179 ಪಂಚಾಯ್ತಿಗಳಲ್ಲಿ ಸಾಮಾಜಿಕ ನ್ಯಾಯ ಸಮಿತಿಗಳೇ ಇಲ್ಲ; ಬಿಜೆಪಿ ಸರ್ಕಾರದ ಆಡಳಿತ ವೈಖರಿಗೆ ಕೈಗನ್ನಡಿ

ಬೆಂಗಳೂರು; ರಾಜ್ಯದ ಒಟ್ಟು ಗ್ರಾಮ ಪಂಚಾಯ್ತಿಗಳ ಪೈಕಿ 179 ಪಂಚಾಯ್ತಿಗಳಲ್ಲಿ ಸಾಮಾಜಿಕ ನ್ಯಾಯ ಸಮಿತಿಯೂ ಸೇರಿದಂತೆ ಸ್ಥಾಯಿ ಸಮಿತಿಗಳನ್ನೇ ರಚನೆ ಮಾಡಿಲ್ಲ ಎಂದು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು 2020-21ನೇ ಸಾಲಿನ ಕಾರ್ಯಕ್ಷಮತೆಯ ಕ್ರೋಢೀಕೃತ ಲೆಕ್ಕಪರಿಶೋಧನಾ ವರದಿಯು ಪತ್ತೆ ಹಚ್ಚಿದೆ.

 

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ಅಧಿನಿಯಮ 1993ರ ಪ್ರಕರಣ 246(1) ಮತ್ತು ಗ್ರಾಮ ಪಂಚಾಯ್ತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳ ನಿಯಮಗಳು 2006ರ ನಿಯಮ 112(1) ಅನ್ವಯ ರಾಜ್ಯದ ಗ್ರಾಮ ಪಂಚಾಯ್ತಿಗಳ 2020-21ನೇ ಸಾಲಿನ ಆರ್ಥಿಕ ವ್ಯವಹಾರಗಳ ಲೆಕ್ಕಪರಿಶೋಧನೆ ನಡೆಸಿ ಈ ಸಂಬಂಧ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿದೆ. ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ರಾಜ್ಯದ 4 ಪ್ರಾಂತೀಯ ಕಚೇರಿ ವಿಭಾಗದ ಎಲ್ಲಾ 30 ಜಿಲ್ಲೆಗಳ ಸ್ಥಳೀಯ ಲೆಕ್ಕಪರಿಶೋಧನೆ ನಡೆಸಿರುವ ಲೆಕ್ಕಪರಿಶೋಧಕರು ಶೇ.10ರಷ್ಟು ಅಂದಾಜು 559 ಗ್ರಾಮ ಪಂಚಾಯ್ತಿಗಳ ಕಾರ್ಯಕ್ಷಮತೆಯ ಲೆಕ್ಕ ಪರಿಶೋಧನೆ ಕೈಗೊಂಡಿತ್ತು.

 

ಒಟ್ಟು ಲೆಕ್ಕ ಪರಿಶೋಧನೆ ಕೈಗೊಂಡ 559 ಪಂಚಾಯ್ತಿಗಳ ಪೈಕಿ 183 ಗ್ರಾಮ ಪಂಚಾಯ್ತಿಗಳು ಸಾಮಾನ್ಯ ಸ್ಥಾಯಿ ಸಮಿತಿ, 185 ಪಂಚಾಯ್ತಿಗಳು ಹಣಕಾಸು ಲೆಕ್ಕಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ ಹಾಗೂ 179 ಗ್ರಾಮ ಪಂಚಾಯ್ತಿಗಳು ಸಾಮಾಜಿಕ ನ್ಯಾಯ ಸಮಿತಿಯನ್ನೇ ರಚನೆ ಮಾಡಿಲ್ಲ ಎಂಬ ಅಂಶವನ್ನು ಲೆಕ್ಕಪರಿಶೋಧನೆ ವರದಿಯು ಬಹಿರಂಗಗೊಳಿಸಿದೆ.

 

ಹಣಕಾಸು ಸ್ಥಾಯಿ ಸಮಿತಿ ರಚನೆ ಸಂಬಂಧ ಪರಿಶೀಲಿಸಿರುವ ಲೆಕ್ಕಪರಿಶೋಧಕರು ಶೇ.33ರಷ್ಟು ಗ್ರಾಮ ಪಂಚಾಯ್ತಿಗಳು ನಿಗದಿತ ಅವಧಿಯಲ್ಲಿ ಸಮಿತಿಯನ್ನು ರಚಿಸಿ ಕಾರ್ಯಾರಂಭಿಸಿರುವುದಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.

