ಬೆಂಗಳೂರು; ವಿಕಾಸ ಸೌಧ ಮತ್ತು ಎಂ ಎಸ್ ಬಿಲ್ಡಿಂಗ್ ಕಟ್ಟಡದಲ್ಲಿರುವ ಕ್ಯಾಂಟೀನ್ ಗುತ್ತಿಗೆದಾರನಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಕಾರ್ಯಕಾರಿ) ಅಧೀನ ಕಾರ್ಯದರ್ಶಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಕುರಿತು ಲೀಗಲ್ ನೋಟೀಸ್ ಜಾರಿಗೊಳಿಸಿರುವ ನಡುವೆಯೇ ಗುತ್ತಿಗೆದಾರನ ಮಧ್ಯವರ್ತಿ ಎಂದು ಹೇಳಲಾಗಿರುವ ವ್ಯಕ್ತಿಯೊಬ್ಬ ಅಧೀನ ಕಾರ್ಯದರ್ಶಿಯೊಂದಿಗೆ ನಡೆಸಿದ್ದಾರೆ ಎಂದು ಹೇಳಲಾಗಿರುವ ಸಂಭಾಷಣೆಯ ತುಣುಕು ಇದೀಗ ಬಹಿರಂಗವಾಗಿದೆ.
‘ನಾಳೆ ತಗ ಬರ್ಲಾ ಸರ್ ಇಲ್ಲಾಂದ್ರೆ ಒಂದು 15 ಹಾಕ್ಲಾ ಸಾರ್, ಅಕೌಂಟ್ ಗೆ ನಿಮ್ಮ ಮಗನ ಅಕೌಂಟ್ ಗೆ ಎಷ್ಟು ಹಾಕ್ಲಿ ಸಾರ್, ಕ್ಲಿಯರ್ ಮಾಡ್ಬಿಡ್ಲಾ ಸಾರ್, ಫೋನ್ ಪೇ ಏನಾದ್ರು ಮಾಡ್ಬಿಡ್ಲಾ ಸಾರ್? ಫೋನ್ ಪೇ? ನೀನು ಎಷ್ಟು ಮಾಡ್ತೀಯಾ? ಇದು ಹೆಂಗೆ ಅಂದ್ರೆ ಬ್ಯಾಲೆನ್ಸ್ ಐತೆ,’ ಎಂದು ಗುತ್ತಿಗೆದಾರನ ಮಧ್ಯವರ್ತಿ ಎಂದು ಹೇಳಲಾಗಿರುವ ವ್ಯಕ್ತಿಯೊಬ್ಬ ಅಧೀನ ಕಾರ್ಯದರ್ಶಿಯೊಂದಿಗೆ ನಡೆಸಿರುವ ಪರಸ್ಪರ ಮಾತುಕತೆಯು, ಶಕ್ತಿ ಕೇಂದ್ರದ ವಿಧಾನಸೌಧದಲ್ಲೇ ಲಂಚಾವತಾರ ದರ್ಶನವಾದಂತಾಗಿದೆ.
ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸಚಿವರಾಗಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿಯೇ ಗುತ್ತಿಗೆದಾರರಿಗೆ ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂಬ ಆರೋಪವು ಪ್ರತಿಪಕ್ಷಗಳಿಗೆ ಪ್ರಬಲ ಅಸ್ತ್ರವೊಂದನ್ನು ನೀಡಿದಂತಾಗಿದೆ.
ಇಬ್ಬರು ವ್ಯಕ್ತಿಗಳ ಮಧ್ಯೆ ಈ ಸಂಭಾಷಣೆ ನಡೆದಿದೆ. ಹೀಗೆ ಸಂಭಾಷಣೆ ನಡೆಸಿದವರು ಒಬ್ಬಾತ ಗುತ್ತಿಗೆದಾರನ ಮಧ್ಯವರ್ತಿ ಎಂದು ತಿಳಿದು ಬಂದಿದೆ. ಮತ್ತೊಬ್ಬ ವ್ಯಕ್ತಿ ಅಧೀನ ಕಾರ್ಯದರ್ಶಿ ಎಂದು ಗೊತ್ತಾಗಿದೆ. ವ್ಯಕ್ತಿಗಳಿಬ್ಬರು ನಡೆಸಿರುವ ಸಂಭಾಷಣೆಯ ತುಣುಕು ದಿ ಫೈಲ್ ಗೆ ಲಭ್ಯವಾಗಿದೆ.
