ಸಿದ್ದಾರ್ಥ ಶಿಕ್ಷಣ ಸಂಸ್ಥೆಗೆ 50 ಎಕರೆ ಸರ್ಕಾರಿ ಜಮೀನು ಖಾಯಂ ಮಂಜೂರು; ವರದಿ ಕೇಳಿದ ಸರ್ಕಾರ

ಬೆಂಗಳೂರು; ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಹುಲಿಯೂರುದುರ್ಗ ಹೋಬಳಿ ಪಿ ಹೆಚ್‌ ಹಳ್ಳಿ ಗ್ರಾಮದಲ್ಲಿ ಸರ್ಕಾರಿ ಖರಾಬು ಪೈಕಿ 50 ಎಕರೆ ಜಮೀನನ್ನು ಸಿದ್ದಾರ್ಥ ಶಿಕ್ಷಣ ಸಂಸ್ಥೆ ಹೆಸರಿಗೆ ಖಾಯಂ ಆಗಿ ಮಂಜೂರು ಮಾಡುವ ಸಂಬಂಧ ಕಂದಾಯ ಇಲಾಖೆಯು ವರದಿ ಕೇಳಿರುವುದು ಇದೀಗ ಬಹಿರಂಗವಾಗಿದೆ.

 

ನಟಿ ರನ್ಯಾರಾವ್‌ ಪ್ರಕರಣದಲ್ಲಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರ ಮನೆ ಮತ್ತು ಸಿದ್ದಾರ್ಥ ಶಿಕ್ಷಣ ಸಂಸ್ಥೆ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿರುವ ಬೆನ್ನಲ್ಲೇ ಸಿದ್ದಾರ್ಥ ಶಿಕ್ಷಣ ಸಂಸ್ಥೆಗೆ 50 ಎಕರೆ ಸರ್ಕಾರಿ ಖರಾಬು ಗುಡ್ಡ ಜಮೀನನ್ನು ಮಂಜೂರು ಮಾಡಲು ಹೊರಟಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ಕೆಲವು ದಾಖಲೆಗಳು ಲಭ್ಯವಾಗಿವೆ.

 

ಕುಣಿಗಲ್‌ ತಾಲೂಕಿನ ಹುಲಿಯೂರು ದುರ್ಗದ ಪಿ ಹೆಚ್‌ ಹಳ್ಳಿಯಲ್ಲಿ ಸರ್ಕಾರಿ ಮಾರ್ಗಸೂಚಿ ದರದ ಪ್ರಕಾರ ಖುಷ್ಕಿ ಜಮೀನು  ಎಕರೆಗೆ 4.50 ಲಕ್ಷ ರು ಇದೆ. ತರಿ ಭೂಮಿಗೆ  6.00 ಲಕ್ಷ ರು, ಬಾಗಾಯ್ತು ತಲಾ 7.50 ಲಕ್ಷ ರು ಇದೆ. ಮುಕ್ತ ಮಾರುಕಟ್ಟೆ ದರದಲ್ಲಿ ಎಕರೆಗೆ 40 ಲಕ್ಷ ರು. ಇದೆ. ಇದರ ಪ್ರಕಾರ 50 ಎಕರೆಗೆ 20 ಕೋಟಿ ರು ಬೆಲೆ ಬಾಳಲಿದೆ.

 

ವಿಶೇಷವೆಂದರೇ 50 ಎಕರೆ ವಿಸ್ತೀರ್ಣದ ಸರ್ಕಾರಿ ಖರಾಬು ಗುಡ್ಡ ಜಮೀನನ್ನು ಖಾಯಂ ಆಗಿ ಮಂಜೂರು ಮಾಡಿಸಿಕೊಳ್ಳಲು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಪ್ರಸ್ತಾವ ಸಲ್ಲಿಸಿತ್ತು. ಆದರೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಪ್ರಸ್ತಾವದ ಕುರಿತು ಅಂತಿಮ ತೀರ್ಮಾನ ಹೊರಬೀಳಲಿಲ್ಲ.

 

ಸಿದ್ದರಾಮಯ್ಯ ಅವರ ನೇತೃತ್ವದ  ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ಕೆಲವು ತಿಂಗಳಲ್ಲಿ 50 ಎಕರೆ ಜಮೀನು ಮಂಜೂರಾತಿಯ ಪ್ರಸ್ತಾವಕ್ಕೆ ಮರು ಚಾಲನೆ ಸಿಕ್ಕಿದೆ.

 

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಹುಲಿಯೂರು ದುರ್ಗ ಹೋಬಳಿ ಪಿ ಹೆಚ್‌ ಹಳ್ಳಿ ಗ್ರಾಮದಲ್ಲಿ ಸರ್ವೆ ನಂಬರ್‍‌ 23ರಲ್ಲಿ ಒಟ್ಟು  376 ಎಕರೆ ವಿಸ್ತೀರ್ಣದ  ಸರ್ಕಾರಿ ಜಮೀನು ಇದೆ. ಇದರಲ್ಲಿ ಬಿ  ಖರಾಬು   153 ಎಕರೆ ವಿಸ್ತೀರ್ಣದ  ಜಮೀನಿದೆ.

 

 

ಈ ಪೈಕಿ  50 ಎಕರೆ ಜಮೀನನ್ನು ತುಮಕೂರಿನ ಸಿದ್ದಾರ್ಥ ವಿದ್ಯಾ ಸಂಸ್ಥೆಗೆ ಈ ಹಿಂದೆ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ಪಡೆದ ನಂತರ ಸಿದ್ದಾರ್ಥ ಶಿಕ್ಷಣ ಸಂಸ್ಥೆಯು ಇದುವರೆಗೂ ಯಾವುದೇ ಕಟ್ಟಡವನ್ನೂ ನಿರ್ಮಿಸಿಲ್ಲ. ಆದರೂ ಇದೇ ಜಮೀನನ್ನು ಖಾಯಂ ಆಗಿ ಮಂಜೂರು ಮಾಡಿಸಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿರುವುದು ಗೊತ್ತಾಗಿದೆ.

 

 

ಗುತ್ತಿಗೆ ರೂಪದಲ್ಲಿ ಪಡೆದಿದ್ದ ಜಮೀನನ್ನು ಖಾಯಂ ಆಗಿ ಮಂಜೂರು ಮಾಡಬೇಕು ಎಂದು ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿ ಕುರಿತು 2021ರ ಜುಲೈ 30 ಮತ್ತು 2023ರ ಜುಲೈ 18ರಂದು ಮಾಹಿತಿ ಮತ್ತು ಸ್ಪಷ್ಟೀಕರಣ ನೀಡಬೇಕು ಎಂದು ತುಮಕೂರು ಜಿಲ್ಲಾಧಿಕಾರಿಗೆ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಪತ್ರ ಬರೆದಿದ್ದರು.

 

 

ಈ ಪತ್ರಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾಧಿಕಾರಿಯವರು ವರದಿ ಸಲ್ಲಿಸಿರಲಿಲ್ಲ. ಹೀಗಾಗಿ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು 2025ರ ಫೆ.18ರಂದು ಮೂರನೇ ನೆನಪೋಲೆಯನ್ನು ಬರೆದಿದ್ದರು. ಆದರೂ ತುಮಕೂರು ಜಿಲ್ಲಾಧಿಕಾರಿಯವರು ಸರ್ಕಾರಕ್ಕೆ ವರದಿ, ಮಾಹಿತಿ ಮತ್ತು ಸ್ಪಷ್ಟೀಕರಣವನ್ನು ನೀಡಿಲ್ಲ.

 

ಕಂದಾಯ ಇಲಾಖೆಯು ಕೋರಿದ್ದ ಮಾಹಿತಿ ಮತ್ತು ಸ್ಪಷ್ಟೀಕರಣವನ್ನು ಕೂಡಲೇ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ರಾಜೇಂದರ್ ಕುಮಾರ್ ಕಟಾರಿಯಾ ಅವರು ನಿರ್ದೇಶಿಸಿರುವುದು ಪತ್ರದಿಂದ ತಿಳಿದು ಬಂದಿದೆ.

 

ಈ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಕಾನೂನು ಇಲಾಖೆಯ ಅಭಿಪ್ರಾಯವನ್ನೂ ಕೋರಿದೆ. ಇದಾದ ನಂತರ ವರದಿ ಮತ್ತು ಸ್ಪಷ್ಟೀಕರಣ ಕೋರಿ ತುಮಕೂರು ಜಿಲ್ಲಾಧಿಕಾರಿಗೆ ಪತ್ರ ಬರೆದಿರುವುದು ಗೊತ್ತಾಗಿದೆ. ಸದ್ಯ ಈ ಕಡತವು 2025ರ ಮಾರ್ಚ್‌ 29ರಿಂದ ಇದುವರೆಗೂ ಕಂದಾಯ ಇಲಾಖೆಯ ಶಾಖಾಧಿಕಾರಿ ಲಾಗಿನ್‌ನಲ್ಲಿದೆ.

 

 

ಖಾಸಗಿ ಸಂಘ ಸಂಸ್ಥೆಗಳಿಗೆ ವಿವಿಧ ಉದ್ದೇಶಗಳಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿರುವ ಸರ್ಕಾರಿ ಜಮೀನುಗಳನ್ನು ಗುತ್ತಿಗೆ ಪಡೆದ ಸಂಸ್ಥೆಗೆ ಖಾಯಂ ಆಗಿ ಮಂಜೂರು ಮಾಡಲು ಹಿಂದಿನ ಬಿಜೆಪಿ ಸರ್ಕಾರವು ಸರ್ಕಾರ ಆದೇಶ ಹೊರಡಿಸಿತ್ತು.

 

ಈ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಕಾನೂನು ಇಲಾಖೆಯ ಅಭಿಪ್ರಾಯವನ್ನೂ ಕೋರಿದೆ. ಇದಾದ ನಂತರ ವರದಿ ಮತ್ತು ಸ್ಪಷ್ಟೀಕರಣ ಕೋರಿ ತುಮಕೂರು ಜಿಲ್ಲಾಧಿಕಾರಿಗೆ ಪತ್ರ ಬರೆದಿರುವುದು ಗೊತ್ತಾಗಿದೆ.

 

ಸದ್ಯ ಈ ಕಡತವು 2025ರ ಮಾರ್ಚ್‌ 29ರಿಂದ ಇದುವರೆಗೂ ಕಂದಾಯ ಇಲಾಖೆಯ ಶಾಖಾಧಿಕಾರಿ ಲಾಗಿನ್‌ನಲ್ಲಿದೆ.
ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 19ರಡಿಯಲ್ಲಿ ಸರ್ಕಾರಿ ಜಮೀನುಗಳನ್ನು ವಿವಿಧ ಉದ್ದೇಶಗಳಿಗೆ ಗರಿಷ್ಠ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡುವ ಬಗ್ಗೆ ಅವಕಾಶ ಕಲ್ಪಿಸಲಾಗಿತ್ತು. ಇದರ ಪ್ರಕಾರ ಈ ಅವಧಿ ಮುಕ್ತಾಯವಾದ ತರುವಾಯ ಗುತ್ತಿಗೆ ಅವಧಿಯನ್ನು ಸಂಸ್ಥೆ ಪರಿಸ್ಥಿತಿಗೆ ಅನುಗುಣವಾಗಿ ಕೋರಿಕೆಯ ಮೇರೆಗೆ ಇನ್ನೂ 5 ವರ್ಷಗಳ ಕಾಲ ನವೀಕರಿಸುವ ಅಧಿಕಾರ ಜಿಲ್ಲಾಧಿಕಾರಿಗಿದೆ.

 

ಹಿಂದಿನಿಂದಲೂ ಕಂದಾಯ ಇಲಾಖೆ ಒಡೆತನದ ಸರ್ಕಾರಿ ಜಮೀನುಗಳನ್ನು ಖಾಸಗಿ ಸಂಘ ಸಂಸ್ಥೆಗಳಿಗೆ ಕೋರಿಕೆ ಮೇರೆಗೆ ವಿವಿಧ ಉದ್ದೇಶಗಳಿಗೆ ಗುತ್ತಿಗೆ ಆಧಾರದ ಮೇಲೆ ನಿಯಮಾನುಸಾರ ನೀಡಲಾಗುತ್ತಿದೆ. ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ತಡೆಯುವ ದೃಷ್ಟಿಯಿಂದ ಜಾರಿಯಲ್ಲಿರುವ ಲಾಕ್​​​​​​​​ಡೌನ್​‌ನಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಖಾಸಗಿ ಸಂಘ-ಸಂಸ್ಥೆಗಳಿಗೆ ವಿವಿಧೋದ್ದೇಶಗಳಿಗೆ ಗುತ್ತಿಗೆ ನೀಡಲಾಗಿರುವ ಜಮೀನುಗಳನ್ನು ಅದೇ ಉದ್ದೇಶಕ್ಕೆ ಖಾಯಂ ಮಂಜೂರಾತಿ ಮಾಡಲು ಆದೇಶ ಹೊರಡಿಸಿತ್ತು.

