Friday | October 23, 2026 |

ಸಿಎಂ ಆರ್ಥಿಕ ಸಲಹೆಗಾರರ ಆಪ್ತ ಶಾಖೆಗೆ ಖಾಸಗಿ ವ್ಯಕ್ತಿಗಳ ನೇಮಕ; ಆರ್ಥಿಕ ಇಲಾಖೆ ಅಭಿಪ್ರಾಯವನ್ನೇ ಬದಿಗೊತ್ತಿದ್ದೇಕೆ?

ಬೆಂಗಳೂರು; ಆಪ್ತ ಶಾಖೆಗೆ ಪ್ರತ್ಯೇಕವಾಗಿ ಸಿಬ್ಬಂದಿ ಪ್ರಮಾಣ ನಿಗದಿಯಾಗದೇ ಇರುವುದು ಮತ್ತು ಗ್ರೂಪ್‌ ಬಿ ಹುದ್ದೆಯಲ್ಲಿ ಬಾಹ್ಯ ವ್ಯಕ್ತಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸುವುದು ಸೂಕ್ತವಲ್ಲ ಎಂದು ಆರ್ಥಿಕ ಇಲಾಖೆಯ ಅಭಿಪ್ರಾಯವನ್ನು ಖುದ್ದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು  ಬದಿಗೊತ್ತಿರುವುದು ಇದೀಗ ಬಹಿರಂಗವಾಗಿದೆ.

ಆರ್ಥಿಕ ಇಲಾಖೆಯ ಅಭಿಪ್ರಾಯವನ್ನು ಬದಿಗೊತ್ತಿ   ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರ ಕಚೇರಿಗೆ ತೇಜಸ್ ಚಂದ್ರ ಕೆ ಎಂ ಮತ್ತು ಗಿರೀಶ್‌ ಕೆ ಎಂಬ ಖಾಸಗಿ ವ್ಯಕ್ತಿಗಳಿಬ್ಬರನ್ನು  ನೇಮಿಸಲಾಗಿದೆ. ವಿಶೇಷವೆಂದರೇ  ಈ ಸಂಬಂಧ  ಆದೇಶ ಹೊರಬೀಳುವ 2 ತಿಂಗಳ ಮೊದಲೇ ಆರ್ಥಿಕ ಸಲಹೆಗಾರ ಎಲ್ ಕೆ ಅತೀಕ್‌ ಅವರ ಕಚೇರಿಯ ಆಪ್ತ ಶಾಖೆಯಲ್ಲಿ ಕೆ ಗಿರೀಶ್‌ ಎಂಬುವರು  ಕರ್ತವ್ಯ ನಿರ್ವಹಿಸುತ್ತಿದ್ದರು.

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಆರ್ಥಿಕ ಸಲಹೆಗಾರರಾಗಿರುವ ಎಲ್ ಕೆ ಅತೀಕ್ ಅವರ ಕಚೇರಿಗೆ ಗ್ರೂಪ್‌ ಎ ಮತ್ತು  ಬಿ ಹುದ್ದೆಗೆ ಖಾಸಗಿ ವ್ಯಕ್ತಿಗಳನ್ನು  ನೇಮಿಸಿರುವುದಕ್ಕೆ ಆರ್ಥಿಕ ಇಲಾಖೆಯಲ್ಲಿಯೇ ಆಕ್ಷೇಪಗಳು ವ್ಯಕ್ತವಾಗಿವೆ. ಅಲ್ಲದೇ ಖಾಸಗಿ ವ್ಯಕ್ತಿಗಳಿಬ್ಬರಿಗೆ ಗ್ರೂಪ್  ಎ ಮತ್ತು   ಗ್ರೂಪ್‌ ಬಿ ಹುದ್ದೆ ನೀಡಿರುವುದಲ್ಲದೇ ಗ್ರೂಪ್ ಎ ವೃಂದದಲ್ಲಿ ತೇಜಸ್‌ ಚಂದ್ರ ಎಂಬುವರಿಗೆ ಮಾಸಿಕ 1.60 ಲಕ್ಷ, ಗ್ರೂಪ್ ಬಿ ವೃಂದದಲ್ಲಿ ನೇಮಕವಾಗಿರುವ ಕೆ ಗಿರೀಶ್ ಎಂಬುವರಿಗೆ  ಮಾಸಿಕ 1. 25 ಲಕ್ಷ ರು ಗಳನ್ನು ನಿಗದಿಪಡಿಸಿರುವುದಕ್ಕೆ ಇಲಾಖೆಯಲ್ಲಿ  ಅಪಸ್ವರ ಕೇಳಿ ಬಂದಿದೆ.

