ಬೆಂಗಳೂರು; ಭೂಗತ ಸುರಂಗ ಮಾರ್ಗದಲ್ಲಿ ರಿಯಾಯಿತಿ ಅವಧಿಯಲ್ಲಿ ಗರಿಷ್ಠ ಟೋಲ್ ಸಂಗ್ರಹಣೆ ಸಾಧಿಸುವ ಉದ್ದೇಶದಿಂದಲೇ ಹೆಚ್ಚಿನ ಟಿಸಿವಿಯನ್ನು ಉಲ್ಲೇಖಿಸಿರುವ ಅದಾನಿ ಎಂಟರ್ ಪ್ರೈಸೆಸ್ ಈ ರೀತಿಯ ದರವನ್ನು ನಿಗದಿಪಡಿಸಿರುವ ಸಾಧ್ಯತೆ ಇದೆ. ಅಲ್ಲದೇ ಬಿಡ್‌ದಾರರು ಅನುಮತಿಸಲಾದ ಸಂಪೂರ್ಣ 40 ವರ್ಷಗಳ ಟೋಲ್ ಸಂಗ್ರಹಣೆಯ ಅವಧಿಯನ್ನು ಬಳಸಿಕೊಳ್ಳಲು ಉದ್ದೇಶಿಸಿರುವಂತೆ ಕಾಣುತ್ತದೆ ಎಂದು ಆರ್ಥಿಕ ಇಲಾಖೆಯು ಅವಲೋಕಿಸಿರುವುದು ಇದೀಗ ಬಹಿರಂಗವಾಗಿದೆ.
ಸುರಂಗ ಮಾರ್ಗದ ಪರ ಧ್ವನಿ ಎತ್ತಿ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಹಿಳಾ ಉದ್ಯಮಿಗಳ ಒಕ್ಕೂಟದ ಕಾರ್ಯಕ್ರಮದಲ್ಲಿ ಈಚೆಗಷ್ಟೇ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇದೇ ಸುರಂಗ ಮಾರ್ಗದ ಯೋಜನೆ ಕುರಿತು ಆರ್ಥಿಕ ಇಲಾಖೆಯು ಮಾಡಿರುವ ಅವಲೋಕನಗಳೂ ಮುನ್ನೆಲೆಗೆ ಬಂದಿವೆ.
ಇದಕ್ಕೆ ಸಂಬಂಧಿಸಿದಂತೆ ದಿ ಫೈಲ್ ಗೆ ಆರ್ಥಿಕ ಇಲಾಖೆಯ ಅವಲೋಕನದ ಪ್ರತಿಯು (FD 225 EXP-9/2025- UDD 396 MNY 2026, UDD 397 MNY 2026) ಲಭ್ಯವಾಗಿದೆ.
ಭೂಗತ ಸುರಂಗ ಮಾರ್ಗದ ಯೋಜನೆಯನ್ನು ಎಂಬಿಒಒಟಿ ಮಾದರಿಯಲ್ಲಿ ಅನುಷ್ಠಾನದಿಂದಾಗಿ ಟೆಂಡರ್ ದಸ್ತಾವೇಜು (ಆರ್‍ಎಫ್‌ಪಿ) ಮತ್ತು ಮಾದರಿ ರಿಯಾಯಿತಿದಾರರ ಕರಾರುಗಳಿಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು ಹಲವು ಅವಲೋಕನಗಳನ್ನು ಮಾಡಿವೆ. ಅಲ್ಲದೇ ಸಚಿವ ಸಂಪುಟ ಮುಂದೆ ಮಂಡಿಸುವ ಮೊದಲು ಪುನಃ ಸಲ್ಲಿಸಬೇಕು ಎಂದು ಆರ್ಥಿಕ ಇಲಾಖೆಯು ನಗರಾಭಿವೃದ್ಧಿ ಇಲಾಖೆಗೆ ಸೂಚಿಸಿದೆ.
