ಬೆಂಗಳೂರು; ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ನೂರು ದಿನ ಪೂರೈಸಿದ್ದ ಸಂದರ್ಭದಲ್ಲಿ ಮೊದಲ ಹಂತದಲ್ಲೇ 5 ಲಕ್ಷ ನಿವೇಶನ ವಿತರಿಸಲಾಗುವುದು ಎಂದು ಘೋಷಿಸಿದೆ. ಆದರೆ ಕಂದಾಯ ಇಲಾಖೆಯು ಈ ಸಂಬಂಧ ನಿಗದಿಪಡಿಸಿದ್ದ ಗುರಿಗೆ ಆರ್ಥಿಕ ಇಲಾಖೆಯು ತಕರಾರು ಎತ್ತಿರುವುದು ಇದೀಗ ಬಹಿರಂಗವಾಗಿದೆ.
ಅಲ್ಲದೇ ಈ ಯೋಜನೆಗೆ ಆರ್ಥಿಕ ಇಲಾಖೆಯು ಕೇವಲ ತಾತ್ವಿಕ ಅನುಮೋದನೆಯನ್ನಷ್ಟೇ ನೀಡಿದೆಯೇ ವಿನಃ ಆಡಳಿತಾತ್ಮಕ ಅನುಮೋದನೆಯನ್ನು ನೀಡಿಯೇ ಇಲ್ಲ. ಹಾಗೆಯೇ ಹಣಕಾಸಿನ ಬದ್ಧತೆಗೆ ಬದ್ಧವಾಗಲು ಸಾಧ್ಯವಿಲ್ಲ ಎಂದೂ ಆರ್ಥಿಕ ಇಲಾಖೆಯು ಹೇಳಿರುವುದು ಇದೀಗ ಬಹಿರಂಗವಾಗಿದೆ. ಅದೇ ರೀತಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೈನಿಕರಿಗೆ, ಮಾಜಿ ಸೈನಿಕರಿಗೆ ಜಮೀನು ಮಂಜೂರು ಮಾಡಲು ಸರ್ಕಾರಿ ಜಮೀನುಗಳ ಕೊರತೆಯಿದೆ ಎಂದು ಕಂದಾಯ ಇಲಾಖೆಯೂ ಹೇಳಿದೆ.
‘ಒಂದು ಜಿಲ್ಲೆಯಲ್ಲಿ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದೇವೆ. ರಾಜ್ಯಾದ್ಯಂತ ಮೊದಲ ಹಂತದಲ್ಲಿ 5 ಲಕ್ಷ ನಿವೇಶನಗಳನ್ನು ಮುಂದಿನ ಎರಡು ತಿಂಗಳಲ್ಲಿ ಕೊಡುವ ಗುರಿಯಿದೆ,’ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ಜಂಟಿಯಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೆ ಈ ಗುರಿ ನಿಗದಿಪಡಿಸಿದ್ದರ ಬಗ್ಗೆ ಆರ್ಥಿಕ ಇಲಾಖೆಯು ಎತ್ತಿರುವ ತಕರಾರು ಕೂಡ ಮುನ್ನೆಲೆಗೆ ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2026ರ ಸೆ.9ರಂದು ಪತ್ರ (FD/601/EXP7/2025- RD-LGP/35/2026 DATED 09-09-2926) ಬರೆದಿತ್ತು.
ಚುನಾವಣಾ ಪ್ರಣಾಳಿಕೆಯಲ್ಲಿಯೇ ತಿಳಿಸಿರುವಂತೆ ವಸತಿ ರಹಿತರಿಗೆ ಪ್ರತೀ ಜಿಲ್ಲೆಯಲ್ಲಿ ತಲಾ 50 ಸಾವಿರ ನಿವೇಶನಗಳನ್ನು ತಕ್ಷಣ ಗುರುತಿಸುವಂತೆ ಕಂದಾಯ ಇಲಾಖೆಗೆ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಪತ್ರ ಬರೆದಿದ್ದರು. ಈ ಸಂಬಂಧ ಕಂದಾಯ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ಮೂರು ಅಂಶಗಳನ್ನೊಳಗೊಂಡ ಅಭಿಪ್ರಾಯವನ್ನು ತಿಳಿಸಿತ್ತು.
