Saturday | September 26, 2026 |

ಅಂಜುಂ ಪರ್ವೇಝ್ ವರದಿ ಸರ್ಕಾರದ ಪರಿಶೀಲನೆ, ಪರಿಗಣನೆಯಲ್ಲಿರುವಾಗಲೇ 21 ಪ್ಯಾಕೇಜ್‌ ಟೆಂಡರ್ ಗೆ ಆಡಳಿತಾತ್ಮಕ ಅನುಮೋದನೆ; ನಗರಾಭಿವೃದ್ಧಿ ಇಲಾಖೆಯ ತರಾತುರಿ ಹಿಂದೇನಿದೆ?

ಬೆಂಗಳೂರು; ಹಸಿ ತ್ಯಾಜ್ಯ, ಒಣ ತಾಜ್ಯ, ನೈರ್ಮಲ್ಯ ತ್ಯಾಜ್ಯ, ರಸ್ತೆ ಗುಡಿಸುವಿಕೆ, ತ್ಯಾಜ್ಯ ಸಂಗ್ರಹಣೆ,  ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆ ಮಾಡಲು ಆಹ್ವಾನಿಸಿದ್ದ ಟೆಂಡರ್ ಮತ್ತು ಶೇ. 14ರಷ್ಟು ಪ್ರೀಮಿಯಂ ಪರಿಗಣನೆ ಸಂಬಂಧ ರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೆಜ್ ನೇತೃತ್ವದ ಸಮಿತಿಯು ನೀಡಿದ್ದ ವರದಿಯು ಸರ್ಕಾರದ ಪರಿಶೀಲನೆ ಮತ್ತು ಪರಿಗಣನೆಯಲ್ಲಿ ಇರುವಾಗಲೇ ನಗರಾಭಿವೃದ್ಧಿ ಇಲಾಖೆಯು ಎಲ್ಲಾ 21 ಪ್ಯಾಕೇಜ್‌ಗಳಿಗೂ ಆಡಳಿತಾತ್ಮಕ ಅನುಮೋದನೆ ನೀಡಿರುವುದು ಇದೀಗ ಬಹಿರಂಗವಾಗಿದೆ.

ಘನ ತ್ಯಾಜ್ಯ ಸಂಗ್ರಹಣೆ, ವಿಲೇವಾರಿ ಸಂಬಂಧ ಆಹ್ವಾನಿಸಿದ್ದ ಟೆಂಡರ್ ಪ್ರಕ್ರಿಯೆಯಲ್ಲಿಯೇ ಸಾವಿರಾರು ಕೋಟಿ  ರುಪಾಯಿ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಈ ನಡುವೆ ಅಂಜುಂ ಪರ್ವೇಜ್‌ ನೇತೃತ್ವದ ಸಮಿತಿಯೂ ಸಹ ವರದಿ ನೀಡಿತ್ತು. ಈ ವರದಿ ಕುರಿತು ಸರ್ಕಾರವು ಇನ್ನೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಈ ಮಧ್ಯೆಯೇ ನಗರಾಭಿವೃದ್ಧಿ ಇಲಾಖೆಯು ತರಾತುರಿಯಲ್ಲಿ 21 ಪ್ಯಾಕೇಜ್‌ಗಳ ಟೆಂಡರ್ ಗೆ ಆಡಳಿತಾತ್ಮಕ ಅನುಮೋದನೆ ನೀಡಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ.

ಅಲ್ಲದೇ ಗುತ್ತಿಗೆದಾರರಾದ ಎಸ್‌ ಎನ್ ಬಾಲಸುಬ್ರಮಣಿಯಂ ಎಂಬುವರು ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಮತ್ತು ಕಮಿಷನ್‌ಗೆ ಬೇಡಿಕೆ ಇರಿಸಿದ್ದಾರೆ ಎಂದು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ರಿಟ್‌ ಅರ್ಜಿಯಲ್ಲಿ  ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್‌ ಮತ್ತು ಬಿಎಸ್‌ಡಬ್ಲ್ಯೂಎಲ್‌ನ  ವ್ಯವಸ್ಥಾಪಕ ನಿರ್ದೇಶಕ  ಐಎಎಸ್ ಅಧಿಕಾರಿ ಕರೀಗೌಡ ಅವರ ಹೆಸರನ್ನೂ ಸಹ ಉಲ್ಲೇಖಿಸಿದ್ದಾರೆ.

