ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ಈ ಹಿಂದಿನ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಬಲವಾಗಿ ಸಮರ್ಥಿಸಿಕೊಂಡಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು 2.80 ಕೋಟಿ ರು.ಗಳ ಸಂಭಾವನೆ ಕೋರಿರುವುದು ಇದೀಗ ಬಹಿರಂಗವಾಗಿದೆ.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಹಿರಿಯ ವಕೀಲ ಹಾಗೂ ರಾಜ್ಯಸಭೆ ಸದಸ್ಯ ಕಪಿಲ್ ಸಿಬಲ್ ಅವರು ವಾದ ಮಂಡಿಸಿದ್ದರು. ಈ ಸಂಬಂಧ ಕಪಿಲ್ ಸಿಬಲ್ ಅವರು ಒಟ್ಟಾರೆ 2.80 ಕೋಟಿ ರು ಸಂಭಾವನೆ ಕೋರಿರುವುದು ಗೊತ್ತಾಗಿದೆ.
ಮುಡಾ ಪ್ರಕರಣದಲ್ಲಿಯೂ ರಾಜ್ಯ ಸರ್ಕಾರದ ನಿರ್ಧಾರವನ್ನು ನ್ಯಾಯಾಲಯಗಳಲ್ಲಿ ಬಲವಾಗಿ ಸಮರ್ಥಿಸಿಕೊಂಡಿದ್ದ ಕಪಿಲ್ ಸಿಬಲ್ ಅವರು 1.49 ಕೋಟಿ ರು ಸಂಭಾವನೆ ಕೋರಿದ್ದರು.
ಸಿದ್ದು ವಿರುದ್ಧ ಸಿಬಿಐ ತನಿಖೆಗೆ ತಡೆ; ಸರ್ಕಾರದ ನಿಲುವು ಸಮರ್ಥನೆ, ಕಪಿಲ್ ಸಿಬಲ್‌ರಿಗೆ 1.49 ಕೋಟಿ ಸಂಭಾವನೆ
ಇದರ ಬೆನ್ನಲ್ಲೇ ಡಿ ಕೆ ಶಿವಕುಮಾರ್ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ವಹಿಸಿದ್ದ ಆದೇಶವನ್ನು ಹಿಂಪಡೆದುಕೊಂಡಿರುವುದನ್ನು ಸಮರ್ಥಿಸಿಕೊಂಡಿರುವುದಕ್ಕೆ ಸಲ್ಲಿಸಿರುವ ಸಂಭಾವನೆ ಬಿಲ್‌ಗಳೂ ಸಹ ಮುನ್ನೆಲೆಗೆ ಬಂದಿವೆ.
ಇದಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳು ಮತ್ತು ಬಿಲ್‌ಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಉಚ್ಛ ನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯದಲ್ಲಿನ ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ಹಾಜರಾದ ಹಿರಿಯ ವಕೀಲರ ಸಂಭಾವನೆ ನಿಗದಿಪಡಿಸಲು 2025 ಮಾರ್ಚ್ 26ರಂದು ನಡೆದಿದ್ದ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿರುವುದು ಗೊತ್ತಾಗಿದೆ.
ಹಣ ಅಕ್ರಮ ವಹಿವಾಟು ತಡೆ ಕಾಯ್ದೆ ಅಡಿಯಲ್ಲಿ ಡಿ ಕೆ ಶಿವಕುಮಾರ್ ಅವರ ವಿರುದ್ಧ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ತನಿಖೆ ನಡೆಸಲು ಸಿಬಿಐಗೆ ವಹಿಸಿತ್ತು. ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಹಿಂದಿನ ಬಿಜೆಪಿ ಸರ್ಕಾರವು ಹೊರಡಿಸಿದ್ದ ಆದೇಶವನ್ನು ಹಿಂಪಡೆದಿತ್ತು. ಇದನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೈಕೋರ್ಟ್, ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಬಸನಗೌಡ ಪಾಟೀಲ್ (ಯತ್ನಾಳ) ವಿರುದ್ಧ ಕರ್ನಾಟಕ ರಾಜ್ಯ ಮತ್ತು ಇತರರು (ರಿಟ್ ಅರ್ಜಿ 27220/2023) (c/w w.p 670/2024) ( ಸಿಬಿಐ ವಿರುದ್ಧ ರಾಜ್ಯ ಸರ್ಕಾರ ಮತ್ತು ಇತರರು) ಅರ್ಜಿಗಳಲ್ಲಿ ಉಚ್ಛ ನ್ಯಾಯಾಲಯದಲ್ಲಿ ರಾಜ್ಯ ಸರ್ಕಾರದ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಳ್ಳಲು ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ಸರ್ಕಾರಿ ಆದೇಶದ ಮೂಲಕ (ಕಡತ ಸಂಖ್ಯೆ; ಹೆಚ್‌ಡಿ 01 ಸಿಒಡಿ 2024, ಹೆಚ್‌ಡಿ 02 ಸಿಒಡಿ 2024, ಹೆಚ್‌ಡಿ/10348/ಸಿಪಿ-2/2024) ನೇಮಿಸಲಾಗಿತ್ತು.
