ಬೆಂಗಳೂರು; ಮಾಲೂರು-ಹೊಸಕೋಟೆ ವ್ಯಾಪ್ತಿಯನ್ನೂ ಸೇರಿದಂತೆ ಒಟ್ಟಾರೆ 123 ಕಿ ಮೀ ರಸ್ತೆಯನ್ನು 3,190 ಕೋಟಿ ರು ಯೋಜನಾ ವೆಚ್ಚದ ಪೈಕಿ 2,477.90 ಕೋಟಿ ರು ಮೊತ್ತದ ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿ ಎಲ್ 1 ಬಿಡ್‌ದಾರ ಅನರ್ಹಗೊಂಡಿದ್ದರೂ ಸಹ ಮರು ಟೆಂಡರ್ ಕರೆಯದೇ ಎಲ್ 2 ಸ್ಥಾನದಲ್ಲಿದ್ದ ಪಶ್ಚಿಮ ಬಂಗಾಳ ಮೂಲದ ಕಂಪನಿಯನ್ನೇ ಲೋಕೋಪಯೋಗಿ ಇಲಾಖೆಯು ಪರಿಗಣಿಸಿರುವುದರ ಹಿಂದೆ ಅಕ್ರಮದ ವಾಸನೆ ಹರಡಿದೆ.
ಎಲ್ 1 ಬಿಡ್‌ದಾರ ಅನರ್ಹಗೊಂಡಿರುವ ಕಾರಣ ಮರು ಟೆಂಡರ್ ಆಹ್ವಾನಿಸಬೇಕು ಎಂದು ಆರ್ಥಿಕ ಇಲಾಖೆಯೂ ಸಹ ಸ್ಪಷ್ಟವಾಗಿ ತನ್ನ ಅಭಿಪ್ರಾಯದಲ್ಲಿ ದಾಖಲಿಸಿತ್ತು. ಆದರೂ ಆ ಅಭಿಪ್ರಾಯವನ್ನು ಬದಿಗೊತ್ತಿರುವ ಲೋಕೋಪಯೋಗಿ ಇಲಾಖೆಯು ಎಲ್ 2 ನ್ನು ಪರಿಗಣಿಸಿದೆ. ಇದು ಸರ್ಕಾರದ ಇತರೆ ಇಲಾಖೆಗಳಲ್ಲಿ ಟೆಂಡರ್ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರಲಿದೆ. ಅಲ್ಲದೇ ಇಂತಹದೊಂದು ಕೆಟ್ಟ ಪೂರ್ವ ನಿದರ್ಶನಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವು ನಾಂದಿ ಹಾಡಿದಂತಾಗಿದೆ.
ಈ ಯೋಜನೆಗೆ ಸಂಬಂಧಿಸಿದಂತೆ ಪಿಡಬ್ಲ್ಯೂಡಿಯು ನಡೆಸಿರುವ ನಡವಳಿಗಳಲ್ಲೇ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ದಿ ಫೈಲ್ ಆರ್‍ಟಿಐ ಅಡಿಯಲ್ಲಿ ಪಡೆದುಕೊಂಡಿರುವ 935ಕ್ಕೂ ಹೆಚ್ಚು ಪುಟಗಳ ಕಡತವು, ಈ ಆರೋಪಗಳನ್ನು ಬಲಪಡಿಸಿವೆಯಲ್ಲದೇ ನಡೆದಿದೆ ಎನ್ನಲಾಗಿರುವ ಅಕ್ರಮಗಳನ್ನು ಅನಾವಣಗೊಳಿಸಿದೆ.
ಈ ಯೋಜನೆ ಕಾಮಗಾರಿ, ಲೋಕೋಪಯೋಗಿ ಇಲಾಖೆಯು ನಡೆಸಿದ್ದ ಟೆಂಡರ್ ಪ್ರಕ್ರಿಯೆ, ಆರ್ಥಿಕ ಇಲಾಖೆಯು ನೀಡಿದ್ದ ಅಭಿಪ್ರಾಯಗಳನ್ನೊಳಗೊಂಡ 935ಕ್ಕೂ ಹೆಚ್ಚು ಪುಟಗಳಲ್ಲಿ ಸಮಗ್ರ ಮಾಹಿತಿಯಿದೆ.
ಇದೇ ರಸ್ತೆ ಕಾಮಗಾರಿಯನ್ನು ನಿರ್ವಹಿಸಲು ಪಶ್ಚಿಮ ಬಂಗಾಳ ಮೂಲದ ಕಂಪನಿಯಾಗಿರುವ ಭಾರತ್ ವಾಣಿಜ್ಯ ಈಸ್ಟರ್ನ್ ಲಿಮಿಟೆಡ್‌ನ್ನು ಲೋಕೋಪಯೋಗಿ ಇಲಾಖೆಯು ಪರಿಗಣಿಸಿದೆ. ಈ ಕಂಪನಿಯನ್ನು ಪರಿಗಣಿಸುವ ಸಂದರ್ಭದಲ್ಲೇ ಸಿಬಿಐ ತನಿಖಾ ಸಂಸ್ಥೆಯು ಈ ಕಂಪನಿಯ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಸಿಬಿಐ ವಿಚಾರಣೆ ಎದುರಿಸುತ್ತಿರುವ ಈ ಕಂಪನಿಗೆ 3,190 ಕೋಟಿ ರು ವೆಚ್ಚದ ಕಾಮಗಾರಿ ವಹಿಸಲು ಪರಿಗಣಿಸಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಏನಿದು ಯೋಜನೆ
ದೇವನಹಳ್ಳಿ-ವೇಮಗಲ್-ಹೆಚ್ ಕ್ರಾಸ್-ವೇಮಗಲ್-ಮಾಲೂರು-ತಮಿಳುನಾಡು ಗಡಿವರೆಗೆ ಹಾಗೂ ಮಾಲೂರು-ಹೊಸಕೋಟೆ ರಸ್ತೆ ಸೇರಿದಂತೆ ಒಟ್ಟಾರೆ 123 ಕಿ ಮೀ ಉದ್ದದ (ಪರಿಷ್ಕೃತ ಉದ್ದ 110.41 ಕಿ ಮೀ) ರಸ್ತೆಯನ್ನು ಹೈಬ್ರಿಡ್ ವರ್ಷಾಸನ ಮಾದರಿಯಲ್ಲಿ ಅಭಿವೃದ್ಧಪಡಿಸುವ ಯೋಜನೆ ಇದಾಗಿದೆ. ಈ ಯೋಜನೆಯನ್ನು ಒಟ್ಟು 3 ಪ್ಯಾಕೇಜ್‌ಗಳಲ್ಲಿ ನಿರ್ವಹಿಸಲು ಉದ್ದೇಶಿಸಿದೆ.

ಈ ಮೂರು ಹಂತಗಳಲ್ಲಿ ಪೂರ್ಣಗೊಳಿಸುವ ಈ ಯೋಜನೆಗೆ ಒಟ್ಟಾರೆ 3,190 ಕೋಟಿ ವೆಚ್ಚವಾಗಲಿದೆ ಎಂದು ಲೋಕೋಪಯೋಗಿ ಇಲಾಖೆಯು ಅಂದಾಜಿಸಿತ್ತು. ಪ್ಯಾಕೇಜ್ 01ರಲ್ಲಿ ವೇಮಗಲ್-ಮಾಲೂರು ಮತ್ತು ಮಾಲೂರು ಕೈಗಾರಿಕೆ ಪ್ರದೇಶ-ತಮಿಳುನಾಡು ಗಡಿವರೆಗೆ 958.00 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣವನ್ನು ಕೆ ಶಿಪ್ ಮೂಲಕ ಅನುಷ್ಠಾನಗೊಳಿಸಲಿದೆ.

