Monday | July 27, 2026 |

ಮಾಜಿ ಸಿಎಂ ಸಿದ್ದರಾಮಯ್ಯ, ಪಾರ್ವತಿ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಆರೋಪ; 2 ವರ್ಷದಲ್ಲಿ 16 ಬಾರಿ ವಿಚಾರಣೆ, ಜುಲೈ 9ಕ್ಕೆ ವಿಚಾರಣೆಗೆ ದಿನಾಂಕ ನಿಗದಿ

ಬೆಂಗಳೂರು;  ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಬದಲಿ ನಿವೇಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಸೇರಿದಂತೆ ಮತ್ತಿತರರ ವಿರುದ್ಧ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ದೂರು ಲೋಕಾಯುಕ್ತದಲ್ಲಿ ಕಳೆದ 2 ವರ್ಷದಿಂದಲೂ ತೆವಳುತ್ತಿದೆ.

ಬದಲಿ ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು  ಬಿಬಿಎಂಪಿಯ ಆಡಳಿತ ಪಕ್ಷದ ಮಾಜಿ ನಾಯಕ ಎನ್‌ ಆರ್‍‌ ರಮೇಶ್‌ ಅವರು ಲೋಕಾಯುಕ್ತಲ್ಲಿ 300ಕ್ಕೂ ಹೆಚ್ಚು ದಾಖಲೆಗಳ ಸಮೇತ 2024ರ ಜುಲೈ 20ರಂದು  ದೂರು ಸಲ್ಲಿಸಿದ್ದರು. ಈ ದೂರು ಆಧರಿಸಿ ಲೋಕಾಯುಕ್ತ ಸಂಸ್ಥೆಯು ಎರಡು  ವರ್ಷದಲ್ಲಿ 16 ಬಾರಿ ಮಾತ್ರ ವಿಚಾರಣೆ ನಡೆಸಿದೆ. ಈ ಪ್ರಕರಣದ ವಿಚಾರಣೆಯು ಇದೇ 2026ರ ಜುಲೈ 9ರಂದು ವಿಚಾರಣೆ ನಡೆಸಲು ದಿನಾಂಕ ನಿಗದಿಪಡಿಸಿದೆ.

ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ  ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಅವರು ಆರೋಪಿಯಾಗಿದ್ದರೂ ಸಹ ನಗರಾಭಿವೃದ್ಧಿ ಇಲಾಖೆಗೆ ಸಿದ್ದರಾಮಯ್ಯ ಅವರ ಪುತ್ರ ಡಾ ಯತೀಂದ್ರ ಸಿದ್ದರಾಮಯ್ಯ ಅವರನ್ನೇ ಸಚಿವರನ್ನಾಗಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ತಂದೆ, ತಾಯಿಯೇ ಆರೋಪಿ; ಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಯಲ್ಲಿರುವಾಗಲೇ ಯತೀಂದ್ರಗೆ ನಗರಾಭಿವೃದ್ಧಿ ಇಲಾಖೆ ಹೊಣೆ, ಹಿತಾಸಕ್ತಿ ಸಂಘರ್ಷವಲ್ಲವೇ?

 

ಈ ನಡುವೆಯೇ ಇದೇ ಪ್ರಕರಣದ ಕುರಿತು ಲೋಕಾಯುಕ್ತ ಸಂಸ್ಥೆಯು 2026ರ ಜುಲೈ 9ಕ್ಕೆ ನಿಗದಿಪಡಿಸಿರುವುದು ಮುನ್ನೆಲೆಗೆ ಬಂದಿದೆ.

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರವು ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿತ್ತು. ಈ ಪ್ರಕ್ರಿಯೆಯು ಕಾನೂನುಬಾಹಿರವಾಗಿತ್ತು. ಅಲ್ಲದೇ ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರ ನಡೆದಿದೆ ಎಂದು ಲೋಕಾಯುಕ್ತಕ್ಕೆ ಸಲ್ಲಿಸಿದ್ದ ದೂರಿನಲ್ಲಿ ವಿವರಿಸಲಾಗಿತ್ತು. ಈ ದೂರಿನಲ್ಲಿ  ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಭಾವಮೈದುನ ಬಿ ಎಂ ಮಲ್ಲಿಕಾರ್ಜುನ ಸ್ವಾಮಿ, ಮೂಡಾ ಮಾಜಿ ಅಧ್ಯಕ್ಷರಾದ ಬಸವೇಗೌಡ, ಹೆಚ್‌ ವಿ ರಾಜೀವ್‌ ಮತ್ತು ಆಯುಕ್ತರಾಗಿದ್ದ ಡಿ ಬಿ ನಟೇಶ್‌ ಅವರನ್ನೂ ಪ್ರತಿವಾದಿಗಳನ್ನಾಗಿಸಿದ್ದರು.

