ್ಕಬಳ್ಳಾಪುರದಲ್ಲಿ 03, ಚಿತ್ರದುರ್ಗದಲ್ಲಿ 12, ಚಾಮರಾಜನಗರ 10, ಹಾಸನ 6, ಉಡುಪಿ 03, ಬೆಳಗಾವಿ 21, ಬಾಗಲಕೋಟೆ 06, ಹಾವೇರಿ 09 ಉಪಕರಣಗಳು ಸೇರಿ ಒಟ್ಟಾರೆ 134 ಉಪಕರಣಗಳು ದುರಸ್ತಿಯಲ್ಲಿದ್ದವು. ಈ ಜಿಲ್ಲೆಗಳಲ್ಲಿ 3 ವರ್ಷ ಬಳಕೆ ಮಾಡಿದ ನಂತರ ದುರಸ್ತಿಯಾಗಿರುತ್ತದೆ ಎಂದು ಸಿಎಜಿಗೆ ವರದಿ ನೀಡಿದೆ.

ಚಪಾತಿ ಉಪಕರಣಗಳಿಗೆ ಜಿಎಸ್‌ಟಿ ಇನ್‌ವಾಯ್ಸ್ ಬಿಲ್‌ಗಳು ಪ್ರತಿ ಯಂತ್ರಕ್ಕೆ 1,29,000 ರು ಗಳಿಗೆ ಪ್ರಸ್ತಾವಿಸಿತ್ತು. ಆದರೆ ಈ ಇನ್‌ವಾಯ್ಸ್‌ಗಳು ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಪಡುತ್ತದೆ ಎಂಬುದರ ಬಗ್ಗೆ ಯಾವುದೇ ದೃಢೀಕರಣ ಇಲ್ಲ. ಅಲ್ಲದೇ ಉಪಕರಣಗಳ ನಿರ್ದಿಷ್ಟತೆಗಳು ಇಲಾಖೆಗೆ ಸರಬರಾಜು ಆಗಿರುವ ನಿರ್ದಿಷ್ಟತೆಗಳಲ್ಲಿನ ವ್ಯತ್ಯಾಸಗಳನ್ನು ಪರಿಶೀಲಿಸಬೇಕಿದೆ. ಜಿಎಸ್‌ಟಿ ಇನ್ ವಾಯ್ಸ್‌ಗಳು ಕಿಯೋನಿಕ್ಸ್‌ಗೆ ಮಾರಾಟಗಾರರು ಒದಗಿಸಿದ್ದಾರೆ. ಇದು ಸಮಾಜ ಕಲ್ಯಾಣ ಇಲಾಖೆಗೆ ಅನ್ವಯಿಸುವುದಿಲ್ಲ ಎಂದು ಇಲಾಖೆಯ ಉತ್ತರಿಸಿದೆ.

ಚಪಾತಿ ಉಪಕರಣಗಳ ಖರೀದಿ ಸಂಬಂಧ ಕಿಯೋನಿಕ್ಸ್ 4 ಜಿ ವಿನಾಯಿತಿ ಪಡೆದಿದೆ. ಈ ಕಾರ್ಯಕ್ರಮಗಳನ್ನು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನಗೊಳಿಸಲು ರಾಜ್ಯವಲಯದಿಂದ ಜಿಲ್ಲೆಗಳಿಗೆ ಅನುದಾನ ಬಿಡುಗಡೆ ಮಾಡಿದೆ. 4 ಜಿ ವಿನಾಯಿತಿ ಪಡೆದಿದ್ದ ಕಿಯೋನಿಕ್ಸ್ ನೀಡಿದ್ದ ದರಗಳನ್ನು ಅಧಿಕೃತವಾಗಿ ಮಾರುಕಟ್ಟೆ ದರಗಳೊಂದಿಗೆ ತುಲನೆ ಮಾಡಲು ಕೆಟಿಪಿಪಿ ನಿಯಮಗಳಲ್ಲಿ ಅವಕಾಶವಿಲ್ಲ. ಹೀಗಾಗಿ ಆನ್ ಲೈನ್‌ನಲ್ಲಿ ಮಾದರಿ ದರಗಳನ್ನು ಪರಿಶೀಲಿಸಿದೆ. 4,25,000 ರು.ಗಳ ಬದಲಿಗೆ 3,50,000 ರು ಗಳಿಗೆ ಸರ್ಕಾರಕ್ಕೆ ಆರ್ಥಿಕ ಪ್ರಸ್ತಾವನೆ ಸಲ್ಲಿಸಿತ್ತು.