ಪ್ಯಾಕೇಜ್ 2ರಲ್ಲಿ ಹೊಸಕೋಟೆ-ಮಾಲೂರು-ಮಾಲೂರಿನಲ್ಲಿ ಎಲಿವೇಟೆಡ್ ಕಾರಿಡಾರ್ ಸೇರಿ ಮಾಲೂರು ಕೈಗಾರಿಕೆ ಪ್ರದೇಶ ಒಳಗೊಂಡಂತೆ ಒಟ್ಟು 1,054.00 ಕೋಟಿ ರು ಯೋಜನೆ ವೆಚ್ಚದಲ್ಲಿ ನಿರ್ಮಾಣವನ್ನು ಇದೇ ಕೆ ಶಿಪ್ ಮೂಲಕ ನಿರ್ವಹಿಸಲಿದೆ. ಅದೇ ರೀತಿ ಪ್ಯಾಕೇಜ್ 3ರಲ್ಲಿ ದೇವನಹಳ್ಳಿ-ವೇಮಗಲ್- ಕೋಲಾರದಲ್ಲಿ 1,178.00 ಕೋಟಿ ರು ವೆಚ್ಚದಲ್ಲಿ ರಸ್ತೆ ನಿರ್ಮಾಣವನ್ನು ಕೆಆರ್‍ಡಿಸಿಎಲ್ ಮೂಲಕ ಅನುಷ್ಠಾನಗೊಳಿಸಲಿದೆ.

ಇದರಲ್ಲಿ 730 ಕೋಟಿ ಮೊತ್ತವನ್ನು 2 ವರ್ಷಗಳ ಅವಧಿಯಲ್ಲಿ ನಿರ್ಮಾಣಕ್ಕೆ ವೆಚ್ಚವಾಗಲಿದೆ. ಇನ್ನುಳಿದ 448 ಕೋಟಿ ರು ಮೊತ್ತವನ್ನು ನಿರ್ಮಾಣೇತರ (ಆಡಳಿತಾತ್ಮಕ ಶುಲ್ಕ, ಸಮಾಲೋಚಕ ಸೇವೆ, ಭೂ ಸ್ವಾಧೀನ, ಪುನರ್ವಸತಿ, ಪುನರ್ ವ್ಯವಸ್ಥಾಪನೆ, ಅರಣ್ಯೀಕರಣ, ಉಪಯುಕ್ತತೆ, ಸ್ಥಳಾಂತರ) ವೆಚ್ಚವಾಗಲಿದೆ. ಇದು 13 ವರ್ಷಗಳ ಅವಧಿ ಕಾರ್ಯಾಚರಣೆ ಮತ್ತು ನಿರ್ವಹಣೆ ಒಳಗೊಂಡಿದೆ.

ಈ ಯೋಜನೆಗೆ ರಾಜ್ಯ ಸರ್ಕಾರದ ಆರ್ಥಿಕ ಹೊಣೆಗಾರಿಕೆಯು 291.88 ಕೋಟಿ ರು ಪ್ರಾಥಮಿಕ ಹೂಡಿಕೆ ಇದೆ. 1,472.90 ಕೋಇಟ ರು ಮೊತ್ತದ 13 ವಾರ್ಷಿಕ ಕಂತುಗಳ ವರ್ಷಾಸನ ಬಾಕಿ, 265.12 ಕೊಟಿ ಮತ್ತು ಜಿಎಸ್‌ಟಿ 448 ಕೋಟಿ ರು ನಿರ್ಮಾಣೇತರ ವೆಚ್ಚ ಒಳಗೊಂಡಂತೆ 2,477.90 ಕೋಟಿ ರು ಆಗಿದೆ.
ಈ ಯೋಜನೆ ವೆಚ್ಚದ ಕಾಮಗಾರಿಗೆ 2024ರ ನವೆಂಬರ್ 8ರಂದೇ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿರುವುದು ಆರ್‍ಟಿಐ ದಾಖಲೆಗಳಿಂದ ತಿಳಿದು ಬಂದಿದೆ.
3ನೇ ಪ್ಯಾಕೇಜ್ ಅನುಷ್ಠಾನ ಘಟಕವಾಗಿರುವ ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮವು 1,178.00 ಕೋಟಿ ರು ಮೊತ್ತದ ಯೋಜನೆಗೆ 2025ರ ಫೆ.25ರಂದು ಟೆಂಡರ್ (ಇಂಡೆಂಟ್ ಸಂಖ್ಯೆ; KRDCL/2024/-25/4D WORK_INDENT17) ಆಹ್ವಾನಿಸಿತ್ತು. ಈ ಟೆಂಡರ್‍ನಲ್ಲಿ ಎಂಪಿ 24 ಕನಸ್ಟ್ರಕ್ಷನ್ಸ್ ಕಂಪನಿ ಮತ್ತು ರಾಮಲಿಂಗಂ ಕನ್ಸ್‌ಟ್ರಕ್ಷನ್ಸ್ ಕಂಪನಿ ಪ್ರೈವೈಟ್ ಲಿಮಿಟೆಡ್ (ಕನ್ಸೋಟೋರಿಯಂ), ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೈಟ್ ಲಿಮಿಟೆಡ್, ದಿನೇಶ್ ಚಂದ್ರ ಆರ್ ಅಗರವಾಲ್ ಇನ್ಫ್ರಾಕಾನ್ ಪ್ರೈವೈಟ್ ಲಿಮಿಟೆಡ್ ಮತ್ತು ಭಾರ್ತಿಯಾ ಇನ್ಫ್ರಾ ಪ್ರಾಜೆಕ್ಟ್ಸ್ ಲಿಮಿಟೆಡ್ ಭಾಗವಹಿಸಿದ್ಸವು.

ಈ ಟೆಂಡರ್‍ನಲ್ಲಿ ಎಂಪಿ 24 ಕನಸ್ಟ್ರಕ್ಷನ್ಸ್ ಕಂಪನಿ ಮತ್ತು ರಾಮಲಿಂಗಂ ಕನ್ಸ್‌ಟ್ರಕ್ಷನ್ಸ್ ಕಂಪನಿ ಪ್ರೈವೈಟ್ ಲಿಮಿಟೆಡ್ (ಕನ್ಸೋಟೋರಿಯಂ) ಜತೆಗಿನ ಒಕ್ಕೂದ ಮುಖ್ಯ ಪಾಲುದಾರರಾಗಿತ್ತು. ಜಿಎಸ್‌ಟಿ ಹೊರತುಪಡಿಸಿ ಈ ಕಂಪನಿಯು 50.50 ಕೋಟಿ ಆನ್ಯುಟಿ ಮೊತ್ತವನ್ನು ನಮೂದಿಸಿ ಎಲ್ 1 ಬಿಡ್‌ದಾರರಾಗಿ ಹೊರಹೊಮ್ಮಿತ್ತು.
ಆದರೆ ಇದೇ ಕಾಮಗಾರಿಯ ಟೆಂಡರ್‍ನ ಹಣಕಾಸು ಬಿಡ್‌ನ್ನು 2025ರ ಮೇ 19ರಂದು ತೆರೆದಿತ್ತು. ಇತರೆ ಮೂವರು ಅರ್ಹ ಬಿಡ್‌ದಾರರಲ್ಲಿ ಒಬ್ಬರಾದ ಹಾಗೂ ಎರಡನೇ ಕನಿಷ್ಟ ಬಿಡ್ (ಎಲ್-2) ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೈಟ್ ಲಿಮಿಟೆಡ್ ಕೆಆರ್‍ಡಿಸಿಎಲ್‌ಗೆ ಎಲ್-1 ಬಿಡ್‌ದಾರರಾದ ಎಂಪಿ 24 ಕನಸ್ಟ್ರಕ್ಷನ್ಸ್ ಕಂಪನಿ ಮತ್ತು ರಾಮಲಿಂಗಂ ಕನ್ಸ್‌ಟ್ರಕ್ಷನ್ಸ್ ಕಂಪನಿ ಪ್ರೈವೈಟ್ ಲಿಮಿಟೆಡ್ ವಿರುದ್ಧ ದೂರು ಸಲ್ಲಿಸಿತ್ತು.