 

 

 

ತಮ್ಮ ರಾಜಕೀಯ ಪ್ರಭಾವದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪತ್ನಿಯ ಹೆಸರಿಗೆ ಕಾನೂನು ಬಾಹಿರವಾಗಿ ಬದಲಿ ನಿವೇಶನಗಳ ಹಂಚಿಕೆ ಮಾಡಿಸಿದ್ದಾರೆ ಇದರಿಂದ ಸರ್ಕಾರಕ್ಕೆ 40 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತವು ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದರು.

ದೂರಿನಲ್ಲೇನಿತ್ತು?

ಮುಡಾವು ದೇವನೂರು 3ನೇ ಹಂತದ ಬಡಾವಣೆ ನಿರ್ಮಾಣಕ್ಕೆಂದು 1997ರ ಅಕ್ಟೊಬರ್‍‌31ರಂದು ಮೈಸೂರು ತಾಲ್ಲೂಕು, ಕಸಬಾ ಹೋಬಳಿಯ ಕೆಸರೆ ಗ್ರಾಮ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ನೂರಾರು ಎಕರೆ ಜಮೀನುಗಳನ್ನು ಭೂಸ್ವಾಧೀನ ಮಾಡಿಕೊಂಡಿತ್ತು. ಈ ಪೈಕಿ ಕೆಸರೆ ಗ್ರಾಮದ ಸರ್ವೆ ನಂ: 464 ರ 3.16 ಎಕರೆ ಜಾಗವನ್ನು ಅದರ ಮಾಲೀಕ ನಿಂಗ ಬಿನ್ ಜವರ ಅವರಿಂದ ಭೂಸ್ವಾಧೀನ ಪಡಿಸಿಕೊಂಡಿತ್ತು. ಇದಕ್ಕೆ ಪರಿಹಾರದ ರೂಪದಲ್ಲಿ 3,24,700 ರು. ಗಳನ್ನು ಭೂ ಮಾಲೀಕರಿಗೆ ಬಿಡುಗಡೆ ಮಾಡಿತ್ತು. ನಂತರ 1998ರ ಮೇ 18ರಂದು ನಗರಾಭಿವೃದ್ಧಿ ಇಲಾಖೆಯು ಕೆಸರೆ ಗ್ರಾಮದ ಸರ್ವೆ ನಂ: 464 ರ 3.16 ಎಕರೆ ವಿಸ್ತೀರ್ಣದ ಜಾಗವನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟು ಆದೇಶವನ್ನು ಹೊರಡಿಸಿತ್ತು ಎಂದು ವಿವರಿಸಿದ್ದರು.

 

 

ಈ ಅವಧಿಯಲ್ಲಿ ಸಿದ್ಧರಾಮಯ್ಯನವರು ಅಂದಿನ ಮುಖ್ಯಮಂತ್ರಿ ಜೆ ಹೆಚ್‌ ಪಟೇಲ್ ಅವರ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿಗಳಾಗಿದ್ದರು. ಹಾಗೂ ಅವರ ಅತ್ಯಾಪ್ತರಾಗಿದ್ದ ಬಸವೇಗೌಡ ಎಂಬುವರು ಮುಡಾ ಅಧ್ಯಕ್ಷರಾಗಿದ್ದರು. 2004ರ ಆಗಸ್ಟ್‌ 25ರಂದು ಕೆಸರೆ ಗ್ರಾಮದ ಸರ್ವೆ ನಂ 464 ರ 3.16 ಎಕರೆ ವಿಸ್ತಿರ್ಣದ ಸ್ವತ್ತಿನ ಮಾಲೀಕರಾದ ನಿಂಗ ಬಿನ್ ಜವರ ಎಂಬುವವರ ಮಗನಾದ ಜೆ ದೇವರಾಜು ಅವರಿಂದ ಸಿದ್ಧರಾಮಯ್ಯನವರ ಭಾವಮೈದುನ (ಪತ್ನಿಯ ಸಹೋದರ) ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಬಿನ್ ಮರಿಲಿಂಗಯ್ಯ ನವರು ಕ್ರಯಕ್ಕೆ ಪಡೆದಿದ್ದರು. ಮತ್ತು ಅದನ್ನು ತಮ್ಮ ಹೆಸರಿಗೆ ನೊಂದಣಿ ಮಾಡಿಸಿಕೊಂಡಿದ್ದರು ಎಂದು ದೂರಿನಲ್ಲಿ ವಿವರಿಸಿದ್ದರು.

