Wednesday | October 14, 2026 |

ಆರ್ಥಿಕ ಸ್ಥಿತಿ ಬಹಿರಂಗಪಡಿಸಿ ಕೋಲಾಹಲ ಎಬ್ಬಿಸಿದ್ದ ಅನಧಿಕೃತ ಟಿಪ್ಪಣಿಯ ಕಡತ ಒದಗಿಸಲು ನಿರಾಕರಿಸಿದ ಸರ್ಕಾರ

ಬೆಂಗಳೂರು; ರಾಜ್ಯ ಸರ್ಕಾರವು ₹2 ಲಕ್ಷ ಕೋಟಿಗೂ ಹೆಚ್ಚಿನ ಕಾಮಗಾರಿಗಳ ಬಾಕಿ ವೆಚ್ಚವನ್ನು ಹೊಂದಿದೆ ಎಂದು ಆರ್ಥಿಕ ಇಲಾಖೆಯು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಬರೆದಿದೆ ಎನ್ನಲಾಗಿರುವ ಅನಧಿಕೃತ ಟಿಪ್ಪಣಿಗೆ ಸಂಬಂಧಿಸಿದಂತೆ ಕಡತವನ್ನು ಒದಗಿಸಲು ಆರ್ಥಿಕ ಇಲಾಖೆಯು ನಿರಾಕರಿಸಿದೆ.

ಆರ್ಥಿಕ ಇಲಾಖೆಯು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಬರೆದಿದೆ ಎನ್ನಲಾಗಿದ್ದ  ಅನಧಿಕೃತ ಟಿಪ್ಪಣಿ ಆಧರಿಸಿ ಕರ್ನಾಟಕ ದಿವಾಳಿಯ ಅಂಚಿನಲ್ಲಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸದನದಲ್ಲಿಯೇ ಬಲವಾಗಿ ಆರೋಪಿಸಿದ್ದರು. ಈ ಆರೋಪವು ಸದನದಲ್ಲಿ ಭಾರೀ ಕೋಲಾಹಲ ಎಬ್ಬಿಸಿತ್ತು. ಅಲ್ಲದೇ ಈ ಅನಧಿಕೃತ ಟಿಪ್ಪಣಿಯು ಸೋರಿಕೆಯಾಗಿದೆ ಎಂದು ಮುಖ್ಯಮಂತ್ರಿ ಸಚಿವಾಲಯವು ತನಿಖೆ ಆರಂಭಿಸಿತ್ತು.

ಈ ಬೆಳವಣಿಗೆ ನಡುವೆಯೇ ಇದೇ ಅನಧಿಕೃತ ಟಿಪ್ಪಣಿಗೆ ಸಂಬಂಧಿಸಿದ ಕಡತವನ್ನು ನಿರಾಕರಿಸುತ್ತಿರುವುದು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಆರ್ಥಿಕ ಇಲಾಖೆಯು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ 2026ರ ಸೆ.17ರಂದು ಅನಧಿಕೃತ ಟಿಪ್ಪಣಿ ಬರೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಕಡತವನ್ನೂ ತೆರೆದಿತ್ತು. ಈ ಕಡತವನ್ನು ಆರ್‍‌ಟಿಐ ಅಡಿಯಲ್ಲಿ ಪಡೆಯಲು ದಿ ಫೈಲ್‌ 2026ರ ಸೆ.23ರಂದು ಅರ್ಜಿ ಸಲ್ಲಿಸಿತ್ತು.

 

 

ಈ ಅರ್ಜಿಗೆ 2026ರ ಅಕ್ಟೋಬರ್ 8ರಂದು ಹಿಂಬರಹ ನೀಡಿದೆ.

ಹಿಂಬರಹದಲ್ಲೇನಿದೆ?

ಕೋರಿರುವ ಮಾಹಿತಿಯನ್ನು ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ (8) (ಐ) ಅನ್ವಯ ಒದಗಿಸಲು ಅವಕಾಶವಾಗುವುದಿಲ್ಲ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಹಿಂಬರಹ ನೀಡಿದ್ದಾರೆ.