ಎಲ್-1 ಬಿಡ್‌ದಾರರಾದ ಎಂಪಿ 24 ಕನಸ್ಟ್ರಕ್ಷನ್ಸ್ ಕಂಪನಿ ಮತ್ತು ರಾಮಲಿಂಗಂ ಕನ್ಸ್‌ಟ್ರಕ್ಷನ್ಸ್ ಕಂಪನಿ ಪ್ರೈವೈಟ್ ಲಿಮಿಟೆಡ್ ಟೆಂಡರ್‍ನಲ್ಲಿ ತಾಂತ್ರಿಕವಾಗಿ ಅರ್ಹರಾಗಲು ನಕಲಿ ಹಾಗೂ ಸುಳ್ಳು ಕಾಮಗಾರಿ ನಿರ್ವಹಣೆ ಪ್ರಮಾಣ ಪತ್ರ ಹಾಗೂ ತೆರಿಗೆ ದಾಖಲಾತಿಗಳನ್ನು ಸಂಗ್ರಹಣಾ ಪ್ರಾಧಿಕಾರಕ್ಕೆ ಸಲ್ಲಿಸಿದೆ ಎಂದು ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೈಟ್ ಲಿಮಿಟೆಡ್ ದೂರಿನಲ್ಲಿ ಹೇಳಿತ್ತು.
ಈ ದೂರನ್ನು ಸ್ವೀಕರಿಸಿದ್ದ ಕೆಆರ್‍ಡಿಸಿಎಲ್, ಎಲ್-1 ಬಿಡ್‌ದಾರರಾದ ಎಂಪಿ 24 ಕನಸ್ಟ್ರಕ್ಷನ್ಸ್ ಕಂಪನಿ ಮತ್ತು ರಾಮಲಿಂಗಂ ಕನ್ಸ್‌ಟ್ರಕ್ಷನ್ಸ್ ಕಂಪನಿ ಪ್ರೈವೈಟ್ ಲಿಮಿಟೆಡ್‌ನ ನಕಲಿ ದಾಖಲಾತಿಗಳನ್ನು ಸಲ್ಲಿಸಿರುವುದನ್ನು ಪತ್ತೆ ಹಚ್ಚಿತ್ತು.
ಟೆಂಡರ್ ಷರತ್ತುಗಳ ಅನ್ವಯ ಬಿಡ್‌ದಾರರು ತಾಂತ್ರಿಕವಾಗಿ ಅರ್ಹರಾಗಲು 762.86 ಕೋಟಿ ರು ಮೊತ್ತದ ಆರ್ಥಿಕ ಸಾಮರ್ಥ್ಯ ಹೊಂದಿರಬೇಕು. ಕಂಪನಿಯು 776.05 ಕೋಟಿ ರು ಮೊತ್ತದ ಅರ್ಥಿಕ ಸಾಮರ್ಥ್ಯ ಹೊಂದಿದೆ ಎಂದು ದಾಖಲಾತಿಗಳನ್ನು ಸಲ್ಲಿಸಿದ್ದ ಎಂಪಿ 24 ಕನ್ಸ್‌ಟ್ರಕ್ಷನ್ಸ್, ಅರ್ಹ ಮೊತ್ತಕ್ಕಿಂತ ಅಧಿಕವಾಗಿದೆ ಎಂದು ಪ್ರತಿಪಾದಿಸಿತ್ತು.

ಇದಕ್ಕೆ ಆಧಾರವಾಗಿ ಆಂಧ್ರಪ್ರದೇಶ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಅವರು 2025ರ ಏಪ್ರಿಲ್ 25ರಂದು ನೀಡಿದ್ದಾರೆ ಎನ್ನಲಾಗಿರುವ ಕಾಮಗಾರಿ ನಿರ್ವಹಣಾ ಪತ್ರವನ್ನು ಪ್ರಸ್ತುತಪಡಿಸಿತ್ತು. ಈ ಪತ್ರದಲ್ಲಿ 341,38,92,875 ರು ಮೊತ್ತ ಎಂದು ನಮೂದಿಸಿತ್ತು. ಆದರೆ ಈ ದಾಖಲೆಗಳೆಲ್ಲವೂ ನಕಲಿಯಾಗಿದ್ದವು ಮತ್ತು ಸುಳ್ಳು ಕಾಮಗಾರಿ ನಿರ್ವಹಣೆ ಪ್ರಮಾಣ ಪತ್ರವಾಗಿದೆ. ಹಾಗೆಯೇ ತೆರಿಗೆ ದಾಖಲಾತಿಗಳು ನೈಜತೆಯಿಂದ ಕೂಡಿಲ್ಲ ಎಂದು ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೈಟ್ ಲಿಮಿಟೆಡ್ ವಿವರಿಸಿತ್ತು.
ಈ ಕಂಪನಿಯು 2019-20ರಲ್ಲಿ 164.08 ಕೋಟಿ ರು ಮೊತ್ತದ ವಹಿವಾಟು ನಡೆಸಿತ್ತು. ಇದರ ನಿವ್ವಳ ಆದಾಯವು 39.09 ಕೋಟಿ ಎಂದು ಕೆಆರ್‍ಡಿಸಿಎಲ್‌ಗೆ ಸಲ್ಲಿಸಿತ್ತು. ಆದರೆ ವಾಸ್ತವದಲ್ಲಿ ಇದರ ಅಸಲಿ ವಹಿವಾಟಿನ ಮೊತ್ತವೇ 25.15 ಕೋಟಿ ಆಗಿದ್ದರೇ ನಿವ್ವಳ ಆದಾಯವು 4.04 ಕೋಟಿಯಷ್ಟೇ ಇತ್ತು ಎಂದು ಪರಿಶೀಲನೆ ವೇಳೆಯಲ್ಲಿ ಕಂಡುಬಂದಿತ್ತು. ಅದೇ ರೀತಿ 2020-21ರಲ್ಲಿ 187.42 ಕೋಟಿ ವಹಿವಾಟು, 51.37 ಕೋಟಿ ನಿವ್ವಳ ಆದಾಯವೆಂದು ಹೇಳಿತ್ತು. ಆದರೆ ವಾಸ್ತವದಲ್ಲಿ ಈ ಅವಧಿಯಲ್ಲಿ 54.00 ಕೋಟಿ ವಹಿವಾಟು, 7.96 ಕೋಟಿ ನಿವ್ವಳ ಆದಾಯವಾಗಿತ್ತು.
2021-22ರಲ್ಲಿ 240.18 ಕೋಟಿ ವಹಿವಾಟು, ನಿವ್ವಳ ಆದಾಯ 67.69 ಕೋಟಿ ಎಂದು ಹೇಳಿತ್ತು.ಆದರೆ ವಾಸ್ತವದಲ್ಲಿ ಈ ಅವಧಿಯಲ್ಲಿ 12.98 ಕೋಟಿ ವಹಿವಾಟು, 6.49 ಕೋಟಿ ನಿವ್ವಳ ಆದಾಯವಿತ್ತು. 2022-23ರಲ್ಲಿ 270.12 ಕೋಟಿ ವಹಿವಾಟು, 86.17 ಕೋಟಿ ನಿವ್ವಳ ಆದಾಯವೆಂದು ದಾಖಲೆ ಸಲ್ಲಿಸಿತ್ತು. ಆದರೆ ವಾಸ್ತವದಲ್ಲಿ 63.24 ಕೋಟಿ ವಹಿವಾಟು ಮತ್ತು 11.54 ಕೋಟಿ ನಿವ್ವಳ ಆದಾಯವಾಗಿತ್ತು. 2023-24ರಲ್ಲಿ 301.41 ಕೋಟಿ ವಹಿವಾಟು ಮತ್ತು 106.7 ಕೋಟಿ ನಿವ್ವಳ ಆದಾಯ ಹೊಂದಿದೆ ಎಂದು ಹೇಳಿತ್ತು. ಆದರೆ ವಾಸ್ತವದಲ್ಲಿ ಈ ಅವಧಿಯಲ್ಲಿ 40.61 ಕೋಟಿ, 11.35 ಕೋಟಿಯಷ್ಟು ನಿವ್ವಳ ಆದಾಯ ಹೊಂದಿತ್ತು.