ಆರ್ಥಿಕ ಇಲಾಖೆಯ ಅಭಿಪ್ರಾಯದಲ್ಲೇನಿದೆ?
ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ಆಡಳಿತ ಇಲಾಖೆಯು ಹಣಕಾಸಿನ ಪರಿಣಾಮಗಳನ್ನು ಸ್ಪಷ್ಟವಾಗಿ ತಿಳಿಸಿಲ್ಲ ಎಂದು ಹೇಳಿತ್ತು. ಹಾಗೂ ಯಾವುದೇ ಫಲಾನುಭವಿಯ ಪಾಲಿನ ಕುರಿತು ಯಾವುದೇ ನಿರ್ದಿಷ್ಟ ರೂಪುರೇಷೆಯನ್ನು ನೀಡಿಲ್ಲ. ಯೋಜನೆಯ ವ್ಯಾಪ್ತಿ ಮತ್ತು ಇದರಲ್ಲಿ ಒಳಗೊಂಡಿರುವ ಸಾರ್ವಜನಿಕ ಹಣದ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಹಲವು ಸಲಹೆಗಳನ್ನು ನೀಡಿತ್ತು.
ಒಂದೇ ಹಂತದಲ್ಲಿ 5 ಲಕ್ಷ ನಿವೇಶನಗಳನ್ನು ಗುರಿಯಾಗಿಸುವ ಬದಲು, ಹಂತ ಹಂತವಾಗಿ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು. ಈ ಯೋಜನೆಗೆ ವಿವರವಾದ ಹಣಕಾಸಿನ ಅಂಶಗಳು ಲಭ್ಯವಿಲ್ಲದಿರುವುದರಿಂದ ಸದ್ಯ ತಾತ್ವಿಕವಾಗಿ ಅನುಮೋದನೆ ನೀಡಬಹುದು. ಸರ್ಕಾರವು ತಿಳಿಯದ ಪ್ರಮಾಣದ ಹಣಕಾಸಿನ ಬಾಧ್ಯತೆಗೆ ಬದ್ಧವಾಗಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಕಂದಾಯ ಇಲಾಖೆಗೆ ತಿಳಿಸಿದೆ.
ಹಾಗೆಯೇ ಈ ಯೋಜನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗಳು ಸಮಗ್ರ ವೆಚ್ಚದ ಅಂದಾಜನ್ನು ಸಿದ್ಧಪಡಿಸಬೇಕು. ಮತ್ತು ನಿವೇಶನಗಳ ಆಯ್ಕೆ, ನಿವೇಶನಗಳ ಅಭಿವೃದ್ಧಿ, ಫಲಾನುಭವಿಗಳ ಆಯ್ಕೆ, ಫಲಾನುಭವಿ/ನಗರಾಭಿವೃದ್ಧಿ ಪ್ರಾಧಿಕಾರ (UDA)/ಸ್ಥಳೀಯ ಸಂಸ್ಥೆ/ಯಾವುದೇ ಇತರೆ ಮಂಡಳಿ ಅಥವಾ ನಿಗಮದೊಂದಿಗೆ ವೆಚ್ಚ ಹಂಚಿಕೆಯ ವಿಧಾನಗಳು ಸೇರಿದಂತೆ ಎಲ್ಲಾ ಮಾರ್ಗಸೂಚಿಗಳು ಮತ್ತು ಕಾರ್ಯವಿಧಾನಗಳನ್ನು ಸಚಿವ ಸಂಪುಟದ ಅನುಮೋದನೆಗೆ ಮಂಡಿಸಬೇಕು ಎಂದು ಸಲಹೆ ನೀಡಿದೆ.