 

 

ಮುಖ್ಯಮಂತ್ರಿಗಳ ಗ್ರಾಮ ಸಡಕ್ ಸಂಪರ್ಕ ಯೋಜನೆಯಡಿ 15,000 ಕಿ ಮೀ ಉದ್ದದ ಗ್ರಾಮೀಣ ರಸ್ತೆಗಳನ್ನು 10,000 ಕೋಟಿ ರು ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಟಿಪ್ಪಣಿಯನ್ನು ಆರ್ಥಿಕ ಇಲಾಖೆ ಸಲ್ಲಿಸಿದೆ. ಸದ್ಯ ಈ ಕಡತವು 2026ರ ಸೆ. 17ರಿಂದ ಆರ್ಥಿಕ ಇಲಾಖೆಯಲ್ಲಿಯೇ ಇದೆ.

 

 

ಇದೇ ಕಡತಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಅನಧಿಕೃತ ಟಿಪ್ಪಣಿ ಹೊರಡಿಸಿತ್ತು.

ಅನಧಿಕೃತ ಟಿಪ್ಪಣಿಯಲ್ಲೇನಿತ್ತು?

ಈ ಪ್ರಸ್ತಾವನೆಯನ್ನು 2026-27 ಮತ್ತು 2027-28ರ ಎರಡು ವರ್ಷಗಳಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಸಾವಿರಾರು ಕೋಟಿ ರುಪಾಯಿಗಳ ವೆಚ್ಚದ ಅಗತ್ಯವಿರುವ ಆದರೆ ಬಜೆಟ್‌ನಲ್ಲಿ ಅನುದಾನ ಮೀಸಲಿಡದ ಹಾಗೂ ಹಣವನ್ನು ನಿಗದಿಪಡಿಸದ ಯೋಜನೆಯನ್ನು ಆರಂಭಿಸುವುದರಿಂದ ನಗದು ಹರಿವು ಮತ್ತು  ಹಣಕಾಸು ನಿರ್ವಹಣೆಯಲ್ಲಿ ಸಮಸ್ಯೆಗಳು ಉಂಟಾಗಲಿವೆ. 2026-27ನೇ ಸಾಲಿನಲ್ಲಿ ರಾಜ್ಯದ ವಿತ್ತೀಯ ಕೊರತೆ ಶೇ. 2.95ರಷ್ಟಿದೆ. ಆದರೆ ರಾಜಸ್ವ ಕೊರತೆಯು 22,957 ಕೋಟಿ ಇದೆ. ಇದಲ್ಲದೇ ಜಿಎಸ್‌ಡಿಪಿಗೆ ಹೋಲಿಸಿದರೆ ರಾಜ್ಯದ ಒಟ್ಟು ಸಂಚಿತ ಬಾಧ್ಯತೆಗಳು ಶೇ. 24.94ಕ್ಕೆ ತಲುಪಿವೆ. (ಎಫ್‌ಆರ್‍‌ಬಿಎಂ ಅಡಿಯಲ್ಲಿ ಅನುಮತಿಸಲಾದ ಮಿತಿ ಶೆ. 25) ಇದರರ್ಥ ಈಗಾಗಲೇ ಕರ್ನಾಟಕ ರಾಜ್ಯವು ತನ್ನ ಅಗತ್ಯಗಳನ್ನು ಪೂರೈಸಲು ಸಾಲ ಪಡೆಯುವ ಸಾಮರ್ಥ್ಯದ ಬಹುತೇಕ ಮಿತಿಯನ್ನು ಬಳಸಿಕೊಂಡಿದೆ ಎಂದು ಅನಧಿಕೃತ ಟಿಪ್ಪಣಿಯಲ್ಲಿ ಇಲಾಖೆಯು ವಿವರಿಸಿತ್ತು.

 

 