ಕೆ ಗಿರೀಶ್ ಎಂಬ ಖಾಸಗಿ ವ್ಯಕ್ತಿಯನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಲ್‌ ಕೆ ಅತೀಕ್ ಅವರ ಕಚೇರಿಗೆ ನೇಮಿಸಿರುವ ಸಂಬಂಧ ಇಲಾಖೆಯು ಆರ್‍‌ಟಿಐ ಅಡಿಯಲ್ಲಿ  ದಾಖಲೆಗಳನ್ನು ಒದಗಿಸಿದೆ.

ಮತ್ತೊಂದು ವಿಶೇಷವೆಂದರೇ ಕೆ  ಗಿರೀಶ್ ಅವರ ನೇಮಕಕ್ಕೆ ಅನುಕೂಲವಾಗುವಂತೆ ಅದನ್ನು ಗ್ರೂಪ್ ಬಿ ಮಟ್ಟಕ್ಕೆ ಉನ್ನತೀಕರಿಸಬಹುದು ಎಂದು ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಯೂ ಸಹ ಸಲಹೆ ನೀಡಿದ್ದರು. ಅದೇ ರೀತಿ ಗಿರೀಶ್‌ ಕೆ ಅವರನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರ ಶಾಖೆಗೆ ನೇಮಿಸುವ ಉದ್ದೇಶದಿಂದಲೇ  ಮುಖ್ಯಮಂತ್ರಿಗಳ ಕಚೇರಿಯಿಂದ ಒಂದು ಹುದ್ದೆಯನ್ನು ವರ್ಗಾಯಿಸಲಾಗಿತ್ತು ಎಂಬುದು ಆರ್‍‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.

ಹಾಗೆಯೇ ಕೆ ಗಿರೀಶ್‌ ಎಂಬ ಖಾಸಗಿ ವ್ಯಕ್ತಿಯನ್ನು  ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರ ಆಪ್ತ ಶಾಖೆಗೆ  ಅಧಿಕೃತವಾಗಿ ನೇಮಿಸುವ ಮುನ್ನವೇ ಕೆ ಗಿರೀಶ್‌ ಅವರು ಆರ್ಥಿಕ ಸಲಹೆಗಾರರ ಆಪ್ತ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕೆ ಗಿರೀಶ್‌ ಅವರನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಆಪ್ತ ಶಾಖೆಗೆ 2026ರ ಆಗಸ್ಟ್‌  4ರಂದು ನೇಮಕದ ಆದೇಶ ಹೊರಬಿದ್ದಿತ್ತು.

 

 

ಆದರೆ ಗಿರೀಶ್‌ ಕೆ ಅವರು 2026ರ ಜೂನ್‌ 5ರಿಂದಲೇ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರ ಆಪ್ತ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

 

 

