Saturday | April 11, 2026 |

ಬೆಳೆ ನಷ್ಟ ಪರಿಹಾರದಲ್ಲೂ ಅಕ್ರಮ; ಬಿಜೆಪಿ ಅವಧಿಯಲ್ಲೇ ಅನ್ಯ ಖಾತೆದಾರರಿಗೆ ಬಹುಕೋಟಿ ಪಾವತಿ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯ ಬೆಳೆ ನಷ್ಟ ಪರಿಹಾರ ಪಾವತಿಯಲ್ಲಿಯೂ ಬಹು ಕೋಟಿಗಳಷ್ಟು ಅಕ್ರಮ ನಡೆದಿತ್ತು. ಸಂತ್ರಸ್ತ ರೈತರಿಗೆ ತಲುಪಬೇಕಿದ್ದ ಬೆಳೆ ನಷ್ಟದ ಪರಿಹಾರ ಮೊತ್ತವು ಸಂಬಂಧವೇ ಇಲ್ಲದವರಿಗೆ ಪಾವತಿಯಾಗಿತ್ತು.

 

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಅಭಿವೃದ್ದಿ ನಿಗಮದಲ್ಲಿ ನಡೆದಿರುವ ಬಹು ಕೋಟಿ ಹಗರಣವನ್ನು ಮುಂದಿರಿಸಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ಮೇಲೆ ಮುಗಿಬಿದ್ದಿರುವ ಪ್ರತಿಪಕ್ಷ ಬಿಜೆಪಿಯು, ತನ್ನದೇ ಸರ್ಕಾರದ ಅವಧಿಯಲ್ಲಿ ಬೆಳೆ ನಷ್ಟದ ಪರಿಹಾರದಲ್ಲಿಯೂ ಸಂಬಂಧವೇ ಇಲ್ಲದ ಅನ್ಯ ಖಾತೆದಾರರ ಖಾತೆಗೆ ಕೋಟ್ಯಂತರ ರುಪಾಯಿ ಪಾವತಿಯಾಗಿರುವ ಪ್ರಕರಣಗಳು ಇದೀಗ ಮುನ್ನೆಲೆಗೆ ಬಂದಿದೆ.

 

ವಿಶೇಷ ಎಂದರೇ ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದ ಪ್ರಕರಣವನ್ನು ಮುಂದಿರಿಸಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿರುವ ಪ್ರತಿಪಕ್ಷ ನಾಯಕ ಆರ್‍‌ ಅಶೋಕ್‌ ಅವರು ಕಂದಾಯ ಸಚಿವರಾಗಿದ್ದಾಗಿನ ಅವಧಿಯಲ್ಲಿಯೇ ಬೆಳೆ ನಷ್ಟ ಪರಿಹಾರದಲ್ಲಿ ಅಕ್ರಮ ನಡೆದಿತ್ತು.

 

ಈ ಪ್ರಕರಣದ ಕುರಿತು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅಂದರೇ 2024ರ ಫೆ.2ರಂದು ಅಜ್ಜಂಪುರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‍‌ ಕೂಡ ದಾಖಲಾಗಿತ್ತು. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಮತ್ತೊಂದು ವಿಶೇಷ ಎಂದರೇ ಇದೇ ಪ್ರಕರಣದ ಕುರಿತು ವಿಧಾನಪರಿಷತ್‌ ಸದಸ್ಯ ಎನ್‌ ರವಿಕುಮಾರ್‍‌ ಅವರು ಚುಕ್ಕೆ ಗುರುತಿಲ್ಲದ ಪ್ರಶ್ನೆಯನ್ನೂ (ಪ್ರಶ್ನೆ ಸಂಖ್ಯೆ;308) ಕೇಳಿದ್ದಾರೆ. ಇದಕ್ಕೆ ಕಂದಾಯ ಇಲಾಖೆಯು ಸಿದ್ಧಪಡಿಸಿರುವ ಉತ್ತರದಲ್ಲಿ ಕಡೂರು ತಾಲೂಕಿನಲ್ಲಿ ನಡೆದಿರುವ ಅಕ್ರಮ ಪ್ರಕರಣದ ಕುರಿತಾದ ಮಾಹಿತಿ ಇದೆ.

