ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೊಂದಿಗೆ ತಳಕು ಹಾಕಿಕೊಂಡಿದ್ದ ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಮಂಜೂರಾಗಿದ್ದ 66 ಎಕರೆ 20 ಗುಂಟೆ ಜಮೀನಿನ ಪ್ರಕರಣವನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಕೆದಕಿರುವುದು ಇದೀಗ ಬಹಿರಂಗವಾಗಿದೆ.
ಡಿ.ಕೆ. ಶಿವಕುಮಾರ್ ಭಾಗಿಯಾಗಿರುವ ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘದ ಹಗರಣವನ್ನು ವಿಶೇಷ ಕೋರ್ಟ್‌ಗೆ ಒಪ್ಪಿಸಲು ಸಿದ್ಧರಿದ್ದಾರೆಯೇ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಹತ್ತು ವರ್ಷಗಳ ಹಿಂದೆಯೆ ಸವಾಲು ಹಾಕಿದ್ದರು. ಇದೀಗ ಇದೇ ಪ್ರಕರಣವನ್ನು ಸಚಿವ ಸತೀಶ್ ಜಾರಕಿಹೊಳಿ ಅವರು ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದಾರೆ.
ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟಿರುವ ಡಿ ಕೆ ಶಿವಕುಮಾರ್ ಅವರು ದೆಹಲಿ ಯಾತ್ರೆ ನಡೆಸುತ್ತಿರುವ ನಡುವೆಯೇ ಮುನ್ನೆಲೆಗೆ ಬಂದಿರುವ ಶಾಂತಿನಗರ ಹೌಸಿಂಗ್ ಸೊಸೈಟಿ ಪ್ರಕರಣವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಉಪಯೋಗಕ್ಕೆ ಮಂಜೂರು ಮಾಡಿದ್ದ 66 ಎಕರೆ ಜಮೀನನ್ನು ಶಾಂತಿನಗರ ಗೃಹ ನಿರ್ಮಾಣ ಸಂಘಕ್ಕೆ ಕಾನೂನು ಬಾಹಿರವಾಗಿ ನೋಂದಣಿ ಮಾಡಿರುವ ಕುರಿತು ಕೆಲವು ದೂರುಗಳು ಸತೀಶ್ ಜಾರಕಿಹೊಳಿ ಅವರಿಗೆ ಸಲ್ಲಿಕೆಯಾಗಿದ್ದವು.
ಈ ದೂರುಗಳನ್ನಾಧರಿಸಿ ಸತೀಶ್ ಜಾರಕಿಹೊಳಿ ಅವರು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರಿಗೆ ಟಿಪ್ಪಣಿ ಹಾಕಿದ್ದರು. ಈ ಟಿಪ್ಪಣಿ ಆಧರಿಸಿ ಕ್ರಮ ವಹಿಸಬೇಕು ಎಂದು ಗೃಹ ಸಚಿವರ ಕಾರ್ಯಾಲಯವು 2026ರ ಮಾರ್ಚ್ 10ರಂದು ಒಳಾಡಳಿತ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಟಿಪ್ಪಣಿ ಹಾಕಿದ್ದಾರೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ಏನಿದು ಪ್ರಕರಣ?
ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ಶ್ರೀನಿವಾಗಿಲು ಗ್ರಾಮದಲ್ಲಿ 66 ಎಕರೆ 22 ಗುಂಟೆ ಪ್ರದೇಶವನ್ನು 1984ರಲ್ಲಿ ಸರ್ಕಾರದಿಂದ ಭೂ ಸ್ವಾಧೀನ ಮಾಡಿ ಸಂಘದ ವಶಕ್ಕೆ ನೀಡಿತ್ತು. ಸಂಘವು ನಿವೇಶನಗಳನ್ನು ಆ ಪ್ರದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ದುರ್ಬಲ ವರ್ಗದ ವಸತಿ ರಹಿತರಿಗೆ ನೀಡಬೇಕು ಎಂದು ಸರ್ಕಾರವು ಆದೇಶಿಸಿತ್ತು.

