Thursday | May 21, 2026 |

ಸಿ ಡಿ ಗದ್ದಲದಲ್ಲೇ ಅಲ್ಪಸಂಖ್ಯಾತರ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕಕ್ಕೆ ಅನುಮೋದನೆ

ಬೆಂಗಳೂರು; ಸಂವಿಧಾನಕ್ಕೆ ವಿರುದ್ಧವಾಗಿ ಅಲ್ಪಸಂಖ್ಯಾತ ಸಂಘ ಸಂಸ್ಥೆಗಳನ್ನು ಕೈವಶ ಮಾಡಿಕೊಳ್ಳುವ ಸಂಚಿದೆ ಎಂದು ಹೇಳಲಾಗಿರುವ 2021ನೇ ಸಾಲಿನ ಕರ್ನಾಟಕ ಸೊಸೈಟಿಗಳ ನೋಂದಣಿ(ತಿದ್ದುಪಡಿ)ವಿಧೇಯಕವು ಸಚಿವ ರಮೇಶ್‌ ಜಾರಕಿಹೊಳಿ ಅವರು ಇದ್ದಾರೆ ಎನ್ನಲಾದ ಸಿ ಡಿ ಪ್ರಕರಣದ ಗದ್ದಲದ ನಡುವೆಯೇ ಯಾವ ಚರ್ಚೆಯೂ ಇಲ್ಲದೆಯೇ ವಿಧಾನಸಭೆಯಲ್ಲಿ ಅನುಮೋದನೆ ದೊರೆತಿದೆ. ಹೀಗಾಗಿ ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಹಾದಿಯನ್ನು ಬಿಜೆಪಿ ಸರ್ಕಾರವು ಸುಗಮವಾಗಿರಿಸಿಕೊಂಡಂತಾಗಿದೆ.

ಸಿ ಡಿ ಪ್ರಕರಣವನ್ನು ಕೈಗೆತ್ತಿಕೊಂಡು ಗದ್ದಲ ಎಬ್ಬಿಸಿದ್ದ ಪ್ರತಿಪಕ್ಷ ಕಾಂಗ್ರೆಸ್‌ ಸಭಾಧ್ಯಕ್ಷರ ಪೀಠದ ಮುಂದೆ ಧರಣಿಯನ್ನು ಮುಂದುವರೆಸಿತ್ತು. ಧರಣಿ ಕೈಬಿಡಲು ಸಭಾಧ್ಯಕ್ಷ ಕಾಗೇರಿ ಅವರು ಮಾಡಿದ್ದ ಮನವಿಯನ್ನು ಪುರಸ್ಕರಿಸದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಧರಣಿಯನ್ನು ಮುಂದುವರೆಯಿತು. ಹೀಗಾಗಿ ಕಾಗೇರಿ ಅವರು ಶಾಸನ ರಚನೆಗೆ ಸಂಬಂಧಿಸಿದಂತೆ ಬಾಕಿ ಉಳಿದಿದ್ದ ಕರ್ನಾಟಕ ಸೊಸೈಟಿಗಳ ನೋಂದಣಿ (ತಿದ್ದುಪಡಿ) ವಿಧೇಯಕವನ್ನು ಮಂಡಿಸಲು ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರಿಗೆ ಸೂಚಿಸಿದರು.