ಈ ಮಧ್ಯೆ ಇದೇ ಗುತ್ತಿಗೆದಾರ ಎಸ್‌ ಎನ್‌ ಬಾಲಸುಬ್ರಮಣಿಯಂ ಅವರು ನಗರಾಭಿವೃದ್ಧಿ ಇಲಾಖೆಗೆ ಆರ್‍‌ಟಿಐ ಅಡಿಯಲ್ಲಿ ಅರ್ಜಿಯನ್ನೂ ಸಹ ಸಲ್ಲಿಸಿದ್ದರು. ಈ ಅರ್ಜಿಗೆ ನೀಡಿರುವ ಹಿಂಬರಹದಲ್ಲಿ ‘ ಅಪರ ಮುಖ್ಯ ಕಾರ್ಯದರ್ಶಿಗಳ ಮಟ್ಟದಲ್ಲಿ ರಚಿತವಾದ ಸಮಿತಿಯು ಬೆಂಗಳೂರು ಘನ ತ್ಯಾfಯ ನಿರ್ವಹಣೆ ನಿಯಮಿತ ಸಂಸ್ಥೆಯ ಟೆಂಡರ್ ಅನುಮೋದನೆ ನೀಡುವ ವಿಷಯಕ್ಕೆ ಸಂಬಂಧಿಸಿದೆ. ಈ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆ ಮತ್ತು ಪರಿಗಣನೆಯಲ್ಲಿದೆ. ಹೀಗಾಗಿ ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 8(1)ರ ಪ್ರಕಾರ ಮಾಹಿತಿ ನೀಡಲು ಅವಕಾಶವಿರುವುದಿಲ್ಲ,’ ಎಂದು ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆಗಿರುವ ಅಧೀನ ಕಾರ್ಯದರ್ಶಿ ಲಕ್ಷ್ಮೀಸಾಗರ್ ಎನ್‌ ಕೆ ಅವರು 2026ರ ಸೆ.21ರಂದು ಹಿಂಬರಹ ನೀಡಿದ್ದಾರೆ.

 

 

ಅದೇ ರೀತಿ ಗುತ್ತಿಗೆದಾರ ಎಸ್‌ ಎನ್‌ ಬಾಲಸುಬ್ರಮಣಿಯಂ ಅವರು  ಸಲ್ಲಿಸಿರುವ ಅರ್ಜಿಯ ವಿಚಾರಣೆ ಇನ್ನೂ ಇತ್ಯರ್ಥವಾಗಿಲ್ಲ. ಮತ್ತು ಅಪರ ಮುಖ್ಯ ಕಾರ್ಯದರ್ಶಿಗಳ ಮಟ್ಟದಲ್ಲಿ ರಚಿಸಲಾಗಿರುವ ಸಮಿತಿಯು ನೀಡಿರುವ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆ ಮತ್ತು ಪರಿಗಣನೆಯಲ್ಲಿದೆ ಎಂದು ಖುದ್ದು ನಗರಾಭಿವೃದ್ಧಿ ಇಲಾಖೆಯೇ ಹಿಂಬರಹ ನೀಡಿದೆ. ಹೀಗಿದ್ದರೂ ಸಹ ನಗರಾಭಿವೃದ್ಧಿ ಇಲಾಖೆಯು 2026ರ ಆಗಸ್ಟ್‌ 27ರಂದು 21 ಪ್ಯಾಕೇಜ್‌ಗಳ ಟೆಂಡರ್‍‌ ಗೆ ಆಡಳಿತಾತ್ಮಕವಾಗಿ ಅನುಮೋದನೆ ನೀಡಿರುವುದು ಸಂಶಯಗಳಿಗೆ ಕಾರಣವಾಗಿದೆ.

21 ಪ್ಯಾಕೇಜ್‌ಗಳ ವಿಷಯವಾಗಿ ಪರಿಷ್ಕೃತ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ಮತ್ತು ಶೇ.5ಕ್ಕೆ ಮೀರಿದ ಟೆಂಡರ್ ಪ್ರೀಮಿಯಂ ನೀಡುವ ಸಂಬಂಧ ಸಚಿವ ಸಂಪುಟದ ತೀರ್ಮಾನಕ್ಕೆ ಮಂಡಿಸಿತ್ತು. ಈ ಪ್ರಸ್ತಾವನೆಯನ್ನು ಸಚಿವ ಸಂಪುಟ ಸಭೆಯು ಕೂಲಂಕುಷವಾಗಿ ಚರ್ಚಿಸಿ ಅನುಮೋದಿಸಿತ್ತು. ಅನುಮೋದನೆ ದೊರೆತ ಕೂಡಲೇ 2026ರ ಆಗಸ್ಟ್‌ 27ರಂದು ಆದೇಶ ಹೊರಡಿಸಿದೆ.

ಯಲಹಂಕ ವಿಭಾಗದದಲ್ಲಿ (ಪ್ಯಾಕೇಜ್‌ -32) call-2 ಯೋಜನೆಯ ಅಂದಾಜು ಮೊತ್ತ 106.78 ಕೋಟಿ ಗೆ ನೀಡಿದ್ದ ಆಡಳಿತಾತ್ಮಕ ಅನುಮೋದನೆಯನ್ನು ಪರಿಷ್ಕರಿಸಿ 112.71 ಕೋಟಿ ರು ಪರಿಷ್ಕೃತ ಅಂದಾಜು ಮೊತ್ತಕ್ಕೆ  ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

 

 