ಈ ಸಂಘಕ್ಕೆ ಜಮೀನು ಸಿಕ್ಕಿದ್ದೇ ತಡ ಭೂ ಮಾಫಿಯಾಗಳ ಪ್ರವೇಶವಾಗಿತ್ತು. ನಂತರದ ವರ್ಷಗಳಳಲ್ಲಿ ಅದೇ ಹೆಸರಿನ ಎರಡು ಸಂಘಗಳು ಭೂಮಿ ಪಡೆಯಲು ಸ್ಪರ್ಧೆಗಿಳಿದಿದ್ದವು. ಒಂದು ಒರಿಜಿನಲ್ ಸೊಸೈಟಿ ಮತ್ತು ಅದೇ ಹೆಸರಿನ ಬೋಗಸ್ ಸೊಸೈಟಿ. ಈ ವಿವಾದದ ಕುರಿತು ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ನಂತರ ನ್ಯಾಯಾಲಯವು ಯಾವುದು ನಿಜವಾದ ಸಂಘವಾಗಿರುತ್ತದೆಯೋ ಸದರಿ ಸಂಘವು ತಾನು ನೋಂದಣಿ ಮಾಡಿದ ಮತ್ತು ಭೂ ಸ್ವಾಧೀನ ಪಡಿಸಿಕೊಂಡ ದಿನಾಂಕದಂದು ಇದ್ದ ಅರ್ಹ ಸದಸ್ಯರುಗಳಿಗೆ ನಿವೇಶನ ನೀಡಲು ಕ್ರಮಕೈಗೊಳ್ಳಬೇಕು ಎಂದು ಆದೇಶಿಸಿತ್ತು.

ನ್ಯಾಯಾಲಯದ ಆದೇಶ ಮತ್ತು ಎಲ್ಲಾ ಸ್ಥಾಪಿತ ಆದೇಶಗಳನ್ನು ಗಾಳಿಗೆ ತೂರಿ 2004ರಲ್ಲಿ ನಿವೇಶನಗಳನ್ನು ರಚನೆ ಮಾಡಿ 156 ನಿವೇಶನಗಳನ್ನು ಹಂಚಿಕೆ ಮಾಡಿ ಮಾರಾಟ ಪತ್ರ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಆ 156 ನಿವೇಶನಗಳ ಪೈಕಿ 143 ನಿವೇಶನಗಳನ್ನು ಒಂದೇ ಕುಟುಂಬದ ಸದಸ್ಯರುಗಳು 2011ರಲ್ಲಿ ಕ್ರಯಕ್ಕೆ ಪಡೆದುಕೊಂಡಿದ್ದರು.
ನೈಜ ಸದಸ್ಯರೇ ಅಲ್ಲ
ಸಂಘದ ಹಂಚಿಕೆಯಾದ ಸದಸ್ಯರುಗಳು ನೈಜ ಸದಸ್ಯರುಗಳಲ್ಲ ಎಂದು ಆರೋಪಿಸಲಾಗಿತ್ತು. ಹೀಗಾಗಿ ಇವರ್‍ಯಾರು ನಿವೇಶನ ಪಡೆಯಲು ಅರ್ಹರಲ್ಲ, ಬದಲಿಗೆ ಬೇನಾಮಿ ಸದಸ್ಯರಾಗಿದ್ದರು ಎಂದು ಹೇಳಲಾಗಿತ್ತು. ಅಲ್ಲದೆ ಇವರೆಲ್ಲರೂ ಬೋಗಸ್ ಸೊಸೈಟಿಯಿಂದ ನಿವೇಶನಗಳನ್ನು ಪಡೆದಿದ್ದರು. ನಿವೇಶನ ಹಂಚಿಕೆ ಮಾಡಲಾದ 7 ವರ್ಷಗಳಲ್ಲಿಯೆ 143 ನಿವೇಶನಗಳನ್ನು ಒಂದೇ ಕುಟುಂಬದ ಸದಸ್ಯರುಗಳಿಗೆ ಮಾರಾಟ ಮಾಡಿದ್ದರು ಎಂದು ಖುದ್ದು ಮಾಜಿ ಶಾಸಕ ಹಾಗೂ ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿಯ ಎ ಟಿ ರಾಮಸ್ವಾಮಿ ಅವರು ಆರೋಪಿಸಿದ್ದರು.

ಸಂಘದಿಂದ ನಿವೇಶನ ಪಡೆದುಕೊಂಡ ಸದಸ್ಯರುಗಳು 15 ವರ್ಷಗಳ ಕಾಲ ನಿವೇಶನಗಳನ್ನು ಪರಭಾರೆ ಮಾಡಬಾರದು ಎಂಬ ನಿಯಮಗಳಿದ್ದರೂ ಸಹ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಲಾಗಿತ್ತು. ಒಂದೇ ಕುಟುಂಬದ ಸದಸ್ಯರುಗಳು 143 ನಿವೇಶನಗಳನ್ನು ಖರೀದಿಸಿದ್ದರು. ಎಲ್ಲವೂ ಭೂ ಮಾಫಿಯಾದ ಪೂರ್ವಯೋಜಿತ ಕೃತ್ಯವಾಗಿದೆ. ಸರ್ಕಾರವು ಭೂ ಸ್ವಾಧೀನಪಡಿಸಿಕೊಂಡಿರುವ ಜಾಗವು ನಗರದ ಹೃದಯ ಭಾಗದಲ್ಲಿದೆ. ಒಂದು ಚದರಡಿಗೆ ಕನಿಷ್ಟ 10 ಸಾವಿರ ರೂಪಾಯಿಗಳೀದ್ದು ಅದರ ಒಟ್ಟು ಮೌಲ್ಯ ಸುಮಾರು 2,900 ಕೋಟಿ ರು ಎಂದು 10 ವರ್ಷಗಳ ಹಿಂದೆಯೇ ಅಂದಾಜಿಸಿತ್ತು.