ಅದರಂತೆ ಕಪಿಲ್ ಸಿಬಲ್ ಅವರು 2024ರಲ್ಲಿ ಒಟ್ಟು 7 ಬಾರಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
2.80 ಕೋಟಿ ಸಂಭಾವನೆ
2023ರ ನವಂಬರ್ 29ಂದು ಹಾಜರಾಗಿದ್ದಕ್ಕೆ 44.00 ಲಕ್ಷ ರು ಸಂಭಾವನೆ ಕೋರಿದ್ದರು. 2024ರ ಫೆ.29 ರಂದು ಹಾಜರಾಗಿದ್ದಕ್ಕೆ 44.00 ಲಕ್ಷ, 2024ರ ಏಪ್ರಿಲ್ 5ರಂದು ಹಾಜರಾಗಿದ್ದಕ್ಕೆ 44.00 ಲಕ್ಷ ರು, 2024ರ ಏಪ್ರಿಲ್ 18ರಂದು ಹಾಜರಾಗಿದ್ದಕ್ಕೆ 25.00 ಲಕ್ಷ ರು., 2024ರ ಮೇ 27ರಂದು ಹಾಜರಾಗಿದ್ದಕ್ಕೆ 44.00 ಲಕ್ಷ ರು., 2024ರ ಮೇ 31ರಂದು ಹಾಜರಾಗಿದ್ದಕ್ಕೆ 35.00 ಲಕ್ಷ ರು., 2024ರ ಆಗಸ್ಟ್ 12ರಂದು ಹಾಜರಾಗಿದ್ದಕ್ಕೆ 44.00 ಲಕ್ಷ ರು ಸೇರಿ ಒಟ್ಟಾರೆ 2,80,00,000 ರು ಗಳ ಸಂಭಾವನೆ ಕೋರಿ ಬಿಲ್ ಸಲ್ಲಿಸಿದ್ದರು.
ಅದೇ ರೀತಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಲ್ಲಿಸಿದ್ದ ವಿಶೇಷ ಮೇಲ್ಮನವಿ (ಎಸ್‌ಎಲ್‌ಪಿ ಕ್ರಿಮಿನಲ್ ನಂ; 12282/2024, ಎಸ್‌ಎಲ್‌ಪಿ ಕ್ರಿಮಿನಲ್ ಸಂಖ್ಯೆ 14992/2014) ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಗೆ ಕಪಿಲ್ ಸಿಬಲ್ ಅವರು 2024ರ ಡಿಸೆಂಬರ್ 16ರಂದು ಹಾಜರಾಗಿದ್ದರು. ಈ ಸಂಬಂಧ 20,00,000 ಸಂಭಾವನೆ ಕೋರಿದ್ದರು. ಈ ಬಿಲ್‌ನ್ನು ಎಒಆರ್ ಆಗಿರುವ ಡಿ ಎಲ್ ಚಿದಾನಂದ ಅವರು ದೃಢೀಕರಿಸಿದ್ದರು ಎಂದು ಗೊತ್ತಾಗಿದೆ.
ಈ ಬಿಲ್‌ಗಳ ಪಾವತಿಗೆ ಕೋರಿದ್ದ ಪ್ರಸ್ತಾವನೆಯನ್ನು ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ದೃಢೀಕರಿಸಿದ್ದರು ಎಂದು ಗೊತ್ತಾಗಿದೆ. ಆದರೆ ಸಕಾಲದಲ್ಲಿ ರಾಜ್ಯ ಸರ್ಕಾರವು ಸಂಭಾವನೆ ಮೊತ್ತವನ್ನು ಪಾವತಿಸಿರಲಿಲ್ಲ.
