ಐಎಎಸ್‌ ಬಿಳಿಯಾನೆಗಳ ತೆವಳಿಕೆ; 30 ದಿನ ಮೀರಿದರೂ ವಿಲೇವಾರಿಯಾಗದ 41,069 ಕಡತ

ಬೆಂಗಳೂರು; ನಿಗದಿತ ಅವಧಿಯೊಳಗೆ ಕಡತಗಳ ವಿಲೇವಾರಿ ಮಾಡಬೇಕು ಎಂದು ಸರ್ಕಾರ ಹೊರಡಿಸಿರುವ ಸೂಚನೆಗಳನ್ನು ವಿವಿಧ ಇಲಾಖೆಗಳ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಾಯದರ್ಶಿಗಳೇ ಪಾಲಿಸುತ್ತಿಲ್ಲ. ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳ ಬಳಿ 30 ದಿನ ಮೀರಿದ್ದರೂ 41,069 ರಷ್ಟು ವಿಲೇವಾರಿ ಆಗದಿರುವುದು ಐಎಎಸ್‌ ಅಧಿಕಾರಿಗಳ ಆಡಳಿತ ವೈಖರಿ ಹೇಗಿದೆ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.

‘ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಇತರೆ ಕಚೇರಿಗಳಲ್ಲಿ 15-20 ದಿನಗಳವರೆಗೆ ಕಡತಗಳನ್ನು ಇಟ್ಟುಕೊಳ್ಳಲಾಗುತ್ತಿದೆ. ಸಕಾಲಕ್ಕೆ ಕಡತಗಳು ವಿಲೇವಾರಿಯಾಗುತ್ತಿಲ್ಲ. ಈ ಬಗ್ಗೆ ಬಿಗಿ ಕ್ರಮ ಕೈಗೊಳ್ಳಬೇಕಾಗಿದೆ. ಅನಗತ್ಯವಾಗಿ ಕಡತ ಇಟ್ಟುಕೊಂಡು ಜನರನ್ನು ಅಲೆದಾಡಿಸುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟು ಕ್ರಮ ಜರುಗಿಸಲಾಗುವುದು,’ ಎಂದು ತಿಪಟೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಚ್ಚರಿಸಿದ್ದರ ಬೆನ್ನಲ್ಲೇ ಕಂದಾಯ ಇಲಾಖೆಯೂ ಸೇರಿದಂತೆ ಇನ್ನಿತರೆ 7 ಇಲಾಖೆಗಳ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಬಳಿಯೇ 30 ದಿನ ಮೀರಿ ಯಾವುದೇ ಕ್ರಮ ಆಗದೇ ಸಾವಿರಾರು ಸಂಖ್ಯೆಯಲ್ಲಿ ಕಡತಗಳಿರುವ ವಿಚಾರ ಮುನ್ನೆಲೆಗೆ ಬಂದಿದೆ.

ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ 2021ರ ಮಾರ್ಚ್‌ 18ರ ಅಂತ್ಯಕ್ಕೆ ಈ ಸಂಬಂಧ ಕಡತಗಳ ವಿಲೇವಾರಿ ಪ್ರಗತಿ ಕುರಿತು ಚರ್ಚೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ಅಂಕಿ ಅಂಶದ ವಿವರಗಳು ಲಭ್ಯವಾಗಿವೆ.

ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮಹೇಂದ್ರಜೈನ್‌, ನಗರಾಭಿವೃದ್ಧಿ ಇಲಾಖೆಯ ಡಾ ಜೆ ರವಿಶಂಕರ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್‌ ಅವರೂ ಸೇರಿದಂತೆ ಒಟ್ಟು 7 ಇಲಾಖೆಗಳಲ್ಲಿ ಕೇವಲ ಶೇ.23.29ರಷ್ಟು ಮಾತ್ರ ವಿಲೇವಾರಿ ಆಗಿದೆ.

ಭೌತಿಕ ಕಡತಗಳಿಗೆ ಮುಕ್ತಾಯ ಹಾಡುವ ಸಲುವಾಗಿಯೇ ಇ-ಆಫೀಸ್‌ ತಂತ್ರಾಂಶವನ್ನು ಅಳವಡಿಸಿದ್ದರೂ ಯಾವುದೇ ಪ್ರಗತಿ ಕಂಡು ಬಂದಿಲ್ಲ. ವಿಶೇಷವೆಂದರೆ ಇ-ಆಫೀಸ್‌ನಲ್ಲಿಯೇ 17,148 ಸಂಖ್ಯೆಯಷ್ಟು ಕಡತಗಳು ವಿಲೇವಾರಿಯಾಗಿಲ್ಲ ಎಂಬುದು ಲಭ್ಯವಿರುವ ಅಂಕಿ ಅಂಶದಿಂದ ತಿಳಿದು ಬಂದಿದೆ.

ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಜೈನ್‌ ಅವರ ಬಳಿ ಒಟ್ಟು 9,845 ಕಡತಗಳಿವೆ. ಇವರ ಬಳಿ ಇರುವ ಕಡತಗಳು 30 ದಿನ ಮೀರಿದ್ದರೂ ಯಾವುದೇ ಕ್ರಮ ವಹಿಸಿಲ್ಲ. ಗಡುವು ಮೀರಿದ್ದರೂ ಕಡತ ವಿಲೇವಾರಿ ಮಾಡದ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಪೈಕಿ ಮಹೇಂದ್ರ ಜೈನ್‌ ಅವರು ಅಗ್ರಪಂಕ್ತಿಯಲ್ಲಿರುವುದು ಗೊತ್ತಾಗಿದೆ.

ಹಾಗೆಯೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್‌ ಅವರ ಬಳಿ 2,564, ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಜೆ ರವಿಶಂಕರ್‌ ಅವರ ಬಳಿ 7,425 ಕಡತಗಳು ವಿಲೇವಾರಿಗೆ ಬಾಕಿ ಉಳಿದಿವೆ. ಈ ಕಡತಗಳು 30 ದಿನ ಮೀರಿ ಯಾವುದೇ ಕ್ರಮ ವಹಿಸಿಲ್ಲ ಎಂಬುದು ದಾಖಲೆಯಿಂದ ತಿಳಿದು ಬಂದಿದೆ.

ಇನ್ನು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ 6,403, ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯಲ್ಲಿ 7,559, ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲಿ 3,719, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 3,554 ಕಡತಗಳು 30 ದಿನ ಮೀರಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಮಟ್ಟದಲ್ಲೇ ವಿಲೇವಾರಿ ಆಗದೇ ಬಾಕಿ ಉಳಿದಿವೆ.

the fil favicon

SUPPORT THE FILE

Latest News

Related Posts