2026-27ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾದ ಯೋಜನೆಗಳ ಹಿನ್ನೆಲೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಹೊಸ ಯೋಜನೆಗಳಿಗೆ ಹಣಕಾಸು ಒದಗಿಸಲು ರಾಜ್ಯ ಸರ್ಕಾರಕ್ಕೆ ಇನ್ನು ಹೆಚ್ಚಿನ ಮೊತ್ತವನ್ನು ಸಾಲವಾಗಿ ಪಡೆಯಲು ಅವಕಾಶ ಇರುವುದಿಲ್ಲ. ರಾಜ್ಯ ಸರ್ಕಾರದ ಬಳಿ 2 ಲಕ್ಷ ಕೋಟಿಗೂ ಹೆಚ್ಚಿನ ಮೊತ್ತದ ಬಾಕಿ ಕಾಮಗಾರಿಗಳ ವೆಚ್ಚ ಇದೆ.  ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ, ಸಣ್ಣ ನೀರಾವರಿ ಮತ್ತು ಆರ್‌ಡಿಪಿಆರ್‌ನಿಂದ ಮಾತ್ರ ₹36,136 ಕೋಟಿ ಬಿಲ್‌ಗಳು ಬಾಕಿ ಇವೆ.  ಹಣಕಾಸಿನ ಕೊರತೆಯು ಅನುಮತಿಸಲಾದ 3% ಮಟ್ಟಕ್ಕೆ ಬದಲಾಗಿ 2.95% ರಷ್ಟಿದೆ. ಆದಾಯ ಕೊರತೆಯು ₹ 22,957 ಕೋಟಿಗಳಷ್ಟಿದೆ ಎಂದು ವಿವರಿಸಿತ್ತು.

 

 

ಮೊದಲ 6 ತಿಂಗಳಲ್ಲೇ 5,000 ಕೋಟಿಗೂ ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ಎಸ್‌ ಇ-1 ಸೇರಿದಂತೆ ಅನುಮೋದನೆ ನೀಡಲಾಗಿದೆ. ಈ ಕಾಮಗಾರಿಗಳಿಗೆ ಅಗತ್ಯವಿರುವ ಹಣವನ್ನು 2026-27ನೇ ಸಾಲಿಗೆ ಗುರುತಿಸಿರುವ ಆದಾಯದ ಹೊರತಾಗಿ ಹೆಚ್ಚುವರಿಯಾಗಿ  ಒದಗಿಸಬೇಕಾಗಿದೆ. ಜಲಸಂಪನ್ಮೂಲ, ಇಂಧನ, ವಾಣಿಜ್ಯ ಕೈಗಾರಿಕೆ, ನಗರಾಭಿವೃದ್ದಿ, ಸಾರಿಗೆ ಸೇರಿದಂತೆ ವಿವಿಧ ಇಲಾಖೆಗಳು ಗಣನೀಯ ಪ್ರಮಾಣದ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿವೆ. ಬೇಡಿಕೆಗಳು ಹಣಕಾಸು ಇಲಾಖೆಯ ಮುಂದೆ ಬಾಕಿ ಇವೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಗಮನಕ್ಕೆ ತಂದಿತ್ತು.

 

 

 

ಕರ್ನಾಟಕವು ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ವರ್ಷ ರೈತರು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರ ಜೀವನೋಪಾಯಕ್ಕೆ ಸಂಬಂಧಿಸಿದ ತುರ್ತು ಸಮಸ್ಯೆಗಳನ್ನು ಎದುರಿಸಲು ಹೆಚ್ಚಿನ ಹಣದ ಅಗತ್ಯವಿದೆ. ತೀವ್ರ ಬರದಿಂದಾಗಿ ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಮೀಸಲಿಟ್ಟಿರುವ ಅನುದಾನದ ಜೊತೆಗೆ ಬರ ಪರಿಹಾರ ಮತ್ತು ಕುಡಿಯುವ ನೀರಿಗಾಗಿ ಹೆಚ್ಚುವರಿ ಅನುದಾನ ಅಗತ್ಯ ಉಂಟಾಗುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಸಲ್ಲಿಸಿರುವ ಮನವಿ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಬಂದ ನಂತರವೇ ಈ ಹೆಚ್ಚುವರಿ ಮೊತ್ತದ ಬಗ್ಗೆ ಸ್ಪಷ್ಟತೆ ಸಿಗಲಿದೆ. ಅಲ್ಲದೇ ಬರದಿಂದಾಗಿ ಐಪಿ ಸೆಟ್‌ (ಕೃಷಿ ಪಂಪ್‌ ಸೆಟ್‌) ಸಬ್ಸಿಡಿಯಲ್ಲಿ 4,000ದಿಂದ 5,000 ಕೋಟಿ ಹೆಚ್ಚಳವಾಗುವ ಸಾಧ್ಯತೆಯೂ ಇದೆ ಎಂದು ಇಲಾಖೆಯು ಅನಧಿಕೃತ ಟಿಪ್ಪಣಿಯಲ್ಲಿ  ವಿವರಿಸಿತ್ತು.

ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರಸ್ತಾವನೆಗಳಿಗೆ ಅಗತ್ಯವಿರುವ ಹಣದ ಒಂದು ಭಾಗವನ್ನಾದರೂ ಒದಗಿಸಬೇಕಾದರೇ ಇತರ ಇಲಾಖೆಗಳಿಗಾಗಿ ಈಗಾಗಲೇ ಮೀಸಲಿಟ್ಟಿರುವ ಅನುದಾನವನ್ನು ಕಡಿತಗೊಳಿಸಬೇಕಾಗುತ್ತದೆ. ಇದರಿಂದ ಕಾಮಗಾರಿಗಳು ವಿಳಂಬವಾಗಬಹುದು ಅಥವಾ ಸ್ಥಗಿತಗೊಳ್ಳಬಹುದು ಎಂದು ಎಚ್ಚರಿಸಿದೆ.

ಅದೇ ರೀತಿ ಈಗಾಗಲೇ ಸಾರಿಗೆ ನಿಗಮಗಳು, ನೀರಾವರಿ ನಿಗಮಗಳು ಮತ್ತು ವಿದ್ಯುತ್ ಕಂಪನಿಗಳು ವೇತನ ಸೇರಿದಂತೆ ಹಣಕಾಸಿನ ತೀವ್ರ ಕೊರತೆಯನ್ನು ಎದುರಿಸುತ್ತಿವೆ. ಸಹಾಯಧನ ಪಾವತಿಯಲ್ಲಿ ಉಂಟಾಗುವ ತೊಂದರೆಗಳು ಮತ್ತು ಮಾಸಿಕವಾಗಿ ಹಣ ಬಿಡುಗಡೆ ಮಾಡುವಲ್ಲಿ ಆಗುವ ವಿಳಂಬವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಲಭ್ಯವಿರುವ ಹಣಕಾಸಿನ ಮಿತಿ ಬಗ್ಗೆ ವಾಸ್ತವಿಕ ದೃಷ್ಟಿಕೋನ ಹೊಂದುವುದು ಸೂಕ್ತ. ಬಾಕಿ ಉಳಿದಿರುವ ಕಾಮಗಾರಿಗಳ ವೆಚ್ಚದ ಹೊರೆ ಮತ್ತಷ್ಟು ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಈಗಾಗಲೇ ಅನುಮೋದಿಸಲಾದ ಅನುದಾನಗಳ ಮರು ಹಂಚಿಕೆ ಅಥವಾ ಹೆಚ್ಚುವರಿ ಸಂಪನ್ಮೂಲಗಳ ಸಂಗ್ರಹಣೆಯನ್ನು ಅಂತಿಮಗೊಳಿಸುವ ಮೊದಲು ಹೊಸ ಯೋಜನೆಗಳಿಗೆ ಹಣಕಾಸು ಒದಗಿಸುವುದು ಕಷ್ಟಕರವಾಗಬಹುದು ಎಂದು ಹೇಳಿತ್ತು.

‘ಆದ್ದರಿಂದ ಈ ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳಲು ಅಗತ್ಯವಿರುವ ಸಂಪನ್ಮೂಲಗಳು ಅಂತಿಮಗೊಳ್ಳುವವರೆಗೆ ಆಂದರೇ ಇನ್ನೂ ಸ್ವಲ್ಪ ಕಾಲ ಕಾಯುವುದು ಒಳಿತು,’ ಎಂದು ಸಲಹೆ ನೀಡಿತ್ತು.