ಹೀಗಾಗಿ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು 2025ರ ಫೆ.28ರಂದು ಗೃಹ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಬಿಲ್‌ಗಳೊಂದಿಗೆ ಪತ್ರ ಬರೆದಿದ್ದರು. ಮತ್ತು ಬಿಲ್‌ಗಳಲ್ಲಿ ನಮೂದಿಸಿರುವ ಸಂಭಾವನೆ ಮೊತ್ತವನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದರು (ಪತ್ರಗಳ ಸಂಖ್ಯೆ; 476, 477, 478/AGB/2024-2025) ಎಂಬುದು ತಿಳಿದು ಬಂದಿದೆ.
ಕಪಿಲ್ ಸಿಬಲ್ ಅವರ ಹಿರಿತನ, ಅನುಭವ ಮತ್ತು ಪ್ರಕರಣದ ಗಂಭೀರತೆಯನ್ನು ಆಧರಿಸಿ 2,80,00,000 ರು.ಗಳ ಸಂಭಾವನೆಯನ್ನು ನೀಡುವ ಕುರಿತು ಗೃಹ ಸಚಿವರ ಅನುಮೋದನೆಗೆ ಸಲ್ಲಿಸಲು ಸಭೆಯು ತೀರ್ಮಾನಿಸಿತ್ತು ಎಂದು ಗೊತ್ತಾಗಿದೆ.
ರಿಟ್ ಅರ್ಜಿ (ಸಂಖ್ಯೆ 277220/2023 c/w 670) ಗಳಲ್ಲಿ ನ್ಯಾಯಾಲಯದಲ್ಲಿನ ಹಾಜರಾತಿಗೆ ಸಂಬಂಧಿಸಿದಂತೆ ಕಪಿಲ್ ಸಿಬಲ್ ಅವರು ಸಲ್ಲಿಸಿದ್ದ 11 ಬಿಲ್‌ಗಳನ್ನು ಒಳಾಡಳಿತ ಇಲಾಖೆಯು ಪರಿಶೀಲಿಸಿತ್ತು. ಈ ಬಿಲ್‌ಗಳ ಪೈಕಿ 2024ರ ಆಗಸ್ಟ್ 12, ಮೇ 27, ಏಪ್ರಿಲ್ 18ರಂದು ಹಾಜರಾತಿಗೆ ಸಂಬಂಧಿಸಿದಂತೆ ಬಿಲ್‌ಗಳ ಮೊತ್ತ 1 ಕೋಟಿ 13 ಲಕ್ಷ ರು.ಗಳನ್ನು ಪಾವತಿಸಲು 2025ರ ಏಪ್ರಿಲ್ 4ರಂದು ಮಂಜೂರು ಮಾಡಿರುವುದು ತಿಳಿದು ಬಂದಿದೆ.
ಈ ಸಂಬಂಧ ರಾಜ್ಯ ಅಡ್ವೋಕೇಟ್ ಜನರಲ್ ಅವರಿಗೆ 2025ರ ಏಪ್ರಿಲ್ 22ರಂದೇ ಒಳಾಡಳಿತ ಇಲಾಖೆಯು (ಹೆಚ್‌ಡಿ 190 ಸಿಒಡಿ 2024) ಪತ್ರ ಬರೆದಿತ್ತು.
ಪ್ರಕರಣದ ವಿವರ
ಆದಾಯ ಮೂಲಕ್ಕಿಂತ 200 ಕೋಟಿ ಹೆಚ್ಚು ಅಕ್ರಮ ಸಂಪಾದನೆ ಮಾಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಇತರರ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ಹಸ್ತಾಂತರಿಸಿದ್ದ ಪ್ರಕರಣವನ್ನು ಹಿಂಪಡೆದುಕೊಳ್ಳಲು ಗೃಹ ಇಲಾಖೆಯು ಸಚಿವ ಸಂಪುಟಕ್ಕೆ ಪ್ರಸ್ತಾವನೆಯನ್ನು ಮಂಡಿಸಿತ್ತು.
ಡಿ ಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ; ಬಿಜೆಪಿ ಸರ್ಕಾರದ ಆದೇಶ ಹಿಂಪಡೆಯಲು ಸಚಿವ ಸಂಪುಟಕ್ಕೆ ಪ್ರಸ್ತಾವನೆ
ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ನೀಡಿ ಆದೇಶಿಸಿದ್ದ ಈ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಆದೇಶ ರದ್ದು ಕೋರಿರುವ ಮೇಲ್ಮನವಿ ವಿಚಾರಣೆ ಕುರಿತು ಇದೇ ನವೆಂಬರ್ 29ರಂದು ಕರ್ನಾಟಕ ಹೈಕೋರ್ಟ್ ವಿಚಾರಣೆ ನಿಗದಿಪಡಿಸಿರುವ ಬೆನ್ನಲ್ಲೇ ಹಿಂದಿನ ಸರ್ಕಾರವು ಸಿಬಿಐ ತನಿಖೆಗೆ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಅನುಮೋದಿಸಿದ್ದರು.
