ಬೆಂಗಳೂರು; ದೇಶದ ರಕ್ಷಣಾವಲಯ ಸಂಪೂರ್ಣ ಸ್ವದೇಶಿ ಆಗಬೇಕೆಂದು ತರಲಾದ ಹೊಸ ರಕ್ಷಣಾ ಸಾಮಗ್ರಿ ಖರೀದಿ ನೀತಿ ವಿಫಲವಾಗಿದೆ ಎಂದು ಹೇಳಿರುವ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು 94,760 ಕೋಟಿ ರೂಪಾಯಿ ಆಫ್‌ಸೆಟ್ ಗುತ್ತಿಗೆ ಪೂರ್ಣಗೊಂಡಿಲ್ಲ. ಅಲ್ಲದೇ ಈ ಸಂಬಂಧ ಮರು ಲೆಕ್ಕ ಪರಿಶೋಧನೆ ಮಾಡಲು ಸೂಚಿಸಿದೆ. ಹಾಗೆಯೇ ಆಫ್‌ಸೆಟ್ ಗುತ್ತಿಗೆ ನಿರ್ವಹಣೆಯಲ್ಲಿ ಗಂಭೀರ ಲೋಪದೋಷಗಳನ್ನು ಸಮಿತಿಯು ಪತ್ತೆ ಹಚ್ಚಿದೆ.
ಕೆ.ಸಿ.ವೇಣುಗೋಪಾಲ್ ಅಧ್ಯಕ್ಷತೆಯ ಲೋಕಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು (Public Accounts Committee –
PAC) ರಕ್ಷಣಾ ಆಫ್‌ಸೆಟ್ (Defence Offset) ನೀತಿಯ ಅನುಷ್ಠಾನದ ಕುರಿತು 100 ಪುಟಗಳ 50ನೇ ವರದಿಯನ್ನು 2026ರ ಜುಲೈ 21ರಂದು ಸಲ್ಲಿಸಿದೆ.

ವಿದೇಶಿ ಗುತ್ತಿಗೆದಾರರಿಂದ ಶೇಕಡ 45ರಷ್ಟು ಭಾದ್ಯತೆಗಳು ಬಾಕಿ ಇರುವುದರಿಂದ ವಿಶೇಷ ಮರು ಲೆಕ್ಕ ಪರಿಶೋಧನೆ ಮಾಡಬೇಕು ಎಂದು ಶಿಫಾರಸು ಮಾಡಿದೆ. 2033ರೊಳಗೆ ಪೂರ್ಣಗೊಳ್ಳುವಂತೆ 56 ರಕ್ಷಣಾ ಆಫ್‌ಸೆಟ್ ಒಪ್ಪಂದಗಳಾಗಿದ್ದವು. ಅವುಗಳ ಒಟ್ಟು ಮೌಲ್ಯ
ಸುಮಾರು 1.15 ಲಕ್ಷ ಕೋಟಿ ರೂಪಾಯಿ. ಪ್ರಸ್ತುತ ಜಾರಿಯಲ್ಲಿರುವ 26 ಒಪ್ಪಂದಗಳ ಒಟ್ಟು ಆಫ್‌ಸೆಟ್ ಬಾಧ್ಯತೆ ಸುಮಾರು 86,264 ಕೋಟಿ ರೂಪಾಯಿ. ಇದರಲ್ಲಿ ಮಾರಾಟಗಾರರು ಸುಮಾರು 47,569 ಕೋಟಿ ರೂಪಾಯಿ (ಸುಮಾರು ಶೇ. 55) ಮೌಲ್ಯದ ಆಫ್‌ಸೆಟ್ ಸಾಧನೆಯ ದಾಖಲೆಗಳನ್ನು ಸಮಿತಿಯು ಸಲ್ಲಿಸಿದೆ.
ಇನ್ನೂ ಸುಮಾರು 38,695 ಕೋಟಿ ರೂಪಾಯಿ (ಒಟ್ಟು ಬಾಧ್ಯತೆಯ ಶೇ. 45) ಮೌಲ್ಯದ ಆಫ್‌ಸೆಟ್ ಬಾಧ್ಯತೆಗಳನ್ನು ಪೂರೈಸಬೇಕಿದೆ. ರಕ್ಷಣಾ ಕಂಪನಿಗಳು 11,396 ಕೋಟಿ ಮೌಲ್ಯದ ಆಫ್‌ಸೆಟ್ ಬಾಧ್ಯತೆಯನ್ನು ಪೂರೈಸಿರುವುದಾಗಿ ಹೇಳಿಕೊಂಡಿದೆ. ಆದರೂ ಕಂಟ್ರೋಲರ್ ಜನರಲ್ ಆಫ್ ಡಿಫೆನ್ಸ್ ಅಕೌಂಟ್ಸ್ (CGDA) ಕೇವಲ ₹5,457 ಕೋಟಿ ಮೌಲ್ಯದ ಕ್ಲೇಮುಗಳನ್ನು ಮಾತ್ರ ಮಾನ್ಯಗೊಳಿಸಿದೆ. ಇದು ಒಟ್ಟು ಕ್ಲೇಮುಗಳು ಶೇ. 48 ಮಾತ್ರ. ಉಳಿದ ಕ್ಲೇಮುಗಳನ್ನು ಸಿಜಿಡಿಎ ಅಥವಾ ಡಿಫೆನ್ಸ್ ಆಫ್‌ಸೆಟ್ ಮ್ಯಾನೇಜ್‌ಮೆಂಟ್ ವಿಂಗ್ (DOMW) ನಲ್ಲಿ ಬಾಕಿ ಉಳಿದಿವೆ ಎಂದು ವರದಿಯಲ್ಲಿ ವಿವರಿಸಿದೆ.

