ಭ್ರಷ್ಟಾಚಾರ; 1,091 ಪ್ರಕರಣಗಳಿಗೆ ಇಲಾಖೆ ವಿಚಾರಣೆಯನ್ನೇ ನಡೆಸದ 16 ಇಲಾಖೆಗಳು

ಬೆಂಗಳೂರು; ಲೋಕಾಯುಕ್ತ ಕಾಯ್ದೆ ಕಲಂ 12(3) ಅಡಿಯಲ್ಲಿ ವರದಿ ಸ್ವೀಕರಿಸಿರುವ ಸಚಿವಾಲಯದ ಬಹುತೇಕ ಇಲಾಖೆಗಳು, ಆರೋಪಿತ ಅಧಿಕಾರಿ, ನೌಕರರ ವಿರುದ್ಧ 16 ಇಲಾಖೆಗಳು ಈವರೆವಿಗೂ ವಿಚಾರಣೆ ಪ್ರಕ್ರಿಯೆಗಳನ್ನೇ ನಡೆಸಿಲ್ಲದಿರುವುದು ಇದೀಗ ಬಹಿರಂಗವಾಗಿದೆ.

ಕಲಂ 12(3) ಅನ್ವಯ ಕಳಿಸಿಕೊಡಲಾಗುವ ವರದಿಗಳ ಮೇಲೆ ತೆಗೆದುಕೊಂಡ ಕ್ರಮದ ಬಗ್ಗೆ ಇಲಾಖಾ ಮುಖ್ಯಸ್ಥರು 3 ತಿಂಗಳೊಳಗಾಗಿ ಲೋಕಾಯುಕ್ತಕ್ಕೆ ವರದಿಗಳನ್ನೂ ಸಲ್ಲಿಸುತ್ತಿಲ್ಲ ಎಂದು ಲೋಕಾಯುಕ್ತ ರಿಜಿಸ್ಟ್ರಾರ್‌ ಅವರು ಸರ್ಕಾರಕ್ಕೆ ಪತ್ರ ಬರೆದ ಬೆನ್ನಲ್ಲೇ ಇಲಾಖೆ ವಿಚಾರಣೆ ನಡೆಸದಿರುವ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.

ಈ ಪೈಕಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆಯೇ ಹೆಚ್ಚಿನ ಸಂಖ್ಯೆಯಲ್ಲಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳುತ್ತಿರುವುದು ಸುಳ್ಳಲ್ಲ ಎಂದು ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಪಟೂರಿನಲ್ಲಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಆರೋಪಿತ ಅಧಿಕಾರಿ, ನೌಕರ ಸಿಬ್ಬಂದಿ ವಿರುದ್ಧ ಲೋಕಾಯುಕ್ತರು ಸಲ್ಲಿಸಿರುವ ವಿಚಾರಣೆ ವರದಿಗಳನ್ನಾಧರಿಸಿ ಇಲಾಖೆ ವಿಚಾರಣೆ ನಡೆಸದಿರುವ ಉನ್ನತ ಅಧಿಕಾರಿಗಳ ಭಂಡ ನಿರ್ಲಕ್ಷ್ಯವೂ ಪ್ರದರ್ಶನವಾಗಿದೆ.

2021ರ ಜನವರಿ 15ರಿಂದ ಫೆ.15ರವರೆಗೆ ಸಚಿವಾಲಯದ ಇಲಾಖೆಗಳಿಗೆ ಲೋಕಾಯುಕ್ತದಿಂದ 12(3) ಅಡಿಯಲ್ಲಿ ಒಟ್ಟು 1,708 ಪ್ರಕರಣಗಳನ್ನು ವಹಿಸಲಾಗಿದೆ. ಈ ಪೈಕಿ ನಿಯಮ 14 (ಎ) ಅಡಿ 1,295 ಪ್ರಕರಣಗಳಿವೆ. ಅಲ್ಲದೆ ನಿಯಮ 14(3) ಅಡಿಯಲ್ಲಿ ವರದಿ ಸ್ವೀಕೃತವಾಗಿರುವ 294 ಮತ್ತು 92 ಪ್ರಕರಣಗಳಿಗಷ್ಟೇ ಅಂತಿಮ ಆದೇಶ ಹೊರಡಿಸಿದೆ. ಈ ಸಂಬಂಧ ‘ದಿ ಫೈಲ್‌’ಗೆ ಅಂಕಿ ಅಂಶಗಳನ್ನೊಳಗೊಂಡ ದಾಖಲೆಗಳು ಲಭ್ಯವಾಗಿವೆ.