ಅದೇ ರೀತಿ ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರರ ಆಪ್ತ ಶಾಖೆಗೆ ಮಂಜೂರಾಗಿದ್ದ ಹುದ್ದೆಗಳ ಪೈಕಿ ತೇಜಸ್ ಚಂದ್ರ ಕೆ ಎಂ ಎಂಬುವರನ್ನು ಗ್ರೂಪ್ 3 ಹುದ್ದೆಗೆ ಎದುರಾಗಿ ಮಾಸಿಕ 1.60 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಗಿರೀಶ್‌ ಕೆ ಅವರನ್ನು ಗ್ರೂಪ್ ಬಿ ಹುದ್ದೆಗೆ ಎದುರಾಗಿ ಮಾಸಿಕ 1.25 ಲಕ್ಷಕ್ಕೆ ನಿಗದಿಪಡಿಸಿ ಗುತ್ತಿಗೆ ಆಧಾರದ ಮೇಲೆ ನೇಮಿಸಬೇಕು ಎಂದು ಖುದ್ದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

 

ಇದಕ್ಕೂ ಮೊದಲು ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಎಲ್ ಕೆ ಅತೀಕ್‌ ಅವರು ಸ್ವತಃ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಟಿಪ್ಪಣಿ ಹೊರಡಿಸಿದ್ದರು. ಆರ್ಥಿಕ ಸಲಹೆಗಾರರ ಶಾಖೆಗೆ ಗ್ರೂಪ್ ಎ/ಬಿ ವೃಂದದ ಅಧಿಕಾರಿಯಾಗಿ ಖಾಲಿ ಇರುವ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ತಮ್ಮ ಪದಾವಧಿಯವರೆಗೆ ಗಿರೀಶ್‌ ಕೆ ಎಂಬುವರನ್ನು ನೇಮಿಸಬೇಕು ಎಂದು ಎಲ್ ಕೆ ಅತೀಕ್ ಅವರು ಕೋರಿದ್ದರು.

 

 

ಆದರೆ ಮುಖ್ಯಮಂತ್ರಿ ಮತ್ತು ಸಚಿವರುಗಳ ಆಪ್ತ ಶಾಖೆಗೆ ಖಾಸಗಿ ವ್ಯಕ್ತಿಗಳನ್ನು ಗ್ರೂಪ್‌ ಬಿ ಹುದ್ದೆಗಳಲ್ಲಿ ಗ್ರೂಪ್ ಬಿ ಹುದ್ದೆಯಲ್ಲದ ಹುದ್ದೆಯಲ್ಲಿ ನಿವೃತ್ತರಾದ ಸರ್ಕಾರಿ ನೌಕರರು ಮತ್ತು ಬಾಹ್ಯ ವ್ಯಕ್ತಿಯನ್ನು ಗುತ್ತಿಗೆ ಆಧಾರ ಮೇಲೆ ನೇಮಿಸುವುದು ಸೂಕ್ತವಲ್ಲ ಎಂದು ಆರ್ಥಿಕ ಇಲಾಖೆಯೇ 2021ರಲ್ಲೇ ಹೇಳಿತ್ತು.

ಹೀಗಿದ್ದರೂ ಆರ್ಥಿಕ ಇಲಾಖೆಯಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಎಲ್ ಕೆ ಅತೀಕ್‌ ಅವರು , ಬಾಹ್ಯ ವ್ಯಕ್ತಿಯನ್ನು ತಮ್ಮ ಆಪ್ತ ಶಾಖೆಗೆ ಗ್ರೂಪ್ ಬಿ ಹುದ್ದೆಗೆ ನೇಮಿಸಬೇಕು ಎಂದು ಹೊರಡಿಸಿದ್ದ ಟಿಪ್ಪಣಿಯು ಚರ್ಚೆಗೆ ಗ್ರಾಸವಾಗಿದೆ.

ಆರ್ಥಿಕ ಇಲಾಖೆಯ ಟಿಪ್ಪಣಿಯಲ್ಲೇನಿದೆ?

