ರೆಡ್ಡಿ ವೀರಣ್ಣ ಕನ್ಸ್‌ಟ್ರಕ್ಷನ್ಸ್‌ ಲಿಮಿಟೆಡ್‌ಗೆ 52 ಕೋಟಿ ಸಾಲ; ಋಣಭಾರ ರಾಹಿತ್ಯ ಪ್ರಮಾಣ ಪತ್ರ ಪಡೆಯದ ಬ್ಯಾಂಕ್‌

ಬೆಂಗಳೂರು; ಋಣಭಾರ ರಾಹಿತ್ಯ ಪ್ರಮಾಣ ಪತ್ರಗಳನ್ನು ಪಡೆಯದೆಯೇ ರೆಡ್ಡಿ ವೀರಣ್ಣ ಕನ್ಸ್‌ಟ್ರಕ್ಷನ್ಸ್‌ ಲಿಮಿಟೆಡ್‌ಗೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ 52 ಕೋಟಿ ರು ಸಾಲವನ್ನು ಮಂಜೂರು ಮಾಡಿದೆ.

 

ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ನ 2024-25ನೇ ಸಾಲಿಗೆ ಸಂಬಂಧಿಸಿದಂತೆ ಶಾಸನಬದ್ಧ ಲೆಕ್ಕ ಪರಿಶೋಧನೆ ವರದಿಯು, ದೊಡ್ಡ ಪ್ರಮಾಣದ ಸಾಲಗಳನ್ನು ಮಂಜೂರಾತಿಯ ಹಿಂದಿನ ಎಲ್ಲಾ ಉಲ್ಲಂಘನೆ, ನಿಯಮಬಾಹಿರ ಚಟುವಟಿಕೆಗಳನ್ನು ಬಯಲು ಮಾಡಿದೆ. ಈ ವರದಿಯನ್ನು ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್‌ ಅವರು ಅನುಮೋದಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿದ್ದ ಸಿವಿಲ್‌ ಕಾಮಗಾರಿಗಳನ್ನು ಪೂರ್ಣಗೊಳಿಸಲು ರೆಡ್ಡಿ ವೀರಣ್ಣ ಕನ್ಸ್‌ಟ್ರಕ್ಷನ್ಸ್‌ ಲಿಮಿಟೆಡ್‌ಗೆ 2025ರ ಜನವರಿ 1ರಂದು 10 ಕೋಟಿ ರು ಸಾಲವನ್ನು (ಖಾತೆ ಸಂಖ್ಯೆ; 1001/50/755/57) ಮಂಜೂರು ಮಾಡಿದೆ.

 

 

ಇದೇ ಅವಧಿಗೆ 10 ಕೋಟಿಯಷ್ಟು ಹೊರಬಾಕಿ ಇತ್ತು. ಈ ರೀತಿ ಬಿಡುಗಡೆಯಾಗಿರುವ ಸಾಲದ ಮೊತ್ತವು ಸಮೂಹ ವ್ಯವಸ್ಥೆಯಡಿಯಲ್ಲಿ ಒಪ್ಪಂದಿತ ಮೊತ್ತವಾಗಿರುವ 25 ಕೋಟಿ ರು. ಪಾಲಿನ ಮೊತ್ತವಾಗಿದೆ.

 

 

 

ಆದರೆ ಈ ಸಾಲವನ್ನು ಮಂಜೂರು ಮಾಡುವಾಗ ಅಪೆಕ್ಸ್‌ ಬ್ಯಾಂಕ್‌, ಎಂದಿನಂತೆ ಮಹತ್ವದ ದಾಖಲೆಗಳನ್ನು ಪಡೆದಿರಲಿಲ್ಲ. ಗ್ರಾಹಕರ ಮರು ಪಾವತಿ ಸಾಮರ್ಥ್ಯದ ಬಗ್ಗೆ ಸ್ಪಷ್ಟ ಚಿತ್ರಣ ಪಡೆಯಲು ಅನುಕೂಲವಾಗುವಂತೆ ಮಂಜೂರಾತಿ ಪತ್ರದ ನಿಯಮ 8(ಸಿ) ಪ್ರಕಾರ ಅಗತ್ಯ ನಗದು ಹರಿವಿನ ದಾಖಲೆ, 2023ರ ಫೆ.17ರಿಂದ 2025ರ ಜನವರಿ 23ವರೆಗೆ ಋಣಭಾರ ರಾಹಿತ್ಯ ಪ್ರಮಾಣ ಪತ್ರಗಳನ್ನು ಅಪೆಕ್ಸ್‌ ಬ್ಯಾಂಕ್ ಪಡೆದಿರಲಿಲ್ಲ.

