ಮೂಳೆ ಇಲ್ಲದ ಗಂಡು ಕುರಿ ಮಾಂಸ, ತ್ಯಾಜ್ಯ ಮಿಶ್ರಿತ ಕೋಳಿ, ನೀರು ಮಜ್ಜಿಗೆ; ಖೈದಿಗಳಿಗೆ ಕಳಪೆ ಆಹಾರ ಆರೋಪ

ಬೆಂಗಳೂರು; ಮೂಳೆ ಇಲ್ಲದ ಗಂಡು ಕುರಿ ಮಾಂಸ ಮತ್ತು ಕೋಳಿ ಮಾಂಸವನ್ನು ನೀಡದೇ ಕಾರಾಗೃಹ ನಿಯಮವನ್ನು ಉಲ್ಲಂಘಿಸಿದೆ ಮತ್ತು ತ್ಯಾಜ್ಯಮಿಶ್ರಿತ ಕಳಪೆ ಗುಣಮಟ್ಟದ ಕೋಳಿ ಮಾಂಸವನ್ನು ನೀಡಲಾಗುತ್ತಿದೆ ಎಂದು ತುಮಕೂರು ಜಿಲ್ಲಾ ಕಾರಾಗೃಹ ಖೈದಿಗಳು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

 

ಕಾರಾಗೃಹ ಅಧೀಕ್ಷಕರು ಶೋಷಣೆ, ದೌರ್ಜನ್ಯ ಮತ್ತು ಲಂಚಕ್ಕೆ ಬೇಡಿಕೆ ಇಡುತ್ತಿರುವ ಕುರಿತು ಸಲ್ಲಿಕೆಯಾಗಿರುವ ದೂರಿನಲ್ಲಿಯೇ ಕಳಪೆ ಆಹಾರ ನೀಡುತ್ತಿರುವುದನ್ನು ಖೈದಿಗಳು ದೂರಿನ ಮೂಲಕ ಬಹಿರಂಗಗೊಳಿಸಿದ್ದಾರೆ. ಖೈದಿಗಳು ಸಲ್ಲಿಸಿರುವ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಕಾರಾಗೃಹದ ನಿಯಮದಂತೆ ಒಂದು ತಿಂಗಳಿನ ನಾಲ್ಕು ವಾರಗಳ ಪೈಕಿ ಎರಡು ವಾರಗಳಲ್ಲಿ ಮೂಳೆ ಇಲ್ಲದ ಗಂಡು ಕುರಿ ಮಾಂಸವನ್ನು ನೀಡಬೇಕು. ಇನ್ನುಳಿದ ಎರಡು ವಾರ ಕೋಳಿ ಮಾಂಸ ನೀಡಬೇಕು. ಆದರೆ ಸುಮಾರು ಮೂರೂವರೆ ವರ್ಷಗಳಿಂದ ಗಂಡು ಕುರಿ ಮಾಂಸ ನೀಡದೇ ಎಲ್ಲಾ ವಾರಗಳಲ್ಲಿಯೂ ಕೂಡ ಕೋಳಿ ಮಾಂಸವನ್ನೇ ನೀಡುತ್ತಿದ್ದಾರೆ. ಇವರು ನೀಡುವ ಕೋಳಿ ಮಾಂಸವು ಸೇವಿಸಲು ಯೋಗ್ಯವಲ್ಲದ ತ್ಯಾಜ್ಯ ಮಿಶ್ರಿತ ಕಳಪೆ ಗುಣಮಟ್ಟದ ಕೋಳಿ ಮಾಂಸವಾಗಿರುತ್ತದೆ.’ ಎಂದ ದೂರಿನಲ್ಲಿ ವಿವರಿಸಿದ್ದಾರೆ.

 

ಅದೇ ರೀತಿ ‘ಕರ್ನಾಟಕ ಸರ್ಕಾರವು ಬಂಧಿವಾಸಿಗಳಿಗಾಗಿ ಸರಬರಾಜು ಮಾಡುವ ಹಾಲು, ತರಕಾರಿಗಳು, ದಿನಸಿ ಪದಾರ್ಥಗಳು, ಸೊಪ್ಪುಗಳು, ಅಡುಗೆ ಅನಿಲ, ಮಾಂಸ, ಮೊಟ್ಟೆ ಮತ್ತು ಕಾರಾಗೃಹದ ಗ್ರಂಥಾಲಯಕ್ಕೆ ಬಂಧಿಗಳ ಜ್ಞಾನಾರ್ಜನೆಗಾಗಿ ನೀಡುತ್ತಿರುವ ದಿನಪತ್ರಿಕೆಗಳು, ವಾರಪತ್ರಿಕೆಗಳು, ಮಾಸ ಪತ್ರಿಕೆಗಳನ್ನು ಬಂಧಿಗಳಿಗೆ ನೀಡದೇ ತಮ್ಮ ಮನೆಗೆ (ಅಧೀಕ್ಷಕರ ಮನೆಗೆ) ತರಿಸಿಕೊಂಡು ತಮ್ಮ ಸ್ವಂತ ಬಳಕೆಗಾಗಿ ಬಳಸಿಕೊಳ್ಳುತ್ತಾರೆ,’ ಎಂದೂ ಖೈದಿಗಳು ದೂರಿನಲ್ಲಿ ಆರೋಪಿಸಿದ್ದಾರೆ.