ವಿಳಂಬಕ್ಕೆ ಕಾರಣವೇನು?
ಒಪ್ಪಂದಗಳಿಗೆ ಸಹಿ ಹಾಕುವ ಸಂದರ್ಭದಲ್ಲಿ ಯೋಜಿಸಲಾಗಿದ್ದ ಹಲವು ಆಫ್‌ಸೆಟ್ ಯೋಜನೆಗಳು ಕಾರ್ಯರೂಪಕ್ಕೆ ಬರದ ಕಾರಣ ಈ ವಿಳಂಬ ಉಂಟಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಆದರೆ, ಸುಮಾರು 38,695 ಕೋಟಿ ರು ಮೌಲ್ಯದ ಆಫ್‌ಸೆಟ್ ಬಾಧ್ಯತೆಗಳು ಇನ್ನೂ ಬಾಕಿ ಉಳಿದಿದೆ. ಅಲ್ಲದೇ ರಕ್ಷಣಾ ಆಫ್‌ಸೆಟ್ ನೀತಿಯ ಅನುಷ್ಠಾನದಲ್ಲಿ ಲೋಪದೋಷಗಳಿವೆ. ಹೀಗಾಗಿಯೇ ನೀತಿಯಲ್ಲಿ ಗಂಭೀರ ವಿಳಂಬ ಆಗಿದೆ. ಶೇಕಡ 45ರಷ್ಟು ಎಂದು ಆಫ್‌ಸೆಟ್ ಬಾಧ್ಯತೆಗಳು ಬಾಕಿ ಇರುವುದಕ್ಕೆ ಸಮಿತಿಯು ಕಳವಳ ವ್ಯಕ್ತಪಡಿಸಿದೆ.