ಅಲ್ಲದೇ ಪ್ರಸ್ತಾವಿತ ಯೋಜನೆಯ ಏಳು ವರ್ಷಗಳ ಅವಧಿಯ ಟೆಂಡರ್‍ನ ಎಲ್‌ 1 ಗುತ್ತಿಗೆದಾರರಾದ SRI VASIPALLI LOKIESH,, SRP CLEAN ENVIRO ENGINEERS PRIVATE LIMITED  ಅವರು ದರ ಸಂಧಾನದ ನಂತರ ನಮೂದಿಸಿರುವ ವಾರ್ಷಿಕ ಮೊತ್ತ 13,84,39,320 ರು (ಟೆಂಡರ್‍‌ಗಿಟ್ಟ ಮೊತ್ತ 12,14,38,000) ಗಳಿಗೆ ಹೋಲಿಸಿದಾಗ ಶೇ. 14ರಷ್ಟು ಟೆಂಡರ್ ಗೆ ಅನುಮೋದನೆ ನೀಡಿರುವುದು ಆದೇಶದಿಂದ ತಿಳಿದು ಬಂದಿದೆ.

ಪ್ರಾಥಮಿಕ ಹಂತದ ಕಸ ಸಂಗ್ರಹಣೆ ಮತ್ತು ಸಾಗಾಣಿಕೆ ಮಾಡುವ ಸಂಬಂಧ ಟೆಂಡರ್ ಪ್ರಕ್ರಿಯೆಯಲ್ಲಿಯೇ ಹಲವು ಗಂಭೀರ ಸ್ವರೂಪದ ಅಕ್ರಮಗಳು ನಡೆದಿದ್ದವು ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಆರೋಪಗಳ ಕುರಿತು ಪರಿಶೀಲನೆ ನಡೆಸಿದ್ದ ಅಂಜುಂ ಪರ್ವೇಜ್ ನೇತೃತ್ವದ ಸಮಿತಿಯು ಸರ್ಕಾರಕ್ಕೆ ವರದಿ ನೀಡಿತ್ತು. ಈ ವರದಿಯು, ಕಸ ಸಂಗ್ರಹಣೆ ಮತ್ತು ಸಾಗಾಣಿಕೆಯ ಟೆಂಡರ್ ಪ್ರಕ್ರಿಯೆಗಳ ಮತ್ತೊಂದು ಮಗ್ಗುಲನ್ನು ಅನಾವರಣ ಮಾಡಿತ್ತು.

4,791.95 ಕೋಟಿ ಮೊತ್ತದ 21 ಪ್ಯಾಕೇಜ್‌ ಟೆಂಡರ್ ಅನುಮೋದನೆ ಪ್ರಕರಣ; ಶೇ.14ರ ಟೆಂಡರ್ ಪ್ರೀಮಿಯಂ ಪರಿಗಣನೆಗೆ ಅಂಜುಂ ಪರ್ವೇಜ್ ಸಮಿತಿ ಆಕ್ಷೇಪ, ವರದಿ ಬಹಿರಂಗ

ಪ್ರಾಥಮಿಕ ಹಂತದ ಕಸ ಸಂಗ್ರಹಣೆ ಮತ್ತು ಸಾಗಾಣಿಕೆ ಕುರಿತು 2012ರಿಂದಲೂ ಟೆಂಡರ್ ಕರೆಯಲಾಗುತ್ತಿದೆ. ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಮಿತಿಯು ಹೇಳಿರುವಂತೆ ಇದುವರೆಗೆ ಒಂದಿಲ್ಲೊಂದು ಕಾರಣಗಳಿಂದ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಅಲ್ಲದೇ ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯನ್ನು ಸದೃಢಗೊಳಿಸಿ ಕಾರ್ಯಾದೇಶ ನೀಡಲು ಸಾಧ್ಯವಾಗಿಲ್ಲ ಎಂಬ ಕುರಿತು ಸಮಿತಿಯು ಯಾವುದೇ ಟಿಪ್ಪಣಿ ಮಾಡಿಲ್ಲ.

ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥಾಪನಾ ಮಂಡಳಿಯು 7 ವರ್ಷಗಳ ಅವಧಿಗೆ ಬೇಕಾಗುವ ವಾಹನಗಳ ಅಧಾರದ ಮೇಲೆ ತಯಾರಿಸಿರುವ ಅಂದಾಜನ್ನು ಸಮಿತಿಯು ಪರಿಶೀಲಿಸಿದೆ. ಪ್ರಸ್ತಾಪಿತ ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆ ಅಂದಾಜನ್ನು ಪ್ರಸಕ್ತ ಉತ್ಪಾದನೆಯಾಗುತ್ತಿರುವ ಘನತ್ಯಾಜ್ಯ ಮತ್ತು ಅಂದಾಜು ಬೆಳವಣಿಗೆ ಆಧಾರದ ಮೇಲೆ ತಯಾರಿಸಿರುವುದನ್ನು ಸಮಿತಿಯು ಗಮನಿಸಿದೆ. ಇದರ ಅಧಾರದ ಮೇಲೆಯೇ 7 ವರ್ಷಗಳಿಗೆ ಬೇಕಾಗುವ ವಾಹನಗಳ ಸಂಖ್ಯೆಯನ್ನು ಪರಿಗಣಿಸಿರುವುದು, ವಾಹನಗಳ ನಿರ್ವಹಣೆ ಮತ್ತು ಮಾನವ ಸಂಪನ್ಮೂಲ ವೆಚ್ಚದ ಆಧಾರದ ಮೇಲೆ ಅಂದಾಜು ತಯಾರಿಸಿರುವುದನ್ನು ಸಮಿತಿಯು ಗಮನಿಸಿತ್ತು.