 

ಪ್ರಕರಣದ ಹಿನ್ನೆಲೆ

 

ಕಡೂರು ತಾಲೂಕಿನ ಅಜ್ಜಂಪುರ ಠಾಣೆ ವ್ಯಾಪ್ತಿಯ ಕಲ್ಕೆರೆ ಗ್ರಾಮ ಪಂಚಾಯ್ತಿಯ ಗ್ರಾಮ ಆಡಳಿತಾಧಿಕಾರಿ ಪಾಲಾಕ್ಷಮೂರ್ತಿ ಎಂಬುವರು 2022ರ ಜೂನ್‌ 1ರಿಂದ ಸೆಪ್ಟಂಬರ್‍‌ 30ರವರೆಗೆ ಸರ್ಕಾರದಿಂದ ಮಂಜೂರಾಗಿದ್ದ ಒಟ್ಟು ಬೆಳೆ ಪರಿಹಾರದ ಪೈಕಿ 2.01 ಕೋಟಿ ರು.ನಷ್ಟು ಮೊತ್ತವನ್ನು ಸಂಬಂಧವಿಲ್ಲದ ಅನ್ಯ ಖಾತೆದಾರರಿಗೆ ಪಾವತಿಸಿದ್ದರು.

 

ಕಡೂರು ತಾಲೂಕು ಚೌಳ ಹಿರಿಯೂರು ಹೋಬಳಿಯ ಅಂತರಘಟ್ಟೆ ಹಾಗೂ ಕಲ್ಕೆರೆ ವೃತ್ತಗಳ ಪೈಕಿ ಬರುವ ಒಟ್ಟು 13 ಗ್ರಾಮಗಳ 651 ಪ್ರಕರಣಗಳಲ್ಲಿ 2.01 ಕೋಟಿಯಷ್ಟು ಮೊತ್ತವನ್ನು ಸಂಬಂಧವಿಲ್ಲದ ಅನ್ಯ ಖಾತೆದಾರರಿಗೆ ಪಾವತಿಸಿದ್ದರು ಎಂದು ಎಫ್‌ಐಆರ್‍‌ನಲ್ಲಿ ಉಲ್ಲೇಖವಾಗಿದೆ.

 

ಗ್ರಾಮ ಆಡಳಿತಾಧಿಕಾರಿ ಪಾಲಾಕ್ಷಮೂರ್ತಿ ಅವರು ತಮ್ಮ ಲಾಗಿನ್‌ನನ್ನು ದುರುಪಯೋಗಪಡಿಸಿಕೊಂಡು ಈ ಹಣವನ್ನು ಅನ್ಯ ಖಾತೆದಾರರಿಗೆ ಪಾವತಿಸಿದ್ದರು. ಈ ಮೂಲಕ ರೈತರಿಗೆ ಮತ್ತು ಸರ್ಕಾರಕ್ಕೆ ವಂಚಿಸಿ ಮೋಸ ಮಾಡಿದ್ದರು. ಚಿಕ್ಕಮಗಳೂರಿನ ಜಂಟಿ ಕೃಷಿ ನಿರ್ದೇಶಕರ ಪ್ರಾಥಮಿಕ ಪರಿಶೀಲನಾ ವರದಿಯಿಂದ ಮೇಲ್ನೋಟಕ್ಕೆ ಕಂಡುಬಂದಿತ್ತು. ಇವರ ವಿರುದ್ಧ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿತ್ತು ಎಂದು ಎಫ್‌ಐಆರ್‍‌ನಲ್ಲಿ ವಿವರಿಸಲಾಗಿದೆ.