ಅದೇ ರೀತಿ ಆರ್ಥಿಕ ಇಲಾಖೆಯು ನೀಡಿರುವ ಅಭಿಪ್ರಾಯದಲ್ಲಿ ಸೈನಿಕ್ ಸಮ್ಮಾನ್ ಯೋಜನೆ ಕುರಿತೂ ಪ್ರಸ್ತಾವಿಸಿದೆ.
ಸೈನಿಕ, ಮಾಜಿ ಸೈನಿಕರಿಗೆ ಜಮೀನು ಮಂಜೂರಾತಿ, ಕಾಯ್ದಿರಿಸಿರುವ ಒತ್ತುವರಿಯನ್ನು ತೆರವುಗೊಳಿಸುವ, ಸ್ವೀಕೃತವಾದ ಅರ್ಜಿಗಳನ್ನು ತಂತ್ರಾಂಶದಲ್ಲಿ ಡಿಜಿಟಲೀಕರಿಸುವುದು, ನಿವೇಶನ ಹಂಚಿಕೆ ಮಾಡುವ ಕುರಿತು ಕಂದಾಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2026ರ ಜುಲೈ 2ರಂದು ಸಭೆ ನಡೆಸಿತ್ತು.
ಮಾಜಿ ಸೈನಿಕರಿಗೆ ಜಮೀನು ಮಂಜೂರು ಮಾಡುವ ಕುರಿಉತ ಉಚ್ಛ ನ್ಯಾಯಾಲಯದಲ್ಲಿ ಈಗಾಗಲೇ ರಿಟ್ ಅರ್ಜಿ (ಸಂಖ್ಯೆ 23010/2024) ದಾಖಲಾಗಿದೆ. ಹಾಗೂ ಇತರೆ 28 ಪ್ರಕರಣಗಳಲ್ಲಿ ನ್ಯಾಯಾಲಯವು 2026ರರ ಜೂನ್ 29ರಂದು ವಿಚಾರಣೆ ನಡೆಸಿದೆ. ಈ ಪೈಕಿ ರಿಟ್ ಅರ್ಜಿ (ಸಂಖ್ಯೆ 25071/2016ರಲ್ಲಿ 2022ರ ಜುಲೈ 28ರಂದು ನೀಡಿದ್ದ ತೀರ್ಪಿನ ಕುರಿತು ಸಭೆಯಲ್ಲಿ ಚರ್ಚಿಸಿದೆ.
ಮಾಜಿ ಸೈನಿಕರುಗಳಿಗಾಗಿ ಕಾಯ್ದರಿಸುವ ಜಮೀನುಗಳ ಮತ್ತು ಅರ್ಜಿಗಳ ಸಂಬಂಧ ಕೈಗೊಂಡ ಕ್ರಮ, ಒತ್ತುವರಿಯನ್ನು ತೆರವುಗೊಳಿಸಿ ನಿಯಮಾನುಸಾರ ಕ್ರಮವಹಿಸಲು ನ್ಯಾಯಾಲಯವು ನಿರ್ದೇಶನ ನೀಡಿತ್ತು. ಅಲ್ಲದೇ ಈ ನಿರ್ದೇಶನದಂತೆ ಕೈಗೊಂಡ ಕ್ರಮದ ಬಗ್ಗೆ ಅಫಡವಿಟ್ನ್ನು 2026ರ ಜುಲೈ 6ರಂದು ದಾಖಲಿಸಬೇಕು ಎಂದು ನಿರ್ದೇಶಿಸಿತ್ತು. ಈ ಪೈಕಿ ಮೈಸೂರು, ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳು ಅಫಡವಿಟ್ ಸಲ್ಲಿಸಿದ್ದರು. ರಾಯಚೂರು, ಚಿಕ್ಕಮಗಳೂರಿನಲ್ಲಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಜಿ ಸೈನಿಕರಿಗೆ ಜಮೀನು ಮಂಜೂರಾತಿ ಸಂಬಂಧ ರಾಜ್ಯದಲ್ಲಿ ಸರ್ಕಾರಿ ಜಮೀನುಗಳ ಕೊರತೆ ಇದೆ ಎಂದು ಹೇಳಲಾಗಿತ್ತು.