ಸಚಿವರುಗಳ ಆಪ್ತ ಶಾಖೆಯಲ್ಲಿ ಮಂಜೂರಾಗಿರುವ ಗ್ರೂಪ್ ಸಿ ಹುದ್ದೆಯೊಂದನ್ನು ಗ್ರೂಪ್ ಬಿ ವೃಂದಕ್ಕೆ ಉನ್ನತೀಕರಿಸುವ ಪೂರ್ವದಲ್ಲಿ ಆರ್ಥಿಕ ಇಲಾಖೆಯ ಅಭಿಪ್ರಾಯ/ಸಹಮತಿಯನ್ನು ಪಡೆದು ಆ ರೀತಿ ಉನ್ನತೀಕರಿಸಿದ ಹುದ್ದೆಯಲ್ಲಿ ಸೇವೆಯಲ್ಲಿರುವ ಸರ್ಕಾರಿ ಅಧಿಕಾರಿಯನ್ನ ವಿಶೇಷಾಧಿಕಾರಿ/ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ ನೇಮಿಸಬಹುದಾಗಿದೆ. ಹಾಗೂ ಸಚಿವರುಗಳ ಆಪ್ತ ಶಾಖೆಯಲ್ಲಿನ ಗ್ರೂಪ್ ಬಿ ಹುದ್ದೆಗಳಲ್ಲಿ ಗ್ರೂಪ್ ಬಿ ಹುದ್ದೆಯಲ್ಲದ ಹುದ್ದೆಯಲ್ಲಿ ನಿವೃತ್ತರಾದ ಸರ್ಕಾರಿ ನೌಕರರನ್ನು ಹಾಗೂ ಬಾಹ್ಯ ವ್ಯಕ್ತಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಿಸುವುದು ಸೂಕ್ತವಲ್ಲ,’ ಎಂದು 2021ರ ಫೆ.19ರಂದೇ ಅಭಿಪ್ರಾಯ ನೀಡಿತ್ತು. ಈ ಆಭಿಪ್ರಾಯವನ್ನು ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ (ವೆಚ್ಚ) ಯೂ ಅನುಮೋದಿಸಿದ್ದರು.

 

 

ಎಲ್‌ ಕೆ ಅತೀಕ್ ಅವರ ಟಿಪ್ಪಣಿಯನ್ನು ಆರ್ಥಿಕ ಇಲಾಖೆಯು ಪರಿಶೀಲಿಸಿತ್ತು. ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರರಿಗೆ ಈ ಹಿಂದೆ ಸಂಪುಟ ದರ್ಜೆ/ಸಚಿವರ ನೀಡಿ ಆದೇಶಿಸಲಾಗುತ್ತಿತ್ತು. ಅದರ ಅನ್ವಯವೇ ಸಿಬ್ಬಂದಿ ನೇಮಕಕ್ಕೂ ಕ್ರಮ ವಹಿಸಲಾಗುತ್ತಿತ್ತು. ಆದರೆ ಹಾಲಿ ಪ್ರಕರಣದಲ್ಲಿ  ನಿವೃತ್ತ ಐಎಎಸ್‌ ಅಧಿಕಾರಿ ಎಲ್ ಕೆ ಅತೀಕ್‌ ಅವರಿಗೆ ಸಂಪುಟ ದರ್ಜೆ/ಸಚಿವರ ಸ್ಥಾನಮಾನ ನಿಡಿಲ್ಲ. ಹೀಗಾಗಿ ಇವರ ಆಪ್ತ ಶಾಖೆಗೆ ಪ್ರತ್ಯೇಕವಾಗಿ ಸಿಬ್ಬಂದಿ ಪ್ರಮಾಣ ನಿಗದಿಯಾಗಿಲ್ಲ. ಅಲ್ಲದೇ ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರರ ಆಪ್ತ ಶಾಖೆಗೆ ಮುಖ್ಯಮಂತ್ರಿ ಅವರ ಸಚಿವಾಲಯಕ್ಕೆ ಮಂಜೂರಾದ ಹುದ್ದೆಗಳಿಗೆ ಎದುರಾಗಿ ನೇಮಿಸಲಾಗುತ್ತಿದೆ ಎಂದು ಆರ್ಥಿಕ ಇಲಾಖೆಯು ಟಿಪ್ಪಣಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಅದೇ ರೀತಿ ಮುಖ್ಯಮಂತ್ರಿ ಅವರ ಸಚಿವಾಲಯಕ್ಕೆ ಒಟ್ಟು 06 ಗ್ರೂಪ್ ಬಿ ಖಾಯಂ ಹುದ್ದೆಗಳು ಸೃಜನೆಯಾಗಿವೆ. ಗ್ರೂಪ್ ಎ ವೃಂದದ ಹುದ್ದೆಗಳು ಸೃಜನೆಯಾಗಿಲ್ಲ. ಗ್ರೂಪ್‌ ಬಿ ಹುದ್ದೆಗಳಲ್ಲಿ ಗ್ರೂಪ್‌ ಬಿ ಹುದ್ದೆಯಲ್ಲದ ಹುದ್ದೆಯಲ್ಲಿ ನಿವೃತ್ತರಾದ ಸರ್ಕಾರಿ ನೌಕರರನ್ನು ಹಾಗೂ ಬಾಹ್ಯ ವ್ಯಕ್ತಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸುವುದು ಸೂಕ್ತವಲ್ಲ ಎಂದು 2021ರಲ್ಲಿ ಹೊರಡಿಸಿದ್ದ ಟಿಪ್ಪಣಿಯನ್ನೇ 2026ರ ಜೂನ್‌ 9ರಂದು ಪುನರುಚ್ಛರಿಸಿತ್ತು.

