ಅಲ್ಪಸಂಖ್ಯಾತರ ಸಂಘಸಂಸ್ಥೆಗಳ ಕೈವಶಕ್ಕೆ ವಿಧೇಯಕ; ಸಂವಿಧಾನ ವಿರೋಧಿ ಕೃತ್ಯ?

ಬೆಂಗಳೂರು; ಸಾಮಾನ್ಯ ಸೊಸೈಟಿಗಳು ಮತ್ತು ಅಲ್ಪಸಂಖ್ಯಾತ ಸೊಸೈಟಿಗಳ ನಡುವಿನ ತಾರತಮ್ಯವನ್ನು ತೊಡೆದು ಹಾಕುವ ಉದ್ದೇಶವನ್ನು ಮುಂದಿರಿಸಿರುವ ರಾಜ್ಯ ಬಿಜೆಪಿ ಸರ್ಕಾರವು ಸಂವಿಧಾನಕ್ಕೆ ವಿರುದ್ಧವಾಗಿ ಅಲ್ಪಸಂಖ್ಯಾತ ಸಂಘ ಸಂಸ್ಥೆಗಳನ್ನು ಕೈವಶ ಮಾಡಿಕೊಳ್ಳಲು ಹೊರಟಿದೆ. ಲೋಪಗಳನ್ನು ಮುಂದಿರಿಸಿ ಅಲ್ಪಸಂಖ್ಯಾತರ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಪ್ರಸ್ತಾವನೆ ಹೊಂದಿರುವ ತಿದ್ದುಪಡಿ ವಿಧೇಯಕದ ಮುಖಾಂತರ ಎಲ್ಲ ಸಹಕಾರ ಸಂಘ ಸಂಸ್ಥೆಗಳನ್ನು ಇಲ್ಲಿ ಒಟ್ಟುಗೂಡಿಸಲು ಹೊರಟಿರುವ ಸರ್ಕಾರ ಮತ್ತೊಂದು ತಪ್ಪು ಹೆಜ್ಜೆಯನ್ನಿರಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಅವಕಾಶ ಸಂವಿಧಾನ ಬಾಹಿರ ಎಂದು ಕರ್ನಾಟಕ ಹೈಕೋರ್ಟ್‌ 1987ರಲ್ಲೇ ಹೊರಡಿಸಿರುವ ಆದೇಶವನ್ನು ಸರಿಪಡಿಸುವ ಹೆಸರಿನಲ್ಲಿ ಕರ್ನಾಟಕ ಸೊಸೈಟಿಗಳ ನೋಂದಣಿ (ತಿದ್ದುಪಡಿ) 27 (ಎ)ಗೆ ತಿದ್ದುಪಡಿ ತರಲು ಹೊರಟಿದೆ.

ಅಲ್ಪಸಂಖ್ಯಾತ ಸಂಘ, ಸಂಸ್ಥೆಗಳನ್ನು ನಿಯಂತ್ರಣಕ್ಕೊಳಪಡಿಸುವ ಸಂಬಂಧ ತಿದ್ದುಪಡಿ ವಿಧೇಯಕವನ್ನು ಕಳೆದ ಒಂದು ವರ್ಷದ ಹಿಂದೆಯೇ ಸಿದ್ಧಪಡಿಸಿದ್ದರೂ ಹಿಂದಿನ ಅಧಿವೇಶನಗಳಲ್ಲಿ ಮಂಡಿಸಿರಲಿಲ್ಲ. ಆದರೀಗ ಸೋಮವಾರ (ಮಾರ್ಚ್‌ 15) ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಕರ್ನಾಟಕ ಸೊಸೈಟಿಗಳ ನೋಂದಣಿ (ತಿದ್ದುಪಡಿ) ವಿಧೇಯಕ 2021ನ್ನು ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರು ಮಂಡಿಸಲಿದ್ದಾರೆ.