‘ಸಂಘದ ಎಲ್ಲಾ ವ್ಯವಹಾರಗಳು ಸಂಪೂರ್ಣ ಮೋಸದಿಂಧಲೇ ಕೂಡಿದ್ದು ಸರ್ಕಾರ ಮತ್ತು ಸಮಾಜವನ್ನು ಮೋಸಗೊಳಿಸಿದ್ದಾರೆ. ಇದರ ಹಿಂದೆ ಅತ್ಯಂತ ಪ್ರಭಾವಿಶಾಲಿಗಳೂ ಮತ್ತು ಬಲಾಢ್ಯರು ಇರುವುದರಿಂದ ಸರ್ಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಆದ್ದರಿಂದ ಯಾವ ಉದ್ದೇಶಕ್ಕೆ ಸರ್ಕಾರ ಜಮೀನನನ್ಉ ಭೂ ಸ್ವಾಧೀನಪಡಿಸಿಕೊಂಡು ಸಂಘದ ನೀಡಲಾಗಿತ್ತು, ಆ ಉದ್ದೇಶ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಈ ಭೂಮಿಯನ್ನು ಸರ್ಕಾರ ವಾಪಸ್ ಪಡೆದುಕೊಂಡು ಸಾರ್ವಜನಿಕ ಉದ್ದೇಶಕ್ಕೆ ಸದುಪಯೋಗಪಡಿಸಿಕೊಳ್ಳಲ ಕ್ರಮ ಕೈಗೊಳ್ಳಬೇಕು,’ ಎಂದು ಎ ಟಿ ರಾಮಸ್ವಾಮಿ ಅವರು 2014ರ ಅಕ್ಟೋಬರ್ 13ರಂದೇ ಪತ್ರ ಬರೆದಿದ್ದರು.
ಅಲ್ಲದೇ ಇದೇ ಪ್ರಕರಣದ ಬಗ್ಗೆ 2004ರಲ್ಲೇ ಸಹಕಾರ ಸಂಘಗಳ ಅಪರ ನಿಬಂಧಕರಿಗೆ ವರದಿ ಸಲ್ಲಿಕೆಯಾಗಿತ್ತು.

ದೂರು ಅರ್ಜಿಗಳ ಬಗ್ಗೆ ಮತ್ತು ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಪರಿಶೀಲಿಸಲು ಸಹಕಾರ ಸಂಘಗಳ ಉಪ ನಿಬಂಧಕರು ಖುದ್ದಾಗಿ ಸಂಘಕ್ಕೆ ಭೇಟಿ ನೀಡಿದ್ದರು. ಆ ವೇಳೆಯಲ್ಲಿ ಸಂಘದ ಕಚೇರಿಯ ಬಾಗಿಲು ತೆರೆಯದೆ ಇರುವುದಾಗಿ ಕಂಡುಬಂದಿತ್ತು. ಹೀಗಾಗಿ ಸಂಘದ ಕಚೇರಿಗೆ ನೋಟೀಸ್ ಜಾರಿ ಮಾಡಲು ಸಾಧ್ಯವಾಗಿರಲಿಲ್ಲ. ಆದರೂ ನೋಟೀಸ್‌ಗಳನ್ನು ಸಂಘದ ಬಾಗಿಲಿಗೆ ಮತ್ತು ಸಂಘದ ಕಚೇರಿ ಒಳಾಂಗಣಕ್ಕೂ ಹಾಕಲಾಗಿತ್ತು. ಇಷ್ಟಾದರೂ ಸಂಘದ ಕಾರ್ಯದರ್ಶಿಯು ವಿಚಾರಣೆಗೆ ಹಾಜರಾಗಿರಲಿಲ್ಲ. ಸಂಘದ ಕಚೇರಿಯು ಹಲವಾರು ತಿಂಗಳುಗಳಿಂದ ಮುಚ್ಚಿತ್ತು. ಈ ಕಾರಣಕ್ಕೆ ದೂರರ್ಜಿ ವಿಚಾರಣೆ ಮಾಡಲು ಹಾಗೂ ಪರಿಶೀಲಿಸಲು ಸಾಧ್ಯವಾಗಿರುವುದಿಲ್ಲ ಎಂದು ಸಹಕಾರ ಸಂಘಗಳ ಅಪರ ನಿಬಂಧಕರಿಗೆ ಸಲ್ಲಿಕೆಯಾಗಿದ್ದ ವರದಿಯಲ್ಲಿ ವಿವರಿಸಲಾಗಿತ್ತು.