 

 

 

2005ರ ಜುಲೈ 15ರಂದು ಇದೇ ಜಮೀನನ್ನು “ವ್ಯವಸಾಯ ಪ್ರದೇಶ”ದಿಂದ ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾಗಿತ್ತು. ಆದರೆ ಜಮೀನಿನ ಮಾಲೀಕರಾದ ನಿಂಗ ಬಿನ್ ಜವರ ರವರು ಮರಣ ಹೊಂದಿದ್ದರೂ ಸಹ ಅವರ ಹೆಸರಿನಲ್ಲಿಯೇ ಜಿಲ್ಲಾಧಿಕಾರಿಗಳ ಕಛೇರಿಯಿಂದ ಭೂ ಪರಿವರ್ತನೆ ಮಾಡಲಾಗಿತ್ತು ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದರು.

ಈ ಬೆಳವಣಿಗೆ ನಡೆದಿದ್ದ ಅವಧಿಯಲ್ಲಿ ಸಿದ್ಧರಾಮಯ್ಯನವರು (2004 ರಿಂದ 2006) ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದರು. 2010ರ ಆಗಸ್ಟ್‌ 6ರಂದು ಸಿದ್ಧರಾಮಯ್ಯನವರ ಭಾವಮೈದುನ ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಅವರು ಈ ಸ್ವತ್ತನ್ನು ತಮ್ಮ ಸಹೋದರಿ ಬಿ ಎಂ ಪಾರ್ವತಿ (ಸಿದ್ಧರಾಮಯ್ಯನವರ ಧರ್ಮಪತ್ನಿ) ಯವರ ಹೆಸರಿಗೆ ದಾನ ಪತ್ರ ದ ಮೂಲಕ ದಾನವಾಗಿ ನೀಡಿದ್ದರು ಎಂದು ದೂರಿನಲ್ಲಿ ವಿವರಿಸಿದ್ದರು.

 

ದಾನ ಪತ್ರದ ಮೂಲಕ ದೇವನೂರು 3ನೇ ಹಂತದ ಬಡಾವಣೆಯಲ್ಲಿ ಬಂದಿದ್ದ ಸ್ವತ್ತಿಗೆ ಬದಲಾಗಿ, ಈಗಾಗಲೇ ಅಭಿವೃದ್ಧಿಯಾಗಿರುವ ಮೂಡಾದ ಇನ್ನೊಂದು ಬಡಾವಣೆಯಲ್ಲಿ ಬದಲಿ ನಿವೇಶನಗಳನ್ನು ಮಂಜೂರು ಮಾಡುವ ಸಂಬಂಧ ಬಿ ಎಂ ಪಾರ್ವತಿ ಅವರು 2014 ರಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ್ದ ನಗರಾಭಿವೃದ್ಧಿ ಇಲಾಖೆಯು ಬದಲಿ ನಿವೇಶನಗಳನ್ನು ಮಂಜೂರು ಮಾಡುವ ಬಗ್ಗೆ ಅನುಮೋದನೆ ನೀಡಿತ್ತು. ಈ ಸಂಬಂಧ ಸರ್ಕಾರಿ ಆದೇಶವನ್ನು ಹೊರಡಿಸಿತ್ತು.