ಮಾರ್ಚ್‌ 15ರಂದು ನಡೆಯಲಿರುವ ಅಧಿವೇಶನದಲ್ಲಿ 2021ನೇ ಸಾಲಿನ ಕರ್ನಾಟಕ ಸೊಸೈಟಿಗಳ ನೋಂದಣಿ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸುವುದು ಮತ್ತು ಅಂಗೀಕರಿಸಲು ಸೂಚಿಸುವ ವಿಧೇಯಕ ಮಂಡನೆಯಾಗಲಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ರಾಜ್ಯದಲ್ಲಿರುವ ಅಲ್ಪಸಂಖ್ಯಾತ ಸಂಘಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಸಂಬಂಧ ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 27(ಎ)ಗೆ ತಿದ್ದುಪಡಿ ತರಲು ಸಚಿವ ಸಂಪುಟದ ಮುಂದೆ ಪ್ರಸ್ತಾವಿಸಿದ್ದನ್ನು ‘ದಿ ಫೈಲ್‌’ 2020ರ ಜೂನ್‌ 26ರಂದೇ ವರದಿ ಪ್ರಕಟಿಸಿತ್ತು.

ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 27(ಎ)ರಡಿ ಅಲ್ಪಸಂಖ್ಯಾತ ಸಂಘಗಳಿಗೆ ಆಡಳಿತಾಧಿಕಾರಿ ನೇಮಿಸುವುದು ಸಂವಿಧಾನಬಾಹಿರ ಎಂದು ಕರ್ನಾಟಕ ಹೈಕೋರ್ಟ್ 33 ವರ್ಷದ (1987) ಹಿಂದೆ ತೀರ್ಪು ನೀಡಿತ್ತು. ಆ ನಂತರ ಯಾವ ಸರ್ಕಾರಗಳೂ ಅಲ್ಪಸಂಖ್ಯಾತ ಸಂಘ, ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಿಸಿರಲಿಲ್ಲ. ಆದರೀಗ ರಾಜ್ಯ ಬಿಜೆಪಿ ಸರ್ಕಾರ ಆಡಳಿತಾಧಿಕಾರಿ ನೇಮಕಕ್ಕೆ ಮಂಡಿಸಿರುವ ವಿಧೇಯಕವು ವಿವಾದಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.

ಕರ್ನಾಟಕ ಸಂಘಗಳ ಅಧಿನಿಯಮದಲ್ಲಿ ಲೋಪಗಳನ್ನು ಸರಿಪಡಿಸುವ ನೆಪವನ್ನೊಡ್ಡಿರುವ ರಾಜ್ಯ ಬಿಜೆಪಿ ಸರ್ಕಾರವು ತಿದ್ದುಪಡಿ ವಿಧೇಯಕದ ಮೂಲಕ ಅಲ್ಪಸಂಖ್ಯಾತ ಸಂಘ ಸಂಸ್ಥೆಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಹವಣಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ವಿಧೇಯಕದ ಉದ್ದೇಶವೇನು?

ಸಾಮಾನ್ಯ ಸೊಸೈಟಿಗಳು ಮತ್ತು ಅಲ್ಪಸಂಖ್ಯಾತ ಸೊಸೈಟಿಗಳ ನಡುವಿನ ತಾರತಮ್ಯವನ್ನು ತೊಡೆದು ಹಾಕಲು ಮತ್ತು ಮತ್ತಷ್ಟು ವ್ಯಾಜ್ಯಗಳನ್ನು ತಪ್ಪಿಸಲು, ಸರ್ಕಾರದ ಸೊಸೈಟಿಯ ಸದಸ್ಯರ ಮತ್ತು ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶವು ವಿಧೇಯಕದಲ್ಲಿದೆ ಎಂದು ಸರ್ಕಾರ ಹೇಳಿದೆ.

ಆಡಳಿತಾಧಿಕಾರಿ ನೇಮಕ ಸಂವಿಧಾನಬಾಹಿರವೇ?

ಖುರೇಷಿ ಎಜುಕೇಷನ್‌ ಸೊಸೈಟಿ ಮತ್ತು ಇತರರ ಪ್ರಕರಣದಲ್ಲಿ ಅಲ್ಪಸಂಖ್ಯಾತ ಸಂಘಗಳಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಅವಕಾಶವು ಸಂವಿಧಾನದ ಅನುಚ್ಛೇದ 31 ಮತ್ತು 31ಎ(1)(ಬಿ) ರಲ್ಲಿ ಅಲ್ಪಸಂಖ್ಯಾತರಿಗೆ ಒದಗಿಸಿರುವ ಹಕ್ಕುಗಳಿಗೆ ವಿರುದ್ಧವಾಗಿದೆಯಲ್ಲದೆ, ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 27(ಎ) ಅಡಿ ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಅವಕಾಶ ಸಂವಿಧಾನ ಬಾಹಿರ ಎಂದು ಕರ್ನಾಟಕ ಹೈಕೋರ್ಟ್‌ 1987ರಲ್ಲೇ ಆದೇಶಿಸಿತ್ತು.