 

ಅಲ್ಲದೇ 2023ರ ಫೆ.21ರಂದು ರೆಡ್ಡಿ ವೀರಣ್ಣ ಮತ್ತು ಸುಗಣ ರೆಡ್ಡಿ ಅವರ ಒಡೆತನದಲ್ಲಿರವು ಸ್ವತ್ತುಗಳನ್ನು ಸಾಲಕ್ಕೆ ಭದ್ರತೆಯನ್ನಾಗಿ ನೀಡಲಾಗಿತ್ತು. ಆದರೆ ಈ ಸ್ವತ್ತುಗಳಿಗೆ ಸಂಬಂಧಿಸಿದಂತೆ ಪಡೆದ ಕಾನೂನು ವರದಿಯಲ್ಲಿ, ಈ ಸ್ವತ್ತಗಳು ಕೆನರಾ ಬ್ಯಾಂಕ್‌ ಪರವಾಗಿ ಋಣಭಾರದಲ್ಲಿದ್ದವು.

 

 

ರೆಡ್ಡಿ ವೀರಣ್ಣ ಕನ್ಸ್‌ಟ್ರಕ್ಷನ್ಸ್‌ ಲಿಮಿಟೆಡ್‌ನೊಂದಿಗೆ ಆಗಿರುವ ಒಡಂಬಡಿಕೆ ಪ್ರಕಾರ ಒಟ್ಟು ಗುತ್ತಿಗೆ ಮೌಲ್ಯ, ಬ್ಯಾಂಕ್‌ ಸಾಲ ಮಂಜೂರು ಮಾಡಿದ್ದ ಉದ್ದೇಶದ ಟೆಂಡರ್ ಪ್ರೀಮಿಯಂ ಮೊತ್ತ ಸೇರಿಸಿದರೆ ಒಟ್ಟಾರೆ 91.28 ಕೋಟಿ ರು ಆಗಲಿದೆ. ಸಾಲಗಾರರಾದ ರೆಡ್ಡಿ ವೀರಣ್ಣ ಕನ್ಸ್‌ಟ್ರಕ್ಷನ್ಸ್‌ ಲಿಮಿಟೆಡ್‌, ವಿಶ್ವೇಶ್ವರಯ್ಯ ಜಲ ನಿಗಮದ ಬಾಕಿ ಉಳಿದ ಶೇ. 25ರಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಲ ಪಡೆದಿತ್ತು. ಬಾಕಿ ಉಳಿದ ಶೇ. 25ರ ಗುತ್ತಿಗೆ ಕಾರ್ಯದ ಮೌಲ್ಯ 22.28 ಕೋಟಿಗಳಷ್ಟಿತ್ತು. ಗುತ್ತಿಗೆ ಒಪ್ಪಂದದಂತೆ ಶೇ. 9ರಷ್ಟು ಪ್ರೀಮಿಯಂ ಲೆಕ್ಕಾಚಾರಕ್ಕೆ ತೆಗೆದುಕೊಂಡರೇ ಗುತ್ತಿಗೆದಾರರು ಶೇ. 25ರಷ್ಟನ್ನು ಸಂಪೂರ್ಣಗೊಳಿಸಬೇಕಾದ ಕಾಮಗಾರಿ ಮೊತ್ತ 20.60 ಕೋಟಿ ರು ಆಗಲಿದೆ.