ಸಚಿವಾಲಯ ಇಲಾಖೆಗಳಿಗೆ ಲೋಕಾಯುಕ್ತ ಶಿಫಾರಸ್ಸು ಮಾಡಿರುವ 1,708 ಪ್ರಕರಣಗಳ ಪೈಕಿ ಕೇವಲ 191 ಪ್ರಕರಣಗಳಿಗಷ್ಟೇ ಇಲಾಖೆ ವಿಚಾರಣೆ ಆರಂಭಿಸಿದೆ. ಪಶು ಸಂಗೋಪನೆ ಇಲಾಖೆ, ಮೀನುಗಾರಿಕೆ, ಸಹಕಾರ, ಕನ್ನಡ ಸಂಸ್ಕೃತಿ, ಒಳಾಡಳಿತ, ಯೋಜನೆ, ಅಲ್ಪಸಂಖ್ಯಾತರ ಅಭಿವೃದ್ಧಿ, ಆಹಾರ, ನಾಗರಿಕ ಸರಬರಾಜು, ವಸತಿ, ಸಾರಿಗೆ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪ್ರಾಥಮಿಕ, ಪ್ರೌಢಶಿಕ್ಷಣ, ಆರ್ಥಿಕ, ಜಲ ಸಂಪನ್ಮೂಲ, ವಾಣಿಜ್ಯ, ಕೈಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿನ ಒಟ್ಟು 1,091 ಪ್ರಕರಣಗಳಿಗೆ ಇಲಾಖೆ ವಿಚಾರಣೆ ಪ್ರಕ್ರಿಯೆಯನ್ನೇ ನಡೆಸದಿರುವುದು ಅಂಕಿ ಅಂಶ ದಾಖಲೆಯಿಂದ ತಿಳಿದು ಬಂದಿದೆ.

ಅಲ್ಲದೆ 1,708 ಪ್ರಕರಣಗಳ ಪೈಕಿ ಸಚಿವಾಲಯದ ಇಲಾಖೆಗಳು ಕೇವಲ 307 ಪ್ರಕರಣಗಳನ್ನಷ್ಟೇ ಪರಿಗಣಿಸಿದೆ. ಇಲಾಖೆ ವಿಚಾರಣೆ ನಡೆಸಿರುವ ಸಂಬಂಧ ಲೋಕಾಯುಕ್ತ ಕಾಯ್ದೆ 14(ಎ) ಅಡಿಯಲ್ಲಿ 294 ವರದಿಗಳನ್ನು ಸಲ್ಲಿಸಿವೆ. ಹಾಗೆಯೇ ಲೋಕಾಯುಕ್ತ ವಿಚಾರಣಾಧಿಕಾರಿಗಳ ಹಂತದಲ್ಲೇ 1,192 ಪ್ರಕರಣಗಳಿವೆ. ಇದರಲ್ಲಿ ಆರೋಪಿತ 260 ಅಧಿಕಾರಿ, ನೌಕರರಿಗೆ 2ನೇ ಶೋಕಾಸ್‌ ನೋಟೀಸ್‌ ನೀಡಲಾಗಿದೆ. ಆರೋಪ ಸಾಬೀತಾಗಿದೆ ಎಂದು ಹೇಳಲಾಗಿರುವ ಕೇವಲ 92 ಅಧಿಕಾರಿ, ನೌಕರರಿಗಷ್ಟೇ ದಂಡ ವಿಧಿಸಿರುವ ಅಂತಿಮ ಆದೇಶ ಹೊರಡಿಸಿದೆ. ಒಟ್ಟಾರೆ ಈ ಎಲ್ಲಾ ಪ್ರಕರಣಗಳಲ್ಲಿ ಶೇ.5.29ರಷ್ಟೇ ಪ್ರಗತಿ ಸಾಧಿಸಿರುವುದು ದಾಖಲೆಯಿಂದ ಗೊತ್ತಾಗಿದೆ.

ವಿಚಾರಣೆಯನ್ನೇ ನಡೆಸದ ಇಲಾಖೆಗಳಿವು

ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ 499 ಪ್ರಕರಣಗಳಲ್ಲಿ ಒಂದೇ ಒಂದು ಪ್ರಕರಣದಲ್ಲಿ ಇಲಾಖೆ ವಿಚಾರಣೆಯನ್ನೇ ನಡೆಸಿಲ್ಲ. ಅದೇ ರೀತಿ ಪ್ರಾಥಮಿಕ ಪ್ರೌಢಶಿಕ್ಷಣ 139, ಜಲ ಸಂಪನ್ಮೂಲ 93, ಒಳಾಡಳಿತ 81, ವಾಣಿಜ್ಯ ಕೈಗಾರಿಕೆ 57, ಪಶು ಸಂಗೋಪನೆ ಮತ್ತು ಆಹಾರ ನಾಗರಿಕ ಸರಬರಾಜು 17, ಸಹಕಾರ ಇಲಾಖೆ 16, ಸಾರಿಗೆ 30 ಪ್ರಕರಣಗಳಲ್ಲಿ ಇಲಾಖೆ ವಿಚಾರಣೆಯನ್ನೇ ನಡೆಸಿಲ್ಲ.