 

 

ಘನತ್ಯಾಜ್ಯ ಸಂಗ್ರಹಣೆಯಲ್ಲಿ 100 ಕೆ ಜಿ ಗಿಂತ ಕಡಿಮೆ ಉತ್ಪಾದನೆಯಾಗುತ್ತಿರುವ ವಾಣಿಜ್ಯ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆ ಮಾಡಲಾಗುತ್ತಿದೆ. ಅಲ್ಲದೇ ಇದರೊಂದಿಗೆ ಪ್ರಸಕ್ತ ಆಹ್ವಾನಿಸಿರುವ ಟೆಂಡರ್‍‌ನಲ್ಲಿ ಸಣ್ಣ ಪ್ರಮಾಣದ ರಸ್ತೆ ಬದಿ ವಿಲೇವಾರಿಯಾದ ಕಟ್ಟಡ ಭಗ್ನಾವಶೇಷ ತ್ಯಾಜ್ಯ ಮತ್ತು ಬೃಹತ್‌ ಪ್ರಮಾಣದ ತ್ಯಾಜ್ಯ ಸಾಗಿಸಲು ಅವಶ್ಯಕ ವಾಹನಗಳನ್ನು ಅಳವಡಿಸಿಕೊಂಡಿರುವುದನ್ನು ಸಮಿತಿಯು ಗಮನಿಸಿತ್ತು.

ಅಂದಾಜನ್ನು ತಯಾರಿಸುವ ಸಂದರ್ಭದಲ್ಲಿ ಪಿಡಬ್ಲ್ಯೂಡಿ ಇಲಾಖೆ ಸಂಹಿತೆ 2014ರ ಪ್ಯಾರಾ 92(8)(5)ರಂತೆ ವಾರ್ಷಿಕ ಶೇ.5ರ ದರ ಹೆಚ್ಚಳದ ಅಂದಾಜಿಗೆ ಅವಕಾಶ ಕಲ್ಪಿಸಿದೆ. ಆದರೆ ಟೆಂಡರ್ ದಾಖಲೆಯಲ್ಲಿ ಇಂಧನ ದರಗಳಲ್ಲಿನ ಹೆಚ್ಚಳ ಮತ್ತು ಮಾನವ ಸಂಪನ್ಮೂಲಗಳಿಗೆ ಸಂಬಂಧಿಸಿದಂತೆ ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಟ ವೇತನ ಪಾವತಿಸುವ ಷರತ್ತು ಅಳವಡಿಸಿದೆ. ಇಂಧನ ವೆಚ್ಚವನ್ನು ಸಗಟು ದರ ಆಧಾರದದಲ್ಲಿ, ಕಾರ್ಮಿಕರ ವೆಚ್ಚವನ್ನು ಕನಿಷ್ಟ ವೇತನ ದರಗಳ ಆಧಾರದ ಮೇಲೆ ಪಾವತಿಸುವ ಷರತ್ತು ಅಳವಡಿಸಿದೆ. ಆದರೆ ಗುತ್ತಿಗೆದಾರರಿಗೆ ಇವೆರಡರಲ್ಲಿ ಯಾವ ಮೊತ್ತವನ್ನು ಪಾವತಿಸಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಸೂಚಿಸಿತ್ತು.

ಎಸ್ಕಲೇಷನ್ ಆಗಿಲ್ಲ

ಇದಕ್ಕೆ ಅನುಪಾಲನೆ ವರದಿ ನೀಡಿದ್ದ ಬಿಎಸ್‌ಡಬ್ಲ್ಯೂಎಂಎಲ್‌, ಪಿಡಬ್ಲ್ಯೂಡಿ ಇಲಾಖೆ ಸಂಹಿತೆ 2014ರ ಪ್ಯಾರಾ 92(8)(5)ರಂತೆ ಅಂದಾಜು ತಯಾರಿಸುವ ಸಂದರ್ಭದಲ್ಲಿ ಭವಿಷ್ಯದಲ್ಲಿ ಸಂಭವಿಸಬಹುದಾದ ವೆಚ್ಚದ ಏರಿಳಿತಗಳನ್ನು ಪರಿಗಣಿಸಿದೆ, ವಾರ್ಷಿಕವಾಗಿ ಶೇ.5ರಷ್ಟು ಹೆಚ್ಚುವರಿ ಮೊತ್ತವನ್ನು ಕೇವಲ ಅಂದಾಜು ಹಾಗೂ ಆಡಳಿತಾತ್ಮಕ ಅನುಮೋದನೆ ಉದ್ದೇಶಕ್ಕಾಗಿ ಮಾತ್ರ ಪರಿಗಣಿಸಲಾಗಿದೆ ಎಂದು ಸಮರ್ಥಿಸಿಕೊಂಡಿದೆ. ಅಲ್ಲದೇ ಶೇ.5ರಷ್ಟು ಹೆಚ್ಚುವರಿ ಮೊತ್ತವು ಗುತ್ತಿಗೆದಾರರಿಗೆ ಪಾವತಿಸಬೇಕಾದ ನಿಗದಿತ ಎಸ್ಕಲೇಷನ್ ಆಗಿಲ್ಲ ಎಂದು ಸಮಜಾಯಿಷಿ ನೀಡಿತ್ತು.