ಸುರಂಗ ಮಾರ್ಗ ನಿರ್ಮಾಣವು ಅತ್ಯಂತ ಅವೈಜ್ಞಾನಿಕವಾಗಿದೆ ಮತ್ತು ಇದರಿಂದ ನಗರದಲ್ಲಿ ಪ್ರವಾಹ ಭೀತಿ ಎದುರಾಗಲಿದೆ ಎಂದು ಎಚ್ಚರಿಸಿರುವ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ತಂಡವು ರಾಜ್ಯಪಾಲರಿಗೆ ವರದಿ ಸಲ್ಲಿಸಿದೆ. ಇದರ ಬೆನ್ನಲ್ಲೇ ಈ ಯೋಜನೆ ಅನುಷ್ಠಾನದ ಮಾದರಿ ಮತ್ತು ಟೆಂಡರ್ ದಸ್ತಾವೇಜು ಕುರಿತು ಆರ್ಥಿಕ ಇಲಾಖೆಯ ಮಾಡಿರುವ ಅವಲೋಕನವು ಚರ್ಚೆಗೆ ಗ್ರಾಸವಾಗಿದೆ.
ಯೋಜನಾ ವೆಚ್ಚ, ಅನುಮೋದಿತ ಡಿಪಿಆರ್ ವೆಚ್ಚ, ಟೆಂಡರ್ ಗೆ ನಿಗದಿಪಡಿಸಿದ ಮೊತ್ತ ಮತ್ತು ಬಿಡ್‌ದಾರರ ವೆಚ್ಚ, ಮೂಲ ಡಿಪಿಆರ್‍ಗೆ ಹೋಲಿಸಿದರೆ ಕಾರ್ಯಾಚರಣೆ ಮತ್ತು ನಿರ್ವಹಣೆ (O&M ) ವೆಚ್ಚದಲ್ಲಿ ಆಗಿರುವ ಹೆಚ್ಚಳ, ಪರಿಷ್ಕೃತ DPR ಮತ್ತು ಬಿಡ್‌ದಾರರ ವೆಚ್ಚ ಹಾಗೂ ಡಿಪಿಆರ್ ಪರಿಷ್ಕರಣೆ, ವಿಜಿಎಫ್ ನಿಗದಿತವಾಗಿರುವುದರಿಂದ ಸರ್ಕಾರದ ಹಣಕಾಸಿನ ಹೊಣೆಗಾರಿಕೆ ಸೀಮಿತವಾಗಿರುವುದರ ಕುರಿತು ಆರ್ಥಿಕ ಇಲಾಖೆಯು ತನ್ನ ಅವಲೋಕನದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಯೋಜನಾ ವೆಚ್ಚ, ಅನುಮೋದಿತ ಡಿಪಿಆರ್ ವೆಚ್ಚ, ಟೆಂಡರ್‌ಗೆ ನಿಗದಿಪಡಿಸಿದ ಮೊತ್ತ ಮತ್ತು ಬಿಡ್‌ದಾರರ ವೆಚ್ಚದ ಕುರಿತು ಆರ್ಥಿಕ ಇಲಾಖೆಯು ಅವಲೋಕಿಸಿದೆ. ಮೂಲತಃ ಅನುಮೋದಿಸಲಾದ ಡಿಪಿಆರ್ ವೆಚ್ಚ, ಟೆಂಡರ್‌ಗೆ ನಿಗದಿಪಡಿಸಿದ ಮೊತ್ತ ಹಾಗೂ ಬಿಡ್‌ದಾರರು ಉಲ್ಲೇಖಿಸಿರುವ ವೆಚ್ಚವನ್ನು ಹೋಲಿಸಿದಾಗ, ಸಾಮಾನ್ಯ ಬೆಲೆ ಏರಿಕೆಯಿಂದ ವಿವರಿಸಲಾಗದಷ್ಟು ತೀವ್ರವಾದ ಹೆಚ್ಚಳ ಕಂಡುಬರುತ್ತದೆ ಎಂದು ಆರ್ಥಿಕ ಇಲಾಖೆಯು ತನ್ನ ಅವಲೋಕನದಲ್ಲಿ ಹೇಳಿದೆ.
