ಶಕ್ತಿ; ನಾಲ್ಕು ಸಾರಿಗೆ ನಿಗಮಗಳಿಗೆ 4,456.23 ಕೋಟಿ ಬಾಕಿ, ಹೆಚ್ಚಿದ ಹಣಕಾಸಿನ ಅಂತರ, ಮರುಪಾವತಿಗೆ ಕೊರತೆಯೇಕೆ?

ಬೆಂಗಳೂರು; ಶಕ್ತಿ ಯೋಜನೆಯನ್ನು ಜಾರಿಗೆ ತಂದಾಗಿನಿಂದ ನಾಲ್ಕು ಸಾರಿಗೆ ನಿಗಮಗಳಲ್ಲಿ ಉಚಿತ ಪ್ರಯಾಣಕ್ಕಾಗಿ ಆಗಿರುವ ಹಣಕಾಸು ವೆಚ್ಚ ಮತ್ತು ಸಾರಿಗೆ ನಿಗಮಗಳಿಗೆ ಮಾಡಿರುವ ಮರು ಪಾವತಿಯಲ್ಲಿ ಹಣಕಾಸಿನ ಅಂತರವಿದೆ.

 

ಶಕ್ತಿ ಯೋಜನೆಯ ಅರ್ಹ ಮಹಿಳಾ ಪ್ರಯಾಣಿಕರಿಗೆ ಸ್ಮಾರ್ಟ್‌ ಕಾರ್ಡ್‌ ನೀಡುವ ಸಂಬಂಧ ಸಾರಿಗೆ ಇಲಾಖೆಯು ಸಚಿವ ಸಂಪುಟಕ್ಕೆ  ಒದಗಿಸಿರುವ ವಿವರಣೆಯಲ್ಲಿ ಈ ಮಾಹಿತಿ ಇದೆ. ಸಚಿವ ಸಂಪುಟಕ್ಕೆ ಸಲ್ಲಿಸಿರುವ ಕಡತದ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಮಹಿಳೆಯರಿಗೆ ಉಚಿತ ಬಸ್ ಸೇವೆ ಕಲ್ಪಿಸುವ ಶಕ್ತಿ ಯೋಜನೆಯಡಿ ಸಾರಿಗೆ ನಿಗಮಗಳಿಗೆ ನೀಡಬೇಕಾದ ಎಷ್ಟು ಹಣವನ್ನು ರಾಜ್ಯ ಸರ್ಕಾರವು ಬಾಕಿ ಉಳಿಸಿಕೊಂಡಿದೆ ಎಂಬ ಮಾಹಿತಿ ಸಲ್ಲಿಸಬೇಕು ಎಂದು ರಾಜ್ಯ ಹೈಕೋರ್ಟ್‌ ಸರ್ಕಾರಕ್ಕೆ ನಿರ್ದೇಶಿಸಿದೆ. ಇದರ ಬೆನ್ನಲ್ಲೇ ಶಕ್ತಿ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರವು ಸಾರಿಗೆ ನಿಗಮಗಳಿಗೆ ಮರು ಪಾವತಿಸಲು  ಬಾಕಿ ಉಳಿಸಿಕೊಂಡಿರುವ ಮೊತ್ತವೂ ಮುನ್ನೆಲೆಗೆ ಬಂದಿದೆ.

 

4,456.22 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ

 

ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಉಚಿತ ಪ್ರಯಾಣಕ್ಕಾಗಿ  2026ರ ಜನವರಿ ಅಂತ್ಯಕ್ಕೆ ಒಟ್ಟಾರೆ 17,088.33 ಕೋಟಿ ರು ವೆಚ್ಚವಾಗಿದೆ. ಅದರಲ್ಲಿ ರಾಜ್ಯ ಸರ್ಕಾರವು 12,632.11 ಕೋಟಿ ರುಪಾಯಿಗಳನ್ನು ಮರು ಪಾವತಿ ಮಾಡಿದೆ. ಇನ್ನೂ ಸರಿಸುಮಾರು 4,456.22 ಕೋಟಿ ಬಾಕಿ ಉಳಿಸಿಕೊಂಡಿದೆ.

 

 

ಇದು ಗಮನಾರ್ಹ ಹಣಕಾಸಿನ ಅಂತರವನ್ನು ಸೂಚಿಸುತ್ತದೆ ಎಂದು ಸಾರಿಗೆ ಇಲಾಖೆಯು ಸಚಿವ ಸಂಪುಟಕ್ಕೆ ಮಾಹಿತಿ ಒದಗಿಸಿದೆ.