 

 

‘ಆರ್ಥಿಕ ಇಲಾಖೆಯ ಅಭಿಪ್ರಾಯದ ಅನ್ವಯ ಬಾಹ್ಯ ವ್ಯಕ್ತಿಯಾದ ಗಿರೀಶ್‌ ಕೆ ಇವರನ್ನು ಗ್ರೂಪ್‌ ಬಿ/ಎ ಹುದ್ದೆಗೆ ನೇಮಿಸಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ ಎಂಬ ಅಂಶವನ್ನು ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರರ ಗಮನಕ್ಕೆ ತರುವುದೇ ಅಥವಾ ಈ ಕುರಿತು ಆರ್ಥಿಕ ಇಲಾಖೆಯ ಅಭಿಪ್ರಾಯ ಪಡೆಯುವುದೇ,’ ಎಂದು ಇಲಾಖೆಯ ಹಿರಿಯ ಸಹಾಯಕರು ಟಿಪ್ಪಣಿಯಲ್ಲಿ ದಾಖಲಿಸಿರುವುದು ಗೊತ್ತಾಗಿದೆ.

ಹಿರಿಯ ಸಹಾಯಕರು ಟಿಪ್ಪಣಿಯಲ್ಲಿನ ಈ ಅಂಶಗಳನ್ನು ಇಲಾಖೆಯ ಶಾಖಾಧಿಕಾರಿಯು ಪರಿಶೀಲಿಸಿದ್ದರು. 2021ರಲ್ಲಿ ಆರ್ಥಿಕ ಇಲಾಖೆಯು ಹೊರಡಿಸಿದ್ದ ಅಭಿಪ್ರಾಯವನ್ನೇ ಮುಂದಿರಿಸಿದ್ದರು. ‘ ಈ ಅಂಶಗಳ ಅನ್ವಯ ಬಾಹ್ಯ ವ್ಯಕ್ತಿಯಾದ ಗಿರೀಶ್‌ ಕೆ ಅವರನ್ನು ಗ್ರೂಪ್ ಬಿ/ಎ ಹುದ್ದೆಗೆ ನೇಮಿಸಲು ನಿಯಮಗಳಲ್ಲಿ ಅವಕಾಶವಿಲ್ಲ ಎಂಬ ಅಂಶವನ್ನು ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರರ ಗಮನಕ್ಕೆ ತರಬಹುದಾಗಿದೆ,’ ಎಂದು ಟಿಪ್ಪಣಿಯಲ್ಲಿ ಸೂಚಿಸಿದ್ದರು.