ಹೊಸ ನೀತಿಯಲ್ಲಿ ಹಿಂದಿನಂತೆ ಉತ್ಪನ್ನಗಳ ಖರೀದಿಗೆ ಹೆಚ್ಚು ಒತ್ತು ನೀಡುವುದಕ್ಕಿಂತ, ಅತ್ಯಾಧುನಿಕ ತಂತ್ರಜ್ಞಾನ ವರ್ಗಾವಣೆ (Transfer of Technology – ToT) ಮತ್ತು ನಿರ್ವಹಣೆ, ದುರಸ್ತಿ ಸೌಲಭ್ಯಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಶಿಫಾರಸು ಮಾಡಿದೆ. ನಿಯಂತ್ರಕ ಮತ್ತು ಮಹಾಲೆಕ್ಕಪರಿಶೋಧಕರ 2019ರ ವರದಿಯನ್ನು ಆಧರಿಸಿ ರಕ್ಷಣಾ ಸಚಿವಾಲಯದ ಕಾರ್ಯವೈಖರಿ, ಆಫ್‌ಸೆಟ್ ನೀತಿಯ ಪರಿಣಾಮ, ತಂತ್ರಜ್ಞಾನ ವರ್ಗಾವಣೆ, ವಿದೇಶಿ ಕಂಪನಿಗಳ ಬದ್ಧತೆ, ಭಾರತೀಯ ಕೈಗಾರಿಕೆಗಳ ಪಾಲ್ಗೊಳ್ಳುವಿಕೆ ಸೇರಿದಂತೆ ಹಲವು ಅಂಶಗಳನ್ನು ಸಮಿತಿಯು ವಿಶ್ಲೇಷಿಸಿದೆ.

ಆಫ್‌ಸೆಟ್ ಗುತ್ತಿಗೆ ಎಂದರೇನು?
ಭಾರತವು ವಿದೇಶಿ ಕಂಪನಿಗಳಿಂದ ಯುದ್ಧ ವಿಮಾನ, ಹೆಲಿಕಾಪ್ಟರ್, ಕ್ಷಿಪಣಿ, ನೌಕಾ ವ್ಯವಸ್ಥೆ ಅಥವಾ ಇತರೆ ದುಬಾರಿ ರಕ್ಷಣಾ
ಸಾಧನಗಳನ್ನು ಖರೀದಿಸುವಾಗ, ಆ ವಿದೇಶಿ ಕಂಪನಿಯು ಒಪ್ಪಂದದ ಒಂದು ಭಾಗವನ್ನು ಭಾರತದಲ್ಲೇ ಹೂಡಿಕೆ ಮಾಡಬೇಕು ಅಥವಾ
ಭಾರತೀಯ ಕೈಗಾರಿಕೆಗಳಿಗೆ ಕೆಲಸ ನೀಡಬೇಕು. ಇದನ್ನೇ ಆಫ್‌ಸೆಟ್ ಎಂದು ಕರೆಯಲಾಗುತ್ತದೆ. ವಿದೇಶಕ್ಕೆ ಹೋಗುವ ದೊಡ್ಡ ಪ್ರಮಾಣದ ಹಣಕ್ಕೆ ಭಾಗಶಃ ಪ್ರತಿಫಲ ದೊರಕಿಸುವುದು.ಅತ್ಯಾಧುನಿಕ ತಂತ್ರಜ್ಞಾನವನ್ನು ಭಾರತಕ್ಕೆ ತರಿಸುವುದು ಮತ್ತು ದೇಶೀಯ ರಕ್ಷಣಾ ಕೈಗಾರಿಕೆಯ ಸಾಮರ್ಥ್ಯವನ್ನು ವೃದ್ಧಿಸುವುದು ಇದರ ಮೂರು ಪ್ರಮುಖ ಉದ್ದೇಶಗಳಿವೆ.

