ಬೆಂಗಳೂರು; ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಉದ್ಧೇಶದಿಂದ ನಡೆಸುತ್ತಿರುವ ಸಮೀಕ್ಷೆ ಕಾರ್ಯವು 2025ರ ಮೇ 26 ಅಂತ್ಯಕ್ಕೆ ಒಟ್ಟಾರೆ ಶೇ.84ರಷ್ಟು ಪ್ರಗತಿ ಸಾಧಿಸಿದೆ. ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇವಲ ಶೇ. 35ರಷ್ಟು ಮಾತ್ರ ಸಮೀಕ್ಷೆ ಆಗಿದೆ.
ಮಂಡ್ಯ ಜಿಲ್ಲೆಯಲ್ಲಿ ಶೇ. 100, ಉಡುಪಿಯಲ್ಲಿ ಶೇ. 102, ಹಾವೇರಿಯಲ್ಲಿ ಶೇ. 107, ದಾವಣಗೆರೆಯಲ್ಲಿ ಶೇ.107ರಷ್ಟು ಪ್ರಗತಿ ಸಾಧಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮೇಳನದಲ್ಲಿ ಸಮಾಜ ಕಲ್ಯಾಣ ಇಲಾಖೆಯು ನೀಡಿರುವ ಅಂಕಿ ಅಂಶದಲ್ಲಿ ಈ ಮಾಹಿತಿ ಇದೆ. ಇದರ ಅಂಕಿ ಅಂಶಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ನಿವೃತ್ತ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನ್ ದಾಸ್ ಅಧ್ಯಕ್ಷತೆಯ ಏಕ ಸದಸ್ಯ ವಿಚಾರಣೆ ಆಯೋಗದ ಅವಧಿಯನ್ನು ರಾಜ್ಯ ಸರ್ಕಾರವು ಇದೇ ಜುಲೈ 31ರವರೆಗೆ ವಿಸ್ತರಿಸಿದೆ. ಇದರ ಬೆನ್ನಲ್ಲೇ ಸಮೀಕ್ಷೆಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯು ನೀಡಿರುವ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.
2011ರ ಜನಗಣತಿಯಂತೆ ರಾಜ್ಯದಲ್ಲಿ 1,04,74,992 ಪರಿಶಿಷ್ಟ ಜಾತಿಯವರ ಜನಸಂಖ್ಯೆ ಇದೆ. 2025ಕ್ಕೆ ಈ ಜನಸಂಖ್ಯೆ ಅಂದಾಜು 1,16,67,039 ರಷ್ಟಿದೆ. ಈ ಪೈಕಿ 2025ರ ಮೇ 26ರ ಅಂತ್ಯಕ್ಕೆ 98,05,024 ಸರ್ವೆ ಮಾಡಲಾಗಿದೆ. ಇನ್ನು . 2025ರ ಮೇ 26ರ ಅಂತ್ಯಕ್ಕೆ 18,62,015 ಸಮೀಕ್ಷೆ ಬಾಕಿ ಇದೆ. ಇದೇ ಅವಧಿಯಲ್ಲಿ ಸಮೀಕ್ಷೆ ಕಾರ್ಯವು ಶೇ.84ಷ್ಟು ಪ್ರಗತಿ ಸಾಧಿಸಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಜಿಲ್ಲಾವಾರು ಸಮೀಕ್ಷೆ ಆಗಿರುವ ಪಟ್ಟಿ (2025ರ ಮೇ 26ರ ಅಂತ್ಯಕ್ಕೆ)
ಬಿಬಿಎಂಪಿಯಲ್ಲಿ 4,79,589, ಬೆಂಗಳೂರು ನಗರ (ಬಿಬಿಎಂಪಿ ಹೊರತುಪಡಿಸಿ) 19,9,498, ರಾಮನಗರ 1,83,989, ಕೋಲಾರ 4,12, 619, ಬೀದರ್ 3,68,514, ಯಾದಗಿರಿ 2,76,919, ಬಳ್ಳಾರಿ 2,56,753, ವಿಜಯನಗರ 3,36,720, ಬೆಂಗಳೂರು ಗ್ರಾಮಾಂತರ 2,06,956, ದಕ್ಷಿಣ ಕನ್ನಡ 1,36,129, ಕಲ್ಬುರ್ಗಿ 6,43,871, ಮೈಸೂರು ಜಿಲ್ಲೆಯಲ್ಲಿ 5,06,309 ಸಮೀಕ್ಷೆ ಆಗಿದೆ.