‘ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 27(ಎ)ರಡಿ ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಅವಕಾಶವನ್ನು ನ್ಯಾಯಾಲಯವು ಸಂವಿಧಾನಬಾಹಿರವೆಂದು Struck down ಮಾಡಿ 1987ರಲ್ಲೇ ಆದೇಶಿಸಿರುವ ಹಿನ್ನೆಲೆಯಲ್ಲಿ ಸರ್ಕಾರವು ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೂ ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಅನುವಾಗುವಂತೆ ಸಂಘಗಳ ನೋಂದಣಿ ಅಧಿನಿಯಮ, 1960ರ ಪ್ರಕರಣ 27(ಎ)ಗೆ ತಿದ್ದುಪಡಿ ಮಾಡುವ ಅಗತ್ಯವಿದೆ,’ ಎಂದು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಅವರು ಸಚಿವ ಸಂಪುಟದ ಮುಂದೆ ಪ್ರಸ್ತಾಪಿಸಿದ್ದರು.

ತಿದ್ದುಪಡಿ ನಂತರ ನಿಯಮದಲ್ಲೇನಿರುತ್ತೆ?

ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಲ್ಲಿನ ವ್ಯಾಜ್ಯಗಳು ಇತ್ಯರ್ಥಗೊಳ್ಳದೇ ಬಾಕಿ ಇದ್ದಲ್ಲಿ ಅಥವಾ ವಾರ್ಷಿಕ ಮಹಾಸಭೆಗಳನ್ನು ನಡೆಸದೇ ಇದ್ದ ಪಕ್ಷದಲ್ಲಿ ಸೆಕ್ಷನ್‌ 27(ಎ) ತಿದ್ದುಪಡಿ ಪ್ರಕಾರ ಆಡಳಿತಾಧಿಕಾರಿ ನೇಮಿಸಬಹುದು. ಸಂಘದ ಪದಾಧಿಕಾರಿಗಳು ಅಥವಾ ಆಡಳಿತ ಮಂಡಳಿಯ ಅವಧಿ ಪೂರ್ಣಗೊಂಡ ಬಳಿಕವೂ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರದೇ ಇದ್ದಲ್ಲಿ ಮತ್ತು ಸಹಕಾರ ಸಂಘಗಳ ರಿಜಿಸ್ಟ್ರಾರ್‌ ವಿಚಾರಣೆಗೆ ಆದೇಶಿಸಿದ್ದರೆ ಸಾರ್ವಜನಿಕ ಹಿತಾಸಕ್ತಿ ಅನ್ವಯ ಆಡಳಿತಾಧಿಕಾರಿ ನೇಮಿಸಬಹುದು.

ಅಲ್ಲದೆ ಸೊಸೈಟಿಯ ಹೊಣೆಗಾರಿಕೆಗಳು ಯಾವುದಾದರೂ ಇದ್ದಲ್ಲಿ ಅವುಗಳನ್ನು ಇತ್ಯರ್ಥಗೊಳಿಸಿದ ತರುವಾಯ ರಾಜ್ಯ ಸರ್ಕಾರವು ಅದರ ಚರ ಅಥವಾ ಸ್ಥಿರ ಸ್ವತ್ತುಗಳನ್ನು ವೈಯಕ್ತಿಕ ಅಥವಾ ಬದಲಾಳುವಿನ ಮೂಲಕ ಹಾಜರಿರುವ ಸದಸ್ಯರ ಐದನೇ ಮೂರರಷ್ಟು ಕಡಿಮೆಯಲ್ಲದ ಮತಗಳ ಮೂಲಕ ನಿರ್ಧರಿಸಬೇಕಾದ ಏಕರೂಪದ ಅಥವಾ ಅದೇ ರೀತಿಯ ಉದ್ದೇಶಗಳುಳ್ಳ ಯಾವುದೇ ಇತರ ಸೊಸೈಟಿಗೆ ವಹಿಸಬಹುದು.