 

ಇದರಿಂದ ಬಾಕಿ ಉಳಿದ ಕಾಮಗಾರಿಗಳ ಮೌಲ್ಯವು 20.60 ಕೋಟಿಯಷ್ಟಾಗುತ್ತದೆ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಆದರೂ ಮಂಜೂರಾತಿಯು ಕ್ರಮಬದ್ಧವಾಗಿರಲಿಲ್ಲ ಎಂದಿರುವ ಲೆಕ್ಕ ಪರಿಶೋಧಕರು 2011ರ ಸೆ.10ರಂದು ಬ್ಯಾಂಕ್‌ನ ಆಡಳಿತ ಮಂಡಳಿ ಸಭೆಯ ಠರಾವನ್ನು ಮುಂದಿರಿಸಿದ್ದಾರೆ.

 

ಇದರ ಪ್ರಕಾರ ಯೋಜನಾ ಸಾಲಗಳಿಗೆ ಸಂಬಂಧಿಸಿದಂತೆ ನಿರ್ವಹಣಾ ಸೂತ್ರಗಳಿಗೆ ಸಂಬಂಧಿಸಿದಂತೆ ಅನುಮೋದಿತವಾಗಿದ್ದ ಪಾಲಿಸಿ ಆಧಾರದ ಮೇಲೆ ಬ್ಯಾಂಕ್‌ನಿಂದ ನೀಡಲ್ಪಡುವ ಸುತ್ತೋಲೆ ಪ್ರಕಾರ ಅವಧಿ ಸಾಲಗಳಲ್ಲಿ ಶೇ. 25ರ ಮಾರ್ಜಿನ್‌ ನಿರ್ವಹಿಸಬೇಕು. ಹೀಗಿದ್ದರೂ ಸಹ ಸಮೂಹ ವ್ಯವಸ್ಥೆಯಡಿಯಲ್ಲಿ ಬ್ಯಾಂಕ್‌, ಸಾಲಗಾರರಿಗೆ ಮಂಜೂರು ಮಾಡಿ ಬಿಡುಗಡೆ ಮಾಡಿದ ಮೊತ್ತವು ಹೆಚ್ಚಿನದ್ದಾಗಿದೆ. ಹೀಗಾಗಿ ಸಾಲ ಮಂಜೂರಾತಿಯು ಕ್ರಮಬದ್ಧವಾಗಿಲ್ಲ ಎಂದು ವಿವರಿಸಿರುವುದು ತಿಳಿದು ಬಂದಿದೆ.

 

ರೆಡ್ಡಿ ವೀರಣ್ಣ ಕನ್ಸ್‌ಟ್ರಕ್ಷನ್ಸ್‌ ಲಿಮಿಟೆಡ್‌ 2024ರ ಅಕ್ಟೋಬರ್‍‌ 21ರಂದು ನೀಡಿದ್ದ ಮಾಹಿತಿ ಪ್ರಕಾರ ಶೇ.75ರಷ್ಟು ಕಾಮಗಾರಿ ಮುಕ್ತಾಯಗೊಂಡಿತ್ತು. ಆದರೆ ವಿಶ್ವೇಶ್ವರಯ್ಯ ಜಲ ನಿಗಮದ ಪತ್ರದ ಪ್ರಕಾರ ಯೋಜನೆಯ ಸಂಪೂರ್ಣ ಕಾಮಗಾರಿಗಳನ್ನು ಮುಕ್ತಾಯಗೊಳಿಸಲು ಮೂರನೇ ಬಾರಿಗೆ ವಿಸ್ತರಣೆ ಮಾಡಲಾಗಿದೆ.

 

‘ಈ ಕಾರಣಗಳಿಗಾಗಿ ಬ್ಯಾಂಖ್‌ 2025ರ ಮಾರ್ಚ್‌ 17ರಂದು ಗಡುವು ನೀಡಿದ್ದ ದಿನಾಂಕ ಕಳೆದ ಮೇಲೆ ಮಂಜೂರಾದ ಮೊತ್ತವನ್ನು ಬಿಡುಗಡೆ ಮಾಡುವುದು ಕ್ರಮಬದ್ಧವಾಗಿರುವುದಿಲ್ಲ,’ ಎಂದು ಅಭಿಪ್ರಾಯಿಸಿದೆ.