ದೂರು ಅರ್ಜಿಗಳಲ್ಲಿರುವ ಆರೋಪಗಳಂತೆ ಸರ್ಕಾರದಿಂದ ಬೇಗೂರು ಹೋಬಳಿ ಶ್ರೀನಿವಾಗಿಲು ಹಾಗೂ ಜಕ್ಕಸಂದ್ರ ಗ್ರಾಮಗಳಲ್ಲಿ ಒಟ್ಟು 66 ಎಕರೆ 22 ಗುಂಟೆ ಜಮೀನನ್ನು ನೀಡಲು ಅಧಿಸೂಚನೆಯಾಗಿದೆ ಎಂದು ತಿಳಿಸಿತ್ತು. ಈ ಜಮೀನನ್ನು ಸಂಘದಿಂದ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಕೂಡಲೇ ಅದನ್ನು ತಡೆಹಿಡಿಯಬೇಕು ಎಂದು ಕೋರಿದ್ದರು.
ಸಂಘದ ಚಟುವಟಿಕೆಗಳ ಬಗ್ಗೆ ವಿಶೇಷ ಭೂ ಸ್ವಾಧೀನಾಧಿಕಾರಿಯವರ ಕಚೇರಿಯಿಂದ ಮಾಹಿತಿಯನ್ನೂ ಪಡೆದಿತ್ತು. ಈ ಮಾಹಿತಿ ಪ್ರಕಾರ ಸಂಘವು ಯಾವುದೇ ಚಟುವಟಿಕೆ ನಡೆಸದೇ ನಿಷ್ಕ್ರೀಯವಾಗಿತ್ತು. ಹಾಗೂ ಸಂಘದ ಕಛೇರಿಯ ಬಾಗಿಲನ್ನು ಸಹ ತೆರೆದಿರಲಿಲ್ಲ. ಇದಲ್ಲದೇ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಕರ್ನಾಟಕ ಲೋಕಾಯುಕ್ತ ಕಚೇರಿಯಿಂದಲೂ ಸಹ ವಿಚಾರಣೆ ನಡೆಸಿತ್ತು. ಅಲ್ಲಿಯೂ ಸಹ ಸಂಘದ ಬಗ್ಗೆ ಯಾವುದೇ ನಿಖರವಾದ ಮಾಹಿತಿ ದೊರೆತಿರಲಿಲ್ಲ ಎಂದು ತಿಳಿದು ಬಂದಿದೆ.

‘ಸರ್ಕಾರದಿಂದ ಈ ಸಂಘಕ್ಕೆ ನೀಡಲು ಉದ್ದೇಶಿಸಿರುವ 66 ಎಕರೆ 22 ಗುಂಟೆ ಜಮೀನನ್ನು ಸಂಘವು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಲು ಉದ್ದೇಶಿಸಿದೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಸಂಘಕ್ಕೆ ಬಿಡುಗಡೆ ಮಾಢಲು ಉದ್ದೇಶಿಸಿರುವ ಜಮೀನು ಪರಭಾರೆ ಆಗದಂತೆ ಕ್ರಮವಹಿಸಬೇಕಾಗಿದೆ. ನಿವೇಶನ ದೊರಕುವ ಅವಕಾಶಗಳು ಇಲ್ಲದಂತಾಗುತ್ತವೆ. ಹಾಗೂ ಕೆಲವು ಹಿತಾಸಕ್ತಿಗಳುಲ ಈ ಜಮೀನನ್ನು ಖಾಸಗಿ ವ್ಯಕ್ತಿಗಳೀಗೆ ಪರಭಾರೆ ಮಾಡುವುದನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳಿಗೆ ಸೂಕ್ತ ಪತ್ರ ಒಂದನ್ನು ಬರೆಯಬೇಕಾಗಿದೆ,’ ಎಂದು ಪತ್ರದಲ್ಲಿ ವಿವರಿಸಿದ್ದರು.

2007ರ ಮಾರ್ಚ್ 1ರಂದು ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಮಾನ್ಯತೆ ಕುರಿತು ಬಿಡಿಎ ಆಯುಕ್ತರಿಗೆ ಸಹಕಾರ ಇಲಾಖೆಯು ಪತ್ರ ಬರೆದಿತ್ತು.

ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘದ ಹೆಸರಿನಲ್ಲಿ ಎರಡು ಗುಂಪುಗಳು ಕಾರ್ಯನಿರ್ವಹಿಸುತ್ತಿದೆ. ಸಂಘದ ಮೇಲೆ ಹತೋಟಿ ಪಡೆಯಲು ಈ ಎರಡು ಗುಂಪುಗಳೂ ತೀವ್ರ ಪ್ರಯತ್ನ ನಡೆಸುತ್ತಿದ್ದವು. ನೈಜವಾದ ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘವು ಯಾವುದು ಎನ್ನುವ ಬಗ್ಗೆ ಒಂದು ನಿರ್ಧಾರಕ್ಕೆ ಬರಲು ರಾಜ್ಯ ಉಚ್ಛ ನ್ಯಾಯಾಲಯವು ಸಹಕಾರ ಇಲಾಖೆಗೆ ರಿಟ್ ಪಿಟಿಷಿನ್ ಸಂಖ್ಯೆ 6951/2005ರಲ್ಲಿ ಆದೇಶ ನೀಡಿತ್ತು.

ಉಲ್ಲೇಖದಲ್ಲಿ ಹೇಳೀದ 2006ರ ನವೆಂಬರ್ 17ರ ಆದೇಶದಲ್ಲಿ ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘ 120, ಲ್ಯಾಂಗ್ ಪೋರ್ಡ್ ರಸ್ತೆಯ ನಂಜಪ್ಪ ವೃತ್ತ ಶಾಂತಿ ನಗರ ಬೆಂಗಳೂರು- 25 ಈ ವಿಳಾಸದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘವೇ ನೈಜವಾದ ಸಹಕಾರ ಸಂಘವೆಂದು ಸಹಕಾರ ಸಂಘಗಳ ನಿಬಂಧಕರು ಆದೇಶ ನೀಡಿದ್ದರು.
ಇದೇ ಸಂಘವು ನೈಜವಾದ ಮತ್ತು ಕಾನೂನುಬದ್ಧವಾದ ಸಹಕಾರ ಸಂಘವಾಗಿರುವುದರಿಂದ ಇದರ ಅಧ್ಯಕ್ಷರಾದ ಕೆ ಲಕ್ಷ್ಮಣ್ ಮತ್ತು ಕಾರ್ಯದರ್ಶಿಯಾದ ಶಶಿಕುಮಾರ್ ಇವರಿಂದ ಬರುವ ಪತ್ರ ವ್ಯವಹಾರಗಳಿಗೆ ಮಾನ್ಯತೆ ನೀಡಬೇಕು ಎಂದು ಬಿಡಿಎಗೆ ಬರೆದಿದ್ದ ಪತ್ರದಲ್ಲಿ ಕೋರಿತ್ತು. ಇದನ್ನು ಹೊರತುಪಡಿಸಿ ಸಂಘದ ಹೆಸರಿನಲ್ಲಿ ಬೇರೆ ಯಾವುದೇ ವ್ಯಕ್ತಿಗಳು ಪತ್ರ ವ್ಯವಹಾರ ಮಾಡಿದ್ದರೇ ಅದಕ್ಕೆ ಮಾನ್ಯತೆ ನೀಡದೇ ತಿರಸ್ಕರಿಸಬೇಕು. ಅಲ್ಲದೇ ಸಂಘದ ಹಾಗೂ ಸದಸ್ಯರ ಹಿತದೃಷ್ಟಿಯಿಂದ ಈ ಅಂಶವನ್ನು ನಿಮ್ಮ ಸಂಸ್ಥೆಯ ದಾಖಲಾತಿಗಳಲ್ಲಿ ಕಡತದಲ್ಲಿ ತರಬೇಕು ಎಂದು ಕೋರಿದ್ದರು.

ಇದಾದ ಮೇಲೆ 2010ರ ಡಿಸೆಂಬರ್ 27ರಂದು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ವರದಿ ನೀಡಲಾಗಿತ್ತು.
ರಿಟ್ ಅರ್ಜಿ ಸಂಖ್ಯೆ 10726/07ಕ್ಕೆ ಸಂಬಂಧಿಸಿದಂತೆ 2008ರ ಡಿಸೆಂಬರ್ 23ರಂದು ನೀಡಿದ್ದ ತೀರ್ಪಿನ ರೀತಿ ಸಂಘಕ್ಕೆ ಜಮೀನು ಭೂ ಸ್ವಾಧೀನವಾದಾಗ ಮತ್ತು ಬಿಡಿಎ ಜಮೀನಿನ ಬಡಾವಣೆಗೆ ಅನುಮೋದನೆ ನೀಡಿದಾಗ ಇದ್ದ ನೈಜ ಸದಸ್ಯರಿಗೆ ಹಂಚಿಕೆ ಮಾಡುವಾಗ ಮುಂದಿನ ಕ್ರಮವಹಿಸಬೇಕು ಎಂದು ನಿರ್ದೇಶಿಸಿತ್ತು.