ಹಾಗೆಯೇ ಈ ಕಂಪನಿಯು ವಾರ್ಷಿಕ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ದಾಖಲೆಗಳಲ್ಲೂ ನೈಜತೆ ಇರಲಿಲ್ಲ 2020-21ರಲ್ಲಿ 10,69,07,795 ಕೋಟಿ ರು ಆದಾಯವನ್ನು ಘೋಷಿಸಿತ್ತು. ಆದರೆ ವಾಸ್ತವದಲ್ಲಿ 1,71,58,630 ರು ಆದಾಯ ಗಳಿಸಿತ್ತು. 2021-22ರಲ್ಲಿ 12,55,77,174 ರು ಎಂದು ಹೇಳಿದ್ದರೇ ವಾಸ್ತವದಲ್ಲಿ 4,84,53,720 ರು ಆದಾಯವಿತ್ತು.

2022-23ರಲ್ಲಿ 16,65,72,950 ರು ಆದಾಯವಿತ್ತು ಎಂದು ಹೇಳಿದ್ದ ಕಂಪನಿಯು ವಾಸ್ತವದಲ್ಲಿ ಈ ಅವಧಿಯಲ್ಲಿ 1,02,64,930 ರು ಆದಾಯ ಹೊಂದಿತ್ತು.

2023-24ರಲ್ಲಿ 18,87,72,410 ರು ಆದಾಯ ಘೋಷಣೆ ಮಾಡಿತ್ತಾದರೂ ವಾಸ್ತವದಲ್ಲಿ ಈ ಕಂಪನಿಯ ಆದಾಯವು ಕೇವಲ 5,54,99,310 ರು ಇತ್ತು. 2024-25ರಲ್ಲಿ 21,06,85,068 ರು ಆದಾಯ ಘೋಷಿಸಿತ್ತು. ಆದರೆ ಈ ಅವಧಿಯಲ್ಲಿ 3,07,10,340 ರು ಆದಾಯವಿತ್ತು.

‘ಎಂಪಿ 24 ಕನ್ಸ್‌ಟ್ರಕ್ಷನ್ಸ್ ಕಂಪನಿಯ ನಿವ್ವಳ ಆದಾಯ ಮೌಲ್ಯವನ್ನು ಹೆಚ್ಚಿಸುವ ಸಲುವಾಗಿ ತಮ್ಮ ನಿಯಮಿತ ಲೆಕ್ಕ ಪರಿಶೋಧಕರಲ್ಲದ ಲೆಕ್ಕಪರಿಶೋಧಕರಿಂದ ಪ್ರಮಾಣ ಪತ್ರವನ್ನು ಪಡೆಯುವ ಮೂಲಕ ಪಾವತಿಸಿರುವ ತೆರಿಗೆಗಳು ಮತ್ತು ನಿವ್ವಳ ಆದಾಯ ಮೌಲ್ಯದ ಬಗ್ಗೆ ತಪ್ಪು ಮಾಹಿತಿಯನ್ನು ಒದಗಿಸಿರುತ್ತಾರೆ,’ ಎಂದು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.
ಹಾಗೆಯೇ ಈ ನಿರ್ಮಾಣ ಕಂಪನಿಯು ಟೆಂಡರ್ ಷರತ್ತುಗಳ ಅನ್ವಯ ಅಗತ್ಯವಿದ್ದ ಬಿಬಿಬಿ ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ರೇಟಿಂಗ್ ಕೂಡ ಹೊಂದಿರಲಿಲ್ಲ. ಮತ್ತು ವಾಸ್ತವವಾಗಿ ಬಿಡ್ಡರ್‍ಗಳ ಸ್ವಾಮ್ಯದ ಸಂಸ್ಥೆಯಾಗಿತ್ತು. ಈ ಬಿಡ್ಡರ್‍ಗಳ ಸ್ವಾಮ್ಯದ ಸಂಸ್ಥೆಗೆ ಯಾವುದೇ ರೇಟಿಂಗ್ ಅಸ್ತಿತ್ವದಲ್ಲಿಲ್ಲ. ಈ ಸಂಸ್ಥೆಯ ಮಾಲೀಕರ ರೇಟಿಂಗ್ ಕೂಡ ಬಿ ಪ್ಲಸ್ ಇತ್ತು. ಇದು ಆರ್‍ಇಪಿಯ ಷರತ್ತು 2.2.1 (ಎಫ್) ಅಡಿಯಲ್ಲಿ ಅಗತ್ಯವಿರುವ ಕನಿಷ್ಟ ಬಿಬಿಬಿ ರೇಟಿಂಗ್‌ಗಿಂತ ಕಡಿಮೆ ಇತ್ತು.
ಈ ಕಂಪನಿಯು ಸಲ್ಲಿಸಿದ್ದ ಈ ಎಲ್ಲಾ ದಾಖಲಾತಿಗಳನ್ನು ಆಂಧ್ರಪ್ರದೇಶ ಸರ್ಕಾರದ ಜಲಸಂಪನ್ಮೂಲ ಇಲಾಖೆಯಿಂದ ಪರಿಶೀಲಿಸಿತ್ತು. ಈ ಪ್ರಮಾಣಪತ್ರಗಳು ನಕಲಿಯಾಗಿವೆ ಎಂದು ಆಂಧ್ರ ಸರ್ಕಾರದ ಜಲಸಂಪನ್ಮೂಲ ಇಲಾಖೆಯು ಹೇಳಿತ್ತು. ಹಾಗೆಯೇ ಈ ಕಂಪನಿ ಹೆಸರಿನ ಯಾವುದೇ ಸಂಸ್ಥೆಯು ತಮ್ಮ ವಲಯದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿಸಿತ್ತು. ಅಲ್ಲದೇ ಈ ಸಂಸ್ಥೆಯ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂದು ಕೋರಿತ್ತು.

ಹೀಗಾಗಿ ಸಂಗ್ರಹಣೆ ಪ್ರಾಧಿಕಾರವಾದ ಕೆಆರ್‍ಡಿಸಿಎಲ್, ವಂಚನೆ ಚಟುವಟಿಕೆಯ ಸಂಬಂಧ ಎಲ್1 ಬಿಡ್‌ದಾರರಿಗೆ ನೋಟೀಸ್ ನೀಡಿತ್ತು. ಈ ಕಂಪನಿಯು ವಿಚಾರಣೆಗೆ ಹಾಜರಾಗಿರಲಿಲ್ಲ. ನಂತರ ಇದನ್ನು ಕೆಆರ್‍ಡಿಸಿಎಲ್‌ಗೆ ಮಂಡಿಸಿತ್ತು. ನಂತರ ಈ ಕಂಪನಿಗೆ ಮತ್ತೊಂದು ಅವಕಾಶ ನೀಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ನಿರ್ಣಯಿಸಿತ್ತು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಉಳಿದ ಬಿಡ್‌ಗಳನ್ನು ಮೌಲ್ಯಮಾಪನ ಮಾಡಲು ಮಂಡಳಿಯು ನಿರ್ಧರಿಸಿತ್ತು.
ಈ ಮಧ್ಯೆ ಎಂಪಿ 24 ಕಂಪನಿಯು ಕೆಆರ್‍ಡಿಸಿಎಲ್‌ಗೆ ಹಾಜರಾಗಿತ್ತಲ್ಲದೇ ಕಂಪನಿ ಮಾಲೀಕರ ಅರಿವಿಲ್ಲದೆಯೇ ಉದ್ಯೋಗಿಯೊಬ್ಬರು ನಕಲಿ ದಾಖಲೆಗಳನ್ನು ಪಡೆದು ಅಪ್‌ಲೋಡ್ ಮಾಡಿದ್ದಾರೆ. ಎಂಪಿ 24 ಮತ್ತು ಆರ್‍ಆರ್‍ಸಿಸಿಎಲ್ ಕನ್ಸಟೋರಿಯಂ ಕಾಮಗಾರಿ ನಿರ್ವಹಣೆ ಪ್ರಮಾಣ ಪತ್ರ ಹೊರತುಪಡಿಸಿಯೂ ಅರ್ಹತೆ ಹೊಂದಿದೆ ಎಂದು ಸಮಜಾಯಿಷಿ ನೀಡಿತ್ತು. ಈ ಸಮಜಾಯಿಷಿಯನ್ನೂ ಪರಿಶೀಲಿಸಿದ ನಂತರವೂ ಈ ಕಂಪನಿಯ ಬಿಡ್‌ನ್ನು ರದ್ದುಗೊಳಿಸಿತ್ತು. ಇಎಂಡಿಯನ್ನೂ ಮುಟ್ಟುಗೋಲು ಹಾಕಿಕೊಂಡಿತ್ತು. ನಂತರ ಈ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿತ್ತು.