ಪ್ಯಾಕೇಜ್-1ಕ್ಕೆ, ಬಿಡ್‌ದಾರರು ಉಲ್ಲೇಖಿಸಿರುವ ರೂ.13,156.27 ಕೋಟಿ ವೆಚ್ಚವು, ಅನುಮೋದಿತ ಡಿಪಿಆರ್ ವೆಚ್ಚವಾದ ರೂ.8,814.78 ಕೋಟಿಗೆ ಹೋಲಿಸಿದರೆ ಶೇ.49.3ರಷ್ಟು ಹೆಚ್ಚಳವಾಗಿದೆ. ಟೆಂಡರ್‌ಗೆ ನಿಗದಿಪಡಿಸಿದ ಮೊತ್ತವಾದ ರೂ.8,770.06 ಕೋಟಿಗೆ (GST ಹೊರತುಪಡಿಸಿ) ಹೋಲಿಸಿದರೆ ಶೇ.50ರಷ್ಟು ಹೆಚ್ಚಳವಾಗಿದೆ. ಪ್ಯಾಕೇಜ್-2ಕ್ಕೆ, ಬಿಡ್‌ದಾರರ ರೂ.13,664.66 ಕೋಟಿ ವೆಚ್ಚವು, ಅನುಮೋದಿತ ಡಿಪಿಆರ್ ವೆಚ್ಚವಾದ ರೂ.8,965.35 ಕೋಟಿಗೆ ಹೋಲಿಸಿದರೆ ಶೇ.52.4ರಷ್ಟು ಹೆಚ್ಚಳವಾಗಿದೆ ಎಂದು ವಿವರಿಸಿದೆ.
ಟೆಂಡರ್‌ಗೆ ನಿಗದಿಪಡಿಸಿದ ಮೊತ್ತವಾದ ರೂ.8,928.00 ಕೋಟಿಗೆ ಹೋಲಿಸಿದರೆ ಶೇ.53.1ರಷ್ಟು ಹೆಚ್ಚಳವಾಗಿದೆ. ಒಟ್ಟಾರೆ, ಎರಡೂ ಪ್ಯಾಕೇಜ್‌ಗಳಲ್ಲಿ ಬಿಡ್‌ದಾರರ ವೆಚ್ಚವು ಮಂಜೂರಾದ ಮಾನದಂಡಗಳಿಗಿಂತ ಸುಮಾರು 1.5 ಪಟ್ಟು ಹೆಚ್ಚಾಗಿದೆ ಎಂದು ಆರ್ಥಿಕ ಇಲಾಖೆಯು ಅವಲೋಕನದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಕಾರ್ಯಾಚರಣೆ, ನಿರ್ವಹಣೆ ವೆಚ್ಚದಲ್ಲಿ ಹೆಚ್ಚಳ
ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚದಲ್ಲಿನ ಏರಿಕೆ ಅತ್ಯಂತ ಹೆಚ್ಚಾಗಿದೆ. ಹೆಚ್ಚಿದ ರಿಯಾಯಿತಿ (Concession) ಮೌಲ್ಯವೇ ಇದಕ್ಕೆ ಪ್ರಮುಖ ಕಾರಣವಾಗಿದೆ. 30 ವರ್ಷಗಳ ರಿಯಾಯಿತಿ ಅವಧಿಯಲ್ಲಿ ಎರಡೂ ಪ್ಯಾಕೇಜ್‌ಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚವು ಮೂಲತಃ ಅನುಮೋದಿಸಲಾದ ಮೊತ್ತಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. ಇದರಿಂದ ಮೂಲ ಅಂದಾಜುಗಳ ಪ್ರಮಾಣವು ತೀವ್ರವಾಗಿ ಹೆಚ್ಚಾಗಿದೆ ಎಂದು ಆರ್ಥಿಕ ಇಲಾಖೆಯು ಅವಲೋಕಿಸಿದೆ.