 

ಅದೇ ರೀತಿ ಈ ಕಾಮಗಾರಿಗಳನ್ನು ಪೂರ್ಣಗೊಳಿಸಲು 25 ಕೋಟಿ ರು.ಗಳನ್ನು ಸಮೂಹ ವ್ಯವಸ್ಥೆಯಡಿಯಲ್ಲಿ ಮೊರಟರೋರಿಯಂ ಅವಧಿ ಒಳಗೊಂಡಂತೆ 84 ಮಾಸಿಕ ಕಂತುಗಳಲ್ಲಿ ಮರು ಪಾವತಿಸಬೇಕು ಎಂದು ನಿಬಂಧನೆ ಹಾಕಿದೆ. ಆದರೆ ವಿಶ್ವೇಶ್ವರಯ್ಯ ಜಲ ನಿಗಮದಿಂದ ಸ್ವೀಕೃತವಾಗಿರುವ ಕಾರ್ಯಾದೇಶದ ಪ್ರಕಾರ ಈ ಒಪ್ಪಂದವು ವರಮಾನ ಅಧಾರಿತ ಒಪ್ಪಂದವಾಗಿದೆ. ಮತ್ತು ಈ ಕಾರ್ಯಾದೇಶದ ಒಪ್ಪಂದಿತ ಮೌಲ್ಯವು ಒಪ್ಪಿಸಲ್ಪಟ್ಟ ಕಾರ್ಯ ಸಂಪೂರ್ಣಗೊಳಿಸಿದ ತಕ್ಷಣ ಬಿಡುಗಡೆ ಮಾಡಿದಂತಾಗುತ್ತದೆ ಎಂದು ವರದಿಯಲ್ಲಿ ವಿವರಿಸಿದೆ.

 

ರಿಸರ್ವ್‌ ಬ್ಯಾಂಕ್‌ನ ಸಾಲಗಳು ಮತ್ತು ಮುಂಗಡಗಳ ಶಾಸನಬದ್ಧ ಮತ್ತು ಇತರ ನಿರ್ಬಂಧಗಳ ಕುರಿತು ಹೊರಡಿಸಿರುವ ಸುತ್ತೋಲೆ ಪ್ರಕಾರ ಬ್ಯಾಂಕ್‌ಗಳಿಗೆ ನಿರ್ದಿಷ್ಟವಾಗಿ ಸಾಲಗಾರರೊಂದಿಗಿನ ನಗದು ಹರಿವಿನ ಆಧಾರದ ಮೇಲೆ ವಾಸ್ತವಿಕ ಮರು ಪಾವತಿ ವೇಳಾಪಟ್ಟಿಗಳನ್ನು ನಿಗದಿಪಡಿಸಬಹುದು ಎಂಧು ಸೂಚಿಸಿದೆ. ಈ ಸಂದರ್ಭದಲ್ಲಿ ಯೋಜನೆಯ ಅವಧಿ 6 ತಿಂಗಳಿಗಿಂತ ಕಡಿಮೆ ಇರುವ ಕಾರಣ ಮತ್ತು ಸ್ವೀಕೃತಿಗಳನ್ನು ತಕ್ಷಣವೇ ಸಂಗ್ರಹಿಸುವ ನಿರೀಕ್ಷೆಯಲಿರುವುದರಿಂದ 84 ಮಾಸಿಕ ಕಂತುಗಳಿಗೆ ವಿಸ್ತರಿಸುವ ಮರು ಪಾವತಿ ವೇಳಾಪಟ್ಟಿಯನ್ನು ಅನುಮೋದಿಸುವುದು ಆದೇಶದಲ್ಲಿಲ್ಲ.