ಗೃಹ ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿರುವ ಪ್ರಸ್ತಾವನೆ ಮತ್ತು ಈ ಸಂಬಂಧ ರಾಜ್ಯ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ನೀಡಿರುವ 28 ಪುಟಗಳ ಅಭಿಪ್ರಾಯದ (ಕಡತ ಸಂಖ್ಯೆ ಹೆಚ್‌ಡಿ 4 ಸಿಒಡಿ 2023 , ವಿಷಯ ಸಂಖ್ಯೆ ಸಿ 552/2023) ವನ್ನು ಸಲ್ಲಿಸಿದ್ದರು.
ಉಭಯ ಪಕ್ಷಕಾರರು ಜಂಟಿ ಮೆಮೊ ಹಾಕಿ ಮುಂದೂಡಿಕೆ ಕೋರಿದ ಹಿನ್ನೆಲೆಯಲ್ಲಿ ನವೆಂಬರ್ 29ಕ್ಕೆ ಕರ್ನಾಟಕ ಹೈಕೋರ್ಟ್ ವಿಚಾರಣೆ ನಿಗದಿಪಡಿಸಿತ್ತು.
ಪ್ರಸ್ತಾವನೆಯಲ್ಲೇನಿತ್ತು?
ಅಂದಿನ ಮುಖ್ಯಮಂತ್ರಿಗಳ ನಿರ್ದೇಶನ ಹಾಗೂ ಅನುಮೋದನೆ ಅನ್ವಯ ಡಿ ಕೆ ಶಿವಕುಮಾರ್ ಮತ್ತು ಇತರರ ವಿರುದ್ಧ (ಸರ್ಕಾರದ ಆದೇಶ ಸಂಖ್ಯೆ ; E-HD/40/C0D/2019, ದಿನಾಂಕ 25-09-2019 ರಲ್ಲಿ ದೆಹಲಿ ವಿಶೇಷ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಕಾಯ್ದೆ 1946 ಅಡಿ ಸೆಕ್ಷನ್ 6 ಅನ್ವಯ ತನಿಖೆ/ವಿಚಾರಣೆ ಕೈಗೊಳ್ಳಲು ಕೇಂದ್ರೀಯ ತನಿಖಾ ದಳ (ಸಿಬಿಐ)ಗೆ ವಹಿಸಿ ಆದೇಶಿಸಿತ್ತು.
ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿದ್ದ ಡಿ ಕೆ ಶಿವಕುಮಾರ್ ಅವರು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ (ಸಂಖ್ಯೆ 10479/2020) ಸಲ್ಲಿಸಿದ್ದರು. ನ್ಯಾಯಾಲಯವು ಈ ಪ್ರಕರಣವನ್ನು 2023ರ ಏಪ್ರಿಲ್ 20ರಂದು ಪ್ರಕರಣವನ್ನು ವಜಾಗೊಳಿಸಿತ್ತು.
ರಿಟ್ ಅರ್ಜಿಯ ತೀರ್ಪಿನ ವಿರುದ್ಧ ಡಿ ಕೆ ಶಿವಕುಮಾರ್ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅಪೀಲ್ (ಸಂಖ್ಯೆ 646/2023) ದಾಖಲಿಸಿದ್ದಾರೆ. 2019ರ ಸೆ 25ರಂದು ಹಿಂದಿನ ಸರ್ಕಾರವು ಹೊರಡಿಸಿದ್ದ ಆದೇಶಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕ ಅಂಶಗಳ ಕುರಿತು ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯವನ್ನು ಕೋರಲಾಗಿದೆ. ಅವರು ಈ ಆದೇಶವನ್ನು ಹಿಂಪಡೆಯಲು ಅಭಿಪ್ರಾಯ ನೀಡಿದ್ದರು.
ಪ್ರಕರಣವನ್ನು ಸಿಬಿಐ ತನಿಖೆಯಿಂದ ಹಿಂಪಡೆದು ಸ್ಥಳೀಯ ಪೊಲೀಸ್ ಅಥವಾ ಲೋಕಾಯುಕ್ತ ಪೊಲೀಸ್ ತನಿಖೆಗೆ ಹಸ್ತಾಂತರಿಸಬೇಕು ಎಂದು ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ನೀಡಿರುವ ಅಭಿಪ್ರಾಯವನ್ನು ಎಂದು ಪ್ರಸ್ತಾವನೆಯಲ್ಲಿ ವಿವರಿಸಿತ್ತು.