‘ಕರ್ನಾಟಕ ಸಂಘಗಳ ಅಧಿನಿಯಮ 1960ರ ಪ್ರಕರಣ 27(ಎ)ಗೆ ಸೂಕ್ತ ತಿದ್ದುಪಡಿ ತಂದು ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೂ ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಅನುವಾಗುವಂತೆ ಕಾಯ್ದೆಯಲ್ಲಿ ಈಗಿರುವ ಲೋಪವನ್ನು ತಿದ್ದುಪಡಿ ಮೂಲಕ ಸರಿಪಡಿಸುವುದು ಸರ್ಕಾರದ ಹೊಣೆಗಾರಿಕೆ. ಆಡಳಿತಾಧಿಕಾರಿ ನೇಮಕಾತಿ ವಿಷಯದಲ್ಲಿ ಸಾಮಾನ್ಯ ಮತ್ತು ಅಲ್ಪಸಂಖ್ಯಾತ ಸಂಘ ಸಂಸ್ಥೆಗಳನ್ನು ಪ್ರತ್ಯೇಕಿಸಿ ನೋಡುವುದನ್ನು ತಪ್ಪಿಸಬಹುದಾಗಿರುತ್ತದೆ,’ ಎಂದು ತಿದ್ದುಪಡಿಯನ್ನು ಸಮರ್ಥಿಸಿಕೊಂಡಿರುವುದು ದಾಖಲೆಯಿಂದ ತಿಳಿದು ಬಂದಿದೆ.

‘ಈ ವಿಧೇಯಕದ ಉದ್ದೇಶವೇ ರಾಜಕೀಯವಾಗಿದೆ. ಏನನ್ನೇ ತಿದ್ದುಪಡಿ ಮಾಡಬೇಕಿದ್ದರೇ ಸಮುದಾಯದ ಮುಖಂಡರ ಅಭಿಪ್ರಾಯ ಪಡೆಯಬೇಕು. ಅವರ ಸಲಹೆ ಮೇರೆಗೆ ತಿದ್ದುಪಡಿಗೆ ಮುಂದಾಗಬೇಕಿತ್ತು. ಆದರೆ ಇದಾವುದೂ ಆಗಿಲ್ಲ. ಹಾಗಾಗಿ ಇಡೀ ವಿಧೇಯಕದ ಹಿಂದೆ ಅಲ್ಪಸಂಖ್ಯಾತರ ಸಂಘ ಸಂಸ್ಥೆಗಳನ್ನು ತನ್ನ ಕೈವಶದಲ್ಲಿರಿಸಿಕೊಳ್ಳುವ ಸಂಚಿದೆ. ಅಲ್ಪಸಂಖ್ಯಾತರ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಿಸಬಾರದು ಎಂದು ಹೈಕೋರ್ಟ್‌ ಈ ಹಿಂದೆಯೇ ತೀರ್ಪು ನೀಡಿದೆ. ಆದರೂ ಈ ವಿಧೇಯಕವನ್ನು ತರುವ ಮೂಲಕ ಆದೇಶವನ್ನು ಉಲ್ಲಂಘಿಸಲು ಹೊರಟಂತಿದೆ ಎನ್ನುತ್ತಾರೆ ನಿವೃತ್ತ ಐಪಿಎಸ್‌ ಅಧಿಕಾರಿಯೂ ಆಗಿರುವ ನ್ಯಾಷನಲ್‌ ಸೆಂಟರ್‌ ಫಾರ್‌ ರೀಸರ್ಚ್ ಅಂಡ್‌ ಡೆವಲೆಪ್‌ಮೆಂಟ್‌ನ ಅಧ್ಯಕ್ಷ ನಿಸಾರ್‌ ಅಹ್ಮದ್‌.

ಅಲ್ಪಸಂಖ್ಯಾತ ಸಂಘ ಸಂಸ್ಥೆಗಳು ಖಾಸಗಿ ಸಂಘ ಸಂಸ್ಥೆಗಳಾಗಿದ್ದರೆ ಸಂವಿಧಾನತ್ಮಕವಾಗಿ ದತ್ತವಾಗಿರುವ ಅಧಿಕಾರಗಳು ಇರುವ ಕಾರಣ ಸರ್ಕಾರ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಮತ್ತು ಮಾಡಲೂಬಾರದು. ಆದರೆ ಸರ್ಕಾರದ ಅಧಿನಿಯಮದೊಳಗೆ ಇರುವ ಅಲ್ಪಸಂಖ್ಯಾತರ ಆಯೋಗ, ವಕ್ಫ್‌ ಬೋರ್ಡ್‌, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಇವುಗಳಿಗೆ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಬಹುದು. ಯಾಕೆಂದರೆ ಇವುಗಳೆಲ್ಲವೂ ಕೂಡ ಸರ್ಕಾರದಿಂದ ರಚಿತವಾಗಿರುವ ಮತ್ತು ಸರ್ಕಾರದ ಅನುದಾನದ ಮೇಲೆ ನಡೆಯುವಂತಹ ಸಂಸ್ಥೆಗಳು. ಬಹಳ ಮುಖ್ಯವಾಗಿ ಸಹಕಾರ ಸಂಘ ಸಂಸ್ಥೆಗಳು ಸರ್ಕಾರದಿಂದ ನಡೆಯುವ ಸಂಘ ಸಂಸ್ಥೆಗಳಲ್ಲ. ಅದು ಸರ್ಕಾರೇತರ ಸಂಘಟನೆಗಳು. ಆದ ಕಾರಣ ಈ ತಿದ್ದುಪಡಿ ವಿಧೇಯಕವು ಸಂವಿಧಾನಕ್ಕೆ ವಿರುದ್ಧವಾಗಿದೆ.