 

 

 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳಲ್ಲಿ 2023-24ರಲ್ಲಿ ಒಟ್ಟಾರೆ 183.07 ಕೋಟಿ ಸಂಖ್ಯೆಯಷ್ಟು ಫಲಾನುಭವಿಗಳಿದ್ದಾರೆ. ಇದಕ್ಕಾಗಿ 4,380.37 ಕೋಟಿ ರು ಪ್ರಯಾಣ ವೆಚ್ಚವಾಗಿದೆ. 2024-25ರಲ್ಲಿ ಫಲಾನುಭವಿಗಳ ಸಂಖ್ಯೆಯು 244.65 ಕೋಟಿಯಷ್ಟಿದ್ದರೇ ಇದಕ್ಕಾಗಿ 6,185.46 ಕೋಟಿಯಷ್ಟು ಪ್ರಯಾಣ ವೆಚ್ಚವಾಗಿದೆ.

 

2025-26ರಲ್ಲಿ ಜನವರಿ 26ವರೆಗೆ 232.59 ಕೋಟಿಯಷ್ಟು ಫಲಾನುಭವಿಗಳಿದ್ದರೇ ಇದಕ್ಕಾಗಿ 6,522.51 ಕೋಟಿಯಷ್ಟು ವೆಚ್ಚವಾಗಿದೆ. ಒಟ್ಟಾರೆ ರಾಜ್ಯಾದಾದ್ಯಂತ 660 ಕೋಟಿ ಅರ್ಹ ಫಲಾನುಭವಿಗಳು ಶೂನ್ಯ ದರದ ಪ್ರಯಾಣ ಕೈಗೊಂಡಿದ್ದಾರೆ ಎಂದು ಸಾರಿಗೆ ಇಲಾಖೆಯು ಸಚಿವ ಸಂಪುಟಕ್ಕೆ ವಿವರಿಸಿದೆ.

 

 

ಶಕ್ತಿ ಯೋಜನೆ ವೆಚ್ಚ- ಬಿಡುಗಡೆ ವಿವರ

 

ಕರ್ನಾಟಕ ರಾಜ್ಯ ಸಾರಿಗೆ ನಿಗಮಕ್ಕೆ 2023-24ರಲ್ಲಿ 1,664.42 ಕೋಟಿ ರು ವೆಚ್ಚವಾಗಿತ್ತು. ಈ ಪೈಕಿ 1,211.80 ಕೋಟಿ ರು ಬಿಡುಗಡೆ ಮಾಡಿದೆ. ಇದೇ ನಿಗಮಕ್ಕೆ 2024-25ರಲ್ಲಿ 2,401.00 ಕೋಟಿ ರು ವೆಚ್ಚವಾಗಿದ್ದರೆ ಈ ಪೈಕಿ 1,905.20 ಕೋಟಿ ಬಿಡುಗಡೆ ಮಾಡಿತ್ತು. 2025-26ರ ಜನವರಿ 26ರವರೆಗೆ 2,503.85 ಕೋಟಿ ರುಪಾಯಿ ವೆಚ್ಚವಾಗಿದ್ದರೇ ಈ ಪೈಕಿ 1,709.44 ಕೋಟಿ ಬಿಡುಗಡೆ ಮಾಡಿತ್ತು. ಈ ಸಾಲಿನಲ್ಲಿ ಒಟ್ಟಾರೆ 1,742.83 ಕೋಟಿ ರುಪಾಯಿ ಕೊರತೆ ಎದುರಾಗಿತ್ತು.

 

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 2023-24ರಲ್ಲಿ 755.10 ಕೋಟಿಯಷ್ಟು ವೆಚ್ಚವಾಗಿದೆ. ಈ ಪೈಕಿ 549.67 ಕೋಟಿ ರು ಬಿಡುಗಡೆ ಮಾಡಿತ್ತು. 2024-25ರಲ್ಲಿ 1,059.37 ಕೋಟಿ ರು ವೆಚ್ಚದ ಪೈಕಿ 864.59 ಕೋಟಿ ರುಪಾಯಿ ಬಿಡುಗಡೆ ಮಾಡಿತ್ತು. 2025-26ರ ಜನವರಿ 26ರವರೆಗೆ 1,167.76 ಕೋಟಿಯಷ್ಟು ವೆಚ್ಚವಾಗಿತ್ತು. ಈ ಪೈಕಿ 757.36 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಬಿಎಂಟಿಸಿಗೆ 810.62 ಕೋಟಿ ರುಪಾಯಿನಷ್ಟು ಮರು ಪಾವತಿಸಲು ಬಾಕಿ ಉಳಿಸಿಕೊಂಡಿದೆ.