ರಾಜ್ಯಮಟ್ಟದಲ್ಲಿ ಮಾರುಕಟ್ಟೆ ದರಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿ ಮಾದರಿ ದರಗಳನ್ನು ಆಧರಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಅದರಂತೆ ಸರ್ಕಾರವು ಆದೇಶ ನೀಡಿದೆ. ಈ ಬಗ್ಗೆ ಮೊದಲನೇ ಹಂತದಲ್ಲಿ ಕಿಯೋನಿಕ್ಸ್ ಸಂಸ್ಥೆಯು ಟೆಂಡರ್ ಮಾಡಿ ಪ್ರಸ್ತಾಪಿತ ದರಗಳನ್ನು ಖಾತ್ರಿಪಡಿಸಿಕೊಂಡು ನಂತರ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು.

ಕಿಯೋನಿಕ್ಸ್ ಸಂಸ್ಥೆಯು ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೇಯಾಗಿದೆ. ಹೀಗಾಗಿ ಇದರಲ್ಲಿನ ದರಗಳ ವ್ಯತ್ಯಾಸಗಳಿಗೆ ಕಿಯೋನಿಕ್ಸ್ ಸಂಸ್ಥೆಯೇ ಜವಾಬ್ದಾರಿಯಾಗಿದೆ. ಸರ್ಕಾರಿ ಆದೇಶದಂತೆ ಕೇಂದ್ರ ಕಚೇರಿಯಿಂದ ಅನುದಾನ ಬಿಡುಗಡೆ ಮಾಡಿದೆ ಎಂದು ಇಲಾಖೆಯು ಸ್ಪಷ್ಟೀಕರಣ ನೀಡಿರುವುದು ತಿಳಿದು ಬಂದಿದೆ.
ಚಪಾತಿ ತಯಾರಿಕೆ ಯಂತ್ರ ಖರೀದಿಯಲ್ಲಿ ಅಕ್ರಮ; 14.04 ಕೋಟಿ ಅನಗತ್ಯ ಲಾಭ, ಸಿಎಜಿಗೂ ಉತ್ತರಿಸದ ಸರ್ಕಾರ
ಸಿಎಜಿ ನೀಡಿದ್ದ ವರದಿ ಆಧರಿಸಿ ದಿ ಫೈಲ್ 2025ರ ಆಗಸ್ಟ್ 21ರಂದೇ ವರದಿ ಪ್ರಕಟಿಸಿತ್ತು.
ವಾಷಿಂಗ್ ಮೆಷಿನ್, ಚಪಾತಿ ಯಂತ್ರ ಖರೀದಿಯಲ್ಲಿ ಅಕ್ರಮ; ಅನಧಿಕೃತ ಏಜೆನ್ಸಿಗೆ 10.59 ಕೋಟಿ ಹೆಚ್ಚುವರಿ ಪಾವತಿ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿನ ವಿದ್ಯಾರ್ಥಿ ನಿಲಯಗಳಲ್ಲಿಯೂ ವಾಷಿಂಗ್ ಮೆಷೀನ್ ಮತ್ತು ಚಪಾತಿ ತಯಾರಿಸುವ ಯಂತ್ರ ಖರೀದಿಯಲ್ಲಿಯೂ ಅಕ್ರಮ ನಡೆದಿದ್ದನ್ನು ಸಿಎಜಿಯು ಬಹಿರಂಗಗೊಳಿಸಿತ್ತು. ಆದರೂ ಈಗಿನ ಕಾಂಗ್ರೆಸ್ ಸರ್ಕಾರವು ಯಾವುದೇ ಕ್ರಮವನ್ನು ವಹಿಸಿರಲಿಲ್ಲ.