ಅವರ ಸೂಚನೆಯಂತೆ ವಿಧೇಯಕವನ್ನು ಮಂಡಿಸಿದ್ದರೂ ಪ್ರತಿಪಕ್ಷ ಕಾಂಗ್ರೆಸ್‌ ಅದಾವುದಕ್ಕೂ ಕಿವಿಗೊಡಲಿಲ್ಲ. ಪ್ರತಿಪಕ್ಷ ಕಾಂಗ್ರೆಸ್‌ ಎಬ್ಬಿಸಿದ್ದ ಗದ್ದಲದ ನಡುವೆಯೇ ಸಂವಿಧಾನ ವಿರೋಧಿ ಎಂದೇ ಹೇಳಲಾಗಿರುವ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯು ಅನುಮೋದನೆ ದೊರೆತಿದೆ ಎಂದು ಸಭಾಧ್ಯಕ್ಷ ಕಾಗೇರಿ ಅವರು ಘೋಷಿಸಿದರು.
ತಿದ್ದುಪಡಿಗೆ ವಿಧೇಯಕಕ್ಕೆ ಅನುಮೋದನೆ ದೊರಕಿಸಿಕೊಂಡಿರುವ ಬಿಜೆಪಿ ಸರ್ಕಾರವು 6,807 ಅಲ್ಪಸಂಖ್ಯಾತರ ಸಂಘ ಸಂಸ್ಥೆಗಳ ಪೈಕಿ 40 ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲಿದೆ ಎಂದು ತಿಳಿದು ಬಂದಿದೆ.

ವಿಧಾನಸಭೆ ಅಧಿವೇಶನ ಆರಂಭವಾದ ಮೊದಲ ದಿನದಂದೇ ಈ ತಿದ್ದುಪಡಿ ವಿಧೇಯಕವನ್ನು ಪರ್ಯಾಲೋಚಿಸಲು ಮತ್ತು ಅಂಗೀಕರಿಸಲು ಮಂಡಿಸಲಾಗಿತ್ತು. ಬಜೆಟ್‌ ಮಂಡನೆ, ಆ ನಂತರ ನಡೆದ ಚರ್ಚೆ, ಸಿ ಡಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಪ್ರತಿಪಕ್ಷ ಕಾಂಗ್ರೆಸ್‌, ಅಲ್ಪಸಂಖ್ಯಾತರ ಸಂಘ ಸಂಸ್ಥೆಗಳಿಗೆ ಮಾರಕ ಎಂದೇ ಹೇಳಲಾಗಿರುವ ತಿದ್ದುಪಡಿ ವಿಧೇಯಕವನ್ನು ಕೈಬಿಡಲು ಆಡಳಿತ ಪಕ್ಷಕ್ಕೆ ಹೇಳಲಿಲ್ಲ.

ಸಾಮಾನ್ಯ ಸೊಸೈಟಿಗಳು ಮತ್ತು ಅಲ್ಪಸಂಖ್ಯಾತ ಸೊಸೈಟಿಗಳ ನಡುವಿನ ತಾರತಮ್ಯವನ್ನು ತೊಡೆದು ಹಾಕುವ ಉದ್ದೇಶವನ್ನು ಮುಂದಿರಿಸಿ ಸಂವಿಧಾನಕ್ಕೆ ವಿರುದ್ಧವಾಗಿ ಅಲ್ಪಸಂಖ್ಯಾತ ಸಂಘ ಸಂಸ್ಥೆಗಳನ್ನು ರಾಜ್ಯ ಬಿಜೆಪಿ ಸರ್ಕಾರವು ಕೈವಶ ಮಾಡಿಕೊಳ್ಳಲು ರಾಜ್ಯ ಬಿಜೆಪಿ ಸರ್ಕಾರವು ಸಂಚು ನಡೆಸಿದೆ ಎಂಬ ಆರೋಪ ಕೇಳಿ ಬಂದಿತ್ತು.

ಅಲ್ಪಸಂಖ್ಯಾತರ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಪ್ರಸ್ತಾವನೆ ಹೊಂದಿರುವ ತಿದ್ದುಪಡಿ ವಿಧೇಯಕದ ಮುಖಾಂತರ ಎಲ್ಲ ಸಹಕಾರ ಸಂಘ ಸಂಸ್ಥೆಗಳನ್ನು ಇಲ್ಲಿ ಒಟ್ಟುಗೂಡಿಸಲು ಹೊರಟು ಬಿಜೆಪಿ ಸರ್ಕಾರ ಇರಿಸಿದ್ದ ತಪ್ಪು ಹೆಜ್ಜೆಗೆ ಪ್ರತಿಪಕ್ಷ ಕಾಂಗ್ರೆಸ್‌ ತಡೆ ನೀಡಲಿಲ್ಲ.

ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಅವಕಾಶ ಸಂವಿಧಾನ ಬಾಹಿರ ಎಂದು ಕರ್ನಾಟಕ ಹೈಕೋರ್ಟ್‌ 1987ರಲ್ಲೇ ಹೊರಡಿಸಿರುವ ಆದೇಶವನ್ನು ಸರಿಪಡಿಸುವ ಹೆಸರಿನಲ್ಲಿ ಕರ್ನಾಟಕ ಸೊಸೈಟಿಗಳ ನೋಂದಣಿ (ತಿದ್ದುಪಡಿ) 27 (ಎ)ಗೆ ತಿದ್ದುಪಡಿ ತಂದಿದೆ.

ಅಲ್ಪಸಂಖ್ಯಾತರ ಸಂಘಸಂಸ್ಥೆಗಳ ಕೈವಶಕ್ಕೆ ವಿಧೇಯಕ; ಸಂವಿಧಾನ ವಿರೋಧಿ ಕೃತ್ಯ?

ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 27(ಎ)ರಡಿ ಅಲ್ಪಸಂಖ್ಯಾತ ಸಂಘಗಳಿಗೆ ಆಡಳಿತಾಧಿಕಾರಿ ನೇಮಿಸುವುದು ಸಂವಿಧಾನಬಾಹಿರ ಎಂದು ಕರ್ನಾಟಕ ಹೈಕೋರ್ಟ್ 33 ವರ್ಷದ (1987) ಹಿಂದೆ ತೀರ್ಪು ನೀಡಿತ್ತು. ಆ ನಂತರ ಯಾವ ಸರ್ಕಾರಗಳೂ ಅಲ್ಪಸಂಖ್ಯಾತ ಸಂಘ, ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಿಸಿರಲಿಲ್ಲ. ಆದರೀಗ ರಾಜ್ಯ ಬಿಜೆಪಿ ಸರ್ಕಾರ ಆಡಳಿತಾಧಿಕಾರಿ ನೇಮಕದ ವಿಧೇಯಕವು ವಿವಾದಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.

ಈ ವಿಧೇಯಕದ ಹಿಂದಿನ ಸಂಚನ್ನು ಪ್ರತಿಪಕ್ಷ ಕಾಂಗ್ರೆಸ್‌ ಕೂಡ ಅರಿಯಲಾಗಲಿಲ್ಲ ಅಥವಾ ಅವರಿಗೂ ಈ ವಿಧೇಯಕ ಬೇಕಿತ್ತೇ ಎಂಬ ಅನುಮಾನಗಳು ಕಾಡತೊಡಗಿವೆ. ಒಟ್ಟಾರೆ ಅಹಿಂದ ಸಮುದಾಯದ ಸಮಾಧಿಗೆ ಪಕ್ಷಬೇಧ ಮರೆತು ಕೆಲಸ ಮಾಡುತ್ತಿದ್ದಾರೆ ಎಂದೆನಿಸುತ್ತಿದೆ.

ಡಾ ಸಿ ಎಸ್‌ ದ್ವಾರಕಾನಾಥ್‌, ಮಾಜಿ ಅಧ್ಯಕ್ಷರು.

ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ

ವಿಧೇಯಕದ ಉದ್ದೇಶವೇನು?

ಸಾಮಾನ್ಯ ಸೊಸೈಟಿಗಳು ಮತ್ತು ಅಲ್ಪಸಂಖ್ಯಾತ ಸೊಸೈಟಿಗಳ ನಡುವಿನ ತಾರತಮ್ಯವನ್ನು ತೊಡೆದು ಹಾಕಲು ಮತ್ತು ಮತ್ತಷ್ಟು ವ್ಯಾಜ್ಯಗಳನ್ನು ತಪ್ಪಿಸಲು, ಸರ್ಕಾರದ ಸೊಸೈಟಿಯ ಸದಸ್ಯರ ಮತ್ತು ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶವು ವಿಧೇಯಕದಲ್ಲಿದೆ ಎಂದು ಸರ್ಕಾರ ಹೇಳಿದೆ.