 

ಕಾರಾಗೃಹದಲ್ಲಿ ದಿನನಿತ್ಯ ನೀಡುತ್ತಿರುವ ಆಹಾರವು ಕಳಪೆಯಾಗಿರುತ್ತದೆ ಎಂದು ದೂರಿರುವ ಖೈದಿಗಳು ಮಾಂಸಹಾರದ ಸಂದರ್ಭದಲ್ಲಿ ಸಸ್ಯಹಾರ ಸೇವಿಸುವ ಬಂಧಿಗಳಿಗೆ ಪ್ರತ್ಯೇಕ ಸಸ್ಯಹಾರ ಊಟವನ್ನು ನೀಡುತ್ತಿಲ್ಲ. ಸಾಂಬಾರು ಬದಲಾಗಿ ನೀರು ಮಜ್ಜಿಗೆ ನೀಡುತ್ತಾರೆ. ಕಾರಾಗೃಹದ ಕೈತೋಟದಲ್ಲಿ ಬೆಳೆಯುವಂತಹ ಹಣ್ಣುಗಳು, ತರಕಾರಿ, ಸೊಪ್ಪುಗಳನ್ನು ಬಂಧಿಗಳಿಗೆ ನೀಡದೇ ಮಾರುಕಟ್ಟೆಗೆ ಮಾರಿ ಹಣ ಗಳಿಸುತ್ತಾರೆ ಎಂದು ಆಪಾದಿಸಿದ್ದಾರೆ.

 

ಕಾರಾಗೃಹದ ನಿಯಮದಂತೆ ಬಂಧಿಗಳಿಗೆ ನೀಡುವ ಆಹಾರ ಪದಾರ್ಥಗಳ ಪ್ರಮಾಣವು ಅಲ್ಪ ಪ್ರಮಾಣದಲ್ಲಿವೆ. ಹಬ್ಬಗಳಲ್ಲಿ ನೀಡಬೇಕಾಗಿರುವ ವಿಶೇಷ ಭತ್ಯೆಗಳನ್ನು ನೀಡುತ್ತಿಲಲ್. ಪ್ರತಿ ವಾರ ನೀಡುವ ಕೋಳಿ ಮಾಂಸವನ್ನು ಕಾರಾಗೃಹದ ನಿಯಮಕ್ಕಿಂತ ಅಲ್ಪ ಪ್ರಮಾಣದಲ್ಲಿ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

 

ಕಾರಾಗೃಹದ ಬಂಧಿಗಳಿಗಾಗಿ ವಾರದಲ್ಲಿ ಒಮ್ಮೆ ಕೋಳಿ ಮೊಟ್ಟೆಯನ್ನು ನೀಡಬೇಕು. ಆದರೆ ಮೂರೂವರೆ ವರ್ಷಗಳ ಅಂತರದಲ್ಲಿ ಒಟ್ಟಾರೆಯಾಗಿ ಕೇವಲ 10ರಿಂದ 14 ವಾರಗಳಲ್ಲಿ ಮಾತ್ರ ಕೋಳಿ ಮೊಟ್ಟೆಯ್ನು ನೀಡಿ ಉಳಿದ ಯಾವುದೇ ವಾರಗಳಲ್ಲಿಯೂ ಕೋಳಿ ಮೊಟ್ಟೆ ನೀಡಿಲ್ಲ ಎಂಬ ಸಂಗತಿಯು ದೂರಿನಿಂದ ತಿಳಿದು ಬಂದಿದೆ.

 

‘ಕಾರಾಗೃಹದ ಅಧೀಕ್ಷಕರು ವಿಚಾರಣಾಧೀನ ಬಂಧಿಗಳನ್ನು ಸ್ವತಃ ತಮ್ಮ ಮನೆಯ ಕೆಲಸಗಳಾದ ಬಟ್ಟೆ ಒಗೆಯುವುದಕ್ಕೆ, ಪಾತ್ರೆ ತೊಳೆಯುವುದನ್ನು ನೆಲ ಒರೆಸಲು ಶೌಚಾಲಯ ತೊಳೆಯುವುದಕ್ಕೆ ಹಾಗೂ ಇನ್ನು ಹಲವಾರು ಅವರ ವೈಯಕ್ತಿಕ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ,’ ಎಂದು ಆಪಾದಿಸಿದ್ದಾರೆ.

 

ಕಾರಾಗೃಹದ ಬಂಧಿಗಳು ತಮ್ಮ ವಕೀಲರು ಹಾಗೂ ಕುಟುಂಬ ವರ್ಗದವರನ್ನು ಸಂಪರ್ಕಿಸಲು ಇಲಾಖೆ ವತಿಯಿಂದ ಉಚಿತ ದೂರ ಸಂಪರ್ಕ ವ್ಯವಸ್ಥೆಯಿಂದ ಪಿಸಿಎಸ್‌ಯನ್ನು ಉಚಿತವಾಗಿ ಕಲ್ಪಿಸಬೇಕು. ಆದರೆ ಒಬ್ಬ ಬಂಧಿಯು ಒಂದು ಐ ಡಿಯನ್ನು ಮಾಡಿಸಿಕೊಳ್ಳಲು 120 ರು ಗಳನ್ನು ಮತ್ತು ರೀ ಚಾರ್ಜ್‌ ಮಾಡಿಸಿಕೊಳ್ಳಲು ಪ್ರತ್ಯೇಕವಾಗಿ 120 ರು.ಗಳನ್ನು ಹಾಗೂ ನಂಬರ ಬದಲಾವಣೆ ಹಾಗೂ ದೂರವಾಣಿ ಸಂಖ್ಯೆ ಬದಲಾಯಿಸಲು 40 ರು.ಗಳನ್ನು ಶುಲ್ಕವೆಂದು ವಸೂಲು ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

the fil favicon

SUPPORT THE FILE

Latest News

Related Posts