ರಕ್ಷಣಾ ಸಾಮಗ್ರಿಗಳ ಖರೀದಿ ಪ್ರಕ್ರಿಯೆ (DAP)–2025 ಕರಡನ್ನು ವಿವಿಧ ಹಿತಾಸಕ್ತಿದಾರರೊಂದಿಗೆ ಸಮಾಲೋಚಿಸಿ
ಸಿದ್ಧಪಡಿಸಲಾಗುತ್ತಿದೆ. ಭಾರತದ ರಕ್ಷಣಾ ಕೈಗಾರಿಕೆ ಮುಂದಿನ ಹಂತಕ್ಕೆ ಬೆಳೆಯಬೇಕಾದರೆ ಕೇವಲ ವಿದೇಶಿ ಉತ್ಪನ್ನಗಳ ಭಾಗಗಳನ್ನು
ತಯಾರಿಸುವುದರಿಂದ ಸಾಲದು. ಅತ್ಯಾಧುನಿಕ ವಿನ್ಯಾಸ, ಸಂಶೋಧನೆ, ನಿರ್ವಹಣೆ ಹಾಗೂ ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿಗೆ ಉತ್ತೇಜನ
ನೀಡುವ ರೀತಿಯಲ್ಲಿ ಆಫ್‌ಸೆಟ್ ನೀತಿಯನ್ನು ಪರಿಷ್ಕರಿಸಬೇಕು ಎಂದು ಲೆಕ್ಕಪತ್ರ ಸಮಿತಿ ಶಿಫಾರಸು ಮಾಡಿದೆ.
ಎಂಆರ್‍ಒ ಕ್ಷೇತ್ರಕ್ಕೆ ಹೊಸ ಆದ್ಯತೆ
ಭಾರತ ಇನ್ನೂ ಸೇನಾ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ Maintenance, Repair and Overhaul (MRO) ಕ್ಷೇತ್ರದಲ್ಲಿ
ಸಂಪೂರ್ಣ ಸ್ವಾವಲಂಬಿಯಾಗಿಲ್ಲ ಎಂದು ಹೇಳಿದೆ. ಸೇನಾ ವಿಮಾನ ಹಾಗೂ ಹೆಲಿಕಾಪ್ಟರ್‌ಗಳ ಎಂಆರ್‍ಒ ಕೇಂದ್ರಗಳನ್ನು ಭಾರತದಲ್ಲೇ ಸ್ಥಾಪಿಸಲು ವಿದೇಶಿ ಹೂಡಿಕೆಗೆ ಅವಕಾಶ. ಎಂಆರ್‍ಒ ಕ್ಷೇತ್ರದಲ್ಲಿ ಹೂಡಿಕೆ ಮಾಡಿದರೆ ಆಫ್‌ಸೆಟ್ ಕ್ರೆಡಿಟ್ ನೀಡುವ ವ್ಯವಸ್ಥೆ. ರಕ್ಷಣಾ ಕೈಗಾರಿಕಾ ಕಾರಿಡಾರ್‌ಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಸೂಚಿಸಿದೆ.

ಆಫ್‌ಸೆಟ್ ನೀತಿಯಲ್ಲಿ ತಿದ್ದುಪಡಿಗಳ ಪ್ರಸ್ತಾಪ
DAP–2025 ಕರಡಿನಲ್ಲಿ ಲೆಕ್ಕಪತ್ರ ಸಮಿತಿಯು ಹಲವು ಬದಲಾವಣೆಗಳನ್ನು ಶಿಫಾರಸು ಮಾಡಿದೆ. ಅವುಗಳಲ್ಲಿ ಪ್ರಮುಖವಾಗಿ ಆಫ್‌ಸೆಟ್‌ನ ಪ್ರಮುಖ ಮಾರ್ಗಗಳನ್ನು ಎರಡು ಕ್ಷೇತ್ರಗಳಿಗೆ ಸೀಮಿತಗೊಳಿಸಬಹುದು. ಭಾರತೀಯ ಆಫ್‌ಸೆಟ್ ಪಾಲುದಾರ (IOP) ವಿದೇಶಿ ಕಂಪನಿಯ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿರಬಾರದು. ಮುಖ್ಯ ವಿದೇಶಿ ಕಂಪನಿಯ ಗುಂಪಿನ ಇತರ ಕಂಪನಿಗಳಿಗೂ ಆಫ್‌ಸೆಟ್ ಜವಾಬ್ದಾರಿ ನಿರ್ವಹಿಸಲು ಅವಕಾಶ ನೀಡಬೇಕು. ಆಫ್‌ಸೆಟ್ ಬಾಧ್ಯತೆ ಪೂರೈಸದಿದ್ದರೆ ಪರಿಹಾರ ಕ್ರಮ ಸೇರಿಸುವುದು ಮತ್ತು ಎಂಆರ್‍ಒ ಹೂಡಿಕೆಗೆ ವಿಶೇಷ ಮಲ್ಟಿಪ್ಲೈಯರ್ ನೀಡಬೇಕು ಎಂದು ಸಲಹೆ ನೀಡಿದೆ.