ಹೀಗಾಗಿ ವಿವಿಧ ಸಾರ್ವಜನಿಕ, ಸರ್ಕಾರಿ ಯೋಜನೆಗಳಿಗೆ ಜಮೀನು ಅವಶ್ಯಕತೆ ಇರುವುದರಿಂದ ಮಾಜಿ ಸೈನಿಕರಿಗೆ ಜಮೀನು ಮಂಜೂರು ಮಾಡಲು ಸಾಧ್ಯವಾಗುವುದಿಲ್ಲ ಎಂಬ ನಿಲುವನ್ನು ನ್ಯಾಯಾಲಯಕ್ಕೆ ಅಫಡವಿಟ್ ಸಲ್ಲಿಸಿದ್ದರು. ಇದನ್ನು ನ್ಯಾಯಾಲಯವು ಮಾನ್ಯ ಮಾಡಿತ್ತು. ಹಾಗೆಯೇ ಸೈನಿಕ, ಮಾಜಿ ಸೈನಿಕರಿಗೆ ಅವರ ಸೇವಾ ರಿಜಿಸ್ಟರ್ನಲ್ಲಿ ನಮೂದಿಸಿರುವ ಸ್ಥಳೀಯ ತಾಲೂಕಿನಲ್ಲಿ ಅಥವಾ ಸಂಬಂಧಪಟ್ಟ ಜಿಲ್ಲೆಯಲ್ಲಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ (3) ಅಡಿ ಪ್ರಟಕಿಸಿರುವ ಭೂ ಲಭ್ಯತಾ ಪಟ್ಟಿಯಂತೆ ಸರ್ಕಾರಿ ಜಮೀನು ಲಭ್ಯವಿದ್ದಲ್ಲಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮಗಳ ಅನ್ವಯ ಉಚಿತವಾಗಿ ಮಂಜೂರು ಮಾಡಲು ಕ್ರಮ ವಹಿಸಬೇಕು ಎಂದು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದರು.

ಒಂದೊಮ್ಮೆ ಸ್ಥಳೀಯ ತಾಲೂಕಿನಲ್ಲಿ ಜಮೀನು ಲಭ್ಯವಿಲ್ಲದಿದ್ದಲ್ಲಿ ಅರ್ಜಿಯನ್ನು ಅದೇ ಜಿಲ್ಲೆಯ ಯಾವುದಾದರೂ ತಾಲೂಕಿಗೆ ಮಾಥ್ರ ವರ್ಗಾಯಿಸಲು ನಿಯಮ 8(8)ರಡಿಯಲ್ಲಿ ಅವಕಾಶ ಕಲ್ಪಿಸಿದೆ. ಸಂಬಂಧಪಟ್ಟ ಜಿಲ್ಲೆಯಲ್ಲಿ ಯಾವುದಾದರೂ ತಾಲೂಕಿನಲ್ಲಿ ಮಂಜೂರಾತಿಗಾಗಿ ಜಮೀನು ಲಭ್ಯವಿದ್ದಲ್ಲಿ ಮಂಜೂರು ಮಾಡಬೇಕು ಎಂದು ನಿರ್ದೇಶಿಸಿದ್ದರು. ಒಂದು ವೇಳೆ ಅರ್ಜಿದಾರರು ಕೋರಿರುವ ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಲಭ್ಯವಿಲ್ಲದ ಪಕ್ಷದಲ್ಲಿ ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿ ನಗರ ಪ್ರದೇಶದಲ್ಲಿ 1,200 ಚದರ ಅಡಿ ವಿಸ್ತೀರ್ಣದ ನಿವೇಶನವನ್ನು ಅಥವಾ ಗ್ರಾಮೀಣ ಪ್ರದೇಶದಲ್ಲಿ 2400 ಚದರ ಅಡಿ ವಿಸ್ತೀರ್ಣದ ನಿವೇಶನವನ್ನು ಜಾರಿಯಲ್ಲಿರುವ ಸರ್ಕಾರದ ಯಾವುದೇ ವಸತಿ ಯೋಜನೆಯಡಿಯಲ್ಲಿ ಅಥವಾ ಸರ್ಕಾರವು ರೂಪಿಸಬಹುದಾದ ಯಾವುದೇ ವಿಶೇಷ ಯೋಜನೆಯಡಿಯಲ್ಲಿ ನಿವೇಶನ ಮಂಜೂರು ಮಾಡಲು ಕ್ರಮ ವಹಿಸಬಹುದು ಎಂದು ಸೂಚಿಸಿದ್ದರು.