 

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 2023-24ರಲ್ಲಿ 1,076.13 ಕೋಟಿ ರುಪಾಯಿ ವೆಚ್ಚವಾಗಿತ್ತು. ಇದರಲ್ಲಿ 792.22 ಕೋಟಿ ರುಪಾಯಿ ಬಿಡುಗಡೆ ಮಾಡಿತ್ತು. 2024-25ರಲ್ಲಿ 1,507.74 ಕೋಟಿ ರುಪಾಯಿ ವೆಚ್ಚವಾಗಿದ್ದರೇ 1,232.18 ಕೋಟಿ ರುಪಾಯಿ ಬಿಡುಗಡೆ ಮಾಡಿತ್ತು. 2025-26ರ ಜನವರಿ 26ರವರೆಗೆ 1,617.23 ಕೋಟಿ ರುಪಾಯಿ ವೆಚ್ಚವಾಗಿದ್ದರೇ 1,078.10 ಕೋಟಿ ರುಪಾಯಿ ಬಿಡುಗೆ ಮಾಡಿತ್ತು. ಒಟ್ಟಾರೆ 1,098. 59 ಕೋಟಿ ರುಪಾಯಿ ಕೊರತೆ ಎದುರಿಸಿದೆ.

 

 

ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 2023-24ರಲ್ಲಿ 884.72 ಕೋಟಿ ರುಪಾಯಿ ವೆಚ್ಚವಾಗಿತ್ತು. 646.06 ಕೋಟಿ ರುಪಾಯಿ ಬಿಡುಗಡೆ ಮಾಡಿತ್ತು. 2024-25ರಲ್ಲಿ 1,217.35 ಕೋಟಿ ರುಪಾಯಿ ವೆಚ್ಚವಾಗಿದ್ದರೇ 1,013.03 ಕೋಟಿ ರುಪಾಯಿ ಬಿಡುಗಡೆ ಮಾಡಿತ್ತು. 2025-26ರ ಜನವರಿ 26ರವರೆಗೆ 1,233.67 ಕೋಟಿ ರುಪಾಯಿ ವೆಚ್ಚವಾಗಿದ್ದರೇ 872.46 ಕೋಟಿ ರುಪಾಯಿ ಬಿಡುಗಡೆಯಾಗಿತ್ತು. ಒಟ್ಟಾರೆ 804.19 ಕೋಟಿ ರುಪಾಯಿ ಮರು ಪಾವತಿಸಲು ಬಾಕಿ ಉಳಿಸಿಕೊಂಡಿತ್ತು.

 

2023-24ರಲ್ಲಿ ನಾಲ್ಕು ಸಾರಿಗೆ ನಿಗಮಗಳಲ್ಲಿ 4,380.37 ಕೋಟಿ ರುಪಾಯಿ ವೆಚ್ಚದ ಪೈಕಿ 3,199.75 ಕೋಟಿ ರುಪಾಯಿ ಬಿಡುಗಡೆ ಮಾಡಿತ್ತು. 2024-25ರಲ್ಲಿ 6,185.46 ಕೋಟಿ ರುಪಾಯಿ ವೆಚ್ಚವಾಗಿದ್ದರ ಪೈಕಿ 5,015.00 ಕೋಟಿ ರುಪಾಯಿ ಬಿಡುಗಡೆ ಮಾಡಿತ್ತು. 2025-26ರ ಜನವರಿ 26ರವರೆಗೆ 6,522.51 ಕೋಟಿ ರುಪಾಯಿ ವೆಚ್ಚದ ಪೈಕಿ 4,417.36 ಕೋಟಿ ರುಪಾಯಿ ಬಿಡುಗಡೆ ಮಾಡಿತ್ತು. ಒಟ್ಟಾರೆ ಈ ಮೂರು ವರ್ಷಗಳಲ್ಲಿ ನಾಲ್ಕೂ ಸಾರಿಗೆ ನಿಗಮಗಳಿಗೆ 4,456.23 ಕೋಟಿಯಷ್ಟು ಕೊರತೆ ಕಾಣಿಸಿಕೊಂಡಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