ವಿವಿಧ ದೇಶಗಳ ಆಫ್‌ಸೆಟ್ ನೀತಿಗಳ ಕುರಿತು ಸಮಿತಿಯು ಹೋಲಿಕೆ ಮಾಡಿದೆ. ಜಾಗತಿಕ ಅನುಭವದಿಂದ ಭಾರತ ಪಾಠಗಳನ್ನು ಕಲಿಯಬೇಕು ಎಂದು ಹೇಳಿದೆ. ಬ್ರೆಜಿಲ್, ಜಪಾನ್, ಟರ್ಕಿ ಸೇರಿದಂತೆ ಹಲವು ರಾಷ್ಟ್ರಗಳು ತಮ್ಮ ರಾಷ್ಟ್ರೀಯ ಅಗತ್ಯಗಳಿಗೆ ಅನುಗುಣವಾಗಿ ಆಫ್‌ಸೆಟ್ ನೀತಿಯನ್ನು ರೂಪಿಸಿಕೊಂಡಿವೆ ಎಂದು ವಿವರಿಸಿದೆ.

ಈ ದೇಶಗಳು ಮುಖ್ಯವಾಗಿ ತಂತ್ರಜ್ಞಾನ ವರ್ಗಾವಣೆ, ಸ್ಥಳೀಯ ಉತ್ಪಾದನೆ, ಉದ್ಯೋಗ ಸೃಷ್ಟಿ ಮತ್ತು ಸ್ವದೇಶಿ ರಕ್ಷಣಾ ಕೈಗಾರಿಕೆಯ
ಬೆಳವಣಿಗೆಗೆ ಒತ್ತು ನೀಡಿವೆ. ಭಾರತವೂ ಇದೇ ಮಾದರಿಯಲ್ಲಿ ತನ್ನ ನೀತಿಯನ್ನು ರೂಪಿಸಿಕೊಂಡಿದೆ. ಮುಂದಿನ ಹಂತದಲ್ಲಿ
ತಂತ್ರಜ್ಞಾನ ಕೇಂದ್ರಿತ ದೃಷ್ಟಿಕೋನ ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ಸಮಿತಿ ಅಭಿಪ್ರಾಯವಾಗಿದೆ. ಬ್ರೆಜಿಲ್ ಮಾದರಿ ಪರಿಗಣಿಸಬೇಕು ಎಂದಿರುವ ಸಮಿತಿಯು, ಬ್ರೆಜಿಲ್ ದೇಶ 1980ರ ದಶಕದಲ್ಲೇ ಆಫ್‌ಸೆಟ್ ನೀತಿಯನ್ನು ಬಳಸಿಕೊಂಡು ತನ್ನ ವಿಮಾನ ವಲಯದ ಕೈಗಾರಿಕೆಯನ್ನು ಬಲಪಡಿಸಿತು ಎಂದು ಹೇಳಿದೆ.
ವಿದೇಶಿ ಕಂಪನಿಗಳೊಂದಿಗೆ ಸಹ-ಉತ್ಪಾದನೆ , ಪರವಾನಗಿ ಆಧಾರಿತ ಉತ್ಪಾದನೆ, ಜಂಟಿ ಉದ್ಯಮಗಳು (Joint Ventures) ಮತ್ತು ತಂತ್ರಜ್ಞಾನ ವರ್ಗಾವಣೆ ಮಾಡಿಕೊಂಡಿದೆ. ಇವುಗಳ ಮೂಲಕ ಬ್ರೆಜಿಲ್ ತನ್ನ ದೇಶದ ರಕ್ಷಣಾ ಮತ್ತು ವಿಮಾನ ಉದ್ಯಮವನ್ನು ವಿಶ್ವಮಟ್ಟಕ್ಕೆ ಬೆಳೆಸಿಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಸಂಪೂರ್ಣ ವಿಫಲವಾಗಿದೆಯೇ?
2005ರಲ್ಲಿ ಆರಂಭವಾದ ಆಫ್‌ಸೆಟ್ ನೀತಿ ಸಂಪೂರ್ಣ ವಿಫಲವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಅದೇ ಸಮಯದಲ್ಲಿ ಅದು ತನ್ನ
ಮೂಲ ಉದ್ದೇಶಗಳನ್ನೆಲ್ಲ ಸಂಪೂರ್ಣ ಸಾಧಿಸಿದೆ ಎಂದು ಹೇಳಲೂ ಸಾಧ್ಯವಿಲ್ಲ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ವಿಶ್ಲೇಷಿಸಿದೆ.