ಚುನಾವಣಾ ಪ್ರಣಾಳಿಕೆಯಂತೆ ಪಂಚ ಗ್ಯಾರಂಟಿಗಳನ್ನು ನೀಡುತ್ತಿರುವ ಕಾಂಗ್ರೆಸ್ ಸರಖಾರ ಇದೀಗ ಮತ್ತೊಂದು ದೊಡ್ಡ ಭಾಗ್ಯವನ್ನು ವಸತಿ ರಹಿತರಿಗೆ ಕೊಡುವ ಘೋಷಣೆ ಮಾಡಿದೆ. ಚುನಾವಣಾ ಪ್ರಣಾಳಿಕೆಯಲ್ಲಿಯೇ ತಿಳಿಸಿರುವಂತೆ ವಸತಿ ರಹಿತರಿಗೆ ಪ್ರತೀ ಜಿಲ್ಲೆಯಲ್ಲಿ ತಲಾ 50 ಸಾವಿರ ನಿವೇಶನಗಳನ್ನು ತಕ್ಷಣ ಗುರುತಿಸುವಂತೆ ಕಂದಾಯ ಇಲಾಖೆಗೆ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಪತ್ರ ಬರೆದಿದ್ದರು.
ಡಿಸಿಎಂ ಜಿ ಪರಮೇಶ್ವರ್ ಬರೆದಿದ್ದ ಪತ್ರದಲ್ಲಿ “ನಮ್ಮ ಸರ್ಕಾರವು ಅಧಿಕಾರಕ್ಕೆ ಬರುವ ಮುನ್ನ ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯದ ಎಲ್ಲಾ ವಸತಿ ರಹಿತರಿಗೆ ನಿವೇಶನಗಳನ್ನು ನೀಡುತ್ತೇವೆಂದು ಘೋಷಿಸಿದ್ದೆವು. ಅದರಂತೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ತಲಾ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ಸರ್ಕಾರವು ಉದ್ದೇಶಿಸಿದ್ದು, ಗ್ರಾಮೀಣ ಪ್ರದೇಶಗಳಲ್ಲಿ 30×40 ಅಡಿ ಅಳತೆಯ ಹಾಗೂ ನಗರ ಪ್ರದೇಶಗಳಲ್ಲಿ 20×30 ಅಡಿ ಅಳತೆಯ ನಿವೇಶನಗಳನ್ನು ಸಿದ್ಧಪಡಿಸಿ ಅರ್ಹರಿಗೆ ಒದಗಿಸಲಾಗುವುದು.” ಎಂದಿದ್ದರು.