ಉಚ್ಛ ನ್ಯಾಯಾಲಯವು 2008ರ ಡಿಸೆಂಬರ್ 23ರಂದು ಹೊರಡಿಸಿದ್ದ ಆದೇಶದ ಕಂಡಿಕೆ 29ರ ಪ್ರಕಾರ ಈ ಸಂಘದ ಬಗ್ಗೆ ಪ್ರತ್ಯೇಕ ವಿಚಾರಣೆ ನಡೆಸುವ ಅಗತ್ಯತೆ ಕಂಡುಬರುತ್ತಿಲ್ಲವೆಂದು ಹೇಳಿತ್ತು. ಸಂಘದಲ್ಲಿ ನೈಜ ಸದಸ್ಯರ ಸಂಖ್ಯೆ ವಿರಳವಾಗಿದೆ. 66.20 ಎಕರೆಯಷ್ಟು ಹೆಚ್ಚಿನ ಪ್ರಮಾಣದ ಹಾಗೂ ಅಪಾರ ಬೆಲೆ ಬೆಆಳುವ ಜಮೀನಿನ ಅವಶ್ಯಕತೆ ಸಂಘಕ್ಕೆ ಇಲ್ಲ. ಇದರ ಸದುಪಯೋಗವೂ ಸಹಾ ಅನುಮಾನಸ್ಪದವಾಗಿದೆಯೆಂದು ಹೇಳಿದ್ದರು. ಈ ಜಮೀನನ್ನು ಸರ್ಕಾರದ ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಬೇಕು. ಈ ಜಮೀನನ್ನು ಸಂರಕ್ಷಿಸಿ ಸಾರ್ವಜನಿಕರಿಗೆ ಉಪಯೋಗವಾಗುವ ರೀತಿಯಲ್ಲಿ ವಿನಿಯೋಗಿಸಲು ಸರ್ಕಾರದ ಉನ್ನತ ಮಟ್ಟದಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಕೋರಿದ್ದರು.
ಇದೇ ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘದದಲ್ಲಿ ಭಾರೀ ಪ್ರಮಾಣದ ಅಕ್ರಮಗಳು ನಡೆದಿವೆ ಎಂದು ಹತ್ತು ವರ್ಷಗಳ ಹಿಂದೆಯೇ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಗುಡುಗಿದ್ದರು.
‘ಭೂ ಅಕ್ರಮ ತನಿಖೆಗಾಗಿ ವಿಶೇಷ ಕೋರ್ಟ್ ರಚಿಸುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಡಿ.ಕೆ. ಶಿವಕುಮಾರ್ ಭಾಗಿಯಾಗಿರುವ ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘದ ಹಗರಣವನ್ನು ವಿಶೇಷ ಕೋರ್ಟ್‌ಗೆ ಒಪ್ಪಿಸಲು ಸಿದ್ಧರಿದ್ದಾರೆಯೇ,’ ಎಂದು ಎಚ್.ಡಿ. ದೇವೇಗೌಡ ಅವರು ಸವಾಲು ಹಾಕಿದ್ದರು.
‘ಎಸ್.ಎಂ. ಕೃಷ್ಣ ಸರಕಾರದಲ್ಲಿ ಸಹಕಾರ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ನಕಲಿಯಾಗಿ ಶಾಂತಿನಗರ ಸೊಸೈಟಿ ರಚಿಸಿ, ತಮ್ಮ ಕುಟುಂಬದವರ ಹೆಸರಿಗೆ ಎಷ್ಟು ಆಸ್ತಿ ಮಾಡಿಕೊಂಡಿದ್ದಾರೆ ಎಂದು ಗೊತ್ತಿದೆ. ಇದನ್ನು ನಿನ್ನೆ ಕುಮಾರಸ್ವಾಮಿ ಹೇಳಿರುವುದಲ್ಲ. ಕೃಷ್ಣ ಸರಕಾರದಲ್ಲಿ ಸಹಕಾರ ಸಚಿವರಾಗಿದ್ದ, ಅಂದು ಡಿ.ಕೆ. ಶಿವಕುಮಾರ್ ಸಹೋದ್ಯೋಗಿ ಸಚಿವರಾಗಿದ್ದವರೇ ಬಹಿರಂಗಪಡಿಸಿ, ತನಿಖೆಗೆ ಒಪ್ಪಿಸಿದ್ದರು. ತನಿಖಾ ವರದಿ ಏನಾಯಿತು, ಸಿಬಿಐ ಕುರಿತು ನಿಮಗೆ ನಂಬಿಕೆ ಇಲ್ಲ. ನೀವೇ ಹೇಳಿದಂತೆ ವಿಶೇಷ ಕೋರ್ಟ್ ರಚಿಸಿ, ತನಿಖೆಗೆ ಒಪ್ಪಿಸಲು ಸಿದ್ಧರಿದ್ದೀರಾ,’’ ಎಂದು ಭಾವಾವೇಶದಿಂದ ಮಾತನಾಡಿದ್ದರು.
ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಅಕ್ರಮಗಳು ನಡೆದಿವೆ ಎಂದು ಜೆಡಿಎಸ್ ನಾಯಕರು ಆರೋಪಿಸಿದ್ದರು. ಈ ಅವ್ಯವಹಾರಗಳ ಕುರಿತು ಜಿ.ವಿ.ಕೆ. ರಾವ್ ಸಮಿತಿಯು ತನಿಖೆ ನಡೆಸಿ ವರದಿ ನೀಡಿತ್ತು.

ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಹಿರಿಯ ಐಎಎಸ್ ಅಧಿಕಾರಿ ಜಿ.ವಿ.ಕೆ. ರಾವ್ ಏಕ ಸದಸ್ಯ ತನಿಖಾ ಸಮಿತಿಯು ಸಲ್ಲಿಸಿರುವ ವರದಿಯನ್ನು ಬಜೆಟ್ ಅಧಿವೇಶನದಲ್ಲಿ ಮಂಡಿಸುವಂತೆ ಜೆಡಿಎಸ್ ವಕ್ತಾರ ರಮೇಶ್‌ಬಾಬು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದರು. ಈಗ ರಮೇಶ್ ಬಾಬು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಕಾಂಗ್ರೆಸ್‌ನಿಂದಲೇ ವಿಧಾನ ಪರಿಷತ್ ಗೆ ನಾಮನಿರ್ದೇಶಿತರಾಗಿದ್ದಾರೆ.
‘ಈ ಪ್ರಕರಣದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಪಾತ್ರವಿರುವ ಕುರಿತು ಯಾವುದೇ ದಾಖಲೆ ಲಭ್ಯವಿಲ್ಲ ಎಂದು ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಹೇಳಿಕೆ ನೀಡಿರುವುದು ಅವ್ಯವಹಾರವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಸಂಚು,’ ಎಂದು ರಮೇಶ್ ಬಾಬು ಅವರು ಪ್ರಕಟಣೆಯಲ್ಲಿ ಆರೋಪಿಸಿದ್ದರು.
ಅಲ್ಲದೇ ‘ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆ ನಡೆಸಿದ ಜಿ.ವಿ.ಕೆ. ರಾವ್ ಸಮಿತಿಯು ಎಳೆಎಳೆಯಾಗಿ ಅವ್ಯವಹಾರ ಬಯಲು ಮಾಡಿದೆ. ಆದರೆ, ಸರಕಾರ ಇದುವರೆಗೆ ಈ ವರದಿಯನ್ನು ಬಹಿರಂಗಪಡಿಸಿಲ್ಲ. ಈ ವರದಿಯನ್ನು ಸದನದ ಮುಂದೆ ಮಂಡಿಸಿದರೆ ಅವ್ಯವಹಾರದಲ್ಲಿ ಯಾರ್ಯಾರು ಶಾಮೀಲಾಗಿದ್ದಾರೆ ಎಂಬುದು ಬಯಲಾಗಲಿದೆ,’ಎಂದು ಒತ್ತಾಯಿಸಿದ್ದರು.
ಬಹುಕೋಟಿ ಮೊತ್ತದ ಹಗರಣವನ್ನು ರಾಜ್ಯದ “ಎಲ್ಲಾ ವಸತಿ ಹಗರಣಗಳ ತಾಯಿ” ಎಂದು ಬಣ್ಣಿಸಿರುವ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ, ರಾಜ್ಯ ಸರ್ಕಾರವು ಸಂಘಕ್ಕೆ ಹಂಚಿಕೆ ಮಾಡಲಾದ ಭೂಮಿಯನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದ್ದರು.