ಅಂದರೆ ಕೆಲವೊಂದು ಲೋಪದೋಷಗಳನ್ನು ತಿದ್ದುಪಡಿ ಮಾಡಬೇಕಾಗಿದೆ. ಈ ಆಫ್‌ಸೆಟ್ ನೀತಿಯು ಒಂದೆಡೆ, ಭಾರತೀಯ ಖಾಸಗಿ ಕೈಗಾರಿಕೆ ಬೆಳೆಯಲು ಅವಕಾಶ ದೊರಕಿದೆ. 370ಕ್ಕೂ ಹೆಚ್ಚು ಭಾರತೀಯ ಆಫ್‌ಸೆಟ್ ಪಾಲುದಾರರು ರೂಪುಗೊಂಡಿದ್ದಾರೆ. ಎಂಎಸ್‌ಎಂಇಗಳು ಜಾಗತಿಕ ಸರಬರಾಜು ಸರಣಿಗೆ ಸೇರ್ಪಡೆಯಾಗಿವೆ ಹಾಗೂ ರಕ್ಷಣಾ ಉತ್ಪಾದನೆ ಹಾಗೂ ರಫ್ತು ಹೆಚ್ಚಳಕ್ಕೆ ಆಫ್‌ಸೆಟ್ ನೀತಿ ಪರೋಕ್ಷವಾಗಿ ನೆರವಾಗಿದೆ.

ತಂತ್ರಜ್ಞಾನ ವರ್ಗಾವಣೆ ನಡೆದಿಲ್ಲ
ಇನ್ನೊಂದು ಕಡೆ, ಗಮನಿಸಬೇಕಾದ ಅಂಶಗಳೆಂದರೆ, ನಿರೀಕ್ಷಿತ ಮಟ್ಟದ ತಂತ್ರಜ್ಞಾನ ವರ್ಗಾವಣೆ ನಡೆದಿಲ್ಲ. ಎಫ್‌ಡಿಐ ಮೂಲಕ ದೊಡ್ಡ
ಹೂಡಿಕೆಗಳು ಬಂದಿಲ್ಲ.ಹಲವಾರು ಕಂಪನಿಗಳು ಉತ್ಪನ್ನ ಖರೀದಿಯ ಮಾರ್ಗವನ್ನೇ ಆರಿಸಿಕೊಂಡಿವೆ.ಅನೇಕ ಆಫ್‌ಸೆಟ್ ಬಾಧ್ಯತೆಗಳು
ವಿಳಂಬಗೊಂಡಿವೆ. ಕೆಲವು ಪ್ರಕರಣಗಳು ಆಡಿಟ್‌ನಲ್ಲಿ ತಿರಸ್ಕೃತವಾಗಿವೆ. ದಂಡ ವಿಧಿಸುವ ವ್ಯವಸ್ಥೆ ಇದ್ದರೂ, ಅದರ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆಗಳು ಉಳಿದಿವೆ ಎಂದು ಸಮಿತಿಯು ಹೇಳಿದೆ.