2017ರ ಡಿಸೆಂಬರ್‍‌ 30ರಂದು ಮುಡಾದಲ್ಲಿ ನಡೆದಿದ್ದ ಪ್ರಾಧಿಕಾರದ ಸಭೆಯಲ್ಲಿ (ವಿಷಯದ ಸಂಖ್ಯೆ – 30) ಅರ್ಜಿದಾರರಿಗೆ ಈಗಾಗಲೇ ಅಭಿವೃದ್ಧಿ ಪಡಿಸಿರುವ ಬಡಾವಣೆಯಲ್ಲಿ 38,284 ಚ. ಅಡಿ ವಿಸ್ತೀರ್ಣದ ಸ್ವತ್ತುಗಳನ್ನು ನಿವೇಶನಗಳ ರೂಪದಲ್ಲಿ ಮಂಜೂರು ಮಾಡುವ ನಿರ್ಣಯ ಕೈಗೊಂಡಿತ್ತು. ಶೇ 50:50 ರ ಅನುಪಾತದಲ್ಲಿ (ಸ್ವತ್ತಿನ ಮಾಲೀಕರಿಗೆ 1/2 ಭಾಗ ಮತ್ತು ಮೂಡಾಗೆ 1/2 ಭಾಗ) ಪಾರ್ವತಿ ಅವರಿಗೆ ದೇವನೂರು 3ನೇ ಹಂತದ ಬಡಾವಣೆಯ ಬದಲಾಗಿ ಮೂಡಾ ಮಾಲೀಕತ್ವದ ಬೇರೊಂದು ಬಡಾವಣೆಯಲ್ಲಿ ಒಟ್ಟು 38,284 ಚ. ಅಡಿ ವಿಸ್ತೀರ್ಣದ ಸ್ವತ್ತನ್ನು ಬದಲಿ ನಿವೇಶನದ ಹೆಸರಿನಲ್ಲಿ ಮಂಜೂರು ಮಾಡುವ ಬಗ್ಗೆ ನಿರ್ಣಯವನ್ನು ಮೂಡಾದ ಅಧಿಕಾರಿಗಳು ಅನುಮೋದಿಸಿದ್ದರು.

‘ಮಾರುಕಟ್ಟೆ ಬೆಲೆ ಪ್ರತಿ ಚ. ಅಡಿಗೆ 5,000 ರು. ಗಳಷ್ಟು ಇರುವ ಮೈಸೂರಿನ ದೇವನೂರು 3ನೇ ಹಂತದ ಬಡಾವಣೆಯಲ್ಲಿನ ನಿವೇಶನಗಳ ಬದಲಾಗಿ ಪ್ರತಿ ಚ. ಅಡಿಗೆ 12,000 ರು. ಗಳಿಗಿಂತಲೂ ಹೆಚ್ಚಿರುವ ಮೈಸೂರಿನ ಅತ್ಯಂತ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ವಿಜಯನಗರ 03 ಮತ್ತು 04ನೇ ಹಂತದ ಬಡಾವಣೆಗಳಲ್ಲಿ ಒಟ್ಟು 38,284 ಚ. ಅಡಿ ವಿಸ್ತೀರ್ಣದ 14 ನಿವೇಶನಗಳನ್ನು ಬದಲಿ ನಿವೇಶನದ ಹೆಸರಿನಲ್ಲಿ ಪಾರ್ವತಿಯವರ ಹೆಸರಿಗೆ 2021-2022 ರಲ್ಲಿ ಕಾನೂನಿನ ಎಲ್ಲಾ ನಿಯಮಗಳನ್ನು ಮೀರಿ ಹಂಚಿಕೆ ಮಾಡಲಾಗಿದೆ,’ ಎಂದು ಎನ್‌ ಆರ್‍‌ ರಮೇಶ್‌ ಅವರು ದೂರಿನಲ್ಲಿ ಆಪಾದಿಸಿದ್ದರು.