ಆಡಳಿತಾಧಿಕಾರಿ ನೇಮಕ ಸಂವಿಧಾನಬಾಹಿರವೇ?

ಖುರೇಷಿ ಎಜುಕೇಷನ್‌ ಸೊಸೈಟಿ ಮತ್ತು ಇತರರ ಪ್ರಕರಣದಲ್ಲಿ ಅಲ್ಪಸಂಖ್ಯಾತ ಸಂಘಗಳಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಅವಕಾಶವು ಸಂವಿಧಾನದ ಅನುಚ್ಛೇದ 31 ಮತ್ತು 31ಎ(1)(ಬಿ) ರಲ್ಲಿ ಅಲ್ಪಸಂಖ್ಯಾತರಿಗೆ ಒದಗಿಸಿರುವ ಹಕ್ಕುಗಳಿಗೆ ವಿರುದ್ಧವಾಗಿದೆಯಲ್ಲದೆ, ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 27(ಎ) ಅಡಿ ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಅವಕಾಶ ಸಂವಿಧಾನ ಬಾಹಿರ ಎಂದು ಕರ್ನಾಟಕ ಹೈಕೋರ್ಟ್‌ 1987ರಲ್ಲೇ ಆದೇಶಿಸಿತ್ತು.

‘ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 27(ಎ)ರಡಿ ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಅವಕಾಶವನ್ನು ನ್ಯಾಯಾಲಯವು ಸಂವಿಧಾನಬಾಹಿರವೆಂದು Struck down ಮಾಡಿ 1987ರಲ್ಲೇ ಆದೇಶಿಸಿರುವ ಹಿನ್ನೆಲೆಯಲ್ಲಿ ಸರ್ಕಾರವು ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೂ ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಅನುವಾಗುವಂತೆ ಸಂಘಗಳ ನೋಂದಣಿ ಅಧಿನಿಯಮ, 1960ರ ಪ್ರಕರಣ 27(ಎ)ಗೆ ತಿದ್ದುಪಡಿ ಮಾಡುವ ಅಗತ್ಯವಿದೆ,’ ಎಂದು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಅವರು ಸಚಿವ ಸಂಪುಟದ ಮುಂದೆ ಪ್ರಸ್ತಾಪಿಸಿದ್ದರು.

ತಿದ್ದುಪಡಿ ನಂತರ ನಿಯಮದಲ್ಲೇನಿರುತ್ತೆ?

ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಲ್ಲಿನ ವ್ಯಾಜ್ಯಗಳು ಇತ್ಯರ್ಥಗೊಳ್ಳದೇ ಬಾಕಿ ಇದ್ದಲ್ಲಿ ಅಥವಾ ವಾರ್ಷಿಕ ಮಹಾಸಭೆಗಳನ್ನು ನಡೆಸದೇ ಇದ್ದ ಪಕ್ಷದಲ್ಲಿ ಸೆಕ್ಷನ್‌ 27(ಎ) ತಿದ್ದುಪಡಿ ಪ್ರಕಾರ ಆಡಳಿತಾಧಿಕಾರಿ ನೇಮಿಸಬಹುದು. ಸಂಘದ ಪದಾಧಿಕಾರಿಗಳು ಅಥವಾ ಆಡಳಿತ ಮಂಡಳಿಯ ಅವಧಿ ಪೂರ್ಣಗೊಂಡ ಬಳಿಕವೂ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರದೇ ಇದ್ದಲ್ಲಿ ಮತ್ತು ಸಹಕಾರ ಸಂಘಗಳ ರಿಜಿಸ್ಟ್ರಾರ್‌ ವಿಚಾರಣೆಗೆ ಆದೇಶಿಸಿದ್ದರೆ ಸಾರ್ವಜನಿಕ ಹಿತಾಸಕ್ತಿ ಅನ್ವಯ ಆಡಳಿತಾಧಿಕಾರಿ ನೇಮಿಸಬಹುದು.