 

 

ಅಸಾಧ್ಯವಾದ ನೈಜ ಪ್ರಯಾಣದ ಬಳಕೆ ಪರಿಶೀಲನೆ

 

ನಾಲ್ಕು ಸಾರಿಗೆ ನಿಗಮಗಳಲ್ಲಿ ಶಕ್ತಿ ಯೋಜನೆಯಡಿ ನಿಜವಾದ ಪ್ರಯಾಣ ಬಳಕೆ ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ ಎಂದು ಸಾರಿಗೆ ಇಲಾಖೆಯು ಹೇಳಿದೆ. ಸಂಯೋಜಿತ ಡಿಜಿಟಲ್ ಪರಿಶೀಲನೆ, ವಹಿವಾಟು ವ್ಯವಸ್ಥೆಯು ಇಲ್ಲವಾಗಿದೆ. ಮ್ಯಾನುಯಲ್ ಟಿಕೆಟ್ ಪರಿಶೀಲನೆ ಮೇಲೆಯೇ ನಿಗಮಗಳು ಅವಲಂಬಿತವಾಗಿವೆ. ಹೀಗಾಗಿ ನಿಜವಾದ ಪ್ರಯಾಣದ ಬಳಕೆ ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ  ಉಚಿತ ಮಹಿಳಾ ಪ್ರಯಾಣಿಕರ ವೆಚ್ಚ ಮರುಪಾವತಿಯ ಕೊರತೆಗೆ ಕಾರಣವಾಗುತ್ತಿದೆ ಎಂದು ಇಲಾಖೆಯು ವಿವರಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಇದಲ್ಲದೇ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಫಲಾನುಭವಿಗಳ ದತ್ತಾಂಶದ ನಿಖರವಾದ ವರದಿಯೂ ಸಹ ಇಲಾಖೆ ಬಳಿ  ಲಭ್ಯವಿಲ್ಲ. ಹೀಗಾಗಿ ಉದ್ಧೇಶಿತ ಸಾಮಾಜಿಕ ವಲಯ ಯೋಜನೆಗಳ ಅಡಿಯಲ್ಲಿ ಹಣವನ್ನು ಹಂಚಿಕೆ ಮಾಡುವ ಸಾಮರ್ಥ್ಯಕ್ಕೆ ಅಡ್ಡಿಯಾಗಿದೆ ಎಂದು ವಿವರಿಸಿದೆ.

 

ಕಳೆದ ಡಿಸೆಂಬರ್‍‌ನಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದಲ್ಲಿ ಸಾರಿಗೆ ಇಲಾಖೆಯು ಕೊಟ್ಟಿದ್ದ ಮಾಹಿತಿ ಪ್ರಕಾರ  ನವೆಂಬರ್‍‌ 25ರವರೆಗೆ  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ಬೆಂಗಳೂರು ಮಹಾನಗರ, ವಾಯುವ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಿಗೆ ಒಟ್ಟಾರೆ 4,006.47 ಕೋಟಿಯಷ್ಟು ಬಾಕಿ ಉಳಿಸಿಕೊಂಡಿತ್ತು.

 

 

 

 

ಸಾರಿಗೆ ನಿಗಮಗಳಿಗೆ ಬಿಡುಗಡೆ ಮಾಡಿದ್ದೆಷ್ಟು?

 

ಕೆಎಸ್‌ಆರ್‍‌ಟಿಸಿಗೆ 2023-24ರಲ್ಲಿ 1,211.80 ಕೋಟಿ ರು, ಬಿಎಂಟಿಸಿಗೆ 549.67 ಕೋಟಿ ರು, ವಾಯುವ್ಯ ಕರ್ನಾಟಕ ಸಾರಿಗೆಗೆ 792.22 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಎಕ 646.06 ಕೋಟಿ ರು ಬಿಡುಗಡೆ ಮಾಡಿತ್ತು.

 

 

ಅದೇ ರೀತಿ 2024-25ರಲ್ಲಿ ಕೆಎಸ್‌ಆರ್‍‌ಟಿಸಿಗೆ 1,905.20 ಕೋಟಿ, ಬಿಎಂಟಿಸಿಗೆ 864.59 ಕೋಟಿ, ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 1,232.18 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 1,013.03 ಕೋಟಿ ರು ಬಿಡುಗಡೆ ಮಾಡಿತ್ತು.