ಇದೇ ಟಿಪ್ಪಣಿಯನ್ನು ಸದನದಲ್ಲಿ  ಮುಂದಿರಿಸಿದ್ದ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು  ಬರಗಾಲವನ್ನು ನಿಭಾಯಿಸಲು ಅದಕ್ಕೆ ಆರ್ಥಿಕ ಶಕ್ತಿ ಇದೆಯೇ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದರು.  2026-27ನೇ ಸಾಲಿನ ಬಜೆಟ್ ಘೋಷಣೆಗಳನ್ನು ಪೂರೈಸಲು ರಾಜ್ಯವು ತನ್ನ ಸಾಲ ಪಡೆಯುವ ಸಾಮರ್ಥ್ಯವನ್ನು ಕಳೆದುಕೊಂಡಿದೆ. ಮತ್ತು ಯಾವುದೇ ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡರೆ ಇತರ ಇಲಾಖೆಗಳಿಂದ ಹಂಚಿಕೆಯನ್ನು ಕಡಿತಗೊಳಿಸಬೇಕಾಗುತ್ತದೆ ಎಂದು ಹಣಕಾಸು ಇಲಾಖೆ ಟಿಪ್ಪಣಿಯಲ್ಲಿದ್ದ ಅಂಶಗಳನ್ನು ಆರ್ ಅಶೋಕ್‌ ಅವರು ಸದನಲ್ಲಿ ಓದಿದ್ದರು.

ವಿಧಾನಸಭೆಯಲ್ಲಿ ಬರಗಾಲದ ಕುರಿತು ಚರ್ಚೆಯ ಸಂದರ್ಭದಲ್ಲಿ ಅಶೋಕ್ ಅವರು ಈ ಅನಧಿಕೃತ ಟಿಪ್ಪಣಿಯನ್ನು ಪ್ರದರ್ಶಿಸಿದ್ದರು. ಈ ಟಿಪ್ಪಣಿಯು “ಸರ್ಕಾರದ ಮುಖಕ್ಕೆ ಹೊಡೆದ ಹೊಡೆತ” ಎಂದು ಬಣ್ಣಿಸಿದ್ದ ಅಶೋಕ್, ಈ ಟಿಪ್ಪಣಿ ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಯನ್ನು ಬಹಿರಂಗಪಡಿಸಿದೆ ಎಂದು ಟೀಕಿಸಿದ್ದರು.

ರಾಜ್ಯವನ್ನು ಬರ ಆವರಿಸಿದೆ ಮತ್ತು ರೈತರು ವಲಸೆ ಹೋಗುತ್ತಿದ್ದಾರೆ. ಆದರೆ ಸರ್ಕಾರಿ ಖಜಾನೆ ಖಾಲಿಯಾಗಿದೆ ಮತ್ತು ಆರ್ಥಿಕ ಬರಗಾಲವಿದೆ. ಐಎಂಡಿ ಹಾಗೂ ಕೇಂದ್ರದಿಂದ ಬರಗಾಲದ ಬಗ್ಗೆ ಮುಂಚಿತವಾಗಿ ಎಚ್ಚರಿಕೆ ನೀಡಿದ್ದರೂ, ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಅಶೋಕ್ ಆರೋಪಿಸಿದ್ದರು.

ಬರ ಪರಿಹಾರದ ಬಗ್ಗೆ ಸರ್ಕಾರ ನಿರಾಸಕ್ತಿ ತೋರುತ್ತಿದೆ ಎಂದು ಆರೋಪಿಸಿದ್ದ ಅವರು, ಆಡಳಿತಾರೂಢ ಕಾಂಗ್ರೆಸ್ ನಾಯಕರೇ ಇಂತಹ ವರ್ತನೆಯಿಂದ ಬೇಸತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು. “ಗದಗ ಜಿಲ್ಲೆಯನ್ನು ಬರ ಪೀಡಿತ ಪಟ್ಟಿಯಲ್ಲಿ ಸೇರಿಸದಿದ್ದರೆ ರಾಜೀನಾಮೆ ನೀಡುವುದಾಗಿ ಹಿರಿಯ ಶಾಸಕ ಎಚ್.ಕೆ. ಪಾಟೀಲ್ ಎಚ್ಚರಿಸಿದ್ದಾರೆ. ಮತ್ತೊಬ್ಬ ಹಿರಿಯ ನಾಯಕ ಅಪ್ಪಾಜಿ ನಾಡಗೌಡ ಅವರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿದ್ದಾರೆ. ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಷ್ಕ್ರಿಯತೆಯಿಂದ ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡಿದ್ದಾರೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ” ಎಂದು ಅವರು ಹೇಳಿದ್ದನ್ನು ಸ್ಮರಿಸಬಹುದು.