2021-22 ರಲ್ಲಿ ಮೂಡಾದ ಅಧ್ಯಕ್ಷರಾಗಿದ್ದ ಹೆಚ್‌ ವಿ ರಾಜೀವ್ ಮತ್ತು ಆಯುಕ್ತರಾಗಿದ್ದ ಡಿ ಬಿ ನಟೇಶ್ ರವರು ಸಿದ್ಧರಾಮಯ್ಯನವರ ಪತ್ನಿ ಪಾರ್ವತಿ ಅವರ ಹೆಸರಿಗೆ ಮೈಸೂರಿನ ಅತ್ಯಂತ ಪ್ರತಿಷ್ಠಿತ ವಿಜಯನಗರ ಬಡಾವಣೆ 03ನೇ ಹಂತ ಮತ್ತು 04ನೇ ಹಂತದ ಪ್ರದೇಶಗಳಲ್ಲಿ 1) 50 X 80 ಅಳತೆಯ 05 ನಿವೇಶನಗಳು 2) 40 X 60 ಅಳತೆಯ 05 ನಿವೇಶನಗಳು 3) 30 X 50 ಅಳತೆಯ 02 ನಿವೇಶನಗಳು ಮತ್ತು 4) 30 X 40 ಅಳತೆಯ 02 ನಿವೇಶನಗಳು ಸೇರಿದಂತೆ ಒಟ್ಟು 14 ನಿವೇಶನಗಳನ್ನು ಹಂಚಿಕೆ ಮಾಡಿ ನೋಂದಣಿ ಮಾಡಿಕೊಟ್ಟಿದ್ದರು ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದರು.

ನಗರಾಭಿವೃದ್ಧಿ ಇಲಾಖೆಯ ನಿಯಮಗಳನ್ವಯ ಯಾವ ಬಡಾವಣೆಯ ನಿರ್ಮಾಣಕ್ಕೆಂದು ಪ್ರಾಧಿಕಾರವು ಸ್ಥಳೀಯರ ಸ್ವತ್ತುಗಳನ್ನು ಭೂಸ್ವಾಧೀನ ಪಡಿಸಿಕೊಳ್ಳುತ್ತದೆಯೋ, ಅಂತಹ ಸ್ವತ್ತುಗಳ ಮಾಲೀಕರಿಗೆ ಅದೇ ಬಡಾವಣೆಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಬೇಕು ಅಥವಾ ಆ ಬಡಾವಣೆಯ ನಂತರ ಪ್ರಾಧಿಕಾರವು ಅಭಿವೃದ್ಧಿ ಪಡಿಸುವ ಬಡಾವಣೆಯಲ್ಲಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲು ಅವಕಾಶವಿದೆ.

ಆದರೆ ಎಂತಹ ಸಂದರ್ಭದಲ್ಲಿಯೂ ಸಹ ಉದ್ದೇಶಿತ ಬಡಾವಣೆಯ ನಿವೇಶನಗಳಿಗೆ ಬದಲಾಗಿ ಆ ಬಡಾವಣೆಗಿಂತಲೂ ಮುಂಚಿತವಾಗಿ ಅಭಿವೃದ್ಧಿ ಪಡಿಸಿರುವ ಬಡಾವಣೆಗಳಲ್ಲಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡುವುದು ಅಪರಾಧವಾಗಿದೆ ಎಂದೂ ದೂರಿನಲ್ಲಿ ವಿವರಿಸಿದ್ದರು.

 

 

ಪ್ರಸ್ತುತ ಮೂಡಾದ ದೇವನೂರು 03ನೇ ಹಂತದ ಬಡಾವಣೆಯಲ್ಲಿ 38,284 ಚ. ಅಡಿ ವಿಸ್ತೀರ್ಣದ ಸ್ವತ್ತಿನ ಮಾರುಕಟ್ಟೆ ಬೆಲೆ ಸುಮಾರು 19,00,00,000/- (ಹತ್ತೊಂಬತ್ತು ಕೋಟಿ) ಗಳಷ್ಟಿದ್ದರೆ, ವಿಜಯನಗರ 3 ಮತ್ತು 4ನೇ ಹಂತದ ಬಡಾವಣೆ”ಯಲ್ಲಿ ಅದೇ ಅಳತೆಯ ಸ್ವತ್ತಿನ ಬೆಲೆ ಸುಮಾರು 46,00,00,000/- (ನಲವತ್ತಾರು ಕೋಟಿ) ಗಳಿಗೂ ಹೆಚ್ಚು ಇದೆ. ಮೂಡಾವು ಕೈಗೊಂಡಿರುವ ಈ ನಿರ್ಣಯದಿಂದಾಗಿ ಸರ್ಕಾರದ ಖಜಾನೆಗೆ ಸುಮಾರು 27,00,00,000/- (ಇಪ್ಪತ್ತೇಳು ಕೋಟಿ) ಗೂ ಹೆಚ್ಚು ಮೊತ್ತ ನಷ್ಟವಾಗಿರುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