ಅದೇ ರೀತಿ ಮಾಜಿ ಶಾಸಕ ಎ ಟಿ ರಾಮಸ್ವಾಮಿ ಅವರೂ ಸಹ ಈ ಬಗ್ಗೆ ದನಿ ಎತ್ತಿದ್ದರು. ‘ಶಾಂತಿನಗರ ವಸತಿ ಸಹಕಾರಿ ಸಂಘದ ಹಗರಣವು ಪಶ್ಚಿಮ ಬಂಗಾಳವನ್ನು ಬೆಚ್ಚಿಬೀಳಿಸಿದ ಶಾರದಾ ಚಿಟ್ ಫಂಡ್ ಹಗರಣಕ್ಕಿಂತ ದೊಡ್ಡದಾಗಿದೆ,’ ಎಂದು ರಾಮಸ್ವಾಮಿ ಅವರು ಆಪಾದಿಸಿದ್ದರು.
ಕೆಲವು ಪ್ರಭಾವಿ ವ್ಯಕ್ತಿಗಳು ಅಧಿಕಾರಿಗಳ ಜೊತೆ ಸೇರಿ ₹3,000 ಕೋಟಿಗೂ ಹೆಚ್ಚು ಮೌಲ್ಯದ 66 ಎಕರೆಗೂ ಹೆಚ್ಚು ಮೌಲ್ಯದ ಭೂಮಿಯನ್ನು ಕಬಳಿಸಿದ್ದಾರೆ. ಈ ಭೂಮಿಯನ್ನು ಮೂಲತಃ ಅಲ್ಪಸಂಖ್ಯಾತರು ಮತ್ತು ಎಸ್‌ಸಿ/ಎಸ್‌ಟಿಗಳನ್ನು ಒಳಗೊಂಡ ಸಮಾಜದ ಸದಸ್ಯರ ನಡುವೆ ವಿತರಿಸಲು ಹಂಚಿಕೆ ಮಾಡಲಾಗಿತ್ತು. ಆದಾಗ್ಯೂ, ಭೂಮಿ ಅಂತಿಮವಾಗಿ ಪ್ರಬಲ ಭೂಗಳ್ಳರ ಕೈಗೆ ಸಿಕ್ಕಿದೆ ಎಂದು ಆರೋಪಿಸಿದ್ದರು.
ಅದೇ ಹೆಸರಿನಲ್ಲಿ ನಕಲಿ ಸೊಸೈಟಿಯನ್ನು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನೋಂದಾಯಿಸಲಾಗಿದೆ ಎಂದು ಅವರು ಹೇಳಿದರು ಮತ್ತು ನಂತರ ಹಿಂದಿನ ಸೊಸೈಟಿಗೆ ಹಂಚಿಕೆಯಾದ ಭೂಮಿಯನ್ನು ಕಬಳಿಸಲು ಯೋಜನೆ ರೂಪಿಸಿದೆ. ಕ್ರಿಮಿನಲ್ ಪಿತೂರಿ”ಯ ಭಾಗವಾಗಿ, ನಕಲಿ ಸೊಸೈಟಿ ವಸತಿ ವಿನ್ಯಾಸವನ್ನು ರಚಿಸಿ 156 ನಿವೇಶನಗಳನ್ನು ವಿತರಿಸಿದೆ ಎಂದು ಅವರು ಆಪಾದಿಸಿದ್ದರು.
ನಿವೇಶನ ಹಂಚಿಕೆಯಾದ ಒಂದು ತಿಂಗಳೊಳಗೆ, ಎಲ್ಲಾ ಹಂಚಿಕೆದಾರರು ಸಂಸದ ಡಿ.ಕೆ. ಸುರೇಶ್ ಮತ್ತು ಜಯಲಕ್ಷ್ಮಿ ರವಿ ಸೇರಿದಂತೆ 11 ಜನರ ಪರವಾಗಿ ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ರಚಿಸಿದ್ದಾರೆ ಎಂದು ಅವರು ಆರೋಪಿಸಿದ್ದರು. ಆಪಾದಿತ ಅಕ್ರಮಗಳಲ್ಲಿ (ಅಂದು ಇಂಧನ ಸಚಿವ) ಡಿ ಕೆ ಶಿವಕುಮಾರ್ ಅವರ ಪಾತ್ರ ಸ್ಪಷ್ಟವಾಗಿದೆ. ಏಳು ವರ್ಷಗಳ ಒಳಗೆ ಜಿಪಿಎ ಹೊಂದಿರುವವರು 156 ನಿವೇಶನಗಳಲ್ಲಿ 143 ನಿವೇಶನಗಳನ್ನು ಟಿ.ಎ. ವೆಂಕಟೇಶ್ ಅವರ ಒಂದೇ ಕುಟುಂಬಕ್ಕೆ ಮಾರಾಟ ಮಾಡಿದ್ದರು ಎಂದು ಆಪಾದಿಸಿದ್ದನ್ನು ಸ್ಮರಿಸಬಹುದು.