ಮುಂದುವರಿದು, “ಈ ನಿಟ್ಟಿನಲ್ಲಿ ಲಭ್ಯವಿರುವ ಹಾಗೂ ಖಾಲಿ ಇರುವ ಸರ್ಕಾರಿ ಜಮೀನುಗಳನ್ನು ತಕ್ಷಣವೇ ಗುರುತಿಸಿ, ನಿವೇಶನಗಳ ರಚನೆಗೆ ಅಗತ್ಯವಿರುವ ಎಲ್ಲಾ ಪ್ರಕ್ರಿಯೆಗಳನ್ನು ಯಾವುದೇ ವಿಳಂಬಕ್ಕೆ ಆಸ್ಪದೆ ನೀಡದೆ ತುರ್ತಾಗಿ ಕೈಗೊಳ್ಳುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ.” ಎಂದು ಹೇಳಿದ್ದರು.
ಅಲ್ಲದೆ ‘ನಾವು ಕೊಟ್ಟ ಮಾತಿಗೆ ಬದ್ಧರಾಗಿ, ಪ್ರಣಾಳಿಕೆಯ ಘೋಷಣೆಗಳನ್ನು ಕಾರ್ಯರೂಪಕ್ಕೆ ತಂದು ನುಡಿದಂತೆ ನಡೆಯುತ್ತಿದ್ದೇವೆ. ಸರ್ವರಿಗೂ ಸ್ವಂತ ಸೂರಿನ ಭಾಗ್ಯವನ್ನು ನೀಡಿ, ಎಲ್ಲರೂ ನೆಮ್ಮದಿಯಿಂದ ಜೀವನ ಸಾಗಿಸುವಂತಾಗಬೇಕು ಎಂಬುದೇ ನಮ್ಮ ಆಶಯ” ಎಂದಿದ್ದಾರೆ. ಈ ಯೋಜನೆಯಂತೆ ಎಲ್ಲಾ ಬಡ ಜನರಿಗೆ ನಿವೇಶನ ಸಿಕ್ಕಲ್ಲಿ ಅನುಕೂಲವಾಗಲಿದೆ. ಯಾವುದೇ ಮದ್ಯವರ್ತಿಗಳು, ಬ್ರೋಕರ್ಗಳ ಹಾವಳಿ ಇಲ್ಲದೆ, ಸರಕಾರವೇ ನಿಜವಾದ ಫಲಾನುಭವಿಗಳನ್ನು ಗುರುತಿಸಿ ಸೈಟ್ ಹಂಚಿಕೆ ಮಾಡಬೇಕಿದೆ,’ ಎಂದು ಹೇಳಿಕೆ ನೀಡಿದ್ದರು.
ವಸತಿ ರಹಿತರಿಗೆ ಮೊದಲ ಹಂತದಲ್ಲಿ 5 ಲಕ್ಷ (30×40) ನಿವೇಶನಗಳ ಹಂಚಿಕೆ, ರೈತರ ನೆರವಿಗೆ ‘ಮುಖ್ಯಮಂತ್ರಿ ನೇಗಿಲ ಯೋಗಿ’ ಮತ್ತು ‘ತೇಗ ಸಿರಿ’ ಯೋಜನೆಗಳನ್ನು ಘೋಷಿಸಲಾಗಿದೆ. ಜೊತೆಗೆ, ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ ಪುನರಾರಂಭ ಹಾಗೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕಾಗಿ ‘ಶಕ್ತಿ ಸ್ಮಾರ್ಟ್ ಕಾರ್ಡ್’ ನೀಡಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನವನ್ನು ಈಗಾಗಲೇ ಪ್ರಕಟಿಸಿದೆ.
ವಸತಿ ಇಲಾಖೆಯ ಮಾಹಿತಿ ಪ್ರಕಾರ 2022-23 ರಿಂದ 2024-25ನೇ ಸಾಲಿನಲ್ಲಿ ಒಟ್ಟು 5,58,168 ಮನೆಗಳನ್ನು ನಿರ್ಮಾಣ ಮಾಡಿದೆ. ನಂತರದ ವರ್ಷಗಳಲ್ಲಿ ಈ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಅಲ್ಲದೇ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ 17,14,946 ಮಂದಿಗೆ ಸ್ವಂತ ಸೂರಿಲ್ಲ. ಹಾಗೆಯೇ 7,03,976 ಮಂದಿಗೆ ಸ್ವಂತ ನಿವೇಶನವೂ ಇಲ್ಲ.
2016,17 ಹಾಗೂ 2017- 18 ನೇ ಸಾಲಿನಲ್ಲಿ ರಾಜ್ಯಾದ್ಯಂತ ನಡೆಸಿದ್ದ ಸಮೀಕ್ಷೆಯ ಪ್ರಕಾರ 3,02,187 ವಸತಿ ರಹಿತರು ಇದ್ದರು. ಹಾಗೂ 10,27,657 ಮಂದಿ ನಿವೇಶನ ರಹಿತರು ಕಂಡು ಬಂದಿದ್ದರು.
2022-23 ರಿಂದ 2024-25ನೇ ಸಾಲಿನವರೆಗೆ 9,00,000 ಮನೆಗಳನ್ನು ನಿರ್ಮಿಸಲು ಸರ್ಕಾರ ಗುರಿ ಹೊಂದಿತ್ತು. ಗ್ರಾಮೀಣ ಪ್ರದೇಶದಲ್ಲಿ 4,21,445 ಹಾಗೂ ನಗರ ಪ್ರದೇಶದಲ್ಲಿ 1,36.723 ಮನೆಗಳು ಒಳಗೊಂಡು ಒಟ್ಟು 5,58,168 ಮನೆಗಳನ್ನು ನಿರ್ಮಾಣ ಮಾಡಲಾಗಿದೆ.
ಬಾಗಲಕೋಟೆಯಲ್ಲಿ ವಸತಿ ರಹಿತರು- 78278, ನಿವೇಶನ ರಹಿತರು- 46898 ಬಳ್ಳಾರಿಯಲ್ಲಿ 48502 ವಸತಿ ರಹಿತರಿದ್ದರೇ ನಿವೇಶನ ರಹಿತರ ಸಂಖ್ಯೆ 67676ಯಷ್ಟಿತ್ತು. ಅದೇ ರೀತಿ ಬೆಳಗಾವಿಯಲ್ಲಿ ವಸತಿ ರಹಿತರು – 217219, ನಿವೇಶನ ರಹಿತರು- 42395 ಬೆಂಗಳೂರು ಗ್ರಾಮೀಣದಲ್ಲಿ ವಸತಿ ರಹಿತರು- 14205, ನಿವೇಶನ ರಹಿತರು- 39054 ಬೆಂಗಳೂರು ನಗರದಲ್ಲಿ ವಸತಿ ರಹಿತರು- 9919, ನಿವೇಶನ ರಹಿತರು – 455254 ರಷ್ಟಿದೆ.
ಬೀದರ್ ನಲ್ಲಿ ವಸತಿ ರಹಿತರು – 99100, ನಿವೇಶನ ರಹಿತರು- 23879 ಚಿಕ್ಕಬಳ್ಳಾಪುರದಲ್ಲಿ ವಸತಿ ರಹಿತರು- 51158, ನಿವೇಶನ ರಹಿತರು- 47213 ಚಾಮರಾಜನಗರ: ವಸತಿ ರಹಿತರು- 38925, ನಿವೇಶನ ರಹಿತರು- 47213, ಚಿಕ್ಕಮಗಳೂರಿನಲ್ಲಿ ವಸತಿ ರಹಿತರು- 38925, ನಿವೇಶನ ರಹಿತರು-44045, ಗದಗದಲ್ಲಿ ವಸತಿ ರಹಿತರು- 61477, ನಿವೇಶನ ರಹಿತರು- 43913 ಹಾವೇರಿಯಲ್ಲಿ ವಸತಿ ರಹಿತರು- 72126, ನಿವೇಶನ ರಹಿತರು- 30533ರಷ್ಟಿರುವುದು ತಿಳಿದು ಬಂದಿದೆ.