ಕೆಲ್ಕರ್ ಸಮಿತಿ ಶಿಫಾರಸು ಉಲ್ಲೇಖ
ಡಾ. ವಿಜಯ್ ಕೆಲ್ಕರ್ ಸಮಿತಿಯ ಶಿಫಾರಸಿನ ಮೇರೆಗೆ 2005ರಲ್ಲಿ ರಕ್ಷಣಾ ಆಫ್‌ಸೆಟ್ ನೀತಿಯನ್ನು ಜಾರಿಗೆ ತರಲಾಯಿತು. ವಿದೇಶಿ
ಕಂಪನಿಗಳು ಭಾರತೀಯ ಕೈಗಾರಿಕೆಗಳಿಂದ ಉತ್ಪನ್ನ ಖರೀದಿಸುವುದು, ಭಾರತದಲ್ಲಿ ಹೂಡಿಕೆ ಮಾಡುವುದು, ಸಂಶೋಧನೆಗೆ ನೆರವಾಗುವುದು ಅಥವಾ ತಂತ್ರಜ್ಞಾನ ವರ್ಗಾಯಿಸುವುದರ ಮೂಲಕ ತಮ್ಮ ಆಫ್‌ಸೆಟ್ ಬಾಧ್ಯತೆಯನ್ನು ಪೂರೈಸಬೇಕೆಂಬ ವ್ಯವಸ್ಥೆ
ರೂಪಿಸಲಾಯಿತು. ಆರಂಭದಲ್ಲಿ 300 ಕೋಟಿ ರೂಪಾಯಿಗೆ ಮೌಲ್ಯದ ಮೇಲಿನ ಜಾಗತಿಕ ಖರೀದಿಗಳಿಗೆ ಶೇ.30ರಷ್ಟು ಆಫ್‌ಸೆಟ್ ಕಡ್ಡಾಯವಾಗಿತ್ತು. ನಂತರ 2016ರ ತಿದ್ದುಪಡಿಯ ಮೂಲಕ ಈ ಮಿತಿಯನ್ನು 2,000 ಕೋಟಿ ರು ಗೆ ಹೆಚ್ಚಿಸಿತ್ತು ಎಂದು ಕೇಲ್ಕರ್ ಸಮಿತಿಯ ಶಿಫಾರಸ್ಸನ್ನೂ ವರದಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

ವರ್ಷದಿಂದ ವರ್ಷಕ್ಕೆ ನೀತಿಯ ಬದಲಾವಣೆ
2005ರಿಂದ 2020ರವರೆಗೆ ರಕ್ಷಣಾ ಖರೀದಿ ವಿಧಾನ (DPP/DAP) ಹಲವು ಬಾರಿ ಪರಿಷ್ಕೃತಗೊಂಡಿದೆ. ಭಾರತೀಯ ಆಫ್‌ಸೆಟ್ ಪಾಲುದಾರರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನೀಡಲಾಯಿತು. ಆಫ್‌ಸೆಟ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಬಂತು ಮತ್ತು ನಂತರ ರದ್ದುಗೊಳಿಸಿತ್ತು. ನಾಗರಿಕ ವಿಮಾನೋದ್ಯಮ ಕ್ಷೇತ್ರಕ್ಕೂ ಅವಕಾಶ ನೀಡಲಾಗಿತ್ತು, ಬಳಿಕ ಅದನ್ನು ಕೈಬಿಟ್ಟಿತ್ತು. ಡಿಆರ್‌ಡಿಒ (DRDO) ಗೆ ತಂತ್ರಜ್ಞಾನ ವರ್ಗಾವಣೆಗೆ ವಿಶೇಷ ಪ್ರೋತ್ಸಾಹ ನೀಡಿತ್ತು.

2019ರ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿ ಹಲವು ಗಂಭೀರ ಕೊರತೆಗಳನ್ನು ಗುರುತಿಸಿರುವುದನ್ನು ಪಿಎಸಿ
ವರದಿಯಲ್ಲಿ ಉಲ್ಲೇಖಿಸಿದೆ. ಆಫ್‌ಸೆಟ್ ಪ್ರಸ್ತಾವನೆಗಳ ಸಮರ್ಪಕ ತಾಂತ್ರಿಕ ಪರಿಶೀಲನೆಯ ಕೊರತೆ, ವಿದೇಶಿ ಕಂಪನಿಗಳು ತಮ್ಮ ಬದ್ಧತೆಗಳನ್ನು ಪೂರ್ಣವಾಗಿ ಪೂರೈಸದಿರುವುದು, ವಿಳಂಬ ಅಥವಾ ಕೊರತೆಗೆ ದಂಡ ವಿಧಿಸುವಲ್ಲಿ ವೈಫಲ್ಯ, ಮುಖ್ಯ ಖರೀದಿ ಒಪ್ಪಂದ ಮತ್ತು ಆಫ್‌ಸೆಟ್ ನಡುವಿನ ಸಮನ್ವಯದ ಕೊರತೆ ಮತ್ತು ನಿರೀಕ್ಷಿತ ತಂತ್ರಜ್ಞಾನ ಹಾಗೂ ಕೈಗಾರಿಕಾ ಅಭಿವೃದ್ಧಿ ಗುರಿಗಳು ಸಂಪೂರ್ಣವಾಗಿ ಸಾಧನೆಯಾಗದಿರುವುದ ಕುರಿತು ವಿವರಿಸಿದೆ.