ಪ್ಯಾಕೇಜ್ 1 ಕ್ಕೆ ಸಂಬಂಧಿಸಿದಂತೆ 2025ರ ಫೆಬ್ರುವರಿಯಲ್ಲಿ 3,441.22 ಕೋಟಿ ರು ಇದ್ದರೇ 2025ರ ನವೆಂಬರ್‍ನಲ್ಲಿ ಬಿಡ್ಡರ್ 12,982.38 ಕೋಟಿ ರುಗೇರಿಸಿದ್ದರು. ಇದರ ಪ್ರಕಾರ ಶೇ. 277.3ರಷ್ಟು ಹೆಚ್ಚಳವಾಗಿತ್ತು. ಪ್ಯಾಕೇಜ್ 2ಕ್ಕೆ ಸಂಬಂಧಿಸಿದಂತೆ 2025ರ ಫೆಬ್ರುವರಿಯಲ್ಲಿ 3,059.11 ಕೋಟಿ ರು ಮೂಲ ಡಿಪಿಆರ್ ಇತ್ತು. 2025ರ ನವೆಂಬರ್ ನಲ್ಲಿ ಬಿಡ್‌ದಾರರು 12,509.88 ಕೋಟಿಗೆ ಏರಿಸಿದ್ದಾರೆ. ಇದು ಶೇ. 308.9ರಷ್ಟು ಹೆಚ್ಚಳವಾಗಿತ್ತು.
ಪರಿಷ್ಕೃತ ಡಿಪಿಆರ್- ಬಿಡ್‌ದಾರರ ವೆಚ್ಚ
2026ರ ಮೇ 4ವರೆಗಿನ ಪರಿಷ್ಕೃತ ಡಿಪಿಆರ್ ಮತ್ತು ಬಿಡ್‌ದಾರರ ವೆಚ್ಚವನ್ನು ಆರ್ಥಿಕ ಇಲಾಖೆಯು ಡಿಪಿಆರ್ ಅಂದಾಜಿನೊಂದಿಗೆ ಹೋಲಿಸಿದೆ. ಇದರ ಪ್ರಕಾರ ಬಿಡ್‌ದಾರರ ಪ್ರೀಮಿಯಂ ಅಲ್ಪ ಪ್ರಮಾಣದಲ್ಲಿದೆ. ಪ್ಯಾಕೇಜ್ 1ರಲ್ಲಿ ಶೇ. 7.9ರಷ್ಟು ಹೆಚ್ಚಿದೆ. ಪರಿಷ್ಕೃತ ಡಿಪಿಆರ್ ಪ್ರಕಾರ 12,198.14 ಕೋಟಿ ಗೆ ಎದುರಾಗಿ ಬಿಡ್‌ದಾರರದ್ದು 13,156.27 ಕೋಟಿ ಇದೆ. ಮತ್ತು ಪ್ಯಾಕೇಜ್ 2ರಲ್ಲಿ ಶೇ. 4.9ರಷ್ಟು ಹೆಚ್ಚಿದೆ. ಪರಿಷ್ಕೃತ ಡಿಪಿಆರ್ ಪ್ಕರಾರ 13,028.04 ಕೋಟಿ ಗೆ ಎದುರಾಗಿ ಬಿಡ್‌ದಾರರದ್ದು 13,664.66 ಕೋಟಿ ಇದೆ ಎಂದು ಆರ್ಥಿಕ ಇಲಾಖೆಯು ತನ್ನ ಅವಲೋಕನದಲ್ಲಿ ವಿವರಿಸಿದೆ.

‘ಆದಾಗ್ಯೂ ಖರೀದಿ/ಟೆಂಡರ್ ನಿಯಮಗಳ ಪ್ರಕಾರ, ನಿಜವಾದ ಬಿಡ್ ಸಲ್ಲಿಕೆಯ ಅಂತಿಮ ದಿನಾಂಕವಾದ ನವೆಂಬರ್ 11, 2025ರಂದು ಚಾಲ್ತಿಯಲ್ಲಿದ್ದ ವೆಚ್ಚಗಳನ್ನು ಪ್ರತಿಬಿಂಬಿಸುವಂತೆ ಡಿಪಿಆರ್ ಅನ್ನು ನವೀಕರಿಸಬೇಕಾಗಿತ್ತು. ಬಿಡ್ ಸಲ್ಲಿಕೆಯಾದ ಸುಮಾರು ಆರು ತಿಂಗಳ ನಂತರದ ದಿನಾಂಕದವರೆಗೆ ಮೂಲ ಅಂದಾಜನ್ನು ನವೀಕರಿಸುವುದರಿಂದ, ಬಿಡ್‌ದಾರರು ಉಲ್ಲೇಖಿಸಿರುವ ವಾಸ್ತವಿಕ ಪ್ರೀಮಿಯಂ ಕೃತಕವಾಗಿ ಕಡಿಮೆಯಾಗಿ ಕಾಣುತ್ತದೆ,’ ಎಂದು ಅವಲೋಕಿಸಿರುವುದು ಗೊತ್ತಾಗಿದೆ.