 

2022-2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದಾಗಿ ಬೆಳೆನಷ್ಟ ಹೊಂದಿರುವ ರೈತರಿಗೆ 651 ಪ್ರಕರಣಗಳಲ್ಲಿ 2.01 ಕೋಟಿ ರು.ಗಳನ್ನು ಪಾವತಿಸದೇ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ನೌಕರನ ಲಾಗಿನ್‌ ದುರುಪಯೋಗಪಡಿಸಿಕೊಂಡಿದ್ದರು. ಇವರ ವಿರುದ್ಧ ಐಪಿಸಿ 468, 471, 420, 409 ಅನ್ವಯ ಪ್ರಕರಣ ದಾಖಲಾಗಿತ್ತು.

 

ಕಂದಾಯ ಇಲಾಖೆಯ ಉತ್ತರದಲ್ಲೇನಿದೆ?

 

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕಲ್ಕೆರೆ ಗ್ರಾಮ ಪಂಚಾಯ್ತಿಯಲ್ಲಿ 2022-23ನೇ ಸಾಲಿನ ಬೆಳೆ ಹಾನಿ ಪರಿಹಾರವನ್ನು ನಕಲಿ ಬ್ಯಾಂಕ್‌ ಖಾತೆ, ಆಧಾರ್‍‌ ಕಾರ್ಡ್‌ ಆಧರಿಸಿ ಹಣ ಪಾವತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತರೀಕೆರೆ ಉಪ ವಿಭಾಗದ ಉಪ ವಿಭಾಗಾಧಿಕಾರಿ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಜಂಟಿ ತನಿಖೆ ನಡೆದಿತ್ತು.

 

ಈ ಪ್ರಕರಣದ ಪೂರ್ಣ ತನಿಖಾ ವರದಿಯನ್ನು ಹಾಗೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಇಲಾಖೆಯ ಅಧಿಕಾರಿಗಳನ್ನು ಸಹ ಗುರುತಿಸಿ ವರದಿ ಸಲ್ಲಿಸಬೇಕು ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಅವರಿಗೆ ಇಲಾಖೆಯು ಸೂಚಿಸಿದೆ.

 

ಅಕ್ರಮವಾಗಿ ಬೆಳೆ ಪರಿಹಾರ ಮೊತ್ತವನ್ನು ಅನ್ಯ ಖಾತೆದಾರರಿಗೆ ಪಾವತಿಸಿರುವ ಗ್ರಾಮ ಆಡಳಿತಾಧಿಕಾರಿ ಪಾಲಾಕ್ಷಮೂರ್ತಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಕಂದಾಯ ಇಲಾಖೆಯು ಉತ್ತರ ನೀಡಲಿದೆ ಎಂದು ಗೊತ್ತಾಗಿದೆ.

 

ಬಡ ರೈತರಿಗೆ ಪರಿಹಾರ ಹಣ ವಿತರಣೆಯಲ್ಲಿಯೂ ಅಕ್ರಮದ ವಾಸನೆ ಬಡಿದಿದೆ.  ಪರಿಹಾರ ಹಣ ವಿತರಣೆಗೆ ಸಂಬಂಧಿಸಿದಂತೆ   ನಕಲಿ ಬ್ಯಾಂಕ್‌ ಖಾತೆ ಮತ್ತು ಆಧಾರ್‍‌ ಕಾರ್ಡ್‌ ಬಳಸಿ ಒಂದೇ ಒಂದು ಗ್ರಾಮ ಪಂಚಾಯ್ತಿಯಲ್ಲಿ 6 ಕೋಟಿ ರು.ಗೂ ಹೆಚ್ಚು ಹಣ ಡ್ರಾ ಮಾಡಲಾಗಿದೆ ಎಂಬ ಗುರುತರವಾದ ಆರೋಪ ಕೇಳಿ ಬಂದಿತ್ತು.