ಮುಜಾಫರ್‌ ಅಸ್ಸಾದಿ, ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ತಜ್ಞ

ಎಲ್ಲ ಸಹಕಾರ ಸಂಘ ಸಂಸ್ಥೆಗಳನ್ನು ಇಲ್ಲಿ ಒಟ್ಟುಗೂಡಿಸುವ ಮೂಲಕ ಸರ್ಕಾರ ಮತ್ತೊಂದು ತಪ್ಪು ಹೆಜ್ಜೆಯನ್ನಿರಿಸಿದೆ. ಶೇ. 95 ರಷ್ಟು ಸಹಕಾರ ಸಂಘ, ಸಂಸ್ಥೆಗಳು ಸರ್ಕಾರದಿಂದ ರಚನೆಯಾದ ಸಂಘ ಸಂಸ್ಥೆಗಳಲ್ಲ. ಅವುಗಳು ಜನಸಾಮಾನ್ಯರ ಹಣಕಾಸಿನ ಕ್ರೋಢೀಕರಣದಿಂದ ಬೆಳೆದ ಸಹಕಾರ ಸಂಘಗಳು. ಬಹಳ ಮುಖ್ಯವಾಗಿ ಈ ಸಂಘಗಳು ಇರುವಂತಹದ್ದು ಬಡತನ ನಿರ್ಮೂಲನೆಗೆ ಮತ್ತು ಆರ್ಥಿಕತೆ ಸಬಲೀಕರಣಕ್ಕಾಗಿ ಇರುವಂತಹ ಸಂಘಟನೆಗಳು,’ ಎಂದು ಪ್ರತಿಪಾದಿಸುತ್ತಾರೆ ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ತಜ್ಞ ಮುಜಾಫರ್‌ ಅಸ್ಸಾದಿ.

ಅಲ್ಪಸಂಖ್ಯಾತರ ಸಂಘ ಸಂಸ್ಥೆಗಳಲ್ಲಿ ಆಡಳಿತಾಧಿಕಾರಿ ನೇಮಕ ಸರಿಯಲ್ಲ. ವಿಧೇಯಕಕ್ಕೆ ತಿದ್ದುಪಡಿ ತಂದರೆ ಅಲ್ಪಸಂಖ್ಯಾತರ ಸೌಲಭ್ಯಗಳನ್ನು ಮೊಟಕುಗೊಳಿಸಿದಂತಾಗುತ್ತದೆ. ಈ ಸಮುದಾಯದಲ್ಲಿ ಶಿಕ್ಷಣ, ಉದ್ಯೋಗ ಹೊಂದಿರುವವರ ಸಂಖ್ಯೆ ಕಡಿಮೆ ಇದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.12.91ರಷ್ಟು ಅಲ್ಪಸಂಖ್ಯಾತರಿದ್ದಾರೆ. ಬೇರೆ ಸಮುದಾಯಕ್ಕೆ ಹೋಲಿಸಿದಲ್ಲಿ ಅಲ್ಪಸಂಖ್ಯಾತ ಸಮುದಾಯ ಎಲ್ಲಾ ವಲಯಗಳಲ್ಲೂ ಹಿಂದುಳಿದಿದೆ. ಸಂಘ ಸಂಸ್ಥೆಗಳು ಸಮುದಾಯದ ಏಳ್ಗೆಗಾಗಿ ದುಡಿಯುತ್ತಿವೆ. ಸಣ್ಣ ಪುಟ್ಟ ಲೋಪದೋಷಗಳನ್ನು ಸರಿಪಡಿಸಬೇಕೇ ವಿನಃ ಆಡಳಿತಾಧಿಕಾರಿಗಳನ್ನು ನೇಮಿಸುವ ಮೂಲಕ ಅಲ್ಪಸಂಖ್ಯಾತ ಸಂಘ ಸಂಸ್ಥೆಗಳನ್ನು ತಮ್ಮ ಕೈವಶ ಮಾಡಿಕೊಳ್ಳಬಾರದು ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