2 ವರ್ಷದಿಂದಲೂ ತೆವಳಿದ ದೂರು

ಎನ್ ಆರ್ ರಮೇಶ್‌ ಅವರು 2024ರ ಜುಲೈ 20ರಂದು ದೂರು ಸಲ್ಲಿಸಿದ್ದರು.

 

ಈ ದೂರಿನ ವಿಚಾರಣೆ ಏನಾಗಿದೆ ಮತ್ತು ಇದರ ಪ್ರಗತಿ ಹೇಗಿದೆ ಎಂದು ‘ದಿ ಫೈಲ್‌’ ಲೋಕಾಯುಕ್ತ ಸಂಸ್ಥೆಯ ಅಧಿಕೃತ ಜಾಲತಾಣವನ್ನು ಪರಿಶೀಲಿಸಿತು. ಲೋಕಾಯುಕ್ತ ಸಂಸ್ಥೆಯ ಜಾಲತಾಣದ ಪ್ರಕಾರ 2024ರ ಜುಲೈ 20ರಿಂದ 2026ರ ಜೂನ್‌ವರೆಗೆ ಒಟ್ಟು 16 ಬಾರಿ ಮಾತ್ರ ದೂರಿನ ವಿಚಾರಣೆ ನಡೆದಿದೆ.

 

2024ರಲ್ಲಿ 1 ಬಾರಿ, 2025ರಲ್ಲಿ 10 ಬಾರಿ, 2026ರಲ್ಲಿ 5 ಬಾರಿ ಮಾತ್ರ ವಿಚಾರಣೆ ನಡೆದಿದೆ. ಈ ದೂರಿನ ವಿಚಾರಣೆಯು ಇದೇ 2026ರ ಜುಲೈ 9ಕ್ಕೆ ನಿಗದಿಯಾಗಿದೆ. ಅಲ್ಲದೇ ದೂರಿನ ಕುರಿತು ನಡೆದಿರುವ ವಿಚಾರಣೆಯು ಅಂತಿಮ ಪರಿಶೀಲನೆ ಟಿಪ್ಪಣಿ ಹಂತದಲ್ಲಿರುವುದು ಗೊತ್ತಾಗಿದೆ.

Hot this week

ದೇಶದಲ್ಲಿ 5.64 ಕೋಟಿ, ರಾಜ್ಯದಲ್ಲಿ 23.21 ಲಕ್ಷ ಪ್ರಕರಣಗಳು ವಿಚಾರಣೆಗೆ ಬಾಕಿ; ನ್ಯಾಯಾಲಯಗಳಲ್ಲಿ ಕೆಲಸದ ಒತ್ತಡ, ನ್ಯಾಯದಾನವೂ ವಿಳಂಬ

ಬೆಂಗಳೂರು: ದೇಶದ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 5.64 ಕೋಟಿಗೂ ಅಧಿಕ ಪ್ರಕರಣಗಳು...

15ನೇ ಹಣಕಾಸು ಆಯೋಗ; ಗುಜರಾತ್‌ಗೆ ಅತೀ ಕಡಿಮೆ, ಕರ್ನಾಟಕಕ್ಕೆ ಅತೀ ಹೆಚ್ಚು ಮೊತ್ತ ಬಿಡುಗಡೆಗೆ ಬಾಕಿ

ಬೆಂಗಳೂರು; ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ 28 ರಾಜ್ಯಗಳಲ್ಲಿರುವ ಗ್ರಾಮ ಪಂಚಾಯ್ತಿಗಳಿಗೆ...

ಪೋಕ್ಸೋ; ಕರ್ನಾಟಕದಲ್ಲಿ 21,436 ಪ್ರಕರಣಗಳು ವಿಚಾರಣೆಗೆ ಬಾಕಿ, ದೇಶದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಶೇ.48ರಷ್ಟು ಹೆಚ್ಚಳ

ಬೆಂಗಳೂರು:  ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧದ ಪೋಕ್ಸೋ...