 

ಗುತ್ತಿಗೆ ಪಡೆದಿರುವ ಜಮೀನುಗಳನ್ನು ಖಾಯಂ ಆಗಿ ಮಂಜೂರು ಮಾಡಲು ಶಿಕ್ಷಣ ಸಂಸ್ಥೆಗಳು ಕೋರಿದ್ದಲ್ಲಿ ಪ್ರಸ್ತುತ ಮಾರ್ಗಸೂಚಿ ಮೌಲ್ಯವನ್ನು ವಿಧಿಸಬಹುದು. ಅನ್ಯ ಉದ್ದೇಶಕ್ಕೆ ಖಾಯಂ ಮಂಜೂರಾತಿ ಕೋರಿದ್ದಲ್ಲಿ, ಮಾರ್ಗಸೂಚಿ ಮೌಲ್ಯದ ಎರಡು ಪಟ್ಟು ಮೊತ್ತ ವಿಧಿಸಿ ಒಂದು ಬಾರಿ ಮಾತ್ರ ಅನ್ವಯಿಸುವಂತೆ ಖಾಯಂ ಮಂಜೂರು ಮಾಡುವ ಮುಖಾಂತರ ಸಂಪನ್ಮೂಲ ಕ್ರೋಢೀಕರಿಸಲು ಹಿಂದಿನ ಬಿಜೆಪಿ ಸರ್ಕಾರ ಉದ್ದೇಶಿಸಿತ್ತು.

 

ಗುತ್ತಿಗೆ ನೀಡಲಾಗಿರುವ ಜಮೀನುಗಳನ್ನು ಖಾಯಂ ಮಂಜೂರಾತಿ ಪಡೆಯಲು ಇಚ್ಚಿಸಿದಲ್ಲಿ, ಅಂತಹ ಗುತ್ತಿಗೆ ಜಮೀನುಗಳನ್ನು ಸ್ಥಳ ಪರಿವೀಕ್ಷಣೆ ನಡೆಸಿ, ಉಪಯೋಗಿಸದೇ ಖುಲ್ಲಾ ಉಳಿಸಲಾಗಿರುವ ವಿಸ್ತೀರ್ಣದ ಜಮೀನುಗಳನ್ನು ಪುನಃ ಸರ್ಕಾರ ವಶಕ್ಕೆ ಪಡೆಯಲು ಸಹ ನಿರ್ಣಯಿಸಿತ್ತು.

 

ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 19ರಿಂದ 22ರ ಪ್ರಕಾರ ಸರ್ಕಾರಿ ಭೂಮಿಯನ್ನ ಖಾಸಗಿ ಸಂಘ ಸಂಸ್ಥೆಗಳಿಗೆ ವಿವಿಧ ಉದ್ದೇಶಗಳಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ಅವಕಾಶವಿದೆ. ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22ರ ಮೇರೆಗೆ ಮಂಜೂರು ಮಾಡುವಾಗ ಅಥವಾ ಗುತ್ತಿಗೆಗೆ ನೀಡುವಾಗ ಏಕರೂಪದ ಮಾರುಕಟ್ಟೆ ಮೌಲ್ಯ / ಮಾರ್ಗಸೂಚಿ ಮೌಲ್ಯವನ್ನು ನಿಗದಿ ಪಡಿಸಲು ಅವಕಾಶ ಕಲ್ಪಿಸಲಾಗುತ್ತದೆ.

 

ಗುತ್ತಿಗೆ ಪಡೆದ ಸಂಸ್ಥೆಯು ಅದೇ ಉದ್ದೇಶಕ್ಕೆ ಖಾಯಂ ಮಂಜೂರಾತಿ ಕೋರಿದ್ದಲ್ಲಿ, ಪ್ರಸ್ತುತ ಮಾರ್ಗಸೂಚಿ ಮೌಲ್ಯವನ್ನು ವಿಧಿಸಲು ಅಥವಾ ಅನ್ಯ ಉದ್ದೇಶಕ್ಕೆ ಖಾಯಂ ಮಂಜೂರಾತಿ ಕೋರಬೇಕು. ಇದನ್ನಾಧರಿಸಿ ಮಾರ್ಗಸೂಚಿ ಮೌಲ್ಯದ ಎರಡು ಪಟ್ಟು ಮೊತ್ತವನ್ನು ವಿಧಿಸಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 27ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಒಂದು ಬಾರಿಗೆ ಮಾತ್ರ ಅನ್ವಯಿಸುವಂತೆ ಖಾಯಂ ಆಗಿ, ಸರ್ಕಾರದ ವತಿಯಿಂದ ಮಂಜೂರು ಮಾಡಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಪ್ರಸ್ತಾವ ಸಲ್ಲಿಸಬಹುದು.

SUPPORT THE FILE

Latest News

Related Posts