‘ನಿಮ್ಮ ಸರ್ಕಾರಕ್ಕಂತೂ ರೈತರಿಗೆ ಬರ ಪರಿಹಾರ ನೀಡುವ ಯೋಗ್ಯತೆ ಇಲ್ಲ’; ‘ದಿ ಫೈಲ್‌’ ವರದಿ ಬೆನ್ನಲ್ಲೇ ಅಶೋಕ್‌ ಟೀಕೆ

ಬೆಂಗಳೂರು; ಆಡಳಿತ ಪಕ್ಷದ ಶಾಸಕರು ಪ್ರತಿನಿಧಿಸುವ ವಿಧಾನಸಭೆ ಕ್ಷೇತ್ರಗಳಲ್ಲಿನ ರೈತರಿಗೂ 2023ನೇ ಸಾಲಿನ  ಪೂರ್ಣ ಪ್ರಮಾಣದಲ್ಲಿ ಬರ ಪರಿಹಾರವು ದೊರೆತಿಲ್ಲ ಎಂದು ‘ದಿ ಫೈಲ್‌’ ಪ್ರಕಟಿಸಿದ್ದ ವರದಿ ಆಧರಿಸಿ ಪ್ರತಿಪಕ್ಷ ನಾಯಕ ಆರ್‍‌ ಅಶೋಕ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 

‘ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಟೀಕೆ ಮಾಡಿದರೆ, ಜನರ ಸಮಸ್ಯೆಗಳಿಗೆ ದನಿಯಾದರೆ, ಅಜ್ಞಾನ ಪ್ರದರ್ಶನ ಮಾಡುತ್ತಾರೆ, ಮನರಂಜನೆ ನೀಡುತ್ತಾರೆ ಎಂದು ಅಧಿಕಾರದ ಮದವೇರಿದ ಸರ್ವಾಧಿಕಾರಿಯಂತೆ ದರ್ಪದ ಮಾತಾಡುತ್ತೀರಲ್ಲ ಸಿಎಂ ಸಿದ್ದರಾಮಯ್ಯ ನವರೇ, ರೈತರಿಗೆ ತಲುಪಬೇಕಾದ ಬರ ಪರಿಹಾರ ಇನ್ನೂ ತಲುಪಿಲ್ಲ ಎಂದು ಸ್ವತಃ ತಮ್ಮ ಕಾಂಗ್ರೆಸ್ ಪಕ್ಷದ ಶಾಸಕರೇ ಪತ್ರ ಬರೆದು ತಮ್ಮ ಬಂಡವಾಳ ಬಯಲು ಮಾಡಿದ್ದಾರೆ ನೋಡಿ,’ ಎಂದು ‘ದಿ ಫೈಲ್‌’ ವರದಿಯ ತುಣುಕನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

ಟ್ವೀಟ್‌ನಲ್ಲೇನಿದೆ?

 

ನವಲಗುಂದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಶ್ರೀ ಎನ್.ಎಚ್.ಕೋನರೆಡ್ಡಿ ಅವರು ತಮ್ಮ ಕ್ಷೇತ್ರದಲ್ಲಿ ಇನ್ನೂ ಕೆಲವು ರೈತರಿಗೆ ಬರ ಪರಿಹಾರ ವಿತರಣೆ ಆಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತೆ, ನಿಮ್ಮ ಸರ್ಕಾರಕ್ಕಂತೂ ರೈತರಿಗೆ ಬರ ಪರಿಹಾರ ನೀಡುವ ಯೋಗ್ಯತೆ ಇಲ್ಲ.