ಮುದ್ರಾ ಯೋಜನೆ ಸಾಲದ ಖಾತೆ ತೆರೆಯುವಲ್ಲಿ ಹಿಂದುಳಿದ 8 ಜಿಲ್ಲೆ; ಸಾಲ ನೀಡುವಲ್ಲಿ ಖಾಸಗಿ ಬ್ಯಾಂಕ್‌ಗಳದ್ದೇ ಮೇಲುಗೈ

ಬೆಂಗಳೂರು; ಮುದ್ರಾ ಸಾಲ ಸಹಿತ ವಿವಿಧ ಸ್ವಯಂ ಉದ್ಯಮ ಯೋಜನೆಗಳಡಿ ಕರ್ನಾಟಕ...
Please Scan to make Your Contribution

Topics

15ನೇ ಹಣಕಾಸು ಆಯೋಗ; ಗುಜರಾತ್‌ಗೆ ಅತೀ ಕಡಿಮೆ, ಕರ್ನಾಟಕಕ್ಕೆ ಅತೀ ಹೆಚ್ಚು ಮೊತ್ತ ಬಿಡುಗಡೆಗೆ ಬಾಕಿ

ಬೆಂಗಳೂರು; ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ 28 ರಾಜ್ಯಗಳಲ್ಲಿರುವ ಗ್ರಾಮ ಪಂಚಾಯ್ತಿಗಳಿಗೆ...

ಪೋಕ್ಸೋ; ಕರ್ನಾಟಕದಲ್ಲಿ 21,436 ಪ್ರಕರಣಗಳು ವಿಚಾರಣೆಗೆ ಬಾಕಿ, ದೇಶದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಶೇ.48ರಷ್ಟು ಹೆಚ್ಚಳ

ಬೆಂಗಳೂರು:  ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧದ ಪೋಕ್ಸೋ...

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ ವ್ಯವಸ್ಥಾಪಕ ನಿರ್ದೇಶಕರ ಬದಲಾವಣೆಗೆ ಸಚಿವರ ಪಟ್ಟು; ಐಎಎಸ್‌, ಕೆಎಎಸ್‌ಯೇತರ ಅಧಿಕಾರಿ ನೇಮಕಕ್ಕೆ ಮುಂದಾಗಿರುವುದೇಕೆ?

ಬೆಂಗಳೂರು; ತಮಿಳುನಾಡು ಮಾದರಿಯಲ್ಲಿ ಕರ್ನಾಟಕದ ವೈದ್ಯಕೀಯ ಸರಬರಾಜು ನಿಗಮವನ್ನು ಸ್ಥಾಪಿಸಿರುವ ರಾಜ್ಯ...

ರೈಲ್ವೇ ಯೋಜನೆಗಳಿಗೆ ಗ್ರಹಣ; 7,748 ಕೋಟಿ ರು ಅನುದಾನವಿದ್ದರೂ ಬಿರುಸುಗೊಳ್ಳದ ಭೂಸ್ವಾಧೀನ ಪ್ರಕ್ರಿಯೆ, ರಾಜ್ಯದತ್ತಲೇ ಬೊಟ್ಟು ಮಾಡಿದ ಕೇಂದ್ರ ಸರ್ಕಾರ

ಬೆಂಗಳೂರು; ಕರ್ನಾಟಕದಲ್ಲಿ  ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರವು  2026-27ನೇ ಸಾಲಿನಲ್ಲಿ...

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೇರದ ಭದ್ರಾ ಮೇಲ್ದಂಡೆ ಯೋಜನೆ; ಸಹಾಯಧನ ಬಿಡುಗಡೆ ವಿಳಂಬಕ್ಕೆ ನೆಪವೊಡ್ಡಿದ ಕೇಂದ್ರ

ಬೆಂಗಳೂರು; ರಾಜ್ಯದ ಮಹತ್ವಾಕಾಂಕ್ಷೆ ನೀರಾವರಿ ಯೋಜನೆ ಭದ್ರಾ ಮೇಲ್ದಂಡೆ ಯೋಜನೆಯ ಅಂದಾಜು...

Related Articles

Popular Categories

error: Content is protected !!