 

 

2025-26ನೇ ಸಾಲಿನ ನವೆಂಬ್‌ 25ರ ಅಂತ್ಯಕ್ಕೆ ಕೆಎಸ್‌ಆರ್‍‌ಟಿಸಿಗೆ 1,366.22 ಕೋಟಿ ರು., ಬಿಎಂಟಿಸಿಗೆ 606.04 ಕೋಟಿ, ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 862.74 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 698.62 ಕೋಟಿ ರು ಬಿಡುಗಡೆ ಮಾಡಿದೆ ಎಂದು ಉತ್ತರದಲ್ಲಿ ಅಂಕಿ ಆಂಶಗಳನ್ನು ಒದಗಿಸಿದ್ದರು.

 

ಈ ಎಲ್ಲಾ ಸಾರಿಗೆ ನಿಗಮಗಳಿಗೆ 2023-24ರಲ್ಲಿ 3,199.75 ಕೋಟಿ, 2024-25ರಲ್ಲಿ 5,015.00 ಕೋಟಿ, 2025-26ರ ನವೆಂಬರ್‍‌ 25ರ ಅಂತ್ಯಕ್ಕೆ 3,534.02 ಕೋಟಿ ಸೇರಿ ಒಟ್ಟಾರೆ 11,748.77 ಕೋಟಿ ರು ಬಿಡುಗಡೆ ಮಾಡಿತ್ತು. ಕೆಎಸ್‌ಆರ್‍‌ಟಿಸಿಯೊಂದಕ್ಕೇ 4,4483.62 ಕೋಟಿ ರು., ಬಿಎಂಟಿಸಿಗೆ 2,020.3 ಕೋಟಿ, ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 2,887.14 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 2,357.71ಕೋಟಿ ರು ಬಿಡುಗಡೆಯಾಗಿತ್ತು.

 

ಬಾಕಿ ಇರಿಸಿದ್ದ ಮೊತ್ತವೆಷ್ಟು?

 

ಇದೇ ವರ್ಷದಲ್ಲಿ ಕೆಎಸ್‌ಆರ್‍‌ಟಿಸಿಗೆ 2023-24ರಲ್ಲಿ 452.62 ಕೋಟಿ, 2024-2=5ರಲ್ಲಿ 495.80 ಕೋಟಿ, 2025-26ರ ನವೆಂಬರ್‍‌ 25ರ ಅಂತ್ಯಕ್ಕೆ 631.73 ಕೋಟಿ ರು ಒಟ್ಟಾರೆ 1,580.15 ಕೋಟಿ ರು ಬಾಕಿ ಉಳಿಸಿಕೊಂಡಿತ್ತು. ಬಿಎಂಟಿಸಿಗೆ 2023-24ರಲ್ಲಿ 205.43 ಕೋಟಿ, 2024-25ರಲ್ಲಿ 194.78 ಕೋಟಿ, 2025-26ರ ನವೆಂಬರ್‍‌ 25ರ ಅಂತ್ಯಕ್ಕೆ 310.6 ಕೋಟಿ ಸೇರಿ ಒಟ್ಟಾರೆ 710.81 ಕೋಟಿ ಬಾಕಿ ಉಳಿಸಿಕೊಂಡಿತ್ತು.

 

ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 2023-24ರಲ್ಲಿ 283.91 ಕೋಟಿ, 2024-25ರಲ್ಲಿ 275.55 ಕೋಟಿ, 2025-26ರ ನವೆಂಬರ್‍‌ ಅಂತ್ಯಕ್ಕೆ 428.64 ಕೋಟಿ ಸೇರಿ ಒಟ್ಟು 988.1 ಕೋಟಿ ಬಾಕಿ ಉಳಿಸಿಕೊಂಡಿತ್ತು. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 2023-24ರಲ್ಲಿ 238.66 ಕೋಟಿ, 2024-25ರಲ್ಲಿ 204.32 ಕೋಟಿ, 2025-26ರಲ್ಲಿ 284.43 ಕೊಟಿ ಸೇರಿ ಒಟ್ಟಾರೆ 727.41 ಕೋಟಿ ರು ಬಾಕಿ ಇತ್ತು.