ಈ ಯೋಜನೆ ಕೈಗೆತ್ತಿಕೊಳ್ಳಲೇಬೇಕು ಎಂದು ಪಣ ತೊಟ್ಟಿದ್ದ ಪಿಡಬ್ಲ್ಯೂಡಿಯು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಇದ್ದ ಅಡ್ಡಿ ನಿವಾರಿಸಲು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಅರ್ಧಯಕ್ಷತೆಯಲ್ಲಿ 2025ರ ಜುಲೈ 19ರಂದು ಸಮಿತಿ ರಚಿಸಿತ್ತು. ಈ ಸಮಿತಿಯು ವರದಿ ನೀಡಿತ್ತು.
‘ಪ್ರಸ್ತಾಪಿತ ಕಾಮಗಾರಿಯ ಟೆಂಡರ್‍ನಲ್ಲಿ ಎರಡನೇ ಕನಿಷ್ಟ ಬಿಡ್‌ದಾರರು (ಎಲ್-2) ಸಲ್ಲಿಸಿದ್ದ ಒಟ್ಟು ದಾಖಲಾತಿಗಳಲ್ಲಿ ಟೆಂಡರ್ ಅರ್ಹತೆಗೆ ಅನುಗುಣವಾಗಿ ಪರಿಗಣಿಸಲಾದ ದಾಖಲಾತಿಗಳ ಪ್ರಕಾರ ಬಿಡ್‌ದಾರರು ಟೆಂಡರ್ ನಿಬಂಧನೆಗಳನ್ನು ಪೂರೈಸಿರುತ್ತಾರೆ,’ ಎಂದು ಸಮಿತಿಯು ಷರಾ ಬರೆದಿತ್ತು.
ಎಲ್ 2 ಸ್ಥಾನದಲ್ಲಿದ್ದ ಪಶ್ಚಿಮ ಬಂಗಾಳ ಮೂಲದ ಕಂಪನಿಯೊಂದಿಗೆ ಸಂಧಾನವನ್ನೂ ಇದೇ ಸಮಿತಿಯು ನಡೆಸಿತ್ತು. ಎಲ್ 2 ಬಿಡ್‌ದಾರರು 50.50 ಕೋಟಿ ಮೊತ್ತಕ್ಕೆ ಕಾಮಗಾರಿ ನಿರ್ವಹಿಸಲು 2025ರ ಜುಲೈ 23ರಂದು ಒಪ್ಪಿಗೆ ಪತ್ರ ಸಲ್ಲಿಸಿತ್ತು. ಅದರಂತೆ ಟೆಂಡರ್ ಪ್ರಕ್ರಿಯೆಯನ್ನು ಇ-ಪೋರ್ಟಲ್‌ನಲ್ಲಿ ಸಲ್ಲಿಸಲು ಕ್ರಮಕೈಗೊಳ್ಳಬೇಕು ಎಂದು ಕೆಆರ್‍ಡಿಸಿಎಲ್‌ಗೆ ನಿರ್ದೇಶನ ನೀಡಿತ್ತು. ಅಲ್ಲದೇ ಕೆಆರ್‍ಡಿಸಿಎಲ್, ಈ ಸಂಬಂಧ ಕ್ರಮ ಕೈಗೊಳ್ಳಲು ಇ-ಆಡಳಿತ ಇಲಾಖೆಯಿಂದ ಸ್ಪಷ್ಟೀಕರಣ ಕೋರಿತ್ತು.

ನಂತರ ಇ-ಆಡಳಿತ ಇಲಾಖೆಯು ಈ ಪ್ರಸ್ತಾವವನ್ನು ಆರ್ಥಿಕ ಇಲಾಖೆಗೆ ಮಂಡಿಸಿತ್ತು.
ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ಕೆಟಿಪಿಪಿ ನಿಯಮಗಳನ್ನು ಸಮಗ್ರವಾಗಿ ಅವಲೋಕಿಸಿದ ನಂತರ 2025ರ ಆಗಸ್ಟ್ 11ರಂದು ಸ್ಪಷ್ಟ ಅಭಿಪ್ರಾಯ ನೀಡಿತ್ತು. ಆದರೆ ಈ ಅಭಿಪ್ರಾಯವನ್ನು ಲೋಕೋಪಯೋಗಿ ಇಲಾಖೆಯು ಬದಿಗೊತಿತ್ತು.
ಕೆಟಿಪಿಪಿ ಕಾಯ್ದೆಯಲ್ಲೇನಿದೆ?
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳು 2000ರ ನಿಯಮ 25(1)ರಲ್ಲಿ ತಾಂತ್ರಿಕವಾಗಿ ಅರ್ಹರಾದ ಕನಿಷ್ಠ ಟೆಂಡರ್‍ದಾರರನ್ನು ಪರಿಗಣಿಸಬೇಕು. ತಾಂತ್ರಿಕ ಅರ್ಹತೆ ಹೊಂದಿದ ಬಿಡ್‌ದಾರರ ಆರ್ಥಿಕ ಬಿಡ್‌ನ್ನು ತೆರೆಯುವ ಕುರಿತು ಕೆಟಿಪಿಪಿ ನಿಯಮಗಳು 2000ರ ನಿಯಮ 28(5)ನ್ನು ಉಲ್ಲೇಖಿಸಿದೆ.

ಇದರ ಪ್ರಕಾರ ಕೇವಲ ತಾಂತ್ರಿಕವಾಗಿ ಅರ್ಹರಾದ ಬಿಡ್‌ದಾರರ ಆರ್ಥಿಕ ಬಿಡ್‌ನ್ನು ಮಾತ್ರ ತೆರೆಯಬೇಕು ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಿದಾಗ ಆರ್ಥಿಕ ಬಿಡ್‌ನ್ನು ತೆರೆದ ನಂತರ ಎಲ್ 1 ಬಿಡ್‌ದಾರರ ದಾಖಲಾತಿಗಳು ಅಮಪರ್ಕವಾಗಿದೆ ಎಂದು ತಿಳಿಸಿ ಎಲ್ 1 ಟೆಂಡರ್‍ದಾರರನ್ನು ತಿರಸ್ಕರಿಸಲು ಪ್ರಸ್ತಾವಿಸಿರುವುದು ಈ ನಿಯಮದ ಅನ್ವಯ ಸೂಕ್ತವಾಗಿಲ್ಲ ಎಂದು ಎಂದು ಆರ್ಥಿಕ ಇಲಾಖೆಯು ಹೇಳಿತ್ತು.