ನ್ಯಾಯಾಲಯವು ಈಗಾಗಲೇ ಸಂವಿಧಾನಬಾಹಿರ ಎಂದು ತೀರ್ಪು ನೀಡಿರುವಾಗ ಹೇಗೆ ಅದನ್ನು ಸರಿಪಡಿಸಿಕೊಳ್ಳುತ್ತೇವೆಂದು ಹೇಳುತ್ತಾರೆ? ಹಾಗಾದರೆ ಇವರಿಗೆ ಸರ್ವೋಚ್ಛ ನ್ಯಾಯಾಲಯದ ಅಧಿಕಾರವೇನು ಲಭ್ಯವಾಗಿದೆಯೇ, ಇಡೀ ಪ್ರಕರಣವನ್ನು ಅವಲೋಕಿಸಿದಾಗ ಇದು ಬರೀ ಸಂವಿಧಾನ ವಿರೋಧಿ ಮಾತ್ರವಲ್ಲ, ಇದು ದುರುದ್ದೇಶಪೂರಿತವಾದದ್ದು. ಅಲ್ಪಸಂಖ್ಯಾತರ ಹಕ್ಕುಗಳನ್ನು ಸದೆಬಡಿಯುವಂತದ್ದು ಎಂಬುದು ಸ್ಪಷ್ಟವಾಗುತ್ತದೆ

ಡಾ ಸಿ ಎಸ್‌ ದ್ವಾರಕಾನಾಥ್‌,

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ

ಮಠಗಳನ್ನು ಸರಕಾರದ ನಿಯಂತ್ರಣಕ್ಕೊಳಪಡಿಸುವ ಸಂಬಂಧ ಕಾನೂನು ರೂಪಿಸಲು ಹಿಂದಿನ ಕಾಂಗ್ರೆಸ್‌ ಸರಕಾರ ಮುಂದಾಗಿತ್ತು. ಸಂವಿಧಾನದ ಕಲಂ 162ರ 31-ಎ ಅನ್ವಯ ಮಠಗಳಲ್ಲಿ ದುರಾಡಳಿತ, ಅವ್ಯವಹಾರ ಹಾಗೂ ಆಸ್ತಿ ದುರುಪಯೋಗ ನಡೆದ ಸಂದರ್ಭಗಳಲ್ಲಿ ಸರಕಾರ ಮಧ್ಯ ಪ್ರವೇಶ ಮಾಡಿ ಕ್ರಮ ಜರುಗಿಸಲು ಅವಕಾಶವಿದೆ ಎಂಬ ಅಂಶವನ್ನು ಮುಂದಿಟ್ಟುಕೊಂಡು ಕಾನೂನು ರೂಪಿಸುವಂತೆ ಸೋಸಲೆ ವ್ಯಾಸರಾಜ ಮಠದ ಪ್ರಕರಣದಲ್ಲಿ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತ್ತು.

ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ಸಂಸ್ಥೆಗಳನ್ನು ಉದ್ದೇಶಿತ ಕಾಯಿದೆಯಡಿ ತರುವ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ ಎಂದು ಮುಜುರಾಯಿ ಸಚಿವ ಪ್ರಕಾಶ್‌ ಹುಕ್ಕೇರಿ ಸ್ಪಷ್ಟಪಡಿಸಿದ್ದರು. ಈ ಕಾಯಿದೆಯು ಹಿಂದೂ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳಿಗೆ ಮಾತ್ರ ರೂಪಿತವಾಗಿರುವುದರಿಂದ ಧಾರ್ಮಿಕ ಅಲ್ಪಸಂಖ್ಯಾತರ ಸಂಸ್ಥೆಗಳನ್ನು ಇದರ ವ್ಯಾಪ್ತಿಗೆ ತರಲು ಅವಕಾಶವಿಲ್ಲ ಎಂದು ಹೇಳಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts