ಬೆಂಗಳೂರು; ರಾಜ್ಯದ 29 ಜಿಲ್ಲೆಗಳ 4,258 ಗ್ರಾಮ ಪಂಚಾಯ್ತಿಗಳು ತಮ್ಮ ವ್ಯಾಪ್ತಿಯಲ್ಲಿನ ಮೊಬೈಲ್ ಟವರ್‌ಗಳ ವಾರ್ಷಿಕ ತೆರಿಗೆಯನ್ನೇ ವಸೂಲಿ ಮಾಡಿಲ್ಲ. ಇದರಿಂದ ಪಂಚಾಯ್ತಿಗಳಿಗೆ 12.61 ಕೋಟಿಗೂ ಅಧಿಕ ಮೊತ್ತದ ರಾಜಸ್ವ ನಷ್ಟವಾಗಿರುವುದನ್ನು ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ಬಹಿರಂಗಪಡಿಸಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯ (2022-23) ಗ್ರಾಮ ಪಂಚಾಯ್ತಿಗಳಿಗೆ ಸಂಬಂಧಿಸಿದಂತೆ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ಬಿಡುಗಡೆ ಮಾಡಿರುವ ಲೆಕ್ಕ ಪರಿಶೋಧನೆ ವರದಿಯಲ್ಲಿ, ಮೊಬೈಲ್ ಟವರ್‌ಗಳ ವಾರ್ಷಿಕ ತೆರಿಗೆ ವಸೂಲಿ ಮಾಡದೇ ಇರುವ ಪ್ರಕರಣಗಳ ವಿವರಗಳಿವೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ 2,916 ಗ್ರಾಮ ಪಂಚಾಯ್ತಿಗಳು ವಾರ್ಷಿಕ ಆಯವ್ಯಯವನ್ನು ತಯಾರಿಸಿರಲಿಲ್ಲ ಮತ್ತು 1,363 ಗ್ರಾಮ ಪಂಚಾಯ್ತಿಗಳು ನಗದು ಪುಸ್ತಕವನ್ನೇ ನಿರ್ವಹಿಸಿರಲಿಲ್ಲ ಮತ್ತು ವಸೂಲಾತಿಯಲ್ಲಿ ಪಂಚಾಯ್ತಿಗಳ ನಿರ್ಲಕ್ಷ್ಯ, ಪಂಚಾಯ್ತಿಗಳ ಬೇಡಿಕೆ, ವಸೂಲಾತಿ ಮತ್ತು ಬಾಕಿ ಉಳಿಸಿಕೊಂಡಿರುವ ಮೊತ್ತ, ಶಾಸನಬದ್ಧ ತೆರಿಗೆಯಲ್ಲಿಯೇ ಕಡಿಮೆ ತೆರಿಗೆ ಕಟಾಯಿಸಿರುವ ಪ್ರಕರಣಗಳನ್ನು ಬಹಿರಂಗಗೊಳಿಸಿರುವ ಬೆನ್ನಲ್ಲೇ ಮೊಬೈಲ್ ಟವರ್ ವಾರ್ಷಿಕ ತೆರಿಗೆ ವಸೂಲು ಮಾಡದೇ ಇರುವ ಪ್ರಕರಣಗಳನ್ನು ಹೊರಗೆಳೆದಿದೆ.