ಹಣಕಾಸಿನ ಹೊಣೆಗಾರಿಕೆ ಸೀಮಿತವಾಗಿದೆಯೇ?
ವಿಜಿಎಫ್‌ನ್ನು ಸ್ಪಷ್ಟವಾಗಿ ಮಿತಿಗೊಳಿಸಿದೆ ಎಂದಿರುವ ಆರ್ಥಿಕ ಇಲಾಖೆಯು ಹೀಗಾಗಿ ಸರ್ಕಾರದ ಹಣಕಾಸಿನ ಬದ್ಧತೆ ಅತ್ಯಂತ ಸುರಕ್ಷಿತ ಮತ್ತು ಊಹಿಸಬಹುದಾದಂತಿದೆ. ರಾಜ್ಯದ ನೇರ ವಿಜಿಎಫ್ ಕೊಡುಗೆಯನ್ನು ಪ್ಯಾಕೇಜ್-1ಕ್ಕೆ ರೂ.3,508.01 ಕೋಟಿ ಮತ್ತು ಪ್ಯಾಕೇಜ್-2ಕ್ಕೆ ರೂ.3,571.37 ಕೋಟಿ ಎಂಬ ನಿಗದಿತ ಮೊತ್ತದಲ್ಲಿ ರಚಿಸಲಾಗಿದೆ. ಒಟ್ಟು ಮೊತ್ತ ರೂ.7,079.38 ಕೋಟಿ ಆಗಿದೆ. ಬಿಡ್‌ದಾರರ ಅಂತಿಮ ಟಿಸಿವಿ ಏನೇ ಇದ್ದರೂ ಇದರಿಂದ ಬಜೆಟ್‌ನಲ್ಲಿನ ಖಚಿತತೆ ಖಾತ್ರಿಯಾಗುತ್ತದೆ ಎಂದು ಹೇಳಿದೆ.
ಆದ್ದರಿಂದ, ಆ ಅರ್ಥದಲ್ಲಿ ರಾಜ್ಯದ ಹೊಣೆಗಾರಿಕೆ ಸೀಮಿತ ಮತ್ತು ನಿಗದಿತವಾಗಿದೆ. ಆದರೆ ಅಂತಿಮವಾಗಿ ಬಳಕೆದಾರರು ದೀರ್ಘಾವಧಿಯವರೆಗೆ (30+10 ವರ್ಷಗಳು) ಟೋಲ್ ಪಾವತಿಸಬೇಕಾಗಬಹುದು ಎಂದು ಅವಲೋಕಿಸಿದೆ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿದಾಗ ಬಿಡ್‌ದಾರರು ಹೇಳಿರುವ ಸಂಚಾರ ಒತ್ತಡದ ಬೆಳವಣಿಗೆ ನಿರೀಕ್ಷೆಗಳನ್ನು ಆಧರಿಸಿ ಗಮನಾರ್ಹವಾಗಿ ಹೆಚ್ಚಿನ ಟಿಸಿವಿಯನ್ನು ಉಲ್ಲೇಖಿಸಿದಂತಿದೆ. ರಿಯಾಯಿತಿ ಅವಧಿಯಲ್ಲಿ ಗರಿಷ್ಠ ಟೋಲ್ ಸಂಗ್ರಹಣೆಯನ್ನು ಸಾಧಿಸುವ ಉದ್ದೇಶದಿಂದ ಈ ರೀತಿಯ ದರ ನಿಗದಿಪಡಿಸಿರುವ ಸಾಧ್ಯತೆ ಇದೆ ಎಂದು ಅಂದಾಜಿಸಿದೆ.