 

 

ಈ ಎಲ್ಲಾ ನಿಗಮಗಳಿಗೆ 2023-24ರಲ್ಲಿ 1,180.62 ಕೋಟಿ, 2024-25ರಲ್ಲಿ 1,170.45 ಕೋಟಿ, 2025-26ರ ನವೆಂಬರ್‍‌ 25ರ ಅಂತ್ಯಕ್ಕೆ 1,655.40 ಕೋಟಿ ರು ಸೇರಿ ಒಟ್ಟಾರೆ 4,006.47 ಕೋಟಿಯಷ್ಟು ಬಾಕಿ ಉಳಿಸಿಕೊಂಡಿತ್ತು.

 

ನಷ್ಟದ ಸುಳಿಯಲ್ಲಿ ಸಾರಿಗೆ ನಿಗಮಗಳು

 

ಅಲ್ಲದೇ ಕಳೆದ 5 ವರ್ಷದಲ್ಲಿ ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ ಸಾರಿಗೆ ನಿಗಮಗಳು ನಷ್ಟದ ಸುಳಿಯಲ್ಲಿ ಸಿಲುಕಿದ್ದವು.

 

2020-21ರಲ್ಲಿ ಕೆಎಸ್‌ಆರ್‍‌ಟಿಸಿ 581.15 ಕೊಟಿ, 2021-22ರಲ್ಲಿ 423.31 ಕೋಟಿ, 2022-23ರಲ್ಲಿ 597.89 ಕೋಟಿ, 2023-24ರಲ್ಲಿ 295.43 ಕೋಟಿ, 2024-25ರಲ್ಲಿ 81.83 ಕೋಟಿ ನಷ್ಟವನ್ನು ಅನುಭವಿಸಿತ್ತು.

 

 

ಅದೇ ರೀತಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯು 2020-21ರಲ್ಲಿ 389.08 ಕೋಟಿ, 2021-22ರಲ್ಲಿ 462.58 ಕೋಟಿ, 2022-23ರಲ್ಲಿ 746.15 ಕೋಟಿ, 2023-24ರಲ್ಲಿ 322.48 ಕೋಟಿ, 2024-25ರಲ್ಲಿ 31.11 ಕೋಟಿ ರು ನಷ್ಟವನ್ನು ಅನುಭವಿಸಿತ್ತು.

 

 

ಬಿಎಂಟಿಸಿಯು 2020-21ರಲ್ಲಿ 164.20 ಕೋಟಿ, 2021-22ರಲ್ಲಿ 178.25 ಕೋಟಿ, 2022-23ರಲ್ಲಿ 997.38 ಕೊಟಿ, 2023-24ರಲ್ಲಿ 575.45 ಕೋಟಿ, 2024-25ರಲ್ಲಿ 670.48 ಕೋಟಿ ನಷ್ಟಕ್ಕೀಡಾಗಿತ್ತು. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮವು 2020-21ರಲ್ಲಿ 186.45 ಕೋಟಿ, 2021-22ರಲ್ಲಿ 225.82 ಕೋಟಿ, 2022-23ರಲ್ಲಿ 319.99 ಕೋಟಿ, 2023-24ರಲ್ಲಿ 161.12 ಕೋಟಿ, 2024-25ರಲ್ಲಿ 59.40 ಕೋಟಿ ನಷ್ಟವನ್ನು ಅನುಭವಿಸಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ಸದನಕ್ಕೆ ಮಾಹಿತಿ ಒದಗಿಸಿದ್ದರು.

 

ಈ ನಾಲ್ಕು ಸಾರಿಗೆ ಸಂಸ್ಥೆಗಳು ಹೊಸ ಬಸ್‌ಗಳ ಖರೀದಿದಾಗಿ, ಇಂಧನ ವೆಚ್ಚ, ಸಂಸ್ಥೆಯ ಬಂಡವಾಳ ವೆಚ್ಚಗಳಿಗೆ ಹಾಗೂ ಭವಿಷ್ಯ ನಿಧಿ ಬಾಕಿ ತೀರುವಳಿಗೆ ಸಾಲ ಪಡೆದಿತ್ತು. ಕಳೆದ 5 ವರ್ಷದಲ್ಲಿ ಬಡ್ಡಿ ಪಾವತಿಸಿತ್ತು.