 

ಬ್ಯಾಂಕ್‌ 100 ಕೋಟಿ ರು.ಗಳ ದುಡಿಯುವ ಬಂಡವಾಳ ಸಾಲವನ್ನು ಈ ಸಾಲಗಾರರಿಗೆ ದಕ್ಷಿಣ ಕನ್ನಡ ಜಿಲ್ಲೆ ಕೇಂದ್ರ ಸಹಕಾರ ಬ್ಯಾಂಕ್‌ ಮತ್ತು ಶಿರಸಿಯ ಕೆನರಾ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ್ನೊಳಗೊಂಡ ಸಮೂಹ ವ್ಯವಸ್ಥೆಯಲ್ಲಿ ಮಂಜೂರು ಮಾಡಿದೆ. ಈ ಕಂಪನಿಯ ಚಾರ್ಟ್‌ರ್‍ಡ್‌ ಅಕೌಟೆಂಟ್‌ ಸಲ್ಲಿಸಿದ್ದ ಪ್ರಮಾಣ ಪತ್ರದ ಪ್ರಕಾರ ಮಂಜೂರಾಗಿದ್ದ ಸಾಲದ ಶೇ.23ರಷ್ಟು ಮೊತ್ತವನ್ನು ಯೋಜನೆ ವೆಚ್ಚಗಳನ್ನು ಪೂರೈಸಲು ಬಳಸಲಾಗಿದೆ. ಶೇ. 77ರಷ್ಟು ಮೊತ್ತವನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಂದ ಮತ್ತು ನಿರ್ದೇಶಕರಿಂದ 2021-22ನೇ ಹಣಕಾಸಿನ ವರ್ಷಕ್ಕೆ ಮುಂಚಿತವಾಗಿ ಪಡೆದುಕೊಂಡಿದ್ದ ಭದ್ರತಾ ರಹಿತ ಸಾಲಗಳನ್ನು ಮರು ಪಾವತಿಸಲು ಬಳಸಲಾಗಿದೆ.

 

ಅದೇ ರೀತಿ ಇದೇ ಕಂಪನಿಗೆ 2023ರ ಮಾರ್ಚ್‌ 20ರಲ್ಲಿ 2 ಕೋಟಿ ರು ಸಾಲವನ್ನು (ಖಾತೆ ಸಂಖ್ಯೆ; 13/692/02) ಮಂಜೂರು ಮಾಡಲಾಗಿತ್ತು.

 

 

ಈ ಸಾಲದ ಪ್ರಕರಣದಲ್ಲಿಯೂ 2024ರ ಆಗಸ್ಟ್‌ 28ರಿಂದ 2025ರ ಮಾರ್ಚ್‌ 10ರವರೆಗಿನ ಋಣಭಾರರಾಹಿತ್ಯ ಪ್ರಮಾಣ ಪತ್ರವನ್ನು ಪಡೆದಿರಲಿಲ್ಲ.

 

 

ಭದ್ರತೆಗಾಗಿ ನೀಡಿದ ಸ್ವತ್ತುಗಳಿಗೆ ಸಂಬಂಧಿಸಿದಂತೆ 2024-25ನೇ ಹಣಕಾಸು ವರ್ಷದ ತೆರಿಗೆ ಪಾವತಿ ರಸೀದಿಗಳನ್ನು ಪಡೆದಿರಲಿಲ್ಲ. 2025ರ ಮಾರ್ಚ್‌ 31ರಲ್ಲಿದ್ದಂತೆ ಈ ಖಾತೆಯಲ್ಲಿ ಮಂಜೂರಾಗಿದ್ದ ಮಿತಿ 2 ಕೋಟಿ ರು ಗಳಿಗೆ ವಿರುದ್ಧವಾಗಿ 1.99 ಕೋಟಿಗಳಷ್ಟು ಹೊರಬಾಕಿ ಇದೆ. ಇದು ಅಗತ್ಯವಿರುವ ಅಸಲಿನಲ್ಲಿ ಕಡಿಮೆ ಮಾಡಿಲ್ಲದಿರುವುದು ಕಂಡು ಬರುತ್ತದೆ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

2022ರಲ್ಲಿ ಈ ಕಂಪನಿಗೆ 40 ಕೋಟಿ ರು ಸಾಲವನ್ನು ಮಂಜೂರು ಮಾಡಲಾಗಿತ್ತು.