 

 

ಈ ಬಗ್ಗೆಯೂ ಪುನಃ ಆರ್ಥಿಕ ಇಲಾಖೆಯಲ್ಲಿ ಚರ್ಚಿಸಲಾಗಿತ್ತು. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರ ಹುದ್ದೆಯು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯ ಹುದ್ದೆಗೆ ಸಮಾನವಾಗಿದೆ. ಅವರಿಗೆ ಸಂಪುಟ ದರ್ಜೆ /ಸಚಿವರ ಸ್ಥಾನಮಾನ ನೀಡಿಲ್ಲ. ಹೀಗಾಗಿ ಅವರ ಆಪ್ತ ಶಾಖೆಗೆ ಪ್ರತ್ಯೆಕ ಸಿಬ್ಬಂದಿ ಪ್ರಮಾಣ ನಿಗದಿಯಾಗಿಲ್ಲ. ಈ ಸ್ಥಾನಮಾನ ನೀಡಲಾಗಿದ್ದಲ್ಲಿ ಮಾತ್ರ ಆಪ್ತ ಸಿಬ್ಬಂದಿ ವರ್ಗ/ಹುದ್ದೆಗಳನ್ನು ನಿರ್ದಿಷ್ಟಪಡಿಸಿರುವಂತೆ ಪ್ರಸ್ತಾಪಿತ ಖಾಸಗಿ ವ್ಯಕ್ತಿಯನ್ನು ನೇಮಿಸಲು ಪರಿಗಣನೆಗೆ ಅವಕಾಶವಿತ್ತು ಎಂದು ಇಲಾಖೆಯ ಜಂಟಿ ಕಾರ್ಯದರ್ಶಿ ಉಮಾ ಅವರು ವಿವರಿಸಿದ್ದರು.

ಅದೇ ರೀತಿ ಬೇರೊಂದು ಪ್ರಕರಣದಲ್ಲಿ ಸಚಿವರ ಆಪ್ತ ಶಾಖೆಯಲ್ಲಿನ ಗ್ರೂಪ್ ಬಿ ಹುದ್ದೆಗಳಿಗೆ ಬಾಹ್ಯ ವ್ಯಕ್ತಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸುವುದು ಸೂಕ್ತವಲ್ಲ ಎಂದು 2021ರ ಫೆ.19ರಂದೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ತಿಳಿಸಿತ್ತು.

ಇಲಾಖೆ ಕಾರ್ಯದರ್ಶಿ ನಿಲುವೇನು?

ಎಲ್. ಕೆ. ಅತೀಕ್ ಅವರ ನೇಮಕವು ಮುಖ್ಯ ಕಾರ್ಯದರ್ಶಿ ಹುದ್ದೆಯ ದರ್ಜೆಗೆ ಸಮಾನವಾಗಿದೆ ಎಂದು ಡಿಪಿಎಆರ್ ತಿಳಿಸಿದೆ. ಆದ್ದರಿಂದ, ಸಚಿವ ಸಂಪುಟದ ಸಚಿವರಿಗೆ ಇರುವಂತೆ ಪ್ರತ್ಯೇಕ ವೈಯಕ್ತಿಕ ವಿಭಾಗಕ್ಕೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಅವಕಾಶ ಇರುವುದಿಲ್ಲ.
ಕೆ. ಗಿರೀಶ್ ಅವರು ಈ ಹಿಂದೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ (CMO) ಗ್ರೂಪ್ ಎ ಮಟ್ಟದಲ್ಲಿ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.