 

 

ಕೆಎಸ್ಆರ್‍‌ಟಿಸಿಯು 2020-21ರಲ್ಲಿ ಮಾಸಿಕ 2.63 ಕೋಟಿ, 2021-22ರಲ್ಲಿ 2.13 ಕೋಟಿ, 2022-23ರಲ್ಲಿ 1.65 ಕೋಟಿ, 2023-24ರಲ್ಲಿ 1.20 ಕೋಟಿ, 2024-25ರಲ್ಲಿ 1.97 ಕೋಟಿ ರು.ಗಳನ್ನು ಪಾವತಿಸಿತ್ತು. ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯು 2020-21ರಲ್ಲಿ 1.82 ಕೋಟಿ, 2021-22ರಲ್ಲಿ 1.77 ಕೋಟಿ, 2022-23ರಲ್ಲಿ 1.45 ಕೋಟಿ, 2023-24ರಲ್ಲಿ 1.08 ಕೋಟಿ, 2024-25ರಲ್ಲಿ 0.73 ಕೋಟಿಯಷ್ಟು ಬಡ್ಡಿ ಪಾವತಿಸಿದೆ ಎಂದು ಮಾಹಿತಿ ಒದಗಿಸಿದ್ದರು.

 

 

ಬಿಎಂಟಿಸಿಯೂ 2020-21ರಲ್ಲಿ 4.80 ಕೋಟಿ, 2021-22ರಲ್ಲಿ 5.69 ಕೋಟಿ, 2022-23ರಲ್ಲಿ 4.99 ಕೋಟಿ, 2023-24ರಲ್ಲಿ 4.01 ಕೋಟಿ, 2024-25ರಲ್ಲಿ 2.24 ಕೋಟಿ ಬಡ್ಡಿ ಪಾವತಿಸಿದ್ದರೇ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮವು 2020-21ರಲ್ಲಿ 0.62 ಕೋಟಿ, 2021-22ರಲ್ಲಿ 0.48 ಕೋಟಿ, 2022-23ರಲ್ಲಿ 0.61 ಕೋಟಿ, 2023-24ರಲ್ಲಿ 1.08 ಕೋಟಿ, 2024-25ರಲ್ಲಿ 1.33 ಕೋಟಿಯಷ್ಟು ಬಡ್ಡಿ ಪಾವತಿಸಿತ್ತು.

 

ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ನವೆಂಬರ್‍‌ 2024ರ ಅಂತ್ಯಕ್ಕೆ ಶಾಸನಬದ್ಧ ಪಾವತಿಯಾದ ಭವಿಷ್ಯ ನಿಧಿ, ಇಂಧನ ಬಾಕಿ ಮೊತ್ತವನ್ನು ಬಾಕಿ ಉಳಿಸಿಕೊಂಡಿತ್ತು. ಈ ಮೊತ್ತವನ್ನು ಪಾವತಿಸಲು ಸರ್ಕಾರದ ಖಾತರಿ, ಗ್ಯಾರಂಟಿಯೊಂದಿಗೆ ಹಣಕಾಸು ಸಂಸ್ಥೆಗಳಿಂದ 2,000 ಕೋಟಿ ರು ಸಾಲ ಪಡೆಯಲು 2024ರ ಡಿಸೆಂಬರ್‍‌ 31ರಂದು ಅನುಮೋದನೆ ನೀಡಿತ್ತು.

 

ಈ ಸಾಲದ ಮೊತ್ತದ ಪೈಕಿ ಕೆಎಸ್‌ಆರ್‍‌ಟಿಸಿಗೆ 623.80 ಕೋಟಿ, ಬಿಎಂಟಿಸಿಗೆ 589.20 ಕೋಟಿ, ವಾಯುವ್ಯ ಕರ್ನಾಟಕ ಸಾರಿಗೆಗೆ 646.00 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 141.00 ಕೋಟಿಯಷ್ಟು ಪಾವತಿಸಿತ್ತು.

 

ಅಲ್ಲದೇ 2025-26ನೇ ಸಾಲಿನಲ್ಲಯೂ 2,000 ಕೋಟಿ ರು ಸಾಲದ ಮೊತ್ತದ ಅಸಲು ಮತ್ತು ಬಡ್ಡಿ ಪಾವತಿಗಾಗಿ ನಾಲ್ಕು ಸಾರಿಗೆ ನಿಗಮಗಳಿಗೆ 452.00 ಕೋಟಿ ರು ಅನುದಾನವನ್ನು ಒದಗಿಸಿದೆ. ನಾಲ್ಕು ಸಾರಿಗೆ ನಿಗಮಗಳ ನಗದು ಕೊರತೆಯನ್ನು ನಿಭಾಯಿಸಲು 2023-24ರಲ್ಲಿ ಮತ್ತು 2024-25ರಲ್ಲಿ ನಿಗಮಗಳು ಸರ್ಕಾರಕ್ಕೆ ಪಾವತಿ ಮಾಡಬೇಕಾದ ಮೋಟಾರು ವಾಹನ ತೆರಿಗೆ 581.47 ಕೋಟಿ ಮತ್ತು 637.76 ಕೋಟಿ ಸೇರಿದಂತೆ ಒಟ್ಟಾರೆ 1,219.23 ಕೋಟಿ ರು.ಗಳ ಪಾವತಿಯಿಂದ ವಿನಾಯಿತಿ ನೀಡಿತ್ತು.

 

 

ಅಲ್ಲದೇ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ 2023ನೇ ಮೇ ತಿಂಗಳ ವರೆಗೆ ಒಟ್ಟು 4,099.38 ಕೋಟಿ ರು ಹೊಣೆಗಾರಿಕೆ ಬಾಕಿ ಇತ್ತು.

 

 

ಈ ಬಾಕಿಯು, ನಿಗಮಗಳ ತೀವ್ರ ಆರ್ಥಿಕ ಹಿನ್ನಡೆಗೆ ಕಾರಣವಾಗಿತ್ತು. ನಿಗಮಗಳು ಇಂದನ ಕಂಪನಿಗಳಿಗೆ ಇಂಧನ ವೆಚ್ಚವನ್ನು, ಭವಿಷ್ಯ ನಿಧಿ ಮತ್ತು ಸರಬರಾಜುದಾರರ ಇತರೆ ಬಿಲ್‌ಗಳನ್ನು ಪಾವತಿಸದೇ ಬಾಕಿ ಇರಿಸಿದ್ದರಿಂದ ನಿಗಮಗಳ ಮೇಲೆ ಆರ್ಥಿಕ ಹೊರೆ ಹೆಚ್ಚಾಗಿತ್ತು.

 

 

2023ರ ಮೇವರೆಗೆ ಕೆಎಸ್‌ಆರ್‍‌ಟಿಸಿಯಲ್ಲಿ 1,211.18 ಕೋಟಿ, ಬಿಎಂಟಿಸಿಯ್ಲಿ 1,383.86 ಕೋಟಿ, ವಾಯುವ್ಯ ಕರ್ನಾಟಕ ಸಾರಿಗೆಗೆ 1,253.01 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 251.33 ಕೋಟಿ ಸೇರಿ ಒಟ್ಟಾರೆ 4,099.38 ಕೋಟಿಯಷ್ಟು ಹೊಣೆಗಾರಿಕೆ ಇತ್ತು.

 

ಹಾಗೆಯೇ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಅಧಿಕಾರಿ, ನೌಕರರಿಗೆ ವೇತನ ಪಾವತಿಸಲು ಆಯವ್ಯಯದಲ್ಲಿ ಯಾವುದೇ ಅನುದಾವನ್ನು ಮೀಸಲು ಇರಿಸಿರಲಿಲ್ಲ. ಹಾಗೂ ನಿಗಮಗಳಿಗೆ ಯಾವುದೇ ಅನುದಾನವನ್ನೂ ಸಹ ಬಿಡುಗಡೆ ಮಾಡಿರಲಿಲ್ಲ. ಇದರಿಂದಾಗಿ ನಿಗಮಗಳು ತೀವ್ರ ಒತ್ತಡಕ್ಕೆ ಸಿಲುಕಿದ್ದವು ಎಂದು ವಿವರಿಸಿದ್ದರು.

 

 

ರಾಜ್ಯ ರಸ್ತೆ ಸಾರಿಗೆ ನಿಗಮಗಳು ರಸ್ತೆ ಸಾರಿಗೆ ನಿಗಮಗಳ ಕಾಯ್ದೆ 1950ರಡಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಗಳಾಗಿವೆ. ರಸ್ತೆ ಸಾರಿಗೆ ನಿಗಮಗಳ ನಿರ್ವಹಣೆ ಮತ್ತು ಸಿಬ್ಬಂದಿಗಳ ವೇತನ ಹಾಗೂ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ನಿಗಮಗಳು ತನ್ನ ಆಂತರಿಕ ಮೂಲಗಳಿಂದಲೇ ಭರಿಸಬೇಕಾಗಿತ್ತು.

Your generous support will help us remain independent and work without fear.

Latest News

Related Posts