 

ರಾಜ್ಯದ ಆರ್ಥಿಕ ಪರಿಸ್ಥಿತಿ ಇಷ್ಟೊಂದು ಕೆಟ್ಟಿದೆಯೇ?; ಆರ್ಥಿಕ ಇಲಾಖೆ ಟಿಪ್ಪಣಿ ಬೆನ್ನಲ್ಲೇ ಮುನ್ನೆಲೆಗೆ ಬಂದ ದಿ ಫೈಲ್‌ನ 51 ವರದಿಗಳು

ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ದಿ ಫೈಲ್‌ ಸರಣಿ ವರದಿಗಳನ್ನು ಪ್ರಕಟಿಸಿತ್ತು.

Hot this week

ಸ್ಟಿಂಗ್ ಆಪರೇಷನ್‌; ಅಸಲು ದಾವೆ ಬೆನ್ನಲ್ಲೇ ಪೊಲೀಸ್‌ ಆಯುಕ್ತರಿಗೂ ದೂರು ಸಲ್ಲಿಸಿ ಯಾವ ಭಯವೂ ನನಗಿಲ್ಲವೆಂದ ಸಿದ್ದರಾಮಯ್ಯ

ಬೆಂಗಳೂರು; ಯೂ ಟ್ಯೂಬ್‌ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು...

21 ಪ್ಯಾಕೇಜ್‌ ಟೆಂಡರ್; ಶೇ. 5 ಪ್ರೀಮಿಯಂ ಮೀರಿದ್ದರೂ ಪರಿಶೀಲನೆ ಸಮಿತಿ ರಚಿಸಲು ಆಕ್ಷೇಪ ಎತ್ತಿದ್ದ ಡಿಕೆಶಿ

ಬೆಂಗಳೂರು;  ಜಿಬಿಎ ವ್ಯಾಪ್ತಿಯಲ್ಲಿ  ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ...

ಪ್ರಭಾವಿ ನಾಯಕನ ವಿರುದ್ಧ ಸ್ಟಿಂಗ್ ಕಾರ್ಯಾಚರಣೆ; ನ್ಯಾಯಾಂಗ ತನಿಖೆಗೆ ಹೈಕೋರ್ಟ್‌, ಬಾಲ ನ್ಯಾಯಮಂಡಳಿ ಮೆಟ್ಟಿಲೇರಿದ ನೈಜ ಹೋರಾಟಗಾರರ ವೇದಿಕೆ

ಬೆಂಗಳೂರು; ಯೂ ಟ್ಯೂಬ್‌ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ  ‘ಹನಿಟ್ರ್ಯಾಪ್’ ಪ್ರಕರಣದ...

ಸ್ಟಿಂಗ್ ಆಪರೇಷನ್‌; ಮಾಧ್ಯಮಗಳ ವಿರುದ್ಧ ತಡೆಯಾಜ್ಞೆಗೆ ಸಿದ್ದರಾಮಯ್ಯ ಎಂಬುವರಿಂದ ಅಸಲು ದಾವೆ ದಾಖಲು, ನಾಳೆಯೇ ಅರ್ಜಿ ವಿಚಾರಣೆ

ಬೆಂಗಳೂರು;  ರಾಜ್ಯ ರಾಜಕಾರಣದಲ್ಲಿ ಬಹು ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್ ಬಗ್ಗೆ...

ಅಕ್ರಮ ಖಾತೆ, ಅನರ್ಹರಿಗೆ 79.28 ಕೋಟಿ ರು ಪರಿಹಾರ; ಕೆಎಎಸ್ ಅಧಿಕಾರಿ ವಿರುದ್ಧದ ಮೊದಲ ವಿಚಾರಣೆಯಲ್ಲೇ ಲೋಪ, ಮರು ವಿಚಾರಣೆಗೆ ಆದೇಶ

ಬೆಂಗಳೂರು; ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದಲ್ಲಿ 54 ಎಕರೆಗೆ...
Please Scan to make Your Contribution

Topics

ಸ್ಟಿಂಗ್ ಆಪರೇಷನ್‌; ಅಸಲು ದಾವೆ ಬೆನ್ನಲ್ಲೇ ಪೊಲೀಸ್‌ ಆಯುಕ್ತರಿಗೂ ದೂರು ಸಲ್ಲಿಸಿ ಯಾವ ಭಯವೂ ನನಗಿಲ್ಲವೆಂದ ಸಿದ್ದರಾಮಯ್ಯ

ಬೆಂಗಳೂರು; ಯೂ ಟ್ಯೂಬ್‌ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು...