 

 

ಅದೇ ರೀತಿ ಅಂದಾಜು ಪಟ್ಟಿಯಲ್ಲಿ ಒಳಗೊಂಡಿರುವ ವಾರ್ಷಿಕ ಶೇ. 5ರಷ್ಟು ಹೆಚ್ಚುವರಿ ಮೊತ್ತ ಮತ್ತು ಟೆಂಡರ್ ದಸ್ತಾವೇಜಿನ ಎಸ್ಕಲೇಷನ್ ಷರತ್ತುಗಳು ಪರಸ್ಪರ ವಿಭಿನ್ನ ಉದ್ದೇಶ ಹೊಂದಿದೆ. ವಾರ್ಷಿಕ ಶೇ. 5ರಷ್ಟು ಹೆಚ್ಚುವರಿ ಮೊತ್ತವು ಕೇವಲ ಅಂದಾಜು ತಯಾರಿಕೆ ಹಾಗೂ ಆಡಳಿತಾತ್ಮಕ ಅನುಮೋದನೆಗಾಗಿ ಒದಗಿಸಿರುವ ಬಜೆಟ್‌ ಮೀಸಲು ಆಗಿದೆ. ಗುತ್ತಿಗೆದಾರರಿಗೆ ಪಾವತಿಯನ್ನು ನಿರ್ಧರಿಸುವ ಅಧಾರವಾಗಿರುವುದಿಲ್ಲ. ಹೀಗಾಗಿ ಗುತ್ತಿಗೆದಾರರಿಗೆ ಪಾವತಿಸಬೇಕಾದ ಇಂಧನ ಮತ್ತು ಕಾರ್ಮಿಕ ವೇತನದ ವ್ಯತ್ಯಾಸದ ಮೊತ್ತಗಳನ್ನು ಷರತ್ತುಗಳ ಪ್ರಕಾರ ಮಾತ್ರ ಪರಿಷ್ಕರಿಸಿ ಪಾವತಿಸಲಾಗುತ್ತದೆ ಎಂದು ಸಮಿತಿಗೆ ವಿವರಿಸಿತ್ತು.

ಹಾಗೆಯೇ ಅಂದಾಜಿನಲ್ಲಿನ ವಾರ್ಷಿಕ ಶೇ. 5ರಷ್ಟು ಹೆಚ್ಚುವರಿ ಮತ್ತು ಟೆಂಡರ್ ದಸ್ತಾವೇಜಿನ ಎಸ್ಕಲೇಷನ್ ವ್ಯವಸ್ಥೆ ನಡುವೆ ಯಾವುದೇ ವೈರುಧ್ಯವಿಲ್ಲ. ಟೆಂಡರ್ ಅಂತಿಮಗೊಂಡು ಕಾರ್ಯಾದೇಶ ನೀಡಿದ ನಂತರ ಷರತ್ತಿನಂತೆ ಇಂಧನ ಮತ್ತು ಕಾರ್ಮಿಕರ ವೇತನ ವ್ಯತ್ಯಾಸದ ದರಗಳನ್ನು ಪಾವತಿ ಅಥವಾ ಕಡಿತಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ದರಗಳು ಹೆಚ್ಚಿದಲ್ಲಿ ಶೇ.5ರವರೆಗೂ ಅವಕಾಶ ಕಲ್ಪಿಸಿರುವುದರಿಂದ ಅದೇ ಮೊತ್ತದಲ್ಲಿ ಪಾವತಿಸಲಾಗುವುದು. ದರಗಳು ಅಸಹಜವಾಗಿ ಏರಿಳಿತವಾದಲ್ಲಿ ಶೇ.5ರಷ್ಟು ಹೆಚ್ಚು ಮೀರಿದ್ದಲ್ಲಿ ಮುಂದಿನ ಹೆಚ್ಚುವರಿ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ಪಡೆದು ಪಾವತಿಸಬೇಕಾಗುತ್ತದೆ ಎಂದು ವಿವರಿಸಿತ್ತು.