ಅಲ್ಲದೇ 2002ರ ಅಕ್ಟೋಬರ್ 25, 2022ರ ಮೇ 11, 2025ರ ಜನವರಿ 16ರಂದು ಆರ್ಥಿಕ ಇಲಾಖೆಯು ಹೊರಡಿಸಿದ್ದ ಸುತ್ತೋಲೆ ಪ್ರಕಾರ ಟೆಂಡರ್ ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳಲ್ಲಿರುವ ಅವಕಾಶಗಳ ಅನ್ವಯ ಅರ್ಹ ಎಲ್ 1 ಗುತ್ತಿಗೆದಾರರಿಗೆ ಮಾತ್ರ ಗುತ್ತಿಗೆ ನೀಡಲು ತಿಳಿಸಿತ್ತು.
ಈ ಪ್ರಕರಣದಲ್ಲಿಯೂ ಇದೇ ನಿಯಮಗಳು ಅನ್ವಯವಾಗಲಿದೆ ಎಂದು ಹೇಳಿದ್ದ ಆರ್ಥಿಕ ಇಲಾಖೆಯು ‘ ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳಲ್ಲಿ ಎಲ್ 1 ಟೆಂಡರ್‍ದಾರರನ್ನು ಹೊರತುಪಡಿಸಿ ಬೇರೆಯವರಿಗೆ ಗುತ್ತಿಗೆ ನೀಡಲು ಅವಕಾಶವಿರುವುದಿಲ್ಲ. ಮತ್ತು ಯಾವುದೇ ಕಾರಣದಿಂದ ಎಲ್ 1 ಗುತ್ತಿಗೆದಾರರು ಒಪ್ಪಂದ ಮಾಡಿಕೊಳ್ಳದಿದ್ದಲ್ಲಿ ಅಥವಾ ಗುತ್ತಿಗೆ ನಿರ್ವಹಿಸಲು ಮುಂದೆ ಬರದಿದ್ದಲ್ಲಿ ಅಥವಾ ಯಾವುದೇ ಕಾರಣದಿಂದ ಅನರ್ಹರಾದಲ್ಲಿ ನಿಯಮಗಳ ಅನುಸಾರ ಅಂತಹ ಟೆಂಡರ್‍ದಾರರ ಇಎಂಡಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡು ಕಡ್ಡಾಯವಾಗಿ ಮರು ಟೆಂಡರ್ ಕರೆಯಲು ಆಹ್ವಾನಿಸಬೇಕು,’ ಎಂದು ಸ್ಪಷ್ಟವಾಗಿ ಅಭಿಪ್ರಾಯಿಸಿದೆ.

ಇದನ್ನು ಮತ್ತಷ್ಟು ವಿಸ್ತರಿಸಿದ್ದ ಆರ್ಥಿಕ ಇಲಾಖೆಯು ಭಾರತ ಸರ್ಕಾರದ ಮ್ಯಾನುಯಲ್ ಫಾರ್ ಪ್ರೊಕ್ಯೂರ್‍ಮೆಂಟ್ ಆಫ್ ವರ್ಕ್ಸ್ (ಎರಡನೇ ಆವೃತ್ತಿ 2025) (ಕಂಡಿಕೆ ಸಂಖ್ಯೆ 6.4.11 (f)) ನ್ನು ಉಲ್ಲೇಖಿಸಿತ್ತು.

ಇದರ ಪ್ರಕಾರ ಪ್ರಚಲಿತ ಎಲ್ಲಾ ಸಂಗ್ರಹಣಾ ನಿಯಮಗಳಲ್ಲಿ ಎಲ್ 1 ಟೆಂಡರ್‍ದಾರರನ್ನು ಹೊರತುಪಡಿಸಿ ಬೇರೆಯವರಿಗೆ ಗುತ್ತಿಗೆ ನೀಡಲು ಅವಕಾಶವಿರುವುದಿಲ್ಲ. ಅದೇ ರೀತಿ ಕೆಟಿಪಿಪಿ ಕಾಯ್ದೆ ಅನ್ವಯ ಹೊರಡಿಸಿರುವ ಮಾದರಿ ಟೆಂಡರ್ ದಾಖಲೆಗಳ ನಮೂನೆ K/W 4ರ ITT ಕ್ಲಾಸ್ 26ರಲ್ಲಿ ಕನಿಷ್ಠ ಟೆಂಡರ್‍ದಾರರಿಗೆ ಮಾತ್ರ ಗುತ್ತಿಗೆ ನೀಡಬೇಕಿದೆ ಎಂದು ಹೇಳಿದೆ.

ಪ್ರಸ್ತಾವವೇ ತಿರಸ್ಕೃತ
‘ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳು ಹಾಗೂ ಸರ್ಕಾರದಿಂದ ಕಾಲಕಾಲಕ್ಕೆ ಹೊರಡಿಸಲಾದ ಸುತ್ತೋಲೆಗಳನ್ವಯ ಸೂಚನೆಗಳ ಪ್ರಕಾರ ಎಲ್ 1 ಟೆಂಡರ್‍ದಾರರನ್ನು ಹೊರತುಪಡಿಸಿ ಬೇರೆ ಟೆಂಡರ್‍ದಾರರಿಗೆ ಗುತ್ತಿಗೆ ನೀಡಲು ಅವಕಾಶವಿರುವುದಿಲ್ಲ. ಆದ್ದರಿಂದ ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ,’ ಎಂದು ಸ್ಪಷ್ಟ ಅಭಿಪ್ರಾಯ ನೀಡಿರುವುದು ಗೊತ್ತಾಗಿದೆ.

ಆದರೆ ಪಿಡಬ್ಲ್ಯೂಡಿ ಇಲಾಖೆಯು ಇದನ್ನು ಬದಿಗೊತ್ತಿದೆ. ‘ಪ್ರಸಕ್ತ ಪ್ರಕರಣವು ಈ ಕುರಿತಾದ ಸುತ್ತೋಲೆಗಳು ಮತ್ತು ಕೈಪಿಡಿಗಳಿಗೆ ವಿರುದ್ಧವಾಗಿರುವುದಿಲ್ಲ. ಹಾಗೂ ಈ ಸುತ್ತೋಲೆಗಳು ಮಾರ್ಗಸೂಚಿ ಸ್ವಭಾವದವು. ಶಾಸನಬದ್ಧ ಷರತ್ತುಗಳು ಆಗಿರುವುದಿಲ್ಲ,’ ಎಂದು ಪಿಡಬ್ಲ್ಯೂಡಿಯು ಸಮರ್ಥಿಸಿಕೊಂಡಿರುವುದು ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಆರ್ಥಿಕ ಇಲಾಖೆಯು ಮರು ಟೆಂಡರ್ ಮಾಡಬೇಕು ಎಂದು ಅಭಿಪ್ರಾಯ ನೀಡಿತ್ತು. ಶಾಸನಬದ್ಧ ಷರತ್ತಿನ ಅನ್ವಯ ಅರ್ಥಿಕ ಇಲಾಖೆಯ ಅಭಿಪ್ರಾಯಕ್ಕೆ ಭಾಗಶಃ ವಿನಾಯಿತಿಯೊಂದಿಗೆ ಇದಕ್ಕೆ ಅನುಮೋದನೆ ಪಡೆದುಕೊಳ್ಳಲು ಸಚಿವ ಸಂಪುಟಕ್ಕೆ ಮಂಡಿಸಿದ್ದು ಗೊತ್ತಾಗಿದೆ.

ಸಮರ್ಥನೆಯಲ್ಲೇನಿದೆ?
ಮತ್ತೊಂದು ವಿಶೇಷವೆಂದರೇ ಆರ್ಥಿಕ ಇಲಾಖೆಯು ನೀಡಿದ್ದ ಅಭಿಪ್ರಾಯದ ಬಹುತೇಕ ಭಾಗವನ್ನು ಪಿಡಬ್ಲ್ಯೂಡಿಯು ಒಪ್ಪಿಕೊಂಡಿದೆ. ‘ಹಾಗೆಯೇ ಸುತ್ತೋಲೆಯಲ್ಲಿನ ಪದಗಳ ನಿಖರ ಅರ್ಥವು ಬಿಡ್‌ನ್ನು ಅಂಗೀಕರಿಸಿ ಟೆಂಡರ್ ನೀಡಿದ ನಂತರದ ಪ್ರಕರಣಗಳಿಗೆ ಅನ್ವಯಿಸುತ್ತದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಒತ್ತಿ ಹೇಳಲು ಬಯಸುತ್ತದೆ,’ ಎಂದ ಸಚಿವ ಸಂಪುಟದ ಮುಂದೆ ಸಮರ್ಥಿಸಿಕೊಂಡಿತ್ತು.