ರಿಯಾಯಿತಿ (Concession) ವ್ಯವಸ್ಥೆಯು ಆರಂಭಿಕ 30 ವರ್ಷಗಳ ಅವಧಿಗೆ ಟೋಲ್ ಸಂಗ್ರಹಿಸಲು ಅವಕಾಶ ನೀಡುತ್ತದೆ. ಮತ್ತು ಉಲ್ಲೇಖಿಸಲಾದ ಟಿಸಿವಿಯನ್ನು ಸಾಧಿಸುವ ಷರತ್ತಿನೊಂದಿಗೆ ಇದನ್ನು ಹೆಚ್ಚುವರಿ 10 ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ. ಉಲ್ಲೇಖಿಸಲಾದ ಟಿಸಿವಿ ಯ ಪ್ರಮಾಣ ಮತ್ತು ಬಿಡ್‌ದಾರರ ಸ್ವಂತ ಆದಾಯದ ಅಂದಾಜುಗಳನ್ನು ಗಮನಿಸಿದರೆ, ಬಿಡ್‌ದಾರರು ಅನುಮತಿಸಲಾದ ಸಂಪೂರ್ಣ 40 ವರ್ಷಗಳ ಟೋಲ್ ಸಂಗ್ರಹಣೆಯ ಅವಧಿಯನ್ನು ಬಳಸಿಕೊಳ್ಳಲು ಉದ್ದೇಶಿಸಿರುವಂತೆ ಕಾಣುತ್ತದೆ ಎಂದು ಅವಲೋಕಿಸಿದೆ.
ಇದಲ್ಲದೆ, ಈ ಯೋಜನೆಯು ಭೂಗತ ಸುರಂಗ ನಿರ್ಮಾಣಕ್ಕೆ ಸಂಬಂಧಿಸಿದ ಗಣನೀಯ ತಾಂತ್ರಿಕ ಮತ್ತು ಅನುಷ್ಠಾನ ಅಪಾಯಗಳನ್ನು ಒಳಗೊಂಡಿದೆ ಎಂಬುದನ್ನು ಗಮನಿಸುವುದು ಅಗತ್ಯ. ಈ ಅಂಶಗಳು ಬಿಡ್‌ದಾರರ ಬೆಲೆ ನಿಗದಿ ತಂತ್ರದ ಮೇಲೆ ಪ್ರಭಾವ ಬೀರಿರಬಹುದು. ಈ ಅಂಶಗಳ ಹಿನ್ನೆಲೆಯಲ್ಲಿ, ಯೋಜನೆಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಸುರಕ್ಷತಾ ಕ್ರಮಗಳು ಹಾಗೂ ಮೇಲ್ವಿಚಾರಣಾ ವ್ಯವಸ್ಥೆಗಳು ಅಗತ್ಯವಾಗಬಹುದು ಎಂದು ಆರ್ಥಿಕ ಇಲಾಖೆಯು ಆಡಳಿತ ಇಲಾಖೆಗೆ ತಿಳಿಸಿದೆ.
ಅದೇ ಸಮಯದಲ್ಲಿ, ಬಿಡ್‌ದಾರರು ಉಲ್ಲೇಖಿಸಿರುವ ಟಿಸಿವಿಯ ಮೂಲ ಡಿಪಿಆರ್ ಆಧಾರಿತ ಅಂದಾಜುಗಳಿಗಿಂತ ಗಣನೀಯವಾಗಿ ಹೆಚ್ಚಾಗಿದೆ ಎಂಬುದನ್ನು ಗಮನಿಸಲಾಗಿದೆ. ಡಿಪಿಆರ್ ಸಲಹೆಗಾರರು ನಂತರ ಕೈಗೊಂಡ ಪರಿಷ್ಕರಣೆಗಳಿಂದ ಡಿಪಿಆರ್ ಅಂದಾಜುಗಳು ಮತ್ತು ಉಲ್ಲೇಖಿತ ಬಿಡ್ ನಡುವಿನ ಅಂತರ ಕಡಿಮೆಯಾಗಿವೆ. ಆದರೂ ಪ್ರಚಲಿತ ಮಾರುಕಟ್ಟೆ ಪರಿಸ್ಥಿತಿಗಳ ಆಧಾರದ ಮೇಲೆ ಮರು-ಟೆಂಡರ್ (re-tendering) ಪರಿಸ್ಥಿತಿಯನ್ನು ಅನುಕರಿಸುವುದು ಹಾಗೂ ಬಿಡ್‌ನ ಮೊತ್ತ ಹೆಚ್ಚಾಗಲು ಕಾರಣವಾಗಿರಬಹುದು. ಹೀಗಾಗಿ ಈ ಅಂಶಗಳನ್ನು ಗುರುತಿಸುವ ಉದ್ದೇಶದಿಂದಲೇ ಈ ಪರಿಷ್ಕರಣೆಗಳನ್ನು ಮುಖ್ಯವಾಗಿ ಕೈಗೊಳ್ಳಲಾಗಿದೆ ಎಂದು ಆರ್ಥಿಕ ಇಲಾಖೆಯು ಹೇಳಿದೆ.