 

ಕನಿಷ್ಠ ಪಕ್ಷ, ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ನೀಡಿರುವ ₹3,454 ಕೋಟಿ ರೂಪಾಯಿ ಬರ ಪರಿಹಾರವನ್ನಾದರೂ ರೈತರಿಗೆ ವಿತರಣೆ ಮಾಡಿ ಅಂದರೆ ಅದೂ ನಿಮ್ಮ ಕೈಯಲ್ಲಿ ಆಗುತ್ತಿಲ್ಲ. ರೈತರ ಕಷ್ಟಕ್ಕೆ ಸ್ಪಂದಿಸಲಾಗದ ಸರ್ಕಾರ ಇದ್ದರೆಷ್ಟು ಹೋದರೆಷ್ಟು. ಬರ ಪರಿಹಾರ ಸಮಯಕ್ಕೆ ಸರಿಯಾಗಿ ರೈತರ ಕೈಸೇರುವಂತೆ ನೋಡಿಕೊಳ್ಳಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಅದು ಬಿಟ್ಟು ರೈತರ ಬದುಕಿನ ಜೊತೆ ಚೆಲ್ಲಾಟವಾಡಬೇಡಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

 

ಆಡಳಿತ ಪಕ್ಷದ ಶಾಸಕರು ಪ್ರತಿನಿಧಿಸುವ ವಿಧಾನಸಭೆ ಕ್ಷೇತ್ರಗಳಲ್ಲಿನ ರೈತರಿಗೂ 2023ನೇ ಸಾಲಿನ  ಪೂರ್ಣ ಪ್ರಮಾಣದಲ್ಲಿ ಬರ ಪರಿಹಾರವು ದೊರೆತಿಲ್ಲ. ಹೀಗಾಗಿ ಹಲವು ಶಾಸಕರು ಬಹುಮಹಡಿ ಕಟ್ಟಡದಲ್ಲಿರುವ ಕಂದಾಯ ಇಲಾಖೆಗೆ ದಾಂಗುಡಿಯಿಟ್ಟಿದ್ದರ ಬಗ್ಗೆ ‘ದಿ ಫೈಲ್‌’ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

 

ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೂ ಪೂರ್ಣ ತಲುಪಿಲ್ಲ ಬರ ಪರಿಹಾರ

ಬರ ಪೀಡಿತ ಪ್ರದೇಶಗಳ ರೈತರಿಗೆ ಮೊದಲ ಮತ್ತು ಎರಡನೇ ಕಂತಿನ ಪರಿಹಾರದ ಮೊತ್ತವನ್ನು ವಿತರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು  ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಭರ್ಜರಿ ಪ್ರಚಾರ ತೆಗೆದುಕೊಂಡಿದ್ದರು.

 

ಅಲ್ಲದೇ 16 ಲಕ್ಷ ಸಣ್ಣ, ಅತೀ ಸಣ್ಣ ರೈತರಿಗೆ ತಲಾ 3,000 ರು ನಂತೆ ಪರಿಹಾರ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದರು.  ಆದರೇ ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೂ ಪೂರ್ಣ ಪ್ರಮಾಣದಲ್ಲಿ ಬರ ಪರಿಹಾರದ ಮೊತ್ತವನ್ನು ಪಾವತಿಸಿಲ್ಲ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.

 

2023ರ ಬರ ಪರಿಹಾರವನ್ನು ರೈತರಿಗೆ ವಿತರಣೆ ಮಾಡುವ ಸಂಬಂಧ ನವಲಗುಂದ ವಿಧಾನಸಭೆ ಕ್ಷೇತ್ರದ ಶಾಸಕ ಎನ್‌ ಹೆಚ್‌ ಕೋನರೆಡ್ಡಿ ಅವರು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರವನ್ನು ಬರೆದಿದ್ದರು. ಈ ಪತ್ರವನ್ನಾಧರಿಸಿ ವಿಪತ್ತು ನಿರ್ವಹಣೆ ವಿಭಾಗದ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಧಾರವಾಡ ಜಿಲ್ಲಾಧಿಕಾರಿಗೆ 2024ರ ಜನವರಿ 11ರಂದು ಪತ್ರ (ಸಂಖ್ಯೆ; ಕಂಇ 166 ಟಿಎನ್‌ಆರ್‍‌ 2024)  ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