21 ಪ್ಯಾಕೇಜ್‌ ಟೆಂಡರ್; ಶೇ. 5 ಪ್ರೀಮಿಯಂ ಮೀರಿದ್ದರೂ ಪರಿಶೀಲನೆ ಸಮಿತಿ ರಚಿಸಲು ಆಕ್ಷೇಪ ಎತ್ತಿದ್ದ ಡಿಕೆಶಿ

ಬೆಂಗಳೂರು;  ಜಿಬಿಎ ವ್ಯಾಪ್ತಿಯಲ್ಲಿ  ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ...

ಪ್ರಭಾವಿ ನಾಯಕನ ವಿರುದ್ಧ ಸ್ಟಿಂಗ್ ಕಾರ್ಯಾಚರಣೆ; ನ್ಯಾಯಾಂಗ ತನಿಖೆಗೆ ಹೈಕೋರ್ಟ್‌, ಬಾಲ ನ್ಯಾಯಮಂಡಳಿ ಮೆಟ್ಟಿಲೇರಿದ ನೈಜ ಹೋರಾಟಗಾರರ ವೇದಿಕೆ

ಬೆಂಗಳೂರು; ಯೂ ಟ್ಯೂಬ್‌ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ  ‘ಹನಿಟ್ರ್ಯಾಪ್’ ಪ್ರಕರಣದ...

ಸ್ಟಿಂಗ್ ಆಪರೇಷನ್‌; ಮಾಧ್ಯಮಗಳ ವಿರುದ್ಧ ತಡೆಯಾಜ್ಞೆಗೆ ಸಿದ್ದರಾಮಯ್ಯ ಎಂಬುವರಿಂದ ಅಸಲು ದಾವೆ ದಾಖಲು, ನಾಳೆಯೇ ಅರ್ಜಿ ವಿಚಾರಣೆ

ಬೆಂಗಳೂರು;  ರಾಜ್ಯ ರಾಜಕಾರಣದಲ್ಲಿ ಬಹು ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್ ಬಗ್ಗೆ...

ಅಕ್ರಮ ಖಾತೆ, ಅನರ್ಹರಿಗೆ 79.28 ಕೋಟಿ ರು ಪರಿಹಾರ; ಕೆಎಎಸ್ ಅಧಿಕಾರಿ ವಿರುದ್ಧದ ಮೊದಲ ವಿಚಾರಣೆಯಲ್ಲೇ ಲೋಪ, ಮರು ವಿಚಾರಣೆಗೆ ಆದೇಶ

ಬೆಂಗಳೂರು; ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದಲ್ಲಿ 54 ಎಕರೆಗೆ...

ಅನುದಾನ ರಹಿತ ಅವಧಿಗೂ ವೇತನ, ಪಿಂಚಣಿ ಸೌಲಭ್ಯ; ಹೈಕೋರ್ಟ್ ಆದೇಶ ಪಾಲಿಸಿದರೇ 22,663.81 ಕೋಟಿ ವೆಚ್ಚ, ಬೊಕ್ಕಸಕ್ಕೆ ಹೊರೆ

ಬೆಂಗಳೂರು; ವೇತಾನುದಾನಕ್ಕೆ ಒಳಪಡಿಸುವ ಪೂರ್ವದಲ್ಲಿ ಸಲ್ಲಿಸಿರುವ ಸೇವೆಗಳನ್ನು ಪಿಂಚಣಿಗಳಿಗೆ ಪರಿಗಣಿಸಬೇಕು ಎಂದು...

ಪಡಿತರ ಆಹಾರಧಾನ್ಯ ಎತ್ತುವಳಿ, ಸಕ್ಕರೆ ಸಹಾಯಧನ, ಕನಿಷ್ಟ ಬೆಂಬಲ ಬೆಲೆ; 1,171.73 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ

ಬೆಂಗಳೂರು; ಕನಿಷ್ಠ ಬೆಂಬಲ ಬೆಲೆ  ಅಡಿಯಲ್ಲಿ ಖರೀದಿ ಕಾರ್ಯಾಚರಣೆ ನಡೆಸುತ್ತಿರುವ ಕರ್ನಾಟಕ...

Related Articles

Popular Categories

error: Content is protected !!