ಬಿಡ್‌ದಾರರ ಸ್ವಂತ ಆದಾಯದ ಅಂದಾಜುಗಳನ್ನು ಉಲ್ಲೇಖಿತ ಟಿಸಿವಿಗೆ ಗೆ ಸಮರ್ಥನೆಯಾಗಿ ಪರಿಗಣಿಸಬಾರದು. ಇದಲ್ಲದೆ ಬಿ ಸ್ಮೈಲ್ ನ ವ್ಯವಸ್ಥಾಪಕ ನಿರ್ದೇಶಕರ ಮಟ್ಟದಲ್ಲಿ ನಡೆಸಿದ ಮಾತುಕತೆಯ ಪರಿಣಾಮವಾಗಿ, ಒಟ್ಟು ಟಿಸಿವಿಯಲ್ಲಿ ಅಲ್ಪ ಪ್ರಮಾಣದ ಮಾತ್ರ ಕಡಿತವಾಗಿದೆ. ರೂ.22,267.90 ಕೋಟಿಯಿಂದ ರೂ.22,000.50 ಕೋಟಿಗೆ ಇಳಿಕೆಯಾಗಿದೆ. ಇದು ಸುಮಾರು ಶೇ. 1.2ರಷ್ಟು ಕಡಿತವಾಗಿದೆ.

‘ಆದ್ದರಿಂದ, ಉಲ್ಲೇಖಿತ ಟಿಸಿವಿಯು ಇನ್ನೂ ಹೆಚ್ಚಿನ ಮಟ್ಟದಲ್ಲಿಯೇ ಉಳಿದಿದೆ. ಮತ್ತು ಬಿಡ್‌ನ್ನು ಅಂಗೀಕರಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಮೊದಲು ಬಿ ಸ್ಮೈಲ್ ಮಂಡಳಿಗಿಂತ ಮೇಲ್ಮಟ್ಟದಲ್ಲಿ ಮತ್ತಷ್ಟು ಮಾತುಕತೆ ನಡೆಸಲು ಸಾಕಷ್ಟು ವ್ಯಾಪ್ತಿ ಮತ್ತು ಆಧಾರಗಳಿವೆ,’ ಎಂದು ಹಣಕಾಸು ಇಲಾಖೆಯು ಅಭಿಪ್ರಾಯಿಸಿದೆ.
ಇಂತಹ ಮಾತುಕತೆಯಿಂದ ಸುರಂಗದ ಬಳಕೆದಾರರಾಗಲಿರುವ ನಾಗರಿಕರು ಬಿಡ್‌ದಾರರಿಗೆ ಟೋಲ್ ಪಾವತಿಸಬೇಕಾದ ಅವಧಿ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹಣಕಾಸು ಇಲಾಖೆಯು ಆಡಳಿತ ಇಲಾಖೆಗೆ ತಿಳಿಸಿದೆ. ಇದಕ್ಕೆ ಮುಖ್ಯಮಂತ್ರಿಯವರೂ ನಿರ್ದೇಶನ ನೀಡಿದ್ದಾರೆ.