 

ಚಿಕ್ಕಮಗಳೂರಿನ ಕಡೂರು ತಾಲೂಕಿನ ಗ್ರಾಮ ಪಂಚಾಯ್ತಿಗಳ ಪೈಕಿ ಕಲ್ಕೆರೆ ಗ್ರಾಮ ಪಂಚಾಯ್ತಿಯೊಂದರಲ್ಲೇ  ನಕಲಿ ಬ್ಯಾಂಕ್‌ ಖಾತೆ ಮತ್ತು ಆಧಾರ್‍‌ ಕಾರ್ಡ್‌ ನೀಡಿದ್ದವರಿಗೆ  ರೈತರ ಪರಿಹಾರ ರೂಪದಲ್ಲಿ ನೀಡಬೇಕಿದ್ದ 6 ಕೋಟಿ ರು.ಗೂ ಹೆಚ್ಚಿನ ಮೊತ್ತ ವಿತರಣೆಯಾಗಿದೆ. ಈ ಪ್ರಕರಣ ಸಂಬಂಧ ಸೂಕ್ತ ಕ್ರಮಕೈಗೊಳ್ಳಳು ಕಂದಾಯ ಇಲಾಖೆಯ ಹೆಚ್ಚುವರಿ ಆಯುಕ್ತರು ಕಡೂರು ತಾಲೂಕಿನ ತಹಶೀಲ್ದಾರ್‍‌ಗೆ ಸೂಚಿಸಿದ್ದರು.

 

ಬ್ಯಾಂಕ್‌ನಲ್ಲಿ ನಕಲಿ ಖಾತೆ, ಆಧಾರ್‍‌ ಸೃಷ್ಟಿ; ರೈತರ ಪರಿಹಾರ ಹಣ ವಿತರಣೆಯಲ್ಲಿಯೂ 6 ಕೋಟಿ ಅಕ್ರಮ!

 

‘ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಚೌಳ ಹಿರಿಯೂರು ಹೋಬಳಿಯ ಕಲ್ಕೆರೆ ಗ್ರಾಮ ಪಂಚಾಯ್ತಿಯಲ್ಲಿ ರೈತರ ಪರಿಹಾರ ಹಣ 6 ಕೋಟಿಗೂ ಹೆಚ್ಚು ಹಣವನ್ನು ಕೆಲವರು ನಕಲಿ ಬ್ಯಾಂಕ್‌ ಖಾತೆ ಮತ್ತು ಆಧಾರ್ ಕಾರ್ಡ್‌ ನೀಡಿ ಹಣ ಪಡೆದಿದ್ದು ಇದಕ್ಕೆ ಪಂಚಾಯ್ತಿ ಕಾರ್ಯದರ್ಶಿ, ಕಂಪ್ಯೂಟರ್‍‌ ಆಪರೇಟರ್‍‌ ಹೊಣೆಗಾರರಾಗಿದ್ದಾರೆ. ಅದ ಕಾರಣ ಬಡ ರೈತರಿಗೆ ಅನ್ಯಾಯವಾಗಿದ್ದು ಈ ವಿಷಯದ ಬಗ್ಗೆ ತನಿಖೆ ನಡೆಸಬೇಕು,’ ಎಂದು ಓಂಕಾರಪ್ಪ ಎಂಬುವರು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಮನವಿ ಸಲ್ಲಿಸಿದ್ದರು.

 

ಈ ಮನವಿ ಆಧರಿಸಿ ಕಂದಾಯ ಇಲಾಖೆಯ ಹೆಚ್ಚುವರಿ ಆಯುಕ್ತರು ತನಿಖೆ ನಡೆಸಲು ಸೂಚಿಸಿರುವುದು ಪತ್ರದಿಂದ ತಿಳಿದು ಬಂದಿದೆ.