ಸಿಎಜಿ ಮಾಡಿರುವ ಟಿಪ್ಪಣಿಗಳಿಗೆ ಉತ್ತರ ನೀಡಿರುವ ರಕ್ಷಣಾ ಸಚಿವಾಲಯ, 2005ರಿಂದ ಪಡೆದ ಅನುಭವದ ಆಧಾರದ ಮೇಲೆ
ನೀತಿಯನ್ನು ನಿರಂತರವಾಗಿ ಪರಿಷ್ಕರಿಸಲಾಗಿದೆ ಎಂದು ತಿಳಿಸಿದೆ. ಸಚಿವಾಲಯದ ಪ್ರಕಾರ, ಖಾಸಗಿ ಕೈಗಾರಿಕೆಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿದೆ. ಮೇಕ್ ಇನ್ ಇಂಡಿಯಾಗೆ ಅನುಕೂಲವಾಗುವಂತೆ ಹೊಸ ಕ್ಷೇತ್ರಗಳನ್ನು ಸೇರಿಸಿದೆ. ತಂತ್ರಜ್ಞಾನ ವರ್ಗಾವಣೆಗೆ ಹೆಚ್ಚಿನ ಉತ್ತೇಜನ ನೀಡಿದೆ. ಎಂಎಸ್‌ಎಂಇಗಳಿಗೆ ವಿಶೇಷ ಪ್ರೋತ್ಸಾಹ ನೀಡಿದೆ. ಡಿಫೆನ್ಸ್ ಇಂಡಸ್ಟ್ರಿಯಲ್ ಕಾರಿಡಾರ್‌ಗಳಲ್ಲಿ ಹೂಡಿಕೆಗೆ ಉತ್ತೇಜನ ನೀಡಿದೆ. ಮತ್ತು ಆನ್‌ಲೈನ್ ಪೋರ್ಟಲ್ ಮೂಲಕ ಪಾರದರ್ಶಕತೆಯನ್ನು ಹೆಚ್ಚಿಸಿದೆ.

ಡಿಆರ್‌ಡಿಒಗೆ ದೊರಕದ ಅತ್ಯಾಧುನಿಕ ತಂತ್ರಜ್ಞಾನ
ಸಂಸದೀಯ ಸಮಿತಿಯ ವಿಚಾರಣೆಯಲ್ಲಿ ಅಧಿಕಾರಿಗಳು ಮತ್ತೊಂದು ಮಹತ್ವದ ಸಂಗತಿಯನ್ನು ಬಹಿರಂಗ ಮಾಡಿರುವುದನ್ನು ವರದಿ
ಉಲ್ಲೇಖಿಸಿದೆ.




ಹಲವಾರು ವಿದೇಶಿ ಕಂಪನಿಗಳು ನೀಡಲು ಮುಂದಾದ ತಂತ್ರಜ್ಞಾನವನ್ನು ಡಿಆರ್‌ಡಿಒ ಈಗಾಗಲೇ ಹೊಂದಿತ್ತು ಅಥವಾ ಆ ತಂತ್ರಜ್ಞಾನ ಅತ್ಯಾಧುನಿಕವಾಗಿರಲಿಲ್ಲ. ಕೆಲ ಸಂದರ್ಭಗಳಲ್ಲಿ ಎರಡನೇ ಅಥವಾ ಮೂರನೇ ಹಂತದ ತಂತ್ರಜ್ಞಾನವನ್ನು ಮಾತ್ರ ಭಾರತಕ್ಕೆ ನೀಡಲು ಯತ್ನಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.