ಸಮಜಾಯಿಷಿಯಲ್ಲಿ ಹುರುಳಿದೆಯೇ?
ಹಾಗೆಯೇ ಈ ಪ್ರಕರಣದಲ್ಲಿ ಎಲ್ 1 ಬಿಡ್‌ದಾರನು ಕಾನೂನಿನ (ನಿಯಮ 26 (ಡಬಿ) ಅನ್ವಯ ಅವನ ಟೆಂಡರ್ ಅಂಗೀಕಾರ ಅಥವಾ ಆದೇಶ ನೀಡುವ ಮೊದಲೇ ಅನರ್ಹಗೊಂಡಿತ್ತು. ಟೆಂಡರ್‍ನಲ್ಲಿ ಅವನ ಸ್ಥಾನ ಇಲ್ಲವಾಗುತ್ತದೆ. ಆದರೆ ಇತರೆ ಮೂವರು ಬಿಡ್‌ದಾರರು ಅನರ್ಹರಾಗಿರುವುದಿಲ್ಲ. ಮತ್ತು ಸ್ಪರ್ಧೆಯಲ್ಲಿ ಮುಂದುವರೆದಿರುತ್ತಾರೆ.

ಕನಿಷ್ಟ ಬಿಡ್‌ದಾರನ ಅನರ್ಹತೆಯು 2023ರ ಸುತ್ತೋಲೆಯಲ್ಲಿ ನಿರೂಪಿಸಿರುವಂತೆ ಟೆಂಡರ್ ಅಂಗೀಕಾರದ ನಂತರದಲ್ಲಿ ನಡೆದಿಲ್ಲ. ಮತ್ತು ಅವರನು ಇನ್ನೂ ಗುತ್ತಿಗೆದಾರನೂ ಆಗಿರುವುದಿಲ್ಲ. ವಾಸ್ತವವಾಗಿ ಅವನಿಗೆ ಟೆಂಡರ್ ಪತ್ರವೂ ಸಹ ಜಾರಿಯಾಗಿಲ್ಲ. ಹೀಗಿರುವಾಗ ಆರ್ಥಿಕ ಇಲಾಖೆಯ ಸುತ್ತೋಲೆಯ ಅನ್ವಯ ಮಾಡಿಕೊಳ್ಳಬೇಕು ಎಂಬುದು ಕಾನೂನು ಮತ್ತು ವಾಸ್ತವಾಂಶ ಎರಡರ ನೆಲೆಯಲ್ಲಿರುವುದಿಲ್ಲ ಎಂದು ಪಿಡಬ್ಲ್ಯೂಡಿಯು ಸಮಜಾಯಿಷಿ ನೀಡಿರುವುದು ತಿಳಿದು ಬಂದಿದೆ.

ಮರು ಟೆಂಡರ್‍ನಿಂದ ವಿಳಂಬವಾಗಲಿದೆಯೇ?
ಅರ್ಥಿಕ ಇಲಾಖೆಯು ಈ ಪ್ರಕರಣದಲ್ಲಿ ಮರು ಟೆಂಡರ್ ನಡೆಸಬೇಕು ಎಂದು ಹೇಳಿದ್ದನ್ನು ಪಿಡಬ್ಲ್ಯೂಡಿಯು ಒಪ್ಪಿಕೊಂಡಿಲ್ಲ. ಬದಲಿಗೆ ಈ ‘ಯೋಜನೆಯಲ್ಲಿ ಸಾರ್ವಜನಿಕ ಹಣ ಮತ್ತು ಹಿತಾಸಕ್ತಿ ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿದೆ.

ಮರು ಟೆಂಡರ್ ಮಾಡುವುದರಿಂದ ಉಂಟಾಗುವ ವಿಳಂಬ, ಬೆಲೆ ಹೆಚ್ಚಳ ಮತ್ತು ಭೂ ಸ್ವಾಧೀನ ಪರಿಣಾಮಗಳು, ಕಾನೂನು ಮತ್ತು ಪ್ರಕ್ರಿಯೆಗಳು ಬೇರೆ ರೀತಿಯಲ್ಲಿ ಸೂಚಿಸುತ್ತವೆ. ಇಂತಹ ಸಂದರ್ಭದಲ್ಲಿ ಅಪಾರ ಸಾರ್ವಜನಿಕರ ಪ್ರಾಮುಖ್ಯತೆಯ ಈ ಮಹತ್ವದ ಯೋಜನೆಗೆ ಅಡ್ಡಿಯಾಗಬಾರದು,’ ಎಂದು ತನ್ನ ನಿಲುವನ್ನು ಸಮರ್ಥಿಸಿಕೊಂಡಿರುವುದು ಗೊತ್ತಾಗಿದೆ.

ಅದಷ್ಟೇ ಅಲ್ಲ, ಸಾರ್ವಜನಿಕ ಸಂಗ್ರಹಣೆ ವ್ಯವಸ್ಥೆಯನ್ನೇ ವಂಚನೆ ಮತ್ತು ಕೃತಕ ದಾಖಲೆಗಳ ಮೂಲಕ ಹಾನಿಗೊಳಿಸಿರುವ ಬಿಡ್‌ದಾರರ ವಿರುದ್ಧ ಪ್ರಕರಣ ದಾಖಲಾಗಿ, ತನಿಖೆಯು ಅಂತಿಮ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ಮರು ಟೆಂಡರ್ ನಡೆಸುವುದರಿಂದ ಪ್ರಕ್ರಿಯೆಯ ಗಂಭೀರತೆಯನ್ನು ದುರ್ಬಲಗೊಳಿಸುವ ಸಾಧ್ಯತೆ ಇದೆ ಎಂದು ಪ್ರತಿಪಾದಿಸಿರುವುದು ತಿಳಿದು ಬಂದಿದೆ.
ನ್ಯಾಯಾಂಗ ವಿವಾದ ನೆಪದಲ್ಲಿ ಸರ್ಕಾರವನ್ನು ಬೆದರಿಸಿದೆಯೇ?

ಈ ಪ್ರಕರಣದಲ್ಲಿ ತನ್ನ ಪ್ರತಿಪಾದನೆಯನ್ನು ಲೋಕೋಪಯೋಗಿ ಇಲಾಖೆಯು ಮತ್ತಷ್ಟು ವಿಸ್ತರಿಸುತ್ತಲೇ ಬಂದಿದೆ.
‘ಕೊನೆಯದಾಗಿ ಕಾನೂನುಬದ್ಧ ಪರಿಹಾರಗಳು ಲಭ್ಯವಿರುವಾಗ ಮತ್ತು ಉಳಿದಿರುವ ಬಿಡ್‌ದಾರರು ಅರ್ಹರಾಗಿ ಕನಿಷ್ಟ ದರದಲ್ಲಿ ಕಾಮಗಾರಿಯನ್ನು ನಿರ್ವಹಿಸಲು ಸಮ್ಮತಿಸಿದಲ್ಲಿ ಮೌಲ್ಯಮಾಪನ ಹಂತದಲ್ಲಿಯೇ ಮರು ಟೆಂಡರ್ ನಡೆಸುವುದರಿಂದ ಸರ್ಕಾರವು ಮುಂದಿನ ನ್ಯಾಯಾಂಗ ವಿವಾದಗಳಿಗೆ ಒಳಗಾಗುವ ಸಂಭವವಿದೆ. ಅಲ್ಲದೇ ಭವಿಷ್ಯದಲ್ಲಿ ಅಕ್ರಮ ಬಹಿರಂಗಗೊಳಿಸುವವರನ್ನು ನಿರುತ್ಸಾಹಗೊಳಿಸುವುದಕ್ಕೂ ಕಾರಣವಾಗಬಹುದು,’ ಎಂದು ಸಮರ್ಥನೆ ನೀಡಿದೆ.
ಇದಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರು ಅನುಮೋದಿಸಿದ್ದಾರೆ.