‘ಮುಖ್ಯಮಂತ್ರಿಯವರ ನಿರ್ದೇಶನದಂತೆ, ಮೇಲಿನ ಅವಲೋಕನಗಳೊಂದಿಗೆ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸುವ ಮೊದಲು ಪುನಃ ಸಲ್ಲಿಸಬೇಕು,’ ಎಂದು ಆರ್ಥಿಕ ಇಲಾಖೆಯು ಆಡಳಿತಾತ್ಮಕ ಇಲಾಖೆಗೆ ಸೂಚಿಸಿದೆ.
ಸುರಂಗ ಮಾರ್ಗ; ಯೋಜನೆಯೇ ದುಬಾರಿ, ಹಠಾತ್ ಬೃಹತ್ ಹೊರೆ, ಆರ್ಥಿಕ ಇಲಾಖೆ ಅಭಿಪ್ರಾಯ ಬದಿಗೊತ್ತಿದ್ದ ಸರ್ಕಾರ
ಸುರಂಗ ಮಾರ್ಗ ಯೋಜನೆಯೇ ಭಾರೀ ದುಬಾರಿ ಎಂದು ಆರ್ಥಿಕ ಇಲಾಖೆ ಹೇಳಿತ್ತು.
ಬಿಬಿಸಿಗೆ ಸಂಪನ್ಮೂಲವಿಲ್ಲವೆಂದಿದ್ದ ಬಿಡಿಎ,ಅವಳಿ ಸುರಂಗ ಮಾರ್ಗ ನಿರ್ಮಾಣಕ್ಕೆ ಆರ್ಥಿಕ ಸಬಲತೆ ಹೊಂದಿದೆಯೇ?
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಗೆ ಹಣಕಾಸು ಹೊಂದಿಸಲು ಏದುಸಿರು ಬಿಡುತ್ತಿರುವ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಸುರಂಗ ಮಾರ್ಗ ನಿರ್ಮಾಣ ಯೋಜನೆಗೆ ಕೈ ಹಾಕಿರುವುದು ಚರ್ಚೆಗೆ ಗ್ರಾಸವಾಗಿತ್ತು.
ಸುರಂಗ ಮಾರ್ಗ; ಆರ್ಥಿಕ ಇಲಾಖೆ ಅವಲೋಕನಗಳಿಗೆ ಸ್ಪಷ್ಟ ಅಭಿಪ್ರಾಯ ನೀಡಲು ನಗರಾಭಿವೃದ್ದಿ ಇಲಾಖೆ ನಿರ್ದೇಶನ
ಸುರಂಗ ಮಾರ್ಗ ಯೋಜನೆಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು ಈ ಹಿಂದೆಯೂ ಅವಲೋಕಿಸಿತ್ತು.
ಸಂಚಾರ ದಟ್ಟಣೆ ಕಡಿಮೆಯಾದರೂ 40 ವರ್ಷಕ್ಕೆ ಗುತ್ತಿಗೆ ನೀಡಲು ಸರ್ಕಾರವು ಮುಂದಾಗಿದೆ.
ಸುರಂಗ ಮಾರ್ಗ; ಅದಾನಿ ಎಂಟರ್ ಪ್ರೈಸೆಸ್‌ಗೆ ಬಿಟ್ಟಿ ರಿಯಲ್ ಎಸ್ಟೇಟ್ ಆದಾಯ ಭಾಗ್ಯ ಕರುಣಿಸಲಿದೆಯೇ ಸರ್ಕಾರ?
ಸುರಂಗ ಮಾರ್ಘ ಯೋಜನೆ ಮೂಲಕ ಸರ್ಕಾರವು ಅದಾನಿ ಎಂಟರ್ ಪ್ರೈಸೆಸ್‌ಗೆ ಬಿಟ್ಟಿಯಾಗಿ ರಿಯಲ್ ಎಸ್ಟೇಟ್ ಭಾಗ್ಯವನ್ನು ಕರುಣಿಸಲು ಮುಂದಾಗಿದೆ ಎಂದು ನಗರ ತಜ್ಞರು ಆರೋಪಿಸಿದ್ದರು. ಈ ಎಲ್ಲದರ ಕುರಿತು ದಿ ಫೈಲ್ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.