ಅಲ್ಲದೆ ಸೊಸೈಟಿಯ ಹೊಣೆಗಾರಿಕೆಗಳು ಯಾವುದಾದರೂ ಇದ್ದಲ್ಲಿ ಅವುಗಳನ್ನು ಇತ್ಯರ್ಥಗೊಳಿಸಿದ ತರುವಾಯ ರಾಜ್ಯ ಸರ್ಕಾರವು ಅದರ ಚರ ಅಥವಾ ಸ್ಥಿರ ಸ್ವತ್ತುಗಳನ್ನು ವೈಯಕ್ತಿಕ ಅಥವಾ ಬದಲಾಳುವಿನ ಮೂಲಕ ಹಾಜರಿರುವ ಸದಸ್ಯರ ಐದನೇ ಮೂರರಷ್ಟು ಕಡಿಮೆಯಲ್ಲದ ಮತಗಳ ಮೂಲಕ ನಿರ್ಧರಿಸಬೇಕಾದ ಏಕರೂಪದ ಅಥವಾ ಅದೇ ರೀತಿಯ ಉದ್ದೇಶಗಳುಳ್ಳ ಯಾವುದೇ ಇತರ ಸೊಸೈಟಿಗೆ ವಹಿಸಬಹುದು.

‘ಕರ್ನಾಟಕ ಸಂಘಗಳ ಅಧಿನಿಯಮ 1960ರ ಪ್ರಕರಣ 27(ಎ)ಗೆ ಸೂಕ್ತ ತಿದ್ದುಪಡಿ ತಂದು ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೂ ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಅನುವಾಗುವಂತೆ ಕಾಯ್ದೆಯಲ್ಲಿ ಈಗಿರುವ ಲೋಪವನ್ನು ತಿದ್ದುಪಡಿ ಮೂಲಕ ಸರಿಪಡಿಸುವುದು ಸರ್ಕಾರದ ಹೊಣೆಗಾರಿಕೆ. ಆಡಳಿತಾಧಿಕಾರಿ ನೇಮಕಾತಿ ವಿಷಯದಲ್ಲಿ ಸಾಮಾನ್ಯ ಮತ್ತು ಅಲ್ಪಸಂಖ್ಯಾತ ಸಂಘ ಸಂಸ್ಥೆಗಳನ್ನು ಪ್ರತ್ಯೇಕಿಸಿ ನೋಡುವುದನ್ನು ತಪ್ಪಿಸಬಹುದಾಗಿರುತ್ತದೆ,’ ಎಂದು ತಿದ್ದುಪಡಿಯನ್ನು ಸಮರ್ಥಿಸಿಕೊಂಡಿರುವುದು ದಾಖಲೆಯಿಂದ ತಿಳಿದು ಬಂದಿದೆ.

ವಿಶೇಷವೆಂದರೆ ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ಅಧಿನಿಯಮ ತಿದ್ದುಪಡಿಗೆ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇ ಚಾಲನೆ ದೊರೆತಿತ್ತು. 2016ರಲ್ಲಿದ್ದ ರಾಜ್ಯದ ಅಡ್ವೋಕೇಟ್‌ ಜನರಲ್‌ ಅವರು ಸೆಕ್ಷನ್‌ 27(ಎ)ಗೆ ತಿದ್ದುಪಡಿ ಅಗತ್ಯವಿದೆ ಮತ್ತು ಈ ತಿದ್ದುಪಡಿಗೆ ರಾಷ್ಟ್ರಪತಿಗಳ ಅನುಮೋದನೆಗೆ ಕಾಯ್ದಿರಿಸಬೇಕಾಗುತ್ತದೆ ಎಂದು 2016ರ ಮೇ 17ರಂದು ಕಡತದಲ್ಲಿ ಅಭಿಪ್ರಾಯಿಸಿದ್ದರು.