ಬಿಎಸ್‌ಡಬ್ಲ್ಯೂಎಂಎಲ್‌ ತಯಾರಿಸಿರುವ 21 ಪ್ಯಾಕೇಜ್‌ಗಳಿಗೆ ಸಂಬಂಧಿಸಿದಂತೆ ಆರ್ಥಿಕ ಮೌಲ್ಯಮಾಪನ ಮಾಡಿ ಶೇ. 4.5ರಿಂದ ಶೇ.14ವರೆಗಿನ ಟೆಂಡರ್ ಪ್ರೀಮಿಯಂ ಅನ್ನು ಪರಿಗಣಿಸಲು ಒಪ್ಪಿಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅದೇ ರೀತಿ ಟೆಂಡರ್ ಪ್ರಕ್ರಿಯೆ ಹಂತದಲ್ಲಿರುವ ಉಳಿಕೆ ಪ್ಯಾಕೇಜ್‌ಗಳಿಗೆ ಸಂಬಂಧಿಸಿದಂತೆಯೂ ಸಹ ಶೇ. 14ರ ಟೆಂಡರ್ ಪ್ರೀಮಿಯಂನ್ನು ಪರಿಗಣಿಸಿ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ ನೀಡಬೇಕು ಎಂದು ಪ್ರಸ್ತಾವಿಸಿತ್ತು.

ಶೇ. 14 ಟೆಂಡರ್ ಪ್ರೀಮಿಯಂ ಸೂಕ್ತವಲ್ಲ

ಈ ಸಂಬಂಧ ಅಂಜುಂ ಪರ್ವೇಜ್ ನೇತೃತ್ವದ ಸಮಿತಿಯು ಅವಲೋಕಿಸಿ ತನ್ನ ಅಭಿಪ್ರಾಯ ನೀಡಿದೆ. 2022ರ ಮೇ 10ರಂದು ಸರ್ಕಾರ ಹೊರಡಿಸಿದ್ದ ಸುತ್ತೋಲೆ (ಆಇ/128/ವೆಚ್ಚ-12/2021) ಪ್ರಕಾರ ಗರಿಷ್ಠ ಶೇ. 5ರಷ್ಟು ಟೆಂಡರ್ ಪ್ರೀಮಿಯಂನ್ನು ಪರಿಗಣಿಸಲು ಹಾಗೂ ಅದಕ್ಕಿಂತ ಹೆಚ್ಚಿನ ಲಾಭಾಂಶವುಳ್ಳ ಟೆಂಡರ್ ನ್ನು ಅಂಗೀಕರಿಸಬಯಸಿದ್ದಲ್ಲಿ ಸಮರ್ಥನೀಯ ಕಾರಣಗಳನ್ನು ನೀಡಬೇಕು. ಮತ್ತು ಇದನ್ನು ಲಿಖಿತ ರೂಪದಲ್ಲಿ ದಾಖಲಿಸಿ ಉನ್ನತ ಪ್ರಾಧಿಕಾರದ ಅನುಮೋದನೆ ಪಡೆದು ಅಂಗೀಕರಿಸಬೇಕು ಎಂದು ಹೇಳಿದೆ. ಅಲ್ಲದೇ ಇನ್ನು ಟೆಂಡರ್ ಪ್ರಕ್ರಿಯೆ ಹಂತದಲ್ಲಿರುವ ಪ್ಯಾಕೇಜ್‌ಗಳ ಸಂಬಂಧದಲ್ಲಿ ಸಹ ಶೇ. 14 ಟೆಂಡರ್ ಪ್ರೀಮಿಯಂನ್ನು ಪರಿಗಣಿಸುವುದು ಸೂಕ್ತವಾದ ಕ್ರಮವಾಗಿಲ್ಲ ಎಂದು ಸಮಿತಿಯು ಅಭಿಪ್ರಾಯಿಸಿತ್ತು.

ಇದಕ್ಕೆ ಬಿಎಸ್‌ಡಬ್ಲ್ಯೂಎಂಎಲ್‌ ತನ್ನ ಅನುಪಾಲನೆ ವರದಿ ನೀಡಿತ್ತು. ಪ್ರಸ್ತುತ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿರುವ 21 ಪ್ಯಾಕೇಜ್‌ಗಳಲ್ಲಿ ಶೇ. 4.5ರಿಂದ ಶೇ.14ರವರೆಗಿನ ಟೆಂಡರ್ ಪ್ರೀಮೀಯಂ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಇನ್ನೂ ಟೆಂಡೆರ್ ಪ್ರಕ್ರಿಯೆ ಪೂರ್ಣಗೊಳ್ಳಬೇಕಿರುವ ಉಳಿದ ಪ್ಯಾಕೇಜ್‌ಗಳಲ್ಲಿಯೂ ಸಹ ಇದೇ ರೀತಿ ಪರಿಸ್ಥಿತಿ ಉಂಟಾದಲ್ಲಿ ಪ್ರತಿ ಪ್ರಕರಣಕ್ಕೂ ಪ್ರತ್ಯೇಕವಾಗಿ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ ಪಡೆಯುವ ಅವಶ್ಯಕತೆಯಿಂದ ಉಂಟಾಗಬಹುದಾದ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಎಲ್ಲಾ 33 ಪ್ಯಾಕೇಜ್‌ಗಳಿಗೆ ಒಟ್ಟಾಗಿ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ ಪಡೆಯಲು ಪ್ರಸ್ತಾವಿಸಿದೆ ಎಂದು ಸಮರ್ಥಿಸಿಕೊಂಡಿತ್ತು.