ಇಲಾಖೆಯು ಸಲ್ಲಿಸಿರುವ ಲೆಕ್ಕಪರಿಶೋಧನೆ ವರದಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
2019ರ ಮೇ 29ರಲ್ಲಿ ಹೊರಡಿಸಿದ್ದ ಅಧಿಸೂಚನೆ ಪ್ರಕಾರ ಹೊಸ ಮೊಬೈಲ್ ಅವರ್ ಅಳವಡಿಸಲು ಪರವಾನಿಗಿ ನೀಡುವ ಸಮಯದಲ್ಲಿ ಗ್ರಾಮ ಪಂಚಾಯ್ತಿಗಳು ಪ್ರತಿ ಮೊಬೈಲ್ ಟವರ್ ಅಳವಡಿಕೆಗೆ 15,000 ರು ದರ ನಿಗದಿಪಡಿಸಿದೆ. ಈ ಮೊತ್ತವನ್ನು ಮೊಬೈಲ್ ಕಂಪನಿಗಳಿಂದಲೇ ವಸೂಲಿ ಮಾಡಬೇಕು ಎಂದು ಸೂಚಿಸಿದೆ. ಅಲ್ಲದೇ 2016ರ ಏಪ್ರಿಲ್ 16ರಲ್ಲಿ ಕರ್ನಾಟಕ ಪಂಚಾಯತ್‌ರಾಜ್ ಅಧಿನಿಯಮ (2ನೇ ತಿದ್ದುಪಡಿ) 2015ರ ಅನುಸೂಚಿಯಂತೆ ಗ್ರಾಮ ಪಂಚಾಯ್ತಿಗಳು ಎಲ್ಲಾ ರೀತಿಯ ಮೊಬೈಲ್ ಟವರ್‌ಗಳ ಮೇಲೆ ವಾರ್ಷಿಕ 12,000 ರು ತೆರಿಗೆ ವಿಧಿಸಲು ಆದೇಶ ಹೊರಡಿಸಿತ್ತು.
ಆದರೆ 4,258 ಗ್ರಾಮ ಪಂಚಾಯ್ತಿಗಳು ಮೊಬೈಲ್ ಟವರ್‌ಗಳ ವಾರ್ಷಿಕ ತೆರಿಗೆಯನ್ನೇ ವಸೂಲು ಮಾಡಿಲ್ಲ. ವಾರ್ಷಿಕ ತೆರಿಗೆ ವಸೂಲು ಮಾಡದ ಕಾರಣ 12.39 ಕೋಟಿಯಷ್ಟು ರಾಜಸ್ವ ನಷ್ಟ ಉಂಟಾಗಿದೆ.
ರಾಜಸ್ವ ನಷ್ಟ-ಜಿಲ್ಲಾವಾರು ಪಟ್ಟಿ
ಬಾಗಲಕೋಟೆಯ 159 ಪಂಚಾಯ್ತಿಗಳಲ್ಲಿ 45,36,000 ರು., ಬೆಂಗಳೂರು ಜಿಲ್ಲೆಯ 160 ಪಂಚಾಯ್ತಿಗಳಲ್ಲಿ 85,30,000 ರು., ಬೆಳಗಾವಿಯ 383 ಪಂಚಾಯ್ತಿಗಳಲ್ಲಿ 98, 16,430 ರು., ಬಳ್ಳಾರಿಯ 86 ಪಂಚಾಯ್ತಿಗಳಲ್ಲಿ 24,48,000 ರು., ಬೀದರ್‌ನ 179 ಪಂಚಾಯ್ತಿಗಳಲ್ಲಿ 59,64,000 ರು., ಚಾಮರಾಜನಗರದ 118 ಪಂಚಾಯ್ತಿಗಳಲ್ಲಿ 42,35,000 ರು., ಚಿಕ್ಕಬಳ್ಳಾಪುರದ 125 ಪಂಚಾಯ್ತಿಗಳಲ್ಲಿ 37,83,900 ರು., ಚಿಕ್ಕಮಗಳೂರಿನ 161 ಪಂಚಾಯ್ತಿಗಳಲ್ಲಿ 33,60,000 ರು., ಚಿತ್ರದುರ್ಗದ 137 ಪಂಚಾಯ್ತಿಗಳಲ್ಲಿ 32,94,978 ರು., ದಕ್ಷಿಣ ಕನ್ನಡದ 98 ಪಂಚಾಯ್ತಿಗಳಲ್ಲಿ 28,94,000 ರು., ದಾವಣಗೆರೆಯ 152 ಪಂಚಾಯ್ತಿಗಳಲ್ಲಿ 38,85,468 ರು., ಧಾರವಾಡದ 112 ಪಂಚಾಯ್ತಿಗಳಲ್ಲಿ 35,05,460 ರು., ಗದಗ್‌ನ 92 ಪಂಚಾಯ್ತಿಗಳಲ್ಲಿ 22,14,000 ರು., ಹಾಸನ ಜಿಲ್ಲೆಯ 148 ಪಂಚಾಯ್ತಿಗಳಲ್ಲಿ 41,11,470 ರು., ವಾರ್ಷಿಕ ತೆರಿಗೆಯನ್ನು ವಸೂಲು ಮಾಡಿಲ್ಲ.