ಈ ಮನವಿಯನ್ನು ಪುರಸ್ಕರಿಸಬೇಕಾದರೆ, ಮುಖ್ಯಮಂತ್ರಿಗಳ ಕಚೇರಿಯಲ್ಲಿರುವ ಗ್ರೂಪ್ ಸಿ ಹುದ್ದೆಯೊಂದನ್ನು ಹಣಕಾಸು ಸಲಹೆಗಾರರ ಕಚೇರಿಗೆ ವರ್ಗಾಯಿಸಬೇಕಾಗಬಹುದು. ಮುಖ್ಯಮಂತ್ರಿಗಳ ಕಚೇರಿಯಲ್ಲಿ ಒಟ್ಟು 75 ಹುದ್ದೆಗಳಿದ್ದು, ಪ್ರಸ್ತುತ 70 ಹುದ್ದೆಗಳು ಖಾಲಿ ಇವೆ. ಈ ಹುದ್ದೆಯನ್ನು ಹಣಕಾಸು ಸಲಹೆಗಾರರ ಕಚೇರಿಗೆ ವರ್ಗಾಯಿಸಿ,  ಗಿರೀಶ್ ಅವರ ನೇಮಕಕ್ಕೆ ಅನುಕೂಲವಾಗುವಂತೆ ಅದನ್ನು ಗ್ರೂಪ್ ಬಿ ಮಟ್ಟಕ್ಕೆ ಉನ್ನತೀಕರಿಸಬಹುದು.

 

ಈ ನೇಮಕಾತಿಯು ಹಣಕಾಸು ಸಲಹೆಗಾರರ ಅಧಿಕಾರಾವಧಿ ಮುಕ್ತಾಯಗೊಳ್ಳುವವರೆಗೆ ಅಥವಾ ಮುಂದಿನ ಆದೇಶ ಹೊರಡಿಸುವವರೆಗೆ, ಇವೆರಡರಲ್ಲಿ ಯಾವುದು ಮೊದಲು ಸಂಭವಿಸುತ್ತದೆಯೋ ಅಲ್ಲಿಯವರೆಗೆ ಮಾತ್ರ ಜಾರಿಯಲ್ಲಿರುತ್ತದೆ. ಈ ಪ್ರಸ್ತಾವನೆಯು ಮುಖ್ಯಮಂತ್ರಿಗಳ ಕಚೇರಿಯಿಂದ ಒಂದು ಹುದ್ದೆಯನ್ನು ವರ್ಗಾಯಿಸುವುದನ್ನು ಒಳಗೊಂಡಿರುವುದರಿಂದ ಮುಖ್ಯಮಂತ್ರಿಗಳ ಅನುಮೋದನೆ ಅಥವಾ ನಿರ್ದೇಶನಗಳಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸಬಹುದು ಎಂದು ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎಸ್‌ ಎಸ್ ನಕುಲ್ ಅವರು ಟಿಪ್ಪಣಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಆರ್ಥಿಕ ಇಲಾಖೆಯು ಇಷ್ಟೆಲ್ಲಾ ತಕರಾರುಗಳನ್ನು ಎತ್ತಿದ್ದರೂ ಸಹ ಮುಖ್ಯಮಂತ್ರಿ ಸೂಚನೆಯಂತೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಲ್ ಕೆ ಅತೀಕ್ ಅವರ ಆಪ್ತ ಶಾಖೆಗೆ ಖಾಸಗಿ ವ್ಯಕ್ತಿಗಳನ್ನು ಎ ಮತ್ತು ಬಿ ಗುಂಪಿನ ಹುದ್ದೆಗೆ ನೇಮಕ ಮಾಡಿದೆ. ಇಲಾಖೆಯ ಈ  ನಡೆಯು ಅಧಿಕಾರಿ ವರ್ಗದಲ್ಲಿ  ಚರ್ಚೆಗೆ ಗ್ರಾಸವಾಗಿದೆ.

Hot this week

ಎಲೆಕ್ಟ್ರಿಕ್‌ ವಾಹನ ಪರೀಕ್ಷಾ ಕೇಂದ್ರ ಸ್ಥಾಪನೆಗೆ 10 ತಿಂಗಳಾದರೂ ಸಿಗದ ಭೂಮಿ; ವಿಳಂಬದಿಂದ ಕೈ ತಪ್ಪಿ ಹೋಗಲಿದೆಯೇ ಕೇಂದ್ರ?