 

 

‘ಆದರೂ ಈ ಪ್ರಸ್ತಾವನೆಯು ಯಾವುದೇ ಉಳಿದ ಪ್ಯಾಕೇಜಿನಲ್ಲಿ ಶೇ.14ರ ಟೆಂಡರ್ ಪ್ರೀಮಿಯಂನ್ನು ಪೂರ್ವಭಾವಿಯಾಗಿ ಅಂಗೀಕರಿಸುವ ಉದ್ದೇಶ ಹೊಂದಿಲ್ಲ.  ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಪ್ರತಿ ಪ್ಯಾಕೇಜಿನ ಟೆಂಡರ್ ಪ್ರೀಮಿಯಂನ್ನು ಪ್ರತ್ಯೇಕವಾಗಿ ಪರಿಶೀಲಿಸಿ ಸುತ್ತೋಲೆ ಪ್ರಕಾರ ಕ್ರಮ ವಹಿಸಲಾಗುವುದು. ಶೇ. 5ಕ್ಕಿಂತ ಹೆಚ್ಚಿನ ಟೆಂಡರ್ ಪ್ರೀಮಿಯಂ ಕಂಡು ಬಂದಲ್ಲಿ ಸುತ್ತೋಲೆಯಲ್ಲಿ ನಿಗದಿಪಡಿಸಿರುವಂತೆ ಸಮರ್ಥನೀಯ ಕಾರಣಗಳನ್ನು ದಾಖಲಿಸಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದ ನಂತರವೇ ಟೆಂಡರ್ ಅಂಗೀಕಾರದ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು,’ ಎಂದು ಹೇಳಿತ್ತು.

 

ಸರ್ಕಾರದ ಹಿತಾಸಕ್ತಿ, ಘನತೆಗೆ ಧಕ್ಕೆ ನೆಪ; ಸಮಿತಿ ರಚನೆಯಿಲ್ಲದೇ 21 ಪ್ಯಾಕೇಜ್‌ ಟೆಂಡರ್ ಅನುಮೋದನೆ, 4,791.95 ಕೋಟಿ ರು ಹಗರಣ?

 

ಇದೇ 21 ಪ್ಯಾಕೇಜ್‌ಗಳಿಗೆ ಸಂಬಂಧಿಸಿದಂತೆ ಟೆಂಡರ್ ಅನುಮೋದಿಸಿದ್ದ ಸಚಿವ ಸಂಪುಟವು ಸಾರ್ವಜನಿಕ ಹಿತಾಸಕ್ತಿ, ಘನತೆಗೆ ಧಕ್ಕೆಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.  ಅಲ್ಲದೇ ಇದೊಂದು 4,791.95 ಕೋಟಿ ರು ಮೊತ್ತದ ಹಗರಣವಿದು ಎಂಬ ಮಾತು ಕೇಳಿ ಬಂದಿತ್ತು.

 

ಘನ ತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆ ಟೆಂಡರ್‍‌ನಲ್ಲಿ ಅಕ್ರಮ ಆರೋಪ ; ಅಂದಾಜು ಪ್ರಮಾಣದಲ್ಲಿ ಹೆಚ್ಚಳಕ್ಕೆ ಸಮರ್ಥನೆ ಮಾಡಿಕೊಂಡ ಬಿಎಸ್‌ಡಬ್ಲ್ಯೂಎಂಎಲ್, ಅಂಜುಂ ಪರ್ವೇಜ್‌ ಸಮಿತಿ ವರದಿಯಲ್ಲೇನಿದೆ?

 

ಅಲ್ಲದೇ ಶೇ. 14ರಷ್ಟು ಟೆಂಡರ್ ಪ್ರೀಮಿಯಂಗೆ ಸಮರ್ಥನೆ ಮಾಡಲು ಶೇ. 10ರಷ್ಟು ಸೇವಾ ಶುಲ್ಕವನ್ನು ಬಿಎಸ್‌ಡಬ್ಲ್ಯುಎಂಎಲ್‌ ಸೇರಿಸಿತ್ತು. ಇದನ್ನು ಅರ್ಥಿಕ ಇಲಾಖೆಯು ತನ್ನ ಅವಲೋಕನದಲ್ಲಿ ವಿವರಿಸಿತ್ತು.

 

ಶೇ 14 ಟೆಂಡರ್ ಪ್ರೀಮಿಯಂಗೆ ಸಮರ್ಥನೆ ಮಾಡಲು ಶೇ.10ರಷ್ಟು ಸೇವಾ ಶುಲ್ಕ ಸೇರಿಸಿದ್ದ ಬಿಎಸ್‌ಡಬ್ಲ್ಯೂಎಂಎಲ್; ಆರ್ಥಿಕ ಇಲಾಖೆ ಅವಲೋಕನ

 

ಈ ಕುರಿತು ದಿ ಫೈಲ್‌, ಆರ್ಥಿಕ ಇಲಾಖೆಯು ಮಾಡಿದ್ದ ಅವಲೋಕನಗಳ ಸಮೇತ ವರದಿ ಪ್ರಕಟಿಸಿತ್ತು. 