ರಾಜ್ಯದಲ್ಲಿರುವ ಅಲ್ಪಸಂಖ್ಯಾತ ಸಂಘಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಸಂಬಂಧ ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 27(ಎ)ಗೆ ತಿದ್ದುಪಡಿ ತರಲು ಸಚಿವ ಸಂಪುಟದ ಮುಂದೆ ಪ್ರಸ್ತಾವಿಸಿದ್ದನ್ನು ‘ದಿ ಫೈಲ್‌’ 2020ರ ಜೂನ್‌ 26 ಮತ್ತು 2021ರ ಮಾರ್ಚ್‌ 13ರಂದೇ ವರದಿ ಪ್ರಕಟಿಸಿತ್ತು.

Hot this week

ಬೀಜೋತ್ಪನ್ನ ಕಿಟ್‌ಗಳ ವಿತರಣೆಯಲ್ಲಿ ಅಕ್ರಮ; ಎಸ್‌ಸಿ, ಎಸ್‌ಟಿ ರೈತರಲ್ಲದ ಸಾಮಾನ್ಯ ರೈತರಿಗೆ ಹಂಚಿಕೆ, ಅಧಿಕಾರ ದುರುಪಯೋಗ, ಕಾಯ್ದೆ ಉಲ್ಲಂಘನೆ

ಬೆಂಗಳೂರು;  ಬೀಜೋತ್ಪನ್ನ ಕಿಟ್‌ಗಳ ವಿತರಣೆಗೆ ಸಂಬಂಧಿಸಿದಂತೆ  ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ...

ಸರ್ಕಾರದ 3ನೇ ವರ್ಷದ ಸಾಧನೆ ಸಮಾವೇಶ; 12 ಕೋಟಿ ಕೋರಿದ ಇಲಾಖೆ, ಭೂ ಸ್ವಾಧೀನ ಠೇವಣಿ ಬಡ್ಡಿ ಹಣಕ್ಕೆ ಕೈ ಹಾಕಿದ ಸರ್ಕಾರ?

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರವು ತನ್ನ 3ನೇ ವರ್ಷವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ...
Please Scan to make Your Contribution

Topics

ಬೀಜೋತ್ಪನ್ನ ಕಿಟ್‌ಗಳ ವಿತರಣೆಯಲ್ಲಿ ಅಕ್ರಮ; ಎಸ್‌ಸಿ, ಎಸ್‌ಟಿ ರೈತರಲ್ಲದ ಸಾಮಾನ್ಯ ರೈತರಿಗೆ ಹಂಚಿಕೆ, ಅಧಿಕಾರ ದುರುಪಯೋಗ, ಕಾಯ್ದೆ ಉಲ್ಲಂಘನೆ

ಬೆಂಗಳೂರು;  ಬೀಜೋತ್ಪನ್ನ ಕಿಟ್‌ಗಳ ವಿತರಣೆಗೆ ಸಂಬಂಧಿಸಿದಂತೆ  ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ...

ಸರ್ಕಾರದ 3ನೇ ವರ್ಷದ ಸಾಧನೆ ಸಮಾವೇಶ; 12 ಕೋಟಿ ಕೋರಿದ ಇಲಾಖೆ, ಭೂ ಸ್ವಾಧೀನ ಠೇವಣಿ ಬಡ್ಡಿ ಹಣಕ್ಕೆ ಕೈ ಹಾಕಿದ ಸರ್ಕಾರ?

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರವು ತನ್ನ 3ನೇ ವರ್ಷವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ...

120 ಎಕರೆ ಗೋಮಾಳ ಒತ್ತುವರಿ; ದಿ ಫೈಲ್ ವರದಿ ಬೆನ್ನಲ್ಲೇ ತನಿಖಾ ಸಮಿತಿ ರಚನೆ, ಆದೇಶ ಹೊರಬಿದ್ದ ಐದೇ ದಿನದಲ್ಲಿ ಸಮಿತಿ ಅಧ್ಯಕ್ಷರ ವರ್ಗಾಯಿಸಿದ ಸರ್ಕಾರ

ಬೆಂಗಳೂರು;  ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿರುವ...

Related Articles

Popular Categories

error: Content is protected !!