ನವಲಗುಂದ ವಿಧಾನಸಭೆ ಕ್ಷೇತ್ರದ ಶಾಸಕ ಎನ್‌ ಹೆಚ್‌ ಕೋನರೆಡ್ಡಿ ಅವರು ತಮ್ಮ ಕ್ಷೇತ್ರದ ಕೆಲವು ರೈತರಿಗೆ ಬರ ಪರಿಹಾರ ವಿತರಣೆಯಾಗಿಲ್ಲ ಎಂದು ತಿಳಿಸಿದ್ದು, ಶಾಸಕರ ಕೋರಿಕೆ ಮೇರೆಗೆ ಕೇಂದ್ರ ಸರ್ಕಾರದ ಎಸ್‌ಡಿಆರ್‍‌ಎಫ್‌ ಮತ್ತು ಎನ್‌ಡಿಆರ್‍‌ಎಫ್‌ ಮಾರ್ಗಸೂಚಿಗಳನ್ವಯ ಹಾಗೂ ಕಾಲಕಾಲಕ್ಕೆ ಸರ್ಕಾರದಿಂದ ಹೊರಡಿಸಲಾಗಿರುವ ಅಧಿಸೂಚನೆ, ಆದೇಶ, ಸುತ್ತೋಲೆಗಳ ಅನ್ವಯ ಸಂಬಂಧಿಸಿದವರಿಗೆ ಹಿಂಬರಹ ನೀಡಬೇಕು ಎಂದು ಕಂದಾಯ ಇಲಾಖೆಯು ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಧಾರವಾಡ ಜಿಲ್ಲಾಧಿಕಾರಿಗೆ ನಿರ್ದೇಶಿಸಿದ್ದರು.

 

 

ಮೊದಲ ಹಂತದ ಇನ್‌ಪುಟ್‌ ಸಬ್ಸಿಡಿ ಪೈಕಿ 33.58 ಲಕ್ಷ ರೈತರಿಗೆ 636.45 ಕೋಟಿ ರು. ಪರಿಹಾರ ಮೊತ್ತ ಪಾವತಿಸಿದೆ. ಆದರೆ ಇದೇ ಮೊದಲ ಹಂತದಲ್ಲಿ ಪೂರ್ಣ ಮೊತ್ತವನ್ನು ಪಡೆದ ರೈತರ ಸಂಖ್ಯೆ ಕೇವಲ 4.36 ಲಕ್ಷ ಮಾತ್ರ. ಪೂರ್ಣ ಮೊತ್ತದ ಪರಿಹಾರ 29.22 ಲಕ್ಷ ರೈತರಿಗೆ ದೊರೆಯಬೇಕಿತ್ತು. ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ಸಚಿವಾಲಯವು 2024ರ ಮೇ 9ರಂದು ಆಯೋಜಿಸಿದ್ದ ಅಧಿಕಾರಿಗಳೊಂದಿಗಿನ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಈ ದತ್ತಾಂಶಗಳನ್ನು ಮಂಡಿಸಲಾಗಿತ್ತು.  ಈ ದತ್ತಾಂಶಗಳ ಪ್ರಕಾರ ಬೆಳಗಾವಿಯಲ್ಲಿ ಮೊದಲ ಹಂತದಲ್ಲಿ 3,52,205 ರೈತರಿಗೆ 65.47 ಕೋಟಿ ರು ಪಾವತಿಯಾಗಿದೆ. ಆದರೆ ಇದೇ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 70,587 ರೈತರಿಗೆ ಮಾತ್ರ 12.01 ಕೋಟಿ ರು.ನ ಪೂರ್ಣ ಮೊತ್ತ ಪಾವತಿಸಿದೆ. ಇನ್ನೂ 2.81 ಲಕ್ಷ ರೈತರಿಗೆ ಪೂರ್ಣ ಮೊತ್ತ ಪಾವತಿಸಲು ಬಾಕಿ ಉಳಿಸಿಕೊಂಡಿರುವುದು ದತ್ತಾಂಶಗಳಿಂದ ಕಂಡುಬಂದಿತ್ತು.

the fil favicon

SUPPORT THE FILE

Latest News

Related Posts