ಚಿಕ್ಕಬಳ್ಳಾಪುರ 2,81,935, ಕೊಡಗು 62,551, ಶಿವಮೊಗ್ಗ 2,82,676, ಬೆಳಗಾವಿ 5,76,718, ರಾಯಚೂರು 4,18,097, ಕೊಪ್ಪಳ 2,72,423, ವಿಜಯಪುರ 4,77,112, ಚಿಕ್ಕಮಗಳೂರು 2,21,339, ಚಿತ್ರದುರ್ಗ 3,83,782, ಹಾಸನ 3,22,303, ಚಾಮರಾಜನಗರ 2,49,718, ಬಾಗಲಕೋಟೆ 3,44,194,, ಧಾರವಾಡ 1,92,846, ಗದಗ 1,77,992, ತುಮಕೂರು 4,88,260, ಉತ್ತರ ಕನ್ನಡ 1,15,987, ಮಂಡ್ಯ 2,54,345, ಉಡುಪಿ 74,027, ಹಾವೇರಿ 2,48,190, ದಾವಣಗೆರೆ 3,52,663 ಸಮೀಕ್ಷೆ ಆಗಿರುವುದು ತಿಳಿದು ಬಂದಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 2025ರಲ್ಲಿ 13,62, 334 ಜನಸಂಖ್ಯೆ ಇದ್ದರೇ 2025ರ ಮೇ 26ರ ಅಂತ್ಯಕ್ಕೆ 4,79,589 ಜನಸಂಖ್ಯೆ ಸಮೀಕ್ಷೆ ಮಾಡಲಾಗಿದೆ. ಇದು ಒಟ್ಟು ಜನಸಂಖ್ಯೆಗೆ ಶೇ.35ರಷ್ಟು ಮಾತ್ರ ಪ್ರಗತಿ ಆಗಿದೆ.
ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಉದ್ಧೇಶದಿಂದ ನಿವೃತ್ತ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನ್ ದಾಸ್ ಅಧ್ಯಕ್ಷತೆಯ ಏಕ ಸದಸ್ಯ ವಿಚಾರಣೆ ಆಯೋಗದ ಅವಧಿಯನ್ನು ರಾಜ್ಯ ಸರ್ಕಾರವು ಇದೇ ಜುಲೈ 31ರವರೆಗೆ ವಿಸ್ತರಿಸಿದೆ.
ಆಯೋಗದ ಅವಧಿಯು ಮೇ 31ರ ಶನಿವಾರಕ್ಕೆ ಮುಕ್ತಾಯವಾಗಬೇಕಿತ್ತು. ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ಆಯೋಗವು ಕೈಗೊಂಡಿರುವ ಸಮಗ್ರ ಸಮೀಕ್ಷೆಯು ಜೂನ್ 1ರವರೆಗೆ ನಡೆಯಲಿದೆ. ಸಮೀಕ್ಷೆಯ ದತ್ತಾಂಶಗಳನ್ನು ಪರಿಸೀಲಿಸಿ ಕೊರತೆಗಳನ್ನು ಸರಿಪಡಿಸಿ ಅಂತಿಮ ಶಿಫಾರಸ್ಸು ನೀಡಲು ಇನ್ನೂ 2 ತಿಂಗಳ ಕಾಲಾವಕಾಶ ಬೇಕಿದೆ ಎಂದು ಆಯೋಗದ ಅಧ್ಯಕ್ಷರು ಕೋರಿದ್ದರು. ಹೀಗಾಗಿ ಆಯೋಗದ ಅವಧಿಯನ್ನು ಎರಡು ತಿಂಗಳ ಕಾಲ ವಿಸ್ತರಿಸಿರುವುದನ್ನು ಸ್ಮರಿಸಬಹುದು.
2011ರ ಜನಗಣತಿಯ ಪ್ರಕಾರ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆ 1.05 ಕೋಟಿಯಲ್ಲಿ 7.29 ಲಕ್ಷ ಜನರು ಯಾವುದೇ ಉಪ ಜಾತಿಗಳನ್ನು ನಮೂದಿಸಿಲ್ಲ. ಅಲ್ಲದೇ ಸರ್ಕಾರಿ ಸೇವೆಗಳು ಮತ್ತು ಶಿಕ್ಷಣದಲ್ಲಿ 4 ಗುಂಪುಗಳಿಗೆ ಸೇರಿದ ವ್ಯಕ್ತಿಗಳ ಸಮರ್ಪಕ ಅಥವಾ ವಾಸ್ತವ ಪ್ರಾತಿನಿಧ್ಯದ ಬಗ್ಗೆ ಯಾವ ಅಂಕಿ ಅಂಶವೂ ಇರಲಿಲ್ಲ.
ಒಳ ಮೀಸಲಾತಿ; ಉಪ ಜಾತಿ ನಮೂದಿಸದ 7.29 ಲಕ್ಷ ಪರಿಶಿಷ್ಟರು, ಮುನ್ನೆಲೆಗೆ ಬಂದ ಸಚಿವ ಸಂಪುಟ ಟಿಪ್ಪಣಿ
ಅಲ್ಲದೇ 2011ರ ಜನಗಣತಿಯಂತೆಯೇ ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ಕಲ್ಪಿಸಬೇಕು ಎಂದು ಕಾಂಗ್ರೆಸ್ ಸರ್ಕಾರವು ಸಮರ್ಥಿಸಿಕೊಂಡಿತ್ತು.