ಬೆಂಗಳೂರು; ಮಂಡ್ಯ ಜಿಲ್ಲೆಯಲ್ಲಿ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ...

ಆರ್‍‌ಎಸ್‌ಎಸ್‌ ಪಥಸಂಚಲನ; ‘ಅರ್ಜಿ ಸಲ್ಲಿಸಿ, ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಅನುಮತಿ ದೊರೆಯುವವರೆಗೆ ಕಾಯಿರಿ’ ಎಂದ ಗೃಹ ಸಚಿವ

ಬೆಂಗಳೂರು; ವಿಜಯದಶಮಿಯ ಅಂಗವಾಗಿ 2026ರ ಅಕ್ಟೋಬರ್‍‌ 25ರಂದು ರಾಷ್ಟ್ರೀಯ ಸ್ವಯಂ ಸೇವಕ...

ಕಾರ್ಯಾದೇಶ ಪಡೆದರೂ ಕಾಮಗಾರಿ ನಡೆಸದ ಗುತ್ತಿಗೆದಾರರು; ಅಂದಾಜು ವೆಚ್ಚದಲ್ಲಿ ಏರಿಕೆ, ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ

ಬೆಂಗಳೂರು;  ಸರ್ಕಾರದ ವಿವಿಧ ಇಲಾಖೆಗಳು, ಮಂಡಳಿಗಳು, ನಿಗಮಗಳು, ಪ್ರಾಧಿಕಾರಗಳು ಹಾಗೂ ಇತರೆ...
Please Scan to make Your Contribution

Topics

ಎಲೆಕ್ಟ್ರಿಕ್‌ ವಾಹನ ಪರೀಕ್ಷಾ ಕೇಂದ್ರ ಸ್ಥಾಪನೆಗೆ 10 ತಿಂಗಳಾದರೂ ಸಿಗದ ಭೂಮಿ; ವಿಳಂಬದಿಂದ ಕೈ ತಪ್ಪಿ ಹೋಗಲಿದೆಯೇ ಕೇಂದ್ರ?

ಬೆಂಗಳೂರು; ಮಂಡ್ಯ ಜಿಲ್ಲೆಯಲ್ಲಿ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ...

ಕಾರ್ಯಾದೇಶ ಪಡೆದರೂ ಕಾಮಗಾರಿ ನಡೆಸದ ಗುತ್ತಿಗೆದಾರರು; ಅಂದಾಜು ವೆಚ್ಚದಲ್ಲಿ ಏರಿಕೆ, ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ

ಬೆಂಗಳೂರು;  ಸರ್ಕಾರದ ವಿವಿಧ ಇಲಾಖೆಗಳು, ಮಂಡಳಿಗಳು, ನಿಗಮಗಳು, ಪ್ರಾಧಿಕಾರಗಳು ಹಾಗೂ ಇತರೆ...

ಮರಿಮಲ್ಲಪ್ಪ ಶಿಕ್ಷಣ ಸಂಸ್ಥೆಯಿಂದ ನಿಯಮ, ಕಾಯ್ದೆ ಉಲ್ಲಂಘನೆ ಆರೋಪ; ಆಡಳಿತಾಧಿಕಾರಿ ನೇಮಕಕ್ಕೆ ಮುಂದಾದ ಸರ್ಕಾರ, ಇದು ಖಾಸಗಿ ಸಂಸ್ಥೆಯೋ ಸಾರ್ವಜನಿಕ ಸಂಸ್ಥೆಯೋ?

ಬೆಂಗಳೂರು; ಮೈಸೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮರಿಮಲ್ಲಪ್ಪ ವಿದ್ಯಾ ಸಂಸ್ಥೆಯು ಕಾಲೇಜು, ...

Related Articles

Popular Categories

error: Content is protected !!