 

ಕಲ್ಬುರ್ಗಿ ವಿಭಾಗದಲ್ಲಿ ಶೇ.50ರಷ್ಟು, ಬೆಳಗಾವಿ ವಿಭಾಗದಲ್ಲಿ ಶೇ. 40, ಮೈಸೂರು ವಿಭಾಗದಲ್ಲಿ ಶೇ.27ರಷ್ಟು ಮತ್ತು ಬೆಂಗಳೂರು ವಿಭಾಗದಲ್ಲಿ ಶೇ. 21ರಷ್ಟು ಗ್ರಾಮ ಪಂಚಾಯ್ತಿಗಳಲ್ಲಿ ಸ್ಥಾಯಿ ಸಮಿತಿಗಳೇ ರಚನೆಯಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ‘ಸಮಿತಿಗಳು ಸಕಾಲದಲ್ಲಿ ರಚನೆಯಾಗದಿರುವುದು, ವಿಳಂಬ ರಚನೆಯಿಂದಾಗಿ ಆಡಳಿತ ವ್ಯವಸ್ಥೆಯಲ್ಲಿ ಸ್ಥಾಯಿ ಸಮಿತಿಗಳು ವಹಿಸಬೇಕಾಗಿದ್ದ ಕಾರ್ಯದಲ್ಲಿ ಲೋಪ ಉಂಟಾಗಿರುತ್ತದೆ,’ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಲಾಗಿದೆ.

 

ಅದೇ ರೀತಿ 157 ಗ್ರಾಮ ಪಂಚಾಯ್ತಿಗಳಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹೆಚ್ಚುವರಿ ಕಾರ್ಯಭಾರವನ್ನು ಹೊಂದಿದ್ದಾರೆ. 128 ಗ್ರಾಮ ಪಂಚಾಯ್ತಿಗಳಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಕಾರ್ಯನಿರ್ವಹಿಸಿದ್ದಾರೆ. ಶೇ.28ರಷ್ಟು ಗ್ರಾಮ ಪಂಚಾಯ್ತಿಗಳಲ್ಲಿ ಅಧಿಕ ಪ್ರಭಾರ ನಿರ್ವಹಣೆ ಪ್ರಕರಣಗಳಿವೆ. ಶೇ. 23ರಷ್ಟು ಗ್ರಾಮ ಪಂಚಾಯ್ತಿಗಳಲ್ಲಿ ತ್ವರಿತ ವರ್ಗಾವಣೆ ಪ್ರಕರಣಗಳಿವೆ ಎಂದು ಲೆಕ್ಕ ಪರಿಶೋಧನೆ ವೇಳೆಯಲ್ಲಿ ಪತ್ತೆ ಹಚ್ಚಿರುವುದು ವರದಿಯಿಂದ ಗೊತ್ತಾಗಿದೆ.

 

ಬೆಂಗಳೂರು ವಿಭಾಗದ ಒಟ್ಟು 171 ಗ್ರಾಮ ಪಂಚಾಯ್ತಿಗಳಲ್ಲಿ 35 ಮಂದಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಹೆಚ್ಚುವರಿ ಪ್ರಭಾರ ಹೊಂದಿದ್ದಾರೆ. ಬೆಳಗಾವಿ ವಿಭಾಗದಲ್ಲಿ 62, ಕಲ್ಬುರ್ಗಿ ವಿಭಾಗದಲ್ಲಿ 36, ಮೈಸೂರು ವಿಭಾಗದಲ್ಲಿ 24 ಸೇರಿ ಒಟ್ಟು 157 ಮಂದಿ ಪಿಡಿಒಗಳು ಹೆಚ್ಚುವರಿ ಪ್ರಭಾರ ಹೊಂದಿರುವುದು ವರದಿಯಿಂದ ಗೊತ್ತಾಗಿದೆ.

 

‘ಈ ಕ್ರಮವು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ತೀವ್ರ ಒತ್ತಡ ಮತ್ತು ಅವರುಗಳ ಕಾರ್ಯವೈಖರಿ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದಾಗ ಆಡಳಿತ ವ್ಯವಸ್ಥೆಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲು ಮತ್ತು ಗ್ರಾಮ ಪಂಚಾಯ್ತಿಯ ಕಾರ್ಯನಿರ್ವಹಣೆ ಮೇಲೆ ವ್ಯತ್ಯಯ ಉಂಟಾಗಿರುತ್ತದೆ,’ ಎಂದು ವರದಿಯಲ್ಲಿ ವಿವರಿಸಲಾಗಿದೆ.

the fil favicon

SUPPORT THE FILE

Latest News

Related Posts