ಸಂಭಾಷಣೆಯಲ್ಲೇನಿದೆ?
ಮೊದಲ ವ್ಯಕ್ತಿ; ಎಲ್ಲಿಗೆ ಹೋಗಿದ್ರಿ?
ಎರಡನೇ ವ್ಯಕ್ತಿ: ಸರ್ ಮರ್ತೋಗಿದ್ದೆ ಬಂದುಬಿಟ್ಟೆ ನಾಳೆ ಇದು ಬಾಟ್ಲಿಗೆ ಹೇಳಿದ್ದೆ ಮಿಲಿಟರಿ ಇವು ತಕೊಂಡು ಹಂಗೆ ನಾಳೆ ಬರೋಣ ಅನ್ಕೊಂಡೆ ಅವನು ಫೋನ್ ಮಾಡ್ತಿದ್ದ ಅರ್ಜೆಂಟ್ ಅಲ್ಲಿ ಬಾ ಬಾ ಬಾ ಅಂತ
ಮೊದಲ ವ್ಯಕ್ತಿ ; ಯಾರು?
ಎರಡನೇ ವ್ಯಕ್ತಿ ; ಮಿಲಿಟರಿ ಒಂದು ಸರ್ ಹಂಗೆ ನಿಮಗೊಂದು ತಗೊಂಡು ಬರೋಣ ನಾಳೆ ಅಂದ್ಬಿಟ್ಟು ಸುಮ್ನಾದೆ
ಮೊದಲ ವ್ಯಕ್ತಿ: ಮಿಲ್ಟ್ರಿ?
ಎರಡನೇ ವ್ಯಕ್ತಿ; ಮಿಲಿಟರಿ ಮಿಲಿಟರಿ ಅವರು ಸರ್ ಇದಕ್ಕೆ ಹೇಳಿದ್ದೆ ಡ್ರಿಂಕ್ಸ್ ಗೆವಿಸ್ಕಿ ಹೇಳಿದಿfದೆ. ಇದಕ್ಕೆ ಹೇಳಿದ್ದೆ ಹಾ ನಾಳೆ ತಗ ಬರ್ಲಾ ಸರ್ ಇಲ್ಲಾಂದ್ರೆ ಒಂದು 15 ಹಾಕ್ಲಾ ಸರ್ ಅಕೌಂಟ್ ಗೆ ನಿಮ್ಮ ಮಗನ ಅಕೌಂಟ್ ಗೆ
ಮೊದಲ ವ್ಯಕ್ತಿ; ಏನ್ ಹಾಕ್ತೀಯಾ?
ಎರಡನೇ ವ್ಯಕ್ತಿ; ಎಷ್ಟು ಹಾಕ್ಲಿ ಸರ್ ಕ್ಲಿಯರ್ ಮಾಡ್ಬಿಡ್ಲಾ, ಸರಿ ಸರ್ ಓಕೆ ಸರ್ ಓಕೆ ಆಯ್ತು ಸರ್, ಆಯ್ತು ಸರ್ ನೋಡಿ ಸರ್ ಸಪೋರ್ಟ್ ಮಾಡಿ ಸರ್ ಆಯ್ತು ಸರ್ ಓಕೆ ಸರ್
ಮೊದಲ ವ್ಯಕ್ತಿ; ಅದಕ್ಕೆ ತಾನೇ ಮಾಡಿದ್ದು
ಎರಡನೇ ಆಡಿಯೋ ತುಣುಕಿನ ಸಂಭಾಷಣೆ
ಎರಡನೇ ವ್ಯಕ್ತಿ: ಏನಿಲ್ಲ ಸರ್ ಸುಮ್ನೆ ಕೂತಿದ್ದೆ. ಪೊಲೀಸ್ ಇಂದ ಇದ್ದು ಪೊಲೀಸ್ ಆಕಾಡೆಮಿಯಿಂದ ಫೋನ್ ಬಂದಿತ್ತು ಸರ್ ಮಾತಾಡ್ತಾ ಇದ್ದೆ.