ಹಾವೇರಿಯ 164 ಪಂಚಾಯ್ತಿಗಳಲ್ಲಿ 35,49,270 ರು., ಕಲ್ಬುರ್ಗಿಯ 243 ಪಂಚಾಯ್ತಿಗಳಲ್ಲಿ 77,62,180 ರು., ಕೊಡಗಿನ 72 ಪಂಚಾಯ್ತಿಗಳಲ್ಲಿ 16,48,236 ರು., ಕೋಲಾರದ 132 ಪಂಚಾಯ್ತಿಗಳಲ್ಲಿ 50,61, 617 ರು., ಕೊಪ್ಪಳದ 73 ಪಂಚಾಯ್ತಿಗಳಲ್ಲಿ 22,69, 416 ರು., ಮಂಡ್ಯದ 150 ಪಂಚಾಯ್ತಿಗಳಲ್ಲಿ 41,55,175 ರು., ಮೈಸೂರಿನ 237 ಪಂಚಾಯ್ತಿಗಳಲ್ಲಿ 63,66,857 ರು., ರಾಯಚೂರಿನ 174 ಪಂಚಾಯ್ತಿಗಳಲ್ಲಿ 66,36,000 ರು., ಶಿವಮೊಗ್ಗದ 201 ಪಂಚಾಯ್ತಿಗಳಲ್ಲಿ 40,71,046 ರು., ತುಮಕೂರಿನ 146 ಪಂಚಾಯ್ತಿಗಳಲ್ಲಿ 43,94,902 ರು., ಉತ್ತರ ಕನ್ನಡದ 99 ಪಂಚಾಯ್ತಿಗಳಲ್ಲಿ 26,22,000 ರು. ಗಳ ತೆರಿಗೆಯನ್ನು ವಸೂಲಿ ಮಾಡಿಲ್ಲ.
ವಿಜಯನಗರದ 123 ಪಂಚಾಯ್ತಿಗಳಲ್ಲಿ 42,24,000 ರು., ವಿಜಯಪುರದ 205 ಪಂಚಾಯ್ತಿಗಳಲ್ಲಿ 73,32,000 ರು., ಯಾದಗಿರಿಯ 119 ಪಂಚಾಯ್ತಿಗಳಲ್ಲಿ 34,68,00 ರು.ಗಳ ವಾರ್ಷಿಕ ತೆರಿಗೆಯನ್ನು ವಸೂಲು ಮಾಡಿಲ್ಲ ಎಂದು ಲೆಕ್ಕ ಪರಿಶೋಧಕರು ಪಟ್ಟಿಯನ್ನು ಒದಗಿಸಿರುವುದು ತಿಳಿದು ಬಂದಿದೆ.
ಗ್ರಾಮ ಪಂಚಾಯ್ತಿ ಸಿಬ್ಬಂದಿಯಿಂದ ಪ್ರತೀ ವರ್ಷ ತಮ್ಮ ವ್ಯಾಪ್ತಿಯಲ್ಲಿ ಮೊಬೈಲ್ ಟವರ್ ಅಳವಡಿಕೆಗೆ ಸರ್ವೆಗಳನ್ನೇ ಮಾಡಿಸಿಲ್ಲ. ಗ್ರಾಮ ಪಂಚಾಯ್ತಿಯಿಂದ ಅನುಮತಿ ಪಡೆಯದೇ ಟವರ್‌ಗಳನ್ನು ಅಳವಡಿಸಿದ್ದರೂ ಯಾವುದೇ ಕ್ರಮ ವಹಿಸಿಲ್ಲ. ಮೊಬೈಲ್ ಟವರ್ ದರಗಳನ್ನು ವಸೂಲು ಮಾಡಿಲ್ಲ ಮತ್ತು ಪ್ರತೀ ವರ್ಷ ನವೀಕರಣವನ್ನೂ ಮಾಡಿಲ್ಲ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
2021-22ರಲ್ಲಿಯೂ ಇಂತಹದ್ದೇ ಹಲವು ಲೋಪಗಳನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದರು.
ಗ್ರಾಮ ಪಂಚಾಯ್ತಿಗಳಲ್ಲಿ ಲೆಕ್ಕಪರಿಶೋಧನೆ; 251.99 ಕೋಟಿ ರು. ಜಮೆ-ವೆಚ್ಚಕ್ಕೆ ದಾಖಲೆಗಳೇ ಇಲ್ಲ
ಅದೇ ರೀತಿ 355 ಪಂಚಾಯ್ತಿಗಳಲ್ಲಿ ಮ್ಯುಟೇಷನ್ ರಿಜಿಸ್ಟರ್‍ಗಳನ್ನು ನಿರ್ವಹಿಸಿರಲಿಲ್ಲ.
ಮ್ಯುಟೇಷನ್ ರಿಜಿಸ್ಟರ್ ನಿರ್ವಹಿಸದ 335 ಪಂಚಾಯ್ತಿಗಳು; ಲೆಕ್ಕ ಪರಿಶೋಧನೆ ವರದಿ
179 ಪಂಚಾಯ್ತಿಗಳಲ್ಲಿ ಸಾಮಾಜಿಕ ನ್ಯಾಯ ಸಮಿತಿಗಳೇ ಇರಲಿಲ್ಲ.
179 ಪಂಚಾಯ್ತಿಗಳಲ್ಲಿ ಸಾಮಾಜಿಕ ನ್ಯಾಯ ಸಮಿತಿಗಳೇ ಇಲ್ಲ; ಬಿಜೆಪಿ ಸರ್ಕಾರದ ಆಡಳಿತ ವೈಖರಿಗೆ ಕೈಗನ್ನಡಿ
342 ಪಂಚಾಯ್ತಿಗಳಲ್ಲಿ ವಾರ್ಡ್, ಗ್ರಾಮ ಸಭೆಯೂ ನಡೆದಿರಲಿಲ್ಲ.
342 ಪಂಚಾಯ್ತಿಗಳಲ್ಲಿ ನಡೆಯದ ವಾರ್ಡ್, ಗ್ರಾಮ ಸಭೆ; ಸಾರ್ವಜನಿಕ ಸಹಭಾಗಿತ್ವದ ಕೊರತೆ ಬಹಿರಂಗ
274 ಪಂಚಾಯ್ತಿಗಳಲ್ಲಿ ನರೇಗಾ ಕಾಮಗಾರಿ ಕುರಿತು ಸಾಮಾಜಿಕ ಲೆಕ್ಕ ಪರಿಶೋಧನೆಯನ್ನೇ ನಡೆಸಿರಲಿಲ್ಲ.
ನರೇಗಾ ಕಾಮಗಾರಿ; ಸಾಮಾಜಿಕ ಲೆಕ್ಕಪರಿಶೋಧನೆಯನ್ನೇ ನಡೆಸದ 274 ಪಂಚಾಯ್ತಿಗಳು
ಅಲ್ಲದೇ ಅಂತಹ ಪಿಡಿಓ ವಿರುದ್ಧ ಶಿಸ್ತು ಕ್ರಮ, ಸೇವಾ ಬಡ್ತಿ ತಡೆಯುವುದು, ಸಿವಿಲ್, ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿದೆ. ಹಾಗೆಯೇ ಮೈಸೂರು ಆಡಿಟ್ ಮ್ಯಾನ್ಯುಯಲ್ ನಿಯಮ 537ರ ಅನುಸಾರ ಹಣ ದುರುಪಯೋಗವಾಗಿದೆಂದು ಸಹ ಪರಿಗಣಿಸಬಹುದು ಎಂದು 2021-22ನೇ ಸಾಲಿನ ವರದಿಯಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.