Hot this week

ಎಪಿಎಂಸಿ ಕಾಯ್ದೆಗೆ ಮತ್ತೊಂದು ತಿದ್ದುಪಡಿ; ಪ್ರತ್ಯೇಕ ಆಡಳಿತ ಮಂಡಳಿ ರಚನೆ, ಏಕರೀತಿಯ ಮೀಸಲಾತಿ, ಸಮಾನತೆ ಕಲ್ಪಿಸಲಿದೆಯೇ?

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರವು ಜಾರಿಗೊಳಿಸಿದ್ದ ಎಪಿಎಂಸಿ ಕಾಯ್ದೆ ತಿದ್ದುಪಡಿ 2020ನ್ನು...

ಜಿಲ್ಲಾಸ್ಪತ್ರೆಗಳ ನಿರ್ವಹಣೆ, ಸಿಬ್ಬಂದಿ ವೇತನ ಪಾವತಿಸಲೂ ಕಷ್ಟಕರ ಪರಿಸ್ಥಿತಿ; ಹಿಮ್ಸ್‌ನಲ್ಲೂ ಆರ್ಥಿಕ ಮುಗ್ಗಟ್ಟು

ಬೆಂಗಳೂರು;  ಹೊಸ ಯೋಜನೆಗಳಿಗೆ ಸಂಪನ್ಮೂಲ ಕೊರತೆಯನ್ನು ಅನುಭವಿಸುತ್ತಿದೆ ಎಂದು ಆರ್ಥಿಕ ಇಲಾಖೆಯು...
Please Scan to make Your Contribution

Topics

ಎಪಿಎಂಸಿ ಕಾಯ್ದೆಗೆ ಮತ್ತೊಂದು ತಿದ್ದುಪಡಿ; ಪ್ರತ್ಯೇಕ ಆಡಳಿತ ಮಂಡಳಿ ರಚನೆ, ಏಕರೀತಿಯ ಮೀಸಲಾತಿ, ಸಮಾನತೆ ಕಲ್ಪಿಸಲಿದೆಯೇ?

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರವು ಜಾರಿಗೊಳಿಸಿದ್ದ ಎಪಿಎಂಸಿ ಕಾಯ್ದೆ ತಿದ್ದುಪಡಿ 2020ನ್ನು...

ಜಿಲ್ಲಾಸ್ಪತ್ರೆಗಳ ನಿರ್ವಹಣೆ, ಸಿಬ್ಬಂದಿ ವೇತನ ಪಾವತಿಸಲೂ ಕಷ್ಟಕರ ಪರಿಸ್ಥಿತಿ; ಹಿಮ್ಸ್‌ನಲ್ಲೂ ಆರ್ಥಿಕ ಮುಗ್ಗಟ್ಟು

ಬೆಂಗಳೂರು;  ಹೊಸ ಯೋಜನೆಗಳಿಗೆ ಸಂಪನ್ಮೂಲ ಕೊರತೆಯನ್ನು ಅನುಭವಿಸುತ್ತಿದೆ ಎಂದು ಆರ್ಥಿಕ ಇಲಾಖೆಯು...

ರಾಜ್ಯದ ಆರ್ಥಿಕ ಪರಿಸ್ಥಿತಿ ಇಷ್ಟೊಂದು ಕೆಟ್ಟಿದೆಯೇ?; ಆರ್ಥಿಕ ಇಲಾಖೆ ಟಿಪ್ಪಣಿ ಬೆನ್ನಲ್ಲೇ ಮುನ್ನೆಲೆಗೆ ಬಂದ ದಿ ಫೈಲ್‌ನ 51 ವರದಿಗಳು

ಬೆಂಗಳೂರು; ಹೊಸ ಯೋಜನೆಗಳನ್ನು  ಘೋಷಿಸುವ ಮೊದಲು ಸಂಪನ್ಮೂಲ ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕು...

ಮೂಲಸೌಕರ್ಯಗಳ ಕೊರತೆ; ಸಂಭಾವ್ಯ ಹೂಡಿಕೆದಾರರನ್ನು ಹಿಮ್ಮೆಟ್ಟಿಸಿದ್ದ ಮಂಡಳಿ, ಬಳಕೆಯಾಗದ 281.34 ಕೋಟಿ

ಬೆಂಗಳೂರು; ದೇವನಹಳ್ಳಿಯಲ್ಲಿರುವ ಏರೋಸ್ಪೇಸ್‌ ಪಾರ್ಕ್ ಸೇರಿದಂತೆ ಇನ್ನಿತರೆ ಕೈಗಾರಿಕೆ ಪ್ರದೇಶಗಳಲ್ಲಿ ಮೂಲಭೂತ...

Related Articles

Popular Categories

error: Content is protected !!