ಹಿಂಪಡೆಯಲು ನೀಡಿರುವ ಸಮರ್ಥನೆಯಲ್ಲೇನಿತ್ತು?
ಅಡ್ವೋಕೇಟ್ ಜನರಲ್ ಅವರು ನೀಡಿದ್ದ ಅಭಿಪ್ರಾಯವನ್ನು ಸವಿವರವಾಗಿ ಪರಿಶೀಲಿಸಲಾಗಿದೆ. 2019ರ ಸೆ.24 ಮತ್ತು ಸೆ.25ರ ನಡುವೆ ಅಂದಿನ ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯವನ್ನು ಕೋರಿತ್ತು.
ಎಫ್‌ಐಆರ್ ದಾಖಲಿಸದೇ ಕೇಂದ್ರ ಸರ್ಕಾರದ ಸಿಬ್ಬಂದಿ ಕುಂದುಕೊರತೆ ಮತ್ತು ಪಿಂಚಣಿ ಮಂತ್ರಾಲಯದ ದಿನಾಂಕ 2018ರ ನವೆಂಬರ್ 22ರಂದು ( ಪತ್ರ ಸಂಖ್ಯೆ 270/37/2018-AVD-11) ಮಾರ್ಗಸೂಚಿಗಳನ್ನು ಪಾಲಿಸದೇ ತನಿಖೆ/ವಿಚಾರಣೆ ಕೈಗೊಳ್ಳಲು ಕೇಂದ್ರೀಯ ತನಿಖಾ ದಳ (ಸಿಬಿಐ)ಗೆ ವಹಿಸಲು ಆದೇಶ ಹೊರಡಿಸಿತ್ತು.
ಪ್ರಕರಣವನ್ನು ತನಿಖೆ ಮಾಡಲು ಪೊಲೀಸರ ಅಸಮರ್ಥತೆಯನ್ನು ಯಾವುದೇ ರೀತಿಯಲ್ಲಿಯೂ ಪರಿಶೀಲಿಸಲಾಗಿರುವುದಿಲ್ಲ. ಮತ್ತು ಇದಕ್ಕೆ ಸಂಬಂಧಿಸಿದಂತೆ ಪ್ರೊಫಾರ್ಮಾದಲ್ಲಿ ಕಡ್ಡಾಯಪಡಿಸಿರುವ ಅಂತರ ರಾಜ್ಯ ಅಥವಾ ದೇಶವ್ಯಾಪ್ತಿಯ ಪರಿಣಾಮಗಳು ಇರುವಂತಹ ಯಾವುದೇ ಸಮರ್ಥನೆಯೂ ಸಹ ಇರುವುದಿಲ್ಲ.
ಆದ್ದರಿಂದ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ)ಕ್ಕೆ ಸರ್ಕಾರವು ವಹಿಸಿರುವುದನ್ನು ಸಮರ್ಥಿಸಲು ಯಾವುದೇ ಅಗತ್ಯ ಮತ್ತು ಅಸಾಧಾರಣ ಸಂದರ್ಭಗಳನ್ನು 2019ರ ಸೆ.25ರಂದು ಸರ್ಕಾರದ ಆದೇಶವನ್ನು ಹೊರಡಿಸುವಾಗ ಪ್ರಸ್ತಾಪಿಸಿರುವುದಿಲ್ಲ ಈ ಎಲ್ಲಾ ಅಂಶಗಳು ಕೇಂದ್ರೀಯ ತನಿಖಾ ದಳದ ತನಿಖೆಗೆ ಅನುಮತಿ/ಸಮ್ಮತಿ ನೀಡಿರುವ ನಿರ್ಧಾರವು ಕಾನೂನಿಗೆ ಅನುಸಾರವಾಗಿರುವುದಿಲ್ಲ ಎಂದು ಸೂಚಿಸುತ್ತದೆ ಎಂದು ಗೃಹ ಇಲಾಖೆಯು ಸಮರ್ಥಿಸಿಕೊಂಡಿತ್ತು.
ಈ ಹಿನ್ನೆಲೆಯಲ್ಲಿ ಕರ್ನಾಟಕ ವ್ಯವಹಾರ ಹಂಚಿಕೆ ನಿಯಮಾವಳಿ 1977ರ ಒಂದನೇ ಅನುಸೂಚಿಯ ಐಟಂ 30ರ ಅನ್ವಯ ಡಿ ಕೆ ಶಿವಕುಮಾರ್ ಮತ್ತು ಇತರರ ವಿರುದ್ಧ ಸಿಬಿಐ ತನಿಖೆಗೆ ವಹಿಸಿ 2019ರರ ಸೆ.25ರಲ್ಲಿ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲು ಮತ್ತು ಈ ಪ್ರಕರಣದ ತನಿಖೆಯನ್ನು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ವಹಿಸಲು ಅನುಮೋದನೆ ನೀಡಬೇಕು ಎಂದು ಒಳಾಡಳಿತ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರವಿ ಎಸ್ ಅವರು ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಅಕ್ರಮ ಆದಾಯ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ “ಉಭಯ ಪಕ್ಷಕಾರರು ಜಂಟಿ ಮೆಮೊ ಸಲ್ಲಿಸಿ, ವಿಚಾರಣೆ ಮುಂದೂಡಿಕೆ ಕೋರಿದರೆ ಪರಿಗಣಿಸಲಾಗುವುದು” ಎಂದಿತು. ಈ ಹಿನ್ನೆಲೆಯಲ್ಲಿ ಪಕ್ಷಕಾರರು ಜಂಟಿ ಮೆಮೊ ಸಲ್ಲಿಸಿದ್ದು, ಅದನ್ನು ಪರಿಗಣಿಸಿ ನ್ಯಾಯಾಲಯವು ವಿಚಾರಣೆಯನ್ನು ನವೆಂಬರ್ 29ಕ್ಕೆ ಮುಂದೂಡಿತ್ತು.
ಸರ್ವೋಚ್ಚ ನ್ಯಾಯಾಲಯವು ನವೆಂಬರ್ 11ರಂದು ತನ್ನ ಆದೇಶದಲ್ಲಿ ಶಿವಕುಮಾರ್ ಅವರ ಪರವಾಗಿ ನೀಡಿರುವ ತಡೆಯಾಜ್ಞೆ ತೆರವು ಮಾಡುವಂತೆ ಸಿಬಿಐ ಈಗಾಗಲೇ ಕರ್ನಾಟಕ ಹೈಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಈ ಅಂಶವನ್ನು ಗಮನಿಸಿದ್ದ ಪೀಠವು ಮಧ್ಯಂತರ ಆದೇಶ ತೆರವು ಮಾಡುವಂತೆ ಸಿಬಿಐ ಕೋರಿದ್ದ ಅರ್ಜಿ ಹಾಗೂ ಮೇಲ್ಮನವಿಯನ್ನು ತುರ್ತಾಗಿ ಅಂದರೆ ಎರಡು ವಾರದಲ್ಲಿ ಇತ್ಯರ್ಥಪಡಿಸುವಂತೆ ಹೈಕೋರ್ಟ್‌ಗೆ ಸೂಚಿಸಿತ್ತು.
ಪ್ರಕರಣದ ಹಿನ್ನೆಲೆ
2013ರಿಂದ 2018ರ ಅವಧಿಯಲ್ಲಿ ಡಿ.ಕೆ. ಶಿವಕುಮಾರ್ ಅವರು ಗೊತ್ತಾದ ಆದಾಯ ಮೂಲಕ್ಕಿಂತ 200 ಕೋಟಿ ಹೆಚ್ಚು ಅಕ್ರಮ ಸಂಪಾದನೆ ಮಾಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿ ಸಿಬಿಐ ಎಫ್‌ಐಆರ್ ಹಾಕಿತ್ತು.
ಇದಕ್ಕೆ ರಾಜ್ಯ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ವಿಧಿಸುತ್ತಲೇ ಬಂದಿತ್ತು.
ಗೊತ್ತಾದ ಮೂಲಕ್ಕಿಂತಲೂ ಹೆಚ್ಚು ಆಸ್ತಿಯನ್ನು ಹೊಂದಿದ್ದರು ಎಂದು ಸಿಬಿಐ ತನ್ನ ಎಫ್‌ಐಆರ್‍ನಲ್ಲಿ ವಿವರಿಸಿತ್ತು.
ವಿಚಾರಣೆಯ ವೇಳೆ ಸಿಬಿಐ ತನಿಖೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಅದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಡಿ.ಕೆ. ಶಿವಕುಮಾರ್ ಚಿಂತನೆ ನಡೆಸಿದ್ದರು.