2011ರ ಜನಗಣತಿಯಂತೆ ಕರ್ನಾಟಕ ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಇದೆ. ಈ ಪೈಕಿ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆ 1.05 ಕೋಟಿ ಇದೆ. (ಗ್ರಾಮೀಣ 75 ಲಕ್ಷ ಮತ್ತು ನಗರ 30 ಲಕ್ಷ) ರಾಜ್ಯದ ಒಟ್ಟು ಜನಸಂಖ್ಯೆಗೆ ಹೋಲಿಸಿದಾಗ ಶೇ.17.15ರಷ್ಟು ಇದೆ.
‘2011ರ ಜನಗಣತಿಯಲ್ಲಿ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆ 1.05 ಕೋಟಿಯಲ್ಲಿ 7.29 ಲಕ್ಷ ಜನರು ಯಾವುದೇ ಉಪ ಜಾತಿಗಳನ್ನು ನಮೂದಿಸಿರುವುದಿಲ್ಲ. ಕಾರಣ ಒಟ್ಟಾರೆ ಜಾತಿವಾರು ನಿಖರ ಜನಸಂಖ್ಯೆ 97.56 ಲಕ್ಷ ಎಂದು ಪರಿಗಣಿಸಲಾಗಿದೆ. ಈ ಜನಸಂಖ್ಯೆಯಲ್ಲಿ ಆದಿ ಕರ್ನಾಟಕ ಜನಸಂಖ್ಯೆ 29.21 ಲಕ್ಷ ಮತ್ತು ಆದಿ ದ್ರಾವಿಡರು 7.95 ಲಕ್ಷ ಸಂಖ್ಯೆಯಲ್ಲಿದ್ದಾರೆ,’ ಎಂದು ಟಿಪ್ಪಣಿಯಲ್ಲಿ ಅಂಕಿ ಅಂಶಗಳನ್ನು ಒದಗಿಸಿರುವುದು ತಿಳಿದು ಬಂದಿದೆ.
ಮೊದಲ ಗುಂಪಿನಲ್ಲಿ (ಶೇ.6) ಆದಿದ್ರಾವಿಡ, ಭಂಬಿ, ಮಾದಿಗ, ಸಮಗಾರ ಒಟ್ಟು 4 ಜಾತಿಗಳಿವೆ. ಈ ಗುಂಪಿನ ಒಟ್ಟು ಜನಸಂಖ್ಯೆ 32.60 ಲಕ್ಷ ಇದೆ. ಎರಡನೇ ಗುಂಪಿನಲ್ಲಿ ಆದಿ ಕರ್ನಾಟಕ, ಛಲವಾದಿ, ಚನ್ನದಾಸರ, ಹೊಲೆಯ, ಮಹರ್ ಜಾತಿಗಳಿವೆ. ಈ ಗುಂಪಿನಲ್ಲಿ ಒಟ್ಟು 32.58 ಲಕ್ಷ ಜನಸಂಖ್ಯೆ ಇದೆ. ಮೂರನೇ ಗುಂಪಿನಲ್ಲಿ ಬಂಜಾರ ಹಾಗೂ ಇದರ ಸಮನಾಂತರ ಜಾತಿಗಳಿವೆ.
ಭೋವಿ ಮತ್ತು ಇದರ ಸಮನಾಂತರ ಜಾತಿಗಳು, ಕೊರಚ,/ಕೊರಚರ್ ಮತ್ತು ಕೊರಮ/ಕೊರವ,/ಕೊರವಾರ್ ಜಾತಿ ಸೇರಿ ಒಟ್ಟು 4 ಜಾತಿಗಳಿವೆ. ಈ ಗುಂಪಿನಲ್ಲಿ ಒಟ್ಟು 26.51 ಲಕ್ಷ ಜನಸಂಖ್ಯೆ ಇದೆ. ನಾಲ್ಕನೇ ಗುಂಪಿನಲ್ಲಿ (ಮೊದಲ ಮತ್ತು ಎರಡನೇ ಗುಂಪು) ಈ ಹಿಂದೆ ಅಸ್ಪ್ರಶ್ಯತೆಗೆ ಒಳಗಾದ ಮತ್ತು ಕಡಿಮೆ ಜನಸಂಖ್ಯೆ ಇರುವ ಒಟ್ಟು 88 ಪರಿಶಿಷ್ಟ ಜಾತಿಗಳನ್ನು ಸೇರಿಸಲಾಗಿದೆ. ಈ ಗುಂಪಿನಲ್ಲಿ ಒಟ್ಟು 5.87 ಲಕ್ಷ ಜನಸಂಖ್ಯೆ ಇರುವುದು ಸಚಿವ ಸಂಪುಟ ಟಿಪ್ಪಣಿ ಹಾಳೆಯಲ್ಲಿ ಗೊತ್ತಾಗಿದೆ.