ಪಿಡಬ್ಲ್ಯೂಡಿ ನೀಡಿರುವ ಈ ಅಭಿಪ್ರಾಯವು ಸರ್ಕಾರವನ್ನೇ ಬೆದರಿಸಿದಂತಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಆರ್ಥಿಕ ಇಲಾಖೆ ಸುತ್ತೋಲೆಗಳಿಗೆ ಕಿಮ್ಮತ್ತೇ ಇಲ್ಲ
ಸಚಿವ ಸಂಪುಟದಿಂದ ಅನುಮೋದನೆ ಪಡೆದುಕೊಳ್ಳಲು ಈ ಪ್ರಸ್ತಾವ ಮಂಡಿಸಿದ್ದ ಲೋಕೋಪಯೋಗಿ ಇಲಾಖೆಯು ಆರ್ಥಿಕ ಇಲಾಖೆಯ ಸುತ್ತೋಲೆಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಬದಲಿಗೆ ಎಲ್ 2 ಬಿಡ್‌ದಾರರನ್ನೇ ಎಲ್ 1 ಎಂದು ಅನುಮೋದಿಸಿದಲ್ಲಿ ಸರ್ಕಾರಕ್ಕೆ ನಷ್ಟವಾಗುವುದಿಲ್ಲ ಎಂದು 2025ರ ಆಗಸ್ಟ್ 2ರಂದೇ ಇಲಾಖೆಯು ಹೇಳಿತ್ತು.
‘ಇ-ಸಂಗ್ರಹಣಾ ವೇದಿಕೆಯಹಲ್ಲಿ ಎಲ್ – 1 ಬಿಡ್‌ದಾರರಾದ ಎಂಪಿ 24 ಕನ್ಸ್‌ಟ್ರಕ್ಷನ್ಸ್ ಕಂಪನಿ ಮತ್ತು ರಾಮಲಿಂಗಂ ಕನಸ್ಟ್ರಕ್ರಷನ್ಸ್ ಕಂಪನಿ ಪ್ರೈ ಲಿ., ಅವರ ಬಿಡ್ ತಿರಸ್ಕರಿಸಲು ಹಾಗೂ ಎಲ್ 2 ಬಿಡ್‌ದಾರರಾದ ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈ ಲಿ., ವಾಸ್ತವಿಕವಾಗಿ ಎಲ್ಲಾ ಉದ್ದೇಶಗಳಿಗೆ ಕನಿಷ್ಟ ಬಿಡ್‌ದಾರರಾಗಿದ್ದು ಹಾಗೂ ತಿರಸ್ಕೃತ ಎಲ್ 1 ಬಿಡ್‌ದಾರರು ನಮೂದಿಸಿದ ಕನಿಷ್ಠ ಮೊತ್ತಕ್ಕೆ ಕಾಮಗಾರಿಯನ್ನು ನಿರ್ವಹಿಸುವುದಾಗಿ ನೀಡಿರುವುದರಿಂದ ಸರ್ಕಾರಕ್ಕೆ ನಷ್ಟವಾಗುವುದಿಲ್ಲವೆಂದು ಖಚಿತಗೊಂಡಂತಾಗಿದ್ದು ಅದರಂತೆ ಎಲ್ 2 ಬಿಡ್‌ದಾರರನ್ನು ಎಲ್ 1 ಎಂದು ಅನುಮೋದಿಸಬಹುದು,’ ಎಂದು ಇಲಾಖೆಯು ಅಭಿಪ್ರಾಯಿಸಿತ್ತು.

ಅನುಮೋದನೆ ಕೋರಿದ್ದರಲ್ಲಿ ಏನಿದೆ?
‘ವಾಸ್ತವ ಕಾನೂನು ಮತ್ತು ನಿಯಮಾವಳಿಗಳಲ್ಲಿ ವಿಧಿಸಲಾಗಿರುವ ಪ್ರಕ್ರಿಯೆಗಳನ್ನು ಗಮನದಲ್ಲಿರಿಸಿ ಪ್ರಕರಣದ ಅಂಶಗಳನ್ನು ಪರಿಗಣಿಸಿ ಆರ್ಥಿಕ ಇಲಾಖೆಯ ಸುತ್ತೋಲೆಯಲ್ಲಿನ ಅಂಶಗಳು ಈ ಪ್ರಕರಣದಲ್ಲಿ ಅನ್ವಯಿಸುವುದಿಲ್ಲ ಎಂಬುದನ್ನು ಗಮನದಲ್ಲಿರಿಸಿಕೊಂಡು ಮರು ಟೆಂಡರ್ ಪ್ರಕ್ರಿಯೆಯಿಂದ ಹೆಚ್ಚುವರಿ ಸಮಯ ವ್ಯಯವಾಗುವ ಮತ್ತು ಸರ್ಕಾರಕ್ಕೆ ವೆಚ್ಚಗಳು ಹೆಚ್ಚಾಗುವ ಸಾಧ್ಯತೆಯನ್ನು ಪರಿಗಣಿಸಿ ಈ ಕಾಮಗಾರಿ ಟೆಂಡರ್‍ನಲ್ಲಿ ಇನ್ನುಳಿದ ತಾಂತ್ರಿಕವಾಗಿ ಅರ್ಹರಾಗಿರುವ ಬಿಡ್‌ದಾರರ ಆರ್ಥಿಕ ಬಿಡ್‌ಗಳನ್ನು ಮೌಲ್ಯಮಾಪನ ಮಾಡಲು ಹಾಗೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕ ಕಾಯ್ದೆ ಮತ್ತು ನಿಯಮಗಳ ಅನುಸಾರ ಕನಿಷ್ಟ ಮೌಲ್ಯದ ಆರ್ಥಿಕ ಬಿಡ್‌ನ ಬಿಡ್‌ದಾರರಿಗೆ ಗುತ್ತಿಗೆ ನೀಡಲು ಅನುಮೋದನೆ ನೀಡಬೇಕು,’ ಎಂದು ಕೋರಿರುವುದು ಗೊತ್ತಾಗಿದೆ.

ಇದೇ ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈ ಲಿ ಕಂಪನಿಯು ಸಿಬಿಐ ವಿಚಾರಣೆ ಎದುರಿಸುತ್ತಿದ್ದರೂ ಸಹ 10,000 ಕೋಟಿ ರು ಮೊತ್ತದ ಕಾಮಗಾರಿ ಗುತ್ತಿಗೆ ನೀಡಿರುವ ಕುರಿತು ದಿ ಫೈಲ್ 2026ರ ಏಪ್ರಿಲ್ 13ರಂದು ವರದಿ ಪ್ರಕಟಿಸಿತ್ತು.
ಅಲ್ಲದೇ ಇದೇ ಪ್ರಕರಣದಲ್ಲಿ ಟೆಂಡರ್ ನಿಯಮಗಳಲ್ಲಿ ಭಾರೀ ಉಲ್ಲಂಘನೆ ಆಗಿದೆ ಮತ್ತು ಟೆಂಡರ್ ಅಂಗೀಕಾರ ಪ್ರಾಧಿಕಾರಕ್ಕೆ ಸ್ವೇಚ್ಛೆ ಅಧಿಕಾರ ನೀಡಿದಂತಾಗುತ್ತದೆ ಎಂದು ಆರ್ಥಿಕ ಇಲಾಖೆಯು ಪಿಡಬ್ಲ್ಯೂಡಿಗೆ ಪತ್ರ ಬರೆದಿತ್ತು.
ಈ ಪತ್ರವನ್ನಾಧರಿಸಿ ದಿ ಫೈಲ್ 2026ರ ಏಪ್ರಿಲ್ 16ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.