 

 

ಪ್ರಸಕ್ತ ವರ್ಷದಲ್ಲಿ ಮಂಜೂರಾದ ನಗದು ಸಾಲ ಮಿತಿಯಲ್ಲಿ 40 ಕೋಟಿಗಳ ವಹಿವಾಟು, 7.12 ಕೋಟಿಗಳ ಡೆಬಿಟ್‌ ಮತ್ತು 7.23 ಕೋಟಿ ರು ಗಳ ಕ್ರೆಡಿಟ್‌ ವ್ಯವಹಾರಗಳನ್ನು ಪ್ರತಿನಿಧಿಸುತ್ತದೆ. ಈ ಖಾತೆಗೆ ನಗದಾಗಿ ಬಂದಿರುವ ಮೊತ್ತದ ಕುರಿತು ಲೆಕ್ಕ ಪರಿಶೋಧಕರು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದ್ದರು.

 

 

 

ಇದರ ಪ್ರಕಾರ ಬಹುತೇಕ ಸ್ವೀಕೃತಿಗಳು ವ್ಯಾಪಾರ ವಹಿವಾಟಿನ ಆದಾಯದಿಂದ ಬಂದ ಖಾತೆಗೆ ತುಂಬಿರಲಿಲ್ಲ. ಅವಧಿ ಸಾಲದಿಂದ ಬಿಡುಗಡೆ ಮಾಡಿಸಿಕೊಂಡ ಮೊತ್ತಗಳಾಗಿದ್ದವು. ಇವುಗಳನ್ನು ನಗದು ಪತ್ತಿನ ಸಾಲಕ್ಕೆ ಸಂಬಂಧಿಸಿದಂತೆ ಬಡ್ಡಿ ಬಾಧ್ಯತೆಯನ್ನು ಪೂರೈಸಲು ಉಪಯೋಗಿಸಲಾಗಿದೆ ಎಂದು ಪರಿಶೀಲನೆಯ ವೇಳೆ ಪತ್ತೆ ಹಚ್ಚಿರುವುದು ಗೊತ್ತಾಗಿದೆ.

 

ಅಲ್ಲದೇ ಅವಧಿ ಸಾಲದಿಂದ ಪಡೆದುಕೊಂಡ ಕಂತುಗಳನ್ನು ಪ್ರಸ್ತುತ ಇರುವ ಅವಧಿ ಸಾಲಗಳನ್ನು ಚುಕ್ತಾ ಮಾಡಲು, ಬಡ್ಡಿ ಪಾವತಿಸಲು, ನವೀಕರಣ ಚಾರ್ಜ್ಗಳನ್ನು ಪಾವತಿಸಲು, ದಂಡ, ಬಡ್ಡಿ ಪಾವತಿಸಲು ಬಳಸಲಾಗಿದೆ. ಉದಾಹರಣೆಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ ಬಿಡುಗಡೆಯಾಗಹಿದ್ದ 9.47 ಕೋಟಿಗಳನ್ನು 47,95,615 ರಷ್ಟು ಅವಧಿ ಸಾಲದ ಕಂತುಗಳನ್ನು ಪಾವತಿಸಲು, 4,72,000.00 ಗಳಷ್ಟು ನಗದು ಸಾಲ ಶುಲ್ಕಗಳನ್ನು ಪಾವತಿಸಲು, 3,13,284 ಗಳಷ್ಟು ದಂಡ ಬಡ್ಡಿ ಪಾವತಿಸಲು ಉಪಯೋಗಿಸಲಾಗಿದೆ.

 

ಇನ್ನೊಂದು ನಗದು ಸಾಲ ಖಾತೆಯಲ್ಲಿ 2 ಕೋಟಿ ಮಂಜೂರಾಗಿದೆ. ಇದರಲ್ಲಿ ವಾರ್ಷಿಕ ವಹಿವಾಟು ಕೇವಲ 0.33 ಲಕ್ಷಗಳಿದ್ದವು. ಇದು ವ್ಯಾಪಾರ ವಹಿವಾಟು ತುಂಬಾ ಕ್ಷೀಣವಾಗಿರುವುದನ್ನು ಸಾಬೀತಪಡಿಸಿದೆ. ಯೋಜನೆಗೆ ಸಂಬಂಧಿಸಿದಂತೆ ಎಲ್ಲಾ ನಗದು ಹರಿವುಗಳನ್ನು ಅದರ ಎಸ್ಕ್ರೋ ಖಾತೆ ಮೂಲಕವೇ ನಡೆಸಬೇಕು.