‘2011ರ ಜನಸಂಖ್ಯೆಯ ಆಧಾರದ ಮೇಲೆ ಒಳ ಮೀಸಲಾತಿ ಮಾಡಲಾಗಿದೆ. ಆದರೆ ಸರ್ಕಾರಿ ಸೇವೆಗಳು ಮತ್ತು ಶಿಕ್ಷಣದಲ್ಲಿ ನಾಲ್ಕು ಗುಂಪುಗಳಿಗೆ ಸೇರಿದ ವ್ಯಕ್ತಿಗಳ ಸಮರ್ಪಕ ಅಥವಾ ವಾಸ್ತವ ಪ್ರಾತಿನಿಧ್ಯದ ಬಗ್ಗೆ ಯಾವುದೇ ಅಂಕಿ ಅಂಶವೂ ಇಲ್ಲ,’ ಎಂದು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಲಾಗಿದೆ.
ಸಮರ್ಥನೆ ಏನು?
ಪಂಜಾಬ್ ರಾಜ್ಯ ಸರ್ಕಾರ ಇತರರ ಮತ್ತು ದಾವಿಂದರ್ ಸಿಂಗ್ ಮತ್ತಿತರರು (ಸಿವಿಲ್ ಅಪೀಲು 2317 /2011) ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 2024ರ ಆಗಸ್ಟ್ 1ರಂದು ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರಗಳು ಭಾರತ ಸಂವಿಧಾನದ ಅನುಚ್ಛೇಧ 15(4) ಮತ್ತು 16(4)ರಂತೆ ಶಿಕ್ಷಣ ಮತ್ತು ರಾಜ್ಯ ಸರ್ಕಾರದ ಅಧೀನದ ಸೇವೆಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಕಲ್ಪಿಸಲು ಅವಕಾಶವಿದೆ. ಆದ್ದರಿಂದ 2011ರ ಜನಗಣತಿಯಂತೆ ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ಕಲ್ಪಿಸುವುದು ಸಮರ್ಥನೀಯವಾಗಿರುತ್ತದೆ ಎಂದು ಟಿಪ್ಪಣಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಕಲ್ಪಿಸುವ ಕುರಿತು ನಿವೃತ್ತ ನ್ಯಾಯಮೂರ್ತಿ ಎ ಜೆ ಸದಾಶಿವ ಅವರ ನೇತೃತ್ವದ ಆಯೋಗದ ಶಿಫಾರಸ್ಸು ಪ್ರಸ್ತುತವಲ್ಲ ಎಂದು ಹಿಂದಿನ ಬಿಜೆಪಿ ಸರ್ಕಾರವೇ ಆದೇಶ ಹೊರಡಿಸಿತ್ತು.
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ವರದಿಯನ್ನು ಮುಂದಿನ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು ಈಚೆಗಷ್ಟೇ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸದಾಶಿವ ಆಯೋಗದ ವರದಿ ಶಿಫಾರಸ್ಸುಗಳು ಪ್ರಸ್ತುತವಾಗಿಲ್ಲ ಎಂದು ಹಿಂದಿನ ಬಿಜೆಪಿ ಸರ್ಕಾರವು ಹೊರಡಿಸಿದ್ದ ಆದೇಶವು ಮುನ್ನೆಲೆಗೆ ಬಂದಿದೆ.
ಒಳ ಮೀಸಲಾತಿ; ಪ್ರಸ್ತುತವಾಗದ ಸದಾಶಿವ ಆಯೋಗದ ವರದಿ, ಚರ್ಚೆಗೆ ಗ್ರಾಸವಾದ 2 ವರ್ಷದ ಹಿಂದಿನ ಆದೇಶ
ಪರಿಶಿಷ್ಟ ಜಾತಿಗಳ ವರ್ಗೀಕರಣ (ಒಳ ಮೀಸಲಾತಿ) ಬಗ್ಗೆ ಭಾರತ ಸಂವಿಧಾನಕ್ಕೆ ಅನುಚ್ಛೇಧ 341ರಲ್ಲಿ ತಿದ್ದುಪಡಿ ಮೂಲಕ Clasue (3)ನ್ನು ಸೇರಿಸಲು ಭಾರತ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಸಂಬಂಧ ತೆರೆದಿರುವ ಕಡತದಲ್ಲಿ ಈ ಆದೇಶದ ಅಂಶವನ್ನು ಉಲ್ಲೇಖಿಸಿತ್ತು.