 

 

ಈ ಪ್ರಕರಣ ಕುರಿತು ಕಂದಾಯ ಇಲಾಖೆಯ ಹೆಚ್ಚುವರಿ ಆಯುಕ್ತರಿಗೆ ಪ್ರತಿಕ್ರಿಯೆ, ವಿವರ ಮತ್ತು ಹೆಚ್ಚಿನ ಮಾಹಿತಿ ಬಯಸಿ ಇ-ಮೈಲ್‌ ಕಳಿಸಲಾಗಿತ್ತು. ವರದಿ ಪ್ರಕಟವಾಗುವ ಈ ದಿನದವರೆಗೂ ಯಾವುದೇ ಮಾಹಿತಿ ನೀಡಿಲ್ಲ. ಆಯುಕ್ತಾಲಯವು ಮಾಹಿತಿ ನೀಡಿದ ನಂತರ ಇದೇ ವರದಿಯನ್ನು ನವೀಕರಿಸಲಾಗುವುದು.

 

ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೂ ಪೂರ್ಣ ತಲುಪಿಲ್ಲ ಬರ ಪರಿಹಾರ

 

ಮೊದಲ ಹಂತದ ಇನ್‌ಪುಟ್‌ ಸಬ್ಸಿಡಿ ಪೈಕಿ 33.58 ಲಕ್ಷ ರೈತರಿಗೆ 636.45 ಕೋಟಿ ರು. ಪರಿಹಾರ ಮೊತ್ತ ಪಾವತಿಸಿದೆ. ಆದರೆ ಇದೇ ಮೊದಲ ಹಂತದಲ್ಲಿ ಪೂರ್ಣ ಮೊತ್ತವನ್ನು ಪಡೆದ ರೈತರ ಸಂಖ್ಯೆ ಕೇವಲ 4.36 ಲಕ್ಷ ಮಾತ್ರ. ಪೂರ್ಣ ಮೊತ್ತದ ಪರಿಹಾರ 29.22 ಲಕ್ಷ ರೈತರಿಗೆ ದೊರೆಯಬೇಕಿತ್ತು.

‘ನಿಮ್ಮ ಸರ್ಕಾರಕ್ಕಂತೂ ರೈತರಿಗೆ ಬರ ಪರಿಹಾರ ನೀಡುವ ಯೋಗ್ಯತೆ ಇಲ್ಲ’; ‘ದಿ ಫೈಲ್‌’ ವರದಿ ಬೆನ್ನಲ್ಲೇ ಅಶೋಕ್‌ ಟೀಕೆ

ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ಸಚಿವಾಲಯವು 2024ರ ಮೇ 9ರಂದು ಆಯೋಜಿಸಿದ್ದ ಅಧಿಕಾರಿಗಳೊಂದಿಗಿನ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಈ ದತ್ತಾಂಶಗಳನ್ನು ಮಂಡಿಸಲಾಗಿತ್ತು.  ಈ ದತ್ತಾಂಶಗಳ ಪ್ರಕಾರ ಬೆಳಗಾವಿಯಲ್ಲಿ ಮೊದಲ ಹಂತದಲ್ಲಿ 3,52,205 ರೈತರಿಗೆ 65.47 ಕೋಟಿ ರು ಪಾವತಿಯಾಗಿದೆ. ಆದರೆ ಇದೇ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 70,587 ರೈತರಿಗೆ ಮಾತ್ರ 12.01 ಕೋಟಿ ರು.ನ ಪೂರ್ಣ ಮೊತ್ತ ಪಾವತಿಸಿದೆ. ಇನ್ನೂ 2.81 ಲಕ್ಷ ರೈತರಿಗೆ ಪೂರ್ಣ ಮೊತ್ತ ಪಾವತಿಸಲು ಬಾಕಿ ಉಳಿಸಿಕೊಂಡಿರುವುದು ದತ್ತಾಂಶಗಳಿಂದ ಕಂಡುಬಂದಿತ್ತು.