ಮೊದಲ ವ್ಯಕ್ತಿ; ಎಲ್ಲೋ ಬತ್ತಾ ಇಲ್ಲಾ
ಎರಡನೇ ವ್ಯಕ್ತಿ: ಬಂದಿದ್ದೆ ಸರ್ ಎರಡು ಸತಿ ನಾಳೆ ಬೆಳಗ್ಗೆ ಮಧ್ಯಾಹ್ನ. ಪಾಸ್ ಮಾಡು ಅಂದಾಗ ಕೇಳಿ ಎರಡು ಸತಿ ಬಂದೆ ಎರಡು ಸತಿ ಇರಲಿಲ್ಲ ಎಲ್ಲ ಹೋಗಿದ್ದೀರಾ ಸರ್ ಎಲ್ಲ ಹೋಗಿದ್ದಾರೆ ಅಂದ್ರು. ಆ ಸರ್. ಆ ಸರ್. ಆ ಸರ್. ಆ ಸರ್. ಆ ಸರ್. ಹೌದು ಸರ್ ನಾನು ಬಂದಿದ್ದೆ ತಗೊಂಡು ಬಂದಿದ್ದೆ ಅಮೌಂಟು. ನೀವೇ ಇರಲಿಲ್ಲ ನಾನು ಎರಡು ಸತಿ ಬಂದೆ.
ಮೊದಲ ವ್ಯಕ್ತಿ: ನಾಳೆ ಒಂದು ಚೂರು ಬಾ.
ಎರಡನೇ ವ್ಯಕ್ತಿ: ಆ ಓಕೆ ಸರ್ ನಾಳೆ ಬರ್ತೀನಿ. ಇಲ್ಲ ಫೋನ್ ಪೇ ಏನಾದ್ರು ಮಾಡ್ಬಿಡ್ಲಾ ಸರ್? ಫೋನ್ ಪೇ?
ಮೊದಲ ವ್ಯಕ್ತಿ; ನೀನು ಎಷ್ಟು ಮಾಡ್ತೀಯಾ? ಇದು ಹಳೇದೆಲ್ಲಾ ಬ್ಯಾಲೆನ್ಸ್ ಐತೆ
ಎರಡನೇ ವ್ಯಕ್ತಿ; ಆಯ್ತು ಸರ್
ಮೊದಲನೇ ವ್ಯಕ್ತಿ; ಎಷ್ಟು ಮಾಡ್ತೀರಾ?
ಎರಡನೇ ವ್ಯಕ್ತಿ; ಮಾಡಿ ಕೊಡ್ತೀನಿ ಬಿಡಿ ಸರ್ ನಿಮಗಿಂತ ಹೆಚ್ಚಾ ಸರ್, ಎಸ್ಟ್ ಮಾಡ್ಲಿ ಸರ್.
ಮೊದಲ ವ್ಯಕ್ತಿ; ನಾವು ಮನೆಗೆ ಹೋಗಿ ಮಾತಾಡ್ತೀನಿ
ಎರಡನೇ ವ್ಯಕ್ತಿ; ಓಕೆ ಸರ್ ಮನೆಗೆ ಹೋಗಿ ಮಾಡಿ ಸರ್. ಓಕೆ ಸರ್.
ಮೊದಲ ವ್ಯಕ್ತಿ; ನಮ್ ಮಗ ಮಲೇಷಿಯಾಗೆ ಹೋದ ಅವ್ನು.
ಎರಡನೇ ವ್ಯಕ್ತಿ; ಹೌದಾ ಸರ್.
ಅಲ್ಲದೇ ಗುತ್ತಿಗೆದಾರನ ವಕೀಲರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿ ಮತ್ತಿತರರಿಗೆ ಕಾನೂನು ತಿಳಿವಳಿಕೆ ನೋಟೀಸ್ ಜಾರಿಗೊಳಿಸಿದ ದಿನದಂದೇ ಆಪಾದಿತ ಅಧೀನ ಕಾರ್ಯದರ್ಶಿ ಅವರನ್ನು ಒಳಾಡಳಿತ ಇಲಾಖೆಯ (ಅಪರಾಧ ಶಾಖೆಗೆ) ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.
ಲೀಗಲ್ ನೋಟೀಸ್ ಜಾರಿಗೊಳಿಸಿದ್ದರ ಕುರಿತು ದಿ ಫೈಲ್ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.