 

ಆದರೆ ಒಟ್ಟು ದುಡಿಯುವ ಬಂಡವಾಳ ಮಿತಿ 125 ಕೋಟಿ ರು.ಗಳಿಗೆ ವಿರುದ್ಧವಾಗಿ ವಾರ್ಷಿಕವಾಗಿ ಕೇವಲ 18.28 ಕೋಟಿಗಳ ಮತ್ತು 17.85 ಕೋಟಿ ರುಗಳ ಡೆಬಿಟ್‌ ಮತ್ತು ಕ್ರೆಡಿಟ್‌ ನಮೂದುಗಳು ಮಾತ್ರ ಖಾತೆಯಲ್ಲಿ ದಾಖಲಾಗಿದೆ. ಖಾತೆಯಲ್ಲಿನ ಈ ಕಡಿಮೆ ಮೊತ್ತದ ವ್ಯವಹಾರವು ವ್ಯಾಪಾರದ ಎಲ್ಲಾ ಹಣಕಾಸು ವ್ಯವಹಾರಗಳನ್ನು ಎಸ್ಕ್ರೋ ಖಾತೆಯ ಮೂಲಕ ಮಾಡದೇ ಕೇವಲ ಸಾಲ ಮರು ಪಾವತಿ ಮಾಡಲು ಉಪಯೋಗಿಸುತ್ತಿರುವುದನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿರುವುದು ವರದಿಯಿಂದ ಗೊತ್ತಾಗಿದೆ.

 

 

ಸಾಲಗಾರರು ಹೆಚ್ಚುವರಿಯಾಗಿ ಅವಧಿ ಸಾಲದ ಕಂತುಗಳನ್ನು ಇತರೆ ಬ್ಯಾಂಕ್‌ಗಳಲ್ಲಿ ತಮ್ಮ ಹೆಸರಿನಲ್ಲಿ ನಿರ್ವಹಿಸುತ್ತಿರುವ ಇತರೆ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಇದು ಸಾಲ ಮೊತ್ತದ ಮೇಲ್ವಿಚಾರಣೆಯನ್ನು ಮತ್ತು ಅಂತಿಮ ಬಳಕೆಯನ್ನು ಸಾಲ ಮಂಜೂರು ಮಾಡಿದ ಸಂಸ್ಥೆಯು ತೃಪ್ತಿಕರವಾಗಿ ಮಾಡುತ್ತಿಲ್ಲವೆಂಬುದು ತೋರಿಸುತ್ತದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಕೆಐಎಡಿಬಿ ಸ್ವತ್ತು ಅಡವಿರಿಸಿ 2,500 ಕೋಟಿ ರು. ಸಾಲ; ಭೋಗ್ಯ ಕರಾರಿನ ನಿಯಮ ಉಲ್ಲಂಘಿಸಿದ್ದರೂ ಕ್ರಮವಿಲ್ಲ

 

 

ಭೋಗ್ಯ  ಮತ್ತು ಕರಾರು ಪತ್ರದಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಕೆಎಐಡಿಬಿಯ ಸ್ವತ್ತನ್ನು ಒತ್ತೆಯಟ್ಟಿದ್ದ ಪ್ರಕರಣದಲ್ಲಿ ಇದೇ ರೆಡ್ಡಿ ವೀರಣ್ಣ ಅವರು ಆರ್‍‌ಬಿಐ ಸೇರಿದಂತೆ ಇನ್ನಿತರೆ ಸಕ್ಷಮ ಪ್ರಾಧಿಕಾರಗಳಿಗೆ ದೂರು ಸಲ್ಲಿಸಿದ್ದರು. ಇದರ ಬಗ್ಗೆಯೂ ದಿ ಫೈಲ್‌  2022ರ ಮೇ 30ರಂದೇ ವರದಿ ಪ್ರಕಟಿಸಿತ್ತು.

Your generous support will help us remain independent and work without fear.

Latest News

Related Posts