Hot this week

866.59 ಕೋಟಿ ರು ಮೊತ್ತದ 399 ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆಗೆ ಬಾಕಿ ಉಳಿಸಿಕೊಂಡ ಇಲಾಖೆಗಳು; ಅನುದಾನ ದುರುಪಯೋಗ ಸಾಧ್ಯತೆ?

ಬೆಂಗಳೂರು; ರಾಜ್ಯದ ಹಲವು ಇಲಾಖೆಗಳು ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಕೆಯಲ್ಲಿ ತೀವ್ರ...

ಸರ್ಕಾರಿ ಸೇವೆ; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರಾತಿನಿಧ್ಯ ಎರಡು ವರ್ಷದಲ್ಲಿ ಇಳಿಕೆಯಾಗಿದೆಯೇ?

ಬೆಂಗಳೂರು; ರಾಜ್ಯ ಸರ್ಕಾರದ ಶಿಕ್ಷಣ, ಒಳಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ; ಅಧಿಕಾರಿಗಳ ವಿರುದ್ಧ ದಾಖಲಾಗದ ಎಫ್‌ಐಆರ್, ವರದಿ ಸಲ್ಲಿಸಲು ಸೂಚನೆ

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ತವರು ಕ್ಷೇತ್ರದಲ್ಲಿ...

13 ಪರ್ಸೆಂಟ್ ಕಮಿಷನ್‌ಗೆ ಬೇಡಿಕೆ; ಗುತ್ತಿಗೆದಾರರ ಸಂಘದಿಂದ ಮತ್ತೊಂದು ಪತ್ರ, ಕೋರ್ಟ್‌ ಕದ ತಟ್ಟಿದ ಗುತ್ತಿಗೆದಾರರು

ಬೆಂಗಳೂರು;  ಮಹಾತ್ಮಗಾಂಂಧಿ ನಗರ ವಿಕಾಸ ಯೋಜನೆ -1 ರ ಅಡಿಯಲ್ಲಿ ಕಾಮಗಾರಿ...

Topics

866.59 ಕೋಟಿ ರು ಮೊತ್ತದ 399 ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆಗೆ ಬಾಕಿ ಉಳಿಸಿಕೊಂಡ ಇಲಾಖೆಗಳು; ಅನುದಾನ ದುರುಪಯೋಗ ಸಾಧ್ಯತೆ?

ಬೆಂಗಳೂರು; ರಾಜ್ಯದ ಹಲವು ಇಲಾಖೆಗಳು ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಕೆಯಲ್ಲಿ ತೀವ್ರ...

ಸರ್ಕಾರಿ ಸೇವೆ; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರಾತಿನಿಧ್ಯ ಎರಡು ವರ್ಷದಲ್ಲಿ ಇಳಿಕೆಯಾಗಿದೆಯೇ?

ಬೆಂಗಳೂರು; ರಾಜ್ಯ ಸರ್ಕಾರದ ಶಿಕ್ಷಣ, ಒಳಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

ಬಳಕೆಯಾಗದ ಅನುದಾನ; ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗಿಲ್ಲ 10,546.42 ಕೋಟಿ, ಸಿಎಜಿ ಆಕ್ಷೇಪಣೆ

ಬೆಂಗಳೂರು; ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ 2024-25ನೇ ಸಾಲಿನಲ್ಲಿ   ಒಟ್ಟು...

13,646.51 ಕೋಟಿ ಹೆಚ್ಚುವರಿ ವೆಚ್ಚ; ಗೃಹ ಲಕ್ಷ್ಮಿಯದ್ದೇ ಸಿಂಹಪಾಲು, ಹೆಚ್ಚುವರಿ ಖರ್ಚಿಗೆ ಕಾರಣಗಳೇ ಇಲ್ಲ, ಸಿಎಜಿ ಆಕ್ಷೇಪ

ಬೆಂಗಳೂರು;  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯು 2024-25ನೇ ಸಾಲಿನಲ್ಲಿ ...

Related Articles

Popular Categories

error: Content is protected !!