ಅದೇ ರೀತಿ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲಿನ ಲೋಕಾಯುಕ್ತ ಶಿಫಾರಸ್ಸು ಮಾಡಿರುವ 73 ಪ್ರಕರಣಗಳ ಪೈಕಿ ಕೇವಲ 5 ಪ್ರಕರಣಗಳಿಗಷ್ಟೇ ಇಲಾಖೆ ವಿಚಾರಣೆಯನ್ನು ಆರಂಭಿಸಿದೆ. ಸಮಾಜ ಕಲ್ಯಾಣ ಇಲಾಖೆಯು 43 ಪ್ರಕರಣಗಳ ಪೈಕಿ 1 ಪ್ರಕರಣದಲ್ಲಿ ಮಾತ್ರ ಇಲಾಖೆ ವಿಚಾರಣೆ ಆರಂಭಿಸಿದ್ದರೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 100 ಪ್ರಕರಣಗಳ ಪೈಕಿ ಕೇವಲ 6 ಪ್ರಕರಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ 169 ಪ್ರಕರಣಗಳ ಪೈಕಿ 8 ಪ್ರಕರಣಗಳಲ್ಲಷ್ಟೇ ಇಲಾಖೆ ವಿಚಾರಣೆಗೆ ಕ್ರಮ ಕೈಗೊಂಡಿದೆ.

ಸಚಿವಾಲಯದ ಇಲಾಖೆಗಳಲ್ಲಿ ಒಟ್ಟು 2010 ಇಲಾಖೆ ಪ್ರಕರಣಗಳ ಪೈಕಿ ನಿಯಮ 11ರ ಅಡಿಯಲ್ಲಿ 883 ಹಾಗೂ ನಿಯಮ 12ರ ಅಡಿಯಲ್ಲಿ 89 ಪ್ರಕರಣಗಳಲ್ಲಿ ದೋಷಾರೋಪಣೆ ಪಟ್ಟಿ ಜಾರಿ ಮಾಡಿದೆ. ದೋಷಾರೋಪಣೆ ಪಟ್ಟಿಗೆ ವಿವರಣೆ ಕೊಟ್ಟಿರುವ 789 ಪ್ರಕರಣಗಳಲ್ಲಿ 632 ಪ್ರಕರಣಗಳಿಗೆ ವಿಚಾರಣಾಧಿಕಾರಿಗಳನ್ನು ನೇಮಿಸಿದೆ. ಹಾಗೆಯೇ 2ನೇ ಕಾರಣ ಕೇಳುವ ನೋಟೀಸ್‌ಗೆ ಆರೋಪಿತ ಅಧಿಕಾರಿ/ನೌಕರರಿಂದ ವಿವರಣೆ ಪಡೆದ ಒಟ್ಟು 157 ಪ್ರಕರಣಗಳಲ್ಲಿ 109 ಪ್ರಕರಣಗಳಲ್ಲಿ ಮಾತ್ರ ಅಂತಿಮ ಆದೇಶ ಹೊರಡಿಸಿರುವುದು ತಿಳಿದು ಬಂದಿದೆ.

ಹಿಂದಿನ ಕಾಂಗ್ರೆಸ್‌ ಸರ್ಕಾರವು ಪೊಲೀಸ್‌ ಅಧಿಕಾರವನ್ನು ಕಸಿದುಕೊಂಡ ನಂತರ ಲೋಕಾಯುಕ್ತ ಸಂಸ್ಥೆಯು ಹಲ್ಲು ಕಿತ್ತ ಹಾವಿನಂತಾಗಿದೆ. ಲೋಕಾಯುಕ್ತ ಸಂಸ್ಥೆಗೆ ಪೊಲೀಸ್‌ ಅಧಿಕಾರವನ್ನು ಪುನರ್‌ ಸ್ಥಾಪಿಸಬೇಕು ಎಂದು ಲಂಚಮುಕ್ತ ಕರ್ನಾಟಕ ವೇದಿಕೆ ಮತ್ತು ಕರ್ನಾಟಕ ರಾಷ್ಟ್ರಸಮಿತಿ ಪಕ್ಷವೂ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts